ಸಾರಿನ ಪುಡಿ

ಪ್ರೇಮ ಯಶವಂತ.
ನಮ್ಮ ಎಂದಿನ ಕೆಲಸದಿಂದಾಗಿ, ನಾವು ದಿನದ ಹೆಚ್ಚಿನ ಸಮಯವನ್ನು ಮನೆಯ ಹೊರಗೇ ಕಳೆಯುತ್ತೇವೆ. ಈ ಹೊತ್ತಿನಲ್ಲಿ ಊಟದ ಮನೆಗಳಲ್ಲಿ ಹತ್ತು ಹಲವು ಬಗೆಯ ತಿನಿಸುಗಳನ್ನು ತಿಂದರೂ, ಮನೆಗೆ ಬಂದು ಅಮ್ಮ ಮಾಡಿದ ಸಾರು – ಅನ್ನ ತಿಂದಾಗ ಸಿಗುವ ತಣಿವಿಗೆ  ಊಟದ ಮನೆಯ ತಿನಿಸುಗಳ ರುಚಿ ಸಾಟಿಯಾಗಲಾರವು. ನಿಮಗೂ ನನ್ನಂತೆಯೇ ಅನ್ನಿಸಿದ್ದರೆ ರುಚಿಯಾದ ಸಾರು ಮಾಡುವ ಗುಟ್ಟು ನನ್ನಲ್ಲಿದೆ. ನಿಮಗೆ ತಿಳಿದಿರುವಂತೆ, ಸಾರಿಗೆ ರುಚಿ ಹತ್ತಬೇಕಾದರೆ, ಅದನ್ನು ಮಾಡಲು ಬೇಕಾದ ಅಡಕಗಳಲ್ಲಿ (materials) ಮುಕ್ಯವಾದದ್ದು ಸಾರಿನ ಪುಡಿ. ಸಾರಿನ ಪುಡಿಯನ್ನು ಮನೆಯಲ್ಲೇ ಮಾಡುವುದನ್ನು ನನಗೆ ಕಲಿಸಿಕೊಟ್ಟವರು ನನ್ನ ಅಮ್ಮ, ಈ ಬರಹದಲ್ಲಿ ಅವರು ಹೇಳಿಕೊಟ್ಟ ಸಾರಿನ ಪುಡಿಯ ಅಡುಪಡಿಯನ್ನು (recipe) ತಿಳಿಸಿಕೊಡಲಿದ್ದೇನೆ.

ಬೇಕಾಗಿರುವ ಅಡಕಗಳು :

ಒಣ ಮೆಣಸಿನಕಾಯಿ – 15-20  (ಅತವ ಕಾರಕ್ಕೆ ತಕ್ಕಶ್ಟು)
ಸಾಸಿವೆ – 1/2 ಚಮಚ (tsp)
ಮೆಂತ್ಯೆ – 1/2 ಚಮಚ (tsp)
ಜೀರಿಗೆ – 1/2 ದೊಡ್ಡ ಚಮಚ (tbsp)
ಕೊತ್ತಂಬರಿ ಬೀಜ – 2 ದೊಡ್ಡ ಚಮಚ (tbsp)
ಕಡಲೆಬೇಳೆ – 1 1/2 ದೊಡ್ಡ ಚಮಚ (tbsp)
ಅಕ್ಕಿ – 1 ದೊಡ್ಡ ಚಮಚ (tbsp)
ಕಾಳು ಮೆಣಸು – 10-15
ಏಲಕ್ಕಿ – 2
ಲವಂಗ – 5-8
ಚಕ್ಕೆ – 2″
ಕರಿಬೇವಿನ ಎಲೆಗಳು – 8-10
ಗೋಟು ಅರಿಸಿನ – 1”

(ಗೋಟು ಅರಿಸಿನ ಆಯ್ಕೆಗೆ ಬಿಟ್ಟದ್ದು. ಅರಿಸಿನ ಗೋಟು ಇಲ್ಲದಿದ್ದರೆ ಸಾರು ಮಾಡುವಾಗ ಅತವ ಈ ಅಡಕಗಳನ್ನು ಪುಡಿಮಾಡುವಾಗ ಅರಿಸಿನ ಪುಡಿಯನ್ನು ಹಾಕಿಕೊಳ್ಳಬಹುದು)

ಮೇಲೆ ತಿಳಿಸಿದಶ್ಟನ್ನೂ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಕೆಂಪಾಗಿ ಹುರಿದುಕೊಳ್ಳಿ. ಎಣ್ಣೆ ಹಾಕುವ ಅಗತ್ಯ ಇಲ್ಲ. ಹೀಗೆ ಹುರಿದುಕೊಂಡ ಅಡಕಗಳು ತಣ್ಣಗಾದಮೇಲೆ ರುಬ್ಬಿಗೆಯಲ್ಲಿ (spice blender/mixer) ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಜರಡಿಮಾಡಿಟ್ಟುಕೊಂಡು ಸಾರಿಗೆ ಬೇಕಾದಶ್ಟನ್ನು ಉಪಯೋಗಿಸಬಹುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.