ಅಂದುಕೊಂಡ ಗುರಿಯನ್ನು ಮುಟ್ಟಬೇಕೆಂದರೆ…

– ವಿಜಯಮಹಾಂತೇಶ ಮುಜಗೊಂಡ.

failing-to-reach-a-goal

ನಾವೆಲ್ಲರೂ ಜೀವನದಲ್ಲಿ ಒಂದಲ್ಲ ಒಂದು ಗುರಿ ಇಟ್ಟುಕೊಂಡಿರುತ್ತೇವೆ. ದೊಡ್ಡ ಕಾಲೇಜು ಅತವಾ ಬಹಳಶ್ಟು ಇಶ್ಟಪಡುವ ಕೆಲಸಕ್ಕೆ ಸೇರುವುದು, ಸ್ವಂತ ಜಂಬಾರವೊಂದನ್ನು(business) ಬೆಳೆಸುವುದು, ಒಳ್ಳೆಯ ಮಾತುಗಾರರಾಗುವುದು ಅತವಾ ತೂಕ ಇಳಿಸುವುದು – ಹೀಗೆ ದೊಡ್ಡ ಅತವಾ ಸಣ್ಣ ಗುರಿಗಳು ನಮ್ಮ ಮುಂದೆ ಯಾವಾಗಲೂ ಇರುತ್ತವೆ. ಹೀಗೆ ಹಲವು ಗುರಿಗಳನ್ನು ಇಟ್ಟುಕೊಳ್ಳುವ ನಾವು, ಎಶ್ಟು ಸಲ ಗೆದ್ದಿದ್ದೇವೆ ಅತವಾ ನಮ್ಮ ಗುರಿಯನ್ನು ತಲುಪಿದ್ದೇವೆಯೇ? ಎನ್ನುವ ಕೇಳ್ವಿಗೆ, ಉತ್ತರ ಯಾವಾಗಲೂ ಅಶ್ಟೊಂದು ಸಮಾದಾನಕರವಾಗಿರುವುದಿಲ್ಲ. ತುಂಬಾ ಸಲ, ಕೆಲಸವನ್ನು ಕೈಗೆತ್ತಿಕೊಂಡ  ಮೊದಲಲ್ಲೇ ಅತವಾ ಕೆಲವೇ ದಿನಗಳಲ್ಲಿ, ‘ಇದಾಗುವುದಿಲ್ಲ’ ಎಂದು ಕೈಚೆಲ್ಲಿರುತ್ತೇವೆ. ‘ಅದು ಹೀಗೇಕೆ?’ ಎಂದು ನಮಗೆ ಆಗಾಗ ಅನಿಸುತ್ತಿರುತ್ತದೆ.

ಗಮನ, ದೊರೆತಕ್ಕಿಂತ(outcome) ಹೆಚ್ಚಾಗಿ ಹಮ್ಮುಗೆಯ(process) ಮೇಲಿರಲಿ.

“ಗುರಿ ಮುಟ್ಟುವಲ್ಲಿ ಹಲವು ಮಂದಿ ಎಡವುದೇಕೆ?” ಎಂಬುದರ ಕುರಿತು ಹಾರ್‍ವರ್‍ಡ್‌‌ನಲ್ಲಿ ಮನೋವಿಗ್ನಾನಿಯಾರುವ ಆಮಿ ಕಡ್ಡಿ (Amy Cuddy) ಅವರು ಇತ್ತೀಚಿಗೆ ಬಿಗ್ ತಿಂಕ್ ವಿಡಿಯೋ ಒಂದರಲ್ಲಿ ಮಾತನಾಡಿದ್ದಾರೆ. “ಹೆಚ್ಚಿನ ಮಂದಿ, ಹಮ್ಮುಗೆಯ ಬದಲಾಗಿ ದೊರೆತಕ್ಕೆ ಹೆಚ್ಚು ಒತ್ತುಕೊಡುವುದರಿಂದ  ಗುರಿ ತಲುಪುವಲ್ಲಿ ಎಡವುತ್ತಾರೆ” ಎನ್ನುತ್ತಾರೆ ಆಮಿ ಕಡ್ಡಿ. ಅತಿ ಸಣ್ಣ ಗೆಲುವುಗಳು ಉಂಟುಮಾಡುವ ಅತಿಯಾದ ಹೆಮ್ಮೆ ಅತವಾ ಹಿನ್ನಡೆಯಿಂದಾಗುವ ನಿರಾಸೆ ಮತ್ತು ಬೇಸರಗಳ ಸುತ್ತ, ಆಮಿ ಹಲವಾರು ಅರಕೆಗಳನ್ನು ನಡೆಸಿದ್ದಾರೆ. ಅವರು ಹೇಳುವಂತೆ, ಕೈಗೆಟುಕದ  ಗುರಿ ಇಟ್ಟುಕೊಳ್ಳುವ ಅತವಾ ಸರಿಯಾದ ಹಮ್ಮುಗೆಯಿಲ್ಲದೇ ತೊಡಗಿಕೊಳ್ಳುವ ಮಂದಿ, ತಾವಂದುಕೊಂಡಿದ್ದನ್ನು ಮಾಡಲಾಗದೇ ಕೈ ಚೆಲ್ಲುತ್ತಾರೆ.

ದೊಡ್ಡ ಗುರಿ, ಬಹಳ ದೂರ!

ಹತ್ತಿಪ್ಪತ್ತು ಕೆ.ಜಿ.ಯಶ್ಟು ತೂಕ ಇಳಿಸುವುದು ಅತವಾ ಬಹಳವಾಗಿ ಇಶ್ಟಪಡುವ ಕೆಲಸವೊಂದನ್ನು ಹಿಡಿಯುವುದು, ಬರೀ ಒಂದೆರಡು ದಿನದಲ್ಲಿ ಮಾಡಿ ಮುಗಿಸುತ್ತೇನೆ ಎನ್ನುವಶ್ಟು ಸಣ್ಣ ಕೆಲಸವಲ್ಲ. ಇಂತಹುದನ್ನು ಸಾದಿಸುವಲ್ಲಿ ಸಣ್ಣ ಸಣ್ಣ ಹೆಜ್ಜೆಗಳಿರುತ್ತವೆ. ಈ ಸಣ್ಣ ಸಣ್ಣ ಹೆಜ್ಜೆಗಳಲ್ಲಿಯೂ ಸೋಲಿನ ಸಾದ್ಯತೆಗಳಿರುತ್ತವೆ.

ಸರಿಯಾದ ಹಮ್ಮುಗೆಯನ್ನು ಹಾಕಿಕೊಳ್ಳುವುದೇ ಜಾಣನಡೆ!

ದೊಡ್ಡ ಗುರಿಯನ್ನು ದಿನವೊಂದಕ್ಕೆ ಅತವಾ ವಾರಕ್ಕೆ  ಸರಿಹೊಂದುವ ಸಣ್ಣ ತುಣುಕುಗಳಾಗಿ ಮಾಡಿ, ಒಂದೊಂದು ಸಣ್ಣ ತುಣುಕುನ್ನೂ ಗುರಿಯನ್ನಾಗಿ ನೋಡುವುದು, ದೊಡ್ಡ ಕೆಲಸವನ್ನು ಸುಳುವಾಗಿಸಬಲ್ಲುದು. ದೊಡ್ಡ ಗುರಿಯೊಂದನ್ನು ಬಿಟ್ಟು ಸಣ್ಣ ಕೆಲಸಗಳ ಮೇಲೆ ಗಮನ ಕೊಡುವುದು ಗುರಿ ಮುಟ್ಟುವಲ್ಲಿ ಹೇಗೆ ನೆರವಾಗಬಲ್ಲುದು ಎನ್ನುವ ಕೇಳ್ವಿ ಮೂಡಬಹುದು. ಕಿರು ಗಡುವಿನ ಗುರಿಗೆ, ‘ನಂಬಿಕೆಯ ಕಸುವು’ ಬಹಳ ಮುಕ್ಯ. ರಾತ್ರೋ ರಾತ್ರಿ ನೀವು ತೂಕ ಇಳಿಸಲಾರಿರಿ, ಆದರೆ ಸಿಗುವ ಹೊತ್ತನ್ನು ಸರಿಯಾಗಿ ಬಳಸುವತ್ತ ಗಮನಹರಿಸಬೇಕು.

ಪುಟ್ಟ ಪುಟ್ಟ ಬದಲಾವಣೆಗಳಿಗೆ ಒತ್ತು ಕೊಡಿ!

ಪುಟ್ಟ ಪುಟ್ಟ ಬದಲಾವಣೆಗಳ ಮೇಲೆ ಹೆಚ್ಚು ಗಮನವಹಿಸಿದರೆ, ಮುಟ್ಟಬೇಕಿರುವ ಗುರಿಯನ್ನು ತಲುಪಲು ಅದು ನೆರವಾಗುತ್ತದೆ ಎಂಬುದು ಸಾಕಶ್ಟು ಅರಕೆಗಳಿಂದ ತಿಳಿದುಬಂದಿದೆ. ಸಣ್ಣ ಸಣ್ಣ ಬದಲಾವಣೆಗಳಿಂದ ಒಳಿತಿನೆಡೆಗೆ ಸಾಗುವ ಕೈಜನ್ ಹಮ್ಮುಗೆಯೂ ಇದನ್ನೇ ಹೇಳುತ್ತದೆ.

ಹಿಂದೆಂದೂ ಮ್ಯಾರತಾನ್ ಪೈಪೋಟಿಯಲ್ಲಿ ಬಾಗವಹಿಸದವರು, ದಿನವೊಂದಕ್ಕೆ ಒಂದು ಮೈಲಿಯಶ್ಟು ಓಡುತ್ತಾ ಇದ್ದರೆ ಅದು ಕಶ್ಟ ಎನಿಸುವುದಿಲ್ಲ ಮತ್ತು ಅದು ತನ್ನಂಬುಗೆಯನ್ನು(self-confidence) ಹೆಚ್ಚಿಸುತ್ತದೆ. ಹೀಗೆ ಶುರು ಮಾಡಿಕೊಂಡ ಓಟವನ್ನು ನೀವು ಕೆಲವು ತಿಂಗಳುಗಳವರೆಗೆ ಮುಂದುವರೆಸಿದರೆ ನಿಮಗೆ ಗೊತ್ತಿಲ್ಲದಂತೆಯೇ ನೀವು ಮ್ಯಾರತಾನ್ ಓಟಕ್ಕೆ ಅಣಿಯಾಗಿರುತ್ತೀರಿ!

“ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ಕಣಜ”

ಈ ಗಾದೆಯೂ ಇದನ್ನೇ ಹೇಳುತ್ತದೆ ಅಲ್ಲವೇ?

(ಮಾಹಿತಿ ಮತ್ತು ಚಿತ್ರ ಸೆಲೆ: weforum.org, bigthink.com, wellequippedvolunteer.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: