ಪತ್ತೇದಾರಿ ಕತೆ: “ನಿನ್ನಾತ್ಮಕ್ಕೆ ಶಾಂತಿ ಸಿಗಲಿ”(ಕಂತು-2)

– ಬಸವರಾಜ್ ಕಂಟಿ.

vichaarane

ಕಂತು-1  ಕಂತು-2

ಎರಡನೇ ಮಹಡಿಯಲ್ಲಿದ್ದ, ಎರಡು ಮಲಗುವ ಕೋಣೆಯ ಅಚ್ಚುಕಟ್ಟು ಮನೆ. ತುಸು ಚಿಕ್ಕದಾದ ಅಡುಗೆಮನೆ, ನಡುಮನೆ. ನಡುಮನೆಯ ಗೋಡೆಗಳ ಮೇಲೆ ಸಂಜಯ್ ಮತ್ತು ಸುದಾಳ ನಾಲ್ಕು ತಿಟ್ಟಗಳಿದ್ದವು, ಬೇರೆ ಬೇರೆ ಜಾಗಗಳಲ್ಲಿ ತೆಗೆಸಿಕೊಂಡಂತವು. ಇಬ್ಬರೂ ಸಂತೋಶವಾಗಿರುವುದು ನಿಚ್ಚಳವಾಗಿ ಕಾಣುತ್ತಿತ್ತು. ಪ್ಲಾಸ್ಟಿಕ್ ಪಾತರಗಿತ್ತಿಗಳು ಇನ್ನೊಂದು ಗೋಡೆಯ ಮೇಲೆ ಇಂಗ್ಲೀಶಿನ “ಎಸ್ + ಎಸ್” ಆಕಾರದಲ್ಲಿ ಮಿಂಚುತ್ತಿದ್ದವು. ನಾನು ಎಲ್ಲ ಕೋಣೆಗಳನ್ನು ವಿವರವಾಗಿ ನೋಡಿದೆ. ಎಲ್ಲವೂ ಚೊಕ್ಕವಾಗಿದ್ದವು. ಸಂಜಯ್ ನ ಅಪ್ಪ ಅಮ್ಮನಿಗೆ ವಿಶಯ ತಿಳಿಸಿ, ಅವರು ಬೆಂಗಳೂರಿಗೆ ಬಂದು, ಮಾರತಹಳ್ಳಿಯ ಪರಿಚಯಸ್ತರ ಮನೆಯಲ್ಲಿದ್ದರಂತೆ. ಅವರಿಗಿನ್ನೂ ಬಾಡಿ ಸಿಕ್ಕಿರಲಿಲ್ಲ.

“ಏನ್ ಹುಡುಗ್ರೋ ಏನೋ, ಬರೀ ಪೊಟೋ ತಗೆದುಕೊಳ್ಳೋದೇ ಆಯ್ತು” ಎಂದ ಗಿರೀಶ್, ಗೋಡೆಯ ಮೇಲಿನ ತಿಟ್ಟಗಳನ್ನು ನೋಡುತ್ತ. “ಅವ್ನ ಮೊಬೈಲ್ ನಲ್ಲೂ ಅಶ್ಟೇ, ಬರೀ ಸೆಲ್ಪಿಗಳೇ ತುಂಬಿವೆ”.

“ಹೌದಾ? ಅವ್ನ ಮೊಬೈಲು ನಿಮ್ ಹತ್ರ ಇದ್ಯಾ?” ಕೇಳಿದೆ.

ನಮ್ಮ ಜೊತೆ ಬಂದಿದ್ದ ಪೇದೆ ಚೀಲವೊಂದರಿಂದ ತೆಗೆದು ಮೊಬೈಲನ್ನು ನನಗೆ ಕೊಟ್ಟ. ಅದರಲ್ಲಿದ್ದ ತಿಟ್ಟಗಳನ್ನು ನೋಡಿದೆ. ಇಬ್ಬರ ಸೆಲ್ಪಿಗಳೇ ತುಂಬಿದ್ದವು, ಬೇರೆ ಬೇರೆ ಕೋನಗಳಲ್ಲಿ, ಒಮ್ಮೆ ನಾಲಗೆ ಹೊರಗೆ, ಒಮ್ಮೆ ಓರೆಗಣ್ಣು, ಹೀಗೆ. ತಿಟ್ಟಗಳನ್ನು ಸರಿಸುತ್ತಾ ಹೋದಾಗ ಒಂದೆಡೆ ಏನೋ ಬದಲಾವಣೆ ಕಾಣಿಸಿತು. ಅದನ್ನು ಗಿರೀಶ್ ಗೆ ತೋರಿಸಿದೆ.

“ಇವೆರಡೂ ಸೆಲ್ಪಿಗಳಲ್ಲಿ ಏನಾದರೂ ಬದಲಾವಣೆ ಗಮನಿಸಿದ್ದೀರಾ?”

ಅವೆರಡನ್ನೂ ಸೂಕ್ಶ್ಮವಾಗಿ ನೋಡಿದ ಗಿರೀಶ್, ತಲೆ ಅಲ್ಲಾಡಿಸಿದನು. ನಾನು ಹೇಳಿದೆ, “ಇದರಲ್ಲಿ ಸಂಜಯ್ ಹೆಚ್ಚು ಕುಶಿಯಾಗಿದ್ದಾನೆ. ಅವನ ತುಟಿ ಮಾತ್ರವಲ್ಲ, ಅವನ ಕಣ್ಣಿನ ಸುತ್ತಮುತ್ತ, ಮತ್ತು ಒಟ್ಟಾರೆ ಮುಕದಲ್ಲಿ ಆ ನಗೆ ಎದ್ದು ಕಾಣುತ್ತಿದೆ. ಆದ್ರೆ ಇನ್ನೊಂದ್ರಲ್ಲಿ ಬರಿ ತುಟಿ ಹಿಗ್ಗಿದೆ ಅಶ್ಟೇ”

“ಅಂದ್ರೆ?”

“ಅದೊಂದೇ ಸೆಲ್ಪಿಯಲ್ಲ, ಆ ಸೆಲ್ಪಿಯ ನಂತರ ತೆಗೆದುಕೊಂಡ ಎಲ್ಲ ಸೆಲ್ಪಿಗಳಲ್ಲೂ ಅವನ ಕುಶಿ ಮಾಯವಾಗಿದೆ”, ಎಂದೆ. ಗಿರೀಶ್ ಇನ್ನೂ ನನ್ನೆಡೆಗೆ ಗೊಂದಲದ ನೋಟ ಬೀರುತ್ತಿದ್ದ. ನಾನು ತುಸು ಯೋಚಿಸಿ, ಆ ತಿಟ್ಟದ ದಿನಾಂಕ ನೋಡಿ, ಗಿರೀಶನಿಗೆ ಹೇಳಿದೆ,

“ಬಹುಶ, ಅರಸ್ ಮನೆಯಲ್ಲಿ ಅಪ್ಪ-ಮಗಳ ನಡುವೆ ಜಗಳವಾದ ನಂತರದ ಸೆಲ್ಪಿಗಳಲ್ಲಿ ಅವನ ಕುಶಿ ಮಾಯವಾಗಿದೆ. ಅವರ ಮನೆಯ ಕೆಲಸದವರಿಗೆ ಕೇಳಿ ದಿನಾಂಕ ನಿಕ್ಕಿ ಮಾಡಿಕೊಂಡರೆ ನಮಗೆ ಒಂದು ಹಾದಿ ಸಿಗಬಹುದು”

ತುಸು ಯೋಚಿಸಿದ ಗಿರೀಶ್ ಅನುಮಾನದಲ್ಲೇ ಮಾತಾಡಿದ, “ಅಂದ್ರೆ ಸಂಜಯ್ ಗೆ ಅರಸ್ ಅವರ ಆಸ್ತಿ ಮೇಲೆ ಕಣ್ಣಿತ್ತು ಅಂತಾನಾ?”

“ಆಸ್ತಿನೂ ಇರಬಹುದು ಅತವಾ ಅರಸ್ ಅವರು ಅವನಿಗೆ ಯಾವುದಾದರೂ ಬ್ಯುಸಿನೆಸ್ ಮಾಡಲು ಸಹಾಯ ಮಾಡಬಹುದು ಅಂತಾದರೂ ಇರಬಹುದು”. ಗಿರೀಶ್ ತಲೆದೂಗಿದ. ಮೊಬೈಲನ್ನು ಅವನ ಕಯ್ಗೆ ಕೊಟ್ಟು ಮತ್ತೆ ಗೋಡೆಯ ಮೇಲಿನ ತಿಟ್ಟಗಳನ್ನು ಗಮನಿಸಿದೆ. ಅದರಲ್ಲಿ ಒಂದು ತಿಟ್ಟ ಅದೇ ನಡುಮನೆಯಲ್ಲಿ ತೆಗೆಸಿಕೊಂಡದ್ದಾಗಿತ್ತು. ಚಿಟ್ಟೆಗಳಿದ್ದ ಗೋಡೆಯ ಮುಂದೆ ಇಬ್ಬರೂ ನಿಂತು ತೆಗೆಸಿಕೊಂಡಿದ್ದ ತಿಟ್ಟ. ಅವಳ ಕಾಲಿನ ಪಕ್ಕದಲ್ಲಿ ಹೂದಾನಿಯೊಂದು ತಿಟ್ಟದಲ್ಲಿ ಕಾಣುತಿತ್ತು, ಆದರೆ ಈಗ ಅದು ಅಲ್ಲಿ ಇರಲಿಲ್ಲ.

“ಕೊಲೆಯಾದ ನಂತರ ಈ ಮನೆಯಲ್ಲಿ ಯಾರಾದರೂ ಇದ್ದರಾ?” ನಾನು ಕೇಳಿದೆ.

“ಇಲ್ಲಾ” ಎಂದ ಗಿರೀಶ್.

ಹೂದಾನಿ ಕಾಣೆಯಾದ ಬಗ್ಗೆ ಅವನ ಗಮನ ಸೆಳೆದೆ. ಸುಮಾರು ಎರಡಡಿ ಎತ್ತರದ, ಹಿತ್ತಾಳೆಯ, ಕುಸುರಿ ಕೆಲಸವಿದ್ದ ಹೂದಾನಿ. “ಇದೇ ಮರ‍್ಡರ್ ವೆಪನ್ ಇದ್ರೂ ಇರಬಹುದು ಅಲ್ವಾ?” ಎಂದ ಗಿರೀಶ್.

“ಹೌದು, ಹೂದಾನಿಯ ಮೊನಚಾದ ತುದಿಯಿಂದ ಹೊಡದಿರಬಹುದು” ಎಂದೆ. “ಸುದಾಗೆ ಕೇಳಿದರೆ ಇನ್ನಶ್ಟು ಮಾಹಿತಿ ಸಿಗಬಹುದು”. ಗಿರೀಶನ ಮುಕದಲ್ಲಿ ಗೆಲುವಿನ ನಗೆ ಮೂಡಿತು. “ಏನಾಯ್ತು?” ಎನ್ನುವಂತೆ ನಾನು ನೋಡಿದೆ.

“ಇದೆಲ್ಲಾ ನಮ್ ಪೊಲೀಸ್ ಟ್ರೇನಿಂಗ್ ನಲ್ಲಿ ಕಲಿಸಿಕೊಡೊದಿಲ್ಲ ನೋಡಿ” ಎಂದ. ನಾನು ನಕ್ಕು ಸುಮ್ಮನಾದೆ. ಗಿರೀಶ್ ಮನೆಯೆಲ್ಲಾ ಆ ಹೂದಾನಿಗಾಗಿ ಹುಡುಕಿದ, ಆದರೆ ಸಿಗಲಿಲ್ಲ. ಸಂಜಯ್ ಮಲಗುವ ಕೋಣೆಯನ್ನು ನೋಡಲು ಮುಂದಾದೆ. ಒಂದು ಮೇಜು, ಐದಡಿ ಅಗಲದ ಮಂಚ, ಹೊತ್ತಗೆಗಳನ್ನು ಹೊಂದಿಸಿಟ್ಟಿದ್ದ ಅಂಕಣಗಳಿದ್ದವು. ಮೇಜಿನ ಮೇಲೆ, ರಶ್ಮಿ ಬನ್ಸಾಲ್ ಅವರ “ಸ್ಟೇ ಹಂಗ್ರಿ, ಸ್ಟೇ ಪೂಲಿಶ್”, ರಮಾ ಬಿಜಾಪುರಕರ್ ಅವರ, “ವೀ ಆರ್ ಲೈಕ್ ದಟ್ ಓನ್ಲಿ” ಹೊತ್ತಗೆಗಳಿದ್ದವು. ಅಂಕಣದಲ್ಲಿ ಬೇರೆ ಬೇರೆ ತರಹದ ಹೊತ್ತಗೆಗಳಿದ್ದರೂ, ಹೆಚ್ಚಾಗಿ ಬ್ಯುಸಿನೆಸ್ ಸಂಬಂದಿಸಿದವೇ ಆಗಿದ್ದವು.

ಮೇಜಿನ ಪಕ್ಕದಲ್ಲಿ ಗೋಡೆಗೆ ನೇತುಹಾಕಿದ್ದ ಬಿಳಿ ಹಲಗೆಯ ಮೇಲೆ ಏನೇನೋ ಗೀಚಿತ್ತು. ನಾನು ಸೂಕ್ಶ್ಮವಾಗಿ ಗಮನಿಸಿದೆ. “ರೆವೆನ್ಯೂ ಮಾಡೆಲ್” ಎಂಬ ತಲೆಬರಹದ ಅಡಿಯಲ್ಲಿ ಸೇಲ್ಸ್, ಅಡ್ವರ‍್ಟಾಯಿಸ್ಮೆಂಟ್, ಪ್ರಾಂಚೈಸಿ, ಪದಗಳು ಮಾತ್ರ ಕಣ್ಣಿಗೆ ಬಿದ್ದವು. ಪ್ರಾಂಚೈಸಿ ಪದಕ್ಕೆ ಅಡ್ಡ ಗೀಟು ಎಳೆಯಲಾಗಿತ್ತು. ಆ ಹಲಗೆಯ ಮೇಲೆ ಎರಡು ರೀತಿಯ ಬರವಣಿಗೆಯನ್ನು ಗುರುತಿಸಿದೆ. ಅಂದರೆ ಸಂಜಯ್ ಅದನ್ನು ಬರೆಯುವಾಗ ಇನ್ನೊಬ್ಬರಾರೋ ಇದ್ದರೆಂಬುದು ಕಚಿತವಾಯಿತು. ಅವನಿಗೆ ಹೊಸ ಕಂಪೆನಿ ಶುರುಮಾಡುವ ಉದ್ದೇಶವಿರುವುದು ನಿಕ್ಕಿಯಾಯಿತು. ಆ ಇನ್ನೊಂದು ಕೈಬರಹ ಸುದಾಳದ್ದೇ ಆಗಿರಬಹುದು ಅತವಾ ಇನ್ನಾರದೋ ಆಗಿರಬಹುದು. ಇದನ್ನೇ ಗಿರೀಶನಿಗೂ ಹೇಳಿದೆ. ಗಿರೀಶ್ ಹಲಗೆಯ ತಿಟ್ಟವನ್ನು ತೆಗೆದುಕೊಂಡ.

ಅಲ್ಲಿಂದ ಮತ್ತೆ ನಡುಮನೆಗೆ ಬಂದು, ಕೆಳಗೆ ಕುಳಿತು ನೆಲವನ್ನು ಹುಡುಕಾಡಿದೆ, ರಕ್ತದ ಯಾವುದಾದರೂ ಕಲೆ ಸಿಗುತ್ತದೇನೋ ಎಂದು. “ಮನೆಯ ಓನರ್ ಎಲ್ಲಾ ಕ್ಲೀನ್ ಮಾಡ್ಸಿದ್ದಾರೆ” ಎಂದ ಗಿರೀಶ್. ನಾನು ಸುಮ್ಮನೆ ತಲೆದೂಗಿದೆ. ಅವನು ಮುಂದುವರೆಸಿದ,

“ಅವನ ಬಾಡಿ ಇದ್ದದ್ದು ಇಲ್ಲಿ ಬಾಗಿಲಿನ ಬಳಿಯಲ್ಲಿ. ಆದ್ರೆ ರಕ್ತ ಇಲ್ಲಿಂದ ಇಲ್ಲಿವರೆಗೆ ಹರಡಿತ್ತು” ಎಂದು ನಡುಮನೆಯ ನಡುವಿನಿಂದ ಬಾಗಿಲಿನವರೆಗೆ ತೋರಿಸಿದ.

“ಅಂದ್ರೆ…?” ನಾನು ಕೇಳಿದೆ.

“ಹೌದು. ನಿಮ್ಮ ಅನಿಸಿಕೆ ಸರಿ. ಪೆಟ್ಟು ಬಿದ್ದಮೇಲೆ ಅವನು ನಿದಾನವಾಗಿ ಬಾಗಿಲು ಕಡೆಗೆ ತೆವಳಿಕೊಂಡು ಬಂದಿದ್ದಾನೆ. ಆದ್ರೆ ತುಂಬಾ ಬ್ಲೀಡಿಂಗ್ ಆಗಿದ್ದರಿಂದ ಮೇಲೇಳೊದಕ್ಕೆ ಅತವಾ ಬಾಗಿಲು ತೆಗೆಯೋದಕ್ಕೂ ಆಗಿಲ್ಲ. ಬಾಗಿಲಬಳಿಯಲ್ಲೇ ಹೆಚ್ಚು ರಕ್ತ ಇತ್ತು”

“ಅಂದ್ರೆ ಆ ಬಲವಾದ ಎರಡನೇ ಪೆಟ್ಟು ಅವನು ತೆವಳಿಕೊಂಡು ಬಾಗಿಲ ಬಳಿ ಬಂದಾಗ ಬಿದ್ದಿರಬೇಕು” ಎಂದೆ.

“ಹೌದು”

“ಅವನ ಮೊಬೈಲು ಎಲ್ಲಿತ್ತು?”

“ಟೇಬಲ್ ಮೇಲೆ” ಎಂದು ನಡುಮನೆಯಲ್ಲಿದ್ದ ಮೇಜಿನ ಕಡೆ ತೋರಿಸಿದನು. ನಾನು ಎದ್ದು ಮತ್ತೊಮ್ಮೆ ಎಲ್ಲ ಕಡೆ ನೋಡಿ, ಇನ್ನೇನೂ ಇಲ್ಲವೆಂದು ಕಾತರಿ ಮಾಡಿಕೊಂಡು “ಆಯಿತು” ಅನ್ನುವಂತೆ ಸನ್ನೆ ಮಾಡಿದೆ.

********************************************************

ಮನೆಯಿಂದ ಹೊರಬರುವಶ್ಟರಲ್ಲಿ ಪಕ್ಕದ ಮನೆಯಲ್ಲಿದ್ದ ಹೆಂಗಸು ಹೊರಗೆ ಬಂದಳು. ನಾನು ಅವಳನ್ನು ಮಾತನಾಡಿಸಿ, ಅವಳ ಪಾಲಿನ ಕತೆಯನ್ನು ಕೇಳಿದೆ. ಗಿರೀಶ್ ನನಗೆ ಮೊದಲೇ ಹೇಳಿದ್ದನ್ನೇ ಅವಳು ಹೇಳಿದಳು.

“ಸುದಾಳನ್ನು ನೀವು ಕೊನೇ ಸಾರಿ ಯಾವಾಗ್ ನೋಡಿದ್ರಿ?” ನಾನು ಕೇಳಿದೆ.

“ಸೋಮವಾರ ಸಂಜೆ ಐದು ಗಂಟೆ ಸುಮಾರಿಗೆ ಬಂದಿದ್ಳು. ನಮ್ ಕಿಟಕಿಯಿಂದ ಯಾರ್ ಬಂದ್ರು ಹೋದ್ರೂ ಎಲ್ಲಾ ಕಾಣುತ್ತೆ ನೋಡಿ…” ಅಂದಳು.

ನಾನು ಗಿರೀಶ್ ಕಡೆಗೆ ತಿರುಗಿ, “ಅಂದ್ರೆ ಕೊಲೆಯಾದ ದಿನ ಸಂಜೆ ಅಲ್ವಾ?” ಅಂದೆ. ಅವನು ಹೌದು ಎಂದ.

“ಅವ್ಳು ಹೋಗಿದ್ದನ್ನಾ ನೋಡಿದ್ರಾ?”

“ಇಲ್ಲಾ… ಅವ್ಳು ಹೋಗಿದ್ದು ನಾನ್ ನೋಡಿಲ್ಲಾ. ಬಹುಶ ನಾನು ಸೀರಿಯಲ್ ನೋಡ್ತಾ ಇದ್ದಾಗ ವಾಪಸ್ ಹೋಗಿರಬಹುದೇನೋ” ಎಂದು ನಕ್ಕಳು.

“ಇನ್ನೇನಾದ್ರೂ ನಿಮಗೆ ನೆನಪು ಇದ್ಯಾ? ಬೇರೆ ಯಾರಾದ್ರೂ ಬಂದು ಹೋಗಿದ್ದು?” ನಾನು ಕೇಳಿದೆ.

ಅವಳು ತುಸು ಯೋಚಿಸಿದಳು. “ಸಂಜೆ ಹೊತ್ತಿಗೆ ಮೂರು ಜನ ಮುಸ್ಲಿಮ್ಸು ಕೆಳಗಿಳಿದು ಹೋಗಿದ್ದು ನೋಡ್ದೆ. ಸಂಜಯ್ ಮನೆ ಪಕ್ಕದ… ಅಂದ್ರೆ ಆ ಕಡೆ ಇರೋ ಮನೆಗೆ ಬಂದಿರಬಹುದು ಅಂತಾ ಸುಮ್ನಾದೆ”.

ಗಿರೀಶ್ ಕೇಳಿದ, “ಎಶ್ಟೊತ್ತಿಗೆ? ಮೂವರೂ ಗಂಡಸರಾಗಿದ್ರಾ?”

“ಇಲ್ಲಾ… ಇಬ್ರು ಹೆಂಗಸರು ಬುರ‍್ಕಾ ತೊಟ್ಟಿದ್ರು. ಒಬ್ಬ ಗಂಡಸು ಜುಬ್ಬಾ ಪಾಯಿಜಾಮಾ ಹಾಕಿದ್ದ. ಏಳು… ಏಳೂವರೆ ಆಗಿರಬಹುದು”

“ಅವ್ರು ಬಂದಿದ್ದು ನೋಡಿದ್ರಾ?”

“ಇಲ್ಲಾ… ಅವ್ರು ಮೇಲೆ ಹತ್ತಿ ಬಂದಿದ್ದು ನೋಡ್ಲಿಲ್ಲಾ, ಆದ್ರೆ ಹೋಗಿದ್ದು ಮಾತ್ರ ನೋಡ್ದೆ”

“ಇನ್ನೇನಾದ್ರು?”

ಅವಳು ಮತ್ತೆ ಯೋಚಿಸಿ ಏನೂ ಇಲ್ಲ, ನೆನಪಾದ್ರೆ ಹೇಳ್ತೀನಿ ಅಂತಾ ಹೇಳಿದ್ಳು. ಗಿರೀಶ ಅವಳಿಗೆ ತನ್ನ ಮೊಬೈಲ್ ಅಂಕಿ ಕೊಟ್ಟ. ಆಮೇಲೆ ನಾವು ಆ ಇನ್ನೊಂದು ಪಕ್ಕದ ಮನೆಗೆ ಹೋಗಿ ವಿಚಾರಿಸಿದೆವು. ಅಂದು ಆ ರೀತಿ ಯಾರೂ ತಮ್ಮ ಮನೆಗೆ ಬಂದಿಲ್ಲವೆಂದು ಆ ಮನೆಯಲ್ಲಿದ್ದ ಒಬ್ಬ ಗಂಡಸು ಮತ್ತು ಹೆಂಗಸು ಇಬ್ಬರೂ ಹೇಳಿದರು. ಹಾಗಿದ್ರೆ ಮೂರು ಜನ ಈ ಕೊಲೆಯಲ್ಲಿ ಬಾಗಿಯಾಗಿದ್ದಾರೆ ಎಂದು ನಿಕ್ಕಿಮಾಡಿಕೊಂಡು, ಗಾಡಿಯಲ್ಲಿ ಕೂತು ಮರಳಿ ಸ್ಟೇಶನ್ನಿನ ಕಡೆ ಹೊರಟೆವು.

“ಆ ಬುರ‍್ಕಾದಲ್ಲಿ ಹೆಣ್ಣುಮಕ್ಕಳೇ ಇರಬೇಕೆಂದು ಏನು ಇಲ್ಲವಲ್ಲಾ?” ಎಂದ ಗಿರೀಶ.

“ಕಂಡಿತಾ” ಎಂದೆ.

********************************************************

ಮರುದಿನ ನಾನು ಸ್ಟೇಶನ್ ಹೊಕ್ಕಾಗ, ಸುದಾ, ಅರಸ್, ಸಂಜಯ್ ಅವರ ಕರೆಗಳ ವಿವರಗಳನ್ನು ಮೇಜಿನ ಮೇಲೆ ಹರಡಿಕೊಂಡು ಗಿರೀಶ್ ನೋಡುತ್ತಿದ್ದ. ನಾನು ಬಂದದ್ದನ್ನು ಗಮನಿಸಿ ತನ್ನ ಹುಡುಕಾಟ ವಿವರಿಸಿದ. ಜಗಳವಾದ ನಂತರ, ಅಂದರೆ ಹದಿನೈದು ದಿನಗಳ ತನಕ ಸುದಾ ಮತ್ತು ಅರಸ್ ಒಬ್ಬರಿಗೊಬ್ಬರು ಕರೆ ಮಾಡಿರಲಿಲ್ಲ. ಆದರೆ ಕೊಲೆಯಾದ ದಿನ ಸಂಜೆ ಐದೂವರೆಗೆ ಸುದಾ, ಅರಸ್ ಅವರಿಗೆ ಕರೆ ಮಾಡಿ, ಮಾತನಾಡಿದ್ದಳು. ಅದಾದ ಹತ್ತು ನಿಮಿಶ ಬಿಟ್ಟು ಅವರು ಮತ್ತೆ ಅವಳಿಗೆ ಕರೆ ಮಾಡಿದ್ದರು. ಇದಾದ ಮೇಲೆ ಅವರ ನಡುವೆ ಯಾವ ಕರೆಯೂ ಇರಲಿಲ್ಲ.

ಇನ್ನು ಸುದಾ ಮತ್ತು ಸಂಜಯ್ ನಡುವೆ ಪೋನಿನಲ್ಲಿ ಮಾತಾಗಿದ್ದು ಕೊಲೆಯಾದ ದಿನ ಸಂಜೆ ಐದು ಗಂಟೆಗೆ. ಅದಾದ ಮೇಲೆ ಸುದಾ ಕರೆ ಮಾಡಿದರೂ ಸಂಜಯ್ ಎತ್ತಿಲ್ಲ. ಸಂಜಯ್ ಗೆ ಮತ್ತು ಸುದಾಳಿಗೆ ಬಂದಿದ್ದ ಬೇರೆ ಕರೆಗಳ ಅಂಕಿಗಳನ್ನೂ ಹುಡುಕಿದ್ದ ಗಿರೀಶ. ಎಲ್ಲವೂ ಅವರ ಗೆಳೆಯರದ್ದಾಗಿತ್ತು, ಒಂದನ್ನು ಬಿಟ್ಟು.

“ಈ ಒಂದು ನಂಬರ್ ನಿಂದಾ ಸಂಜಯ್ ಗೆ ಶನಿವಾರ ಕಾಲ್ ಬಂದಿತ್ತು. ಒಂದು ವಾರದ ಹಿಂದೆ ಅದೇ ನಂಬರ‍್ರಿಗೆ ಸಂಜಯ್ ಮೂರು ಬಾರಿ ಕಾಲ್ ಮಾಡಿದ್ದ ಮತ್ತು ಆ ನಂಬರ್ ನಿಂದ ಸಂಜಯ್ ಗೂ ಕಾಲ್ ಬಂದಿದ್ವು”

“ಯಾರದು ಆ ನಂಬರ‍್?”

“ಸುಳ್ಳು ಹೆಸರು ಮತ್ತು ಅಡ್ರೆಸ್ ಇದೆ” ಎಂದ ಗಿರೀಶ್.

“ನೀವೇ ಕಾಲ್ ಮಾಡಿ ನೋಡಬಹುದಲ್ವಾ?” ಕೇಳಿದೆ.

“ಹಾಗೆ ಮಾಡಿದ್ರೆ ಅವರು ಹುಶಾರಾಗಿ ಬಿಡುವ ಸಾದ್ಯತೆ ಇರುತ್ತೆ. ಸರಿಯಾದ ಹೆಸರು, ಅಡ್ರೆಸ್ ಇದ್ರೆ ಮಾತ್ರ ನಾವು ಕಾಲ್ ಮಾಡ್ತೀವಿ. ಇಲ್ದಿದ್ರೆ ಆ ನಂಬರ್ ಟ್ರಾಕ್ ಮಾಡಿ ಅವರನ್ನಾ ಡೈರೆಕ್ಟ್ ಆಗಿ ಹಿಡಿತೀವಿ” ಎಂದ. ನನಗೂ ಅದು ಸರಿಯೆನಿಸಿತು.

“ಮುಂದೇನು?” ಕೇಳಿದೆ.

“ಸಂಜಯ್ ನ ಗೆಳೆಯರನ್ನು ಇನ್ನೂ ವಿಚಾರಿಸಿಲ್ಲ. ಅವರನ್ನಾ ನೋಡಿದ್ರೆ ನನಗ್ಯಾಕೋ ಅನುಮಾನ” ಎಂದ.

“ಎಶ್ಟು ಜನ? ಯಾವಾಗ್ ಕರಿಸ್ತೀರಿ?”

“ಇಬ್ರು. ಅನೂಪ್ ಮತ್ತು ಗೋವಿಂದ್ ಅಂತಾ… ಪೋನ್ ಮಾಡಿದ್ದೆ… ಇನ್ನೇನ್ ಬರ‍್ತಾರೆ”

ಗೋವಿಂದ್ ಮತ್ತು ಅನೂಪ್ ಇಬ್ಬರೂ ಹತ್ತು ಗಂಟೆಗೆ ಸರಿಯಾಗಿ ಸ್ಟೇಶನ್ನಿಗೆ ಬಂದರು. ಮೊದಲು ಅನೂಪ್ ನನ್ನು ಮಾತಾಡಿಸಿದೆವು. ನೋಡಲು ಸಾದಾರಣವಾಗಿದ್ದು, ಒಳ್ಳೆಯವನಂತೆ ಕಾಣುತ್ತಿದ್ದ. ಅವನ ಊರು, ಕೇರಿ ಮತ್ತಿತರ ಹಿನ್ನಲೆಯ ಕೇಳ್ವಿಗಳು ಮುಗಿದ ಮೇಲೆ, ವಿಶಯಕ್ಕೆ ಬಂದೆವು.

“ಸುದಾ ಮತ್ತು ಸಂಜಯ್ ಸಂಬಂದ ಹೇಗಿತ್ತು?” ಗಿರೀಶ್ ಕೇಳಿದ.

“ತುಂಬಾ ಚೆನ್ನಾಗಿತ್ತು ಸರ್. ಮೇಡ್ ಪಾರ್ ಈಚ್ ಅದರ್”

“ಸೋಮವಾರ ಸಂಜೆ ನೀವು ಎಲ್ಲಿದ್ರಿ?”

“ಆಪೀಸ್ ನಲ್ಲೇ ಏಳು ಗಂಟೆವರೆಗೆ ಕೆಲ್ಸ ಮಾಡ್ತಿದ್ದೆ ಸರ್. ಆಮೇಲೆ ನನ್ನ ಪಿ.ಜಿ. ಗೆ ಹೋಗಿ, ಊಟ ಮಾಡ್ಕೊಂಡು ಮಲ್ಕೊಂಡೆ”

“ಸಂಜಯ್ ಯಾವ್ದೋ ಬ್ಯುಸಿನೆಸ್ ಮಾಡ್ಬೇಕು ಅಂತಾ ಇದ್ದಾ. ನಿಮಗೇನಾದ್ರು ಗೊತ್ತಾ?”

“ಆನ್ಲೈನ್ ಬ್ಯುಸಿನೆಸ್ ಅಂತ ಮಾತ್ರ ಗೊತ್ತು ಸರ್. ಡಿಟೇಲ್ಸ್ ಅವ್ನು ಹೇಳಿರಲಿಲ್ಲ”

ಗಿರೀಶ್ ತನ್ನ ಮೊಬೈಲ್ ನಲ್ಲಿ ತೆಗೆದಿದ್ದ ಹಲಗೆಯ ತಿಟ್ಟವನ್ನು ತೋರಿಸುತ್ತಾ ಹೇಳಿದ, “ಇದು ಸಂಜಯ್ ರೂಮಿನಲ್ಲಿ ತೆಗೆದದ್ದು. ಇದರ ಮೇಲೆ ಇಬ್ಬರ ಹ್ಯಾಂಡ್ ರೈಟಿಂಗ್ ಇದೆ. ಒಂದು ಸಂಜಯ್ ದು ಅಂತ ನಮಗೆ ಗೊತ್ತು. ಇನ್ನೊಂದು ಯಾರದು ಅಂತಾ ಹೇಳ್ತಿರಾ?”

ನಡುಗುವ ಕಯ್ಯಲ್ಲಿ ಮೊಬೈಲು ತೆಗೆದುಕೊಂಡು ತಿಟ್ಟವನ್ನು ನೋಡಿ, “ಗೊತ್ತಿಲ್ಲ”, ಎಂದ.

“ಇಲ್ಲಿ ಕೂತಿದಾರಲ್ಲಾ”, ಎಂದ ನನ್ನೆಡೆಗೆ ಕಯ್ ತೋರಿಸುತ್ತಾ, “ಇವರು ಹ್ಯಾಂಡ್ ರೈಟಿಂಗ್ ಎಕ್ಸಪರ‍್ಟ್. ನೀವು ಏನಾದರೂ ಈ ಹಾಳೆಯ ಮೇಲೆ ಬರೀರಿ, ಅವರು ಹೊಂದಿಸಿ ನೋಡುತ್ತಾರೆ” ಎಂದ.

ಅವನ ಕಯ್ ನಡುಕ ಹೆಚ್ಚಾಯಿತು. ತೊದಲುತ್ತಾ ಮಾತಾಡಿದ, “ಅ…ದು ನಾ…ನೇ ಬರೆದಿದ್ದು ಸರ‍್”

“ಯಾಕ್ ಸುಳ್ಳು ಹೇಳ್ದೆ?”

ಬೆವರ ಹನಿ ಅವನ ಗಲ್ಲ ಜಾರಿ ಕೆಳಗೆ ಬಿತ್ತು, “ಮೊದ…ಲೇ ಕೊಲೆ ಕೇಸು ಸರ್. ಬಯ ಆಗಿ ಹಾಗೆ ಹೇಳ್ದೆ”

“ನೀನು ಅವತ್ತು ಆಪೀಸ್ ನಲ್ಲೇ ಇದ್ದೆ ಅನ್ನೋದಕ್ಕೆ ಪ್ರೂಪ್ ಇದ್ಯಾ?”

“ಇದೆ ಸರ್. ನೀವು ನನ್ ಆಪೀಸಿನಲ್ಲಿ ಯಾರಿಗ್ ಬೇಕಾದ್ರೂ ಕೇಳಬಹುದು. ನಾನು ಈ ಕೊಲೆ ಮಾಡಿಲ್ಲ ಸರ‍್”

“ನೀನ್ ಮಾಡಿಲ್ಲ, ಆದ್ರೆ ಯಾರ್ ಕೈಲಾದ್ರೂ ಮಾಡ್ಸಿದ್ರೆ?”

“ಇಲ್ಲಾ ಸರ್. ಕಂಡಿತಾ ಇಲ್ಲಾ”, ಎಂದ ದೀನನಾಗಿ.

“ಹೋಗಲಿ… ನಿನಗೆ ಯಾರ್ ಮೇಲಾದ್ರೂ ಅನುಮಾನ ಇದ್ಯಾ?”

“ಇಲ್ಲಾ ಸರ್… ಆದ್ರೆ ಸ್ವಲ್ಪ ದಿನದಿಂದಾ ಅವ್ನು ಹೆಚ್ಚು ಮಾತಾಡ್ತಿರಲಿಲ್ಲ. ಯಾವುದೋ ಟೆನ್ಶನ್ ನಲ್ಲಿದ್ದಾ ಅಂತಾ ನನಗನಿಸ್ತು”

“ಸರಿ. ನೀನಿನ್ನು ಹೊರಡಬಹುದು” ಎಂದು ಗಿರೀಶ್ ಅವನನ್ನು ಕಳುಹಿಸಿದ.

ನಂತರ ಗೋವಿಂದ ಬಂದ. ಅಗಲವಾದ ಮುಕ, ಮೈ. ಒಂದಿಂಚಶ್ಟು ಗಡ್ಡ ಮೀಸೆ ಬಿಟ್ಟಿದ್ದ. ಬಾಯಿಯಿಂದ ಸಿಗರೇಟು ವಾಸನೆ ಬರುತ್ತಿತ್ತು. ಸಿಗರೇಟು ಸೇದಿ, ಸೇದಿ ತುಟಿ ಸುಟ್ಟು ಕಪ್ಪಗಾಗಿದ್ದವು. ನೋಡಲು ಒರಟನಂತೆ ಕಂಡರೂ ಒಳ್ಳೆಯವನಂತೆ ತೋರಿಸಿಕೊಳ್ಳಲು ಸಾಕಶ್ಟು ಪ್ರಯತ್ನ ಪಡುತ್ತಿದ್ದ. ಮಾತಿನ ನಡುವೆ ಅತೀಯಾಗಿ “ಸರ್, ಸರ‍್” ಬಳಸಿ ಉತ್ತರಿಸುತ್ತಿದ್ದ. ಅವನ ಹಿನ್ನಲೆಯ ಕೇಳ್ವಿಗಳು ಮುಗಿದ ಮೇಲೆ, ಗಿರೀಶ್, ಕೇಸಿನ ವಿಶಯಕ್ಕೆ ಬಂದನು.

“ಸೋಮವಾರ ಸಂಜೆ ನೀನು ಎಲ್ಲಿದ್ದೆ?”

“ಅದು ಸರ್… ಅದು ಸರ್… ಬಾರ್ ನಲ್ಲಿದ್ದೆ” ನಾಚಿಕೊಳ್ಳುತ್ತಾ ಹೇಳಿದ.

“ಯಾವ್ ಬಾರ‍್? ನಿನ್ ಜೊತೆ ಯಾರಿದ್ರು?”

“ಸರ್, ಯಾರೂ ಇರಲಿಲ್ಲ ಸರ್. ನಾನೊಬ್ನೇ ಇದ್ದೆ”

“ಬಾರ್ ಬಿಲ್ ತೋರ‍್ಸು”

“ಬಿಲ್ ಇಲ್ಲಾ ಸರ್. ಅಲ್ಲಿ ಬಿಲ್ ಕೊಡೊಲ್ಲ”

“ಇರಲಿ. ನೀನು ಅಲ್ಲೇ ಇದ್ದೆ ಅನ್ನೊದನ್ನಾ ನಾವು ಕಾತ್ರಿ ಮಾಡ್ಕೋತೀವಿ. ಸುಳ್ಳು ಅಂತಾ ಗೊತ್ತಾದ್ರೆ ಅಶ್ಟೇ”

“ಇಲ್ಲಾ ಸರ್. ನಿಜಾ ಸರ‍್”

“ನಿನ್ನ ಮತ್ತು ಸಂಜಯ್ ನಡುವೆ ಜಗಳ ಆಗಿತ್ತಂತೆ? ಸುದಾ ನಮಗೆ ಹೇಳಿದ್ಳು”. ಸುಮ್ಮನೆ ಕಲ್ಲೆಸೆದ ಗಿರೀಶ್.

“ಜಗಳಾನಾ… ಇಲ್ಲ ಸರ್. ಅವ್ಳ ಮಾತನ್ನಾ ನಂಬಬೇಡಿ. ನನ್ ಕಂಡ್ರೆ ಆಗೊಲ್ಲಾ ಅವ್ಳಿಗೆ… ಅವಳಪ್ಪ ಹೂಂ ಅಂದಿದ್ರೆ ಯಾರಿಗೂ ತೊಂದ್ರೆ ಆಗ್ತಿರಲಿಲ್ಲ ಬಿಡಿ ಸರ‍್”

“ನಿನಗ್ಯಾರ ಮೇಲಾದ್ರು ಅನುಮಾನ ಇದ್ಯಾ?”

“ಒಬ್ಬರೇ ಸರ್… ಅಶೋಕ್ ಅರಸ್. ಯಾಕೆ ಅವರ ಮೇಲೆ ಅನುಮಾನ ಅಂತಾ ನಿಮಗೂ ಗೊತ್ತು ಅಲ್ವಾ?” ಅಂದ. ನಮ್ಮ ಕೇಳ್ವಿಗಳು ಮುಗಿದವು. ಅವನು ಹೊರಟುಹೋದ.

********************************************************

(ಮುಂದುವರೆಯುವುದು : ಮೂರನೇ ಕಂತು ನಾಳೆಗೆ)

( ಚಿತ್ರ ಸೆಲೆ: people.howstuffworks.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: