ಬರ‍್ಮಾದ ‘ಪ್ಯು’ ಲಿಪಿಯ ಮೂಲ ಹಳಗನ್ನಡದ ‘ಕದಂಬ’ ಲಿಪಿ!

ಕಿರಣ್ ಮಲೆನಾಡು.

ನಮ್ಮ ನಾಡಿನ ಲಿಪಿಯು ಇನ್ನೊಂದು ನಾಡಿನ ಲಿಪಿಯ ಹುಟ್ಟಿಗೆ ಕಾರಣವಾದದ್ದು ಎಲ್ಲಾ ಕನ್ನಡಿಗರು ಹೆಮ್ಮೆಪಡುವ ಸಂಗತಿ. ಈಗಿನ ಬರ‍್ಮಾ ದೇಶದ ಹಳೆಯ ಲಿಪಿ “ಪ್ಯು” ಲಿಪಿಯ (Pyu Script) ಸೆಲೆ ಬನವಾಸಿ ಕದಂಬರ “ಕದಂಬ” ಲಿಪಿ (ಹಳಗನ್ನಡ ಲಿಪಿ). ಹೌದು, ಹಲವಾರು ಹಳಮೆಯ ಕುರುಹುಗಳಿಂದ ಈ ಮಾಹಿತಿ ದಿಟವಾಗಿದೆ.

ಪ್ಯು ನುಡಿಯ ಬಗ್ಗೆ

ಪ್ಯು ನುಡಿಯು (Pyu Language) ಬರ‍್ಮಾದಲ್ಲಿ ಸುಮಾರು 300 ಕ್ರಿ.ಪೂ ದಿಂದ 1300 ಕ್ರಿ.ಶ ದವರೆಗೆ ಬಳಕೆಯಲ್ಲಿದ್ದ ಪ್ಯು ಮಂದಿಯ ಆಡುನುಡಿಯಾಗಿತ್ತು. ಪ್ಯು ನುಡಿಯು ಸೈನೋ-ಟಿಬೆಟಿಯನ್ (Sino-Tibetian) ನುಡಿಕುಟುಂಬಕ್ಕೆ ಸೇರಿದ ಒಂದು ನುಡಿಯಾಗಿದೆ. ಬರ‍್ಮಾವನ್ನು ಸುಮಾರು 300 ಕ್ರಿ.ಪೂ ಯಿಂದ 1000 ಕ್ರಿ.ಶ ದವರೆಗೆ ಪ್ಯು-ಪಟ್ಟಣ-ನಾಡು (ಪ್ಯೂವು ಮ್ಯಾಹೋಟ್ಪ್ಯಾ ನಿನೆಂಗನ್ಮ್ಯಾರ‍್) (Pyu City State) ಎಂಬ ಹೆಸರಿನಲ್ಲಿ ಆಳಲಾಗುತ್ತಿತ್ತು. ಈ ಹೊತ್ತಿನಲ್ಲಿ ಹಲವಾರು ಪ್ಯು ನುಡಿಯನ್ನಾಡುವ ಅರಸುಮನೆತನಗಳು ಆಳಿವೆ, ಅವುಗಳಲ್ಲಿ ಹೆಸರುವಾಸಿಯಾದದ್ದು ತೆರವಾಡ ಬೌದ್ದ ದರ‍್ಮದ ಪಾಗನ್ ಅರಸೊತ್ತಿಗೆ (Pagan Kingdom, ಹೊತ್ತು: 849–1297 ಕ್ರಿ.ಶ). ಪ್ಯು ಅರಸೊತ್ತಿಗೆಗಳ ಕುರುಹುಗಳು ಮತ್ತು ಎಲ್ಲಾ ಕಲ್ಬರಹಗಳು ಹೆಚ್ಚಾಗಿ ಪ್ಯು ಲಿಪಿಯಲ್ಲಿದೆ.

padanerakeಇದೇ ಪ್ಯು ಲಿಪಿಯ ಮೂಲ ಬನವಾಸಿಯ ಕದಂಬರ ಹಳಗನ್ನಡ ಲಿಪಿಯಾದ ಕದಂಬ ಲಿಪಿ. ಪ್ಯು ನುಡಿ ಮತ್ತು ಕನ್ನಡಿಗರಿಗೆ ಯಾವುದೇ ನಂಟಿಲ್ಲ ಆದರೆ ಪ್ಯು ಲಿಪಿಗೆ ಮತ್ತು ಕದಂಬ ಲಿಪಿಗೆ ನಂಟಿದೆ! ಅದು ಹೇಗೆಂದು ಮುಂದೆ ತಿಳಿಯೋಣ. ಈ ಪ್ಯು ಲಿಪಿಯು ಹಲವು ಮಾರ‍್ಪಾಟುಗಳೊಂದಿಗೆ ಮುಂದೆ ಹೊಸ ಬರ‍್ಮಾ ಲಿಪಿಯಾಗಿ (Burmese Script) ಮುಂದುವರೆಯಿತು.

ಕದಂಬ ಲಿಪಿಯ ಕಿರುಪರಿಚಯ

ಕದಂಬರ ಆಡಳಿತದ (345–525 ಕ್ರಿ.ಶ) ಹೊತ್ತಿನಲ್ಲಿ ಬಳಕೆಯಲ್ಲಿದ್ದ ಹಳಗನ್ನಡದ ಲಿಪಿಯೇ ಈ ಕದಂಬ ಲಿಪಿ. ಈ ಕದಂಬ ಲಿಪಿಯು ನಡುಗನ್ನಡ ಮತ್ತು ಹೊಸಗನ್ನಡ ಲಿಪಿಯ ತಳಹದಿ ಎನ್ನಬಹುದು. ಅದೇ ರೀತಿಯಲ್ಲಿ ಕದಂಬ ಲಿಪಿಯಿಂದ ತೆಲುಗು ಲಿಪಿ ಕೂಡ ಹುಟ್ಟಿತೆಂದು ಹಳಮೆಯರಿಗರ ಅನಿಸಿಕೆ. ಕದಂಬರ ಕಾಲದ ಕನ್ನಡವನ್ನು ‘ಪಡುವಣ ಹಳಗನ್ನಡ’ವೆಂದು ಹೇಳಲಾಗುತ್ತದೆ. ಇದೇ ಕದಂಬ ಲಿಪಿಯನ್ನು ತಲಕಾಡಿನ ಗಂಗರು ಮತ್ತು ಬಾದಾಮಿ ಚಾಲುಕ್ಯರು ಕೆಲವು ಮಾರ‍್ಪಾಟುಗಳೊಂದಿಗೆ ತಮ್ಮ ಆಡಳಿತದಲ್ಲಿ ಬಳಸಿಕೊಂಡರು. ಕದಂಬ ಲಿಪಿಯಲ್ಲಿ ಹಲ್ಮಿಡಿ ಕಲ್ಬರಹ (450 ಕ್ರಿ.ಶ.), ತಡಗಣಿ (ಸುಮಾರು 500 ಕ್ರಿ.ಶ.), ತಮಟಕಲ್ಲು (ಸುಮಾರು 500 ಕ್ರಿ.ಶ.) ಮತ್ತು ಹಲವಾರು ಕಲ್ಬರಹಗಳನ್ನು ಕಾಣಬಹುದು.

ಪ್ಯು ಲಿಪಿಯ ಮೂಲ ಕದಂಬ ಲಿಪಿ

ಸುಳಿವು 1: ತೆಂಕು-ಮೂಡಣ ಏಶಿಯಾದ ಹಿನ್ನಡವಳಿಗ ಜಾವೋಚಿಮ್ ಶೆಲಿಸಿಂಗರ್ (Joachim Schliesinger) ಅವರ ಹೊತ್ತಗೆ “Origin of Man in Southeast Asia 2: Early Dominant Peoples of the Mainland Region” ಯಲ್ಲಿ ಪ್ಯು ಲಿಪಿಯ ಹಿಂದಿನ ಲಿಪಿ ತೆಂಕು-ಪಡುವಣ ಬಾರತದ ಕದಂಬ ಲಿಪಿ ಎಂಬ ಹುರುಳನ್ನು ನೀಡಿದ್ದಾರೆ.

pyuscript1

ಸುಳಿವು 2: “ಯೂನಿವರ‍್ಸಿಟಿ ಆಪ್ ವಾಶಿಂಗ್ಟನ್-ಏಶಿಯನ್ ಲಾಂಗ್ವೇಜ್ ಅಂಡ್ ಲಿಟರೇಚರ‍್”ನ ಮೇಲ್ಕಲಿಸುಗ (professor) ಸ್ಟೀಪನ್ ಬಾಮ್ಸ್ (Stefan Baums), ತೆಂಕು-ಮೂಡಣ ಏಶಿಯಾದ ಪ್ಯು ಲಿಪಿಯು ಕದಂಬ ಲಿಪಿಯಿಂದ ಮಾರ‍್ಪಾಟು ಹೊಂದಿದೆ ಎಂದು ಬರೆಯುತ್ತಾರೆ.

pyuscript2

ಸುಳಿವು 3: ಆಸ್ಟ್ರೇಲಿಯನ್ ನ್ಯಾಶನಲ್ ಯೂನಿವರ‍್ಸಿಟಿಯ ಹಳಮೆಯ ಮೇಲ್ಕಲಿಸುಗ ಮತ್ತು ಹಿನ್ನಡವಳಿಯರಿಗ ಡಾ. ಡಗ್ಲಾಡ್ ಓ’ರೆಲಿ (Dr. Dougald O’Reilly) ತಮ್ಮ ಹೊತ್ತಗೆಯಾದ “Early Civilizations of Southeast Asia” ದಲ್ಲಿ ಬರ‍್ಮಾದ ಹಳೆಯ ಲಿಪಿಯಾದ ಪ್ಯು ಲಿಪಿಯು ತೆಂಕಣ ಬಾರತದ ಕದಂಬ ಲಿಪಿಯಿಂದ ಬಂದಿದೆಯೆಂದು ತಿಳಿಸಿದ್ದಾರೆ.

pyuscript3ಸುಳಿವು 4: ಬರ‍್ಮಾದ ಹಿನ್ನಡವಳಿಯರಿಗ ತಾ ಸಿಯೆನ್ ಕೋ (Taw Sein Ko, ಹೊತ್ತು: 1864-1930) ಅವರು ಬರ‍್ಮಾದ ಪ್ಯು ಮತ್ತು ತಾಲೈಂಗ್(Talaing) ಲಿಪಿಗಳು ಕದಂಬ ಲಿಪಿಯಿಂದ ನೇರವಾಗಿ ಬಂದಿದೆಯೆಂದು ಹೇಳಿರುತ್ತಾರೆ, ಇದರ ಬಗ್ಗೆ ‘ಸೆಂಟರ್ ಪಾರ್ ಸೌತ್ ಅಂಡ್ ಸೌತ್ ಈಸ್ಟ್ ಏಶಿಯನ್ ಸ್ಟಡೀಸ್’ನ ನಡೆಸಾಳು (Director) ಲಿಪಿ ಗೋಶ್ (Lipi Ghosh) ಅವರು “Eastern Indian Ocean: Historical Links to Contemporary Convergences” ಹೊತ್ತಗೆಯಲ್ಲಿ ಮಾಹಿತಿ ನೀಡಿದ್ದಾರೆ.

pyuscript4

ಸುಳಿವು 5: ಸಾಲೇಸಿಯನ್ ಇನ್ಸ್ಟಿಟ್ಯೂಟ್ ಆಪ್ ಪಿಲಾಸಪಿಯ ಅರಿವಿನರಿಮೆಯರಿಗ (Philosopher) ಮತ್ತು ಅರಕೆಗಾರ (Researcher) ಇವೋ ಕೋಲೋ (Ivo Coelho) ಅವರು ಪ್ಯು ಲಿಪಿಯು ಕದಂಬ ಲಿಪಿಯಿಂದ ಬಂದಿದೆಯೆಂದು ತಮ್ಮ ಅರಕೆಯಲ್ಲಿ ತಿಳಿಸಿರುತ್ತಾರೆ. ಆ ಅರಕೆಯ ಹಾಳೆ ಇಲ್ಲಿದೆ ನೋಡಿ.

ಬರ‍್ಮಾದ ಪ್ಯು ಲಿಪಿಯು ಕದಂಬ ಲಿಪಿಯಿಂದ ಹುಟ್ಟಿದ್ದು ಹೀಗೆ

ಇಶ್ಟೆಲ್ಲಾ ಸುಳಿವು ನೀಡಿದ ಮೇಲೆ ಬರ‍್ಮಾದ ಪ್ಯು ಲಿಪಿಯು ಕದಂಬ ಲಿಪಿ ಮೂಲ ಹೇಗಾಯಿತು ಎಂಬ ಕೇಳ್ವಿ ಬರುತ್ತದೆ. ಇದರ ಬಗ್ಗೆ ಲಿಪಿ ಗೋಶ್ (Lipi Ghosh) ಅವರ “Eastern Indian Ocean: Historical Links to Contemporary Convergences” ಹೊತ್ತಗೆಯಲ್ಲಿ (ಸುಳಿವು 4) ಮಾಹಿತಿ ನೀಡಲಾಗಿದೆ. ತೆಂಕಣ-ಮೂಡಣ ಏಶಿಯಾದ (ಮೇಲಾಗಿ ಬರ‍್ಮಾದಲ್ಲಿ) 500-700 ಕ್ರಿ.ಶ. ಹೊತ್ತಿನ ಹಳೆಯ ಬರಹಗಳಲ್ಲಿನ ಲಿಪಿ ಕರ‍್ನಾಟಕದ ಲಿಪಿಗೆ ಹೋಲುತ್ತದೆ ಎಂದು ಗೋಶ್ ಅವರು ತಿಳಿಸಿರುತ್ತಾರೆ.

ತೆಂಕಣ-ಮೂಡಣ ಏಶಿಯಾದ ಕೆಲವು ಲಿಪಿಯ ಹುಟ್ಟಿಗೆ ವನವಾಸಿ (ಬನವಾಸಿ)ಯ ಕದಂಬರು ಮತ್ತು ಬಾದಾಮಿ ಚಾಲುಕ್ಯರ ಪಾತ್ರ ಹಿರಿದು ಎಂದು ತಿಳಿಸಿರುವ ಹೆಸರಾಂತ ಹಿನ್ನಡವಳಿಯರಿಗ ಡಿ. ಸಿ ಸಿರ‍್ಕಾರ್ (D.C Sircar) ಅವರ ಹುರುಳನ್ನು ತಮ್ಮ ಹೊತ್ತಗೆಯಲ್ಲಿ ಗೋಶ್ ಅವರು ನೀಡಿದ್ದಾರೆ. ಸುಮಾರು 500 ಐಹೊಳೆಯ ವ್ಯಾಪಾರಿಗಳು ಮೂಡಣದ ತಮಿಳುನಾಡು ಮತ್ತು ತೆಂಕಣ-ಮೂಡಣ ಏಶಿಯಾದಲ್ಲಿ ವಹಿವಾಟು ಚಟುವಟಿಕೆಗಳನ್ನು ಮಾಡುತ್ತಿದ್ದರು, ಅವರುಗಳಿಂದ ತೆಂಕಣ-ಮೂಡಣ ಏಶಿಯಾದಲ್ಲಿ ಕರ‍್ನಾಟಕದ ಲಿಪಿ (ಕದಂಬ ಲಿಪಿ) ಪರಿಚಯವಾಯಿತು ಎಂಬ ಹುರುಳನ್ನು ನೀಡಿದ್ದಾರೆ.

pyuscript5

ಕದಂಬ ಮತ್ತು ಪ್ಯು ಲಿಪಿಯ ಹೋಲಿಕೆ

ಕದಂಬ ಮತ್ತು ಪ್ಯು ಲಿಪಿಯ ಹೋಲಿಕೆ ಮಾಡಿ ನೋಡಿದಾಗ ಈ ಎರಡು ಲಿಪಿಗಳ ಬರಿಗೆಗಳ ನಡುವೆ ಹೋಲಿಕೆ ಕಂಡುಬರುತ್ತವೆ.

ಹೋಲಿಕೆ 1:

pyuscript6

ಹೋಲಿಕೆ 2:

pyuscript7
ಕೊನೆಯ ಮಾತು

ನಮ್ಮ ನಾಡಿನ ಲಿಪಿಯು ಬೇರೆ ನಾಡಿನ ಲಿಪಿಯ ಹುಟ್ಟಿಗೆ ಕಾರಣವಾಗಿದ್ದುದು ಎಲ್ಲಾ ಕನ್ನಡಿಗರು ಹೆಮ್ಮೆ ಪಡುವಂತಹ ಸಂಗತಿ. ನಮ್ಮ ನಾಡು ಮತ್ತು ನುಡಿ ಹಳಮೆಯಲ್ಲಿ ಇಂತಹ ಹಲವಾರು ಹಿರಿಮೆಗಳಿವೆ, ಕನ್ನಡದ ಅರಕೆಗಾರ ಮತ್ತು ಕವಿ ಗೋವಿಂದ ಪೈಯವರು ಈಜಿಪ್ಟಿನಲ್ಲಿ ಸಿಕ್ಕಿರುವ ಕೆಲವು ಗ್ರೀಕಿನ ಅಚ್ಚೊತ್ತುಗಳಲ್ಲಿನ (Records) ಕನ್ನಡ ಪದಗಳ ಬಗ್ಗೆ ತಿಳಿಸಿರುತ್ತಾರೆ, ಇನ್ನು ಸುಮಾರು 200 ಕ್ರಿ.ಶ ಹೊತ್ತಿನ ಗ್ರೀಕಿನ ನೆಲದರಿಗ (Geographer) ಮತ್ತು ಬಾನರಿಗ (Astronomer) ಟಾಲೆಮಿ (Ptolemy) ಕರ‍್ನಾಟಕದ ಹಲವು ತಾಣಗಳ ಹೆಸರನ್ನು ಹೆಸರಿಸುತ್ತಾನೆ, ಈ ನಿಟ್ಟಿನಲ್ಲಿ ನಮ್ಮ ಮಂದಿಯಾಳ್ವಿಕೆ ಮತ್ತು ಹಳಮೆಯಲ್ಲಿ ಒಲವಿರುವ ಕನ್ನಡಿಗರು ಇದರ ಬಗ್ಗೆ ಅರಕೆ ಮಾಡಬೇಕಾಗಿದೆ.

(ಮಾಹಿತಿ ಸೆಲೆ: ancient-origins.net, googlebooks, books.google.co.inivocoelho.blogspot.in)
(ಚಿತ್ರ ಸೆಲೆ: pinterest.comancientscripts.com)Categories: ನಾಡು

ಟ್ಯಾಗ್ ಗಳು:, , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s