ಪತ್ತೇದಾರಿ ಕತೆ: ಪಾರ‍್ಕಿನಲ್ಲಿ ಕೊಲೆ(ಕೊನೆ ಕಂತು)
– ಬಸವರಾಜ್ ಕಂಟಿ.
ಮರುದಿನ ನಾನು ಮತ್ತು ಎಸ್. ಆಯ್, ಕೇಸಿನ ವಿವರಗಳ ಬಗ್ಗೆ ಚರ‍್ಚಿಸುತ್ತ, ಅವರಿಗೆ ಅಂದಿನ ತನಕ ಸಿಕ್ಕಿದ್ದ ಎಲ್ಲರ – ಎಲ್ಲರ ಅಂದ್ರೆ ಗುರುರಾಜ್, ಮಂಜುಳಾ, ಅನಿತಾ, ಜಿಮ್ ಬಾಡಿ, ಇವರ ಪೋನಿನ ಕರೆಗಳ ವಿವರಗಳ ಮೇಲೆ ಕಣ್ಣಾಡಿಸುತ್ತಿದ್ದೆವು. ಅಂದು ಕೊಲೆಯನ್ನು ಮೊದಲಬಾರಿಗೆ ನೋಡಿದ ಹುಡುಗಿಗೂ ಇದಕ್ಕೂ ಯಾವ ರೀತಿಯ ಸಂಬಂದವೂ ಇಲ್ಲವೆಂದು ರಾಜೇಂದ್ರ ಪತ್ತೆಹಚ್ಚಿದ್ದ. ಮಂಜುಳಾ ಕೊಲೆ ಮಾಡಿರುವ ಸಂಬವ ಇದ್ದರೂ ಕಾರಣ ಸಿಕ್ಕಿರಲಿಲ್ಲ. ಅಕ್ಕ-ಪಕ್ಕದ ಮನೆಯವರು ಅನಿತಾಳನ್ನು ಬೆಳಗ್ಗೆ ನೋಡಿದ್ದರು, ಹಾಗಾಗಿ ಅವಳು ಮಾಡಿರಲು ಸಾದ್ಯವಿಲ್ಲ. ಈ ಜಿಮ್ ಬಾಡಿ ಬೇರೆ ಕತೆನೇ ಹೇಳ್ತಾನೆ. ಅವನನ್ನು ನಂಬಿದರೂ, ಗುರುರಾಜನ ಆ ಪ್ರೆಂಡ್ ಯಾರು ಅಂತ ಪತ್ತೆಹಚ್ಚಲು ಆಗಿರಲಿಲ್ಲ.
ಕರೆಗಳ ವಿವರದ ಪ್ರಕಾರ, ಕೊಲೆಯಾದ ರಾತ್ರಿ, ಆ ಜಿಮ್ ಬಾಡಿ ಗುರುರಾಜನಿಗೆ ಬೆಳಗ್ಗೆ ಮೂರರವರೆಗೂ ಕರೆ ಮಾಡುತ್ತಲೇ ಇದ್ದ, ಆದರೆ ಅದರ ನಂತರ ಕರೆ ಮಾಡಿರಲಿಲ್ಲ. ಅನಿತಾ ಬೆಳಗಿನ ಏಳರ ತನಕವೂ ಗುರುರಾಜನಿಗೆ ಕರೆ ಮಾಡಿತ್ತಲೇ ಇದ್ದಳು. ಆದರೆ ಯಾರ ಕರೆಯನ್ನೂ ಗುರುರಾಜ ಸ್ವೀಕರಿಸಿರಲಿಲ್ಲ. ಅನಿತಾ, ಜಿಮ್ ಬಾಡಿಗೆ ಅಂದು ಕೊನೆಯ ಬಾರಿ ಕರೆ ಮಾಡಿದ್ದು ರಾತ್ರಿ ಮೂರುವರೆಗೆ. ಸತ್ತಮೇಲೆಯೂ ಅವರ ಕರೆಗಳಲ್ಲಿ ಅಂತಹ ವಿಶೇಶವೇನೂ ಇರಲಿಲ್ಲ. ಇನ್ನು ಮಂಜುಳಾ ಕೂಡ ಕೊಲೆಯಾದ ಬೆಳಗ್ಗೆ ಏಳೂ ವರೆಯಿಂದ ಮರುದಿನ ನಾವು ವಿಶಯ ತಿಳಿಸುವವರೆಗೂ ಆಗಾಗ ಕರೆ ಮಾಡಿದ್ದಳು. ಹಿಂದಿನ ದಿನ ನಾನು ಅವಳನ್ನು ನೋಡಲು ಹೋದಾಗಿನ ಸಮಯದ ಕರೆಯೆಡೆಗೆ ನನ್ನ ನೋಟ ಹರಿಯಿತು.
ನಾನು ತಾತನ ಜೊತೆ ಮಾತಾಡುವಾಗ ಅವಳನ್ನು ಮನೆಗೆ ಕಳಿಸಿದ್ದೆ. ಆ ಸಮಯದಲ್ಲಿ ಒಂದು ನಂಬರಿಗೆ ಕರೆ ಮಾಡಿದ್ದಳು, ಆ ನಂಬರ‍್ರನ್ನು ಪತ್ತೆ ಹಚ್ಚಿದೆವು. ಅದು ತುಮಕೂರಿನಲ್ಲಿ, ಮಹೇಶ್ ಎಂಬುವನ ಹೆಸರಲ್ಲಿತ್ತು. ನಾನು ತುಸು ಯೋಚಿಸಿದಾಗ ಹೊಳೆದದ್ದು, ಮಹೇಶ ತಾತನನ್ನು ಡಯಾಲಿಸಿಸ್ ಗೆ ಕರೆದುಕೊಂಡು ಹೋಗಲು ಬಂದವನು ಎಂದು. ಅವನಿಗೆ ಅದರ ಬಗ್ಗೆ ನೆನಪು ಮಾಡಲು ಅವಳು ಕರೆ ಮಾಡಿರಬೇಕೆಂದು ಸುಮ್ಮನಾದೆವು. ಕೇಸಿನಲ್ಲಿ ಮುಂದುವರಿಯಲು ಯಾವ ದಾರಿಯೂ ಸಿಗಲಿಲ್ಲ.
ಎಲ್ಲರ ಮನಸ್ಸನ್ನೂ ಸರಿಯಾಗಿ ಕಂಡುಕೊಂಡಿದ್ದೇನೆಯೇ ಎಂದು ನನಗೆ ನಾನೇ ಕೇಳಿಕೊಂಡೆ. ಡೆರೆನ್ ಬ್ರೌನ್ ನನಗೆ ಹೇಳಿದ್ದು ನೆನಪಾಯಿತು. ಕಾರಣವಿಲ್ಲದೇ ಯಾರೂ ಕಣ್ಣನ್ನು ಕೂಡ ಆಚೆ ಈಚೆ ಆಡಿಸುವುದಿಲ್ಲ. ನಮ್ಮೆಲ್ಲರ ಚಲನವಲನೆಗೆ, ಯೋಚನೆಗಳಿಗೆ ಏನಾದರೊಂದು ಕಾರಣವಿದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಎಲ್ಲರ ನಡವಳಿಕೆಯನ್ನು ತಿರುವಿ ಹಾಕಿದೆ. ಒಂದು ಸುಳಿವು ಸಿಕ್ಕಿತು. ತಕ್ಶಣ ಜಿಮ್ ಬಾಡಿಗೆ ಪೋನ್ ಮಾಡಿ ಬರಲು ಹೇಳಿ, ರಾಜೇಂದ್ರನನ್ನು ಕೇಳಿದೆ, “ನಾಳೆ ಬೆಳಗ್ಗೆ ಮೂರು ಗಂಟೆಗೆ ಪ್ರೀ ಇದಿರಾ?”.
************************
ಬೆಳಗ್ಗೆ ನಾಲ್ಕು ಗಂಟೆಗೆ ಅಯ್ದು ನಿಮಿಶ ಮುಂಚಿತವಾಗಿಯೇ ದೂರದಲ್ಲಿ ಗಾಡಿ ನಿಲ್ಲಿಸಿ, ಇಬ್ಬರು ಪೇದೆಯೊಂದಿಗೆ ತಾತನ ಮನೆಯ ಹೊರಾಂಗಣದಲ್ಲಿ ಯಾರಿಗೂ ಕಾಣದಂತೆ ಹೊಕ್ಕೆವು. ನಾಲಕ್ಕೂ ಹದಿನಯ್ದರ ಹೊತ್ತಿಗೆ ಮಂಜುಳಾ ಬಂದು, ಬಾಗಿಲು ಬಳಿಯೇ ಕುಂತಳು. ಅಯ್ದೇ ನಿಮಿಶದಲ್ಲಿ ಯಾರೋ ಒಬ್ಬ ಮುಕ ಕಾಣದ ರೀತಿ ಶಾಲೊಂದು ಹೊದ್ದು ಅಲ್ಲಿಗೆ ಬಂದ. ಇಬ್ಬರೂ ಬಾಗಿಲು ತೆಗೆದು ಒಳಹೊಕ್ಕರು. ಹತ್ತು ನಿಮಿಶ ಕಾಯ್ದು, ರಾಜೇಂದ್ರನಿಗೆ ಜೋರಾಗಿ ಬಾಗಿಲು ಕುಟ್ಟಲು ಹೇಳಿ, ಹಿತ್ತಲ ಬಾಗಿಲ ಬಳಿ ಹೋಗಿ ಮರೆಯಲ್ಲಿ ನಿಂತೆ. ಅವನು ಕುಟ್ಟಿದ. ಒಂದರ‍್ದ ನಿಮಿಶದ ಮೇಲೆ, “ಯಾರು” ಎಂದು ಮಂಜುಳಾ ಕೂಗಿದಳು. ಜೋರಾದ ದನಿಯಲ್ಲಿ, “ಪೋಲೀಸ್” ಎಂದು ರಾಜೇಂದ್ರ ಉತ್ತರಿಸಿದ. ಇನ್ನರ‍್ದ ನಿಮಿಶದಲ್ಲಿ ಹಿತ್ತಲ ಬಾಗಿಲು ತೆರೆದು ಅವನು ಪರಾರಿಯಾಗಲು ಓಡಿ, ನಾನು ನಿಂತ ಜಾಗದೆಡೆಗೇ ಬಂದ. ಅಡ್ಡಗಾಲು ಹಾಕಿ, ದೊಪ್ ಎಂದು ಬೀಳಿಸಿದೆ. ಬಿದ್ದ ರಬಸಕ್ಕೆ ಅವನ ಮೊಣಕಯ್ ಮೊಣಕಾಲಿಗೆ ಪೆಟ್ಟಾಯಿತು. ನರಳುತ್ತಾ ಎದ್ದು ಕೂತ. ಪೇದೆ, ನಾನು ಕೂಡಿಕೊಂಡು ಅವನ ಕಯ್ಗೆ ಕೋಳ ತೊಡಿಸಿದೆವು.
“ಬಾ ಮಹೇಶ್, ನಿನಗೆ ಡಯಾಲಿಸಿಸ್ ಮಾಡಿಸ್ತೀನಿ”, ಎಂದು ಕೊರಳ ಪಟ್ಟಿ ಹಿಡಿದು ಎತ್ತಿದೆ. ಅಶ್ಟರಲ್ಲಿ ರಾಜೇಂದ್ರನೂ ಅಲ್ಲಿಗೆ ಬಂದನು. ಅವನ ಹಿಂದೆ ಮಂಜುಳಾನೂ ಬಂದಳು. ಅವಳು ಗಾಬರಿಯಿಂದ ನಡುಗಿ, ಬೆವರುತ್ತಿದ್ದಳು. ಅವನೂ ಅಶ್ಟೇ.
ಮಹೇಶನನ್ನು ಎಳೆದುಕೊಂಡು ಗಾಡಿ ಇದ್ದ ಕಡೆ ಹೋದೆವು. ಗಾಡಿಯಲ್ಲಿ ಕೂತಿದ್ದ ಜಿಮ್ ಬಾಡಿಯನ್ನು ತೋರಿಸಿ, ಮಹೇಶನಿಗೆ ರಾಜೇಂದ್ರ ಎಂದಿನ ಗಡಸು ದನಿಯಲ್ಲಿ ಕೇಳಿದ, “ಇವನ್ಯಾರು?”, ಎಂದು. ಮಹೇಶ ಸುಮ್ಮನೆ ತಲೆ ಬಾಗಿಸಿದ. ಮುಕ ಎತ್ತಿ, ಕಪಾಳಕ್ಕೆ ಒಂದು ಬಿಟ್ಟ ರಾಜೇಂದ್ರ. “ಗೊತ್ತೋ ಇಲ್ವೋ?”, ಎಂದು ಇನ್ನಶ್ಟು ಏರಿದ ದನಿಯಲ್ಲಿ ಕೇಳಿದ. ತನ್ನ ಆಟ ಮುಗಿಯಿತೆಂದು ಅನಿಸಿರಬೇಕು ಅವನಿಗೆ. ಮುಕ ಮೇಲೆತ್ತದಯೇ, “ಗುರುರಾಜನ ಬಾಮಯ್ದ”, ಎಂದ. ಮಂಜುಳಾ ಇದನ್ನೆಲ್ಲಾ ಅಚ್ಚರಿಯಿಂದ ನೋಡುತ್ತಿದ್ದಳು.
“ಹತ್ತು ಗಾಡಿ”, ಎಂದು ಅವನನ್ನು ಹತ್ತಿಸಿ, ಹಿಂದೆ ತಿರುಗಿ, “ನಿಮ್ ಗಂಡನ್ನಾ ಕೊಲೆಮಾಡಿದ್ದು ಇವ್ನೆ”, ಎಂದನು ರಾಜೇಂದ್ರ. ಗಂಡ ಸತ್ತಿದ್ದಕ್ಕಿಂತಾ ಹೆಚ್ಚಿನ ದುಕ್ಕ ಅವಳ ಕಣ್ಣುಗಳಲ್ಲಿ ನಾನು ನೋಡಿದೆ.
***********************
ಮಂಜುಳಾಳನ್ನು ಒಲಿಸಿಕೊಂಡಿದ್ದ ಮಹೇಶ್, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಸಮಾಜಕ್ಕೆ ಹೆದರಿ, ಮಂಜುಳಾ ಹಿಂದೇಟು ಹಾಕುತ್ತಿದ್ದಳಂತೆ. ಹಾಗಾಗಿ ಗುರುರಾಜನನ್ನು ಸಾಯಿಸಲು ಮಹೇಶ್ ಸಂಚು ರೂಪಿಸಿ, ಒಂದು ತಿಂಗಳಲ್ಲಿ ಅವನ ಗೆಳೆತನ ಸಂಪಾದಿಸಿ, ಅವನಿಗಿದ್ದ ಚೂರು ಪಾರು ಕುಡಿತದ ಚಟವನ್ನು ಏರಿಸಿ, ತನ್ನತ್ತ ಸೆಳೆದುಕೊಂಡಿದ್ದನು. ಕೆ. ಆರ್. ಮಾರ‍್ಕೆಟ್ಟಿನಿಂದ ಚಾಕುವೊಂದನ್ನು ತಂದು, ಸಮಯ ನೋಡಿ ತಾತನ ನಿದ್ದೆ ಮಾತ್ರೆ ಕದ್ದು, ಕಬ್ಬನ್ ಪಾರ‍್ಕಿನಲ್ಲಿ ಏಕಾಂತದ ಜಾಗವನ್ನು ಗೊತ್ತುಮಾಡಿ ಕೊಲೆ ಮಾಡಿದ್ದನು. ನಕಲಿ ಸಿಮ್ ಬಳಸಿ, ಕೊಲೆ ಮಾಡಿದಮೇಲೆ ಆ ಸಿಮ್ ಮುರಿದು ಹಾಕಿದ್ದನ್ನು ಮಹೇಶ್ ಒಪ್ಪಿಕೊಂಡ.
ಮಹೇಶನ ಮೇಲೆ ನನಗೆ ಅನುಮಾನ ಬಂದ ಬಗೆಯನ್ನು ರಾಜೇಂದ್ರ ಕೇಳಿದ. ನಾನು ಹೇಳಿದೆ, “ಜಿಮ್ ಬಾಡಿ ವಿಕ್ರಮ್, ಗುರುರಾಜನ ಗೆಳೆಯನ ಬಗ್ಗೆ ಹೇಳಿದ್ದ ವಿವರ ಮಹೇಶನಿಗೆ ಹೋಲುತ್ತಿತ್ತು. ಗುರುರಾಜನನ್ನು ಕೊಲ್ಲುವ ಮೊದಲು ಅವನಿಗೆ ನಿದ್ದೆ ಔಶದಿ ಕುಡಿಸಲಾಗಿತ್ತು. ಸಾಮಾನ್ಯ ಜನರಾದ ಇವರಿಗೆ, ಬಹಳಶ್ಟು ನಿದ್ದೆ ಮಾತ್ರೆ ಸಿಗುವುದು ಸಾದ್ಯವಿರಲಿಲ್ಲ. ಹಾಗಾಗಿ ಆ ಔಶದಿ ತಾತನ ನಿದ್ದೆ ಮಾತ್ರಗಳಿಂದ ಮಾತ್ರ ಬಂದಿರಲು ಸಾದ್ಯವಿತ್ತು. ಇನ್ನೊಂದು ವಿಶಯ ಏನೆಂದರೇ, ಗುರುರಾಜ್ ಮತ್ತು ಮಂಜುಳಾ ನಡುವೆ ಹೇಳಿಕೊಳ್ಳುವ ಸಂಬಂದವಿರಲಿಲ್ಲ. ರಾತ್ರಿ ಒಂದಾಗುವ ಗಂಡ ಹೆಂಡಿರ ಮನಸ್ಸುಗಳು ಬೆಳಗ್ಗೆಯೂ ಹತ್ತಿರವಾಗಿರುತ್ತವೆ. ಆ ಒಲವು ನನಗೆ ಮಂಜುಳಾ ಮಾತಿನಲ್ಲಿ ಕಾಣಲಿಲ್ಲ. ಹಾಗಾದರೆ, ತಾತ ಹೇಳಿದಂತೆ ಅವಳ ಮುಕದ ಮೇಲೆ ಗಾಯ ಮಾಡಿದವರು ಯಾರಿರಬಹುದು ಎಂದು ಗೊತ್ತುಮಾಡಿಕೊಳ್ಳಬೇಕಿತ್ತು”.
ಎಲ್ಲಿ ನನ್ನ ಮಾತುಗಳು ಕಳೆದುಹೋಗುತ್ತವೆಯೋ ಎನ್ನುವಂತೆ ರಾಜೇಂದ್ರನ ಎಲ್ಲ ಗಮನ ನನ್ನೆಡೆಯೇ ಇತ್ತು. ನಾನು ಮುಂದುವರಿಸಿದೆ.
“ತಾತನನ್ನು ಡಯಾಲಿಸಿಸ್ ಗೆ ಕರೆದುಕೊಂಡು ಹೋಗಲು ಮಹೇಶನಿಗೆ ಇನ್ನೂ ಒಂದು ಗಂಟೆ ಸಮಯವಿತ್ತು. ಆದರೂ ಮಂಜುಳಾ ಅವನಿಗೆ ಕರೆ ಮಾಡಿದ್ದು ಯಾಕೆ ಅಂತ ಯೋಚಿಸಿದೆ. ನಾನು, ತಾತನ ಜೊತೆ ಒಬ್ಬನೇ ಮಾತಾಡಬೇಕು ಎಂದಾಗ ಅವಳಿಗೆ ತಳಮಳ ತಡಿಯಲಾರದೇ ಮಹೇಶನಿಗೆ ಹೇಳಿಕೊಳ್ಳಲು ಕರೆ ಮಾಡಿದ್ದಾಳೆ ಎಂದು ಊಹಿಸಿದೆ. ಅವರಿಬ್ಬರ ನಡುವೆ ಆ ಸಲುಗೆ ಯಾಕಿರಬಹುದು ಎಂದೂ ಯೋಚಿಸಿದೆ. ತಾತನ ಮನೆಯಲ್ಲಿ ಏನು ನಡೆಯುತ್ತಿರಬಹುದು ಎಂಬ ಕುತೂಹಲದಿಂದಲೇ ಮಹೇಶ ಒಂದು ಗಂಟೆ ಮುಂಚಿತವಾಗಿ ಅಲ್ಲಿಗೆ ಬಂದಿದ್ದ. ಈ ಅನುಮಾನಗಳನ್ನು ಆದಾರವಾಗಿಟ್ಟುಕೊಂಡು ಬಲೆ ಬೀಸಿದೆ. ಅವನು ಸಿಕ್ಕಿಹಾಕಿಕೊಂಡ” ಎಂದೆ.
“ಆದ್ರೆ ಬೆಳಗ್ಗೆ ನಾಲಕ್ಕು ಗಂಟೆಗೆ ಯಾಕೆ?” ಕೇಳಿದ ರಾಜೇಂದ್ರ.
“ಹ್ಹ ಹ್ಹ…”, ನಗುತ್ತಾ ನಾನು ಚಿನ್ನಾರಿಮುತ್ತನ ಹಾಡು ಹಾಡಿದೆ,
ಚಂದ್ರ ನಿಂಗೆ ಕರುಣೆ ಇರಲಿ ಮೋಡದ್ ಮರೆಲಿರು,
ಮೋಡ ಮೋಡ ಒಂದೇ ಸಮನೆ ಮಳೆ ಸುರಿತಿರು,
ಮಿಂಚು ಹೊಡ್ದು ದೀಪ ಎಲ್ಲ ತಟ್ಟಂತ್ ಆರಿ ಹೋಗ್ಲಿ,
ಪೊಲೀಸ್ ಮಾಮಾ ಬರೋದ್ರಲ್ಲಿ ಎಲ್ಲೆಲ್ಲೂ ಕತ್ಲಾಗ್ಲಿ
(ಮುಗಿಯಿತು)
( ಚಿತ್ರ ಸೆಲೆ: carls-sims-4-guide.com )
ಇತ್ತೀಚಿನ ಅನಿಸಿಕೆಗಳು