ಹಣಕಾಸೇರ‍್ಪಾಡಿನ ಮೇಲೆ ವಹಿವಾಟುಗಳ ಪರಿಣಾಮವೇನು?

– ಅನ್ನದಾನೇಶ ಶಿ. ಸಂಕದಾಳ.

Freight Business

ಜಾಗತಿಕ ಹಣಕಾಸಿನ ಪಾಡು (economy) 2015 ರಲ್ಲಿ ಮತ್ತೊಮ್ಮೆ ಮುಗ್ಗರಿಸಿದೆ. ಅಮೇರಿಕಾದ ಹಣಕಾಸಿನ ಪಾಡು ಮೊದಲ ಮೂರು ತಿಂಗಳಲ್ಲಿ ತೆವಳುವಶ್ಟು ಮಂದಗತಿಯಲ್ಲಿ ಸಾಗಿತು. ಗ್ರೀಸ್ ನಾಡು ಯುರೋಪಿಯನ್ ಒಕ್ಕೂಟದಿಂದ ಹೊರಹೋಗಬಹುದೆಂಬ ಅಳುಕು ಕೆಲ ತಿಂಗಳುಗಳ ಕಾಲ ಮಾರುಕಟ್ಟೆಯನ್ನು ಆವರಿಸಿತ್ತು. ಬಳಿಕ, ಚೀನಾವು ತನ್ನ ಶೇರು ಮಾರುಕಟ್ಟೆಯನ್ನು ಸರಿಯಾಗಿ ಸಂಬಾಳಿಸುವಲ್ಲಿ ಎಡವಿ ಎಲ್ಲರ ಗಮನ ತನ್ನತ್ತ ಸೆಳೆಯಿತು. ಇವೆಲ್ಲದರ ಜೊತೆಗೆ, ಎಲ್ಲವೂ ಚೆನ್ನಾಗಿ ನಡೆಯುತ್ತಿಲ್ಲ ಎಂದು ತೋರುವ ಬೇರೊಂದಿಶ್ಟು ಬೆಳವಣಿಗೆಗಳು ಮೆಲ್ಲನೆ ಕಾಣಿಸಿಕೊಳ್ಳುತ್ತಿವೆ : ಅದು ಜಾಗತಿಕ ವ್ಯಾಪಾರ-ವಹಿವಾಟುಗಳು (world trade – ನಾಡು-ನಾಡುಗಳ ನಡುವೆ ಕೊಡು-ಕೊಳ್ಳುವುದು) ಸತತವಾಗಿ ಇಳಿಕೆ ಕಾಣುತ್ತಿರುವುದು. ಕಡು ಹಣಕಾಸಿನ ಮುಗ್ಗಟ್ಟು ಎದುರಾದ ದಿನದಿಂದ ಇದುವರೆಗೂ ನೋಡಿದಾಗ, ಈ ವರುಶ ಕಂಡು ಬಂದಿರುವ ವಹಿವಾಟುಗಳ ಇಳಿಕೆಯು ಅತಿ ದೊಡ್ಡ ಮಟ್ಟದ ಇಳಿಕೆಯಾಗಿದೆ.

ಜಾಗತಿಕ ಹಣಕಾಸಿನ ಪಾಡನ್ನು ತೀರ‍್ಮಾನಿಸುವಲ್ಲಿ/ತೋರಿಸುವಲ್ಲಿ, ಕೊಡು-ಕೊಳ್ಳುವ ವಹಿವಾಟುಗಳ ಇಳಿಕೆ ಹೇಗೆ ಅತವಾ ಎಶ್ಟು ಮುಕ್ಯವಾಗುತ್ತದೆ?

ಸಾಮಾನ್ಯವಾಗಿ ಜಾಗತಿಕ ಮಟ್ಟದ ಕೊಡು-ಕೊಳ್ಳುವ ವಹಿವಾಟುಗಳು, ‘ಜಾಗತಿಕ ಮಟ್ಟದ ಒಟ್ಟು ಮಾಡುಗೆಯ ಬೆಲೆ’ಗಿಂತಾ (Global GDP) ತುಸು ಬೇಗನೇ ಹೆಚ್ಚಿಕೆ (Growth) ಕಾಣುತ್ತದೆ. ಅದರಲ್ಲೂ 90ರ ದಶಕದಲ್ಲಿ ಕೊಡು-ಕೊಳ್ಳುವ ವಹಿವಾಟುಗಳ ಬೆಳವಣಿಗೆಯು, ‘ಒಟ್ಟು ಮಾಡುಗೆಯ ಬೆಲೆ’ಯ ಬೆಳವಣಿಗೆಗಿಂತಾ ಹೆಚ್ಚು ವೇಗ ಪಡೆಯಿತು. ಆ ಹೊತ್ತಿನಲ್ಲಿ ಚೀನಾ ಮತ್ತು ರಶ್ಯಾ ನಾಡುಗಳು ಹಣಕಾಸಿನ ವಲಯದಲ್ಲಿ ಉದಾರ ನೀತಿಗಳನ್ನು ಜಾರಿಗೆ ತಂದವು, ನಾಡು ನಾಡುಗಳ ನಡುವೆ ಕೊಡು-ಕೊಳ್ಳಲು ಇದ್ದ ತೊಡಕುಗಳನ್ನು ಕಡಿಮೆಗೊಳಿಸಲಾಯಿತು, ‘ವರ‍್ಲ್ಡ್ ಟ್ರೇಡ್ ಆರ‍್ಗನೈಸೇಶನ್’ ಹುಟ್ಟು ಹಾಕಲಾಯಿತು, ಚಳಕದರಿಮೆಯನ್ನು (technology) ಹೆಚ್ಚು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಬೇಡಿಕೆಗಳನ್ನು ಪೂರೈಸುವ ಸರಪಣಿಯನ್ನು ಹಿಗ್ಗಿಸಲಾಯಿತು (supply chain expansion). ಆದರೆ, 90ರ ದಶಕದ ನಂತರದಲ್ಲಿ ಜಾಗತಿಕ ಕೊಡು-ಕೊಳ್ಳುವ ವಹಿವಾಟುಗಳಿಗೆ ಹಿಂದೆ ಕಂಡಿದ್ದ ವೇಗವನ್ನು ಕಾಪಾಡಿಕೊಳ್ಳಲಾಗಲಿಲ್ಲ. ಇದರಿಂದ, ಹಣಕಾಸಿನ ಮುಗ್ಗಟ್ಟು ಎದುರಾದ ದಿನದಿಂದ ಜಾಗತಿಕ ವ್ಯಾಪಾರ-ವಹಿವಾಟುಗಳ ಹೆಚ್ಚಿಕೆ ಮತ್ತು ‘ಒಟ್ಟು ಮಾಡುಗೆಯ ಬೆಲೆ’ಯ ಹೆಚ್ಚಿಕೆಗಳ ನಡುವಿನ ಅಂತರ ಕಡಿಮೆಯಾಗುತ್ತಾ ಬಂದಿದೆ.

ಜಾಗತಿಕ ವಹಿವಾಟುಗಳ ತಗ್ಗಿಕೆಗೆ ಎರಡು ಕಾರಣಗಳಿವೆ.

  • ಜಗತ್ತಿನ ಒಟ್ಟು ಮಾಡುಗೆಯ ಬೆಲೆಗೆ ಶೇ 20ರಶ್ಟು ಕೊಡುಗೆ ಯುರೋಪಿನದು. ಹಾಗೇ, ಜಾಗತಿಕ ಮಟ್ಟದ ವಹಿವಾಟುಗಳಲ್ಲಿ ಶೇ 33 ರಶ್ಟು ಪಾಲು ಯುರೋಪಿನದ್ದಾಗಿದೆ. ಹೀಗಿದ್ದರೂ ಯುರೋಪ್ ವಲಯವು ಹಣಕಾಸಿನ ತೊಂದರೆಯನ್ನು ಹಲವಾರು ವರುಶಗಳ ಕಾಲ ಎದುರಿಸಬೇಕಾಯಿತು. ಏಶ್ಯಾ ವಲಯದಲ್ಲಿ ಚೀನಾವು ಏಳಿಗೆಯಲ್ಲಿ ಹಿನ್ನಡೆ ಕಂಡಿತು. ಚೀನಾವು ಕಂಡ ಕುಸಿತದಿಂದ ಸರಕುಗಳ ಬೆಲೆ ಕಡಿಮೆ ಆಗತೊಡಗಿದವು. ಅದರಿಂದ ಬೇರೆ ನಾಡುಗಳಿಂದ ಚೀನಾಗೆ ಸರಕುಗಳನ್ನು ಕಳಿಸುವುದು (export) ಕಡಿಮೆ ಆಗಿ ಅದು ಸರಕುಗಳ ಬಳಕೆಯನ್ನು ತಗ್ಗಿಸಿತು. ಸಹಜವಾಗಿ ವಹಿವಾಟುಗಳು ಕಡಿಮೆ ಆದವು. ಈ ಆಗುಹೋಗುಗಳು ಮತ್ತೆ ಮತ್ತೆ ಮರುಕಳಿಸುವಂತವಾದರೂ, ಅವು ಅರೆಹೊತ್ತಿನದ್ದಾಗಿವೆ (temporary) .
  • ಅರೆಹೊತ್ತಿನ ಆಗುಹೋಗುಗಳಿಗಿಂತ, ಜಾಗತಿಕ ಮಟ್ಟದಲ್ಲಿ ಹೆಚ್ಚು ಸಮಯ ಪರಿಣಾಮ ಬೀರಬಲ್ಲ ಕೆಲ ಬೆಳವಣಿಗೆಗಳಿಂದ ವಹಿವಾಟುಗಳು ಕಡಿಮೆ ಆಗುತ್ತಿವೆ – ಚೀನಾದ ಉದ್ದಿಮೆಯು, ತನ್ನ ಹೊರಮಾರಾಟದ (export) ಮಾಡುಗೆಗಳ ತಯಾರಿಕೆಗೆ ಬೇಕಾದ ಬಾಗಗಳ ಒಳತರಿಸುವಿಕೆಯನ್ನು (import) ಕಡಿಮೆ ಮಾಡಿರುವುದು, ಅಮೇರಿಕಾ ತಾನು ಹೊಂದಿರುವ ತೈಲದ ಸೆಲೆಗಳಿಂದ (oil sources) ತನ್ನ ಒಳಗಿನ ಬೇಡಿಕೆಯನ್ನು ತಕ್ಕ ಮಟ್ಟಿಗೆ ತಾನೇ ನೀಗಿಸುಕೊಳ್ಳುವಂತಾಗಿರುವದರಿಂದ ಕಚ್ಚಾ ತೈಲ ಆಮದನ್ನು ಕಡಿತಗೊಳಿಸಿರುವುದು.

ಜಾಗತಿಕ ಮಟ್ಟದ ವಹಿವಾಟುಗಳು ಹೀಗೆ ಕುಸಿತ ಕಾಣುತ್ತಿದ್ದರೂ, ಅದು ಹಿಂಜರಿತದ (recession) ಸೂಚನೆಯಂತೇನೂ ಅಲ್ಲ. ಆದರೂ, ಕೊಡು-ಕೊಳ್ಳುವಿಕೆಗಳು ಹಣಕಾಸಿನ ಏಳಿಗೆ ವಿಶಯದಲ್ಲಿ ಮುಕ್ಯವಾದ ಪಾತ್ರ ವಹಿಸುತ್ತವೆ. ಇಂದಿಗೂ ಏಳಿಗೆಯನ್ನು ಅಳೆಯಲು ಹೊರಮಾರುಗೆಯು (export) ಮುಕ್ಯವಾದ ಸಾದನವೇ ಆಗಿದೆ. ಮಾರುಕಟ್ಟೆಯಲ್ಲಿ ಸರಕು ಅತವಾ ಸೇವೆಗಳಿಗೆ ಬಹಳಶ್ಟು ಕಾಲ ಬೇಡಿಕೆಯಲ್ಲಿ ಕುಸಿತ ಕಂಡು ಬರುತ್ತಿದ್ದರೆ, ಕಡಿಮೆ ಗಳಿಕೆಯ ನಾಡುಗಳಿಗೆ ಏಳಿಗೆ ಹೊಂದುವುದಕ್ಕೆ ತೊಡಕಾಗುತ್ತದೆ. ನಾಡುಗಳ ನಡುವಿನ ಕೊಡು-ಕೊಳ್ಳುವಿಕೆಗಳಿಗಿರುವ ತಡೆಗಳು ಕಡಿಮೆ ಆಗುತ್ತಾ ಜಾಗತಿಕ ಮಟ್ಟದ ವಹಿವಾಟುಗಳಿಂದ ಸಿಗಬೇಕಾಗಿರುವ ಅನುಕೂಲಗಳಿನ್ನೂ ಕೊನೆಯಾಗಿಲ್ಲ. ಹೀಗಿರುವಾಗ ಮಂದಗತಿಯ ಜಾಗತಿಕ ವಹಿವಾಟುಗಳು ಚಿಂತೆಗೀಡುಮಾಡುತ್ತವೆ. ಅವುಗಳು ಮೊದಲಿನ ವೇಗವನ್ನು ಪಡೆಯಲು ಸಾದ್ಯವಿದೆ ಎಂದು ಹೇಳಬಹುದಾದರೂ, ಬೇರೆ ಬೇರೆ ನಾಡುಗಳಲ್ಲಿನ ಹಣಕಾಸಿನ ಸನ್ನಿವೇಶಗಳು ಮತ್ತು ತಮ್ಮ ಏಳಿಗೆಗೆ ಹೊರನಾಡುಗಳನ್ನು ಹೆಚ್ಚು ನೆಚ್ಚಬಾರದು ಎಂಬ ನಿಲುವುಗಳನ್ನು ಕೆಲ ನಾಡುಗಳು ತಾಳುತ್ತಿರುವುದರಿಂದ ಜಾಗತಿಕ ವಹಿವಾಟುಗಳು ಬಿರುಸುಗೊಳ್ಳಲು ತುಸು ಕಶ್ಟವೇ ಆಗುತ್ತದೆ.

( ಮಾಹಿತಿ ಸೆಲೆ : economist.com)

(ಚಿತ್ರ ಸೆಲೆ : cosmoindia.biz )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.