ಮಯ್ಯಿ ಕಾಪಾಡುವ ಏರ‍್ಪಾಟುಗಳ ಒಳನೋಟ

ಯಶವನ್ತ ಬಾಣಸವಾಡಿ.

ಕಾಪೇರ‍್ಪಾಟು ಮತ್ತು ಹಾಲ್ರಸದೇರ‍್ಪಾಟು-ಬಾಗ 1

ನಮ್ಮ ಮಯ್ಯಲ್ಲಿರುವ ಹಲವು ಏರ‍್ಪಾಟುಗಳ ಬಗ್ಗೆ ನನ್ನ ಹಿಂದಿನ ಬರಹಗಳಲ್ಲಿ ತಿಳಿಸುತ್ತಾ ಬಂದಿರುವೆ. ನಮ್ಮ ಮಯ್ಯ ಕುರಿತ ಈ ಬರಹಗಳನ್ನು ಮುಂದುವರೆಸುತ್ತಾ ಮುಂದಿನ ಕೆಲವು ಕಂತುಗಳಲ್ಲಿ ನಮ್ಮ ಮಯ್ಯನ್ನು ಕಾಪಾಡುವ ಏರ‍್ಪಾಟುಗಳತ್ತ ಅರಿವಿನ ನೋಟ ಬೀರೋಣ.

ನಮ್ಮ ಮಯ್ಯನ್ನು ಕಾಪಾಡಲು ಅಣಿಗೊಂಡಿರುವ ಎರಡು ಏರ‍್ಪಾಟುಗಳಾದ ಕಾಪೇರ‍್ಪಾಟು (immune system) ಹಾಗು ಹಾಲ್ರಸದೇರ‍್ಪಾಟುಗಳ (lymphatic system) ಹಲವಾರು ಇಟ್ಟಳ (structure) ಹಾಗು ಕೆಲಸಗಳು ಒಂದೇ ತರನಾಗಿರುವುದರಿಂದ ಇವುಗಳನ್ನು ಒಟ್ಟಾಗಿ ತಿಳಿದುಕೊಳ್ಳುವುದು ಒಳಿತು.

ಕಾಪೇರ‍್ಪಾಟು ನಮ್ಮ ಮಯ್ಯೊಳಕ್ಕೆ ನುಸುಳುವ ನಂಜುಳ (virus), ದಂಡಾಣು (bacteria), ಬೂಸು (fungus) ಹಾಗು ಹೊರಕುಳಿ (parasite) ಮುಂತಾದ ಕೆಡುಕುಕಣಗಳೊಡನೆ (pathogens) ಹೊಡೆದಾಡಿ, ನಮ್ಮ ಮಯ್ಗೆ ತೊಡಕುಂಟಾಗದಂತೆ ಕಾಯುವ ಕೆಲಸವನ್ನು ಮಾಡುತ್ತದೆ.

ಹಾಲ್ರಸದೇರ‍್ಪಾಟು, ಹಾಲ್ರಸವೆಂಬ (lymph) ಹರಿಕವನ್ನು (liquid) ಗೂಡುಕಟ್ಟುಗಳಿಂದ (tissue) ನೆತ್ತರಿನ ಏರ‍್ಪಾಟಿಗೆ ಹಿಂತಿರುಗಿಸುವ ಕೆಲಸವನ್ನು ಮಾಡುತ್ತದೆ. ಗೂಡುಕಟ್ಟುಗಳಿಂದ ಒಟ್ಟುಗೂಡಿಸುವ ಹರಿಕವನ್ನು ನೆತ್ತರಿನ ಏರ‍್ಪಾಟಿಗೆ ತಲುಪಿಸುವ ಮುನ್ನ, ಹರಿಕದಲ್ಲಿರಬಹುದಾದ ಕಸ, ಬೇಡವಾದ ಸೂಲುಗೂಡುಗಳು ಇಲ್ಲವೆ ಗೂಡುಕಟ್ಟುಗಳನ್ನು ಹೊಕ್ಕಿರಬಹುದಾದ ಯಾವುದೇ ಬಗೆಯ ಕೆಡುಕುಕಣಗಳನ್ನು (pathogens) ಸೋಸುವ ಕೆಲಸವನ್ನು ಹಾಲ್ರಸದೇರ‍್ಪಾಟು ಮಾಡುತ್ತದೆ.

ಕರುಳಿನಿಂದ ಹೀರಿಕೊಂಡ ಕೊಬ್ಬುಳಿಗಳನ್ನು (fatty acids), ನೆತ್ತರೇರ‍್ಪಾಟಿಗೆ ತಲುಪಿಸುವ ಕೆಲಸದಲ್ಲೂ ಹಾಲ್ರಸದೇರ‍್ಪಾಟು ಪಾಲ್ಗೊಳ್ಳುತ್ತದೆ. ಈ ಏರ‍್ಪಾಟು ನವಿರುಹಾಲ್ರಸಗೊಳವೆಗಳು (lymphatic capillaries), ಹಾಲ್ರಸಗೊಳವೆಗಳು (lymphatic vessels) ಹಾಗು ಹಾಲ್ರಸಗಡ್ಡೆಗಳನ್ನು (lymph nodes) ಒಳಗೊಂಡಿರುತ್ತದೆ.

ಬರಹದ ಮೊದಲ ಎರಡು ಕಂತುಗಳಲ್ಲಿ ಈ ಏರ‍್ಪಾಟುಗಳ ಒಡಲರಿಮೆಯನ್ನು (anatomy) ತಿಳಿದುಕೊಳ್ಳೋಣ. ಮೂರನೇ ಕಂತಿನಲ್ಲಿ ಉಸಿರಿಯರಿಮೆಯ (physiology) ಬಗ್ಗೆ ತಿಳಿಸಿಕೊಡುವೆ.

ಹಾಲ್ರಸದೇರ‍್ಪಾಟು ಹಾಗು ಕಾಪೇರ‍್ಪಾಟುಗಳ ಮುಕ್ಯ ಬಾಗಗಳೆಂದರೆ ಕೆಂಪು ಮೂಳೆಮಜ್ಜೆ (red bone marrow) ಹಾಗು ಬೆಳ್-ನೆತ್ತರು (ಬೆನೆ) ಕಣಗಳು (ತಿಟ್ಟ 1, 2).

ಕೆಂಪು ಮೂಳೆಮಜ್ಜೆ ನೆತ್ತರುಮಾಡುವ (hematopoietic) ಗೂಡುಕಟ್ಟು (tissue). ಇದು ಹೀರುಗದೆಲುಬುಗಳಿಂದ (spongy bone) ಮಾಡಲ್ಪಟ್ಟಿರುವ ಚಪ್ಪಟ್ಟೆ ಎಲುಬುಗಳಲ್ಲಿ (flat bones)ಇರುತ್ತದೆ. ಈ ಗೂಡುಕಟ್ಟಿನಲ್ಲಿ ನೆತ್ತರುಕಣಗಳನ್ನು (blood cells) ಮಾಡುವ ಬುಡಗೂಡುಗಳು (stem cells) ಇರುತ್ತವೆ. ಕಾಪೇರ‍್ಪಾಟಿನಲ್ಲಿ ಪಾಲ್ಗೊಳ್ಳುವ ಎಲ್ಲಾ ಬಗೆಯ ಬೆನೆಕಣಗಳು (white blood cells), ಕೆಂಪು ಮೂಳೆಮಜ್ಜೆಯಲ್ಲಿ ಮಾಡಲ್ಪಡುತ್ತವೆ.

 

ಬೆನೆಕಣಗಳು (WBC) ಎರಡು ಬಗೆಯ ಬುಡಗೂಡುಗಳಿಂದ ಹುಟ್ಟುತ್ತವೆ. ಅವುಗಳೆಂದರೆ,

1) ಮುನ್ನುಚ್ಚಿನ (myeloid) ಬುಡಗೂಡಿನಿಂದ ಒಂಜೀವ ಕಣ (monocytes) ಹಾಗು ನುಚ್ಚಿನಕಣಗಳು (granulocytes) ಹುಟ್ಟುತ್ತವೆ.

2) ಹಾಲ್ರಸಬಗೆ ಬುಡಗೂಡುನಿಂದ ಹುಟ್ಟುಕೊಲ್ಲುಗೂಡುಗಳು/ಹುಕೊಗೂಡು (natural killer cells) ಮತ್ತು ಹಾಲ್ರಸಕಣಗಳು (lymphocytes) ಮಾಡಲ್ಪಡುತ್ತವೆ.

1.1) ಒಂಜೀವ ಕಣಗಳು: (ತಿಟ್ಟ 2)

ನುಚ್ಚಿಲ್ಲದ (agranulocyte) ಬೆನೆಕಣವಾದ ಒಂಜೀವಕಣವು ಡೊಳ್ಳುಮುಕ್ಕ (macrophage) ಇಲ್ಲವೆ ಕವಲ್ಗೂಡುಗಳಾಗಿ (dendritic cells) ಮಾರ‍್ಪಡುವ ಅಳವನ್ನು ಹೊಂದಿವೆ.
ಡೊಳ್ಳುಮುಕ್ಕ (macrophages): ನುಚ್ಚಿನ ಕಣಗಳಿಗೆ ಹೋಲಿಸಿದರೆ, ಒಂಜೀವ ಕಣಗಳು ಮಯ್ಗೆ ತಗುಲುವ ಸೋಂಕಿಗೆ ಸ್ವಲ್ಪ ತಡವಾಗಿ ಎಚ್ಚೆತ್ತುಕೊಳ್ಳುತ್ತವೆ. ಸೋಂಕು ತಗುಲಿದ ಮಯ್ ತಾಣವನ್ನು ತಲುಪುವ ಒಂಜೀವ ಕಣಗಳು ಡೊಳ್ಳುಮುಕ್ಕಗಳಾಗಿ ಬದಲಾಗುತ್ತವೆ.

ತಿನಿಗೂಡುಗಳ (phagocytes) ಬಗೆಗಳಲ್ಲಿ ಒಂದಾದ ಡೊಳ್ಳುಮುಕ್ಕವು ಕೆಡುಕುಕಣಗಳನ್ನು ನುಂಗಿ ಅರಗಿಸಿಕೊಳ್ಳುವ ಗುಣವನ್ನು ಹೊಂದಿದೆ. ಸೋಂಕನ್ನು ತಡೆಯುವುದರ ಜೊತೆಗೆ, ಸೋಂಕು ಕೊನೆಗೊಂಡ ಮೇಲೆ ಕೆಡುಕುಕಣ ಹಾಗು ಕಾಪೆರ‍್ಪಾಟುಗಳ ಕಾದಾಟದಿಂದ ಉಂಟಾಗುವ ಕಸಗಳನ್ನೂ ತೆಗೆಯುವ ಕೆಲಸವನ್ನು ಮಾಡುತ್ತದೆ.

ಕವಲ್ಗೂಡುಗಳು (dendritic cells): ತೊಗಲು ಹಾಗು ಲೋಳ್ಪದರದ (mucus membrane) ಗೂಡುಕಟ್ಟುಗಳಲ್ಲಿ ಒಂಜೀವ ಕಣಗಳು ಕವಲ್ಗೂಡುಳಾಗಿ ಮಾರ‍್ಪಡುತ್ತವೆ. ಕವಲ್ಗೂಡುಗಳು ಕೆಡುಕುಕಣಗಳ ಒಗ್ಗದಿಕಗಳನ್ನು ಗುರುತಿಸುವ ಕೆಲಸವನ್ನು ಮಾಡುತ್ತವೆ. ಒಗ್ಗದಿಕಗಳನ್ನು ಗುರುತಿಸುವಿಕೆ T ಹಾಗು B ಎಂಬ ಹಾಲ್ರಸಕಣಗಳನ್ನು ಚುರುಕುಗೊಳಿಸುವ ಕೆಲಸವನ್ನು ಮಾಡುತ್ತದೆ.

1.2) ನುಚ್ಚಿನ ಕಣಗಳು: (ತಿಟ್ಟ 2)
ಇವುಗಳಲ್ಲಿ ಮೂರು ಬಗೆ.

ಕೆಂಬಣ್ಣೊಲವುಕಣಗಳು (eosinophils): ಒಗ್ಗದಿಕೆಯ ಉರಿಯೂತಗಳನ್ನು (allergic inflammation) ಕಡಿಮೆ ಮಾಡುವ ಹಾಗು ಮಯ್ಯೊಳಕ್ಕೆ ನುಸುಳುವ ಹೊರಕುಳಿಗಳ (parasites) ಮೇಲೆ ದಾಳಿಮಾಡುವಲ್ಲಿ ನೆರವಾಗುತ್ತವೆ.

ಮರುಹುಳಿಯೊಲವುಕಣಗಳು (basophils): ಹೊರಕುಳಿ ಹಾಗು ಹಲವು ಬಗೆಯ ಒಗ್ಗದಿಕಗಳು (antigens) ಮಯ್ಯನ್ನು ಹೊಕ್ಕಾಗ, ಹೆಪೆರಿನ್ (heparin) ಹಾಗು ಹಿಸ್ಟಮಿನ್ (histamine) ಎಂಬ ಇರ‍್ಪುಗಳನ್ನು (chemicals) ಸೂಸುವ ಮೂಲಕ ಒಗ್ಗದಿಕೆಯ ಉರಿಯೂತದ (allergic inflammation) ಹಮ್ಮುಗೆಯನ್ನು ಕೆರಳಿಸುತ್ತವೆ.

ಸಪ್ಪೆಬಣ್ಣೊಲವುಕಣಗಳು (neutrophils): ಸೋಂಕು ತಗುಲಿದ ಕೂಡಲೆ ಎಚ್ಚೆತ್ತುಕೊಳ್ಳುವ ಬೆನೆಕಣಗಳಿವು. ಕೆಡುಕುಕಣಗಳು ಸೂಸುವ ಇರ‍್ಪುಗಳನ್ನು (chemicals) ಗುರುತಿಸುವ ಅಳವನ್ನು ಹೊಂದಿರುವ ಸಪ್ಪೆಬಣ್ಣೊಲವುಕಣಗಳು, ಸೋಂಕು ತಗುಲಿದ ಮಯ್ಬಾಗಕ್ಕೆ ಓಡುತ್ತವೆ. ಸೋಂಕು ತಗುಲಿದ ತಾಣವನ್ನು ತಲುಪಿದ ಸಪ್ಪೆಬಣ್ಣೊಲವುಕಣಗಳು, ಕೆಡುಕುಕಣಗಳನ್ನು ತಿನಿಗೂಡುವಿಕೆಯ (phagocytosis) ಹಮ್ಮುಗೆಯಲ್ಲಿ ನುಂಗುತ್ತವೆ. ನುಂಗಿದ ಕೆಡುಕುಕಣವನ್ನು ಇರ‍್ಪುಗಳ ನೆರವಿನಿಂದ ಸಾಯಿಸುತ್ತವೆ.

 

2) ಹಾಲ್ರಸಕಣಗಳು (lymphocytes): (ತಿಟ್ಟ 2)
ಹಾಲ್ರಸಬಗೆ ಬುಡಗೂಡುಗಳಿಂದ T ಹಾಗು B ಎಂಬ ಎರಡು ಬಗೆಯ ಹಾಲ್ರಸಕಣಗಳು ಹುಟ್ಟುತ್ತವೆ.

2.1) T-ಹಾಲ್ರಸಕಣಗಳು (T-lymphocytes): T-ಗೂಡುಗಳು ಎಂದೂ ಕರೆಯಬಹುದಾದ ಈ ಬೆನೆಕಣಗಳು, ಗೊತ್ತು ಮಾಡಿದ ಕೆಡುಕುಕಣಗಳ ಎದುರಾಗಿ ಸೆಣಸಲು ನೆರವಾಗುತ್ತವೆ. T-ಗೂಡುಗಳು ನೇರವಾಗಿ ಕೆಡುಕುಕಣಗಳ ಮೇಲೆ ಎರಗುವುದರ ಜೊತೆಗೆ ಕೆಡುಕುಕಣಗಳ ಎದುರಾಗಿ ಸೆಣಸುವ ಉಳಿದ ಕಾಪೆರ‍್ಪಾಟಿನ ಗೂಡುಗಳಿಗೆ ನೆರವಾಗುತ್ತವೆ.

ಒಮ್ಮೆ ಸೋಂಕು ತಗುಲಿದ ಮೇಲೆ ಒಂದಶ್ಟು T-ಗೂಡುಗಳು ಸೋಂಕಿಗೆ ಕಾರಣವಾದ ಕೆಡುಕುಕಣವನ್ನು ನೆನಪಿಟ್ಟುಕೊಳ್ಳಲು, ‘ನೆನಪಿನ T-ಗೂಡುಗಳಾಗಿ’ (memory T-cells) ಬದಲಾಗುತ್ತವೆ. ಒಮ್ಮೆ ಮಾಡಲ್ಪಟ್ಟ ನೆನಪಿನ T-ಗೂಡುಗಳು, ಯಾವಾಗಲು ನೆತ್ತರೇರ‍್ಪಾಟಿನಲ್ಲಿ ಹರಿದಾಡುತ್ತಿರುತ್ತವೆ. ಮುಂದೆ ಅದೇ ಬಗೆಯ ಕೆಡುಕುಕಣ ಮಯ್ಯನ್ನು ಹೊಕ್ಕರೆ ನೆನಪಿನ T-ಗೂಡುಗಳು, ಕೆಡುಕುಕಣಗಳ ಒಗ್ಗದಿಕಗಳನ್ನು (antigen) ತುಂಬಾ ಕಡಿಮೆ ವೇಳೆಯಲ್ಲಿ ಗುರುತಿಸಿ, ಅವುಗಳನ್ನು ಸದೆಬಡಿಯುತ್ತವೆ.

(ನೋಡಿ ಹೇಗಿದೆ ನಮ್ಮ ಮಯ್ಯಿ ಕಾಪಾಡುವ ಪಡೆಗಳ ಏರ‍್ಪಾಟು. ಹಿಂದೊಮ್ಮೆ ಎರಗಿದ ಕೆಡುಕುಕಣಗಳನ್ನು ನೆನಪಿಟ್ಟುಕೊಂಡು ಮುಂದೆ ಅದೇ ಕೆಡುಕುಕಣಗಳು ಬಂದರೆ ಬೇಗನೇ ಗುರುತು ಹಿಡಿದು ಸದೆಬಡೆಯುತ್ತವೆ!)

2.2) B-ಹಾಲ್ರಸಕಣಗಳು/B-ಗೂಡುಗಳು (B-lymphocytes/B-cells): B-ಗೂಡುಗಳು, ಕೆಡುಕುಕಣಗಳನ್ನು ಎದುರುಗೊಂಡ ಕೂಡಲೆ ತನ್ನ ಕೆಲಸವನ್ನು ಚುರುಕುಗೊಳಿಸಲು ರಸಗೂಡುಗಳಾಗಿ (plasma cells) ಬದಲಾಗುತ್ತವೆ. ರಸಗೂಡುಗಳು, ಕೆಡುಕುಕಣದ ಒಗ್ಗದಿಕಗಳ (antigen) ಎದುರಾಗಿ ಎದುರುಕಗಳನ್ನು (antibody) ಮಾಡುತ್ತವೆ. ಎದುರುಕಗಳು, ಕೆಡುಕುಕಣಗಳ ಒಗ್ಗದಿಕಗಳಿಗೆ ಅಂಟಿಕೊಳ್ಳುವ ಮೂಲಕ, ಉಳಿದ ಕಾಪೇರ‍್ಪಾಟಿನ ಕಣಗಳು ಕೇಡುಕುಕಣಗಳ ಮೇಲೆ ಎರಗುವ ತನಕ ಕೆಡುಕುಕಣಗಳನ್ನು ತಡೆದು ನಿಲ್ಲಿಸುತ್ತವೆ.

2.3) ಹುಟ್ಟುಕೊಲ್ಲುಗಗೂಡುಗಳು (natural killer cells):
ಹಾಲ್ರಸಕಣಗಳ ಬಗೆಗಳಲ್ಲಿ ಒಂದಾದ ಹುಟ್ಟುಕೊಲ್ಲುಗ (ಹುಕೊ) ಗೂಡುಗಳು ಹಲವು ಬಗೆಯ ಕೆಡುಕುಕಣಗಳು ಹಾಗು ಏಡಿ ಹುಣ್ಣಿನ ಗೂಡುಗಳ (cancer cells) ಎದುರಾಗಿ ಸೆಣಸುವ ಕಸುವನ್ನು ಹೊಂದಿವೆ.

ನೆತ್ತರು ಜಾರಿನಲ್ಲಿ (circulatory tract) ಓಡಾಡುವ ಹುಕೊಗೂಡುಗಳು, ಹಾಲ್ರಸಗಡ್ಡೆ (lymph node), ತೊಳ್ಳೆ (spleen) ಹಾಗು ಕೆಂಪು ಮೂಳೆಮಜ್ಜೆಗಳ (red bone marrow) ಮೇಲೆ ಎರಗುವ ಹಲವಾರು ಕೆಡುಕುಕಣಗಳ ಎದುರಾಗಿ ಸೇಣಸುತ್ತವೆ.

(ಬೆನೆಕಣಗಳ ಬಗ್ಗೆ ಮತ್ತಶ್ಟು ತಿಳಿದುಕೊಳ್ಳಲು ‘ನೆತ್ತರು’ ಬರಹವನ್ನು ಓದುವುದು.)

ಬರಹದ ಮುಂದಿನ ಕಂತಿನಲ್ಲಿ ಹಾಲ್ರಸದೇರ‍್ಪಾಟಿನ ಅಡಿಯಲ್ಲಿ ಬರುವ ಬಾಗಗಳ ಬಗ್ಗೆ ತಿಳಿದುಕೊಳ್ಳೋಣ.

(ಮಾಹಿತಿ ಮತ್ತು ತಿಟ್ಟ ಸೆಲೆಗಳು: 1. embryology.med 2. en.wikipedia.org, 3. biology-forums.com , 4. remnanthealth.com, 5. niaid.nih.gov, 6. innerbody.com)

ನಿಮಗೆ ಹಿಡಿಸಬಹುದಾದ ಬರಹಗಳು

No Responses

  1. 12/11/2014

    […] (lymphatic system) ಒಡಲರಿಮೆಯ ಬಗ್ಗೆ ತಿಳಿದುಕೊಳ್ಳೋಣ. ಹಿಂದಿನ ಕಂತಿನಲ್ಲಿ ತಿಳಿಸಿರುವಂತೆ, ಹಾಲ್ರಸದೇರ‍್ಪಾಟಿನ […]

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *