ಬಿಸಿಲಿನಿಂದಾದ ಕಂದು ಬಣ್ಣಕ್ಕೆ ಮನೆಮದ್ದು
ನಮ್ಮ ಎಂದಿನ ಕೆಲಸಗಳಿಗೆ ಹೊರಗೆ ತಿರುಗಾಡುವುದು ಇದ್ದೇ ಇರುತ್ತದೆ. ಈ ಹೊರಗಿನ ತಿರುಗಾಟದಲ್ಲಿ ನಮ್ಮ ಮಯ್ಯಿಗೆ ಆಗಾಗ ಗಾಳಿ ಮತ್ತು ಬಿಸಿಲಿನಿಂದ ಹಾನಿಗಳಾಗುತ್ತಿರುತ್ತವೆ. ಇಂತಹ ಹಾನಿಗಳಲ್ಲಿ ಬಿಸಿಲಿನಿಂದ ನಮ್ಮ ಚರ‍್ಮವು ಕಂದು ಬಣ್ಣಕ್ಕೆ ತಿರುಗುವುದು ಕೂಡ ಒಂದು. ಬಿಸಿಲಿನಿಂದ ಚರ‍್ಮವು ಕಂದಾಗುವುದಕ್ಕೆ ಇರುವ ಕಾರಣವನ್ನು ಚಿಕ್ಕದಾಗಿ ತಿಳಿಯೋಣ; ನಮ್ಮ ಚರ‍್ಮವು ಬಿಸಿಲಿಗೆ ಹೆಚ್ಚಾಗಿ ತೆರೆದುಕೊಂಡರೆ ಚರ‍್ಮದ ಒಳಬಾಗವು ಹಾನಿಯಾಗುವ ಸಾದ್ಯತೆ ಹೆಚ್ಚಿರುತ್ತದೆ. ಚರ‍್ಮಕ್ಕೆ ಆಗುವ ಈ ಹಾನಿಯನ್ನು ತಡೆಯಲು ನಮ್ಮ ಮೈ ಮೆಲನಿನ್(melanin) ಅನ್ನು ಉತ್ಪಾದಿಸುತ್ತದೆ. ಹೀಗೆ ಬಿಸಿಲಿನಿಂದ ಕಾಪಾಡಿಕೊಳ್ಳಲು ಚರ‍್ಮವು ಮೆಲನಿನ್ ಅನ್ನು ಹೆಚ್ಚಾಗಿ ಉತ್ಪಾದಿಸುವುದರಿಂದ ಮೈ ಚರ‍್ಮ ಕಂದು ಬಣ್ಣಕ್ಕೆ (Tanning) ತಿರುಗುತ್ತದೆ.
ಹೀಗೆ ಆಗುವ ಕಂದು ಬಣ್ಣವನ್ನು ಹೋಗಲಾಡಿಸಿ ನಮ್ಮ ಮೈ ಚರ‍್ಮದ ಕಾಂತಿಯನ್ನು ಕಾಪಾಡಿಕೊಳ್ಳುವುದು ದೊಡ್ಡ ಕೆಲಸವೇ ಆಗಿರುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವಾರು ಕ್ರೀಮುಗಳು ಸಿಗುತ್ತಿವೆ. ಆದರೆ ನಾವು ಮನೆಯಲ್ಲಿಯೇ ಕೆಲವು ಮನೆಮದ್ದುಗಳನ್ನು ಮಾಡಿಕೊಂಡು ಕಂದು ಬಣ್ಣವನ್ನು ಕಡಿಮೆ ಮಾಡಿಕೊಳ್ಳಬಹುದು.
ನನಗೆ ತಿಳಿದಿರುವ ಕೆಲವು ಮನೆಮದ್ದುಗಳ ಬಗ್ಗೆ ಇಲ್ಲಿ ತಿಳಿಸ ಬಯಸುತ್ತೇನೆ.
ಈ ಕೆಳಗೆ ನೀಡಿರುವ ಯಾವುದಾದರು ಮಿಶ್ರಣವನ್ನು ಮಾಡಿಕೊಂಡು ಕಂದಾಗಿರುವ ಜಾಗಕ್ಕೆ ಹಚ್ಚಿಕೊಳ್ಳಬೇಕು. ಹಚ್ಚಿದ ಮಿಶ್ರಣವು ಒಣಗುವ ತನಕ ಬಿಟ್ಟು ಬಳಿಕ ತಣ್ಣೀರಿನಲ್ಲಿ ತೊಳೆಯಬೇಕು. ಹೀಗೆ ಹಲವು ದಿನಗಳ ಕಾಲ ಮಾಡಿದರೆ ಬಿಸಿಲಿನಿಂದಾದ ಕಂದು ಚರ‍್ಮವನ್ನು ಕಡಿಮೆ ಮಾಡಿಕೊಳ್ಳಬಹುದು.
1. ಆಲುಗಡ್ಡೆಯನ್ನು ತುರಿದು ಇದರ ರಸವನ್ನು ತೆಗೆದು, ಗೋದಿಹಿಟ್ಟು, ಜೇನುತುಪ್ಪ, ಹಾಲಿನ ಕೆನೆ, ಮೊಸರು ಮತ್ತು ಅರಿಸಿನದ ಜೊತೆ ಕಲೆಸಿಕೊಂಡು ಮಿಶ್ರಣವನ್ನು ಮಾಡಿ ಹಚ್ಚಿಕೊಳ್ಳಬಹುದು.
2. ಹಣ್ಣಾಗಿರುವ ಪಪ್ಪಾಯವನ್ನು ಅರ‍್ದ ಬಟ್ಟಲು ತೆಗೆದುಕೊಂಡು, ಅದನ್ನು ಚೆನ್ನಾಗಿ ಕಲಸಿ ಅದರ ಜೊತೆಗೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿದ ಮಿಶ್ರಣ ಬಳಸಬಹುದು.
3. ಬಾದಾಮಿಯನ್ನು ಒಂದು ರಾತ್ರಿ ನೆನಸಿ ಅದನ್ನು ಬೆಳಗ್ಗೆ ರುಬ್ಬಿಕೊಂಡು, ಅದರ ಜೊತೆಗೆ ಸರಿಪ್ರಮಾಣದಲ್ಲಿ ಹಾಲಿನ ಕೆನೆಯನ್ನು ಬೆರೆಸಿ ಬಳಸಬಹುದು.
4. ದಿನನಿತ್ಯ ಎಳನೀರನ್ನು ಮುಕ ಮತ್ತು ಕಯ್ಯಿಗೆ ಹಚ್ಚಿಕೊಂಡು ಬಂದರೆ ಚರ‍್ಮದ ಕಂದು ಬಣ್ಣವು ಕಡಿಮೆಯಾಗುವುದು ಮತ್ತು ಚರ‍್ಮವು ಮ್ರುದು ಆಗುವುದು.
5. ಎರಡು ಚಮಚ ಹಸಿ ಹಾಲನ್ನು ತೆಗೆದು ಕೊಂಡು ಅದಕ್ಕೆ ಒಂದು ಚಿಟಿಕೆ ಅರಿಶಿನವನ್ನು ಮತ್ತು ಸ್ವಲ್ಪ ನಿಂಬೆ ಹಣ್ಣಿನ ರಸವನ್ನು
ಬೆರೆಸಿ ಕಂದಾಗಿರುವ ಬಾಗಕ್ಕೆ ಹಚ್ಚಬೇಕು. ಹಚ್ಚಿದ ಮಿಶ್ರಣ ಆರಿದ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳುವುದರಿಂದ ಮುಕ ಕಾಂತಿಯುತಗೊಳ್ಳುತ್ತದೆ.
6. ಓಟ್ಸ್(oats) ಮತ್ತು ಮಜ್ಜಿಗೆಯ ಮಿಶ್ರಣವನ್ನು ಮಾಡಿಕೊಂಡು ಇದನ್ನು ಕಂದಾಗಿರುವ ಬಾಗಕ್ಕೆ ಉಜ್ಜಿ ಕೊಂಡು ಬಂದರೆ ಕ್ರಮೇಣವಾಗಿ ಕಂದು ಬಣ್ಣವು ಕಡಿಮೆಯಾಗುವುದು, ಮತ್ತು ಮಜ್ಜಿಗೆಯಿಂದ ಚರ‍್ಮ ಮ್ರುದುವಾಗುವುದು.
7. ಮೊಟ್ಟೆಯ ಬಿಳಿ ಲೋಳೆ ಮತ್ತು ನಿಂಬೆ ಹಣ್ಣಿನ ರಸವನ್ನು ಹಚ್ಚಿಕೊಂಡು ಹತ್ತು ಇಲ್ಲವೇ ಹದಿನೈದು ನಿಮಿಶಗಳ ಬಳಿಕ ಮುಕವನ್ನು ತೊಳೆಯಬೇಕು.
8. ಎರಡು ಚಮಚ ಹುಳಿಟೊಮೊಟೊ ಹಣ್ಣಿನ ರಸ, ಒಂದು ಚಮಚ ಮೊಸರು ಮತ್ತು ಒಂದು ಚಮಚ ನಿಂಬೆಹಣ್ಣಿನ ರಸವನ್ನು ತೆಗೆದು ಮಿಶ್ರಣವನ್ನು ಮಾಡಿಕೊಂಡು ಬಳಸಬಹುದು.
9. ಮುಲ್ತಾನಿ ಮಿಟ್ಟಿ ಮತ್ತು ಲೋಳೆ ರಸವನ್ನು ಮಿಶ್ರಣ ಮಾಡಿ ಕಂದಾಗಿರುವ ಜಾಗಕ್ಕೆ ಹಚ್ಚಿಕೊಂಡು, ಅದನ್ನು ಸ್ವಲ್ಪ ಒಣಗುವ ತನಕ ಬಿಟ್ಟು ಬಳಿಕ ಮುಕವನ್ನು ತಣ್ಣೀರಿನಲ್ಲಿ ತೊಳೆದುಕೊಳ್ಳಬೇಕು. ಇದರಿಂದ ಚರ‍್ಮವು ತಿಳಿಯಾಗುತ್ತದೆ.
10. ಅಕ್ಕಿಹಿಟ್ಟು, ಮೊಸರು ಮತ್ತು 3 ಇಲ್ಲವೇ 4 ಹನಿಗಳ ನಿಂಬೆಹಣ್ಣಿನ ರಸವನ್ನು ಬೆರೆಸಿ ಮಿಶ್ರಣವನ್ನು ಬಳಸಬಹುದು.
(ಚಿತ್ರ ಸೆಲೆ: lazureclinique.com)
ಇತ್ತೀಚಿನ ಅನಿಸಿಕೆಗಳು