ಬದುಕ ಬಂಡಿಯಲ್ಲಿ ಬಂದನ

– ಹರ‍್ಶಿತ್ ಮಂಜುನಾತ್.

love triangle

ಕೆಳ್ಳಳ್ಳಿ! ಮಲೆನಾಡ ಹಸಿರ ಸಿಂಗಾರವ್ವನ ಮಡಿಲಲ್ಲೊಂದು ಪುಟ್ಟ ಹಳ್ಳಿ. ಶಿವಣ್ಣ ಗವ್ಡ ಹಳಿಮನಿ ಆ ಊರಿನ ಸಿರಿವಂತರಲ್ಲೊಬ್ಬರು. ಅಂದು ಬಯಲುಸೀಮೆ ಕಡೆಯ ಹಳಿಮನೆ ಎಂಬ ಊರಿನಿಂದ ಕೆಲಸ ಅರಸಿ ಬಂದಿದ್ದ ಶಿವಣ್ಣ ಗವ್ಡ, ಇಂದು ಮಲೆನಾಡಿನಲ್ಲಿ ನೂರಯ್ವತ್ತು ಎಕರೆ ಕಾಪಿ ತೋಟದ ಒಡೆಯ. ಹೆಂಡತಿ, ಮಗ, ಮಗಳು,ಅಳಿಯ, ಸೊಸೆ, ಮೊಮ್ಮಕ್ಕಳ ಜೊತೆ ಚೆಂದದ ಕೂಡು ಕುಟುಂಬ.

ಬುವಿ, ಶಿವಣ್ಣ ಗವ್ಡರ ಮುದ್ದಿನ ಮೊಮ್ಮಗಳು. ಆ ಬೂಮಿಯಂತೆ ಚೆಲುವಿಗೆ ಒಲವಿಗೆ ತಾಳ್ಮೆಗೆ ಹಿರಿತನಕೆ ಸಿರಿತನಕೆ ಮತ್ತೊಂದು ಹೆಸರು ಈ ಬುವಿ. ಚೆಲುವೆಂದರೆ ಇವಳೇ ಇರಬೇಕು ಎನ್ನುವಶ್ಟರ ಮಟ್ಟಿಗೆ ಅವಳ ರೂಪರಾಶಿ. ಚುರುಕಿನ ನಡೆನುಡಿ, ಮುತ್ತೇ ನಾಚುವಂತೆ ನಾಜೂಕಾದ ನಗು, ಮನಮುಟ್ಟುವ ಮಾತುಕತೆ ಒಟ್ಟಿನಲ್ಲಿ ಮನೆಯವರಿಗೆಲ್ಲರಿಗೂ ಅಚ್ಚುಮೆಚ್ಚಿನ ಮಗಳು. ಆದರೂ ಬುವಿಗೆ ಮಾತ್ರ ಅಜ್ಜನ ಮೇಲೆ ತುಸು ಒಲವು ಜಾಸ್ತಿ. ಮೊಮ್ಮಗಳ ಪ್ರಾಯ ಹದಿನಾರು ಜಾರಿದರೂ, ಪುಟ್ಟ ಕಂದಮ್ಮನನ್ನು ಮುದ್ದಿಸುವಂತೆ ಅಜ್ಜನ ಮುದ್ದು ಕೊಂಚವೂ ಕಮ್ಮಿಯಾಗಿಲ್ಲ. ರಾತ್ರಿ ಅಜ್ಜಿಯ ಕಯ್ ತುತ್ತು ತಿಂದು ಅಜ್ಜನ ಎದೆಗೊರಗಿ ಮಲಗಿದರೇನೆ ನಿದ್ದೆ. ಬೆಳಗೆದ್ದು ಮೊದಲೊಮ್ಮೆ ಅಜ್ಜನ ಮೊಗ ನೋಡಿ ಹಣೆಗೊಂದು ಮುತ್ತಿಕ್ಕಿದ ಮೇಲೆಯೇ ದಿನದ ಶುರು. ಒಟ್ಟಿನಲ್ಲಿ ತಂದೆ ತಾಯಿಯ ಒಲವೂ ಸಾಟಿಯಿಲ್ಲ ಎನ್ನುವಶ್ಟರ ಮಟ್ಟಿಗೆ ಅಜ್ಜ ಮೊಮ್ಮಗಳ ಒಡನಾಟ.

ಅಂದು ಸಂಜೆ ಆರರ ಸುಮಾರು. ರವಿ ಕಡಲಂಚಲ್ಲಿ ಜಾರಿ ಶಶಿ ಮುಗಿಲಂಚಲ್ಲಿ ಮೂಡುವ ಹೊತ್ತು ಸನಿಹದಲ್ಲಿತ್ತು. ಇತ್ತ ಬುವಿ ಅಜ್ಜನ ಹೆಗಲಿಗೆ ಜೋತು ಬೀಳಿಕೊಂಡು ರಸ್ತೆಯ ಬದಿಯಲ್ಲಿ ಹೆಜ್ಜೆ ಹಾಕುತ್ತಿದ್ದರು. ಅಲ್ಲೇ ಮಾವಿನ ಮರದಡಿ ರವಿ-ಶಶಿ ಗೆಳೆಯರಿಬ್ಬರು ತಮ್ಮ ಮಾತಿನಲ್ಲಿ ಮುಳುಗಿದ್ದರು. ಚೆಲುವ ಗಣಿಯೊಂದು ರಸ್ತೆಯ ಬದಿಯಲ್ಲಿ ಕಂಡೊಡನೇ ಶಶಿ. “ಯಾರಿವಳು ಚೆಲುವೆ ? ರಂಬೆ ಊರ‍್ವಶಿಗೇ ಚೆಲುವ ಸಾಲ ಕೊಡುವಶ್ಟು ರೂಪರಾಶಿ ಹೊತ್ತ ಬೆಡಗಿ ಯಾರಿವಳು? ಎಂದುಕೊಳ್ಳುತ್ತಾ ಅದಾಗಲೇ ಆಕೆಗೆ ಸೋತಿದ್ದ. ಏನೇ ಆದರೂ ಬಿಸಿ ರಕ್ತದ ಹಸಿ ವಯಸ್ಸಿನ ಹುಡುಗರ ನೋಟಗಳು ತಾನಾಗಿಯೇ ಅವಳೆಡೆಗೆ ಬೀಳುವಂತಹ ಅಂದ ಅವಳದು. ಇನ್ನೊಂದೆಡೆ ಒಲವೆಡೆಗೆ ಸೋಲಿನ ಅನುಬವ ರವಿಗೂ ಆಗಿತ್ತು.

ಕಂಡವರೆಲ್ಲ ಕಲಿತವರೆಲ್ಲ
ಈ ಬುವಿಗೆ ಮನಸೋಲದವರಿಲ್ಲ
ಆ ಬೆಡಗ ಕುಲುಮೆ ಶಿವನೇ ಬಲ್ಲ
ಅವನೊಳಗಡಗಿ ನಿನ್ನೊಡಲಿಗಿಳಿದು
ಕರೆಯ ಕೊಟ್ಟಿದೆ ‘ನಿನಗೂ ಒಲವಾಗಿದೆ’

ಹೀಗೆ ಮೊದಲ ಬೇಟಿ ರವಿ ಶಶಿ ಎದೆಯಲ್ಲಿ ಒಲವಿನ ಬೀಜ ಬಿತ್ತುತ್ತದೆ. ಈ ಕಾರಣಕ್ಕೆ ದಿನನಿತ್ಯ ಬುವಿಯನ್ನು ಹುಡುಕಿಕೊಂಡು ಹೋಗುವುದು ಅವರಿಬ್ಬರ ಹೊಸ ಹವ್ಯಾಸವಾಗುತ್ತದೆ. ಕೆಲವು ಹವ್ಯಾಸಗಳು ಹೀಗೆ ಅನಿಸುತ್ತೆ ಒಮ್ಮೆ ಅವನ್ನು ನಾವು ಹಚ್ಚಿಕೊಂಡರೆ ಸಾಕು, ಚಟದಂತೆ ನಮ್ಮನ್ನು ಆವರಿಸಿಕೊಂಡು ಬಿಡುತ್ತವೆ. ನಾವು ಬಿಡಬೇಕೇಂದರೂ ಅವು ನಮ್ಮನ್ನು ಬಿಡವು! ಹೀಗೆ ಗೆಳೆಯರಿಬ್ಬರು ಬುವಿಯ ನಿತ್ಯ ನೋಡಹೋದರೂ, ಬೇರೆಯದಾಗೇ ಹೋಗುತ್ತಿದ್ದರು. ಇದನ್ನು ಒಬ್ಬರಿಗೊ ಹೇಳಿಕೊಂಡಿರಲೂ ಇಲ್ಲ. ಒಲವ ತೊಳಲಾಟದಲ್ಲಿ ಮಿಂದು ತಡವರಿಸದೆ ನಿಂತವರಿಲ್ಲ ನೋಡಿ, ಈ ತೊಳಲಾಟ ಬುವಿ ಎದೆಯಲ್ಲೂ ಒಲವರಳಲೊಂದು ಹಾದಿ ಮೂಡಿಸಿತ್ತು. ಬುವಿಗೆ ರವಿ ಹೆಚ್ಚು. ರವಿ ಶಶಿಗೆ ಬುವಿ ಅಚ್ಚುಮೆಚ್ಚು. ದಿನ ಕಳೆದಂತೆ ಒಲವ ಓಟ ಮೇಲಾಟವಾಯಿತು. ಈ ಮೇಲಾಟ ಆ ಮೂವರಲ್ಲೂ ಪೈಪೋಟಿಯೊಂದಕ್ಕೆ ಮುನ್ನುಡಿ ಎಂಬ ಅರಿವು ಯಾರಿಗೂ ಇರಲಿಲ್ಲ. ಒಟ್ಟಿನಲ್ಲಿ ಶಶಿ ಬುವಿಯ ಸುತ್ತ, ಬುವಿ ರವಿಯ ಸುತ್ತ ಸುತ್ತುವುದು ಸಹಜವೇ ತಾನೆ ?

ಕದನ ಕಡಿದು ಕಡಲ ಕೊರೆದು
ಕನಕಾಂಬರಿಯ ಕರವ ಪಿಡಿದು
ಕೆಂಡಸಂಪಿಗೆ ಕೆಂಪ ಕೇದಿಗೆ
ಕೊಡಲೆ ಕಿತ್ತು ಕುವರಿ ಕೆನ್ನೆಗೆ ?

ಈ ಬಯಕೆ ಹಾಗು ಒಲವು ಎಂಬುದು ಹೀಗೆಯೇ ನೋಡಿ. ಕೆಲವೊಮ್ಮೆ ಅವು ಬರುವುದಕ್ಕೆ ಕಾರಣಗಳೇ ಇರುವುದಿಲ್ಲ. ಹೇಳದೇ ಕೇಳದೇ ನಮ್ಮೊಳಗೆ ಆವರಿಸಿ ಆಡಿಸುವುದೇ ಅವೆರಡರ ಕಸುಬು. ಆದರೂ ಈ ಮೂವರ ನಡುವೆ ಒಂದೂ ಮಾತು ಅದಲು ಬದಲಾಗಿರುವುದಿಲ್ಲ. ಬರೆ ಕಣ್ಣೋಟಗಳೇ ಎಲ್ಲಕ್ಕೂ ಹೇಳ್ವಿ ಎಂಬಂತೆ ನಡೆಯಾಗಿತ್ತು. ಹೀಗೆ ಕೆಲದಿನಗಳ ಬಳಿಕ ತನ್ನ ಒಲವಿನ ಸಂಗತಿಯನ್ನು ರವಿಗೂ ಮೊದಲು ಶಶಿ ಬುವಿಯ ಬಳಿ ಬಿಚ್ಚಿಡುತ್ತಾನೆ. ಎದೆಯೊಳಗಣ ಒಲವು ಎದೆಬಡಿತವನ್ನು ಹೆಚ್ಚಾಗಿಸಿ “ನನ್ನೊಲವ ಒಡತಿಯಾಗಿ ಬರುವೆಯಾ” ಎಂದು ಅವಳನ್ನು ಕೇಳಿಕೊಳ್ಳುವ ಹಾಗೆ ಮಾಡಿತು. ಆದರೆ ಬುವಿ ಮಾತ್ರ ಏನೂ ಉತ್ತರ ಕೊಡದೆ ಮುಕ ಗಂಟು ಹಾಕಿಕೊಂಡು ಮನೆದಾರಿ ಹಿಡಿಯುತ್ತಾಳೆ. ಅಲ್ಲಿಗೆ ಶಶಿಯೊಲವಿಗೆ ಬುವಿಯ ಕರಿನೆರಳು ಬೀಳುತ್ತದೆ.

ಇಂದಿಗೆ ಶಶಿ ಬುವಿಯೊಲವನ್ನು ಬೇಡಿ ನಾಲ್ಕು ದಿವಸ, ಬುವಿಯು ಅವನೊಲವನ್ನು ಬೇಡವೆಂದು ಹೇಳಿ ಮೂರು ದಿವಸ. ಇತ್ತ ರವಿ ತನ್ನ ಒಡಲಲಿ ತುಂಬಿಕೊಂಡ ಒಲವನ್ನು ಬುವಿಗೆ ಹಂಚುವ ಕಾತರ. ಅತ್ತ ‘ನಿನ್ನೊಲವಲಿ ನನಗೊಂದು ಪಾಲು ಕೊಡು’ ಎಂದು ರವಿ ಕೇಳುವ ಬಯಕೆ ಬುವಿಯದ್ದು. ಈ ಎರಡು ಒಲವ ಜೋಡಿಗಳ ನಡುವೆ ಬದುಕೆ ಕಳೆದುಕೊಂಡೆನೆಂಬಂತೆ ಮವ್ನ ಶಶಿಯದು.

ಕೆಂಪು ಕುಸುಮವು ಕರದಿ ಕರಗಿ
ಕಂಪ ಕೊಡದೆ ಕವನ ಕೊರಗಿ
ಕಾಣದ ಕವಲೆಡೆಗೆ ಕರೆವುದೇಕೆ
ಕರೆ ಕೊಟ್ಟೊಲವು ಕಣ್ಣ ಕೂಡದೇಕೆ ?

ಇತ್ತ ತನ್ನ ಒಲವನ್ನು ಬುವಿಯ ಮುಂದಿಡುವ ಮೊದಲು ತನ್ನ ಗೆಳೆಯ ಶಶಿಯ ಬಳಿ ಹೇಳಿಕೊಳ್ಳುವ ಬಯಕೆ ಹೊತ್ತು ರವಿ ಬರುತ್ತಾನೆ. ಅದೇನೋ ಸಂತಸ, ಮೊಗದ ಮೇಲೆ ಮಿಂಚೋ ಮಂದಹಾಸ ಒಟ್ಟಿನಲ್ಲಿ ರವಿಯ ನಲಿವಿಗೆ ಪಾರವೇ ಇರಲಿಲ್ಲ. ಅಶ್ಟರಲ್ಲೇ ದಾರಿಯ ನಡುವೆ ರವಿಗೆ ಬುವಿ ಎದುರಾಗುತ್ತಾಳೆ. ಮನದಲ್ಲಿ ಹೇಳಲು ಏನೋ ಒಂದಿದ್ದರೂ, ಇಬ್ಬರಲ್ಲೂ ತುಸು ಅಂಜಿಕೆ. ಅಂದುಕೊಳ್ಳದೇ ಎದುರಾದ ಬಗೆಗೆ ಇಬ್ಬರೂ ಮಾತು ಮರೆತು ಮವ್ನಕ್ಕೆ ಶರಣಾಗಿದ್ದರು. ಅಶ್ಟಕ್ಕೂ ಮಾತನ್ನು ಎಲ್ಲಿಂದ ಮೊದಲಾಗಿಸುವುದೆಂಬುದೇ ಕೇಳ್ವಿ ಅವರಲ್ಲಿ. ಕೊನೆಗೂ ಮೌನಕೆ ಮಂಗಳಾರತಿ ಮಾಡಿ ಮಾತಿಗಿಳಿಯುತ್ತಾಳೆ ಬುವಿ.

“ರವಿ ನಿನಗೇನೋ ಹೇಳಬೇಕೆಂದಿದ್ದೇನೆ, ಹೇಗೆ ಹೇಳುವುದೆಂದು ತಿಳಿಯುತ್ತಿಲ್ಲ”.

“ನಿನಗೂ ಹೇಳಲು ನನ್ನಲ್ಲಿ ಏನೋ ಒಂದು ಸಂಗತಿ ಇದೆ” ಎಂದ ರವಿ.

“ಶಶಿ ನನ್ನ ಒಲವ ಬಯಸಿದ್ದಾನೆ. ಒಂದೆರಡು ದಿನದ ಹಿಂದೆ ನನ್ನಲ್ಲಿ ಹೇಳಿಕೊಂಡಿದ್ದ. ನನಗೆ ಏನು ಹೇಳುವುದೆಂದು ತೋಚದೆ ಬಂದು ಬಿಟ್ಟೆ” ಎಂದಳು ಬುವಿ.

ರವಿಯ ಕಣ್ಣಂಚಲ್ಲಿ ನೀರು ಜಿನುಗಿತು. “ತನ್ನ ಗೆಳೆಯ ಬಯಸಿದವಳನ್ನು ತಾನೇಗೆ ವರಿಸಲಿ ? ಅವಳೇನಿದ್ದರು ಅವನಿಗೆ” ಎಂದುಕೊಳ್ಳತ್ತಾ ಬೆನ್ನು ತಿರುಗಸಿ ಹೊರಟೇ ಬಿಟ್ಟ.

ಕನಸ ಕೂಡಿ ಕಾಯುವ ಕಾಯಿಲೆಗೆ
ಕವಿದ ಕಂಬನಿ ಕುಸುರಿ ಕೂಡಿತು
ಕಾಡುವ ಕೊರಗ ಕೂಗಿ ಕೇಳಿದೇಕೆ
ಕಾರಣವಿಲ್ಲದೆ ಕಣ್ಣ ಕಂಪನವೇಕೆ ?

ಅಶ್ಟರಲ್ಲಿ ಬುವಿ “ನಿನಗೆ ಹೇಳಲು ಮತ್ತೊಂದಿದೆ” ಎಂದಳು. ಕಣ್ಣೀರು ಒರೆಸುತ್ತಾ, ರವಿ ಮತ್ತೆ ಬುವಿಯತ್ತ ಮುಕ ಮಾಡಿ ತಲೆಯಾಡಿಸುತ್ತಾನೆ. ಮವ್ನ ಮುಂದುವರಿಯುತ್ತದೆ. ಆದರೂ ಆತನ ಕಣ್ ಸನ್ನೆಯಲ್ಲೇ ಮುಂದುವರಿಸಲು ಸಮ್ಮತಿ ನೀಡುತ್ತದೆ.

“ರವಿ ನನಗೆ ನೀನೆಂದರೆ ನಲಿವು. ನಿನ್ನೊಲವ ನನ್ನ ಬಾಳಿಗೆ ಎರೆದು ಸಂಗಾತಿಯಾಗುವೆಯಾ ?” ಎಂದೆನ್ನಲು ಬುವಿ ಅಣಿಯಾದಳು. ಆದರೂ ಮತ್ತೆ ಮಾತು ಬದಲಿಸಿ, “ನೀನೂ ಅದೇನೋ ಹೇಳ ಬೇಕೆಂದೆಯಲ್ಲ ಹೇಳು” ಎಂದಳು.

ರವಿಯು ಬಾರವಾದ ಮನದಿಂದ ಮೊದಲ ಸಲ ಅವಳೊಂದಿಗೆ ಮಾತಿಗಿಳಿದ. “ಅದೇನಿಲ್ಲ, ಶಶಿ ನಿಮ್ಮನ್ನು ತುಂಬಾನೆ ಮೆಚ್ಚಿದ್ದ. ಅದೇಕೋ ಒಂದೆರಡು ದಿನದಿಂದ ಸರಿಯಿಲ್ಲ. ನನ್ನಲ್ಲೂ ಹೇಳಿಕೊಂಡ. ದಯಮಾಡಿ ಅವನ ಒಲವನ್ನು ಒಪ್ಪಿಕೊಳ್ಳಿ” ಎಂದ ರವಿ.

ಬುವಿಗೆ ಏನು ಹೇಳುವುದೆಂದೇ ತೋಚದಾಯಿತು. ತನ್ನೊಲವ ಬಯಸಿ ಬರಬೇಕಿದ್ದವ ಇನ್ನೊಬ್ಬರ ಪರವಾಗಿ ಬಂದನಲ್ಲ ಎಂದು ಬುವಿ ಒಳಗೊಳಗೇ ಕುಸಿದಳು. ಮತ್ತೆ ಮವ್ನ ಮಾತ ಬಿಗಿಯಿತು. ಒಬ್ಬರಿಗೊಬ್ಬರು ತಮ್ಮೊಲವ ತಿಳಿಸದಾದರು. ಬುವಿಯು ಕಣ್ಣೀರಿಗೆ ಬೆಸೆದುಕೊಂಡಳು. ಮರು ಮಾತಾಡದೇ ಮನೆ ದಾರಿ ಹಿಡಿದಳು. ಇತ್ತ ಗೆಳೆಯನಿಗಾಗಿ ರವಿ ತನ್ನೊಲವ ಮರೆತು ತ್ಯಾಗಿಯಾದ. ಅತ್ತ ಇದೇನನ್ನೂ ತಿಳಿಯದ ಶಶಿ ಕಳೆದ ಒಲವಲ್ಲೇ ನೆನೆದೂ ನೆನೆದೂ ನೆನಪಲ್ಲೇ ಮಗ್ನನಾದ. ಬದುಕ ಬಂಡಿಯಲ್ಲಿ ಗೆಳೆತನ ಮತ್ತು ಒಲವ ಬಂದನದ ನಡುವೆ ನಡೆದ ಆಟಕ್ಕೆ ತೆರೆ ಹೇಗೆ ಬೀಳಲಿದೆಯೋ ಆ ನಾಳೆಗೇ ಗೊತ್ತು ನೋಡಿ.

ಇಲ್ಲೊಂದೇ ಹುಟ್ಟು
ಇಲ್ಲೊಂದೇ ಸಾವು
ಬದುಕ ಬಂಡಿಯೋಟ ನಡುವೆ
ಬಯಕೆ ಬಲಕೆ ಅಡಿಯಿಟ್ಟು
ಸಲುಹೆ ಮರುಕ ಬರಿ ನೋವು
ಅವರಿವರು ಪರರೆಂಬೆನೆ
ನಮ್ಮವರು ನಮಗಿಲ್ಲೆನೆ
ಗಾಲಿ ಇರದ ಬದುಕು ಕಾಲಿ ಕಾಲಿ
ಬದುಕ ಬಂಡಿಯೋಟದೊಳಗೆ

(ಚಿತ್ರ ಸೆಲೆ: blogdogearedpages.weebly.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: