ಕನ್ನಡಕ್ಕೆ ಹೋರಾಡುವೆಯಾ ಕನ್ನಡದ ಕಂದ?

– ಸುನಿಲ್ ಮಲ್ಲೇನಹಳ್ಳಿ.

nov1

ಕನ್ನಡಕ್ಕೆ ಹೋರಾಡು ಕನ್ನಡದ ಕಂದಾ
ಕನ್ನಡವ ಕಾಪಾಡು ನನ್ನ ಆನಂದಾ
ಜೋಗುಳದ ಹರಕೆಯಿದು ಮರೆಯದಿರು ಚಿನ್ನಾ
ಮರೆತೆಯಾದರೆ, ಅಯ್ಯೊ ಮರೆತಂತೆ ನನ್ನ

ಕನ್ನಡ ನುಡಿಯ ಬಗ್ಗೆ ಅದೆಶ್ಟು ಪ್ರೀತಿಪೂರ‍್ವಕ ಬಾವನೆಯಿಂದ ಮೇಲಿನ ಈ ಸಾಲುಗಳನ್ನು ಬರೆದಿದ್ದಾರೆ ರಾಶ್ಟ್ರಕವಿ ಕುವೆಂಪುರವರು. ರಾಜ್ಯೋತ್ಸವ ದಿನದ ಈವೊಂದು ಸುಸಂದರ‍್ಬದಲ್ಲಿ ನಾಡು-ನುಡಿಯೆಡೆಗೆ ಅಬಿಮಾನ ಅರಳಿಸುವ ಇಂತಾ ಗೀತೆಗಳ ಆಲಿಸುವ ಕಿವಿಗಳೇ ಮಹಾದನ್ಯ. ಕನ್ನಡಿಗರನ್ನು ಒಂದುಗೂಡಿಸುವಲ್ಲಿ ಕನ್ನಡ ನುಡಿಯೇ ಬಹುದೊಡ್ಡ ಪ್ರೇರಣಾ ಶಕ್ತಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಪಂಚದ ಯಾವುದೇ ಮೂಲೆಯಲ್ಲಿ ನಾವಿರಲಿ, ಅಲ್ಲಿ ಯಾರಾದರೂ ಕನ್ನಡದಲ್ಲಿ ಮಾತಾಡುತ್ತಿದ್ದರೆ ಅವರ ಬಗ್ಗೆ ಇನ್ನಿಲ್ಲದ ಪ್ರೀತ್ಯಾದರ ಬಾವ ನಮ್ಮಲ್ಲಿ ಒಡಮೂಡುವುದಂತೂ ಸತ್ಯ. ಸುಮಾರು 2 ಸಾವಿರ ವರ‍್ಶಗಳಿಗೂ ಹಿಂದಿನ ಇತಿಹಾಸ ಹೊಂದಿರುವ ಈ ನಮ್ಮ ಕನ್ನಡ ನುಡಿಯು ಸಾಹಿತ್ಯಕವಾಗಿ ಪ್ರತಿಯೊಂದು ಪ್ರಕಾರದಲ್ಲೂ ಪ್ರಬುದ್ದವಾಗಿ ಬೆಳದಿರುವ ಬಗ್ಗೆ ನಮಗೆಲ್ಲ ತಿಳಿದಿದೆ. ಪಂಪ-ರನ್ನ-ಪೊನ್ನರಿಂದ ಮೊದಲ್‌ಗೊಂಡು ಶರಣರು, ದಾಸರು, ಸರ‍್ವಜ್ನ, ಕುಮಾರವ್ಯಾಸ, ಹರಿಹರ, ರಾಗವಾಂಕ ಹಾಗೂ ನವ್ಯ-ನವೋದಯ ಸ್ತರದ ವಿಶಿಶ್ಟ ಪ್ರತಿಬೆವುಳ್ಳ ಕವಿಗಳಿಂದ ಕನ್ನಡ ಬಾಶೆಯು ಆರಾದಿಸಲ್ಪಟ್ಟಿದೆ. ಇದೆಲ್ಲವೂ ನಾವು ಹೆಮ್ಮೆಪಟ್ಟುಕೊಳ್ಳಬೇಕಾದ ವಿಚಾರವೇನೋ ಸರಿ.

ಆದರೆ, ಕವಿಗಳ ಬಾಶೆಯಾಗಿ ಸಾಹಿತ್ಯ ಕ್ಶೇತ್ರದಲ್ಲಿ ಮಾತ್ರವೇ ಕನ್ನಡ ಬೆಳೆದರಶ್ಟೇ ಸಾಕೆ? ಜನ ಸಾಮಾನ್ಯರ ಆಡುಬಾಶೆಯಾಗಿ, ಒಂದು ನಾಡಿನ ಆಡಳಿತ ಬಾಶೆಯಾಗಿ ಹಾಗೂ ಶಾಲಾ-ಕಾಲೇಜ್‌ಗಳಲ್ಲಿ ಶೈಕ್ಶಣಿಕ ಬಾಶೆಯಾಗಿ ಕನ್ನಡ ಎಶ್ಟರಮಟ್ಟಿಗೆ ಬಳಸಲ್ಪಡುತ್ತಿದೆ ಎನ್ನುವುದು ಕೂಡ ಅತೀ ಮುಕ್ಯ ಸಂಗತಿ ಅಲ್ಲವೇ? ಈ ವಿಚಾರವಾಗಿ ಪ್ರತಿಯೋರ‍್ವ ಕರುನಾಡ ಸುತನು ಗಹನವಾಗಿ ಯೋಚಿಸಬೇಕಾಗಿದೆ. ಏಕೆಂದರೆ ಕನ್ನಡ ಬಾಶೆಯೆಂಬುದು ಯಾರೊಬ್ಬರ ಸ್ವತ್ತಲ್ಲ. ಕನ್ನಡ ಬಾಶೆಯೆಂಬುದು ಆರುಕೋಟಿಗೂ ಹೆಚ್ಚಿರುವ ಕನ್ನಡಿಗರದ್ದು. ಅದನ್ನು ಜೋಪಾನ ಮಾಡಿ, ಪಾಲನೆ, ಪೋಶಣೆ ಮಾಡಬೇಕಾದ್ದು ಕನ್ನಡಿಗರಾದ ನಮ್ಮೆಲ್ಲರ ಆದ್ಯ ಕರ‍್ತವ್ಯ.

ಎಲ್ಲೆಲ್ಲೂ ಸ್ಪರ‍್ದಾತ್ಮಕತೆಯಿಂದ ಕೂಡಿರುವ ಈ ದಿನಗಳಲ್ಲಿ, ನಮ್ಮ ಮಕ್ಕಳ ಬದುಕು ಉಜ್ವಲವಾಗಿರಲು ಇಂಗ್ಲೀಶ್ ಬಾಶೆಯೇ ಪ್ರಬಲ ಸಾದನವೆಂದು ನಾವು ಬಹಳವಾಗಿ ನಂಬಿದ್ದೇವೆ. ಹಾಗಾಗಿ ಪಟ್ಟಣ, ಹಳ್ಳಿಯೆನ್ನದೆ ಶೈಕ್ಶಣಿಕ ಬಾಶೆಯನ್ನು ಆರಿಸಿಕೊಳ್ಳುವಲ್ಲಿ ಇಂಗ್ಲೀಶ್‌ನ ಕಡೆಗೆ ಹೆಚ್ಚಿನ ಆಸಕ್ತಿ ತೋರುತ್ತಾ ಬರುತ್ತಿದ್ದೇವೆ. ಮಕ್ಕಳಿಗೆ ಅ.ಆ.ಇ.ಈ ಕಲಿಸುವಲ್ಲಿ, ಎ.ಬಿ.ಸಿ.ಡಿಯನ್ನು ಅಕ್ಕರೆಯಿಂದ ಕಲಿಸುತ್ತಿದ್ದೇವೆ, ಒಂದು-ಎರಡು ಬಾಳೆ ಎಲೆ ಹರಡು ಎನ್ನುವಲ್ಲಿ, ಒನ್-ಟೂ ಬಕಲ್ ಮೈ ಶೂ ಎಂದು ಸಡಗರದಿಂದ ಹೇಳಿಕೊಡುತ್ತಿದ್ದೇವೆ. ಈ ಎಲ್ಲಾ ಬದಲಾವಣೆಗಳು ಸರಿಯೇ ಇಲ್ಲವೇ ತಪ್ಪೇ ಎಂಬುದನ್ನು ಅವಲೋಕಿಸುವ ಗೋಜಿಗೆ ನಾವು ಹೋಗುವುದಿಲ್ಲ.

ಇದರ ಜೊತೆಗೆ ಇಂಗ್ಲೀಶ್‌ನ್ನು ಒಂದು ಬಾಶೆಯಾಗಿ ನೋಡದೆ, ಅದನ್ನು ಕಲ್ಪವ್ರುಕ್ಶ, ಕಾಮದೇನುವಾಗಿ ನಾವು ನೋಡುತ್ತಿದ್ದೇವೆ! ಆ ಬಾಶೆಯನ್ನು ಕಲಿತರೆ ನಮ್ಮ ಮಕ್ಕಳು ಬದುಕಲ್ಲಿ ಎಲ್ಲವನ್ನೂ ಸಿದ್ದಿಸಿಕೊಂಡಂತೆ ಎಂಬ ಕಲ್ಪನೆಯೂ ನಮ್ಮಲ್ಲಿ ಆಳವಾಗಿ ಬೇರೂರಿದೆ. ವಾಸ್ತವಾಗಿ ಹೇಳುವುದಾದರೆ ಕನ್ನಡದಂತೆ ಇಂಗ್ಲೀಶ್ ಕೂಡ ಒಂದು ಬಾಶೆ ಅಶ್ಟೇ. ಅದನ್ನು ಕಲಿಯಲು ಜನ್ಮಾರಬ್ಯ ಮಕ್ಕಳು ಇಂಗ್ಲೀಶ್ ಬಾಶಾ ಮಾದ್ಯಮವನ್ನೇ ಆಯ್ಕೆ ಮಾಡಿಕೊಳ್ಳಬೇಕೆಂದಿಲ್ಲ. ಮಾತ್ರುಬಾಶೆಯ ಜೊತೆಗೆ ಆ ಬಾಶೆಯನ್ನು ಹಂತ, ಹಂತವಾಗಿ ಕಲಿತರಶ್ಟೆ ಸಾಕು. ಅಲ್ಲದೇ, ಇಂಗ್ಲೀಶ್ ಬಾಶೆಯನ್ನು ಕಲಿತ ಮಾತ್ರಕ್ಕೆ ಮಕ್ಕಳು ಬದುಕನ್ನು ಪರಿಪೂರ‍್ಣವಾಗಿ ರೂಪಿಸಿಕೊಂಡಂತೆಯೂ ಅಲ್ಲ. ಮಾತ್ರುಬಾಶೆಯ ಕಲಿಕೆ, ಸುತ್ತಮುತಲಿನ ಪರಿಸರದಲ್ಲಿ ಆಗುವ ಪ್ರತಿಯೊಂದು ಚಟುವಟಿಕೆಗಳ ಗ್ರಹಿಸುವ ಸಾಮರ‍್ತ್ಯ ಹಾಗೂ ಇವುಗಳಿಂದ ಮಕ್ಕಳು ಬೆಳಸಿಕೊಳ್ಳುವ ಜ್ನಾನ, ಇವೆಲ್ಲವೂ ಒಂದಕ್ಕೊಂದು ಸಾಕಶ್ಟು ಅವಲಂಬಿತವಾಗಿರುತ್ತವೆ. ಅಲ್ಲದೇ ಮಕ್ಕಳ ಬುದ್ದಿಸಾಮರ‍್ತ್ಯ ವಿಕಾಸ ಹೊಂದುವಲ್ಲಿ ಪ್ರಮುಕ ಪಾತ್ರವಹಿಸುತ್ತವೆ. ಆದ್ದರಿಂದ ಪರಿಸರದ ನುಡಿಯ ಕಲಿಕೆಯು ತುಂಬಾ ಮುಕ್ಯವಾದುದು. ಆದರೆ ಕನ್ನಡವು ಒಂದು ಪ್ರಾದೇಶಿಕ ಬಾಶೆ, ಆ ಬಾಶೆಯಿಂದ ನಮ್ಮ ಜ್ನಾನಸಂಪತ್ತನ್ನು ಎಶ್ಟರಮಟ್ಟಿಗೆ ವ್ರುದ್ದಿಸಿಕೊಳ್ಳಬಹುದು? ಅನ್ನೋ ಅಬಿಪ್ರಾಯ ನಮ್ಮಲ್ಲಿರುವುದಂತೂ ಅಕ್ಶರಶಹ ನಿಜ.

ಕನ್ನಡ ಬಾಶೆ ಹಾಗೂ ಅದರ ಸಾಹಿತ್ಯವನ್ನು ಸ್ವಲ್ಪವಾದರೂ ಅದ್ಯಯನ ಮಾಡದೆ, ಹೀಗೆ ಸುಕಾಸುಮ್ಮನೆ ಮನೋಬಿಪ್ರಾಯ ತಾಳಿದರೆ, ಅದು ತಪ್ಪು. ನಮ್ಮ ಶರಣರು ತಮ್ಮ ಬದುಕಲ್ಲಿ ಸಾಕ್ಶಾತ್ಕರಿಸಿಕೊಂಡ ಅರಿವು ಹಾಗೂ ಗಳಿಸಿಕೊಂಡ ಅನುಬವಗಳನ್ನು ತಿಳಿಸಲು ಬರೆದಿರುವ ವಚನಗಳು, ದಾಸರು ಕಂಡುಕೊಂಡ ಬಕ್ತಿಯೋಗಯುತ ಜೀವನಮಾರ‍್ಗವ ಬಿತ್ತರಿಸುವ ಪದಗಳು, ಎಲ್ಲರಿಂದಲೂ ಕಲಿತು, ಜ್ನಾನದ ಮೇರುಪರ‍್ವತದಂತಿದ್ದ ಸರ‍್ವಜ್ನನ ನುಡಿಗಟ್ಟುಗಳು, ಉತ್ಕ್ರುಶ್ಟವಾದ ಅರ‍್ತಸಾರ ತುಂಬಿಕೊಂಡಿರುವ ಶರೀಪಜ್ಜನ ಗೀತೆಗಳು, ಜನ ಸಾಮಾನ್ಯರು ಹುಟ್ಟುಹಾಕಿದ ಸತ್ವಬರಿತ ಜಾನಪದ ಹಾಡುಗಳು, ಬಾವ ಗೀತೆಗಳು, ಬಾಳಿಗೆ ಬೆಳಕಾಗಿ ಬರುವ ಗುಂಡಪ್ಪನವರ ಕಗ್ಗ, ವಿಸ್ಮಯ ಹಾಗೂ ವಿಡಂಬನೆಯಿಂದ ಕೂಡಿರುವ ರಾಜರತ್ನಂರ ಪದಗಳು, ಬೇಂದ್ರೆಯವರು ಕಶ್ಟಮಯವಾದ‌ ತಮ್ಮ ಜೀವನವನ್ನು ಕಾವ್ಯಮಯವಾಗಿಸಿ‌ ಬರೆದ ಅಪರೂಪವೆನ್ನುವ ಸಾಹಿತ್ಯ, ಓದುಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುವ ತೇಜಸ್ವಿಯವರ ಅತ್ಯದ್ಬುತ ಬರಹಗಳು, ಹೀಗೆ ಎಲ್ಲವೂ ಕನ್ನಡದಲ್ಲಿವೆ. ಇವೆಲ್ಲವನ್ನೂ ಮನಸಾರೆ ಓದುತ್ತಾ, ಕೇಳುತ್ತಾ, ರೂಡಿಸಿಕೊಳ್ಳುತ್ತಾ ಬೆಳೆಯುವವನು ಸಂಪಾದಿಸಿಕೊಳ್ಳೋ ಬದುಕಿನ ಪಾಟ, ಉನ್ನತ ಮಟ್ಟದ ಅರಿವು, ಆದರ‍್ಶ ಮಾನವ‌ತೆಯ ಗುಣಗಳು, ಅಲ್ಲದೇ ಯಾವುದೇ ವಿಚಾರವನ್ನು ಚಾಕಚಕ್ಯತೆಯಿಂದ ಅರ‍್ತೈಸಿಕೊಳ್ಳೊ ಮನೋಬಲ. ಇವುಗಳನ್ನು ಜಗತ್ತಿನ ಯಾವ ವಿದ್ಯಾಲಯವು ಕಲಿಸುವುದಿಲ್ಲ ಇಲ್ಲವೇ ಕಲಿಸಲು ಆಗುವುದಿಲ್ಲ. ಹೀಗಾಗಿ ಕನ್ನಡವು ನಮಗೆ ಬರೀ ಮಾತ್ರುಬಾಶೆ ಅಶ್ಟೇ ಅಲ್ಲ, ಕಲ್ಪವ್ರುಕ್ಶ, ಕಾಮದೇನು ಎಲ್ಲವೂ ಹೌದು. ಆದರೆ, ಕನ್ನಡ ಬಾಶೆಯಲ್ಲಿರುವ ಈ ಎಲ್ಲ ಮೌಲ್ಯಗಳನ್ನು ನಾವು ಅರಿಯದಿರುವುದು ದುರದ್ರುಶ್ಟಕರ.

ಕಳೆದ ಹತ್ತನ್ನೆರಡು ವರುಶಗಳಿಂದ ಮಾಹಿತಿ ತಂತ್ರಜ್ನಾನ, ಬ್ಯಾಕಿಂಗ್, ಕೈಗಾರಿಕೆ ಇನ್ನಿತರ ಕ್ಶೇತ್ರಗಳಲ್ಲಿ ಹೆಚ್ಚು, ಹೆಚ್ಚು ಉದ್ಯೋಗಾವಕಾಶಗಳು ಸ್ರುಶ್ಟಿಯಾಗುತ್ತಿರುವುದು ಸಂತೋಶದ ವಿಚಾರವೇ ಸರಿ. ಅಲ್ಲದೇ ನಾವೆಲ್ಲ ಆ ಕ್ಶೇತ್ರಗಳಲ್ಲಾಗುವ ವಿದ್ಯಮಾನಗಳ ಬಗ್ಗೆ ಸಾಕಶ್ಟು ಆಸಕ್ತರಾಗಿದ್ದೇವೆ. ಇಂಗ್ಲೀಶ್ ಬಾಶೆ ಕಲಿತರೆ ಇಂತಹ ಕ್ಶೇತ್ರಗಳಲ್ಲಿ ಕೆಲಸ ದಕ್ಕಿಸಿಕೊಳ್ಳುವುದು ಸುಲಬವೆಂದು‌ ಅಂದುಕೊಂಡಿದ್ದೇವೆ. ನೆನಪಲ್ಲಿಡಬೇಕಾದ ಅಂಶವೆಂದರೆ, ಇಂಗ್ಲೀಶ್ ಮಾದ್ಯಮದಲ್ಲಿ ಓದಿದರೆ ಮಾತ್ರವೇ ಕೆಲಸ ಕೊಡುತ್ತೇವೆ ಅನ್ನುವ ಕಟ್ಟಾಜ್ನೆಯನ್ನು‌ ಅತವಾ ಕಟ್ಟುಪಾಡನ್ನು ಯಾವ ಕಂಪನಿಯೂ ಮಾಡಿಲ್ಲ. ಅಲ್ಲಿ ಬೇಕಾಗಿರುವುದು ಕೆಲಸ ಮಾಡುವ ನಿಜವಾದ ಸಾಮರ‍್ತ್ಯ ಹೊರತು ಯಾವುದೇ ಬಾಶೆಯಲ್ಲಿನ ಪರಿಣಿತ ಜ್ನಾನವಲ್ಲ. ಒಂದರಿಂದ ಹತ್ತನೇ ತರಗತಿಯನ್ನು ಕನ್ನಡ ಮಾದ್ಯಮದಲ್ಲಿ ಓದಿ, ನಂತರದಲ್ಲಿ ಹೆಚ್ಚಿನ ವಿದ್ಯಾಬ್ಯಾಸವನ್ನು ಇಂಗ್ಲೀಶ್ ಮಾದ್ಯಮದ ಮೂಲಕ ಪಡೆದ ಲಕ್ಶಾಂತರ ಮಂದಿ ಅದರಲ್ಲೂ ಗ್ರಾಮೀಣ ಬಾಗದಿಂದ ಬಂದವರು ಮೇಲೆ ಹೆಸರಿಸಿರುವ ಕ್ಶೇತ್ರಗಳಲ್ಲಿ ಯಾರಿಗೂ ಕಡಿಮೆಯಿಲ್ಲದೆ ದಕ್ಶತೆಯಿಂದ ಕೆಲಸ ನಿರ‍್ವಹಿಸುತ್ತಿದ್ದಾರೆ. ಇಂತಹ ಕ್ಶೇತ್ರಗಳಿಗೆ ಸೇರಲು ಹಾಗೂ ಅವುಗಳಲ್ಲಿ ಕೆಲಸ ಮಾಡಲು ಬೇಕಾಗಿರುವುದು, ವಹಿಸಿದ ಕೆಲಸವನ್ನು ಶ್ರದ್ದೆ ಹಾಗೂ ಸಮರ‍್ಪಕವಾಗಿ ಮಾಡುವ ಮನೋಬಾವ. ಆಯಾಯ ರಂಗದಲ್ಲಿ ಚಾಲ್ತಿಯಲ್ಲಿರುವ ತಾಂತ್ರಿಕ ಬಾಶೆಗಳ ಅರಿವು, ತಮ್ಮ ಕೆಲಸಕ್ಕೆ ಸಂಬಂದಿಸಿದ ಕ್ಶೇತ್ರದಲ್ಲಿ ಆಗುವ ಬದಲಾವಣೆಗಳನ್ನು ತ್ವರಿತಗತಿಯಲ್ಲಿ ತಿಳಿಯುವುದು.

ನಮ್ಮ ಮಕ್ಕಳ ಉಜ್ವಲ ಬವಿಶ್ಯ ರೂಪಿಸುವಲ್ಲಿ ಕನ್ನಡಬಾಶೆಯು ಎಂದೆಂದೂ ದಾರಿದೀಪವಾಗಬಲ್ಲದು. ಆದರೆ, ನಮ್ಮಲ್ಲಿರುವ ಅನುಮಾನದ ಪರದೆಯನ್ನು ಕಳಚಬೇಕಾಗಿದೆ ಅಶ್ಟೇ. ನಾವು ನಮ್ಮ ಮಕ್ಕಳನ್ನು ನಾಡು-ನುಡಿಗಾಗಿ ಮಿಡಿಯುವ, ದುಡಿಯುವ, ಹೋರಾಡುವ ಕಂದನನ್ನಾಗಿಸೋಣವೇ? ಈ ಮೊದಲೇ ತಿಳಿಸಿದ ಹಾಗೆ ಕನ್ನಡ ಬಾಶೆಯೆಂಬುದು ಸಮಸ್ತ ಕನ್ನಡಿಗರ ಆಸ್ತಿ. ಅದನ್ನು ಉಳಿಸಿ, ಬೆಳಸಿ, ಶ್ರೀಮಂತಗೊಳಿಸುವುದು ಕನ್ನಡಿಗರಾದ ನಮ್ಮೆಲ್ಲರ ಪಾಲಿನ ಬಹುದೊಡ್ಡ ಜವಾಬ್ದಾರಿ.

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks