ಕೆಲಸದೊತ್ತಡದ ನಡುವೆ ಒಳ್ಳೆಯ ತೀರ‍್ಮಾನ ತೆಗೆದುಕೊಳ್ಳುವುದು ಹೇಗೆ?

– ರತೀಶ ರತ್ನಾಕರ.

ForresterBig-Data

ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಂಡ ಮೇಲೆ ಮುಗಿಯಿತು. ಮುಕ ತೊಳೆದು, ಸ್ನಾನಮಾಡಿ, ತಿಂಡಿ ಮಾಡಿ, ಗಬಗಬನೆ ತಿಂದು, ಬಿರಬಿರನೆ ಕೆಲಸಕ್ಕೆ ಹೊರಡಬೇಕು. ಅತ್ತ ಕೆಲಸಕ್ಕೆ ಹೋದರೆ, ಒಂದಶ್ಟು ಮಿಂಚೆಗಳು, ಕೂಟಗಳು(meetings), ಕೆಲಸ, ಮಾತು, ಬೇಟಿ ಹೀಗೆ ನೂರೆಂಟು ಕೆಲಸಗಳ ಪಟ್ಟಿ ನಿಮ್ಮ ಮುಂದೆ ಇರುತ್ತದೆ. ಬೆಟ್ಟದಶ್ಟಿರುವ ಕೆಲಸಗಳ ಮೇಲೆ ಹೆಚ್ಚಿನ ಗಮನ ಕೊಡಬೇಕು ಇಲ್ಲದಿದ್ದರೆ ಆ ಕೆಲಸ ಸರಿಯಾಗಿ ಮುಗಿಯುವುದಿಲ್ಲ. ಹಾಗೆಯೇ, ಯಾವ ಕೆಲಸ ಮೊದಲು, ಯಾವುದು ಬಳಿಕ, ಯಾವ ಕೆಲಸ ಮಾಡುವುದು ಬೇಡ, ಯಾವ ಹೊಸ ಕೆಲಸವನ್ನು ಮಾಡುವುದು, ಇಂತಹ ಬಗೆ ಬಗೆಯ ತೀರ‍್ಮಾನಗಳನ್ನು ಕೂಡ ತೆಗೆದುಕೊಳ್ಳಬೇಕಾಗಿರುತ್ತದೆ. ಇಶ್ಟೊಂದು ಒತ್ತಡದ ನಡುವೆ ಗಮನವಿಟ್ಟು( focused attention) ಕೆಲಸ ಮಾಡುವುದು ಹೇಗೆ? ಹಾಗೆಯೇ ಒಳ್ಳೆಯ ತೀರ‍್ಮಾನಗಳನ್ನು (Decision making) ತೆಗೆದುಕೊಳ್ಳುವುದು ಹೇಗೆ?

ಒಳಗಿನರಿಮೆಯ (psychology) ಹಲವಾರು ಅರಕೆಗಳು ನಮ್ಮ ಮೇಲಿನ ಕೇಳ್ವಿಗಳಿಗೆ ಉತ್ತರವನ್ನು ಕಂಡುಹಿಡಿಯುವ ಪ್ರಯತ್ನ ಮಾಡಿವೆ. ‘ತಲ್ಲಣ‘(emotion)ಗಳನ್ನು ಸಂಬಾಳಿಸಿದರೆ ನಮ್ಮ ಗಮನ ಹಾಗು ತೀರ‍್ಮಾನಗಳು ಒಳ್ಳೆಯ ಬಗೆಯದ್ದಾಗಿರುತ್ತವೆ ಎಂದು ಅರಕೆಗಳು ತಿಳಿಸಿವೆ. ಈ ಇವನ್ನು ಸಂಬಾಳಿಸಲು ನಮಗೆ ಇವುಗಳ ಬಗ್ಗೆ ಒಳ್ಳೆಯ ಅರಿವು ಇರಬೇಕಾಗುತ್ತದೆ. ಹಾಗಾದರೆ ಬನ್ನಿ, ಈ ತಲ್ಲಣಗಳ ಬಗ್ಗೆ ಕೊಂಚ ಅರಿತುಕೊಂಡು, ಇವು ನಮ್ಮ ಗಮನ ಹಾಗು ತೀರ‍್ಮಾನಗಳಿಗೆ ಹೇಗೆ ನೆರವಾಗುತ್ತವೆ ಎಂದು ನೋಡೋಣ.

ತಲ್ಲಣಗಳು ನಮ್ಮ ಮೆದುಳು, ಬಗೆ(mind) ಹಾಗು ಮೈ ಮೇಳೈಸಿ, ಮಾನವನ ಒಟ್ಟಿಗೆ ಬೆಳವಣಿಗೆ ಹೊಂದಿದ ಅನಿಸಿಕೆಗಳು. ಸಿಟ್ಟು, ನಲಿವು, ಕೊರಗು, ಬೆರಗು, ಹೆದರಿಕೆ ಮತ್ತು ಒಲವು ಇವುಗಳು ನಮ್ಮ ಅರಿದಾದ ತಲ್ಲಣಗಳು ಎಂದು ಅರಿಗರು ವಿಂಗಡಿಸಿದ್ದಾರೆ.

ಇದರಲ್ಲಿ ಮೂರು ಬಗೆಯ ಅಡಕಗಳಿವೆ (components):
1. ಅನಿಸಿಕೆಯ ಅಡಕ(subjective component): ತಲ್ಲಣದಿಂದ ನಮಗೊಂದು ಬಗೆಯ ಅನಿಸಿಕೆ ಹೇಗೆ ಮೂಡಬೇಕು ಎಂಬುದನ್ನು ಈ ಅಡಕ ತಿಳಿಸುತ್ತದೆ. ಎತ್ತುಗೆಗೆ, ತುಂಬಾ ಕೊರಗಿನಲ್ಲಿದ್ದಾಗ ತಲೆ ಬಾರವೆನಿಸುತ್ತದೆ.
2. ಉಸಿರರಿಮೆಯ ಅಡಕ(physiological component): ತಲ್ಲಣಗಳಿಗೆ ನಮ್ಮ ಮೈ ಹೇಗೆ ಮಾರೆಸುಗುತ್ತದೆ ಎಂದು ತಿಳಿಸುವ ಅಡಕ. ನಲಿವಿನಲ್ಲಿ ನಗುವುದು, ಕೊರಗಿನಲ್ಲಿ ಅಳುವುದನ್ನು ಇಲ್ಲಿ ಎತ್ತುಗೆಯಾಗಿ ನೋಡಬಹುದು.
3. ತೋಡಿಕೊಳ್ಳುವ ಅಡಕ(expressive component): ತಲ್ಲಣಗಳು ಉಂಟಾದಾಗ ಹೇಗೆ ನಡೆದುಕೊಳ್ಳುವುದು ಎಂಬುದನ್ನು ತಿಳಿಸುವ ಅಡಕ. ಸಿಟ್ಟು ಬಂದಾಗ ಜೋರಾಗಿ ಮಾತನಾಡುವುದನ್ನು ಎತ್ತುಗೆಯಾಗಿ ನೋಡಬಹುದು.

ಈ ಮೇಲಿನ ಅಡಕಗಳು ಒಟ್ಟಾಗಿ ನಮ್ಮ ತಲ್ಲಣಗಳನ್ನು ತಿಳಿಸುತ್ತವೆ. ಮೆದುಳಿನಲ್ಲಿ ತಲ್ಲಣಗಳು ಉಂಟಾದಾಗ ನಮ್ಮ ನರದೇರ‍್ಪಾಟು ಅದಕ್ಕೆ ತಕ್ಕುದಾದ ಮಾರೆಸಕವನ್ನು(reaction) ಹೊರಹಾಕುತ್ತದೆ. ಈ ಮಾರೆಸಕಗಳು ನಮ್ಮ ಮೆದುಳಿನ ಯೋಚನೆ ಮತ್ತು ಮೈಗೆ ಆಗುವ ಅನಿಸಿಕೆಗಳಾಗಿರುತ್ತವೆ. ಹೀಗೆ ಮೂಡುವ ಯೋಚನೆ ಮತ್ತು ಅನಿಸಿಕೆಗಳು ನಮಗೆ ಒಳ್ಳೆಯ ತೀರ‍್ಮಾನ, ಮತ್ತು ಕೆಲಸದೆಡೆಗೆ ಗಮನವಿರಿಸಲು ನೆರವಾಗುತ್ತವೆ ಎಂದು ಅರಿಗರು ತಿಳಿಸುತ್ತಾರೆ. ಈ ತಲ್ಲಣಗಳ ಕೆಲಸವೇ ನಾವು ತೆಗೆದುಕೊಳ್ಳುವ ತೀರ‍್ಮಾನಕ್ಕೆ ನೆರವಾಗುವುದು. ಯೋಚನೆ ಮತ್ತು ಅನಿಸಿಕೆಗಳನ್ನು ಅಳೆದು-ತೂಗಿ ಅದಕ್ಕೆ ತಕ್ಕುದಾದ ಕೆಲಸವನ್ನು ಮಾಡುವಂತೆ ಮೆದುಳಿಗೆ ತಿಳಿಸುವುದು. ಇದಕ್ಕೆಂದೇ ಇವು ನಮ್ಮೊಳಗೆ ಮನೆಮಾಡಿವೆ. ನಾವದನ್ನು ಸರಿಯಾಗಿ ಬಳಸಿಕೊಂಡರೆ ದೊಡ್ಡ ದೊಡ್ಡ ತೀರ‍್ಮಾನಗಳನ್ನು ತೆಗೆದುಕೊಳ್ಳುವುದು, ಗಮನವಿಟ್ಟು ಕೆಲಸಮಾಡುವುದು ಸುಲಬವಾಗುತ್ತದೆ.

ತಲ್ಲಣಗಳ ಕೆಲವು ಕೆಲಸಗಳು:

ಕಚೇರಿಯಲ್ಲಿ ಮಾಡುತ್ತಿರುವ ಕೆಲಸದ ಗಡುವು(Deadline) ಹತ್ತಿರವಾಗುತ್ತಿದೆ ಎಂದೊಡನೆ ಕೆಲಸವನ್ನು ಗಡುವಿನ ದಿನದೊಳಗೆ ಮುಗಿಸಲು ಹವಣಿಸುತ್ತೇವೆ. ಇಂತಹ ಹೊತ್ತಿನಲ್ಲಿಯೇ ಕೆಲಸವನ್ನು ಇನ್ನಶ್ಟು ಸುಲಬವಾಗಿ ಮುಗಿಸುವ ಹೊಳಹು(idea)ಗಳು ಮೂಡುತ್ತವೆ. ಕೆಲಸದ ಗಡುವಿನಿಂದ ನಮ್ಮೊಳಗೆ ಉಂಟಾದ ‘ಕಳವಳ’ ಇಲ್ಲವೇ ‘ಹೆದರಿಕೆ’ಯ ತಲ್ಲಣಗಳು ನಮ್ಮಿಂದ ಈ ಕೆಲಸಗಳನ್ನು ಮಾಡಿಸುತ್ತವೆ. ಮಂದಿಯಿಂದ ಮಂದಿಗೆ ಇವು ಬೇರೆಯಾಗಿರುತ್ತವೆ. ಕೆಲವರಿಗೆ ಯಾವುದಾದರು ಹಮ್ಮುಗೆ(project) ಶುರುವಾದ್ದಲ್ಲಿಂದ ಅದು ಮುಗಿಯುವವರೆಗೂ ಕಳವಳ ಇರುತ್ತದೆ. ಈ ಕಳವಳವು ಅವರನ್ನು ಕೆಲಸ ಮಾಡುವಂತೆ ಹುರಿದುಂಬಿಸುತ್ತದೆ. ಇನ್ನು ಕೆಲವರಿಗೆ ಹಮ್ಮುಗೆಯ ಗಡುವು ಹತ್ತಿರವಾದಾಗ ಮಾತ್ರ ಕಳವಳ ಮೂಡುತ್ತದೆ, ಆಗಲೂ ಇದು ಕೆಲಸವನ್ನು ಮಾಡಿಸುತ್ತದೆ ಹಾಗು ಕೆಲಸವನ್ನು ಮುಗಿಸುವ ಹೊಸ ಹೊಳಹುಗಳನ್ನು ಮೂಡಿಸುತ್ತದೆ. ನಮ್ಮಲ್ಲಿರುವ ತಲ್ಲಣಗಳು ಯಾವ ಬಗೆಯವು? ಯಾವ ಹೊತ್ತಿನಲ್ಲಿ ನಮಗೆ ಕೆಲಸವನ್ನು ಮಾಡಿಸುತ್ತದೆ? ಇಂತಹ ಕೇಳ್ವಿಗಳನ್ನು ಬಗೆಹರಿಸಿಕೊಂಡು ಇವನ್ನು ಹುರಿದುಂಬುಕಗಳಾಗಿ ಬಳಸಿಕೊಳ್ಳಬಹುದು. ಇಂತಹ ಹುರಿದುಂಬುವಿಕೆಗಳು ಅರಿವುಳ್ಳ(conscious) ತೀರ‍್ಮಾನಗಳನ್ನು ತೆಗೆದುಕೊಳ್ಳಲು ನೆರವಾಗುತ್ತವೆ.

ಹೊಸದೊಂದು ವ್ಯಾಪಾರಕ್ಕೆ ಕೈಹಾಕಬೇಕು ಎಂದುಕೊಂಡು ಯಾವುದೋ ಒಂದು ಉದ್ದಿಮೆಯನ್ನು ಕೊಳ್ಳಲು ಮುಂದಾಗುವಿರಿ. ಇನ್ನೇನು, ಆ ವ್ಯಾಪಾರಕ್ಕೆ ಸಹಿ ಹಾಕಬೇಕು ಆಗ ನಿಮ್ಮೊಳಗೆ ಅನಿಸಿಕೆಗಳ ಏರುಪೇರು ಆಗುತ್ತದೆ. ಇದಕ್ಕೆ ಕಾರಣ ತಲ್ಲಣಗಳು. ನೀವು ಈಗ ಕೊಂಡುಕೊಳ್ಳುತ್ತಿರುವ ಉದ್ದಿಮೆ ನಿಮ್ಮ ಗುರಿಯನ್ನು ತಲುಪಲು ನೆರವಾಗುವುದೇ? ನೆರವಾಗುವುದಾದರೆ ಹೇಗೆ ನೆರವಾದೀತು? ನೀವು ಈ ಉದ್ದಿಮೆಯನ್ನು ಇನ್ನೂ ಚೆನ್ನಾಗಿ ಬೆಳಸಲು ಹೇಗೆ ಆದೀತು? ಇಂತಹ ಕೇಳ್ವಿಗಳನ್ನು ನಿಮ್ಮೊಳಗಿನ ‘ ಯಾವುದೇ ಸೋಲಿಗೆ ಹೆದರುವ’ ತಲ್ಲಣಗಳು ಮೂಡಿಸುತ್ತವೆ. ಹಾಗೆಯೇ, ಈ ಕೇಳ್ವಿಗಳಿಗೆ ತಕ್ಕುದಾದ ಮರುನುಡಿಯನ್ನು ಕಂಡುಕೊಳ್ಳಲು ನಿಮ್ಮ ಮೆದುಳಿಗೆ ನೆರವಾಗುತ್ತವೆ. ಇವು ತಮ್ಮ ಕೆಲಸಗಳನ್ನು ತುಂಬಾ ಬಿರುಸಿನಿಂದ ಮಾಡುತ್ತವೆ, ಇವುಗಳ ಮಾತನ್ನು ಕೇಳುವ ತಾಳ್ಮೆ ನಮ್ಮಲ್ಲಿರಬೇಕು ಅಶ್ಟೆ. ತಲ್ಲಣಗಳನ್ನು ತಾಳ್ಮೆಯಿಂದ ಬಳಸಿಕೊಂಡರೆ, ತಪ್ಪು ತೀರ‍್ಮಾನಗಳನ್ನು ಕಡಿಮೆ ಮಾಡಬಹುದು ಎಂದು ಅರಕೆಗಳು ತಿಳಿಸುತ್ತವೆ.

ತಲ್ಲಣಗಳನ್ನು ಕಡೆಗಣಿಸುವುದು ಇಲ್ಲವೇ ಹತ್ತಿಕ್ಕುವುದು ಒಳ್ಳೆಯದಲ್ಲ. ಇವು ಸಾವಿರಾರು ವರುಶಗಳಿಂದ ನಮ್ಮೊಳಗೆ ಬೆಳೆದುಕೊಂಡು ಬಂದಿವೆ. ಇವು ನಮಗೆ ಮಾಹಿತಿ ನೀಡುತ್ತವೆ, ಮೈಯಲ್ಲಿನ ಆಗುಹೋಗುಗಳನ್ನು ನೋಡಿಕೊಳ್ಳುತ್ತವೆ,ಏನುಮಾಡಬೇಕೆಂಬ ಬಗೆಹರಿಕೆಗಳನ್ನು ನೀಡುತ್ತವೆ. ಎತ್ತುಗೆಗೆ, ಯಾವುದೋ ಹಮ್ಮುಗೆಯ ಕೆಲಸ ಮಾಡುತ್ತಿರುತ್ತೀರಿ ಎಂದುಕೊಳ್ಳೋಣ, ಆ ಹೊತ್ತಿನಲ್ಲಿ ನಿಮ್ಮ ಮಿಂಚೆ ಪೆಟ್ಟಿಗೆಗೆ ಕೆಲವು ಮಿಂಚೆಗಳು ಹರಿದು ಬರುತ್ತವೆ, ಅಲೆಯುಲಿ(mobile phone)ಗೆ ಓಲೆಗಳು ಬರುತ್ತವೆ, ಯಾರೋ ಒಬ್ಬರು ಮತ್ತೊಂದು ಕೆಲಸ ಮಾಡುವಂತೆ ಕೇಳಿರುತ್ತಾರೆ, ಇಂತಹ ಹಲವಾರು ಮಾಹಿತಿಗಳು ಒಮ್ಮೆಲೆ ಹರಿದುಬರುತ್ತವೆ. ಇವೆಲ್ಲವನ್ನು ಒಮ್ಮೆಲೆ ನೋಡಿ ಮಾರೆಸಗಲು ಆಗುವುದಿಲ್ಲ. ಆದರೆ ನಮ್ಮ ಮೆದುಳು ನಮ್ಮ ಅರಿವಿಗೆ ಬಾರದಂತೆ ಇವೆಲ್ಲವನ್ನು ನೋಡಿಕೊಳ್ಳುತ್ತಿರುತ್ತದೆ. ಬರುತ್ತಿರುವ ಮಾಹಿತಿಯಲ್ಲಿ ಯಾವುದಕ್ಕಾದರು ಮೊದಲತನ(priority) ನೀಡಬೇಕಾದಲ್ಲಿ, ಕೂಡಲೇ ಒಂದು ಸುಳಿವನ್ನು ತಲ್ಲಣದ ಮೂಲಕ ನೀಡುತ್ತದೆ, ಮತ್ತು ಆ ಸುದ್ದಿಯ ಕಡೆಗೆ ಗಮನಹರಿಸುವಂತೆ ಮಾಡುತ್ತದೆ. ಇಲ್ಲವಾದರೆ ಈಗ ಮಾಡುತ್ತಿರುವ ಕೆಲಸದ ಮೇಲೆ ಗಮನವನ್ನು ಮುಂದುವರಿಸುವಂತೆ ಮಾಡುತ್ತದೆ. ಹೀಗೆ ನಮ್ಮ ಗಮನದ ಹಿಡಿತ ತಲ್ಲಣಗಳ ಕೈಯಲ್ಲಿ ಇರುತ್ತದೆ. ಹಾಗಾಗಿ ಇವನ್ನು ಅರಿತರೆ ಗಮನವನ್ನು ಗಟ್ಟಿಗೊಳಿಸಿದಂತೆ. ಇವು ನಮ್ಮ ಮೆದುಳಿನಲ್ಲಿ ಹಲವಾರು ಸುಳಿವುಗಳನ್ನು ನೀಡಿ, ಒಂದು ಕೆಲಸದ ಮೇಲೆ ಗಮನವನ್ನು ಹೆಚ್ಚಿಸುವಂತೆ ಮಾಡಬಲ್ಲವು ಅದಕ್ಕಾಗಿ ಇದನ್ನು ‘ಗಮನದ ಸೆಳೆಗಲ್ಲು‘(attention magnets) ಎಂದು ಅರಿಗರು ಕರೆಯುತ್ತಾರೆ.

search-icon-512ನೆನಪಿರಲಿ, ಗಮನವನ್ನು ಹೆಚ್ಚಿಸಲು ನೆರವಾಗುವ ತಲ್ಲಣಗಳು ಆಗಾಗ ತಪ್ಪು ಸುಳಿವನ್ನು ಕೂಡ ನೀಡುತ್ತವೆ. ಎತ್ತುಗೆಗೆ, ನೀವು ಕೆಲಸ ಮಾಡುತ್ತಿರುವಾಗ ಯಾರಾದರು ಒಂದು ನಗೆಚಟಾಕಿಯ ಮಿಂಚೆ ಕಳಿಸಿದರೆ, ನೀವು ಅದರ ಸೆಳೆತಕ್ಕೆ ಸಿಕ್ಕು ಆ ಮಿಂಚೆಯನ್ನು ಓದಲು ತೊಡಗಿ ನಿಮ್ಮ ಗಮನವನ್ನು ಈಗ ಮಾಡುತ್ತಿರುವ ಕೆಲಸದಿಂದ ಆಚೆಗೆ ಕೊಂಡಯ್ಯಬಹುದು. ಇಂತಹ ತಪ್ಪು ಸುಳಿವುಗಳಿಂದ ತಪ್ಪಿಸಿಕೊಳ್ಳಲು ನಮ್ಮ ತಲ್ಲಣಗಳನ್ನು ನಾವು ಸಂಬಾಳಿಸಬೇಕಾಗುತ್ತದೆ.

ತಲ್ಲಣಗಳನ್ನು ನಾವು ಸಂಬಾಳಿಸಬಹುದು ಆದರೆ ಅವನ್ನು ನಾವು ಹೇಳಿದ ಹಾಗೆ ಕೇಳುವಂತೆ ಹಿಡಿತದಲ್ಲಿ ಇಟ್ಟುಕೊಳ್ಳಲಾಗುವುದಿಲ್ಲ. ಇದನ್ನು ಸಂಬಾಳಿಸಿಕೊಂಡು ನಮ್ಮ ಎಂದಿನ ಕೆಲಸದಲ್ಲಿ ಒಳ್ಳೆಯ ತೀರ‍್ಮಾನ ತೆಗೆದುಕೊಳ್ಳುವುದು ಹಾಗು ಕೆಲಸದೆಡೆಗೆ ಗಮನ ಇರುವಂತೆ ನೋಡಿಕೊಳ್ಳಬಹುದು.

ತಲ್ಲಣಗಳನ್ನು ಸಂಬಾಳಿಸಲು ಕೆಲವು ಸಲಹೆಗಳು:
1. ನಮ್ಮಲ್ಲಿರುವ ತಲ್ಲಣಗಳು ಯಾವುದು ಎಂಬುದನ್ನು ಅರಿಯಲು ಪ್ರಯತ್ನಿಸಿ. ಯಾವುದಾದರು ತಲ್ಲಣಕ್ಕೆ ನಿಮ್ಮ ಮಾರೆಸಕ ಸರಿಯಿಲ್ಲ ಎನಿಸಿದರೆ ಅದನ್ನು ಬದಲಿಸಿಕೊಳ್ಳುವ ಪ್ರಯತ್ನ ಮಾಡಿ. ಯಾವುದರಿಂದ ಒಳ್ಳೆಯ ತೀರ‍್ಮಾನ ಮತ್ತು ಗಮನ ಸಿಗುತ್ತಿದೆ ಎಂದು ಕಂಡುಕೊಳ್ಳಿ, ಅಂತಹದ್ದನ್ನು ಕಾಪಾಡಿಕೊಂಡು ಬನ್ನಿ.
2. ನಿಮಗಾಗಿ ನೀವು ಹೊತ್ತನ್ನು ಕೊಡಲೇಬೇಕು. ಒಳ್ಳೆಯ ನಿದ್ದೆ ಮಾಡಿ. ಓಟ, ಆಟ, ನಡೆಯುವುದು ಹೀಗೆ ಯಾವುದಾದರೊಂದು ಮಯ್ಪಳಿಗಿಸುವ ಕೆಲಸಕ್ಕೆ ಹೊತ್ತು ಕೊಡಿ, ಅದನ್ನು ತಪ್ಪದೇ ಮಾಡಿ, ಬದ್ದತೆಯನ್ನು ತೋರಿಸಿ. ಇದು ಕೆಲಸದ ಮೇಲಿನ ನಿಮ್ಮ ಗಮನವನ್ನು ಹೆಚ್ಚಿಸಲು ನೆರವಾಗುತ್ತದೆ.
3. ಮೆದುಳಿಗೆ ಕೆಲಸ ಕೊಡುವ ಯಾವುದಾದರೊಂದು ವಿಶಯಕ್ಕೆ ಕೊಂಚ ಹೊತ್ತು ಕೊಡಿ. ವಾರದಲ್ಲಿ ಒಂದಾದರು ಅಂಕಣ ಬರೆಯುವುದು, ಹಸಿರಿನ ಮಡಿಲಲ್ಲಿ ಹೊತ್ತು ಕಳೆಯುವುದು, ಹೊತ್ತಗೆ ಓದುವುದು, ಮುಂತಾದವು. ಇವು ನಮ್ಮ ತಲ್ಲಣಗಳನ್ನು ಅರಿಯಲು ನೆರವಾಗುತ್ತವೆ. ತಿಳುವಳಿಕೆಯನ್ನು ಹೆಚ್ಚಿಸುತ್ತವೆ.
4. ನಿಮ್ಮ ತಲ್ಲಣಗಳ ಪದನೆರಕೆ(vocabulary) ದೊಡ್ಡದಿರಲಿ. ಈ ಬರಹದ ಮೊದಲಿಗೆ ಕೆಲವೇ ಕೆಲವನ್ನು ಹೇಳಲಾಗಿದೆ. ನಲಿವು ಎಂಬ ತಲ್ಲಣದೊಳಗೆ ಹಲವು ಬಗೆಗಳಿವೆ, ಅವುಗಳ ಬಗ್ಗೆ ನಿಮಗೆ ತಿಳಿದಿರಲಿ. ಇವು ನಮ್ಮನ್ನು ನಾವು ಅರಿಯಲು ನೆರವಾಗುತ್ತವೆ. ನಮ್ಮ ತಲ್ಲಣಗಳೇನು ಎಂದು ಮತ್ತೊಬ್ಬರಿಗೆ ತಿಳಿಸಲು ನೆರವಾಗುತ್ತವೆ.
5. ಚೂಟಿಯುಲಿ (smartphone), ಮಿಂದಾಣ(websites) ಇವುಗಳಿಂದ ಮಾಹಿತಿಯ ನೆರೆ ಹರಿದು ಬರುತ್ತದೆ. ಅಲ್ಲದೇ ನಮ್ಮ ಎಂದಿನ ಕೆಲಸದ ಗಮನವನ್ನು ಹಾಳುಗೆಡುವುದರಲ್ಲಿ ಇವಕ್ಕೆ ಮೊದಲ ಜಾಗ. ತಲ್ಲಣಗಳ ದಿಕ್ಕನ್ನು ಕೆಡಿಸಿ ತಪ್ಪು ಸುಳಿವನ್ನು ಕೊಡುವಂತೆ ಇವು ಮಾಡುತ್ತವೆ. ಕೆಲಸದ ನಡುವೆ ಇವುಗಳ ಬಳಕೆ ಮಾಡದಿರುವುದೇ ಒಳಿತು. ನಿಮ್ಮ ಚೂಟಿಯುಲಿ/ಮಿಂದಾಣದ ಬಳಕೆ ಯಾವ ಹೊತ್ತಿನಲ್ಲಿ ನಡೆಯಬೇಕು, ಅದರಲ್ಲಿ ಯಾವ ವಿಶಯಕ್ಕೆ ಆದ್ಯತೆ ಕೊಡಬೇಕು ಎಂದು ತಿಳಿದುಕೊಳ್ಳಿ. ಅದರಂತೆ ನಡೆದುಕೊಳ್ಳಿ.
6. ಹಲವೆಸಕ(multitasking), ಇದು ಒಂದು ಕೊರತೆ ಎಂದು ತಿಳಿದುಬಂದಿದೆ. ಹಲವೆಸಕದ ನೆಪದಲ್ಲಿ ಗಮನ ಕೆಡದಿರಲಿ. ಇದು ಕೂಡ ತಲ್ಲಣಗಳ ದಾರಿಯನ್ನು ತಪ್ಪಿಸುತ್ತವೆ.

ನಂಬಿಕೆಗಳು ನಮ್ಮ ತಿಳುವಳಿಕೆಗೆ ಒಂದು ರೂಪವನ್ನು ಕೊಡುತ್ತವೆ. ಹಾಗಾಗಿ ಒಳ್ಳೆಯ ನಂಬಿಕೆಗಳಿರಲಿ. ನಮ್ಮಲ್ಲಿರುವ ತಲ್ಲಣಗಳನ್ನು ಅರಿತುಕೊಂಡು ಅದರಿಂದ ಒಳಿತಿನ ತೀರ‍್ಮಾನ ಮತ್ತು ಒಳ್ಳೆಯ ಗಮನವನ್ನು ಹೆಚ್ಚಿಸಿಕೊಳ್ಳಬಹುದು.

(ಮಾಹಿತಿ ಸೆಲೆ: psychology.about.compsychologytoday.com, hbr.org, hbr.org.2014)

(ಚಿತ್ರ ಸೆಲೆ: forresterbillfrymire.comgraphicsfuel.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: