ಕಲೆ, ರಸ ಮತ್ತು ಬಾವನೆ

– ಬಸವರಾಜ್ ಕಂಟಿ.

OLYMPUS DIGITAL CAMERA

‘ಕಲೆ ಎಂದರೇನು?’ ಎಂದು ಹಿಂದಿನ ಬರಹದಲ್ಲಿ ನನ್ನ ಅನಿಸಿಕೆ ತಿಳಿಸಿದ್ದೆ.  “ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ”, ಎಂದು ಬೇಂದ್ರೆಯವರು ಬಾಳಗುಟ್ಟನ್ನು ಎಶ್ಟು ಸರಳವಾಗಿ ಹಿಡಿದಿಟ್ಟಿದ್ದಾರೆ! “ಕತೆಯಲ್ಲಿ ರಸ ಇರಬೇಕು” ಎಂದು ಬಯ್ರಪ್ಪನವರು ಸಂದರ‍್ಶನವೊಂದರಲ್ಲಿ ಹೇಳಿದ್ದನ್ನು ಕೇಳಿದ್ದೆ. ಬದುಕಿನ ಜಂಜಾಟದಲ್ಲಿ ನಮ್ಮ ಮನಸ್ಸಿನ ಒಳಗೆ ಬೇರೆ ಬೇರೆ ರೀತಿಯ ಬಾವನೆಗಳು ಮೂಡುತ್ತವೆ. ಈ ಬಾವನೆಗಳ ಮೂಲಕವೇ ನಮ್ಮನ್ನು ನಾವು ತೋರ‍್ಪಡಿಸಿಕೊಳ್ಳುತ್ತೇವೆ.

ಒಂದು ಕಲೆಯು ನಮ್ಮಲ್ಲಿ ಬಾವನೆಯನ್ನು ಮೂಡಿಸಿದರೆ ಅತವಾ ಒಂದು ಕಲೆಯಲ್ಲಿ ಅಡಗಿರುವ ಬಾವನೆಯನ್ನು ನಮ್ಮ ಮನಸ್ಸಿಗೆ ಮುಟ್ಟುವಂತೆ ಮಾಡಿದರೆ, ಆ ಬಾವನೆಗೆ ರಸ ಎನ್ನಬಹುದು. ಎತ್ತುಗೆಗೆ, ಸಿನಿಮಾ ನೋಡುತ್ತ ನಮಗೆ ದುಕ್ಕವಾಗಿ ನಾವು ಅಳಬಹುದು, ಆದರೆ ರವಿವರ‍್ಮನ “ದ್ರೌಪದಿಯ ಅವಮಾನ”ದ ತಿಟ್ಟವನ್ನು ನೋಡಿದಾಗ ಅಳು ಬರದೇ ಇದ್ದರೂ ದ್ರೌಪದಿಗೆ ಆದ ದುಕ್ಕವನ್ನು ನಾವು ಗುರುತಿಸಬಲ್ಲೆವು. ಹೀಗೆ ಒಂದು ಕಲೆಯಲ್ಲಿರುವ ರಸವನ್ನು ಗುರುತಿಸುವವರಿಗೆ ರಸಿಕ ಅತವಾ ಸಹ್ರುದಯಿ ಎನ್ನುತ್ತಾರೆ.

ರಸಕ್ಕೂ, ಬಾವನೆಗೂ ಇರುವ ಬೇರ‍್ಮೆಯಿದು: ಬದುಕಿನಲ್ಲಿ ಅನುದಿನ ನಡೆಯುವ ಗಟನೆಗಳು ನಮ್ಮಲ್ಲಿ ಬಾವನೆಗಳನ್ನು ಮೂಡಿಸಿದರೆ, ರಸವೆಂಬ ಬಾವನೆ ಮಾತ್ರ ಕಲೆಯ ಮೂಲಕವೇ ಹುಟ್ಟಬೇಕು. ಒಂದು ನಿರ‍್ದಿಶ್ಟ ರಸವನ್ನು ಮನಸ್ಸಿನಲ್ಲಿ ಹುಟ್ಟುಹಾಕಲೆಂದೇ ಇರುವ ಸಾದನಗಳು “ಕಲಾ ಪ್ರಕಾರ”ಗಳು ಅನಿಸಿಕೊಳ್ಳುತ್ತವೆ. ಸಂಗೀತ, ಸಾಹಿತ್ಯ, ನಾಟ್ಯ (ನಾಟಕ, ಸಿನಿಮಾ), ಚಿತ್ರಕಲೆ (ಶಿಲ್ಪಕಲೆ) ಇವುಗಳು ಮಾತ್ರ ಅಂತಹ ಕಲಾ ಪ್ರಕಾರಗಳು. ಹಾಗೆಯೇ, ರಸ ಮೂಡಿಸುವ ಎಲ್ಲವೂ ಕಲೆಯಾಗುವುದಿಲ್ಲ. ಎತ್ತುಗೆಗೆ ಮಳೆಯನ್ನು ಕಂಡು ಕೆಲವರಿಗೆ ಹಲವಾರು ಬಾವನೆ ಮೂಡಬಹುದು, ಆದರೆ ಆ ಬಾವನೆಗಳನ್ನು ಮೂಡಿಸಲೆಂದೇ ಮಳೆ ಬರುವದಿಲ್ಲ. ಹಾಗಾಗಿ ಮಳೆ ಕಲೆಯಲ್ಲ.

ಕಲೆ ಮತ್ತು ರಸದ ನಂಟನ್ನು ಮೊದಲಬಾರಿ ವಿವರವಾಗಿ ದಾಕಲಿಸಿದ್ದು ಬಹುಶಹ ಗ್ರೀಕ್ ತತ್ವಗ್ನಾನಿ ಅರಿಸ್ಟಾಟಲ್. ತನ್ನ ಪೊಯಿಟಿಕ್ಸ್ (Poetics) ಕ್ರುತಿಯಲ್ಲಿ, ಕಾರುಣ್ಯ ಬಾವನೆಗೆ ಹೆಚ್ಚು ಒತ್ತುಕೊಟ್ಟು ಅದನ್ನು ನಾಟಕಗಳಲ್ಲಿ ಬಳಸುವ ವಿದಾನಗಳನ್ನೂ ಬರೆದಿಟ್ಟಿದ್ದ. ಬಾರತದಲ್ಲಿ, ಬರತಮುನಿಯು ತನ್ನ ನಾಟ್ಯಶಾಸ್ತ್ರದಲ್ಲಿ ಎಂಟು ಬಗೆಯ ರಸಗಳನ್ನು ಬರೆದಿಟ್ಟಿದ್ದಾನೆ.

1. ಶ್ರುಂಗಾರ
2. ಹಾಸ್ಯ
3. ರುದ್ರ (ಕೋಪ)
4. ಕಾರುಣ್ಯ (ದುಕ್ಕ)
5. ಜಿಗುಪ್ಸೆ
6. ಬಯಾನಕ
7. ವೀರ
8. ಬೆರಗು

ನಾಟ್ಯಶಾಸ್ತ್ರ ಬೆಳೆದ ಹಾಗೆ ಇನ್ನೂ ಮೂರು-ನಾಲ್ಕು ರಸಗಳು ಈ ಪಟ್ಟಿಗೆ ಸೇರಿಕೊಂಡವು. ಈ ರಸಗಳು ನಾಟ್ಯಶಾಸ್ತ್ರದಲ್ಲಿ ಚರ‍್ಚಿತವಾದರೂ ಎಲ್ಲ ಕಲಾ ಬಗೆಗಳಿಗೆ ಹೊಂದಿಸಬಹುದು.

9. ಶಾಂತ
10. ವಾತ್ಸಲ್ಯ
11. ಬಕ್ತಿ
12. ಕುತೂಹಲ (ನಮ್ಮವರೇ ಆದ ಆರ್. ಗಣೇಶ್ ಈ ರಸ ಸೂಚಿಸಿದ್ದಾರೆ).

ಮೇಲೆ ತಿಳಿಸಿರುವ ರಸಗಳ ಪಟ್ಟಿಯೇ ಕೊನೆಯಲ್ಲ. ಕೆಲವೊಮ್ಮೆ ಇಂಪಾದ ಹಾಡು ಕೇಳುವಾಗ, ಅತವಾ ಕತೆಯೊಂದನ್ನು ಓದುವಾಗ, ಹಲವು ರಸಗಳು ಒಟ್ಟಿಗೆ ಮೂಡಿ ನಮ್ಮ ಮನಸ್ಸಿನ ಸ್ತಿತಿಯನ್ನು ಹೇಳಿಕೊಳ್ಳಲು ಆಗದಂತಹ ಬಾವನೆ ಮೂಡಬಹುದು. ಈಗಾಗಲೇ ಹೇಳಿದಹಾಗೆ, ಕಲಾ ಪ್ರಕಾರಗಳು ರಸವನ್ನು ಮೂಡಿಸುವ ಸಾದನಗಳೇ ಹೊರತು ಅವುಗಳೇ ಕಲೆ ಎನಿಸಿಕೊಳ್ಳುವದಿಲ್ಲ. ಎತ್ತುಗೆಗೆ, ಎತ್ತೆತ್ತಲೋ ಕಯ್-ಕಾಲು ಆಡಿಸುವ ನಾಟ್ಯವೊಂದರ ಹಿಂದಿರುವ ಬಾವನೆ ಗುರುತಿಸಲು ಆಗದಿದ್ದರೆ ಆ ನಾಟ್ಯ ಕಲೆ ಎನಿಸಿಕೊಳ್ಳುವದಿಲ್ಲ. ಇಶ್ಟಕ್ಕೂ ಕಲೆಯಲ್ಲಿ ರಸ ಇರಲೇ ಬೇಕೆನ್ನುವುದು ಯಾಕೆ?

ನಮ್ಮಂತೆಯೇ ಇರುವ, ಅಂದರೆ ನಮಗಿಶ್ಟವಾಗುವ ವಿಶಯಗಳು, ವಸ್ತುಗಳು, ಆಸಕ್ತಿಗಳು ಇನ್ನೊಬ್ಬರಿಗೂ ಇಶ್ಟವಾದರೆ (like minded) ಅವರು ನಮಗೆ ಸಹಜವಾಗಿ ಹತ್ತಿರವಾಗುತ್ತಾರೆ. ನಾವು ಪಟ್ಟ ಪಾಡುಗಳನ್ನು ಇನ್ನೊಬ್ಬರೂ ಅನುಬವಿಸಿದ್ದರೆ ಆಗಲೂ ಅವರು ನಮಗೆ ಹತ್ತಿರವಾಗುತ್ತಾರೆ. ಅವರ ಮತ್ತು ನಮ್ಮ ನಡುವೆ ಬಾವನಾತ್ಮಕ ನಂಟೊಂದು ಬೆಳೆಯುತ್ತದೆ. ಯಾರನ್ನಾದರೂ ನಿಮ್ಮೆಡೆಗೆ ಬಾವನಾತ್ಮಕವಾಗಿ ಸೆಳೆಯಬೇಕಿದ್ದರೆ ಅವರಂತೆಯೇ ನಡೆದುಕೊಳ್ಳಿ! ಇದೇ ಕಟ್ಟಳೆ ಕಲೆಗೂ ಅನ್ವಯಿಸಬಹುದು. ಕಲೆಯಲ್ಲಿ ರಸವಿದ್ದಾಗ ಅದು ಜನರನ್ನು ತನ್ನೆಡೆಗೆ ಸಹಜವಾಗಿ ಸೆಳೆಯುತ್ತದೆ, ಮತ್ತು ಅವರ ಮನಸ್ಸಿನಲ್ಲಿ ತುಂಬಾ ಹೊತ್ತು ನಿಲ್ಲುತ್ತದೆ. ಎಶ್ಟು ಹೊತ್ತು ನಿಲ್ಲುತ್ತದೆ ಎಂಬುದು ಕಲೆಯು ತೋರ‍್ಪಡಿಸುವ ರಸದ ಮಟ್ಟ ಮತ್ತು ರಸಿಕರ ಮನಸ್ಸಿನ ಸ್ತಿತಿಯನ್ನು ಅವಲಂಬಿಸಿರುತ್ತದೆ. ಹೀಗೆ ರಸಿಕರ ಮನಸ್ಸನ್ನು ಮುಟ್ಟಿದಾಗ ಆ ಕಲೆ ಸಾರ‍್ತಕವಾಗುತ್ತದೆ. ರಸಿಕರಿಲ್ಲದೆ ಕಲೆಯಿಲ್ಲ.

ಎಲ್ಲ ರಸಗಳು ಎಲ್ಲರನ್ನು ಸೆಳೆಯಬೇಕೆಂದೇನಿಲ್ಲ. ಕೆಲವು ರಸಗಳು ಕೆಲವರಿಗೆ ಇಶ್ಟವಾದರೆ, ಬೇರೆಯವು ಬೇರೆಯವರಿಗೆ ಇಶ್ಟವಾಗಬಹುದು. ಕೆಲವರಿಗೆ ಹಾಸ್ಯ ಇಶ್ಟವಾದರೆ, ಕೆಲವರಿಗೆ ಬಯಾನಕ, ಕುತೂಹಲ ಇಶ್ಟವಾಗಬಹುದು. ಸಾಮಾನ್ಯವಾಗಿ ಎಲ್ಲರನ್ನು, ಅದರಲ್ಲೂ ಗಂಡಸರನ್ನು ಸರಳವಾಗಿ ಸೆಳೆಯುವ ರಸ ಶ್ರುಂಗಾರರಸ. ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಅದನ್ನು ಹಿತವಾಗಿ ಬಳಸಿಕೊಂಡಿರುವುದನ್ನು ನಾವು ನೋಡಿರುತ್ತೇವೆ. ಅದೇ ರೀತಿ ಹೆಚ್ಚು ಜನರನ್ನು ಸುಲಬವಾಗಿ ಸೆಳೆಯಲು ಆ ರಸಕ್ಕೇ ಜೋತು ಬಿದ್ದಿರುವ ಕಲಾವಿದರನ್ನೂ ಕಾಣಬಹುದು.

(ಚಿತ್ರ ಸೆಲೆ: portraitfromaphoto.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 04/05/2016

    […] ಮೊದಲ ಮತ್ತು ಹಿಂದಿನ ಬರಹದಲ್ಲಿ ಎರಡು ಮಾತುಗಳನ್ನು […]

ಅನಿಸಿಕೆ ಬರೆಯಿರಿ: