‘ಕೂಡಣದ ಹೊಸಜಂಬಾರಿಕೆ’ ಇದೇಕೆ ಬೇಕು?

ವಿಜಯಮಹಾಂತೇಶ ಮುಜಗೊಂಡ.how-to-write-pic

ಹಿಂದಿನ ಓದಿನಲ್ಲಿ ಕೂಡಣದ ಹೊಸಜಂಬಾರಿಕೆ(social entrepreneurship)ಯ ಹಳಮೆ, ಬೆಳೆದು ಬಂದ ಬಗೆ ಮತ್ತು ಇತ್ತೀಚಿನ ದಿನಗಳಲ್ಲಿ ಅದರ ವಾಡಿಕೆಯ ಕುರಿತು ತಿಳಿದಿರುವೆವು. ಯಾವುದೇ ಒಂದು ಕೆಲಸ ಮಾಡಬೇಕಾದರೆ ನಾವು ಅದನ್ನು ಏಕೆ ಮಾಡಬೇಕು? ಅದರಿಂದಾಗುವ ಲಾಬ ನಶ್ಟಗಳು ಏನು? ಎಂಬ ಲೆಕ್ಕಾಚಾರವನ್ನು ನಾವು ಮಾಡುತ್ತೇವೆ. ಇದು ಕೂಡಣದ ಹೊಸಜಂಬಾರಿಕೆ ವಿಶಯದಲ್ಲಿ ಹೊರತೇನಲ್ಲ. ಕೂಡಣದ ಹೊಸಜಂಬಾರಿಕೆಯು ಇಂದಿನ ಇಡಿನೆಲಗೊಳಿಸುವಿಕೆ(globalization)ಯ ದಿನಗಳಲ್ಲಿ ಇಡಿನೆಲದ ತೊಡಕು(global challenges)ಗಳನ್ನು ಹೇಗೆ ಮೆಟ್ಟಿನಿಲ್ಲಬಲ್ಲುದು? ಎಂಬ ಪ್ರಶ್ನೆ ಎದುರಾಗುತ್ತದೆ. ಹಾಗೆಯೇ ಅದಕ್ಕೆ ತಕ್ಕ ಉತ್ತರವೂ ಇದೆ.

ನಾವಿರುವ ಈ ಬೂಮಿಯ ಮೇಲೆ ಎಶ್ಟು ತೊಡಕುಗಳಿವೆ ಎನ್ನುವುದು ಎಣಿಕೆಗೆ ಸಿಗದ ಮಾತು. ಒಂದೆಡೆ ಮಂದಿಗೆ ಮಯ್ಯೊಳಿತಿನ(health) ತೊಡಕಾದರೆ ಇನ್ನೊಂದೆಡೆ ಆಹಾರದ ಕೊರತೆ, ಮತ್ತೊಂದೆಡೆ ಕಲಿಕೆಯ ಗುಣಮಟ್ಟದ ಚಿಂತೆಯಾದರೆ ಮಗದೊಂದೆಡೆ ಬದುಕು ನಡೆಸಲು ಬೇಕಾಗುವ ಮೂಲ ಸೌಕರ‍್ಯಗಳೇ ಇಲ್ಲ. ಇವೆಲ್ಲವುಗಳನ್ನು ತೊಡೆದುಹಾಕಿ ನೆಮ್ಮದಿಯ ಬದುಕು ಯಾರಿಗೆ ತಾನೆ ಬೇಡ? ಅಲ್ಲದೇ ಎಲ್ಲ ದೇಶ, ಜನಾಂಗ, ಬಾಶಿಕ ಮಂದಿಯ ಬಾಳಬಗೆಯ ಮಟ್ಟವನ್ನು ಬೆಳೆಸಿ, ಬಡವ ಬಲ್ಲಿದರೆನ್ನದೆ ಎಲ್ಲರ ನಡುವಿನ ಅಂತರ ಕಡಿಮೆಗೊಳಿಸುವುದೇ ಅಲ್ಲವೇ ನಿಜವಾದ ಬೆಳವಣಿಗೆ? ಆದರೆ ಬೂಮಿಯ ಹಲವೆಡೆ(ಹೆಚ್ಚೂ ಕಡಿಮೆ ಎಲ್ಲಕಡೆ) ಇರುವ ಈ ತೊಡಕುಗಳಿಗೆ ಒಂದೇ ಒಂದು ಬಗೆಹರಿಕೆ ಸಾಲದು.

ಈ ಹಿಂದೆಯೇ ನಾವು ತಿಳಿದಿರುವಂತೆ ಕೂಡಣದ ಹೊಸಜಂಬಾರಿಕೆಯು ಕೂಡಣದ ತೊಡಕುಗಳನ್ನು ನಿವಾರಿಸುವ ಬಗೆಯಾಗಿದೆ. ಹಲವು ಕೂಡಣಗಳು ಸೇರಿ ಊರು, ಹಲವು ಊರುಗಳು ಸೇರಿ ನಾಡು, ಹಲವು ನಾಡುಗಳು ಸೇರಿ ಜಗತ್ತು ಇರುವಂತೆ, ಜಾಗತಿಕ ತೊಡಕುಗಳು ಕೂಡ ಸಣ್ಣ ಸಣ್ಣ ತೊಡಕುಗಳು ಸೇರಿರುವ ದೊಡ್ಡ ಗಂಟಾಗಿದೆ. ಆದರೆ ಎಲ್ಲವನ್ನೂ ಒಂದು ಕಟ್ಟಾಗಿ ನೋಡುವುದೂ ಅಶ್ಟೇ ತೊಡಕಿನ ವಿಶಯವಾಗಿದೆ. ಏಕೆಂದರೆ ಹಲವು ಹಿನ್ನೆಲೆ ಹೊಂದಿರುವ ಜನ, ಬೇರೆ ಬೇರೆ ಬಾಶಿಕ ಜನಾಂಗಗಳ ತೊಡಕುಗಳು, ಇವನ್ನೆಲ್ಲಾ ಮತ್ತೊಬ್ಬರು(ಆ ಕೂಡಣಕ್ಕೆ ನೇರವಾದ ನಂಟನ್ನು ಹೊಂದಿರದವರು ಇಲ್ಲವೇ ಹೊರಗಿನವರು) ಬಿಡಿಸುವುದು ಅಶ್ಟು ಸರಳವಲ್ಲ. ಹಾಗಾಗಿ ಜಾಗತಿಕ ತೊಡಕುಗಳ ಈ ದೊಡ್ಡ ಗಂಟನ್ನು ಬಿಡಿಸಲು ಒಂದೇ ಒಂದು ಮದ್ದು ಒಗ್ಗದು. ಎತ್ತುಗೆಗೆ ಆಹಾರದ ಕೊರತೆ ಹಲವೆಡೆ ಇರುವ ಒಂದು ತೊಡಕಾಗಿದೆ. ಒಂದೇ ಒಂದು ಹೊಳಹಿನಿಂದ ಎಲ್ಲಾ ಕಡೆಯ ಊಟದ ಕೊರತೆಯನ್ನು ಬಗೆಹರಿಸಲು ಆಗದು. ಏಕೆಂದರೆ ಪಡುವಣ ಆಪ್ರಿಕಾದ ನೈಜೀರಿಯದಂತಹ ದೇಶದಲ್ಲಿ ಅಲ್ಲಿನ ಜನರಿಗೆ ಸಾಕಾಗುವಶ್ಟು ಆಹಾರವನ್ನು ಬೆಳೆಯುವುದು ಸಾದ್ಯವಾಗುತ್ತಿಲ್ಲ. ಅಲ್ಲದೆ ಹೊರಗಿನಿಂದ ಹೆಚ್ಚು ಬೆಲೆಗೆ ತರಿಸಲೂ ಆಗದು. ಹೀಗಾಗಿ ಅಲ್ಲಿ ಆರಯ್ಕೆಗೇಡು(malnutrition) ಸಾಮಾನ್ಯವಾಗಿದೆ. ಇದೇ ತೊಡಕನ್ನು ನಮ್ಮ ದೇಶದಲ್ಲಿ ನೋಡಿದರೆ ಬೇರೆಯದೇ ಆದ ನೋಟ ಕಾಣಸಿಗುತ್ತದೆ. ಒಂದು ಕಡೆ ಅತಿ ಬಡವರು ಆಹಾರವಿಲ್ಲದೆ ತೊಂದರೆಗೆ ಒಳಗಾಗಿದ್ದಾರೆ. ಮತ್ತೊಂದೆಡೆ ಆಹಾರ ಪೋಲಾಗುತ್ತಿರುವುದು ಇಂದಿನ ಒಂದು ಕಳಕಳಿಯ ಮಾತು. ಇದಕ್ಕಾಗಿಯೇ ನಮ್ಮ ದೇಶದಲ್ಲಿ ಮತ್ತು ನೈಜೀರಿಯದಂತಹ ದೇಶಗಳಲ್ಲಿ ಒಂದೇ ಬಗೆಯ ಬಗೆಹರಿಕೆ ಒಗ್ಗದು.

ಸಣ್ಣ ಹಿಡುವಳಿದಾರರಾಗಿರುವ ನೈಜೀರಿಯದಲ್ಲಿನ ರೈತರು ಸಾಮಾನ್ಯವಾಗಿ ತಮಗೆ ಬೇಕಾದಶ್ಟನ್ನು ಮಾತ್ರ ಬೆಳೆಯುತ್ತಾರೆ. ಆಹಾರದ ಕೊರತೆಯ ತೊಡಕನ್ನು ಬಗೆಹರಿಸಲು ಅಲ್ಲಿನ ರೈತರನ್ನು ಕೊಡುಕೊಳ್ಳುವ(commercial) ಬೆಳೆಗಾರರನ್ನಾಗಿ ಮಾಡಲು ಹುರಿದುಂಬಿಸಲಾಗುತ್ತಿದೆ. ಇದರಿಂದ ಅಲ್ಲಿನ ಆಹಾರದ ಕೊರತೆಯನ್ನು ನೀಗಿಸಬಹುದೇನೋ ಎಂಬ ನಂಬಿಕೆ ಇದೆ. ಇನ್ನು ನಮ್ಮ ದೇಶದಲ್ಲಿ ಪೋಲಾಗುತ್ತಿರುವ ಆಹಾರವನ್ನು ಸರಿಯಾದ ಮಂದಿಗೆ ತಲುಪಿಸುವ ಪ್ರಯತ್ನ ಹಲವು ಕೂಟಗಳಿಂದ ನಡೆಯುತ್ತಿದೆ. ಈ ಕೆಲಸಗಳು ಆಗುತ್ತಿರುವುದು ಹಲವು ಕೂಡಣದ ಹೊಸಜಂಬಾರಿಕೆಗಳ ನೆರವಿನಿಂದ.

ಹೀಗೆ ತೊಡಕುಗಳ ಅರಿವು ಮತ್ತು ಸ್ತಳೀಯ ಸೊಮ್ಮುಗಳು ಸರಳವಾಗಿ ಸಿಗುವುದು ಅಲ್ಲಲ್ಲಿನ ತೊಡಕುಗಳ ಬಗೆಹರಿಕೆಗೆ ಅತಿ ದೊಡ್ಡ ಕೊಡುಗೆ ಎನ್ನಬಹುದು. ಇದು ಸ್ತಳೀಯ ಜನರಿಗೆ ಕೆಲಸವನ್ನು ಕೊಡುವುದು, ಹಾಗು ಅವರ ಬಾಳಬಗೆಯ ಏಳಿಗೆಗೆ ಪೂರಕವಾದದ್ದು. ಹೀಗೆ ಕೂಡಣದ ಹೊಸಜಂಬಾರಿಕೆಯು ಸ್ತಳೀಯರ ಹೆಚ್ಚಿನ ಕೂಡ್ಗೊಳ್ಳುವಿಯಿಂದ ಅವರದೇ ಆದ ತೊಡಕುಗಳನ್ನು ಸರಳವಾಗಿ ಬಿಡಿಸಲು ನೆರವಾಗುತ್ತದೆ. ಎಲ್ಲರಿಗೂ ಒಂದೇ ಪರಿಹಾರ ಒಗ್ಗದಿರುವ ಕಡೆ ಕೂಡಣದ ಹೊಸಜಂಬಾರಿಕೆಯು ಹೆಚ್ಚು ಪರಿಣಾಮಕಾರಿಯಾಗಿದೆ.

(ಚಿತ್ರಸೆಲೆ: learnhowtorap)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: