ಒಟ್ಟೊಟ್ಟಿಗೆ ಹಲವು ಕೆಲಸಗಳನ್ನು ಮಾಡುವ ಮುಂಚೆ, ಈ ಕುರಿತು ಯೋಚಿಸಿರಿ

– ರತೀಶ ರತ್ನಾಕರ.

multiple-seven-screens-monitors-computer

ಟಿವಿಯಲ್ಲಿ ಯಾವುದೋ ಕಾರ‍್ಯಕ್ರಮವನ್ನು ನೋಡುತ್ತಾ, ಜೊತೆಗೆ ಕೈಯಲ್ಲಿ ಯಾವುದೋ ಗಡುಕಡತದ(magazine) ಪುಟಗಳನ್ನು ತಿರುವಿಹಾಕುವುದು. ಆಪೀಸಿನಲ್ಲಿ ಯಾವುದೋ ಒಂದು ಕೆಲಸ ಮಾಡುತ್ತಾ ಅದರ ಜೊತೆಗೆ ಈ ದಿನದ ಸುದ್ದಿಗಳ ತುಣುಕುಗಳನ್ನು ಓದುವುದು. ಹೀಗೆ ಒಂದಕ್ಕಿಂತ ಹೆಚ್ಚಿನ ಕೆಲಸವನ್ನು ಒಟ್ಟೊಟ್ಟಿಗೆ ಎಸಗುವುದನ್ನು ಹಲವೆಸಕ(multi-tasking) ಎಂದು ಕರೆಯುವುದು. ಇತ್ತೀಚಿನ ದಿನಗಳಲ್ಲಿ, ಕಂಪನಿಗಳಲ್ಲಿ ಕೆಲಸ ಗಿಟ್ಟಿಸಲು ‘ನಾನು ಹಲವೆಸಕಗಳನ್ನು ಮಾಡುವ ಕಸುವನ್ನು ಹೊಂದಿದ್ದೇನೆ’ ಎಂದು ಅದನ್ನು ಒಂದು ಬಲ್ಮೆ(strength)ಯಂತೆ ತೋರಿಕೊಳ್ಳುತ್ತಾರೆ. ಹಲವೆಸಕ ಮಾಡುವುದು ಕೂಡ ಒಂದು ಒಳ್ಳೆಯ ಬಲ್ಮೆ ಎಂದು ಹಲವು ಕಂಪನಿಗಳ ನಂಬಿಕೆಯೂ ಹೌದು. ಆದರೆ ದಿಟವಾಗಿಯೂ ಈ ಹಲವೆಸಕ ಎಂಬುದು ಒಂದು ಒಳ್ಳೆಯ ಬಲ್ಮೆಯೇ? ಇಲ್ಲ ಕೊರತೆಯೇ? ಎಂಬುದರ ಕುರಿತು ಸಾಕಶ್ಟು ವಿವರವನ್ನು ಅರಿವಿಗರು ಹೊರಗೆಡವಿದ್ದಾರೆ.

‘ಹಲವೆಸಕ ಮಾಡುವ ಕಸುವು ಒಂದು ವರವಿದ್ದಂತೆ, ಒಂದೇ ಸಲಕ್ಕೆ ಎರಡು ಇಲ್ಲವೇ ಎರಡಕ್ಕಿಂತ ಹೆಚ್ಚು ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಮೆದುಳಿನ ಮೇಲೆ ಸಾಕಶ್ಟು ಹಿಡಿತವಿರಬೇಕು, ಹಾಗಾಗಿ ಹಲವೆಸಕ ಮಾಡುವವರಿಗೆ ಮೆದುಳಿನ ಮೇಲೆ ಹಿಡಿತ ಸಾದಿಸುವ ಕಸುವು ಇರುತ್ತದೆ.’ ಇಂತಹ ಒಂದು ನಂಬಿಕೆ ಕೆಲವು ಅರಿಗರಲ್ಲಿ ಇತ್ತು. ಆದರೆ, ನಮ್ಮ ಮೆದುಳು ಒಂದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಒಂದೇ ಸಲ ತೆಗೆದುಕೊಂಡು ಕೆಲಸ ಮಾಡುವುದಿಲ್ಲ, ಹಾಗಾಗಿ ಹಲವೆಸಕ ಮಾಡುವುದು ಒಂದು ಕಸುವೂ ಅಲ್ಲ, ವರವೂ ಅಲ್ಲ. ಬದಲಾಗಿ ಅದು ಮೆದುಳಿಗೆ ಹೆಚ್ಚಿನ ಒತ್ತಡ ಹಾಗು ಕೆಲಸವನ್ನು ನೀಡುವ ಬಗೆ! ಒಂದು ವೇಳೆ ಹಲವೆಸಕದ ಮೂಲಕ ಹೆಚ್ಚಿನ ಕೆಲಸವನ್ನು ಮೆದುಳಿಗೆ ನೀಡಿದರೆ ಅದರ ಆರೋಗ್ಯಕ್ಕೇ ಹಾನಿ ಎಂದು ಅರಿಗರು ತಮ್ಮ ಅರಕೆಗಳ(research) ಮೂಲಕ ತಿಳಿಸುತ್ತಿದ್ದಾರೆ. ಅಂತಹ ಒಂದು ಅರಕೆಯ ಕುರಿತು ತಿಳಿಯೋಣ ಬನ್ನಿ.

ಒಂದು ಅರಕೆಯಲ್ಲಿ, ನೂರಕ್ಕಿಂತ ಹೆಚ್ಚು ಮಂದಿಯನ್ನು ಎರಡು ಗುಂಪುಗಳಾಗಿ ಮಾಡಲಾಯಿತು. ಒಂದು ಗುಂಪಿನಲ್ಲಿ ತಮ್ಮ ಎಂದಿನ ಆಪೀಸಿನ ಕೆಲಸ ಹಾಗು ಇತರೆ ಕೆಲಸಗಳಲ್ಲಿ ಹಲವೆಸಕ ಮಾಡುವವರು ಇದ್ದರೆ, ಇನ್ನೊಂದು ಗುಂಪಿನಲ್ಲಿ ಒಂದು ಕೆಲಸವನ್ನು ಮುಗಿಸಿ ಮತ್ತೊಂದು ಕೆಲಸವನ್ನು ಕೈಗೆತ್ತಿಕೊಳ್ಳುವವರನ್ನು (ಒಂದೆಸಕ ಮಾಡುವವರು) ಇಲ್ಲವೇ ಕಡಿಮೆ ಹಲವೆಸಕ (ಕೆಲವೆಸಕ) ಮಾಡುವವರನ್ನು ಇರಿಸಲಾಯಿತು. ಈ ಎರಡು ಗುಂಪುಗಳನ್ನು ಕೆಳಗೆ ನೀಡಿರುವ ಮೂರು ಬಗೆಯ ಒರೆಹಚ್ಚುವಿಕೆಗಳಿಗೆ (tests) ಒಳಪಡಿಸಲಾಯಿತು.

ಒರೆಹಚ್ಚುವಿಕೆ 1:
ಮೊದಲನೇ ಒರೆಹಚ್ಚುವಿಕೆಯಲ್ಲಿ ಬಗೆ ಬಗೆಯ ಚಿತ್ರಗಳನ್ನು ಗುಂಪಿನವರಿಗೆ ತೋರಿಸಲಾಯಿತು. ಒಂದು ಚಿತ್ರದಲ್ಲಿ ‘ಕೆಂಪು ಬಣ್ಣದ ಎರಡು ಉದ್ದಚದರಗಳು(rectangles) ಮಾತ್ರ ಇದ್ದವು, ಮತ್ತೊಂದು ಚಿತ್ರದಲ್ಲಿ ಕೆಂಪು ಬಣ್ಣದ ಎರಡು ಉದ್ದಚದರಗಳನ್ನು ನೀಲಿ ಬಣ್ಣದ ಉದ್ದಚದರಗಳು ಸುತ್ತುವರೆದಿದ್ದವು. ಈ ಬಗೆಯ ಚಿತ್ರಗಳನ್ನು ಎರಡು ಬಾರಿ ತೋರಿಸಿಲಾಯಿತು. ಮೊದಲ ಬಾರಿ ಮತ್ತು ಎರಡನೇ ಬಾರಿ ತೋರಿಸಿದ ಚಿತ್ರದಲ್ಲಿ ಕೆಂಪು ಬಣ್ಣದ ಉದ್ದಚದರದ ಜಾಗವೇನಾದರು ಬದಲಾಗಿದೆಯೇ ಎಂದು ಗುಂಪಿನ ಮಂದಿ ಗುರುತಿಸಬೇಕಿತ್ತು. ಒಂದು ವೇಳೆ ನೀಲಿ ಬಣ್ಣದ ಉದ್ದಚದರದ ಜಾಗ ಬದಲಾಗಿದ್ದರೂ ಪರವಾಗಿಲ್ಲ, ಅದನ್ನು ಕಡೆಗಣಿಸಿ ಎಂದು ಅವರಿಗೆ ತಿಳಿಸಲಾಗಿತ್ತು.’filtering+task

ಒಂದೆಸಕ/ಕೆಲವೆಸಕ ಮಾಡುವ ಗುಂಪಿನವರು ಕೆಂಪುಬಣ್ಣದ ಉದ್ದಚದರದ ಜಾಗವು ಬದಲಾವಣೆ ಆಗಿದೆಯೋ ಇಲ್ಲವೋ ಎಂಬುದನ್ನು ಸುಲಬವಾಗಿ ಗುರುತಿಸಿದರು. ಆದರೆ ಹಲವೆಸಕ ಮಾಡುವವರಿಗೆ ನೀಲಿ ಬಣ್ಣದ ಕಡೆಗೂ ಮನತಿರುಗುತ್ತಿತ್ತು, ನೀಲಿ ಹಾಗು ಕೆಂಪು ಬಣ್ಣಗಳೆರಡರ ಕಡೆಗೆ ಒಟ್ಟಿಗೆ ಗಮನಕೊಡಲು ಪ್ರಯತ್ನಿಸುತ್ತಿದ್ದರು. ಇದರಿಂದ ಕೆಂಪು ಬಣ್ಣದ ಜಾಗದ ಬದಲಾವಣೆಯನ್ನು ಗುರುತಿಸಲು ಅವರು ಪರದಾಡುತ್ತಿದ್ದರು. ಹಲವೆಸಕ ಮಾಡುವವರಿಗೆ, “ಒಂದು ಕೆಲಸಕ್ಕೆ ಬೇಡವಾದ ಮಾಹಿತಿಯನ್ನು ಕಡೆಗಣಿಸುವ ಕಸುವು ಕಡಿಮೆ ಇರುತ್ತದೆ,” ಆದ್ದರಿಂದ ಇಂತಹ ಗೊಂದಲಗಳಿಗೆ ತುತ್ತಾಗುತ್ತಾರೆ. ಹಾಗಾಗಿ ಅವರು ಕೆಲಸವನ್ನು ಮುಗಿಸಲು ಹೆಚ್ಚು ಹೊತ್ತು ಇಲ್ಲವೇ ಹೆಚ್ಚು ಪ್ರಯತ್ನ ಹಾಕಬೇಕಾತ್ತದೆ ಎಂದು ಈ ಒರೆಹಚ್ಚುವಿಕೆಯಿಂದ ಅರಿಗರು ತಿಳಿದರು.

ಒರೆಹಚ್ಚುವಿಕೆ-2:
ಹಲವೆಸಕ ಮಾಡುವವರಿಗೆ ತಮಗೆ ಬೇಕಾದ ವಿವರವನ್ನು ಮೆದುಳಿನಲ್ಲಿ ನೆನಪಿನಲ್ಲಿಟ್ಟುಕೊಳ್ಳುವ ಮತ್ತು ಅಣಿಗೊಳಿಸಿಕೊಳ್ಳುವ(organize) ಕಸುವಿರಬಹುದೇ ಎಂದು ಮತ್ತೊಂದು ಒರೆಹಚ್ಚುವಿಕೆಯನ್ನು ನಡೆಸಿದರು. ಆದರೆ ಈ ಇದರಲ್ಲಿಯೂ ಒಂದೆಸಕ/ಕೆಲವೆಸಕ ಮಾಡುವವರು ಮೆಲುಗೈ ಸಾದಿಸಿದರು. ಇದರಲ್ಲಿ ಬರಿಗೆಮಣೆಯ ಕೆಲವು ಬರಿಗೆಗಳನ್ನು (alphabetical letter) ಒಂದು ವರೆಸೆಯಲ್ಲಿ(sequence) ತೋರಿಸಲಾಯಿತು. ಹಾಗೆ ತೋರಿಸುವಾಗ ಕೆಲವು ಬರಿಗೆಗಳು ಮತ್ತೆ ಮತ್ತೆ ಬರುತ್ತಿದ್ದವು. ಹೀಗೆ ಮತ್ತೆ ಮತ್ತೆ ಕಾಣುವ ಬರಿಗೆಗಳನ್ನು (repeated letters) ಮಾತ್ರ ಗುರುತಿಸುವಂತೆ ಗುಂಪಿನ ಮಂದಿಗೆ ತಿಳಿಸಲಾಯಿತು. ಈ ಒರೆಹಚ್ಚುವಿಕೆಯ ಶುರುವಿನಲ್ಲಿ ಹಲವೆಸಕ ಮಾಡುವರು ಚೆನ್ನಾಗಿಯೇ ಉತ್ತರಿಸಿದ್ದರೂ, ಮತ್ತೆ ಮತ್ತೆ ಬರುವ ಬರಿಗೆಗಳು ಹೆಚ್ಚಾದಂತೆ ಅವನ್ನು ತಮ್ಮ ಮೆದುಳಿನಲ್ಲಿ ಅಣಿಗೊಳಿಸಿ ನೆನಪಿನಲ್ಲಿಟ್ಟುಕೊಳ್ಳಲು ಅವರಿಗೆ ತೊಡಕಾಯಿತು. ಇದರಿಂದ ತಮ್ಮ ನೆನಪುಗಳನ್ನು ಅಣಿಗೊಳಿಸುವ ಕಸುವು ಕಡಿಮೆ ಹೊಂದಿರುತ್ತಾರೆ ಎಂಬ ಅನಿಸಿಕೆ ಅರಿಗರದಾಯಿತು.

ಒರೆಹಚ್ಚುವಿಕೆ -3:
ಮೇಲಿನ ಎರಡು ಒರೆಹಚ್ಚುವಿಕೆಗಳಲ್ಲಿ ಹೆಚ್ಚು ಹಲವೆಸಕ ಮಾಡುವವರು ಮೇಲುಗೈ ಸಾದಿಸದೇ ಇರುವುದನ್ನು ನೋಡಿ ಅರಿವಿಗರಿಗೆ ಬೆರಗಾಯಿತು. ಹೆಚ್ಚು ಹಲವೆಸಕ ಮಾಡುವವರು ಬೇಡವಾದ ಮಾಹಿತಿಯನ್ನು ಕಡೆಗಣಿಸುವ ಕಸುವು ಹೊಂದಿರದೇ ಇರಬಹುದು, ತಮ್ಮ ನೆನಪುಗಳನ್ನು ಅಣಿಗೊಳಿಸುವ ಕಸುವನ್ನು ಕಡಿಮೆ ಹೊಂದಿರಬಹುದು, ಆದರೆ ಒಂದು ಕೆಲಸದಿಂದ ಬೇರೊಂದು ಕೆಲಸಕ್ಕೆ ಬೇರೆಯವರಿಗಿಂತ ಬೇಗನೆ ಬದಲಾಗುವ ತಾಕತ್ತು ಇದ್ದೇ ಇರುತ್ತದೆ ಎಂದು ಅರಿಗರು ನಂಬಿದ್ದರು.

ಒಂದು ಕೆಲಸ ಮಾಡುತ್ತಲೇ ಇನ್ನೊಂದು ಕೆಲಸ ಬಂದರೆ ಆ ಕೆಲಸದ ಕಡೆ ಜಿಗಿದು ಅದನ್ನು ಮುಗಿಸಿಯೋ, ಒಂದು ಹಂತಕ್ಕೆ ತಲುಪಿಸಿಯೋ ಮತ್ತೆ ಮೊದಲು ಮಾಡುತ್ತಿದ್ದ ಕೆಲಸಕ್ಕೆ ಹಿಂದುರುಗುವುದು, ಹೀಗೆ ಕೆಲಸಗಳ ನಡುವೆ ಜಿಗಿಯುವುದು ಇದು ಹಲವೆಸಕ ಮಾಡುವವರ ಬಗೆಯಾಗಿತ್ತು. ಈ ಗುಣದಲ್ಲಿ ಅವರು ಕಂಡಿತಾ ಎಲ್ಲರಿಗಿಂತ ಎತ್ತಿದ ಕೈ ಆಗಿರುತ್ತಾರೆ ಎಂದು ಅರಿಗರು ಒರೆ ಹಚ್ಚಲು ಮುಂದಾದರು.

ಎರಡು ಗುಂಪುಗಳಿಗೆ ಕೆಲವು ಬರಿಗೆ ಮತ್ತು ಅಂಕಿಗಳಿರುವ ಚಿತ್ರಗಳನ್ನು ಒಟ್ಟಿಗೆ ತೋರಿಸಿ, ಯಾವ ಚಿತ್ರದ ಮೇಲೆ ಗಮನಹರಿಸಬೇಕು ಎಂದು ಹೇಳುವರೋ ಆ ಚಿತ್ರದ ಮೇಲೆ ಮಾತ್ರ ಗಮನಹರಿಸುವಂತೆ ಹೇಳಲಾಯಿತು. ಅಂದರೆ, ಬರಿಗೆ ಇರುವ ಚಿತ್ರವನ್ನು ನೋಡಿ ಎಂದರೆ ಕೇವಲ ಬರಿಗೆ ಇರುವ ಚಿತ್ರ ನೋಡಬೇಕು ಮತ್ತು ಆ ಬರಿಗೆಯು ತೆರೆಯುಲಿ(vowel)ಯೋ ಇಲ್ಲವೇ ಮುಚ್ಚುಲಿ(consonants)ಯೋ ಎಂದು ತಿಳಿಸಬೇಕು. ಇನ್ನು, ಅಂಕಿಗಳಿರುವ ಚಿತ್ರದ ಕಡೆ ನೋಡಿ ಎಂದರೆ, ಅತ್ತ ಗಮನಹರಿಸಿ ಚಿತ್ರದಲ್ಲಿರುವ ಅಂಕಿಯು ಸರಿ(even)ಯೋ ಇಲ್ಲವೇ ಬೆಸ(odd)ವೋ ಎಂದು ತಿಳಿಸಬೇಕಿತ್ತು.

ಆದರೆ ಅರಿಗರಿಗೆ ಬೆರಗುಗೊಳಿಸುವಂತೆ ಈ ಒರೆಹಚ್ಚುವಿಕೆಯಲ್ಲಿಯೂ ಹಲವೆಸಕ ಮಾಡುವರು ಕಳಪೆಯಾಗಿ ಉತ್ತರಿಸಿದರು. ತಮ್ಮ ಮೆದುಳಿನಲ್ಲಿ ಕೆಲಸಗಳನ್ನು ಬೇರೆ ಬೇರೆಯಾಗಿಡಲು ಅವರು ಕಶ್ಟಪಡುತ್ತಿದ್ದರು. ಹೇಳಿದ ಚಿತ್ರದ ಕಡೆ ಮಾತ್ರ ಗಮನಹರಿಸಿ ಎಂದಿದ್ದರೂ, ತಮ್ಮ ಎದುರಿಗಿದ್ದ ಅಂಕಿ ಹಾಗು ಬರಿಗೆ ಎರಡು ಚಿತ್ರಗಳ ಕಡೆಗೂ ಗಮನಹರಿಸಿ ಉತ್ತರವನ್ನು ನೀಡಲು ಪ್ರಯತ್ನಿಸುತ್ತಿದ್ದರು, ಇದರಿಂದ ಉತ್ತರಗಳು ತಪ್ಪುತ್ತಿತ್ತು. ಹಾಗಾಗಿ, ಹಲವೆಸಕ ಮಾಡುವವರು ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಹಾರಿದರೂ, ತಾವು ಅರ‍್ದದಲ್ಲೇ ಬಿಟ್ಟುಬಂದ ಕೆಲಸದ ಬಗ್ಗೆ ಯೋ‍‍ಚಿಸದೇ ಇರಲು ಅವರಿಂದ ಸಾದ್ಯವಿಲ್ಲ. ಇದರಿಂದ ಎರಡೂ ಕೆಲಸಗಳನ್ನು ಸರಿಯಾಗಿ ಪೂರೈಸಲು ಅವರು ಒಂದೆಸಕ/ಕೆಲವೆಸಕ ಮಾಡುವವರಿಗಿಂತ ಹಿಂದುಳಿಯುತ್ತಾರೆ ಎಂದು ಅರಿಗರು ತಿಳಿದರು.

ಇಂತಹ ಹಲವಾರು ಒರೆಹಚ್ಚುವಿಕೆಗಳು ಹಾಗು ಅರಕೆಗಳು ಹಲವೆಸಕದ ಬಗೆಯ ಸುತ್ತ ಇನ್ನೂ ನಡೆಯುತ್ತಿವೆ. ಒಟ್ಟಿನಲ್ಲಿ, ಹಲವೆಸಕ ಮಾಡುವವರಿಗೆ ಒಂದಕ್ಕಿಂತ ಹೆಚ್ಚಿನ ಮಾಹಿತಿಗಳನ್ನು ನೀಡಿದರೆ, ಇಲ್ಲವೇ ಅವರ ಮೆದುಳೇ ಒಂದಕ್ಕಿಂತ ಹೆಚ್ಚು ಮಾಹಿತಿ ಒದಗಿಸಿದರೆ, ಆ ಮಾಹಿತಿಗಳಲ್ಲಿ ತಾನು ಈಗ ಮಾಡುತ್ತಿರುವ ಕೆಲಸಕ್ಕೆ ಯಾವುದು ಬೇಕೋ ಆದನ್ನು ಮಾತ್ರ ಹೆಕ್ಕಿಕೊಳ್ಳುವಲ್ಲಿ ಅವರು ಎಡವುತ್ತಿದ್ದಾರೆ. ಇದರಿಂದ ಕೆಲಸವೂ ಸರಿಯಾಗಿ ಆಗುವುದಿಲ್ಲ ಜೊತೆಗೆ ಅವರ ಮೆದುಳಿಗೂ ಹೆಚ್ಚಿನ ಒತ್ತಡವನ್ನು ನೀಡಿದಂತೆ ಎಂಬುದು ಅರಿಗರ ಅನಿಸಿಕೆ.

ಒಂದು ಕಾಲದಲ್ಲಿ ಹಲವೆಸಕ ಎಂಬುದು ಒಂದು ಬಲ್ಮೆ ಎಂದು ಹೇಳಲಾಗುತ್ತಿತ್ತು. ಆದರೆ ಅದೊಂದು ಕೊರತೆ ಇರಬಹುದು ಎಂಬ ಅನಿಸಿಕೆಯನ್ನು ಈ ಅರಕೆಗಳು ಹೊರಹಾಕುತ್ತಿವೆ. ಆಪೀಸಿನಲ್ಲಿ ಯಾವುದೋ ಕೆಲಸದ ನಡುವೆ ಮತ್ತೊಂದು ಕೆಲಸವನ್ನು ಕೈಗೆತ್ತಿಗೊಳ್ಳುವಾಗ, ಟಿವಿ ನೋಡುತ್ತಲೇ ಗೆಳೆಯರಿಗೆ ಮಿಂಚೆ ಬರೆಯುವಾಗ, ಹೀಗೆ ಹಲವೆಸಕವನ್ನು ಮೈಗೂಡಿಸಿಕೊಳ್ಳಬೇಕೆಂಬ ಪ್ರಯತ್ನದಲ್ಲಿ ಇರುವಾಗ ಈ ಮೇಲಿನ ಒರೆಹಚ್ಚುವಿಕೆಗಳು ಹಾಗು ವಿವರಗಳು ನೆನಪಿನಲ್ಲಿರಲಿ.

(ಮಾಹಿತಿ ಸೆಲೆ: stanford.edu)

(ಚಿತ್ರ ಸೆಲೆ: priceonomics.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 26/06/2015

    […] ನಡೆದುಕೊಳ್ಳಿ. 6. ಹಲವೆಸಕ(multitasking), ಇದು ಒಂದು ಕೊರತೆ ಎಂದು ತಿಳಿದುಬಂದಿದೆ. ಹಲವೆಸಕದ ನೆಪದಲ್ಲಿ ಗಮನ ಕೆಡದಿರಲಿ. ಇದು […]

ಅನಿಸಿಕೆ ಬರೆಯಿರಿ:

Enable Notifications OK No thanks