ಕಲಬುರಗಿ ನಗರದ ಕಲಿಕೆಯ ಹರವು – ಕಿರುಪರಿಚಯ

– ನಾಗರಾಜ್ ಬದ್ರಾ.

ಕಲಬುರಗಿ ನಗರವು ಕೆಲವು ವರ‍್ಶಗಳಿಂದ ಎಲ್ಲಾ ವಿಬಾಗಗಳಲ್ಲಿ ವೇಗವಾಗಿ ಏಳಿಗೆ ಹೊಂದುತ್ತಿದೆ. ಕೆಲವೇ ವರ‍್ಶಗಳಲ್ಲಿ ಕಲಬುರಗಿ ನಗರವು ಕಲ್ಯಾಣ ಕರ‍್ನಾಟಕ ಬಾಗದ ಕಲಿಕೆಯ ಕೇಂದ್ರವಾಗಿ ಮಾರ‍್ಪಾಟುಗೊಂಡಿದೆ. ಕಲ್ಯಾಣ ಕರ‍್ನಾಟಕ ಬಾಗದ ಜಿಲ್ಲೆಗಳಿಂದ ಹಾಗೂ ನಾಡಿನ ವಿವಿದ ಬಾಗಗಳಿಂದ ವಿದ್ಯಾರ‍್ತಿಗಳು ಓದಿಗಾಗಿ ಇಲ್ಲಿಗೆ ವಲಸೆ ಬರುತ್ತಿದ್ದಾರೆ.

ಕಲಬುರಗಿ ನಗರದಲ್ಲಿ ಒಟ್ಟು ಮೂರು ವಿಶ್ವವಿದ್ಯಾಲಯಗಳಿವೆ. ಅದರಲ್ಲಿ ಎರಡು ಸರಕಾರಿ ವಿಶ್ವವಿದ್ಯಾಲಯಗಳು ಮತ್ತು ಒಂದು ಕಾಸಗಿ ವಿಶ್ವವಿದ್ಯಾಲಯ.
1) ಗುಲಬರ‍್ಗಾ ವಿಶ್ವವಿದ್ಯಾಲಯ
2) ಸೆಂಟ್ರಲ್ ಯುನಿವರ‍್ಸಿಟಿ ಕರ‍್ನಾಟಕ
3) ಶರಣಬಸವೆಶ್ವರ ವಿದ್ಯಾವರ‍್ದಕ ಸಂಗದ ಕಾಸಗಿ ವಿಶ್ವವಿದ್ಯಾಲಯ

ಇಲ್ಲಿರುವ ಇತರ ಕಲಿಕೆಯ ಸಂಸ್ತೆಗಳು:
– 4 ವೈದ್ಯಕೀಯ ಕಾಲೇಜುಗಳಿವೆ. ಅದರಲ್ಲಿ 2 ಸರಕಾರಿ ಹಾಗೂ 2 ಕಾಸಗಿ ಕಾಲೇಜುಗಳು.
– 6 ಇಂಜಿನಿಯರಿಂಗ್ ಕಾಲೇಜುಗಳಿವೆ. ಎಲ್ಲಾ ಆರು ಕಾಲೇಜುಗಳು ಕಾಸಗಿಯಾಗಿವೆ.
– ನಮ್ಮ ರಾಜ್ಯದ ಹೆಮ್ಮೆಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಬಾಗೀಯ ಕಚೇರಿಯನ್ನು ಹೊಂದಿದೆ.
– ಕರ‍್ನಾಟಕ – ಜರ‍್ಮನಿ ಮಲ್ಟಿ ಸ್ಕಿಲ್ಲ್ ಡೆವಲಪಮೆಂಟ್ ಕೇಂದ್ರ ಹಾಗೂ ಅಗ್ರಿಕಲ್ಜರಲ್ ಕಾಲೇಜನ್ನು ಹೊಂದಿದೆ.
– ಕಲಬುರಗಿ ನಗರದಲ್ಲಿಯೇ ಸುಮಾರು 35 ಪದವಿ ಪೂರ‍್ವ ಕಾಲೇಜುಗಳು, 20 ಪದವಿ ಕಾಲೇಜುಗಳು, 35 ಡಿ.ಎಡ್. ಮತ್ತು ಬಿ.ಎಡ್. ಕಾಲೇಜುಗಳು ಹಾಗು ಸುಮಾರು 30 ಪ್ರತಿಶ್ಟಿತ ಕಾಸಗಿ ಶಾಲೆಗಳಿವೆ.

ಗುಲಬರ‍್ಗಾ ವಿಶ್ವವಿದ್ಯಾಲಯ:

Kalburig1

ಈ ವಿಶ್ವವಿದ್ಯಾಲಯವನ್ನು 1980 ರಲ್ಲಿ ಸುಮಾರು 860 ಎಕರೆ ಪ್ರದೇಶದಲ್ಲಿ ಕಟ್ಟಲಾಗಿದೆ. ಈ ವಿಶ್ವವಿದ್ಯಾಲಯದ ಗೋಶ ವಾಕ್ಯ “ವಿದ್ಯೇಯೆ ಅಮ್ರುತ” ಹಾಗೂ ಚಿಹ್ನೆ ಹಂಪಿಯ ಐತಿಹಾಸಿಕ ಕಲ್ಲಿನ ರತವಾಗಿದೆ. ವಿಶ್ವವಿದ್ಯಾಲಯವು 38 ಸ್ನಾತಕೋತ್ತರ ವಿಬಾಗಗಳನ್ನು ಹಾಗೂ 4 ಸ್ನಾತಕೋತ್ತರ ಸ್ಟಡಿ ಸೆಂಟರ್‍ಗಳನ್ನು ಹೊಂದಿದೆ. ಇದರ ಅದೀನದಲ್ಲಿ ಕಲಬುರಗಿ, ಬೀದರ, ರಾಯಚೂರು, ಯಾದಗಿರಿ ಜಿಲ್ಲೆಯ ಕಾಲೇಜುಗಳು ಬರುತ್ತವೆ. ಮೊದಲು ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಕಾಲೇಜುಗಳು ಈ ವಿಶ್ವವಿದ್ಯಾಲಯದ ಅದೀನದಲ್ಲಿ ಬರುತ್ತಿದ್ದವು. ಆದರೆ ಬಳ್ಳಾರಿಯಲ್ಲಿ ವಿಜಯನಗರ ಕ್ರುಶ್ಣದೇವರಾಯ ವಿಶ್ವವಿದ್ಯಾಲಯವು ಸ್ತಾಪನೆಯಾದ ಮೇಲೆ ಎರಡು ಜಿಲ್ಲೆಗಳ ಕಾಲೇಜುಗಳನ್ನು ಆ ವಿಶ್ವವಿದ್ಯಾಲಯಕ್ಕೆ ಸೇರಿಸಲಾಯಿತು. ವಿಶ್ವವಿದ್ಯಾಲಯದಲ್ಲಿ ಬೋದನಾ ವಿಬಾಗದಲ್ಲಿ 160 ಸಿಬ್ಬಂದಿಗಳನ್ನು, ತಾಂತ್ರಿಕ ಮತ್ತು ತಾಂತ್ರಿಕೇತರ ವಿಬಾಗದಲ್ಲಿ 700 ಸಿಬ್ಬಂದಿಗಳನ್ನು ಹೊಂದಿದೆ. ಬೀದರ್, ರಾಯಚೂರು ಮತ್ತು ಬಸವಕಲ್ಯಾಣದಲ್ಲಿ ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿದೆ.

ಸೆಂಟ್ರಲ್ ಯುನಿವರ‍್ಸಿಟಿ ಕರ‍್ನಾಟಕ:

Kalburgi2

ಕಲಬುರಗಿ ನಗರದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಕಡಗಂಚಿ ಗ್ರಾಮದ ಹತ್ತಿರ 654 ಎಕರೆ ಪ್ರದೇಶದಲ್ಲಿ 2009 ರಲ್ಲಿ ಸೆಂಟ್ರಲ್ ಯುನಿವರ‍್ಸಿಟಿಯನ್ನು ಸ್ತಾಪಿಸಲಾಯಿತು. ಇದು ನಮ್ಮ ರಾಜ್ಯದಲ್ಲಿ ಸ್ತಾಪಿಸಲಾದ ಮೊದಲ ಸೆಂಟ್ರಲ್ ಯುನಿವರ‍್ಸಿಟಿಯಾಗಿದೆ. ಇದು 16 ವಿಬಾಗಗಳು, 9 ಡಿಗ್ರಿ ಪ್ರೋಗ್ರಾಂಗಳನ್ನು, 15 ಸ್ನಾತಕೋತ್ತರ ಪ್ರೋಗ್ರಾಂಗಳನ್ನು ಹಾಗೂ 16 ರಿಸರ‍್ಚ್ ಪ್ರೋಗ್ರಾಂಗಳನ್ನು ಒಳಗೊಂಡಿದೆ. ಈ ವಿಶ್ವವಿದ್ಯಾಲಯವು ಕಲೆ, ವಿಜ್ನಾನ, ವಾಣಿಜ್ಯ, ವ್ಯವಹಾರ ನಿರ‍್ವಹಣೆ ಹಾಗೂ ಇಂಜಿನಿಯರಿಂಗ್ ವಿಬಾಗಗಳಲ್ಲಿ ಕೋರ‍್ಸ್ ಗಳನ್ನು ಹಾಗೂ 16 ಸಂಶೋದನಾ ಕಾರ‍್ಯಕ್ರಮಗಳನ್ನು ಪ್ರಾರಂಬಿಸಿದೆ. ಈ ವಿಶ್ವವಿದ್ಯಾಲಯದ ಚಿಹ್ನೆ ಬಾಳ್ಮೆಯ ಮರ (Tree of life). ಚಿಹ್ನೆಯ ಕೆಳಗೆ ಒಂದು ವಿಗ್ರಹವಿದೆ, ಅದು ವಿದ್ಯಾರ‍್ತಿಗಳು ತಮ್ಮ ಜೀವನದ ಗುರಿಯನ್ನು ಅರಿವಿನ ಮೂಲಕ ತಲುಪಲು ಪ್ರಯತ್ನಿಸುವುದನ್ನು ಬಿಂಬಿಸುತ್ತದೆ.

ಈ ವಿಶ್ವವಿದ್ಯಾಲಯದ ಮುಕ್ಯ ಉದ್ದೇಶವೆಂದರೆ ವಿದ್ಯಾರ‍್ತಿಗಳಿಗೆ ಪದವಿ, ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಕಲಿಕೆ, ಸಂಶೋದನೆ, ಚಳಕ ತರಬೇತಿಯನ್ನು ನೀಡುವುದಾಗಿದೆ. ಬಾರತ ಸರಕಾರದ ಯು.ಜಿ.ಸಿ ಯ 11 ನೇ ಯೋಜನೆ ಅಡಿಯಲ್ಲಿ ದೇಶದ ಎಲ್ಲಾ ಬಾಗಗಳಿಗೆ ನ್ಯಾಯ ಒದಗಿಸುವ ಹಾಗೂ ಕಲಿಕೆಯಲ್ಲಿ ಹಿಂದುಳಿದ ಜಿಲ್ಲೆಗಳ ಜನರಿಗೆ ಒಳ್ಳೆಯ ಉನ್ನತ ಕಲಿಕೆಯನ್ನು ನೀಡುವ ನಿಟ್ಟಿನಲ್ಲಿ 16 ಸೆಂಟ್ರಲ್ ಯುನಿವರ‍್ಸಿಟಿಗಳನ್ನು ದೇಶದ ವಿವಿದ ಬಾಗಗಳಲ್ಲಿ ಸ್ತಾಪಿಸಲಾಯಿತು. ಅದರಲ್ಲಿ ಇದು ಒಂದಾಗಿದ್ದು, ಅವುಗಳಲ್ಲಿ ಅತ್ಯಂತ ವೇಗವಾಗಿ ಶಾಶ್ವತ ವಿಶ್ವವಿದ್ಯಾಲಯದ ಆವರಣವನ್ನು ನಿರ‍್ಮಾಣ ಮಾಡಿಕೊಂಡ ವಿಶ್ವವಿದ್ಯಾಲಯ ಎಂಬ ಕ್ಯಾತಿ ಪಡೆದಿದೆ.

ಶರಣಬಸವೇಶ್ವರ ವಿದ್ಯಾವರ‍್ದಕ ಸಂಗ:

kalburgi3

ಶರಣಬಸವೇಶ್ವರ ಸಂಸ್ತಾನದ 8 ನೇ ಪೀಟಾದಿಪತಿ ಶ್ರೀ ಪೂಜ್ಯ ಡಾ|| ಶರಣಬಸವೇಶ್ವರ ಅಪ್ಪಾ ಅವರು ಕಲಬುರಗಿ ನಗರದಲ್ಲಿ ಕಲಿಕೆಯ ಕ್ರಾಂತಿಯನ್ನೇ ಹುಟ್ಟುಹಾಕಿದರು. ನವದೆಹಲಿಯ ಸಂಸತ್ ಬವನದ ಆವರಣದಲ್ಲಿ ವಿಶ್ವಗುರು, ಜಗಜ್ಯೋತಿ ಬಸವೇಶ್ವರರ ಕಂಚಿನ ಪ್ರತಿಮೆ ಪ್ರತಿಶ್ಟಾಪಿಸಿದ ರೂವಾರಿಯಾಗಿದ್ದರು. ಅವರ ಆಡಳಿತದಲ್ಲಿನ ಚಾಣಾಕ್ಶತನದಿಂದ ಅವರ ಅದಿಕಾರದ ಅವದಿಯಲ್ಲಿ ಈ ಸಂಸ್ತೆಯು ತುಂಬಾ ಎತ್ತರಕ್ಕೆ ಬೆಳೆಯಿತು. ಇಂದು ಈ ಸಂಸ್ತೆಯು 77 ಕಲಿಮನೆಗಳನ್ನು ಹೊಂದಿದೆ. ಅವುಗಳಲ್ಲಿ ಶರಣಬಸವೇಶ್ವರ ಪಬ್ಲಿಕ್ ಕಲಿಮನೆಯು ದೇಶದ ಅತ್ಯುತ್ತಮ 66 ಪಬ್ಲಿಕ್ ಕಲಿಮನೆಗಳಲ್ಲಿ ಒಂದಾಗಿದೆ.

ಹಾಗೆಯೇ ಇದು ನಾಲ್ಕು ಇಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿದೆ. ಅವುಗೆಳೆಂದರೆ;
1. ಅಪ್ಪಾ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜು: 2002 ರಲ್ಲಿ ಕಲುಬರಗಿ ನಗರದಲ್ಲಿ ಈ ಕಾಲೇಜನ್ನು ಸ್ತಾಪಿಸಲಾಯಿತು.
2. ಗೋದುತಾಯಿ ಮಹಿಳಾ ಇಂಜಿನಿಯರಿಂಗ್ ಕಾಲೇಜು: ಕಲ್ಯಾಣ ಕರ‍್ನಾಟಕ ಬಾಗದಲ್ಲಿಯೇ ಪ್ರತಮಬಾರಿಗೆ ವಿದ್ಯಾರ‍್ತಿನಿಯರಿಗೆಂದೇ ಗೋದುತಾಯಿ ಮಹಿಳಾ ಇಂಜಿನಿಯರಿಂಗ್ ಕಾಲೇಜನ್ನು ಸ್ತಾಪಿಸಲಾಯಿತು.
3. ವೀರಬದ್ರಪ್ಪ ನಿಸ್ಟಿ ಇಂಜಿನಿಯರಿಂಗ್ ಕಾಲೇಜು: 2010 ರಲ್ಲಿ ಕಲಬುರಗಿಯ ನೆರೆಯ ಜಿಲ್ಲೆಯಾದ ಯಾದಗಿರಿಯ ಸುರಪುರ ತಾಲ್ಲೂಕು ಕೇಂದ್ರದಲ್ಲಿ ಈ ಕಾಲೇಜನ್ನು ಸ್ತಾಪಿಸಲಾಗಿದೆ.
4. ಲಿಂಗರಾಜ ಅಪ್ಪಾ ಇಂಜಿನಿಯರಿಂಗ್ ಕಾಲೇಜು: 2011 ರಲ್ಲಿ ಕಲಬುರಗಿ ಜಿಲ್ಲೆಯ ನೆರೆಯ ಜಿಲ್ಲೆಯಾದ ಬೀದರ್ ನಗರದಲ್ಲಿ ಕಟ್ಟಲಾಗಿದೆ.
ಮಾಸ್ಟರ್ ಆಪ್ ಟೂರೀಸಂ, ಬ್ಯಾಚುಲರ್ ಆಪ್ ಟೂರೀಸಂ ಕಲಿಕೆಯನ್ನು ಪ್ರತಮಬಾರಿಗೆ ರಾಜ್ಯದ ಐದು ಕೇಂದ್ರಗಳಲ್ಲಿ 2007 ರಲ್ಲಿ ಪ್ರಾರಂಬಿಸಲಾಯಿತು. ಅವುಗಳಲ್ಲಿ ಒಂದನ್ನು ಕಲಬುರಗಿಯ ಬಸವೇಶ್ವರ ವಿದ್ಯಾವರ‍್ದಕ ಸಂಗದ ವತಿಯಿಂದ ಸ್ತಾಪಿಸಲಾಗಿದೆ. ಸುಮಾರು ಒಂದು ವರ‍್ಶದ ಹಿಂದೆ ರಾಜ್ಯ ಸರಕಾರವು ಈ ಸಂಸ್ತೆಗೆ ಕಾಸಗಿ ವಿಶ್ವವಿದ್ಯಾಲಯದ ಮಾನ್ಯತೆಯನ್ನು ನೀಡಿದೆ. ಈ ಸಂಸ್ತೆಯ ಬೆಳ್ಳಿಯ ಹಬ್ಬದ ಸಂಬ್ರಮಾಚರಣೆಯನ್ನು ಬಾರತದ ಮಾಜಿ ರಾಶ್ಟ್ರಪತಿಗಳಾದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ಉದ್ಗಾಟಿಸಿ ವಿದ್ಯಾರ‍್ತಿಗಳ ಜೊತೆಗೆ ಸಂವಾದವನ್ನು ನಡೆಸಿದ್ದರು.

ಹೈದ್ರಾಬಾದ್ ಕರ‍್ನಾಟಕ ಕಲಿಕೆಯ ಸಂಸ್ತೆ:
ಇದು ಕಲ್ಯಾಣ ಕರ‍್ನಾಟಕ ಬಾಗದ ಕೆಲವು ಜಿಲ್ಲೆಗಳಲ್ಲಿ ಕಲಿಕೆಯ ಕ್ರಾಂತಿಯನ್ನು ಮಾಡಿದ ಹೆಮ್ಮೆಯ ಸಂಸ್ತೆ. ಈ ಸಂಸ್ತೆಯನ್ನು 1958 ರಲ್ಲಿ ದಿವಂಗತ ಶ್ರೀ ಮಹದೇವಪ್ಪ ರಾಮಪೂರೆರವರು ಸ್ತಾಪಿಸಿದರು. ಈ ಬಾಗದ ವಿದ್ಯಾರ‍್ತಿಗಳಿಗೆ ವೈದ್ಯಕೀಯ, ಇಂಜಿನಿಯರಿಂಗ್, ಹಲ್ಲು(dental), ಹೋಮಿಯೋಪತಿ, ಆಯುರ‍್ವೇದ, ಕಾನೂನು, ವಿಜ್ನಾನ, ಕಲೆ ಹೀಗೆ ವಿವಿದ ವಿಬಾಗಗಳಲ್ಲಿ ಮೇಲ್ಮಟ್ಟದ ಕಲಿಕೆಯನ್ನು ನೀಡುವ ಉದ್ದೇಶದಿಂದ ಕಲಿಕೆಯ ಸಂಸ್ತೆಯನ್ನು ಪ್ರಾರಂಬಿಸಿದರು. ಹೈದ್ರಾಬಾದ್ ಕರ‍್ನಾಟಕ ಕಲಿಕೆಯ ಸಂಸ್ತೆಯು ಒಟ್ಟು 39 ಕಲಿಮನೆಗಳನ್ನು ಹೊಂದಿದೆ. ಅವುಗಳಲ್ಲಿ ಕಲಬುರಗಿ ನಗರದಲ್ಲಿ 30, ಬೀದರ್ ನಗರದಲ್ಲಿ 4, ರಾಯಚೂರು ನಗರದಲ್ಲಿ 3, ಬೆಂಗಳೂರು ನಗರದಲ್ಲಿ 2 ಕಲಿಮನೆಗಳನ್ನು ಹೊಂದಿದೆ. ಈ ಸಂಸ್ತೆಯ ವಿವಿದ ಕಾಲೇಜುಗಳು ವೈದ್ಯಕೀಯ, ಹಲ್ಲಿನ ವೈದ್ಯಕೀಯ, ಹೋಮಿಯೋಪತಿ, ಆರ‍್ಯವೇದ, ಇಂಜಿನಿಯರಿಂಗ್, ಪಾರ‍್ಮಸಿ, ವಿಜ್ನಾನ, ಕಲೆ, ವಾಣಿಜ್ಯ, ವ್ಯವಹಾರ ನಿರ‍್ವಹಣೆ, ಕಾನೂನು ಮುಂತಾದವುಗಳ ಕಲಿಕೆಯನ್ನು ನೀಡುತ್ತಿವೆ.

ಈ ಸಂಸ್ತೆಯು ಪ್ರಮುಕ ಕಲಿಮನೆಗಳು:
1. ಪೂಜ್ಯ ದೊಡ್ಡಪ್ಪ ಅಪ್ಪಾ ಇಂಜಿನಿಯರಿಂಗ ಕಾಲೇಜು: ಅಕ್ಟೋಬರ್ 15, 1958 ರಲ್ಲಿ ಅಂದಿನ ಬಾರತದ ರಾಶ್ಟ್ರಪತಿಗಳಾಗಿದ್ದ ಡಾ|| ಎಸ್. ರಾದಾಕ್ರಿಶ್ಣನ್ ಅವರು ಈ ಕಾಲೇಜಿನ ಸ್ತಾಪನೆಗೆ ಶೀಲಾನ್ಯಾಸವನ್ನು ಮಾಡಿದರು. ಸುಮಾರು 70 ಎಕರೆ ಜಮೀನಿನಲ್ಲಿ 1958 ರಲ್ಲಿ ಈ ಕಾಲೇಜನ್ನು ಸ್ತಾಪಿಸಲಾಯಿತು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜನಿಯರಿಂಗ್ ವಿಬಾಗವನ್ನು ಕರ‍್ನಾಟಕದ ರಾಜ್ಯದಲ್ಲಿ ಮೊದಲು ಪ್ರಾರಂಬಸಿದ ಕಾಲೇಜು ಇದಾಗಿದೆ. ಸಿರಾಮಿಕ್ ಹಾಗೂ ಸಿಮೆಂಟ್ ತಂತ್ರಜ್ನಾನ ವಿಬಾಗವನ್ನು ಹೊಂದಿರುವ ಕರ‍್ನಾಟಕ ರಾಜ್ಯದ ಏಕೈಕ ಹಾಗೂ ಬಾರತದಲ್ಲಿ ವಿಬಾಗವನ್ನು ಹೊಂದಿರುವ ಮೂರು ಕಾಲೇಜಗಳಲ್ಲಿ ಒಂದಾಗಿದೆ. ಈ ಕಾಲೇಜು 11 ಪದವಿ ವಿಬಾಗಗಳನ್ನು, 10 ಉನ್ನತ ವ್ಯಾಸಂಗ ವಿಬಾಗಗಳನ್ನು ಹಾಗೂ 7 ಸಂಶೋದನಾ ಕೇಂದ್ರಗಳನ್ನು ಹೊಂದಿದೆ.

2. ಮಹಾದೇವಪ್ಪ ರಾಮಪುರೆ ವೈದ್ಯಕೀಯ ಕಾಲೇಜು: ಮಹಾದೇವಪ್ಪ ರಾಮಪುರೆ ಅವರ ನೇತ್ರುತ್ವದಲ್ಲಿ 1963 ರಲ್ಲಿ ಈ ಕಾಸಗಿ ವೈದ್ಯಕೀಯ ಕಾಲೇಜನ್ನು ಕಟ್ಟಲಾಗಿದೆ. 1973 ರಲ್ಲಿ ಮಹಾದೇವಪ್ಪ ರಾಮಪುರೆಯವರು ನಿದನರಾದರು. ನಂತರ ವೈದ್ಯಕೀಯ ಕಾಲೇಜು ಸ್ತಾಪನೆಗಾಗಿ ಅವರ ಕೊಡುಗೆ ಹಾಗೂ ಶ್ರಮವನ್ನು ಗೌರವಿಸಲು ವೈದ್ಯಕೀಯ ಕಾಲೇಜಿಗೆ ಅವರ ಹೆಸರನ್ನು ಇಡಲಾಗಿದೆ.

3. ಹೋಮಿಯೋಪತಿ ವೈದ್ಯಕೀಯ ಕಾಲೇಜು: ಕರ‍್ನಾಟಕ ರಾಜ್ಯದ ಮೊದಲ ಹೋಮಿಯೋಪತಿ ವೈದ್ಯಕೀಯ ಕಾಲೇಜು ಹಾಗೂ ಹೋಮಿಯೋಪತಿ ಆಸ್ಪತ್ರೆ ಇದಾಗಿದೆ. 1980 ರಲ್ಲಿ ಈ ಕಾಲೇಜನ್ನು ಕಟ್ಟಲಾಗಿದೆ. 1999 ರಲ್ಲಿ ಕರ‍್ನಾಟಕ ಸರಕಾರದ ಸಹಬಾಗಿತ್ವದಲ್ಲಿ 25 ಹಾಸಿಗೆಗಳ ಆಯುರ‍್ವೇದ ಹಾಗೂ ಹೋಮಿಯೋಪತಿ ಚಿಕಿತ್ಸೆಯನ್ನು ಒಳಗೊಂಡ ಆಸ್ಪತ್ರೆಯನ್ನು ಸ್ತಾಪಿಸಲಾಗಿದೆ.

4. ನಿಜಲಿಂಗಪ್ಪ ಇಸ್ಟಿಟೂಟ್ ಆಪ್ ಡೆಂಟಲ್ ಸೈನ್ಸ್ ಅಂಡ್ ರಿಸರ‍್ಚ್: ಕಲ್ಯಾಣ ಕರ‍್ನಾಟಕದ ಬಾಗದ ಜನರಿಗೆ ಹಲ್ಲಿನ ವೈದ್ಯಕೀಯದ ಸೌಲಬ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ 1986 ರಲ್ಲಿ ಈ ಕಾಲೇಜನ್ನು ಕಟ್ಟಲಾಗಿದೆ. 1996 ರಲ್ಲಿ ಈ ಕಾಲೇಜಿಗೆ ಕರ‍್ನಾಟಕದ ಏಕೀಕರಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ ಕರ‍್ನಾಟಕ ರಾಜ್ಯದ ಮಾಜಿ ಮುಕ್ಯ ಮಂತ್ರಿಗಳಾದ ಶ್ರೀ ಎಸ್. ನಿಜಲಿಂಗಪ್ಪನವರ ಹೆಸರಿಡಲಾಗಿದೆ.

5. ಶೇಟ್ ಶಂಕರಲಾಲ್ ಲಾಹೋಟಿ ಕಾನೂನು ಕಾಲೇಜು: 1960 ರಲ್ಲಿ ಕಲಬುರಗಿ ನಗರದಲ್ಲಿ ಈ ಕಾನೂನು ಕಾಲೇಜನ್ನು ಆರಂಬಿಸಲಾಯಿತು.

(ಮಾಹಿತಿ ಮತ್ತು ಚಿತ್ರಸೆಲೆ: astrolika.com, collegedunia.com, cuk.ac.in, gulbargauniversity.kar.nic.in, hkesociety.org, mahadasoha.com, muktambikabbmbca.org, viredharappanisticollege.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. jyoti das says:

    good website nice information

ಅನಿಸಿಕೆ ಬರೆಯಿರಿ:

%d bloggers like this: