ಅಜ್ಜಿ ಹೇಳಿದ ಮೂರು ಮಾತುಗಳು – ಮಕ್ಕಳ ಕತೆ

– ರತೀಶ ರತ್ನಾಕರ.
dp_castle_background_by_beautifprincessbelle-d6p9c0q

{ಈ ಕತೆಯನ್ನು ನನ್ನ ಅಮ್ಮ ನನಗೆ ಹೇಳಿದ್ದು, ಅವರಿಗೆ ನನ್ನ ಅಜ್ಜಿ ಹೇಳಿದ್ದಂತೆ. ಹೀಗೆ ತಲೆಮಾರುಗಳಿಂದ ಬಾಯಿಮಾತಿನ ಮೂಲಕ ದಾಟಿಬಂದ ಕತೆಯನ್ನು ಬರಹಕ್ಕೆ ಇಳಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ.}

ಒಂದಾನೊಂದು ಕಾಲದಲ್ಲಿ, ಒಂದೂರಲ್ಲಿ ಅಜ್ಜಿ ಹಾಗು ಮೊಮ್ಮಗ ವಾಸಮಾಡುತ್ತಿದ್ದರು. ಇನ್ನೇನು ಕೊನೆಯ ದಿನಗಳನ್ನು ಎಣಿಸುತ್ತಿದ್ದ ಅಜ್ಜಿಗೆ ಮೊಮ್ಮಗನದ್ದೇ ಚಿಂತೆ. ಅತ್ತ ಜಾಣನಿಗೆ ಜಾಣನಲ್ಲದ, ಇತ್ತ ದಡ್ಡನಿಗೆ ದಡ್ಡನೂ ಅಲ್ಲದ ಮೊಮ್ಮಗ ತನ್ನ ಮುಂದಿನ ಬಾಳುವೆಯನ್ನು ಹೇಗೆ ನಡೆಸುವನೋ ಎಂದು ಕೊರಗುತ್ತಿದ್ದಳು ಅಜ್ಜಿ. ಮದುವೆಯ ವಯಸ್ಸಿಗೆ ಬಂದಿರುವ ಮೊಮ್ಮಗನನ್ನು ಮದುವೆಯಾಗಲು ಯಾವ ಹೆಣ್ಣುಗಳೂ ಒಪ್ಪುತ್ತಿರಲಿಲ್ಲ. ಹೀಗಿರುವಾಗ, ಒಂದು ದಿನ ಮೊಮ್ಮಗನನ್ನು ಬಳಿ ಕರೆದು –
“ಮಗಾ… ನಾನ್ ತೀರ್ ಹೋದ್ ಮ್ಯಾಗೆ, ನೀನ್ ಬಾಳ್ಮೆ ಮಾಡೋದ್ ಕಶ್ಟ ಅಯ್ತೆ. ನಾನ್ ಹೇಳೋ ಮೂರು ಮಾತನ್ನ ಮರಿದಂಗೆ ಗ್ಯಪ್ತಿ ಇಟ್ಕೋ, ನಿಂಗೆ ಬದುಕೋ ದಾರಿ ಸಿಕ್ತದೆ…”
“ಯಾವ್ ಮೂರು ಮಾತಜ್ಜಿ?” – ಮೊಮ್ಮಗ ಏನು ತಿಳಿಯದಂತೆ ಕೇಳಿದ.
“ದಾರಿಮೇಲೆ ಒಬ್ಬರು ಹೋಗಾಕ್ಕಿಂತ ಇಬ್ಬರು ಹೋಗೋದು ಲೇಸು, ಹಬ್ಬಕ್ ಹೋಗಾಕ್ಕಿಂತ ಮದುವೆಗ್ ಹೋಗೋದ್ ಲೇಸು, ಕೂತು ಕಾಲ ಕಳಿಯಕ್ಕಿಂತ ಕೂಲಿ ಮಾಡೋದ್ ಲೇಸು.” – ಅಜ್ಜಿ ತನ್ನ ಮೂರು ಮಾತನ್ನು ಹೇಳಿದಳು.

ಇದಾದ ಕೆಲವೇ ದಿನಗಳಲ್ಲಿ ಅಜ್ಜಿ ತೀರಿಹೋದಳು. ಅಜ್ಜಿ ತೀರಿಹೋದ ಬಳಿಕ ಆ ಊರಿನಲ್ಲಿ ಏನು ಮಾಡುವುದು ಎಂದು ತಿಳಿಯದೇ, ಆ ಮನೆಯಲ್ಲಿ ಇರಲಾಗದೇ ಮೊಮ್ಮಗನು ಒಂದು ಜೋಳಿಗೆಯನ್ನು ಹಾಕಿಕೊಂಡು ಊರನ್ನು ಬಿಟ್ಟ. ಊರನ್ನು ಬಿಟ್ಟು ದಾರಿಯಲ್ಲಿ ಸಾಗುತ್ತಿದ್ದ ಮೊಮ್ಮಗನಿಗೆ ನೀರಡಿಕೆಯಾಗಿ ಒಂದು ಹೊಳೆಯ ಬದಿ ನೀರನ್ನು ಕುಡಿಯಲು ಬರುತ್ತಾನೆ. ನೀರನ್ನು ಕುಡಿಯುವಾಗ ತಾನು ಹಿಂದೆಂದೋ ಕಂಡಿರದ ದೊಡ್ಡದಾದ ಏಡಿಯನ್ನು ನೋಡುತ್ತಾನೆ. ಆಗ ಅವನಿಗೆ ಅಜ್ಜಿ ಹೇಳಿದ ಮೊದಲ ಮಾತು ನೆನಪಿಗೆ ಬರುತ್ತದೆ. ಒಬ್ಬರು ಹೋಗುವುದಕ್ಕಿಂತ ಇಬ್ಬರು ಹೋಗುವುದು ಲೇಸು, ತಾನೊಬ್ಬನೇ ಹೋಗುವುದಕ್ಕಿಂತ ಏಡಿಯನ್ನು ಜೊತೆ ಮಾಡಿಕೊಂಡು ಹೋಗೋಣ ಎಂದೆಣಿಸಿ, ಆ ಏಡಿಯನ್ನು ಹಿಡುಕೊಂಡು ತನ್ನ ಜೋಳಿಗೆಗೆ ಹಾಕಿಕೊಂಡು ಮುಂದೆ ಹೋಗುತ್ತಾನೆ.

ಹೀಗೆ ಊರಿಂದ ಊರನ್ನು ದಾಟುತ್ತ ದೊಡ್ಡದೊಂದು ಊರನ್ನು ತಲುಪುತ್ತಾನೆ. ಇರುಳಲ್ಲಿ ತಂಗಲು ಆ ಊರಿನಲ್ಲಿದ್ದ ಒಂದು ಮನೆಯವರನ್ನು ಕೇಳಿ ಅಲ್ಲಿಯೇ ತಂಗುತ್ತಾನೆ. ಆತ ತಂಗಲು ಕೇಳಿದ ಮನೆಯಲ್ಲಿ ಒಬ್ಬ ತಾಯಿ ಮತ್ತು ಮಗ ವಾಸಿಸುತ್ತಿದ್ದರು. ಆ ಮನೆಯೊಡತಿಯು ಇವನ ಗೋಳನ್ನು ಕೇಳಿ, ಅವರ ಮನೆಯಲ್ಲೇ ಅಂದು ತಂಗಿರಲು ಬಿಡುತ್ತಾಳೆ.

ಆತ ತಂಗಿದ್ದ ಊರಿನ ದೊರೆಮಗಳು ಕಡುಚೆಲುವೆ, ಅಂಗೈಲಿ ತಿದ್ದಿ ಮುಂಗೈಲಿ ತೀಡಿದಂತಹ ರೂಪದವಳು. ಹಾಲು ಬೆಳದಿಂಗಳಿನಂತೆ ಇದ್ದ ದೊರೆಮಗಳಿಗೆ ಒಂದು ಕಂಟಕವೂ ಇತ್ತು. ಆಕೆಯನ್ನು ಮದುವೆಯಾಗುವವನು ಒಂದೇ ದಿನದಲ್ಲಿ ತೀರಿಹೋಗುತ್ತಿದ್ದನು. ಹೀಗಿರುವಾಗ ದೊರೆಯು ಆ ಊರಿನಲ್ಲಿ ಒಂದು ನಿಯಮವನ್ನು ಮಾಡಿದ್ದನು. ಆ ಊರಿನಲ್ಲಿ ಮದುವೆ ವಯಸ್ಸಿಗೆ ಬಂದಿರುವ ಗಂಡು ಮಕ್ಕಳಲ್ಲಿ ದಿನಕ್ಕೊಬ್ಬರಂತೆ ದೊರೆಯ ಮಗಳನ್ನು ಕಾಯಲು ಹೋಗಬೇಕಿತ್ತು. ದೊರೆಯ ಮಗಳಿಗೆ ಇರುಳೆಲ್ಲಾ ಕಾವಲಿರಬೇಕಿತ್ತು. ಬೆಳಗಾಗುವ ತನಕ ಆತ ಏನಾದರು ಬದುಕಿದರೆ ಅವನಿಗೇ ಮಗಳನ್ನು ಕೊಟ್ಟು ಮದುವೆ ಮಾಡುವುದಾಗಿ ಡಂಗುರ ಹೊಡೆಸಿದ್ದನು. ದೊರೆಮಗಳ ಕಾವಲಿಗೆ ಸರದಿಯಂತೆ ಹುಡುಗರು ಹೋಗಬೇಕಿತ್ತು, ಇದನ್ನು ತಪ್ಪಿದರೆ ದೊಡ್ಡ ದಂಡನೆಯು ದೊರೆಯಿಂದ ಕಾದಿತ್ತು.pretty-indian-princess

ಆದರೆ ವಿದಿನಿಯಮ ಬೇರೆಯೇ ಇತ್ತು. ದೊರೆಮಗಳನ್ನು ಕಾಯಲು ಹೋಗುತ್ತಿದ್ದ ಹುಡುಗರಲ್ಲಿ ಯಾರೂ ಬೆಳಗಾಗುವ ತನಕ ಬದುಕಿರುತ್ತಿರಲಿಲ್ಲ. ದೊರೆಮಗಳ ಕಾವಲಿಗೆ ಕಳಿಸಿ ಹೆತ್ತ ಮಕ್ಕಳನ್ನು ಕಳೆದುಕೊಳ್ಳಬೇಕಲ್ಲವೇ ಎಂದು ಊರಿನವರಲ್ಲಿ ದೊಡ್ಡ ಚಿಂತೆ ಮನೆಮಾಡಿತ್ತು. ಹೀಗಿರುವಾಗ, ದೊರೆಮಗಳ ಕಾವಲಿಗೆ ಮೊಮ್ಮಗನು ತಂಗಿದ್ದ ಮನೆಯ ಹುಡುಗನ ಸರದಿ ಬಂದಿತ್ತು. ಇದನ್ನು ಕೇಳಿ ತಾಯಿಗೆ ಬೆಟ್ಟವೇ ತಲೆಯ ಮೇಲೆ ಬಿದ್ದ ಹಾಗಾಗಿತ್ತು. ತಾನು ಹೆತ್ತ ಮಗನನ್ನು ದೊರೆಮಗಳ ಕಾವಲಿಗೆ ಕಳುಹಿಸಿ ಕಳೆದುಕೊಳ್ಳಬೇಕಲ್ಲ ಎಂಬ ನೋವು ಚುಚ್ಚುತ್ತಿತ್ತು. ಆಗ ಆ ತಾಯಿಗೆ ಒಂದು ಉಪಾಯ ಹೊಳೆದಿತ್ತು. ತನ್ನ ಮಗನನ್ನು ಮುಚ್ಚಿಟ್ಟು, ಮನೆಗೆ ತಂಗಲು ಬಂದಿದ್ದ ಮೊಮ್ಮಗನನ್ನೇ ತನ್ನ ಮಗನೆಂದು ದೊರೆಯಾಳುಗಳಿಗೆ ಸುಳ್ಳನ್ನು ಹೇಳಿ ಅವನನ್ನು ಕಾವಲಿಗೆ ಕಳಿಸುತ್ತಾಳೆ.

ದೊರೆಮಗಳ ಕಾವಲಿನ ಹಿಂದಿನ ಗುಟ್ಟನ್ನು ತಿಳಿಯದ ಮೊಮ್ಮಗನು, ಆ ತಾಯಿಯ ಮಾತನ್ನು ಕೇಳಿ, ದೊರೆಯಾಳುಗಳ ಜೊತೆಗೆ ದೊರೆಮಗಳ ಮನೆಗೆ ಬರುತ್ತಾನೆ. ಆಕೆ ಮಲಗಿರುವಾಗ ಇರುಳೆಲ್ಲಾ ಅವಳ ಕೋಣೆಯಲ್ಲಿ ಕಾವಲನ್ನು ಕಾಯಬೇಕೆಂದು ಆಳುಗಳು ತಿಳಿಸುತ್ತಾರೆ. ಅದರಂತೆ, ಈತ ಕಾವಲು ಕಾಯುತ್ತಾ ಕುಳಿತುಕೊಳ್ಳುತ್ತಾನೆ. ನಟ್ಟಿರುಳ ಹೊತ್ತಿನಲ್ಲಿ ನಿದ್ದೆ ಎಳೆಯುತ್ತದೆ, ಆದರೂ ಮಲಗಬಾರದೆಂದು ಅತ್ತಿತ್ತ ಓಡಾಡುತ್ತ ಕಾಲಕಳೆಯುತ್ತಿರುತ್ತಾನೆ. ಈ ಲೋಕದ ಪರಿವೇ ಇಲ್ಲದಂತೆ ದೊರೆಮಗಳು ನಿದ್ದೆಯನ್ನು ಮಾಡುತ್ತಿರುತ್ತಾಳೆ.

ಅದೇ ಹೊತ್ತಿನಲ್ಲಿ, ದೊರೆಮಗಳ ಮೂಗಿನಿಂದ ಎರೆಡು ಮರಿನಾಗರ ಹಾವುಗಳು ಹೊರಬರುವುದನ್ನು ಮೊಮ್ಮಗನು ನೋಡುತ್ತಾನೆ. ‘ಮರಿನಾಗರ ಕಡಿದರೆ ಉಸಿರು ಅರೆಗಳಿಗೆಯಲಿ ಹಾರುವುದು’ ಎಂಬ ಮಾತು ನೆನಪಾಗಿ ಹೆದರಿಕೆ ಹುಟ್ಟುತ್ತದೆ. ಏನು ಮಾಡಬೇಕೆಂದು ಅರಿಯದೇ ತನ್ನ ಜೋಳಿಗೆಗೆ ಕೈ ಹಾಕಿ ತಡವುತ್ತಾನೆ. ಆಗ ಆತನ ಜೋಳಿಗೆಯಲ್ಲಿ ದಾರಿಯಲ್ಲಿ ಸಿಕ್ಕಿದ್ದ ಏಡಿ ಸಿಗುತ್ತದೆ. ಆ ದೊಡ್ಡ ಏಡಿಯನ್ನು ಜೋಳಿಗೆಯಿಂದ ತೆಗೆದು ಮರಿನಾಗರಗಳ ಕಡೆಗೆ ಬಿಡುತ್ತಾನೆ. ಏಡಿಗೂ ಮರಿಹಾವುಗಳಿಗೂ ಕಾಳಗ ನಡೆಯುತ್ತದೆ. ಏಡಿಯು ತನ್ನ ದೊಡ್ಡ ಕೊಂಬುಗಳಿಂದ ಮರಿನಾಗರಗಳನ್ನು ಹಿಡಿದು ಕತ್ತರಿಸಿ ಸಾಯಿಸಿಬಿಡುತ್ತದೆ. ಹೆದರಿಕೆಯಲ್ಲಿ ಮೊಮ್ಮಗನು ಕೋಣೆಯ ಒಂದು ಮೂಲೆಯಲ್ಲೇ ಕುಳಿತು ಇರುಳನ್ನು ಕಳೆಯುತ್ತಾನೆ.

ಬೆಳಗಾಗುತ್ತದೆ. ಗಾಡನಿದ್ದೆಯಿಂದ ದೊರೆಮಗಳು ಏಳುತ್ತಾಳೆ. ಎದ್ದು ನೋಡಿದರೆ ಅವಳಿಗೆ ಅಚ್ಚರಿ ಕಾದಿತ್ತು. ಮೊತ್ತಮೊದಲ ಬಾರಿಗೆ ಅವಳನ್ನು ಕಾಯಲು ಬಂದವನೊಬ್ಬ ಬದುಕಿ ಮೂಲೆಯಲ್ಲಿ ಕುಳಿತಿರುತ್ತಾನೆ. ಇವಳಿಗೆ ಎಲ್ಲಿಲ್ಲದ ನಲಿವು, ಆತನನ್ನು ಬಳಿಕರೆದು, ಆತನ ಮುಂಗೈಗೆ ಒಂದು ಗುರುತನ್ನು ಮಾಡುತ್ತಾಳೆ. ದೊರೆಗೆ ಸುದ್ದಿಯನ್ನು ಮುಟ್ಟಿಸಲು ಆಕೆಯೇ ಹೊರಡುತ್ತಾಳೆ.

ಇತ್ತ, ಏನಾಗುತ್ತಿದೆ ಎಂದು ಅರಿಯದ ಮೊಮ್ಮಗನು ಹೆದರಿಕೆಯಿಂದಲೇ ಮನೆಗೆ ಹಿಂದಿರುಗುತ್ತಾನೆ. ಕಾವಲಿಗೆ ಹೋಗಿ ಬದುಕಿ ಹಿರುತಿರುಗುತ್ತಿದ್ದ ಮೊಮ್ಮಗನನ್ನು ನೋಡಿ ತಾಯಿಗೆ ಅಚ್ಚರಿಯಾಗುತ್ತದೆ. ಆತ ಮನೆಗೆ ಬಂದ ಕೆಲವೇ ಹೊತ್ತಿನಲ್ಲಿ ದೊರೆಯಾಳುಗಳು ಬಂದು ಆ ತಾಯಿಗೆ ಸುದ್ದಿ ಮುಟ್ಟಿಸುತ್ತಾರೆ. ದೊರೆಮಗಳ ಜೊತೆಗೆ ಆ ತಾಯಿಯ ಮಗನ ಮದುವೆ ಎಂದು ತಿಳಿಸುತ್ತಾರೆ. ಆಗ ಆಕೆ ಮತ್ತೊಂದು ಉಪಾಯ ಮಾಡುತ್ತಾಳೆ. ದಡ್ಡ ಮೊಮ್ಮಗನನ್ನು ಕರೆದು ‘ನೀನ್ನ ಮೇಲೆ ದೊರೆಮಗಳ ದೂರು ಬಂದಿದೆ, ನೀನು ಈ ಊರಿನಲ್ಲಿ ಇದ್ದರೆ ನಿನ್ನ ತಲೆ ಕಡಿಯುತ್ತಾರೆ, ಈಗಲೇ ಈ ಊರುಬಿಟ್ಟು ಕದ್ದು ಓಡಿಹೋಗು’ ಎಂದು ಅವನನ್ನು ಊರುಬಿಟ್ಟು ಓಡಿಸುತ್ತಾಳೆ.

ಆ ತಾಯಿಯು, ತನ್ನ ಮಗನೇ ಕಳೆದ ಇರುಳಿನಲ್ಲಿ ಕಾವಲಿಗೆ ಬಂದಿದ್ದು ಎಂದು ದೊರೆಗೆ ತನ್ನ ಮಗನನ್ನು ತೋರಿಸುತ್ತಾಳೆ. ದೊರೆಗೆ ಎಲ್ಲಿಲ್ಲದ ನಲಿವಾಗಿ, ಆತನೊಡನೆ ತನ್ನ ಮಗಳ ಮದುವೆಯ ಏರ‍್ಪಾಡನ್ನು ಮಾಡುತ್ತಾನೆ. ದೊರೆಮಗಳ ಮದುವೆ ಎಂದರೆ ಸುಮ್ಮನೇನಾ, ಊರಿಗೆ ಊರೇ ಚಪ್ಪರ, ಕಾಲಿಡಲು ಜಾಗವಿರದಶ್ಟು ಮಂದಿ, ರುಚಿ ರುಚಿಯಾದ ಅರಮನೆಯ ಊಟ, ಸಂಗೀತ, ಮನರಂಜನೆ ಹೀಗೆ ಯಾವುದಕ್ಕೂ ಕೊರೆತೆಯಾಗದಂತೆ ಎಲ್ಲವೂ ನಡೆಯುತ್ತಿರುತ್ತದೆ.

ದೊರೆಯ ಊರಿನಲ್ಲಿ ಮದುವೆಯ ಸಿದ್ದತೆಗಳು ನಡೆಯುತ್ತಿದ್ದರೆ ಇತ್ತ ಮೊಮ್ಮಗನು ಹೇಗೋ ತಲೆತಪ್ಪಿಸಿಕೊಂಡು ಊರನ್ನು ಬಿಟ್ಟು ಇನ್ನೊಂದು ಊರಿನತ್ತ ಹೋಗುತ್ತಿದ್ದನು. ಆಗ ಒಂದಶ್ಟು ದಾರಿಹೋಕರು ಎದುರಾಗುತ್ತಾರೆ. ಯಾವುದೋ ಕಡೆಗೆ ಹೋಗುತ್ತಿದ್ದ ಇವನನ್ನು ನಿಲ್ಲಿಸಿ ಮಾತನಾಡಿಸುವರು. “ಪಕ್ಕದ ಊರಿನಲ್ಲಿ ದೊರೆಮಗಳ ಮದುವೆಯಿದೆ, ಹೊಟ್ಟೆ ತುಂಬಿ ಒಡೆದು ಹೋಗುವಶ್ಟು ಊಟ ಸಿಗುತ್ತೆ ಜೊತೆಗೆ ದೊರೆಗಳ ಉಡುಗೊರೆನೂ ಸಿಗಬಹುದು, ನೀನು ಬಾ…” ಎಂದು ಅವನನ್ನು ಕೇಳುತ್ತಾರೆ.

ಆಗ ಮೊಮ್ಮಗನಿಗೆ ಅಜ್ಜಿ ಹೇಳಿದ ಮತ್ತೊಂದು ಮಾತು ನೆನಪಿಗೆ ಬರುವುದು, ‘ಹಬ್ಬಕ್ಕೆ ಹೋಗುವುದಕ್ಕಿಂತ ಮದುವೆಗೆ ಹೋಗುವುದು ಲೇಸು’ ಎಂದು ಬಗೆದು ಅವರೊಡನೆ ಮದುವೆಗೆ ಹೊರಡುತ್ತಾನೆ. ತಾನು ಕದ್ದು ಓಡಿಬಂದ ಊರಿಗೇ ಮರಳಿ ಹೋಗುತ್ತಿದ್ದೇನೆ ಎಂದು ಅರಿಯದೇ ಅವರೊಡನೆ ಹೋಗುತ್ತಾನೆ. ಅವರೆಲ್ಲಾ ಸೇರಿ ದೊರೆಯ ಊರಿಗೆ ಹೋಗುತ್ತಾರೆ. ಮದುವೆ ಸಂಬ್ರಮವನ್ನು ನೋಡಿದ ಮೇಲೆ ಚೆನ್ನಾಗಿ ಊಟಮಾಡೋಣವೆಂದು ಊಟದ ಚಪ್ಪರದ ಕಡೆಗೆ ಹೊರಡುತ್ತಾರೆ.

indian-wedding-amrita-duttaಇತ್ತ, ಮಂಟಪದಲ್ಲಿ ಹುಡುಗ ಹುಡುಗಿಯನ್ನು ಒಟ್ಟಿಗೆ ಕೂರಿಸುವ ಹೊತ್ತು ಹತ್ತಿರ ಬರುತ್ತದೆ. ಸಾಮಾನ್ಯರಾಗಿದ್ದ ತಮಗೆ, ತನ್ನ ಉಪಾಯದಿಂದ ದೊರೆಗಳ ನಂಟಸ್ತಿಕೆ ಸಿಕ್ಕಿದ್ದನ್ನು ನೆನೆದು ಹುಡುಗನ ತಾಯಿಯು ಹಿರಿ ಹಿರಿ ಹಿಗ್ಗುತ್ತಿರುತ್ತಾಳೆ. ಆದರೆ ಅವಳ ನಲಿವು ಹೆಚ್ಚು ಹೊತ್ತು ಉಳಿಯುವುದಿಲ್ಲ. ಮಂಟಪದಲ್ಲಿ ಹುಡುಗನನ್ನು ನೋಡಿದ ದೊರೆಮಗಳು ಈತ ತನ್ನನ್ನು ಕಾಯಲು ಬಂದ ಹುಡುಗನಲ್ಲ ಎಂದು ಕಂಡುಹಿಡಿಯುತ್ತಾಳೆ. ಹುಡುಗನ ಕೈಯನ್ನು ನೋಡಿ ಆತನ ಕೈಯಲ್ಲಿ ಗುರುತನ್ನು ಮಾಡಿರುವುದಾಗಿ ದೊರೆಗೆ ತಿಳಿಸುತ್ತಾಳೆ.

ಕೂಡಲೇ ಹುಡುಗನ ತಾಯಿಯನ್ನು ಹಿಡಿದು ದೊರೆಯು ವಿಚಾರಣೆ ನಡೆಸುತ್ತಾನೆ. ಆಕೆ ತನ್ನ ತಪ್ಪನ್ನು ಒಪ್ಪಿಕೊಂಡು ತಾನು ಮಾಡಿದ್ದ ಉಪಾಯವನ್ನು ದೊರೆಯ ಮುಂದೆ ಹೇಳಿ, ಪೆದ್ದ ಮೊಮ್ಮಗನನ್ನು ಸುಳ್ಳನ್ನು ಹೇಳಿ ಊರಿನಿಂದಾಚೆಗೆ ಕಳಿಸಿದ್ದಾಗಿ ತಿಳಿಸುತ್ತಾಳೆ. ಮಗಳು ಹೇಳಿರುವ ಕೈಗುರುತು ಇರುವ ಹುಡುಗನನ್ನು ಹಿಡಿದು ತರುವಂತೆ ದೊರೆಯು ಆಜ್ನೆ ಹೊರಡಿಸುತ್ತಾನೆ.

ಇತ್ತ ಊಟದ ಚಪ್ಪರದಲ್ಲಿ ಊಟವನ್ನು ಮಾಡಿ ಕೈತೊಳೆಯುತ್ತಿದ್ದ ಮೊಮ್ಮಗನ ಕೈಯಲ್ಲಿರುವ ಗುರುತನ್ನು ದೊರೆಯಾಳೊಬ್ಬ ನೋಡುತ್ತಾನೆ. ಕೊನೆಗೆ ಮೊಮ್ಮಗನನ್ನು ಹಿಡಿದು ದೊರೆಯ ಮುಂದೆ ನಿಲ್ಲಿಸುತ್ತಾರೆ. ಮಗಳು ಅವನನ್ನು ಗುರುತು ಹಿಡಿದು ಇವನೇ ಕಾಯಲು ಬಂದ ಹುಡುಗ ಎಂದು ಹೇಳಿ ಅವನೊಡನೆಯೇ ಮದುವೆಯಾಗುತ್ತಾಳೆ.

ಕತೆ ಇಲ್ಲಿಗೇ ಮುಗಿಯುವುದಿಲ್ಲ. ದೊರೆಮಗಳ ಮದುವೆಯಾಗಿ ಆರಾಮಾಗಿ ಇದ್ದ ಮೊಮ್ಮಗನು ಒಂದು ದಿನ ತನ್ನ ಅರಮನೆಯ ಮಾಳಿಗೆಯಲ್ಲಿ ಕಾಲಕಳೆಯುತ್ತಾ ಇರುತ್ತಾನೆ. ಅರಮನೆಗೆ ಎದುರುಗಡೆಯಲ್ಲಿಯೇ ಆ ನಾಡಿನ ಮಂತ್ರಿಯ ಗದ್ದೆಗಳಿದ್ದವು. ಆ ಗದ್ದೆಯಲ್ಲಿ ಕಟಾವಿನ ಕೆಲಸ ನಡೆಯುತ್ತಿತ್ತು. ಮಂತ್ರಿಯೇ ನಿಂತು ಕೆಲಸ ಮಾಡಿಸುತ್ತಿದ್ದ. ಆ ಮಂತ್ರಿಗೋ ದೊರೆಯ ಮೇಲೆ ಇನ್ನಿಲ್ಲದ ಹೊಟ್ಟೆಕಿಚ್ಚು. ದೊರೆಗಿರುವ ಒಬ್ಬಳೇ ಮಗಳನ್ನು ಯಾರೂ ಮದುವೆ ಆಗದಿದ್ದರೆ ದೊರೆಯ ಆಸ್ತಿಯನ್ನೆಲ್ಲಾ ತಾನೇ ಹೊಡೆಯಬೇಕು ಎಂದು ಕೆಟ್ಟ ಲೆಕ್ಕಾಚಾರ ಕೂಡ ಹಾಕಿಕೊಂಡಿದ್ದ. ಆದರೆ ಮೊಮ್ಮಗನು ಬಂದು ದೊರೆಮಗಳ ಮದುವೆ ಆಗಿ ಅವನ ಲೆಕ್ಕಾಚಾರವನ್ನೆಲ್ಲ ತಲೆಕೆಳಗೆ ಮಾಡಿದ್ದ. ಆ ಹೊಟ್ಟೆಕಿಚ್ಚಿನಲ್ಲೇ ಮಂತ್ರಿ ಕುದಿಯುತ್ತಿದ್ದ.

ಮಂತ್ರಿಯ ಈ ಹಿನ್ನಲೆಯನ್ನು ತಿಳಿಯದ ಮೊಮ್ಮಗನು ಅರಮನೆಯ ಮಾಳಿಗೆಯಿಂದ ಗದ್ದೆ ಕುಯ್ಲನ್ನು ಕಂಡು, ಅಜ್ಜಿಯ ಮೂರನೇ ಮಾತನ್ನು ನೆನಪಿಸಿಕೊಂಡ. ‘ಕೂತು ಕಾಲಕಳೆಯುವ ಬದಲು ಕೂಲಿ ಮಾಡುವುದು ಲೇಸು’ ಎಂದು ಸೀದಾ ಮಂತ್ರಿಯ ಗದ್ದೆಯ ಕಡೆಗೆ ಹೋಗಿ, ಕೂಲಿ ಕೆಲಸ ಕೊಡುವಂತೆ ಮಂತ್ರಿಯನ್ನು ಕೇಳಿ ಕೆಲಸ ಶುರುಮಾಡಿಕೊಂಡ. ದೊರೆಯ ಅಳಿಯನನ್ನು ತನ್ನ ಗದ್ದೆಯಲ್ಲಿ ಕೂಲಿ ಮಾಡಿಸಿ ದೊರೆಯನ್ನು ಹೀಗೆಳೆಯಬೇಕು ಎಂದು ಮಂತ್ರಿಯು ಬಗೆದು ಕೆಲಸಕೊಟ್ಟ. ಅದೇ ಹೊತ್ತಿಗೆ ಅರಮನೆಯ ಮಾಳಿಗೆಯ ಮೇಲೆ ದೊರೆಯು ಕಾಲಕಳೆಯಲು ಬರುತ್ತಾನೆ. ಅರಮನೆಯ ಎದುರಿನ ಗದ್ದೆಯಲ್ಲಿ ತನ್ನ ಅಳಿಯನು ಕೆಲಸ ಮಾಡುವುದನ್ನು ಕಂಡು, ಅವನನ್ನು ಕರೆದು ತರುವಂತೆ ಆಳುಗಳಿಗೆ ಹೇಳಿ ದಂಡಿಗೆಯನ್ನು ಕಳಿಸುತ್ತಾನೆ.

tumblr_lp6zvkGKeD1qjkvvfಅರಮನೆ ಕಡೆಯಿಂದ ದಂಡಿಗೆ ಬರುತ್ತಿರುವುದನ್ನು ನೋಡಿ ಮಂತ್ರಿಯು ಮೊಮ್ಮಗನ ಬಳಿ ಮಾತಿಗಿಳಿಯುತ್ತಾನೆ.-
“ನೋಡು, ನನ್ನನ್ನು ಕರೆತರಲೆಂದು ದೊರೆಯು ದಂಡಿಗೆಯನ್ನು ಕಳಿಸಿದ್ದಾರೆ” ಎಂದು ಮಂತ್ರಿಯು ಕೊಬ್ಬಿನಿಂದ ಹೇಳುತ್ತಾನೆ.
“ನಿಮ್ಗಲ್ಲ ಅನ್ಸುತ್ತೆ, ದೊರೆಮಾವ ನನಗೆ ಅಂತ ದಂಡಿಗೆ ಕಳ್ಸೀರ್ ಬೇಕು” ಮೊಮ್ಮಗನು ನಯದಿಂದ ಮರುನುಡಿಯುತ್ತಾನೆ.
“ಹಂಗಾದ್ರೆ, ನೋಡೇ ಬಿಡೋಣ. ಒಂದು ಪಂತ ಕಟ್ಟೋಣ. ಆ ದಂಡಿಗೆ ನನಗ್ ಬಂದಿದ್ರೆ ನಿನ್ನ ಆಸ್ತಿನಾ ನನಗ್ ಕೊಡಬೇಕು. ಒಂದು ವೇಳೆ, ಆ ದಂಡಿಗೆ ನಿನಗ್ ಬಂದಿದ್ರೆ ನನ್ನ ಆಸ್ತಿನಾ ನಿನಗ್ ಕೊಡ್ತೀನಿ” – ದೊರೆಯ ಆಸ್ತಿಯನ್ನು ಕಬಳಿಸುವ ಹುನ್ನಾರದಿಂದ ಮಂತ್ರಿಯು ಈ ಪಂತವನ್ನು ಮುಂದಿಡುತ್ತಾನೆ.
“ಸರಿ, ನೋಡೇ ಬಿಡೋಣ” – ತಾನು ಸೋತರೆ ಏನಾಗಬಹುದು ಎಂಬ ಅರಿವೇ ಇಲ್ಲದೆ ಪಂತ ಕಟ್ಟುತ್ತಾನೆ. ಇವರಿಬ್ಬರ ಪಂತಕ್ಕೆ ಗದ್ದೆಯಲ್ಲಿ ಕೆಲಸ ಮಾಡುವವರೆಲ್ಲರೂ ಸಾಕ್ಶಿಯಾಗುತ್ತಾರೆ.

ದೊರೆಯು ಕಳಿಸಿದ ದಂಡಿಗೆಯು ಬಂದು ಮೊಮ್ಮಗನ ಬಳಿ ನಿಲ್ಲುತ್ತದೆ. ಮಂತ್ರಿಯು ಸೋಲುತ್ತಾನೆ. ಇದ್ದ ಆಸ್ತಿಯೆಲ್ಲಾ ಮೊಮ್ಮಗನಿಗೆ ಕೊಟ್ಟು, ಕೆಟ್ಟ ಮಂತ್ರಿಯು ಊರನ್ನು ಬಿಡುತ್ತಾನೆ. ಮೊಮ್ಮಗನು, ಮುಂದೆ ತನ್ನ ಹೆಂಡತಿಯೊಡನೆ ಚೆನ್ನಾಗಿ ಬದುಕು ನಡೆಸುತ್ತಾನೆ. ಅಜ್ಜಿ ಹೇಳಿಕೊಟ್ಟ ಮೂರು ಮಾತನ್ನು ನೆನಪಿನಲ್ಲಿ ಇಟ್ಟುಕೊಂಡು ಕಾಲಕ್ಕೆ ತಕ್ಕಂತೆ ಬಳಸಿ ಬದುಕಿಗೊಂದು ದಾರಿಯನ್ನು ಮಾಡಿಕೊಳ್ಳುತ್ತಾನೆ.

(ಚಿತ್ರ ಸೆಲೆ: beautifullprincess, ebog.com, fineartamerica.com, fatslim)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.