ಕೊಡಚಾದ್ರಿಯಲ್ಲಿ ಮೊದಲ ಕಾಲ್ನಡಿಗೆ

ಹರ‍್ಶಿತ್ ಮಂಜುನಾತ್.

Kodachadari
ನಾವು ಮೊದಲ ವರುಶದ ಬಿಣಿಗೆಯರಿಮೆಯ ಕಲಿಕೆ ನಡೆಸುತ್ತಿದ್ದ ಹೊತ್ತದು. ನನ್ನ ಗೆಳೆಯರಲ್ಲಿ ಕೆಲವರು ಬಯಲುಸೀಮೆಯ ಕಡೆಯವರು. ಅವರಿಗೆ ಕಾಡುಗಳಲ್ಲಿ ಕಾಲ್ನಡಿಗೆಯ ತಿರುಗಾಟವೆಂದರೆ ಬಲು ಇಶ್ಟ. ಅದಾಗಲೇ ಕಾಲ್ನಡಿಗೆಯ ತಿರುಗಾಟದ ವಿಚಾರದಲ್ಲಿ ಬಗೆ ಬಗೆಯ ಸುದ್ದಿಯಾಗುತ್ತಿದ್ದ ಹೊತ್ತದು. ಆದರೆ ನನ್ನ ಗೆಳೆಯರಿಗೆ ಅದೇನೋ ಹುಚ್ಚು ಸಾಹಸ ಮಾಡುವ ಹಂಬಲ. ಹೀಗಿರುವಾಗ ನಮ್ಮನ್ನೆಲ್ಲಾ ಕೂಡಿಕೊಂಡು ಒಮ್ಮೆ ಕಾಲ್ನಡಿಗೆಯ ತಿರುಗಾಟಕ್ಕೆ (trek) ಹೋಗುವ ಏರ‍್ಪಾಟು ಮಾಡಲಾಯಿತು. ಆದರೆ ಎಳವೆಯ ಬಹಳಶ್ಟು ಬಾಗ ಕಾಡಿನ ಸುತ್ತಮುತ್ತವೇ ಕಳೆದಿದ್ದ ನನಗೆ ಈ ತಿರುಗಾಟ ಅಶ್ಟೊಂದು ಇಶ್ಟವಿರಲಿಲ್ಲ. ಆದರೂ ಗೆಳೆಯರ ಒತ್ತಾಯಕ್ಕೆ ಒಪ್ಪಿಕೊಂಡೆ. ಏಕೆಂದರೆ ನಾವದೆಶ್ಟೇ ಕಾಡು ನೋಡಿದರೂ, ಗೆಳೆಯರನ್ನು ಕೂಡಿಕೊಂಡು ಹೋಗುವಾಗ ಸಿಗುವ ನಲಿವೆ ಬೇರೆ.ಇದು ನಮಗೆಲ್ಲರಿಗೂ ಮೊದಲ ಕಾಲ್ನಡಿಗೆಯ ತಿರುಗಾಟ. ಹಾಗಾಗಿ ನಮ್ಮಲ್ಲಿ ಯಾರಿಗೂ ಕಾಲ್ನಡಿಗೆ ಕುರಿತ ಪೂರ‍್ಣ ಮಾಹಿತಿ ಇರಲಿಲ್ಲ. ಹಾಗಾಗಿ ನಮ್ಮಲ್ಲಿ ಒಬ್ಬಬ್ಬರೇ ನಮಗೆ ಗೊತ್ತಿರುವ ಜಾಗಗಳನ್ನು ಹೇಳುತ್ತಾ ಹೋದೆವು. ಕೊನೆಗೆ ಕಾಲ್ನಡಿಗೆಯ ತಿರುಗಾಟಕ್ಕೆ ಕೊಡಚಾದ್ರಿಯನ್ನು ಆಯ್ದುಕೊಂಡೆವು. ಏಕೆಂದರೆ ಕೊಡಚಾದ್ರಿಯಿಂದ ಕೆಲದೂರದಲ್ಲಿ ಕೊಲ್ಲೂರು ಮೂಕಾಂಬಿಕ ಗುಡಿಯಿದ್ದು, ಉಳಿದುಕೊಳ್ಳಲು ಒಳ್ಳೆಯ ಏರ‍್ಪಾಟಿರುವುದು ನನಗೆ ಗೊತ್ತಿತ್ತು. ಹಾಗಾಗಿ ಡಿಸೆಂಬರ್ 13, 2009ರಂದು ನಾವು ಒಟ್ಟು 12 ಮಂದಿ ಕೂಡಿಕೊಂಡು ಹೊರಟ್ಟೆವು. ಚಿಕ್ಕಮಗಳೂರಿನಿಂದ ಶಿವಮೊಗ್ಗ, ಹೊಸನಗರ ದಾರಿಯಾಗಿ ಸಂಜೆ ಸುಮಾರು ನಾಲ್ಕರ ಹೊತ್ತಿಗೆ ಕೊಲ್ಲೂರು ತಲುಪಿ, ಅಲ್ಲೇ ಉಳಿದುಕೊಳ್ಳುವ ಏರ‍್ಪಾಟು ಮಾಡಿಕೊಂಡೆವು.

ಕೊಡಚಾದ್ರಿ:

ಕೊಡಚಾದ್ರಿ ಬೆಟ್ಟ ಸಾಲುಗಳು ಶಿವಮೊಗ್ಗ ಜಿಲ್ಲೆಗೆ ಸೇರಿದ ಪಡುವಣ ಬೆಟ್ಟಗಳ ಸಾಲಿನಲ್ಲಿ ಬರುತ್ತದೆ ಮತ್ತು ಸಮುದ್ರ ಮಟ್ಟದಿಂದ ಸುಮಾರು 1343 ಮೀ ಎತ್ತರದಲ್ಲಿದೆ. ಕೊಡಚಾದ್ರಿ ಬೆಟ್ಟವು ಹೆಸರುವಾಸಿ ಪ್ರವಾಸಿ ಜಾಗವಾದ ಕೊಲ್ಲೂರು ಮೂಕಾಂಬಿಕ ಗುಡಿಗೆ ತುಂಬಾ ಹತ್ತಿರದಲ್ಲಿದೆ. ಆದರಿಂದ ಬಕ್ತರಿಗೆ, ಪರಿಸರ ಪ್ರಿಯರಿಗೆ ಮತ್ತು ಕಾಲ್ನಡಿಗೆಯ ತಿರುಗಾಟ ಮಾಡುವವರಿಗೆ ಹೇಳಿ ಮಾಡಿಸಿದ ಜಾಗ. ಕೊಡಚಾದ್ರಿ ಬೆಟ್ಟ ಸಾಲುಗಳು ಮೂಕಾಂಬಿಕ ಕಾಡುಜೀವಿ ಅಬಯಾರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಕೊಡಚಾದ್ರಿ ಬೆಟ್ಟದ ಮೇಲೆ ಸರ‍್ವಜ್ನ ಪೀಟವೆಂಬ ಒಂದು ಸಣ್ಣ ದೇವಾಲಯವಿದ್ದು, ಈ ಜಾಗದಲ್ಲಿ ಶ್ರೀ ಶಂಕರಾಚಾರ‍್ಯರು ತಪಸ್ಸು ಮಾಡಿದ್ದರು ಎಂಬ ಹಿನ್ನಡವಳಿ ಇದೆ. ಇಲ್ಲಿಂದ ಸುಮಾರು 2 ಕಿ.ಮೀ ದೂರದಲ್ಲಿ ಶ್ರೀ ಮೂಕಾಂಬಿಕ ಗುಡಿಯಿದೆ. ಸರ‍್ವಜ್ನ ಪೀಟದಿಂದ ಮುಂದಕ್ಕೆ ಕಡಿದಾದ ಬೆಟ್ಟವನ್ನು ಇಳಿದರೆ, ಸೌಪರ‍್ಣಿಕ ನದಿಯು ಹುಟ್ಟುವ ಚಿತ್ರಮೂಲ ಎಂಬ ಜಾಗ ತಲುಪಬಹುದು. ಈ ಜಾಗವು ಹಲವು ಬಗೆಯ ಸಸ್ಯಗಳಿಗೆ ಹೆಸರುವಾಸಿಯಾಗಿದೆ.

ಕಾಲ್ನಡಿಗೆಯ ತಿರುಗಾಟ:

ಕೊಲ್ಲೂರಿನಲ್ಲಿ ರಾತ್ರಿ ಕಳೆದಿದ್ದ ನಾವು, ಮುಂಜಾನೆ ಬೇಗನೆ ಎದ್ದು ಕಾಲ್ನಡಿಗೆಗೆ ಹೋಗಲು ನಿರ‍್ದರಿಸಿದೆವು. ಅದರೆ ಅಲ್ಲಿನ ಚಳಿಗೆ ಮುದುರಿಕೊಂಡು ಮಲಗಿದ್ದ ನಾವು ಹೊತ್ತು 9 ಆದರೂ ಹಾಸಿಗೆಯಿಂದ ಮೇಲೇಳಲಿಲ್ಲ. ಅಶ್ಟರಲ್ಲಿ ಹೊರಗಿನಿಂದ ಬಾಗಿಲು ಬಡಿದ ಸದ್ದು ಕೇಳಿಸಿತು. ನಮ್ಮಲ್ಲೊಬ್ಬ ಎದ್ದು ಬಾಗಿಲು ತೆರೆದ. ನೋಡಿದರೆ, ಅವನು ಚಾರಣಕ್ಕೆ ಕರೆದುಕೊಂಡು ಹೋಗಲು ನಾವು ಗೊತ್ತು ಮಾಡಿದ್ದ ವ್ಯಕ್ತಿ. “ಏನ್ರಪ್ಪ? ಮುಂಜಾನೆ 5.00ಕ್ಕೆ ಎದ್ದು ಹೋಗೋಣ ಅಂತ ಹೇಳಿ, ಹೊತ್ತು 9 ಆದ್ರು ಮಲ್ಗಿದಿರಲ್ಲ. ನಾವು 5 ಗಂಟೆಯಿಂದ ಬಾಗಿಲ್ ಬಡಿತಾ ಇದೀನಿ. ಯಾರು ತೆಗಿತಾನೆ ಇಲ್ವಲ್ಲ” ಅಂದ. ಅಶ್ಟಕ್ಕೂ ಆತ ಬಾಗಿಲು ಬಡಿದ ಸದ್ದು ನಮಗೂ ಕೇಳಿಸಿತ್ತು. ಆದ್ರೆ ಮೇಲೆ ಏಳೋಕೆ ಚಳಿ ಬಿಡ್ಬೇಕಲ್ಲ. ಕೊನೆಗೆ ಹೇಗೋ ಮೇಲೆದ್ದು, ಸ್ವಲ್ಪ ಇಡ್ಲಿ ಚಟ್ನಿ ಹೊಟ್ಟೆಗೆ ಹಾಕಿಕೊಂಡು, ಕಾಲ್ನಡಿಗೆಯ ತಿರುಗಾಟಕ್ಕೆ ರಾತ್ರಿಯೇ ತಯಾರಿಸಿಟ್ಟಿದ್ದ ವಸ್ತುಗಳನ್ನೆಲ್ಲಾ ಹಿಡಿದುಕೊಂಡು ಮರಕುಟಕದಿಂದ ನಮ್ಮ ಕಾಲ್ನಡಿಗೆಯ ತಿರುಗಾಟ ಶುರುವಾಯಿತು. ಸ್ವಲ್ಪ ದೂರ ಸಾಗುವಾಗ ದಾರಿಯಲ್ಲಿ ಎಮ್ಮೆಹೊಂಡ ಮೊದಲ ಹಂತದ ಕಲಿಕೆಮನೆ ಸಿಕ್ಕಿತು. ಅಲ್ಲಿಂದ ಮುಂದೆ 4-5 ಮನೆಗಳಿರುವ ಹಿದ್ಲುಮನೆ ಎಂಬ ಚಿಕ್ಕ ಹಳ್ಳಿಯಿದೆ. ಬತ್ತ, ಗೋದಿ, ಕಬ್ಬು ಅಡಿಕೆ, ಬಾಳೆ ತೋಟಗಳೇ ಅಲ್ಲಿಯ ಮಂದಿಯ ಜೀವನಾದಾರ. ಅಲ್ಲೇ ಹತ್ತಿರದಲ್ಲಿ ಬಂಡೆಗಳ ನಡುವೆ ದುಮ್ಮಿಕ್ಕಿ ಬರುವ ಜಲಪಾತ ಒಂದು ಎದುರಾಯಿತು. ನಿಜಕ್ಕೂ ನಮ್ಮ ನಿಜವಾದ ಕಾಲ್ನಡಿಗೆಯ ತಿರುಗಾಟ ಶುರುವಾದದ್ದೆ ಅಲ್ಲಿಂದ.

ಕೆಸರು ಮಣ್ಣಿನ ದಾರಿಯಲ್ಲಿ ಸಾಗುತ್ತ, ಪಾಚಿ ಕಟ್ಟಿದ ಮರದ ಕೊಂಬೆಗಳನ್ನು ಆದರಿಸುತ್ತ ನಮ್ಮ ಕಾಲ್ನಡಿಗೆ ಮುಂದುವರೆಯಿತು . ಅಲ್ಲೇ ಹುಲ್ಲುಗಾವಲು ದಾಟಿ ಕಾಡಿನ ದಾರಿ ಶುರು. ಅವೆಲ್ಲ ದಾಟಿ ಮುಂದೆ ಸಾಗಿ ನಡೆದ ಕೂಡಲೇ, ದಾರಿ ಮದ್ಯದಲ್ಲಿ ಮತ್ತೊಂದು ನಯನ ಮನೋಹರವಾಗಿ ಬೀಳುವ ಜಲಪಾತ ಸಿಕ್ಕಿತು. ನೀರನ್ನು ನೋಡಿದೊಡನೆಯೆ, ರಬಸವಾಗಿ ಬೀಳುತಿದ್ದ ನೀರಿನಲ್ಲಿ ಆಡಲಿಳಿದೆವು. ಅಶ್ಟು ದೂರದಿಂದ ನಡೆದು ಆಯಾಸಗೊಂಡಿದ್ದ ನಮಗೆ, ಇದ್ದ ಅಲ್ಪ ಸ್ವಲ್ಪ ಆಯಾಸವೂ ಮಾಯವಾಗಿ ಮುಂದಿನ ಕಾಲ್ನಡಿಗೆಗೆ ಸಹಾಯಕವಾಯಿತು. ಮುಂದೆ ಆ ಜಲಪಾತ ದಾಟಿ ಬೆಟ್ಟದ ದಾರಿಯಲ್ಲಿ ಹತಿಕೊಂಡು ಮೇಲೇರಿ ಸುಮಾರು ಮದ್ಯಾಹ್ನ 2 ರ ಹೊತ್ತಿಗೆ ಒಂದು ಬೆಟ್ಟದ ಅಂಚಿಗೆ ಸೇರಿಕೊಂಡೆವು. ಮೊದಲೇ ಕಟ್ಟಿಕೊಂಡು ಬಂದಿದ್ದ ಊಟವನ್ನು, ಅಲ್ಲೇ ಎಲ್ಲರೂ ಹಂಚಿಕೊಂಡು, ತುಸು ಹೊತ್ತು ವಿಶ್ರಮಿಸುತ್ತ ಕುಳಿತೆವು.

ಕೊಡಚಾದ್ರಿ ಬೆಟ್ಟದ ಮಂಜು ಮುಸುಕಿದ ಮೋಡಗಳ ಜೊತೆಗೆ, ತಂಪಾಗಿ ಬೀಸುವ ಗಾಳಿಯ ನಡುವೆ ನಮ್ಮ ಕಾಲ್ನಡಿಗೆ ಕೊನೆಯ ಹಂತ ತಲುಪಿತ್ತು. ಬಂದ ದಾರಿಯಲ್ಲೇ ಮತ್ತೆ ತಿರುಗಿಬಂದ ನಾವು, ಹಿದ್ಲುಮನೆ ತಲುಪಿದೆವು. ಅಲ್ಲಿನ ಮನೆಯವರಿಂದ ಒಳ್ಳೆಯ ಉಪಚಾರವನ್ನು ಪಡೆದ ನಾವು, ನಮ್ಮ ಬಂಡಿ ಹತ್ತಿಕೊಂಡು ನೇರವಾಗಿ ಕೊಲ್ಲೂರಿಗೆ ಬಂದಿಳಿದೆವು. ಅಲ್ಲಿನ ಪ್ರವಾಸಿ ಮಂದಿರದಲ್ಲಿ ಚಹಾ ಕುಡಿದು ತುಸು ವಿಶ್ರಮಿಸಿ, ಮುಂದೆ ಅರಶಿನಗುಂಡಿ ಜಲಪಾತಕ್ಕೆ ಹೋಗಲು ನಿರ‍್ದರಿಸಿದೆವು. ರಸ್ತೆ ಕಡಿದಾದ ಕಾರಣ ಇಲ್ಲಿಯ ತನಕ ನಮ್ಮ ವಾಹನ ಕೂಡ ಬರಲಾಗಲಿಲ್ಲ. ಹಾಗಾಗಿ ಅರಶಿನಗುಂಡಿ ನೋಡುವ ಯೋಜನೆ ಕಯ್ ಬಿಟ್ಟೆವು. ಬೆಳಿಗ್ಗೆಯಿಂದ ಹುಮ್ಮಸ್ಸಿನಿಂದ ನಡೆದಿದ್ದ ನಾವು, ಸಂಜೆ ಹೊತ್ತಿಗಾಗಲೇ ಆಯಾಸದಿಂದ ಸಪ್ಪೆಯಾಗಿ ಹೋಗಿದ್ದೆವು. ಮುಂದೆ ಕಾಲ್ನಡಿಗೆ ನಡೆಸುವ ಯಾವುದೇ ಯೋಚನೆ ನಮ್ಮ ತಲೆಯಲ್ಲಿ ಉಳಿದಿರಲಿಲ್ಲ. ಅದಾಗಲೇ ಸಮಯ ಆಗಲೇ 5 ಆಗಿತ್ತು. ಸಮಯದ ಅಬಾವದ ಕಾರಣ ಬೇರೆಡೆ ಹೋಗುವ ಎಲ್ಲಾ ಯೋಜನೆಗಳು ಅರ‍್ದಕ್ಕೇ ಕಯ್ ಬಿಡುವಂತಾಯಿತು. ಮೆತ್ತಗೆ ತಿರುಗಿ ಊರ ದಾರಿ ಹಿಡಿದೆವು. ಬೆಳಕು ಸರಿದು ಕತ್ತಲು ಆವರಿಸತೊಡಗಿತು. ನಮಲ್ಲಿ ಬಹಳಶ್ಟು ದೂರ ಕಾಲ್ನಡಿಗೆ ನಡೆಸುವ ಯೋಜನೆಯಿತ್ತು. ಆದರೆ ಆಯಾಸ ಮತ್ತು ಸಮಯದ ಅಬಾವದಿಂದ ಎಲ್ಲಾ ಸಾದ್ಯವಾಗಲಿಲ್ಲ. ಆದರೆ ಸುಮದುರ ಸವಿನೆನಪಿನ ನಮ್ಮ ಮೊದಲ ಕಾಲ್ನಡಿಗೆಯ ತಿರುಗಾಟ ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿದಿದೆ.

(ಚಿತ್ರ ಸೆಲೆ: mouthshut.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: