ಪೈರ‍್ಪಾಕ್ಸ್ OS – ತರಬಲ್ಲದೇ ಹೊಸ ಅಲೆ?

ಪ್ರಜ್ವಲ್.ಪಿ.

 

ಅಂಡ್ರಾಯಿಡ್, ಐಓಎಸ್, ವಿಂಡೋಸ್ ಪೋನ್ ಮತ್ತು ಬ್ಲಾಕ್ಬೆರ‍್ರಿ ಚೂಟಿಯುಲಿ (smart phone) ನಡೆಸೇರ‍್ಪಾಟುಗಳಲ್ಲಿ (operating system) ಪ್ರಮುಕವಾದವು. ಚೂಟಿಯುಲಿಗಳ ಮಾರುಕಟ್ಟೆಯಲ್ಲಿ ಕೆಲವು ತುಂಬಾ ಶಕ್ತಿಶಾಲಿಯಾಗಿದ್ದರೆ, ಇನ್ನು ಕೆಲವು ತುಂಬಾ ಕಳಪೆಯಾಗಿವೆ. ಬೆಲೆಯ ಬಗ್ಗೆ ಹೇಳುವಾವುದಾದರೆ ಕೆಲವು ಅತಿ ದುಬಾರಿ, ಇನ್ನು ಕೆಲವು ಅತಿ ಕಡಿಮೆ ಬೆಲೆಯವು! ಇವುಗಳನ್ನು ನಿಯಂತ್ರಿಸುವವರೇ ಇಲ್ಲ ಅನ್ನುವಂತಾಗಿದೆ.

ಇಂತಹ ಸಂದರ‍್ಬದಲ್ಲಿ ಬಾರತದ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಗೆ ಅತೀ ಅಗತ್ಯವಾದ, ಎಲ್ಲ ಕೆಲಸಗಳನ್ನು ಸರಾಗವಾಗಿ ಮಾಡಬಲ್ಲ ಪೋನ್ ತಲುಪಿಸಬೇಕೆಂಬ ನಿಟ್ಟಿನಲ್ಲಿ ಅತಿ ಕಡಿಮೆ ಬೆಲೆಗೆ ಸಾಮಾನ್ಯ ಅಲೆಯುಲಿ (mobile) ಬಳಸುವವರು ಚೂಟಿಯುಲಿ (smart phone) ಕಡೆಗೆ ವಲಸೆ ಹೋಗುವಂತೆ ಮಾಡಲು ಪೈರ‍್ಪಾಕ್ಸ್ ನಡೆಸೇರ‍್ಪಾಟು ಪ್ರಯತ್ನಿಸುತ್ತಿದೆ .

ಇದರ ಪಲವಾಗಿ ಪೋನ್ ತಯಾರಿಕೆಯಲ್ಲಿರುವ ಕಂಪೆನಿಗಳಾದ ಇನ್ಟೆಕ್ಸ್ (Intex), ಸ್ಪೈಸ್ (Spice), ಅಲ್ಕಾಟೆಲ್ (Alcatel) ಮೊಜಿಲ್ಲಾ ಪೈರ‍್ಪಾಕ್ಸ್ ನಡೆಸೇರ‍್ಪಾಟಿನಲ್ಲಿ ಕೆಲಸ ಮಾಡುವ ಪೋನನ್ನು ಬಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಇವುಗಳಲ್ಲಿ ಇನ್ಟೆಕ್ಸ್ FX-1 ಬಾರತದ ಅಗ್ಗದ ಚೂಟಿಯುಲಿ ಎಂದೇ ಹೆಸರುವಾಸಿಯಾಗುತ್ತಿದೆ.

ಮೊಜಿಲ್ಲಾ ಪೈರ‍್ಪಾಕ್ಸ್ ನಡೆಸೇರ‍್ಪಾಟು HTML5 ಆದಾರಿತವಾಗಿದ್ದು, ಇದರಲ್ಲಿ ಸಾಪ್ಟವೇರ್ ಇಳಿಸಿಕೊಳ್ಳಲು ಯಾವುದೇ ಮಿಂಚೆಯಿಂದ ಒಳಹೋಗಬೇಕಿಲ್ಲ. ಕಿರುತಂತ್ರಾಂಶಗಳು HTML5 ಆದಾರಿತವಾಗಿದ್ದು ಸಣ್ಣ ಪ್ರಮಾಣದ ನೆನಪು (memory) ಜಾಗವನ್ನಶ್ಟೇ ಬೇಡುತ್ತವೆ.ಈ ಚೂಟಿಯುಲಿಗಳ ಹೋಲಿಕೆ ಹೀಗಿದೆ,

ಇನ್ಟೆಕ್ಸ್ FX-1

ಸ್ಪೈಸ್ Mi-FX1

ಮುಕ್ಯ ಪ್ರೊಸೆಸರ್ 1 ಗಿಗಾಹರ‍್ಟ್ಸ್ 1 ಗಿಗಾಹರ‍್ಟ್ಸ್
ಪರದೆ ಮತ್ತು ರೆಸೊಲ್ಯೂಶನ್ 3.5 ಇಂಚುಗಳು (164 PPI) , 480×320 ರೆಸೊಲ್ಯೂಶನ್ 3.5 ಇಂಚುಗಳು (164 PPI) , 320×480 ರೆಸೊಲ್ಯೂಶನ್
ಬ್ಯಾಟರಿ 1250mAh 1400mAh
ನೆನಪು (memory) 46MB, 4GB ವಿಸ್ತರಿಸಬಲ್ಲದು 256 MB , 4GB ವಿಸ್ತರಿಸಬಲ್ಲದು
ಕ್ಯಾಮೆರಾ 2MP ಹಿಂಬದಿಯ 1.3MP ಹಿಂಬದಿಯ ಹಾಗೂ ವಿಜಿಎ ಮುಂಬದಿಯ
ವೈ-ಪೈ, ಬ್ಲೂಟೂತ್ ಇದೆ ಇದೆ
SAR value 1.21 w/kg 0.741 w/kg
 ಸಂಪರ‍್ಕ 2 G ಅಶ್ಟೇ ಸಾದ್ಯ 2.5 G ಸಾದ್ಯ

ಈ ಮೇಲಿನ ವಿಶೇಶತೆಗಳ ಜತೆಗೆ ಈ ಚೂಟಿಯುಲಿಗಳು ಎರಡು ಸಿಮ್(ಜಿಎಸ್ಎಂ + ಜಿಎಸ್ಎಂ)ಗಳನ್ನೂ ಹೊಂದಬಲ್ಲವು. ಕಂಪನಿಗಳು ಕಿರುತಂತ್ರಾಂಶಗಳಲ್ಲಿ ಕೆಲವನ್ನು ಪೋನಿನಲ್ಲಿ ಮೊದಲೇ ಸೇರಿಸಿದ್ದಾರೆ. ಇದರಲ್ಲಿ ಹಿಂದಿ, ತಮಿಳು ಮತ್ತು ಬೆಂಗಾಳಿ ಬಾಶೆಗಳಲ್ಲಿ ಬಳಸಬಹುದಾದ ಕಿರುತಂತ್ರಾಂಶ ಕೂಡ ಒಂದು ಆದರೆ ಅದರಲ್ಲಿ ಕನ್ನಡವಿಲ್ಲದಿರುವುದು ತುಂಬಾ ಬೇಸರದ ಸಂಗತಿ.

ಈ ಚೂಟಿಯುಲಿಗಳ ರಚನೆ ಮತ್ತು ವಿನ್ಯಾಸ ಪರವಾಗಿಲ್ಲ. ಬ್ಯಾಟರಿ ಬದಲಿಸಬಹುದು. ವೀಡಿಯೊ ನೋಡುವ ಅನುಬವವು ಉತ್ತಮವಾಗಿದೆ. ಪೇಸ್ಬುಕ್ ಮತ್ತು ಯೂಟ್ಯೂಬ್ ಚೆನ್ನಾಗಿ ಕೆಲಸ ಮಾಡುತ್ತವೆ ಮತ್ತು ವಾಟ್ಸಪ್ ಗೆ ಬೆಸೆಯಲು ಅನುವಾಗುವಂತೆ ConnectA2 ಎಂಬ ಹೊರ ತಾಣದ ಅವಕಾಶವಿದೆ. ಬಳಕಗಳ ಗುರುತುಗಳು (application icons) ಮುಂತೆರೆಯಲ್ಲಿರುವ (home screen) ಕೆಳಪಟ್ಟಿಯೊಂದರಲ್ಲಿ ಕಾಣುತ್ತವೆ.

ಈ ಚೂಟಿಯುಲಿಗಳ ಒಂದು ದೊಡ್ಡ ಸಮಸ್ಯೆಯೆಂದರೆ ಕಡಿಮೆ ಒಳನೆನಪು (internal memory) ಇರುವುದರಿಂದ ಹಾಡು, ಚಿತ್ರಗಳನ್ನು ಕೂಡಿಡಲು ನೆಪ್ಪುಬಿಲ್ಲೆ (Memory Card) ಬೇಕಾಗುತ್ತದೆ. ಆಂಡ್ರಾಯ್ಡ್ ಅತವಾ ವಿಂಡೋಸ್ ಪೋನ್ ಹೋಲಿಸಿದರೆ ಪೈರ‍್ಪಾಕ್ಸ್ ಹೊಸ ಮೊಬೈಲ್ ಓಎಸ್ ಕಡಿಮೆ ಯಂತ್ರಾಂಶದ ಕಸುವು ಹೊಂದಿರುವ ಸಾದನವಾಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಬೆರಕೆಯಾಗಿ ಪೈರ‍್ಪಾಕ್ಸ್ ಓಎಸ್ ಹೊಮ್ಮಿದಂತೆ ಅನ್ನಿಸುತ್ತದೆ.

ಗುಣಮಟ್ಟ ಮತ್ತು ಕೊಡುವ ಹಣಕ್ಕೆ ಹೋಲಿಸಿದರೆ ಎರಡು ಚೂಟಿಯುಲಿಗಳು ತ್ರುಪ್ತಿದಾಯಕ ಅನ್ನಬಹುದು. ಮೊದಲ ಹಂತದ, ಕಡಿಮೆ ಬೆಲೆಯ ಚೂಟಿಯುಲಿ ಹುಡುಕುತ್ತಿರುವವರಿಗೆ ಈ ಚೂಟಿಯುಲಿಗಳು ಆಯ್ಕೆಯಾಗಬಹುದು.

(ಚಿತ್ರಸೆಲೆ: www.rediff.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks