ಸಿಂಹ ನಡಿಗೆ: ಇದು ಡಾ. ವಿಶ್ಣುವರ‍್ದನ್ ಹೆಜ್ಜೆ ಗುರುತು – 2

ಹರ‍್ಶಿತ್ ಮಂಜುನಾತ್.

 

ಹಿಂದಿನ ಬರಹದಲ್ಲಿ ವಿಶ್ಣುರವರ ಎಳವೆ, ಕಲಿಕೆ ಮತ್ತು ಚಿತ್ರರಂಗದಲ್ಲಿ ಬೆಳೆದ ಪರಿ, ದಶಕಗಳ ಕಾಲ ಅಗ್ರಗಣ್ಯ ನಾಯಕ ನಟನಾಗಿ ಕನ್ನಡ ಚಿತ್ರರಂಗವನ್ನು ಆಳಿದ ರೀತಿಗಳೂ ಸೇರಿದಂತೆ ಕರುನಾಡ ಸಿಂಹ ನಡೆದು ಬಂದ ಹಾದಿಯನ್ನು ಕೊಂಚ ಅವಲೋಕಿಸುವ ಒಂದು ಸಣ್ಣ ಪ್ರಯತ್ನವನ್ನು ನಿಮ್ಮ ಮುಂದಿಡಲಾಗಿತ್ತು. ಅದರ ಮುಂದುವರಿದ ಬಾಗವಾಗಿ, ಈ ಬರಹದಲ್ಲಿ ವಿಶ್ಣುರವರ ಕುರಿತ ಕೆಲ ವಯುಕ್ತಿಕ ವಿಚಾರಗಳನ್ನು ತಿಳಿಯೋಣ.

ಬಹುತೇಕ ಎಲ್ಲಾ ಬಗೆಯ ಪಾತ್ರಗಳಿಗೂ ಬಣ್ಣ ಹಚ್ಚಿದ್ದ ವಿಶ್ಣು, ಇಂದಿಗೂ ಕನ್ನಡಿಗರ ಮನೆಮಾತು. ಸುಮಾರು 35 ವರುಶಗಳ ಕಾಲ ನಾಡಿನ ಯುವಕ ಯುವತಿಯರನ್ನು ಮೋಡಿ ಮಾಡಿದ ನಾಯಕನಟ. ಅದರಲ್ಲೂ ಹೆಂಗಸರಿಗೆ ತುಂಬು ಗವ್ರವ ನೀಡುತ್ತಿದ್ದ ಇವರು, ನಮ್ಮ ನಾಡಿನ ಹೆಣ್ಣುಮಕ್ಕಳಿಗಂತೂ ಅಚ್ಚು ಮೆಚ್ಚು. ಅದಕ್ಕೇ ಇರಬೇಕು, ವಿಶ್ಣು ನಟಿಸುವ ಓಡುತಿಟ್ಟಗಳನ್ನು(cinema) ಹೆಂಗಸರು ಅತೀ ಹೆಚ್ಚಾಗಿ ನೋಡಲು ಬರುತ್ತಿದ್ದರು. ಅಶ್ಟಕ್ಕೂ ಅಪಾರ ಹಾಸ್ಯಪ್ರಗ್ನೆ, ಸರಳತೆ, ಮಾನವೀಯತೆ, ಎಲ್ಲಿಲ್ಲದ ವಿನಯತೆ, ಎಲ್ಲರ ಮೇಲೂ ಪ್ರೀತಿ, ಅರೆಹೊತ್ತಿನ ಸಿಟ್ಟು, ಮನಮುಟ್ಟುವ ಮಾತು, ತುಸು ಸಂಕೋಚ, ಎಂತವರನ್ನೂ ಸೆಳೆಯುವ ಕಪಟವಿಲ್ಲದ ನಗು – ಇಂತವರು ಯಾರಿಗೆ ಹತ್ತಿರವಾಗುವುದಿಲ್ಲ ಹೇಳಿ?

ಇನ್ನು ಚಿತ್ರರಂಗದಲ್ಲಿ ವಿಶ್ಣು-ಆರತಿ ಜೋಡಿ ಆಗಿನ ಕಾಲಕ್ಕೆ ಸಾಂಸಾರಿಕ ಮತ್ತು ಸಾಮಾಜಿಕ ಓಡುತಿಟ್ಟಗಳಿಗೆ ಹೆಸರಾಂತ ಜೋಡಿ. ವಿಶ್ಣುರವರ ಮೊದಲ ಓಡುತಿಟ್ಟ ನಾಗರಹಾವು ಇಂದ ಗಂದರ‍್ವಗಿರಿ, ಸೇರಿದಂತೆ ಸುಮಾರು 24 ಓಡುತಿಟ್ಟಗಳಲ್ಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿತು. ಆ ಮೂಲಕ ವಿಶ್ಣು ಜೊತೆ ಅತಿ ಹೆಚ್ಚು ಓಡುತಿಟ್ಟಗಳಿಗೆ ನಾಯಕಿಯಾಗಿ ಬಣ್ಣ ಹಚ್ಚಿದ ನಟಿಯೆಂದು ಆರತಿ ಗುರುತಿಸಿಕೊಳ್ಳುವಂತಾಯಿತು.

ವಿಶ್ಣು-ಬವ್ಯ ಜೋಡಿ 1980ರ ದಶಕದಲ್ಲಿ ಬಹಳಶ್ಟು ಹೆಸರು ಮಾಡಿದ ಜೋಡಿ. ವರುಶಕ್ಕೆ ಒಂದು ಓಡುತಿಟ್ಟದಲ್ಲಾದರೂ ಜೊತೆಯಾಗಿ ಕಾಣಿಸುತ್ತಿದ್ದ ಈ ಜೋಡಿ ಸತತವಾಗಿ ಹತ್ತು ವರುಶಗಳ ಕಾಲ ತಿಟ್ಟ ರಸಿಕರ ಮನಸೆಳೆಯಿತು. ಇವರ ಜೋಡಿಯಲ್ಲಿ ನೀ ಬರೆದ ಕಾದಂಬರಿ, ರವಿವರ‍್ಮ, ಜನನಾಯಕ, ಕ್ರಿಶ್ಣ ನೀ ಬೇಗನೆ ಬಾರೋ ಸೇರಿದಂತೆ ಬಹಳಶ್ಟು ಓಡುತಿಟ್ಟಗಳು ಮೂಡಿಬಂದವು. ವಿಶೇಶವೆಂದರೆ ಈ ಜೋಡಿಯ ಎಲ್ಲಾ ಚಿತ್ರಗಳು ಬರ‍್ಜರಿಯಾದ ಗೆಲುವು ಕಂಡವು.

ವಿಶ್ಣುರವರಂತಹ ಮೇರು ನಟನ ವಯುಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ, 1975ರಲ್ಲಿ ಬೆಂಗಳೂರಿನ ಕುಚಲಾಂಬ ಕಲ್ಯಾಣ ಮಂಟಪದಲ್ಲಿ ಬಹುಬಾಶಾ ನಟಿ ಬಾರತಿಯವರನ್ನು ಅವರು ಮದುವೆಯಾದರು. ಕೀರ‍್ತಿ ಮತ್ತು ಚಂದನ್ ವಿಶ್ಣು ದಂಪತಿಗಳ ದತ್ತು ಮಕ್ಕಳು.

ವಿಶ್ಣು ಮನೆಯಲ್ಲಿರುವಶ್ಟು ಹೊತ್ತು ಮನೆಯವರೊಂದಿಗೆ ಬೆರೆತು, ತಾನು ನಟಿಸುತ್ತಿರುವ ಮತ್ತು ಮುಂದೆ ನಟಿಸಲಿರುವ ಓಡುತಿಟ್ಟಗಳ ಕುರಿತು ಚರ‍್ಚೆ ನಡೆಸುತ್ತಿದ್ದರು. ವಿಶ್ಣುವಿಗೆ ರುಚಿಯಾದ ಊಟದಲ್ಲಿ ತುಂಬಾನೇ ಆಸಕ್ತಿ. ಮೂಲಂಗಿ ಹುಳಿ, ಸೊಪ್ಪಿನ ಹುಳಿ, ಕಾಯಿ ಚಟ್ನಿ, ಆಂಬೊಡೆ ಸಾರು ಕಂಡರೆ ಎಲ್ಲಿಲ್ಲದಿಶ್ಟ. ಹಾಗಾಗಿಯೇ ವಿಶ್ಣು ಚಿತ್ರೀಕರಣದ ಹೊತ್ತಿನಲ್ಲೂ ಮನೆ ಊಟವನ್ನೇ ಹೆಚ್ಚಾಗಿ ಎದುರು ನೋಡುತ್ತಿದ್ದರು. ವಿಶ್ಣು ಹಿರಿತೆರೆಯಲ್ಲಿ ಮಾತ್ರವಲ್ಲದೆ, ಕಿರುತೆರೆಯೆಲ್ಲಿಯೂ ಬಣ್ಣ ಹಚ್ಚಿದ್ದರು. ಸುಮಾರು 1980ರ ದಶಕದಲ್ಲಿ ಮೂಡಿಬಂದಿದ್ದ ಶಂಕರ್ ನಾಗ್‍ರವರ ನಡೆಸುವಿಕೆಯಲ್ಲಿ ಹೆಸರುವಾಸಿಯಾದ ದಾರಾವಾಹಿ ಮಾಲ್ಗುಡಿ ಡೇಸ್‌ನ ಕಂತೊಂದರಲ್ಲಿ (ರುಪೀಸ್ ಪಾರ‍್ಟಿ ಪಯ್ವ್ ಎ ಮಂತ್) ವಿಶ್ಣುವರ‍್ದನ್ ನಟಿಸಿದ್ದರು.

ವಿಶ್ಣು ಕೇವಲ ನಟ ಮಾತ್ರವಾಗದೇ ಹಿನ್ನಲೆ ಗಾಯಕರಾಗಿಯೂ ಗುರುತಿಸಿಕೊಂಡಿದ್ದರು. ನಾಗರಹೊಳೆ ಎಂಬ ಕನ್ನಡ ಓಡುತಿಟ್ಟಕ್ಕೆ ಮೊದಲ ಬಾರಿಗೆ ಕಂಟದಾನ ಮಾಡಿದ್ದ ವಿಶ್ಣು ಬಳಿಕ, ಸಾಹಸಸಿಂಹ, ಜಿಮ್ಮಿಗಲ್ಲು, ಸಿರಿತನಕ್ಕೆ ಸವಾಲ್, ವಿಶ್ಣುಸೇನ, ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕನ್ನಡ ಓಡುತಿಟ್ಟಗಳು, ಮತ್ತು ಸ್ವಾಮಿ ಅಯ್ಯಪ್ಪ, ತಾಯಿ ಬನಶಂಕರಿ, ದರ‍್ಮಸ್ತಳ ಮಂಜುನಾತ ದೇವರ ಬಕ್ತಿಗೀತೆಗಳಿಗೆ ದನಿಯಾಗಿದ್ದಾರೆ. ಅದರಲ್ಲಿಯೂ ವಿಶ್ಣು ಮೋಜುಗಾರ ಸೊಗಸುಗಾರ ಓಡುತಿಟ್ಟದಲ್ಲಿ ಹಾಡಿದ್ದ, “ಕನ್ನಡವೇ ನಮ್ಮಮ್ಮ, ಅವಳಿಗೆ ಕಯ್ ಮುಗಿಯಮ್ಮ” ಹಾಡು ಇಂದಿಗೂ ಮಂದಿ ಮನದಲ್ಲಿ ಹಾಗೆಯೇ ಉಳಿದಿದೆ.

ವಿಶ್ಣುವಿಗೆ ಇಂದಿಗೂ ಅಪಾರ ಮಂದಿ ಅಬಿಮಾನಿಗಳಿದ್ದಾರೆ. ಅಬಿಮಾನಿಗಳು ನೆಚ್ಚಿನ ನಟರಿಗೆ ಓಲೆಗಳನ್ನು ಕಳುಹಿಸುವುದು ಸರ‍್ವೇ ಸಾಮಾನ್ಯ. ಅಂತೆಯೇ ಅಬಿಮಾನಿಗಳು ವಿಶ್ಣುವಿಗೆ ಪತ್ರ ಬರೆದಾಗ, ಕುದ್ದಾಗಿ ವಿಶ್ಣು ಆ ಓಲೆಗಳಿಗೆ ಮಾರುತ್ತರಗಳನ್ನು ಬರೆಯುತ್ತಿದ್ದರಂತೆ. ಅಂತಹ ಸರಳ ವ್ಯಕ್ತಿ ವಿಶ್ಣು. ನಮಗೆಲ್ಲಾ ತಿಳಿದಿರುವಂತೆ, ವಿಶ್ಣು ಕಯ್‍ಗಳಿಗೆ ಒಂದು ಕಡ ಹಾಕುತ್ತಿದ್ದರು. ಇದನ್ನು ಬೀದರಿನ ಗುರುದ್ವಾರದಲ್ಲಿ ವಿಶ್ಣು ಅಬಿಮಾನಿಗಳು ನೀಡಿದ್ದು, ಈ ಕಡ ತೊಟ್ಟು ವಿಶ್ಣು ಮಾಡಿದ ಮೊದಲ ಚಿತ್ರ ಸಿಂಹಜೋಡಿ. 1980ರಲ್ಲಿ ಬಿಡುಗಡೆಯಾದ ಈ ಚಿತ್ರ ವಿಶ್ಣುವಿಗೆ ಬಾರಿ ಗೆಲುವು ತಂದು ಕೊಟ್ಟಿತು. ಆ ಬಳಿಕ ಕಡ ವಿಶ್ಣುವಿನ ಕೊನೆದಿನಗಳ ವರೆಗೆ ಅವರ ಕಯ್ಯಲ್ಲೇ ಉಳಿದದ್ದು ವಿಶೇಶ.

ವಿಶ್ಣು ಬಡವರನ್ನು ಕಂಡರೆ ಕನಿಕರಿಸುತ್ತಿದ್ದ ವ್ಯಕ್ತಿ. ತೀರ ಬಡತನ, ಅನಾರೋಗ್ಯ, ಕಲಿಕೆಗೆ ಹಣವಿಲ್ಲ ಎಂದೆಲ್ಲಾ ಗೊತ್ತಾದರೆ ಅಂತಹವರಿಗೆ ಹಣ ನೆರವು ನೀಡುತ್ತಿದ್ದರಂತೆ. ಈ ನಿಟ್ಟಿನಲ್ಲಿ ಆಗಲೇ ವಿಶ್ಣು ‘ವಿಬಾ ಚಾರಿಟೆಬಲ್ ಟ್ರಸ್ಟ್’ ಎಂಬ ಹೆಸರಿನಲ್ಲಿ ಸಮಾಜ ಸೇವೆಗಿಳಿದಿದ್ದರು. ಆದರೆ ನಾವು ಮಾಡಿದ ಸಹಾಯ ಇನ್ನೊಬ್ಬರಿಗೇಕೆ ತಿಳಿಯಬೇಕು? ಬಲಗಯ್ಯಲ್ಲಿ ಕೊಟ್ಟದ್ದು ಎಡಗಯ್ಯಿಗೆ ತಿಳಿಯಬಾರದೆಂದು ಟ್ರಸ್ಟನ್ನು ಬಿಟ್ಟು ತೆರೆಮರೆಯಲ್ಲೇ ಬೇಡಿ ಬಂದವರಿಗೆ ನೆರವಾಗುತ್ತಿದ್ದರು. ವಿಶ್ಣು ಸಾವಿನ ಬಳಿಕ ‘ವಿಬಾ ಚಾರಿಟೆಬಲ್ ಟ್ರಸ್ಟ್’ ಮತ್ತೆ ತೆರೆದುಕೊಂಡಿದ್ದು, ವಿಶ್ಣು ಹೆಸರಿನಲ್ಲಿ ಅನೇಕ ಸಾಮಾಜಿಕ ಕೆಲಸಗಳನ್ನು ನಡೆಸಲಾಗುತ್ತಿದೆ. ವಿಶೇಶವೆಂದರೆ ಈ ‘ವಿಬಾ ಚಾರಿಟೆಬಲ್ ಟ್ರಸ್ಟ್’ ಮೂಲಕ ನಮ್ಮ ನಾಡಿನಾದ್ಯಂತ ಅತೀ ಹೆಚ್ಚು ರಕ್ತದಾನ ಶಿಬಿರಗಳು, ಬೇನೆಯರಿಮೆ ಕುರಿತ ಅನೇಕ ಸಲಹೆ ಮತ್ತು ನೆರವುಗಳು, ಮದುವೆಗಳು, ಕಲಿಕೆಗೆ ನೆರವುಗಳು, ನಾಡು ನುಡಿ ಹೋರಾಟಗಾರರಿಗೆ ನೆರವುಗಳು, ಸಹ ಕಲಾವಿದರಿಗೆ ನೆರವುಗಳು ಸೇರಿದಂತೆ ಅನೇಕ ಸಾಮಾಜಿಕ ಕೆಲಸಗಳು ನಡೆಯುತ್ತಿವೆ.

ಎಳವೆಯಿಂದಲೂ ನಟನೆಯ ಜೊತೆ ದಾಂಡಾಟದ (Cricket) ಗೀಳು ಹಿಡಿಸಿಕೊಂಡಿದ್ದ ವಿಶ್ಣು, ಚಿತ್ರರಂಗದ ಎಲ್ಲಾ ಕಲಾವಿದರೂ ಒಂದೆಡೆ ಸೇರಬೇಕು, ಒಟ್ಟಿಗೇ ಕುಳಿತು ಮಾತನಾಡಬೇಕು ಎಂದು ಬಯಸಿ ಮುಂದೆ ‘ಸ್ನೇಹಲೋಕ’ ಎಂಬ ತಂಡ ಕಟ್ಟಿ ಅಲ್ಲಿ ದಾಂಡಾಟವಾಡುವುದನ್ನು ಮುಂದುವರಿಸಿದರು. ಇಂದಿಗೂ ಸ್ನೇಹಲೋಕದ ನಡೆಸುವಿಕೆಯಲ್ಲಿ ದಾಂಡಾಟದ ಕೂಟಗಳು ನಡೆಯುತ್ತವೆ. ಇಂಡಿಯಾದ ಚಿತ್ರರಂಗ ಮತ್ತು ದಾಂಡಾಟಗಾರರ ನಡುವಣ ಒಡನಾಟ ಹಿಂದಿನಿಂದಲೂ ನಡೆದುಬಂದಿದೆ. ಇಂಡಿಯಾ ದಾಂಡಾಟ ತಂಡದ ಜಹೀರ್ ಕಾನ್ ಮತ್ತು ವಿಶ್ಣು ಇಬ್ಬರೂ ಒಳ್ಳೆಯ ಗೆಳೆಯರು. ಕನ್ನಡದ ‘ವೀರಪ್ಪನಾಯ್ಕ’ ಓಡುತಿಟ್ಟವನ್ನು ನೋಡಿದ್ದ ಜಹೀರ್ ವಿಶ್ಣುವಿನ ದೇಶ ಪ್ರೇಮಿ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ.

ವಿಶ್ಣು ಅಗಾದವಾದ ನೆನಪಿನ ಶಕ್ತಿಯನ್ನು ಹೊಂದಿದ್ದರು. ಯಾವುದಾದರೊಂದು ಕತೆ ವಿಶ್ಣುವಿಗೆ ಹೇಳಿದರೆ, ಮತ್ತೆ ಎಶ್ಟೇ ವರುಶ ಬಿಟ್ಟು ಕೇಳಿದರೂ ಹಾಗೆಯೇ ಕೊಂಚವೂ ತಪ್ಪಿಲ್ಲದೇ ಹೇಳುತ್ತಿದ್ದರು. ಅಶ್ಟಲ್ಲದೇ ವಿಶ್ಣು ಯಾವುದೇ ವಿಶಯದ ಬಗ್ಗೆ ನಿರಾಯಾಸವಾಗಿ ಮಾತನಾಡುವ ಶಕ್ತಿ ಬೆಳೆಸಿಕೊಂಡಿದ್ದರು. ವಯಸ್ಸು, ಅನುಬವವಾದಂತೆ ಅವರು ಪ್ರಬುದ್ದರಾಗುತ್ತಿದ್ದರು. ಕೊನೆಗೆ ಎಲ್ಲಾ ವಿಶಯಗಳನ್ನು ಮಾತನಾಡಬಲ್ಲ ಅರಿವಿನ ಮನೆಯಾಗಿಯೇ ರೂಪುಗೊಂಡರು. ವಿಶ್ಣು ನಟನೆಗೂ ಮೊದಲು ಸಾಕಶ್ಟು ತಯಾರಿಗಳನ್ನು ಮಾಡುತ್ತಿದ್ದರಂತೆ. ಆಯಾ ಸನ್ನಿವೇಶದ ಕುರಿತು ಪಕ್ವವಾದ ಮೇಲೆ ನಟಿಸುತ್ತಿದ್ದರಂತೆ. ಬಳಿಕ ಕ್ಯಾಮರಾಮನ್ ಬಳಿ ತೆರಳಿ, “ನೀನೇ ಮೊದಲ ನೋಡುಗ, ನಿನ್ನ ಅನಿಸಿಕೆ ಮೊದಲು ತಿಳಿಸು” ಎನ್ನುತ್ತಿದ್ದರಂತೆ. ಇದು ವಿಶ್ಣು ಸರಳತೆಯನ್ನು ಎತ್ತಿ ತೋರಿಸುತ್ತದೆ.

ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಮಯ್ಲಿಗಲ್ಲು ನೆಟ್ಟಂತಹ ವಿಶ್ಣು ನಟಿಸಿದ್ದ ಸಾಂಸಾರಿಕ ಓಡುತಿಟ್ಟ ‘ಯಜಮಾನ’ವನ್ನು ನೋಡಿದ್ದ ಡಾ. ರಾಜ್ಕುಮಾರ್, “ಆ ಓಡುತಿಟ್ಟಕ್ಕೆ ನೀನು ಸರಿಯಾದ ಆಯ್ಕೆ, ನಟನೆಗೆ ಸರಿಯಾದ ನ್ಯಾಯ ಒದಗಿಸಿದ್ದೀಯಾ” ಎಂದು ವಿಶ್ಣು ಕುರಿತ ಮೆಚ್ಚುಗೆಯ ನುಡಿಗಳನ್ನಾಡಿದ್ದರಂತೆ.

ವಿಶ್ಣು 200 ಕನ್ನಡ ಓಡುತಿಟ್ಟಗಳು ಮತ್ತು 6 ಹಿಂದಿ, 3 ತೆಲುಗು, 6 ತಮಿಳು, 5 ಮಲಯಾಳಂ ಸೇರಿದಂತೆ ಅಯ್ದು ಬಾಶೆಗಳಲ್ಲಿ 220 ಓಡುತಿಟ್ಟಗಳಲ್ಲಿ ನಟಿಸುವ ಮೂಲಕ ಅತೀ ಹೆಚ್ಚುಬಾರಿ ನಾಯಕನಟನಾಗಿ ನಟಿಸಿದ ಕನ್ನಡದ ನಟ ಎಂದೆನಿಸಿಕೊಂಡರು.
ವಿಶ್ಣು ಮತ್ತು ರಜನಿಕಾಂತ್ ಉತ್ತಮ ಒಡನಾಟವಿಟ್ಟುಕೊಂಡಿದ್ದರು. ತಮಿಳಿನಲ್ಲಿ ರಜನಿ ಮಾಡುವ ಓಡುತಿಟ್ಟಗಳನ್ನು ಕನ್ನಡದಲ್ಲಿ ವಿಶ್ಣು ಮಾಡಿದರೆ, ಕನ್ನಡದ ವಿಶ್ಣು ಓಡುತಿಟ್ಟಗಳನ್ನು ಹೆಚ್ಚಾಗಿ ರಜನಿ ಅಬಿನಯಿಸುತ್ತಿದ್ದರು. ಕನ್ನಡದ ಆಪ್ತಮಿತ್ರ ತಮಿಳಿನ ಚಂದ್ರಮುಕಿಯಾಗಿ ಗೆಲುವು ಕಂಡ ಬಳಿಕ, ಆಪ್ತರಕ್ಶಕ ಓಡುತಿಟ್ಟವನ್ನೂ ಮಾಡುವಂತೆ ಕುದ್ದು ವಿಶ್ಣು ರಜನಿಗೆ ತಿಳಿಸಿದ್ದರಂತೆ. ಆದರೆ ಕೆಲವು ವದಂತಿಗಳು ಮತ್ತು ತನಗಾದ ಕೆಲ ಅನುಬವಗಳು ರಜನಿಯನ್ನು ಈ ಮನವಿಯಿಂದ ದೂರವಿರುವಂತೆ ಮಾಡಿತು.

ಕೊನೆಯ ದಿನಗಳಲ್ಲಿ ವಿಶ್ಣುವಿಗೆ ಆದ್ಯಾತ್ಮದ ಕಡೆಗೆ ಒಲವು ಬೆಳೆದಿತ್ತು. ಬನ್ನಂಜೆ ಗೋವಿಂದಾಚಾರ‍್ಯರ ಹೊತ್ತಗೆಗಳನ್ನು ಓದುವುದನ್ನು ರೂಡಿಸಿಕೊಂಡರು. ಮುಂದಿನ ದಿನಗಳಲ್ಲಿ ಬನ್ನಂಜೆ ಗೋವಿಂದಾಚಾರ‍್ಯರೇ ವಿಶ್ಣುವಿನ ಕಾಯಂ ಗುರುವಾದರು.

35 ವರುಶಗಳ ಓಡುತಿಟ್ಟಗಳ ಬದುಕಿನಲ್ಲಿ ಹಲವು ತರದ ಪಾತ್ರಗಳಿಗೆ ಬಣ್ಣ ಹಚ್ಚಿದ್ದರೂ, ವಿಶ್ಣುವಿಗೆ ‘ಸಾಯಿಬಾಬ’ ಎಂಬ ಪಾತ್ರ ಮಾಡಬೇಕು ಮತ್ತು ‘ಶ್ರೀ ಕ್ರಿಶ್ಣ ಮಕರಂದ’ ಎಂಬ ಚಿತ್ರ ಮಾಡಬೇಕೆಂಬ ಎರಡು ಹೆಬ್ಬಯಕೆಗಳಿದ್ದವು. ಕೊನೆಗೂ ಅವರ ಆಸೆ ಕನಸಾಗಿಯೇ ಉಳಿಯುವಂತಾಯಿತು. ಮುಂದೆ 2009 ಡಿಸೆಂಬರ್ 29ಕ್ಕೆ ಕರುನಾಡಿಗೆ ಬರಸಿಡಿಲಿನಂತೆ ಬಂದಪ್ಪಳಿಸಿದ ವಿಶ್ಣುವರ‍್ದನ್ ಸಾವು, ಇಂದಿಗೂ ಕನ್ನಡಿಗರಿಗೆ ಅತಿದೊಡ್ಡ ನಶ್ಟವಾಗೇ ಉಳಿದಿದೆ. ವಿಶ್ಣು ಸಾವನ್ನು ಅರಗಿಸಿಕೊಳ್ಳಲು ಸಾದ್ಯವೇ ಇಲ್ಲ. ಕೆಲವು ಮಂದಿ ಸಾವಿನ ಬಳಿಕವೂ ಬದುಕುತ್ತಾರೆಂಬ ಮಾತಿದೆ. ನಮ್ಮ ಸಾಹಸಸಿಂಹನೂ ಆ ಗುಂಪಿನಲ್ಲಿ ನಿಲ್ಲುತ್ತಾರೆ. ಅವರು ಇಂದಿಗೂ ನಮ್ಮ ನಡುವೆ ಬದುಕುತ್ತಿದ್ದಾರೆಂಬ ಬಾವನೆ ಅಬಿಮಾನಿಗಳದ್ದು. ಅಶ್ಟರ ಮಟ್ಟಿಗೆ ವಿಶ್ಣು ಜನಮಾನಸದಲ್ಲಿ ನೆಲೆಯೂರಿದ್ದಾರೆ.

(ಚಿತ್ರ ಸೆಲೆ: indya101.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: