ಅಲ್ಲಮನ ವಚನಗಳ ಓದು – 7ನೆಯ ಕಂತು

– ಸಿ.ಪಿ.ನಾಗರಾಜ.

 

ದೇಹದೊಳಗೆ ದೇವಾಲಯವಿದ್ದು
ಮತ್ತೆ ಬೇರೆ ದೇವಾಲಯವೇಕೆ
ಎರಡಕ್ಕೆ ಹೇಳಲಿಲ್ಲಯ್ಯ ಗುಹೇಶ್ವರ
ನೀನು ಕಲ್ಲಾದರೆ ನಾನೇನಪ್ಪೆನು.

ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣಶರಣೆಯರು ದೇಗುಲವನ್ನು ನಿರಾಕರಿಸಿ, ದೇವರನ್ನು ಒಪ್ಪಿಕೊಂಡಿದ್ದರು. ಅವರ ದೇವರು “ಕಲ್ಲು/ಮಣ್ಣು/ಲೋಹ/ಮರದಿಂದ ಮಾಡಿದ” ಮೂರ‍್ತಿಯಾಗಿರಲಿಲ್ಲ. ವ್ಯಕ್ತಿಯ ಮಯ್-ಮನದಲ್ಲಿ ಅರಿವು ಮತ್ತು ಸಾಮಾಜಿಕ ಎಚ್ಚರವನ್ನು ನೀಡುವ ಒಳದನಿಯನ್ನು ದೇವರೆಂದು ತಿಳಿದಿದ್ದರು . ವ್ಯಕ್ತಿಯು ಜೀವನದಲ್ಲಿ ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಹ ನಡೆನುಡಿಗಳಲ್ಲಿ ದೇವರನ್ನು ಕಾಣುತ್ತಿದ್ದರು. ಆದುದರಿಂದಲೇ ಅಲ್ಲಮನು ತನ್ನ ದೇಹವನ್ನೇ ದೇವರು ನೆಲೆಸಿರುವ ದೇವಾಲಯವೆಂದು ಈ ವಚನದಲ್ಲಿ ಹೇಳಿದ್ದಾನೆ.

( ದೇಹದ+ಒಳಗೆ ; ದೇವ+ಆಲಯ+ಇದ್ದು ; ಆಲಯ=ನಿವಾಸ/ನೆಲೆಸಿರುವ ಜಾಗ ; ದೇವಾಲಯ=ದೇವರ ವಿಗ್ರಹ ನೆಲೆಗೊಂಡಿರುವ ಜಾಗ/ನೆಲೆ ; ಮತ್ತೆ=ತಿರುಗಿ/ಇನ್ನೊಮ್ಮೆ/ಆಮೇಲೆ ; ಬೇರೆ=ಇನ್ನೊಂದು/ಮತ್ತೊಂದು ; ದೇವಾಲಯ+ಏಕೆ ; ಎರಡು+ಅಕ್ಕೆ; ಅಕ್ಕೆ=ಆಗು/ಉಂಟಾಗು ; ಎರಡಕ್ಕೆ=ಸುಮ್ಮನೆ/ಕಾರಣವಿಲ್ಲದೆ ಎಂಬ ತಿರುಳಿನಲ್ಲಿ ಬಳಕೆಯಾಗುವ ಒಂದು ನುಡಿಗಟ್ಟು; ಹೇಳ್+ಅಲ್+ಇಲ್ಲ+ಅಯ್ಯ ; ಹೇಳಲಿಲ್ಲ+ಅಯ್ಯ ; ಗುಹೇಶ್ವರ=ಶಿವ ; ಕಲ್ಲು+ಆದರೆ ; ನೀನು ಕಲ್ಲಾದರೆ=ಜೀವ ಮತ್ತು ಮನದ ಒಳಮಿಡಿತಗಳಿಲ್ಲದ ಜಡವಸ್ತುವಾದ ಕಲ್ಲಿನ ರೂಪವನ್ನು ನೀನು ತಳೆದರೆ/ಹೊಂದಿದರೆ ; ನಾನ್+ಏನ್+ಅಪ್ಪೆನು; ಅಪ್ಪೆನು=ಆಗುವೆನು ; ನಾನೇನಪ್ಪೆನು=ನಾನು ಏನಾಗುವೆನು/ನಿನ್ನನ್ನೇ ನಂಬಿರುವ ನಾನು ಹೇಗೆ ತಾನೆ ಒಳ್ಳೆಯ ನಡೆನುಡಿಗಳುಳ್ಳ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲಿ?)

ಕಾಲೇ ಕಂಭಗಳಾದವೆನ್ನ
ದೇಹವೇ ದೇಗುಲವಾಯಿತ್ತಯ್ಯ
ಎನ್ನ ನಾಲಗೆಯೆ ಘಂಟೆ, ಶಿರ ಸುವರ್ಣದ ಕಳಶ ಇದೇನಯ್ಯ
ಸರವೆ ಲಿಂಗಕ್ಕೆ ಸಿಂಹಾಸನವಾಗಿದ್ದಿತ್ತಯ್ಯ
ಗುಹೇಶ್ವರ ನಿಮ್ಮ ಪ್ರಾಣಲಿಂಗಪ್ರತಿಷ್ಠೆ ಪಲ್ಲಟವಾಗದಂತಿದ್ದೆನಯ್ಯ.

 ಅಲ್ಲಮನು ರೂಪಕದ ನುಡಿಗಳ ಮೂಲಕ ಈ ವಚನದಲ್ಲಿ ತನ್ನ ದೇಹದ ಅಂಗಗಳನ್ನು ದೇಗುಲದ ಶಿಲ್ಪದೊಡನೆ ಜತೆಗೂಡಿಸಿ , ತನ್ನ ದೇಹವೇ ದೇವಾಲಯವಾಗಿರುವುದನ್ನು ಹೇಳಿದ್ದಾನೆ.

( ಕಾಲೇ=ನನ್ನ ಎರಡು ಕಾಲುಗಳು ; ಕಂಭಗಳ್+ಆದವು+ಎನ್ನ ; ಕಂಭ=ಮಾಳಿಗೆಗೆ ಆಸರೆಯಾಗಿ/ಒದೆಯಾಗಿ ನಿಲ್ಲಿಸುವ ಕಲ್ಲಿನ ಸಾಮಗ್ರಿ/ಉಪಕರಣ ; ಆದವು=ಆಗಿರುವುವು ; ಎನ್ನ=ನನ್ನ ; ದೇಹ=ಮಯ್/ಶರೀರ ; ದೇಗುಲ+ಆಯಿತ್ತು+ಅಯ್ಯ ; ದೇವ+ಕುಲ=ದೇಗುಲ ; ಕುಲ=ವಾಸದ ಜಾಗ/ಮನೆ/ನೆಲೆ ; ಶಿರ=ತಲೆ ; ಸುವರ್ಣ=ಚಿನ್ನ/ಹೊನ್ನು/ಬಂಗಾರ; ಕಳಶ=ದೇಗುಲದ ಗೋಪುರದ ತುತ್ತತುದಿಯಲ್ಲಿ ಕಂಡುಬರುವ ಕಂಚು/ಹಿತ್ತಾಳೆಯ ಹೊದಿಕೆಯಿಂದ ಕೂಡಿದ ವಸ್ತು ; ಇದು+ಏನ್+ಅಯ್ಯ ; ಸರ=ಉಲಿ/ದನಿ/ಶಿವನ ಹೆಸರಿನ ಉಚ್ಚಾರಣೆ ; ಸಿಂಹಾಸನ+ಆಗಿ+ಇದ್ದಿತ್ತು+ಅಯ್ಯ ; ಸಿಂಹ+ಆಸನ ; ಆಸನ=ಗದ್ದುಗೆ/ಕುಳಿತುಕೊಳ್ಳಲು ಬಳಸುವ ವಸ್ತು ; ಸಿಂಹಾಸನ=ಕಾಡಿನ ರಾಜನೆಂದು ಹೆಸರು ಪಡೆದಿರುವ ಸಿಂಹದ ಮೊಗದ ಕೆತ್ತನೆಯಿಂದ ಕೂಡಿರುವ ಗದ್ದುಗೆ ; ಪ್ರಾಣಲಿಂಗ=ಶಿವಶರಣಶರಣೆಯರ ಮಯ್-ಮನಗಳಲ್ಲಿ ನೆಲೆಸಿರುವ ಲಿಂಗ/ಶಿವಶರಣಶರಣೆಯರ ಒಳಿತಿನ ನಡೆನುಡಿಗಳಲ್ಲಿ ಒಂದಾಗಿ ಬೆರೆತಿರುವ ಲಿಂಗ ; ಪ್ರತಿಷ್ಠೆ=ಹಿರಿಮೆ/ದೊಡ್ಡತನ/ಕೀರ‍್ತಿ/ಮರ‍್ಯಾದೆ ; ಪಲ್ಲಟ+ಆಗದ+ಅಂತು+ಇದ್ದೆನ್+ಅಯ್ಯ ; ಪಲ್ಲಟ=ಬದಲಾವಣೆ/ಮಾರ‍್ಪಾಟು/ತಲೆಕೆಳಗು; ಅಂತು=ಹಾಗೆ ; ಪ್ರತಿಷ್ಠೆ ಪಲ್ಲಟವಾಗದಂತೆ=ಗುಹೇಶ್ವರನ ಹಿರಿಮೆಗೆ ಹಾನಿತಟ್ಟದಂತೆ/ಕೆಟ್ಟಹೆಸರು ಬರದಂತೆ ; ಇದ್ದೆನಯ್ಯ=ನಡೆದುಕೊಳ್ಳುತ್ತಿದ್ದೇನೆ)

ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದರೆ ದೇವರೆತ್ತ ಹೋದರೋ
ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ ಗುಹೇಶ್ವರ.

ಜಡರೂಪದ ದೇವರನ್ನು ನಿರಾಕರಿಸುವುದರ ಜತೆಗೆ, ಕಲ್ಲು/ಮರ/ಮಣ್ಣು/ಲೋಹದ ಲಿಂಗವನ್ನು ನೆಲೆಗೊಳಿಸುವ ಆಚರಣೆಯನ್ನೇ ಈ ವಚನದಲ್ಲಿ ಅಲ್ಲಮನು ಕಟುವಾದ ಮಾತುಗಳಿಂದ ಅಲ್ಲಗಳೆದಿದ್ದಾನೆ.

ಶಿವಶರಣಶರಣೆಯರು ದೇಗುಲವನ್ನು ನಿರಾಕರಿಸುವುದಕ್ಕೆ ಕಾರಣವೇನೆಂದರೆ , ಮೂರ‍್ತಿಯ ರೂಪದ ದೇವರನ್ನು ಗರ‍್ಬಗುಡಿಯಲ್ಲಿ ನೆಲೆಗೊಳಿಸುತ್ತಿದ್ದಂತೆಯೇ, ಅದರ ಹತ್ತಿರಕ್ಕೆ ಹೋಗಿ ಪೂಜಿಸಲು ಪೂಜಾರಿಯು ಮಾತ್ರ ಯೋಗ್ಯನಾಗುತ್ತಾನೆ. ಇನ್ನುಳಿದವರು ಗರ‍್ಬಗುಡಿಯಿಂದ ಹೊರನಿಲ್ಲಬೇಕಾಗುತ್ತದೆ. ಇಲ್ಲಿಂದಲೇ ಮಾನವರಲ್ಲಿ ಮೇಲು-ಕೀಳಿನ ವಿಂಗಡಣೆಯು ಮೊದಲಾಗುತ್ತದೆ. ಮೇಲು/ಕೀಳಿನ ಜಾತಿಮೆಟ್ಟಲುಗಳಿಂದ ಕೂಡಿರುವ ನಮ್ಮ ಸಮಾಜದ ಜಾತಿವ್ಯವಸ್ತೆಯ ಕಟ್ಟುಪಾಡುಗಳನ್ನು ದೇಗುಲದಲ್ಲಿ ನಡೆಯುವ ಆಚರಣೆಗಳು ಮುಂದುವರಿಸಿಕೊಂಡು ಹೋಗುತ್ತವೆ.  ಈ ರೀತಿ ಜಾತಿ ಮತ್ತು ವರ‍್ಗದ ವಿಂಗಡಣೆ ಮಾಡಿ ಜನಸಮುದಾಯದಲ್ಲಿ ಮೇಲು-ಕೀಳಿನ ತರತಮವು ಮುಂದುವರಿದುಕೊಂಡು ಹೋಗಲು ಕಾರಣವಾಗುವ ದೇಗುಲದ ನೆಲೆಯಿಂದ ಶಿವಶರಣಶರಣೆಯರು ದೂರಸರಿದಿದ್ದಾರೆ.

(ಕಲ್ಲ್+ಅ=ಕಲ್ಲ ; ಕಲ್ಲ=ಕಲ್ಲಿನ/ಕಲ್ಲನ್ನು ಬಳಸಿ ; ಕಲ್ಲ ಮನೆಯ ಮಾಡಿ=ಕಲ್ಲಿನ ದಿಂಡುಗಳಿಂದ ಅಡಿಪಾಯ ಹಾಕಿ, ಕಲ್ಲಿನಿಂದ ಗೋಡೆಗಳನ್ನು ಕಟ್ಟಿ , ನೆಲಕ್ಕೆ ಕಲ್ಲಿನ ಚಪ್ಪಡಿಗಳನ್ನು ಹಾಸಿ , ಕಲ್ಲಿನ ಕಂಬಗಳನ್ನು ನಿಲ್ಲಿಸಿ , ಮಾಳಿಗೆಗೆ ಕಲ್ಲಿನ ಹಾಸುಗಳನ್ನು ಹೊದಿಸಿ ದೇಗುಲವನ್ನು ಕಟ್ಟಿರುವುದು ; ಕಲ್ಲ ದೇವರ ಮಾಡಿ= ದೇವರ ವಿಗ್ರಹವನ್ನು ಕಲ್ಲಿನಿಂದಲೇ ಕಡೆದು ರೂಪಿಸಿ ; ಆ ಕಲ್ಲು=ಮಾಳಿಗೆಯಾಗಿ ಹೊದಿಸಿರುವ ಕಲ್ಲಿನ ಚಪ್ಪಡಿಗಳು ; ಕಲ್ಲ ಮೇಲೆ=ದೇವರ ವಿಗ್ರಹದ ಮೇಲೆ ; ಕೆಡೆ=ಬೀಳು ; ಕಲ್ಲ ಮೇಲೆ ಕೆಡೆದರೆ=ಗರ‍್ಬಗುಡಿಯಲ್ಲಿ ಇಟ್ಟಿರುವ ದೇವರ ವಿಗ್ರಹದ ಮೇಲೆ ಬಿದ್ದರೆ ; ದೇವರು+ಎತ್ತ ; ಎತ್ತ=ಯಾವ ಕಡೆಗೆ ; ಲಿಂಗ=ಶಿವನ ಸಂಕೇತದ ವಿಗ್ರಹ ; ಪ್ರತಿಷ್ಠೆ=ನೆಲೆಗೊಳಿಸುವುದು ;  ಲಿಂಗಪ್ರತಿಷ್ಠೆ=ಮೂರ‍್ತಿ ರೂಪದ ಲಿಂಗವನ್ನು ದೇಗುಲದಲ್ಲಿ ನೆಲೆಗೊಳಿಸುವಿಕೆ ;  ಮಾಡಿದವಂಗೆ=ಮಾಡಿದವನಿಗೆ  ; ನಾಯಕ=ಅತಿ ಹೆಚ್ಚಿನ ; ನರಕ=ಈ ಲೋಕದಲ್ಲಿ ಜನರಿಗೆ ಕೇಡನ್ನು ಬಗೆದು ಸಾವನ್ನಪ್ಪಿದ ವ್ಯಕ್ತಿಯು , ಅನಂತರ ತಾನು ಮಾಡಿದ ಕೆಟ್ಟಕೆಲಸಗಳಿಗೆ ತಕ್ಕಂತೆ ನಾನಾ ಬಗೆಯ ದಂಡನೆಗಳಿಗೆ ಗುರಿಯಾಗಿ ನರಳುವ ಮತ್ತೊಂದು ಲೋಕದಲ್ಲಿರುವ ಜಾಗ. ಜನರಿಗೆ ಕೇಡನ್ನು ಬಗೆದವರು ಸಂಕಟದ ನೆಲೆಯಾದ ನರಕಕ್ಕೆ , ಒಳಿತನ್ನು ಮಾಡಿದವರು ಆನಂದದ ನೆಲೆಯಾದ ಸ್ವರ‍್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯ ಜನಸಮುದಾಯದ ಮನದಲ್ಲಿದೆ; ನಾಯಕ ನರಕ=ಅತಿ ಹೆಚ್ಚಿನ ದಂಡನೆಗಳನ್ನು ನೀಡಿ ವ್ಯಕ್ತಿಯನ್ನು ಹಿಂಡಿಹಿಪ್ಪೆ ಮಾಡುವ ಜಾಗ. ಕೆಟ್ಟ ನಡೆನುಡಿಗಳಿಂದ ಜನರನ್ನು ವಂಚಿಸುವ ವ್ಯಕ್ತಿಗೆ ಹೆಚ್ಚಿನ ನೋವು/ಸಂಕಟ/ಹಾನಿಯುಂಟಾಗಲಿ ಎಂಬ ಒಳಮಿಡಿತದ ತಿರುಳಿನಲ್ಲಿ ಬಳಕೆಯಾಗುವ ಶಾಪರೂಪದ ನುಡಿಗಟ್ಟು; ಗುಹೇಶ್ವರ=ಶಿವ)

ಮಾಡಿದ ಓಗರ ಮಾಡಿದಂತೆ ಇದ್ದಿತ್ತು
ನೀಡಿದ ಕೈಗಳೆಡೆಯಾಡುತ್ತಿದ್ದವು
ಲಿಂಗಕ್ಕರ್ಪಿತವ ಮಾಡಿದೆನೆಂಬರು
ಒಂದರಲೊಂದು ಸವೆಯದು ನೋಡಾ
ಲಿಂಗವಾರೋಗಣೆಯ ಮಾಡಿದನೆಂಬರು
ತಾವುಂಡು ನಿಮ್ಮ ದೂರುವರು ಗುಹೇಶ್ವರ.

ದೇವರ ವಿಗ್ರಹದ ಮುಂದೆ ತಿನಿಸು-ಉಣಿಸುಗಳನ್ನಿಟ್ಟು ಮಾಡುವ ಆಚರಣೆಯಲ್ಲಿನ ಬೂಟಾಟಿಕೆಯನ್ನು ಕುರಿತು ಈ ವಚನದಲ್ಲಿ ಅಲ್ಲಮನು ಅಣಕವಾಡಿದ್ದಾನೆ.

( ಮಾಡಿದ=ಅಣಿಗೊಳಿಸಿದ/ತಯಾರಿಸಿದ ; ಓಗರ=ಅನ್ನ/ಅಟ್ಟ ಅಡುಗೆ/ತಿನಿಸುಉಣಿಸು ; ಮಾಡಿದ+ಅಂತೆ ; ಇದ್ದು+ಇತ್ತು ; ನೀಡಿದ=ಮುಂದೆ ಒಡ್ಡಿದ/ಚಾಚಿದ ; ಕೈಗಳ್+ಎಡೆ+ಆಡುತ್ತ+ಇದ್ದವು ; ಎಡೆ=ನಡುವೆ/ಹತ್ತಿರ ; ಎಡೆಯಾಡುತ್ತಿದ್ದವು=ತಿಂಡಿತಿನಿಸುಗಳುಳ್ಳ ತಟ್ಟೆಬಟ್ಟಲು ಮತ್ತು ಲಿಂಗದ ಬಾಯ ನಡುವೆ ಪೂಜಿಸುವವರ ಕಯ್ಗಳು ಲಿಂಗಕ್ಕೆ ತಿನಿಸುವಂತೆ ಅತ್ತಿತ್ತ ಆಡುತ್ತಿದ್ದವು ; ಲಿಂಗಕ್ಕೆ+ಅರ್ಪಿತವ ; ಲಿಂಗಕ್ಕೆ=ಶಿವನಿಗೆ ; ಅರ್ಪಿತ=ನೀಡುವುದು/ಕೊಡುವುದು/ಒಪ್ಪಿಸುವುದು ; ಮಾಡಿದೆನ್+ಎಂಬರು ; ಎಂಬರು=ಎನ್ನುವರು ; ಒಂದರಲ್+ಒಂದು ; ಸವೆ=ಕಡಿಮೆಯಾಗು/ಕರಗುವುದು/ಮುಗಿಯುವುದು/ತೀರುವುದು ; ಒಂದರಲೊಂದು ಸವೆಯದು= ಇತ್ತ ತಿಂಡಿತಿನಿಸಿನಲ್ಲಿ ತುಸುವಾದರೂ ಕಡಿಮೆಯಾಗಲಿಲ್ಲ ; ಅತ್ತ ಲಿಂಗರೂಪಿಯಾದ ಶಿವನು ತನಗೆ ನೀಡಿದ ವಸ್ತುಗಳಲ್ಲಿ ಒಂದನ್ನಾದರೂ ರುಚಿ ನೋಡಲಿಲ್ಲ. ನೋಡಾ=ತಿಳಿದು/ಅರಿತು ನೋಡು ; ಲಿಂಗವು+ಆರೋಗಣೆಯ ; ಆರೋಗಣೆ=ಊಟ/ಆಹಾರವನ್ನು ತೆಗೆದುಕೊಳ್ಳುವುದು ; ಮಾಡಿದನ್+ಎಂಬರು ; ಎಂಬರು=ಎನ್ನುತ್ತಾರೆ/ಹೇಳುತ್ತಾರೆ/ಮಾತನಾಡಿಕೊಳ್ಳುತ್ತಾರೆ: ತಾವ್+ಉಂಡು ; ತಾವುಂಡು=ದೇವರಿಗೆ ತಿನ್ನಿಸುತ್ತೇವೆ ಎಂದು ಅಣಿಗೊಳಿಸಿದ್ದೆಲ್ಲವನ್ನೂ ತಾವು ಕಬಳಿಸಿ ; ನಿಮ್ಮ ದೂರುವರು=ನಿಮ್ಮ ಮೇಲೆ ಅದರ ಹೊಣೆಯನ್ನು ಹೊರಿಸುವರು/ದೇವರು ಉಂಡನೆಂದು ಹೇಳುವರು; ಗುಹೇಶ್ವರ=ಶಿವ )

ಮರ್ತ್ಯಲೋಕದ ಮಾನವರು ದೇಗುಲದೊಳಗೊಂದು
ದೇವರ ಮಾಡಿದಡೆ ಆನು ಬೆರಗಾದೆನಯ್ಯ
ನಿಚ್ಚಕ್ಕೆ ನಿಚ್ಚ ಅರ್ಚನೆ ಪೂಜನೆಯ ಮಾಡಿಸಿ
ಭೋಗವ ಮಾಡುವರ ಕಂಡು ನಾನು ಬೆರಗಾದೆನು
ಗುಹೇಶ್ವರ ನಿಮ್ಮ ಶರಣರು ಹಿಂದೆ ಲಿಂಗವನಿರಿಸಿ ಹೋದರು.

ದೇಗುಲವನ್ನು ಕಟ್ಟಿ , ದೇವರ ಹೆಸರಿನಲ್ಲಿ ತಮಗೆ ಬೇಕಾದುದೆಲ್ಲವನ್ನೂ ಪಡೆದುಕೊಂಡು ಮೆರೆದು ನಲಿಯುವ ವ್ಯಕ್ತಿಗಳನ್ನು ಅಲ್ಲಮನು ಈ ವಚನದಲ್ಲಿ ಟೀಕಿಸಿದ್ದಾನೆ.

(ಮರ್ತ್ಯಲೋಕ=ಮಾನವರು ಮತ್ತು ಇನ್ನುಳಿದ ಜೀವಜಂತುಗಳು ನೆಲೆಸಿರುವ ಜಾಗ/ಪ್ರಪಂಚ/ಜಗತ್ತು ; ದೇಗುಲದ+ಒಳಗೆ+ಒಂದು ; ದೇವರ=ದೇವರನ್ನು ; ಮಾಡಿದಡೆ=ಮಾಡಿದರೆ/ನೆಲೆಗೊಳಿಸಿದರೆ; ದೇವರ ಮಾಡಿದಡೆ=ದೇವರ ವಿಗ್ರಹವನ್ನು ನೆಲೆಗೊಳಿಸಿದರೆ ; ಆನು=ನಾನು  ; ಬೆರಗು+ಆದೆನ್+ಅಯ್ಯ ; ಬೆರಗು=ಅಚ್ಚರಿ/ಸೋಜಿಗ ; ಆದೆನು=ಪಟ್ಟೆನು/ಹೊಂದಿದೆನು ; ನಿಚ್ಚ=ನಿತ್ಯವೂ/ಪ್ರತಿದಿನವೂ  ; ನಿಚ್ಚಕ್ಕೆ ನಿಚ್ಚ=ಎಡೆಬಿಡದೆ/ಒಂದೇ ಸಮನೆ/ನಿರಂತರವಾಗಿ ; ಅರ್ಚನೆ=ಪೂಜೆ/ಸೇವೆ ; ಪೂಜನೆ=ಮಂಗಳಾರತಿಯನ್ನು ಬೆಳಗುತ್ತ ಮಾಡುವ ಆಚರಣೆ ; ಭೋಗ=ಉಂಡುತಿಂದುಕುಡಿದು ಆನಂದದಿಂದ ಓಲಾಡುವುದು ; ಮಾಡುವರ=ಮಾಡುವವರನ್ನು ; ಕಂಡು=ನೋಡಿ ; ಭೋಗವ ಮಾಡುವವರು=ದೇವರ ಪೂಜೆಯ ನೆಪದಲ್ಲಿ ಜನರಿಂದ ಹಣಕಾಸನ್ನು ಸುಲಿದು ನಲಿವಿನಿಂದ ಮೆರೆಯುವವರು ; ಲಿಂಗವನ್+ಇರಿಸಿ ; ಇರಿಸಿ=ಇಟ್ಟು ;  ಶರಣ=ಶಿವನನ್ನು ಒಲಿದವರು/ಶಿವನನ್ನು ಮೆಚ್ಚಿದವರು/ಶಿವನ ಬಕ್ತರು ; ಶರಣರು ಹಿಂದೆ ಲಿಂಗವನಿರಿಸಿ ಹೋದರು= ಶಿವಶರಣಶರಣೆಯರಿಗೆ ವಿಗ್ರಹರೂಪದ ಶಿವಪೂಜೆಯಲ್ಲಿ ಯಾವುದೇ ನಂಬಿಕೆಯಾಗಲಿ ಇಲ್ಲವೇ ಆಸಕ್ತಿಯಾಗಲಿ ಇರಲಿಲ್ಲ. ಶಿವನು ಅವರ ಮಯ್-ಮನಗಳಲ್ಲಿಯೇ ನೆಲೆಗೊಂಡವನಾಗಿದ್ದ . ಆದುದರಿಂದಲೇ ವಿಗ್ರಹದ ರೂಪದ ಲಿಂಗದಿಂದ ಶಿವಶರಣಶರಣೆಯರು ದೂರಸರಿದರು)

ನಾ ದೇವನಲ್ಲದೆ ನೀ ದೇವನೆ
ನೀ ದೇವನಾದರೆ ಎನ್ನನೇಕೆ ಸಲಹೆ
ಆರೈದು ಒಂದು ಕುಡಿತೆ ಉದಕವನೆರೆವೆ
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ
ನಾ ದೇವ ಕಾಣಾ ಗುಹೇಶ್ವರ.

“ದೇವರು ಎಂಬುವನು ಮಾನವನ ಮನದ ಕಲ್ಪನೆಯಿಂದ ಮೂಡಿರುವ ವ್ಯಕ್ತಿ/ಶಕ್ತಿಯೇ ಹೊರತು ಮತ್ತೇನಲ್ಲ” ಎಂಬುದನ್ನು ಅಲ್ಲಮನು ಈ ವಚನದಲ್ಲಿ ಹೇಳಿದ್ದಾನೆ.

(ನಾ=ನಾನು ; ದೇವನ್+ಅಲ್ಲದೆ ; ನೀ=ನೀನು ; ದೇವನ್+ಆದರೆ ; ಎನ್ನನ್+ಏಕೆ ; ಎನ್ನನ್=ನನ್ನನ್ನು ; ಸಲಹು=ಕಾಪಾಡು ; ಎನ್ನನೇಕೆ ಸಲಹೆ=ನನ್ನನ್ನೇಕೆ ಕಾಪಾಡುವುದಿಲ್ಲ ; ಆರೈದು=ಯೋಚಿಸಿ/ಚಿಂತಿಸಿ/ಕಾಳಜಿಯಿಂದ ; ಕುಡಿತೆ=ಬೊಗಸೆ/ಅಂಗಯ್‍ಗಳನ್ನು ಜೋಡಿಸಿದಾಗ ಉಂಟಾಗುವ ಜಾಗ ; ಉದಕವನ್+ಎರೆವೆ ; ಉದಕ=ನೀರು ; ಎರೆ=ಸುರಿ/ಹಾಕು/ನೀಡು; ಎರೆವೆ=ನೀಡುತ್ತೇನೆ ; ಓಗರ+ಅನ್+ಇಕ್ಕುವೆ ; ಓಗರ=ಅನ್ನ/ಅಟ್ಟ ಅಡುಗೆ/ತಿಂಡಿತಿನಿಸು ;ಅನ್=ಅನ್ನು ; ಇಕ್ಕುವೆ=ಉಣಬಡಿಸುವೆ ; ಕಾಣಾ=ತಿಳಿದು ನೋಡು ; ಗುಹೇಶ್ವರ=ಶಿವ)

ಹಸಿವಿನ ಪ್ರೇಮಕ್ಕೆ ಬೋನವ ಹಿಡಿವರು
ತೃಷೆಯ ಪ್ರೇಮಕ್ಕೆ ಮಜ್ಜನಕ್ಕೆರೆವರು
ದೇವರಿಲ್ಲ ಭಕ್ತರಿಲ್ಲ ನಾನೂ ಇಲ್ಲ ನೀನೂ ಇಲ್ಲ
ಗುಹೇಶ್ವರ ಪೂಜಿಸುವರೂ ಇಲ್ಲ ಪೂಜೆಗೊಂಬವರೂ ಇಲ್ಲ.

ಶಿವಶರಣಶರಣೆಯರ ಪಾಲಿಗೆ ವಿಗ್ರಹದ ಮುಂದೆ ಮಾಡುವ ಎಲ್ಲಾ ಬಗೆಯ ಆಚರಣೆಗಳು ಕೇವಲ ತೋರಿಕೆಯ ಇಲ್ಲವೇ ಬೂಟಾಟಿಕೆಯ ಆಚರಣೆಗಳಾಗಿ ಕಂಡುಬರುತ್ತವೆ. ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿಗಳನ್ನು ರೂಪಿಸಿಕೊಳ್ಳಲು ನೆರವಾಗುವ ಮನದೊಳಗಿನ ಶಿವನನ್ನು ಮಾತ್ರ ಶಿವಶರಣಶರಣೆಯರು ಒಪ್ಪಿದ್ದರು ಮತ್ತು ನಂಬಿದ್ದರು. ವಿಗ್ರಹದ ರೂಪಿನಲ್ಲಿರುವ ಇಲ್ಲವೇ ಗುಡಿಗೋಪುರಗಳಲ್ಲಿ ಪೂಜೆಗೊಳ್ಳುವ ದೇವರ ಇರುವಿಕೆಯನ್ನು  ಅವರು ತಳ್ಳಿಹಾಕಿದ್ದರು. ಅಲ್ಲಮನು ದೇವರ ಹೆಸರಿನಲ್ಲಿ ನಡೆಯುವ ಆಚರಣೆಗಳನ್ನು ಈ ವಚನದಲ್ಲಿ ತಿರುಳಿಲ್ಲದ ಕೆಲಸಗಳೆಂದು ಅಲ್ಲಗಳೆದಿದ್ದಾನೆ.

( ಹಸಿವು=ಉಂಡು ತಿಂದು ಕುಡಿದು ಹೊಟ್ಟೆಯನ್ನು ತುಂಬಿಸಿಕೊಳ್ಳಬೇಕೆಂಬ ಬಯಕೆ/ಆಸೆ ; ಪ್ರೇಮ=ಒಲವು/ಅಕ್ಕರೆ/ಅನುರಾಗ ; ಹಸಿವಿನ ಪ್ರೇಮಕ್ಕೆ=ತಮ್ಮ ಹೊಟ್ಟೆಯ ಹಸಿವನ್ನು ಇಂಗಿಸಿಕೊಳ್ಳಲೆಂದು ; ಬೋನ=ಓಗರ/ಅನ್ನ/ಆಹಾರ/ತಿನಿಸುಉಣಿಸುಗಳು ; ಬೋನವ ಹಿಡಿವರು=ಬಗೆಬಗೆಯ ತಿನಿಸುಉಣಿಸುಗಳನ್ನು ದೇವರ ಮುಂದೆ ಎಡೆಯಾಗಿ ಇಡುವರು ; ತ್ರುಷೆ=ಬಾಯಾರಿಕೆ/ಕಾಮನೆ/ಆಸೆ/ಬಯಕೆ ; ತ್ರುಷೆಯ ಪ್ರೇಮಕ್ಕೆ=ದೇವರನ್ನು ಒಲಿಸಿಕೊಂಡು ತಮ್ಮ ಕಾಮನೆಗಳನ್ನು ಪೂರಯಿಸಿಕೊಳ್ಳಬೇಕೆಂಬ ಉದ್ದೇಶದಿಂದ ; ಮಜ್ಜನಕ್ಕೆ+ಎರೆವರು ; ಮಜ್ಜನ=ಸ್ನಾನ/ಜಳಕ/ಮಯ್ ತೊಳೆಯುವಿಕೆ; ; ಎರೆ=ಸುರಿ/ಹೊಯ್ಯು ; ಮಜ್ಜನಕ್ಕೆರೆವರು=ದೇವರ ವಿಗ್ರಹದ ಮೇಲೆ  ನೀರು/ಹಾಲು/ಜೇನು ಮುಂತಾದುವನ್ನು ಸುರಿದು , ವಿಗ್ರಹವನ್ನು ತೊಳೆಯುವರು ; ದೇವರ‍್+ಇಲ್ಲ ; ಭಕ್ತರ‍್+ಇಲ್ಲ ; ಗುಹೇಶ್ವರ=ಶಿವ ; ಪೂಜೆ+ಕೊಂಬವರೂ ; ಕೊಂಬವರು=ಪಡೆಯುವವರು/ಕೊಳ್ಳುವವರು)

( ಚಿತ್ರ ಸೆಲೆ: lingayatreligion.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.