ಚುಟುಕು ಕವಿತೆಗಳು: ಪ್ರೀತಿಯ ಬಾವನೆಗಳು

ಶ್ರೀಕಾಂತ್. ಹೆಚ್.ಆರ್.

love-sky-garden

ನನ್ನ ಉಸಿರಿನ ಅಂತರಾಳದಲಿ ನಿನ್ನ ಹೆಸರನೆ ಗುನುಗುತಿರುವೆ
ಈ ಕಣ್ಣಿನ ಹೊಂಬೆಳಕಿನಲಿ ನೀ ತಾರೆಯಂತೆ ಮಿನುಗುತಿರುವೆ
ಬಾವನೆಯೆಂಬ ಬಣ್ಣದಲಿ ಹ್ರುದಯ ನಿನ್ನ ಮೊಗವನ್ನೆ ಬಿಡಿಸುತಿದೆ
ಪದಗಳಿಗೆ ಸಿಗಲಾರದ ಸೌಂದರ‍್ಯ ನಿನ್ನದೆಂದು ಈ ಮನವು ಶಪಿಸುತಿದೆ

***

ನಯನದಲಿ ತುಂಬಿದೆ ಕಣ್ಣೀರಿನ ಜೀವನದಿ
ತೊರೆಯಂತೆ ಹರಿಯಲು ಹಿಡಿದಿದೆ ನೋವಿನ ಹಾದಿ
ಮನದ ನಿವೇದನೆ ತಿಳಿಸಲು ಹ್ರುದಯ ತಿರುಗುತಿದೆ ಬೀದಿ ಬೀದಿ
ಪ್ರೀತಿಯು ಸೋಲಲು ಗೆಲುವಿನ ನಗೆ ಬೀರುತಿದೆ ವಿದಿ

***

ನಿದ್ದೆಯ ಕನವರಿಕೆಯು ಮಾಡಿದೆ ನಿನ್ನಯ ನೆನಪು
ನಿನ್ನ ಹೆಸರು ಕೇಳಿದರೆ ಆಗಿದೆ ಮನಸಲಿ ಹುರುಪು
ಪ್ರತಿ ಕ್ಶಣವೂ ಬೀಸುತಿರಲಿ ನನ್ನ ಎದೆಗೆ ನಿನ್ನ ತಂಗಾಳಿಯ ತಂಪು
ನಿನ್ನ ಹಾಡಿನ ಸಾಲಿನಲಿ ನನ್ನ ಹೆಸರನ್ನು ಕೂಗಿದರೆ ಕಿವಿಗೆ ಇಂಪು
ನಿನ್ನ ಅಗಲಿ ಮಾಡುತಿದೆ ವಿರಹವು ಒಂದು ದೊಡ್ಡ ತಪ್ಪು
ಹ್ರುದಯವು ಕರೆದೊಯ್ದಿದೆ ನಿನ್ನ ಬಳಿಗೆ ಬಂದು ನಿಂತಿರುವೆ ಬಿಗಿದಪ್ಪು

***

ನೀನೆ ಬೆಳೆಸಿದ ಹ್ರುದಯದ ಹೂದೋಟದಲ್ಲಿನ ಹೂವು ನಾನು
ನಾನೇ ಬರೆದ ಸಾಲಿಗೆ ಆಯಿತು ನಿನ್ನ ದನಿಯು ಸವಿಜೇನು
ಪ್ರೀತಿಸಿದ ಮರುಕ್ಶಣವೇ ನಿನ್ನಲ್ಲಿ ಅಪೇಕ್ಶಿಸುವೆ, ನೀ ತಿರುಗಿ ಕೊಡುವುದಾದರು ಏನು
ನೀ ಹೇಳಿದರೆ ಪ್ರೇಮದ ಹೂಗಳಿಂದ ಅಲಂಕರಿಸುವೆನು ಈ ನೀಲಿ ಬಾನು

(ಚಿತ್ರ ಸೆಲೆ: http://7-themes.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *