ಸೊಬಗಿನ ಸಿರಿ ಸಾಲ್ಜ್‌ಬರ‍್ಗ್

ಜಯತೀರ‍್ತ ನಾಡಗವ್ಡ.

dsc_0464

ಆಸ್ಟ್ರಿಯಾ, ಯುರೋಪ್ ಒಕ್ಕೂಟದ ಒಂದು ಪುಟ್ಟ ನಾಡು. ಹಿನ್ನಡವಳಿ ನೋಡಿದಾಗ, ಇದು ಜರ‍್ಮನಿಯ ಬಾಗವಾಗಿತ್ತು. ಜರ‍್ಮನಿಯಿಂದ ಬೇರ‍್ಪಟ್ಟ ನಂತರ ಆಸ್ಟ್ರಿಯಾ ಹೊಸ ನಾಡಾಗಿ ಬೆಳೆಯಿತು. ಬಡಗಣದಲ್ಲಿ ಜೆಕ್ ಗಣನಾಡು, ಮೂಡಣದಲ್ಲಿ ಸ್ಲೋವಾಕಿಯಾ ಮತ್ತು ಹಂಗೇರಿ, ತೆಂಕಣದಲ್ಲಿ ಇಟಲಿ, ಸ್ವಿಜರ್ ಲ್ಯಾಂಡ್, ಸ್ಲೋವೆನಿಯಾ ಮತ್ತು ಪಡುವಣ ದಿಕ್ಕಿನಲ್ಲಿ ಜರ‍್ಮನಿ ನಾಡುಗಳಿಂದ ಆಸ್ಟ್ರಿಯಾ ಸುತ್ತುವರೆದಿದೆ. ಕಣ್ಮನ ಸೆಳೆಯುವ ಮಂಜಿನ ಆಲ್ಪ್ಸ್ ಗುಡ್ಡಗಳು ಆಸ್ಟ್ರಿಯಾ ನಾಡಿನ ಮೂಲಕವೂ ಹಾದು ಹೋಗುತ್ತವೆ. ಹೀಗಾಗಿ ಆಸ್ಟ್ರಿಯಾದೆಲ್ಲೆಡೆ ಸಾಕಶ್ಟು ಅಂದದ ಪ್ರಕ್ರುತಿಯ ಸೊಬಗು ನೋಡ ಸಿಗುತ್ತದೆ. ಆಸ್ಟ್ರಿಯಾ ನಾಡಿನ ಹೆಸರುವಾಸಿ ಊರುಗಳಲ್ಲೊಂದಾದ ಸಾಲ್ಜ್‌ಬರ‍್ಗ್ ಬಗ್ಗೆ ಈ ಬರಹ. ಸಾಲ್ಜ್‌ಬರ‍್ಗ್ ಊರು ಆಲ್ಪ್ಸ್ ಮಂಜಿನ ಗುಡ್ಡಗಳಡಿ, ಸಾಲ್ಜಾಕ್ ಹೊಳೆಯ ತಟದಲ್ಲಿ ನೆಲೆಸಿದೆ. ಕಣ್ಣಿಗೆ ಹಬ್ಬವುಂಟು ಮಾಡುವ, ಹಲವು ನೋಡತಕ್ಕ ಜಾಗಗಳು ಸಾಲ್ಜ್‌ಬರ‍್ಗ್ ಸುತ್ತ-ಮುತ್ತ ಕಂಡು ಬರುತ್ತವೆ.

ಮೊಜಾರ‍್ಟ್‌ ರವರ ಹುಟ್ಟಿದ ಮನೆ (Mozart Geburtshaus):

ಕಲೆ, ಹಾಡುಗಾರಿಕೆ ಬಗ್ಗೆ ಒಲವು ಹೊಂದಿದವರಿಗೆ ಮೊಜಾರ‍್ಟ್ ಹೆಸರು ಕೇಳಿದ ತಕ್ಶಣ ಕಿವಿ ಎದ್ದು ನಿಲ್ಲುತ್ತವೆ. ಮೊಜಾರ‍್ಟ್ ಎಂಬಾತ ಜಗತ್ತಿನ ಹೆಸರುವಾಸಿ ಪಿಟೀಲು ಹಾಗೂ ಕೀಲಿಮಣೆ ನುಡಿಸುಗ. ಇವರ ಹುಟ್ಟೂರು ಸಾಲ್ಜ್‌ಬರ‍್ಗ್. 18ನೇ ನೂರೇಡಿನಲ್ಲಿ(Century) ಮೂಡಣದಿಂದ ಪಡುವಣದೆಡೆ ಹೆಸರು ಮಾಡಿದ್ದ ಮೊಜಾರ‍್ಟ್ ಹುಟ್ಟಿದ ಮನೆ ಸಾಲ್ಜ್‌ಬರ‍್ಗ್ ಊರಿನ ನಡುಬಾಗದಲ್ಲಿಯೇ ಇದೆ. ಇಲ್ಲಿ, ಮೊಜಾರ‍್ಟ್ ರ ಹೊತ್ತಿನಲ್ಲಿ ಬಳಕೆಯಾಗುತ್ತಿದ್ದ ಹಾಡುಗಾರಿಕೆಯ ವಿವಿದ ವಸ್ತುಗಳು, ಅವರು ಗಳಿಸಿದ ಬಹುಮಾನಗಳು, ನಡೆಸಿಕೊಟ್ಟ ಕಚೇರಿ ಮತ್ತು ಹಿನ್ನಡವಳಿಯ ಇತರೆ ವಿಶಯಗಳನ್ನು ಕುರಿತಾದ ತಿಟ್ಟಗಳನ್ನು ಕಾಣಬಹುದು. ಇದು ಒಡವೆಮನೆಯಾಗಿದ್ದು(Museum), ದಿನವೂ ಸಾವಿರಾರು ಮಂದಿ ಬೇಟಿಕೊಡುವ ಜಾಗ. ಮೊಜಾರ‍್ಟ್ ನೆನಪಿನಲ್ಲಿ ವರುಶ ಪೂರ‍್ತಿ ಇಲ್ಲಿ ಹಾಡುಗಾರಿಕೆ, ವಾದ್ಯ ನುಡಿಸುವಿಕೆಯ ಕಾರ‍್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ಇದೇ ಬೀದಿಯಲ್ಲಿ ಸಾಕಶ್ಟು ನೆನಪಿನ ಕಾಣಿಕೆಯ ಅಂಗಡಿಗಳು, ಚಾಕೋಲೇಟ್ ಅಂಗಡಿಗಳು ಮನೆ ಮಾಡಿವೆ. ಮೊಜಾರ‍್ಟ್ ಚಾಕೋಲೇಟ್ ಗಳು ಇಲ್ಲಿನ ವಿಶೇಶತೆ. ಇಲ್ಲಿಗೆ ಬರುವ ಹೆಚ್ಚಿನ ಮಂದಿ ಈ ಚಾಕೋಲೇಟ್ ಸವಿಯದೇ ಇರುವುದಿಲ್ಲ.

ಮೊಜಾರ‍್ಟ್‌ ರವರ ಹುಟ್ಟಿದ ಮನೆ

ಮೊಜಾರ‍್ಟ್‌ ರವರ ಹುಟ್ಟಿದ ಮನೆ

ಸಾಲ್ಜ್‌ಬರ‍್ಗ್, ಪನೋರಮಾ ಒಡವೆಮನೆ ಮತ್ತು ಡೋಮ್ ಟ್ಜು ಸಾಲ್ಜ್‌ಬರ‍್ಗ್ (Salzburg Museum, Panorama Museum and Dome Zu Salzburg):

ಮೊಜಾರ‍್ಟ್ ಹುಟ್ಟಿದ ಮನೆಯಿಂದ ಕೆಲವೇ ಮೀಟರ‍್‌ಗಳ ಅಂತರದಲ್ಲಿ ರೆಸಿಡೆನ್ಸ್ ಪ್ಲಾಟ್ಜ್ ಎಂಬ ಜಾಗದಲ್ಲಿ ಸಾಲ್ಜ್‌ಬರ‍್ಗ್ ಒಡವೆಮನೆ, ಅದರ ಪಕ್ಕದಲ್ಲಿ ಪನೋರಮಾ ಒಡವೆಮನೆಗಳಿವೆ. ಸಾಲ್ಜ್‌ಬರ‍್ಗ್ ಹಳಮೆಯ ಕತೆಯನ್ನು ಈ ಒಡವೆಮನೆಗಳಲ್ಲಿ ಕಾಣಬಹುದು. ಮದ್ಯ ನೂರೇಡಿನ (Medieval Century) ಕಟ್ಟುವಿಕೆ, ಆವೊತ್ತಿನ ಆಯುದಗಳು, ಅರಸು-ಅರಸಿಯರ ಉಡುಗೆಗಳು, ಸಯ್ನಿಕರ ತಲೆಗಾಪು, ಕತ್ತಿ-ಗುರಾಣಿಗಳು ಸಾಲ್ಜ್‌ಬರ‍್ಗ್ ಒಡವೆಮನೆಯಲ್ಲಿ ಕಂಡುಬರುತ್ತವೆ. ಆಗಾಗ ಇಲ್ಲಿ ಕಲೆ, ಬಣ್ಣದ ಕಲೆ ಮುಂತಾದವುಗಳ ತೋರ‍್ಪುಗಳು(Exhibitions) ನಡೆಯುತ್ತಿರುತ್ತವೆ.

ಸಾಲ್ಜ್‌ಬರ‍್ಗ್ ಒಡವೆಮನೆ

ಸಾಲ್ಜ್‌ಬರ‍್ಗ್ ಒಡವೆಮನೆ

ಪನೋರಮಾ ಒಡವೆಮನೆಯಲ್ಲಿ ಸಾಲ್ಜ್‌ಬರ‍್ಗ್ ಊರಿನ ಹರವಿನ ನೋಟದ ತಿಟ್ಟ ನೋಡಬಹುದು. ಯೊಹಾನ್ ಮೈಕಲ್ ಸ್ಯಾಟ್ಲರ್(Johann Michael Sattler) ಮತ್ತು ಆತನ ಜೊತೆಗಾರರಾದ ಪ್ರೆಡ್‌ರಿಶ್ ಲೂಸ್(Friedrich Loos), ಯೊಹಾನ್ ಯೋಸೆಪ್ ಶಿಂಡ್ಲರ್(Johann Joseph Schindler) ಸೇರಿ 1825ರಲ್ಲಿ ಸಾಲ್ಜ್‌ಬರ‍್ಗ್ ಊರಿನ ಉದ್ದಗಲ ತೋರಿಸುವ ಹರವಿನ ನೋಟವನ್ನು(Panoramic View) ಬಣ್ಣದಲ್ಲಿ ಬಿಡಿಸಿದ್ದರು. ಈ ಮನಸೂರೆಗೊಳ್ಳುವ ಅಂದದ ತಿಟ್ಟ ಪನೋರಮಾ ಒಡವೆಮನೆಯ ವಿಶೇಶತೆಯಾಗಿ ಕೈಬೀಸಿ ಕರೆಯುತ್ತದೆ. ಈ ತಿಟ್ಟ ಎಶ್ಟು ಕ್ಯಾತಿ ಪಡೆದಿತ್ತು ಎಂದರೆ 1829 ರಿಂದ 1839 ರವರೆಗೆ ಯುರೋಪಿನ ಪ್ರಮುಕ ಪಟ್ಟಣಗಳಾದ ಮ್ಯುನಿಕ್, ಪ್ಯಾರಿಸ್, ಕೊಲೊನ್, ಒಸ್ಲೋ, ಅಮ್ಸ್ಟರ್ ಡ್ಯಾಮ್, ಬ್ರುಸ್ಸೆಲ್ಸ್, ಗೊತೆನ್ ಬರ‍್ಗ್, ವಿಯನ್ನಾ, ಪ್ರಾಗ್ ಮುಂತಾದ ಕಡೆ ನಡೆದ ತೋರ‍್ಪುಗಳಲ್ಲಿ ಸ್ಯಾಟ್ಲರ್ ಇರಿಸಿದ್ದನು. ಇಂದಿಗೂ, ಇದು ಯುರೋಪಿನ ಹಳಮೆಯ ಹರವಿನ ನೋಟದ ತಿಟ್ಟಗಳಲ್ಲೊಂದಾಗಿ ದೊಡ್ಡ ಹೆಸರು ಮಾಡಿದೆ.

ನ್ಯೂ ರೆಸಿಡೆನ್ಸ್ ಎಂಬುದು ಅಂದಿನ ಅರಸರ ಅರಮನೆಯಾಗಿತ್ತು. ಈ ಅರಮನೆಯ ಒಂದು ಬಾಗ ಸಾಲ್ಜ್‌ಬರ‍್ಗ್ ಒಡವೆಮನೆ, ಹಳೆಯದಾದ ಇನ್ನೊಂದು ಬಾಗ ಪನೋರಮಾ ಒಡವೆಮನೆಯಾಗಿ ಬದಲಾಗಿವೆ. 2007ರಲ್ಲಿ ಸಾಲ್ಜ್‌ಬರ‍್ಗ್ ಒಡವೆಮನೆಯನ್ನು ಹೊಸದಾಗಿಸಲಾಗಿದೆ. ಹಲವಾರು ವರುಶಗಳಿಂದ ಹಲತನಗಳನ್ನು ಎತ್ತಿಹಿಡಿದಿರುವ ಯುರೋಪ್ ಒಕ್ಕೂಟದ ನಾಡುಗಳು, ಹೆಚ್ಚಿನ ಎಲ್ಲ ಪ್ರವಾಸಿ ತಾಣಗಳಲ್ಲಿ ಸ್ತಳೀಯ ನುಡಿ ಸೇರಿದಂತೆ ಹಲವಾರು ನುಡಿಗಳಲ್ಲಿ ಮಾಹಿತಿ ಒದಗಿಸುತ್ತವೆ. ಸಾಲ್ಜ್‌ಬರ‍್ಗ್‌ನ ತಾಣಗಳು ಇದಕ್ಕೆ ಹೊರತಾಗಿಲ್ಲ.

ಪನೋರಮಾ ಒಡವೆಮನೆ

ಪನೋರಮಾ ಒಡವೆಮನೆ

ಈ ಒಡವೆಮನೆಗಳ ಎಡಬಾಗದಲ್ಲಿ ಡೋಮ್ ಟ್ಜು ಸಾಲ್ಜ್‌ಬರ‍್ಗ್ ಎಂದು ಕರೆಯಲಾಗುವ ಹಳೆಯ ಚರ‍್ಚ್ ವೊಂದಿದೆ. ಇದನ್ನು ಸಾಲ್ಜ್‌ಬರ‍್ಗ್ ಕೆತೆಡ್ರಲ್(Salzburg Cathedral) ಎಂದು ಹೇಳುತ್ತಾರೆ. ಬಿಶಪ್ ವಿರ‍್ಜಿಲ್(Virgil) ಸುಮಾರು ಕ್ರಿ.ಶ.767 ಇಸವಿಯಲ್ಲಿ ಇದನ್ನು ಕಟ್ಟಿಸಲು ಶುರು ಮಾಡಿದ್ದಂತೆ. ಕ್ರಿ.ಶ.774 ರಲ್ಲಿ ಸೇಂಟ್ ರುಪೆರ‍್ಟ್(St. Rupert) ಎಂಬುವರು ಕೂಡ ಈ ಚರ‍್ಚ್ ಕಟ್ಟಿಸಲು ಮುಂದೆ ನೆರವಾದರಂತೆ. 12ನೇ ನೂರೇಡಿನ ಹೊತ್ತಿಗೆ ಇದಕ್ಕೆ ಬೆಂಕಿ ತಗುಲಿ, ಮತ್ತೆ ಕಟ್ಟಲ್ಪಟ್ಟಿತು. ಇಟಲಿಯಲ್ಲಿ ಹೆಸರುವಾಸಿಯಾಗಿದ್ದ ಬರೋಕ್(Baroque) ಪದ್ದತಿಯ ಕಟ್ಟಡ ಕಟ್ಟುವಿಕೆಯಂತೆ,17ನೇ ನೂರೇಡಿನಲ್ಲಿ ಈ ಕೆತೆಡ್ರಲ್ ಅನ್ನು ಹೊಸದಾಗಿ ಕಟ್ಟಲಾಯಿತು. ಅರೆ ದುಂಡಾಕಾರದ ಗೋಪುರ ಹೊಂದಿರುವ ಈ ಚರ‍್ಚ್ ಇದೇ ಕಾರಣಕ್ಕೆ ಡೋಮ್ ಎಂಬ ಹೆಸರನ್ನು ತನ್ನೊಂದಿಗೆ ಸೇರಿಸಿಕೊಂಡಿದೆ. ಇದರ ಎದುರು ಒಂದು ಅಂದದ ನೀರಿನ ಕಾರಂಜಿ ಇದೆ. ತನ್ನಿ(Selfie), ತಿಟ್ಟದ ಒಲವಿಗರು ಇದರ ಮುಂದೆ ನಿಂತು ತಿಟ್ಟ ತೆಗೆದುಕೊಳ್ಳಬಹುದು. ಡೋಮ್ ಟ್ಜು ಸಾಲ್ಜ್‌ಬರ‍್ಗ್ ಹಿಂದುಗಡೆ ಬೀದಿಯಲ್ಲಿ ಮನುಶ್ಯರಶ್ಟು ದೊಡ್ಡ ಮತ್ತು ಎತ್ತರದ ಚದುರಂಗದಾಟದ ಮಣೆ ಮತ್ತು ದಾಳಗಳನ್ನು ಇರಿಸಲಾಗಿದೆ. ಚದುರಂಗದಾಟದ ಆಸಕ್ತರು ಬೀದಿಯಲ್ಲೇ ಆಟವಾಡಬಹುದಾಗಿದೆ.

ಡೋಮ್ ಟ್ಜು ಸಾಲ್ಜ್‌‍ಬರ್‍ಗ್

ಡೋಮ್ ಟ್ಜು ಸಾಲ್ಜ್‌‍ಬರ್‍ಗ್

ಹೊಹೆನ್ ಸಾಲ್ಜ್‌ಬರ‍್ಗ್ ಪೋರ‍್ಟ್ರೆಸ್ (HohenSalzburg Fortress):

ಸಾಲ್ಜ್‌ಬರ‍್ಗ್ ಕೆತೆಡ್ರ‍ಲ್ ಹಿಂಬಾಗದಿಂದ ನೋಡಿದರೆ ಬೆಟ್ಟದ ಮೇಲ್ಬಾಗದಲ್ಲಿ ಕೋಟೆಯೊಂದು ಕಾಣುತ್ತದೆ. ಇದೇ ಸಾಲ್ಜ್‌ಬರ‍್ಗ್‌ನ ಮುಕ್ಯವಾದ ಕಾಸಲ್ ಹೊಹೆನ್ ಸಾಲ್ಜ್‌ಬರ‍್ಗ್ ಪೋರ‍್ಟ್ರ‍ೆಸ್. ಕೆತೆಡ್ರ‍ಲ್ ಹಿಂಬದಿಯಿಂದ 100ಮೀಟರ್ ದೂರಕ್ಕೆ ಸಾಗಿದರೆ, ಈ ಕಾಸಲ್(Castle) ಹೋಗುವ ಏರ‍್ಪಾಟು ಮಾಡಲಾಗಿದೆ. ಬೆಟ್ಟದ ಮೇಲೆ ಕಾಸಲ್ ಇರುವುದರಿಂದ ಮಂದಿಯನ್ನು ಕರೆದೊಯ್ಯಲು, ಎತ್ತುಕ(Lift) ಮಾದರಿಯ ಹತ್ತಾರು ಮಂದಿಯನ್ನು ಕೊಂಡು ಸಾಗುವ ಮಿಂಚಿನ ಪುಟಾಣಿ ರೈಲು ಬಂಡಿಯೊಂದು ಇಲ್ಲಿದೆ. 1077ರ ಹೊತ್ತಿನಲ್ಲಿ ಗೆಬಾರ‍್ಡ್ ಪೋನ್ ಹೆಲ್ಪೆನ್ಸ್ಟೀನ್ ಎಂಬ ಆಳ್ವಿಗ ಇದರ ಕಟ್ಟುವಿಕೆಗೆ ಕೈ ಹಾಕಿದ. ಕಾಸಲ್ ಸುತ್ತಲೂ ಕಟ್ಟಿಗೆಯ ಬೇಲಿ ಹಾಕಿ, ದೊಡ್ಡದಾದ ಕೋಣೆಗಳಲ್ಲಿ ವೈರಿಗಳ ದಾಳಿಯ ಹೊತ್ತಿನಲ್ಲಿ ಬೇಕಾಗುವ ಸಾಮಾನು, ಸರಂಜಾಮುಗಳನ್ನು ಕಾದಿರಿಸಲಾಗುತ್ತಿತ್ತಂತೆ. ಕಾಸಲ್ ಒಳಬಾಗದಲ್ಲಿಯೇ ಸೆರೆಮನೆಯೊಂದನ್ನು ಸಿದ್ದಪಡಿಸಲಾಗಿತ್ತು. 1495ರ ಹೊತ್ತಿಗೆ ಅಳ್ವಿಗೆಗೆ ಬಂದ ಲಿಯೋನಾರ‍್ಡ್ ಎಂಬಾತ ಈ ಕಾಸಲ್‍ ಅನ್ನು ಅಗಲಿಸಿ ದೊಡ್ಡದಾಗಿ ಕಟ್ಟಿಸಿದ. ಸುಮಾರು 1515ರ ಹೊತ್ತಿಗೆ ಇಲ್ಲಿ ಪುಟಾಣಿ ರೈಲಿನ ಏರ‍್ಪಾಟು ಮಾಡಲಾಯಿತು. ಇದು ಜಗತ್ತಿನ ಅತಿ ಹಳೆಯ ಪುಟಾಣಿ ರೈಲಿನ ಏರ‍್ಪಾಟು. ಇಂತ ರೈಲುಗಳನ್ನು “Fenicular Railway” ಎಂದು ಹೇಳಲಾಗುತ್ತದೆ. ಮಿಂಚಿನ ತಂತಿ ಮೇಲೆ (Electrical Cables) ಓರೆಯಾಗಿ ಎದುರು ಬದುರು ಸಾಗುವ ರೈಲುಗಳನ್ನು “Fenicular Rail” ಎನ್ನುತ್ತಾರೆ. ಗುಡ್ಡ, ಬೆಟ್ಟಗಳಲ್ಲಿ ಬಳಸಲಾಗುವ ಹಗ್ಗದ ಬಂಡಿಗಳಂತೆ (Cable car) ಇವು.

ಹೋಹೆನ್ ಸಾಲ್ಜ್‌ಬರ್‍ಗ್ ಪೋರ್‍ಟ್ರೆಸ್ ಮೇಲಿಂದ ಕಾಣುವ ಡೋಮ್ ಮತ್ತು ಸಾಲ್ಜ್‌ಬರ್‍ಗ್ ಒಡವೆಮನೆ

ಹೋಹೆನ್ ಸಾಲ್ಜ್‌ಬರ್‍ಗ್ ಪೋರ್‍ಟ್ರೆಸ್ ಮೇಲಿಂದ ಕಾಣುವ ಡೋಮ್ ಮತ್ತು ಸಾಲ್ಜ್‌ಬರ್‍ಗ್ ಒಡವೆಮನೆ

ಹೆಚ್ಚು ದಿನಗಳವರೆಗೆ ಯಾರ ದಾಳಿಗೊಳಗಾಗದೇ ಕಾಪಾಡಲ್ಪಟ್ಟ ಈ ಕಾಸಲ್ ಮೊದಲ ವಿಶ್ವ ಕಾದಾಟದ ಬಳಿಕ ಅಡಾಲ್ಪ್ ಹಿಟ್ಲರ‍್‌ನ ನಾಜಿಗಳ ತೆಕ್ಕೆಗೆ ಬಂತು. ಕಾದಾಟಗಳ ಬಳಿಕ ಆಸ್ಟ್ರಿಯಾದ ಆಳ್ವಿಗರು ಈ ಕಾಸಲ್‌ ಅನ್ನು ಕಾಪಾಡಿಕೊಂಡು ಬಂದರು. ಇಲ್ಲಿಯೂ ಕೂಡ ಒಡವೆಮನೆಯೊಂದನ್ನು ಕಟ್ಟಲಾಗಿದ್ದು, ಕಾಸಲ್ ನಲ್ಲಿ ಆಳ್ವಿಕೆ ನಡೆಸಿದವರ ಹಲವಾರು ವಸ್ತುಗಳನ್ನು ನೋಡಲು ಇಟ್ಟಿದ್ದಾರೆ. ಅರಸರು, ಆಳ್ವಿಗರ ದೊಡ್ಡ ಮಲಗುವ ಕೋಣೆಗಳು, ದಾನ್ಯಗಳನ್ನು ಕೂಡಿಡಲಾಗುತ್ತಿದ್ದ ಅಗಲವಾದ ಉಗ್ರಾಣಗಳು ಮತ್ತು ಅಲ್ಲಿ ಬಳಕೆ ಮಾಡುತ್ತಿದ್ದ ಮಂಚ, ಕುರ‍್ಚಿ ಮುಂತಾದ ವಸ್ತುಗಳನ್ನು ನೋಡಬಹುದು. ಈ ಕಾಸಲ್‌‌ನ ಮೇಲಿಂದ ಸಾಲ್ಜ್‌ಬರ‍್ಗ್ ಸುತ್ತಲ ಹರವಿನ ನೋಟ ನೋಡಲೆರಡು ಕಣ್ಣು ಸಾಲದು. ಊರಿನ ಸುತ್ತ ಹತ್ತಾರು ಕಿಲೋಮೀಟರ್ ಅಂತರದಲ್ಲಿ ಹಬ್ಬಿರುವ ಮಂಜಿನ ಆಲ್ಪ್ಸ್ ಗುಡ್ಡಗಳು, ಊರ ನಡುವೆ ಹರಿಯುವ ಸಾಲ್ಜಾಕ್ ಹೊಳೆ, ಇನ್ನೊಂದೆಡೆ ಹಸಿರಿನ ತೋಟಗಳು, ಆಗಸದೆತ್ತರಕ್ಕೆ ಬೆಳೆದ ಕಟ್ಟಡಗಳು, ಸಗ್ಗವೇ ಇಳೆಗೆ ಬಂದಿದೆ ಎನ್ನಿಸುವ ಬಾವನೆ ಮೂಡಿಸುತ್ತವೆ.

ಮಿರಾಬೆಲ್ ಅರಮನೆ ಮತ್ತು ತೋಟ (Mirabell Palace and Garden):

ಮಿರಾಬೆಲ್ ಅರಮನೆ ಸಾಲ್ಜಾಕ್ ಹೊಳೆ ದಡದಲ್ಲಿ ನೆಲೆಸಿದೆ. 1606ರಲ್ಲಿ ಅಂದಿನ ಯುವರಾಜ ವೋಲ್ಪ್ ಡೆಟ್ರಿಶ್ ರೈಟೆನೌ(Wolf Dietrich Raitenau) ಅವರಿಂದ ಕಟ್ಟಲ್ಪಟ್ಟಿತು. ಮೊದಲಿಗೆ ಇದನ್ನು ಅಲ್ಟೆನೌ ಅರಮನೆ(Altenau Castle) ಎಂದು ಕರೆಯುತ್ತಿದ್ದರು. ರೈಟೆನೌ ನಂತರ ಇದು ಮಾರ‍್ಕ್ ಸಿಟಿಕಶ್(Mark Sittikus) ಎಂಬ ಅರಸನ ಪಾಲಾಯಿತು. ಈತನೇ ಇದನ್ನು ಮಿರಾಬೆಲ್ ಅರಮನೆ ಎಂದು ಹೆಸರಿಸಿದ. ಮಿರಾಬೆಲ್ ಹೆಸರು ಇಟಾಲಿಯನ್ ಮೂಲದ್ದು, ಇಟಾಲಿಯನ್ ನುಡಿಯ ಮಿರಾಬೈಲ್(Mirabail) ಮತ್ತು ಬೆಲ್ಲಾ(Bella) ಎಂಬ ಎರಡು ಪದಗಳನ್ನು ಸೇರಿಸಿ ಮಿರಾಬೆಲ್ ಎಂಬ ಹೆಸರು ಹುಟ್ಟಿಕೊಂಡಿದೆ. ಮಿರಾಬೈಲ್ ಅಂದರೆ ಮೆಚ್ಚುಗೆಯ/ಇಶ್ಟದ ಮತ್ತು ಬೆಲ್ಲಾ ಅಂದರೆ ಚೆಂದ ಎಂದು ಅರ‍್ತ. ಅರಸರು, ಆಳ್ವಿಗರು ಬದಲಾದಂತೆ ಮಿರಾಬೆಲ್ ಅರಮನೆಯು ಸಾಕಶ್ಟು ಬದಲಾವಣೆಗೊಳಪಟ್ಟಿತು. 1866ರ ಹೊತ್ತಿಗೆ ಸಾಲ್ಜ್‌ಬರ‍್ಗ್ ಆಡಳಿತ ಈ ಅರಮನೆಯನ್ನು ಕೊಂಡು ಕೊಂಡಿತು. ಎರಡನೇ ವಿಶ್ವ ಕಾದಾಟದ ನಂತರ ಈ ಅರಮನೆ ಸಾಲ್ಜ್‌‍ಬರ್‍ಗ್‌‍ನ ನಗರಾಡಳಿತದ ಕಚೇರಿಯಾಗಿ ಮಾರ‍್ಪಟ್ಟಿತು. ಈ ಅರಮನೆಯಲ್ಲಿ ಎರಡು ಪ್ರಮುಕ ನೋಡತಕ್ಕ ಜಾಗಗಳೆಂದರೆ ಮಿರಾಬೆಲ್ ಹಾಲ್ ಮತ್ತು ಅರಮನೆ ಮುಂದಿರುವ ಹೂದೋಟ.

ಹೋಹೆನ್ ಸಾಲ್ಜ್‌ಬರ್‍ಗ್ ಮತ್ತು ಮಿರಾಬೆಲ್ ಹೂದೋಟ

ಹೋಹೆನ್ ಸಾಲ್ಜ್‌ಬರ್‍ಗ್ ಮತ್ತು ಮಿರಾಬೆಲ್ ಹೂದೋಟ

ಮಿರಾಬೆಲ್ ಹಾಲ್

ಸಬೆ ಸಮಾರಂಬಗಳನ್ನು ಈ ಕೋಣೆಯಲ್ಲಿ ನಡೆಸಲಾಗುತ್ತಿತ್ತು. 1944 ರಲ್ಲಿ ಹಿಟ್ಲರ್‍ನ ನಾದಿನಿ ಗ್ರೆಟ್ಲ್ ಬ್ರೌನ್‍‍ಳ(Gretl Braun) ಮದುವೆ ಈ ಕೋಣೆಯಲ್ಲೇ ನಡೆದಿತ್ತಂತೆ. ನಂತರ ಈ ಕೋಣೆಯನ್ನು ಸಾರ‍್ವಜನಿಕರಿಗೆ ಮದುವೆ ಚತ್ರವಾಗಿ ಬಳಸಲು ಬಾಡಿಗೆಗೆ ನೀಡಲಾಗುತ್ತಿತ್ತು. ಇದೀಗ ಈ ಕೋಣೆಯಲ್ಲಿ ವರುಶದ ತುಂಬೆಲ್ಲ ಬಗೆ ಬಗೆಯ ಹಾಡಿನ ಮೇಳ ಮತ್ತು ವಾದ್ಯ ಮೇಳಗಳನ್ನು ಹಮ್ಮಿಕೊಂಡಿರುತ್ತಾರೆ.

ಮಿರಾಬೆಲ್ ಹೂದೋಟ

ಅರಮನೆ ಮುಂದೆ ಹಚ್ಚಹಸಿರಾದ ಹಾಸಿಗೆಯಾಗಿ ಕಂಗೊಳಿಸುತ್ತದೆ ಈ ಹೂದೋಟ. ಯೊಹಾನ್ ಅರ‍್ನೆಸ್ಟ್ ಪೊನ್ ತುನ್(Johann Ernst von Thun) ಎಂಬ ಯುವರಾಜ ಈ ತೋಟದ ಕೆಲಸವನ್ನು ಕೈಗೆತ್ತಿಕೊಂಡ. ಇಟಲಿಯ ಒಟ್ಟಾವಿಯೋ ಮೊಸ್ತೊ(Ottavio Mosto) ಎಂಬ ನುರಿತ ಕಟ್ಟಡದರಿಗನ ಕರೆಸಿ ತೋಟವನ್ನು ಅಣಿಗೊಳಿಸಲಾಯಿತು. ಸ್ತಳೀಯ ಪೌರಾಣಿಕ ಕತೆಗಳನ್ನು ಆದರಿಸಿ ಈ ತೋಟದ ಈಡುಗಾರಿಕೆ(Design) ಮಾಡಲಾಗಿದೆ. ಈ ತೋಟವನ್ನು 4 ಬಾಗಗಳಲ್ಲಿ ಬೇರ‍್ಪಡಿಸಬಹುದು. ರೋಸ್ ಗಾರ‍್ಡನ್(Rose Garden), ಡ್ವಾರ‍್ಪ್ ಗಾರ‍್ಡನ್(Dwarf Garden), ಹೆಡ್ಜ್ ತೀಯೆಟರ‍್(Hedge Theater) ಮತ್ತು ಪೆಗಾಸಸ್ ಪೌಂಟೇನ್(Pegasus Fountain). ಬಣ್ಣ ಬಣ್ಣದ ಗುಲಾಬಿ ಹೂಗಳ ತೋಟ ರೋಸ್ ಗಾರ‍್ಡನ್ ಎಂದು ಕರೆಯಿಸಿಕೊಳ್ಳುತ್ತದೆ. ಸ್ವಲ್ಪ ಮುಂದೆ ಡ್ವಾರ‍್ಪ್ ಗಾರ‍್ಡನ್ ಅಂದರೆ ‘ಕುಳ್ಳರ ತೋಟ’ ಎಂದು ಕರೆಯಲ್ಪಡುವ ತೋಟವಿದೆ. ಈ ತೋಟದಲ್ಲ್ಲಿ 28 ಕುಳ್ಳರ ಮೂರ‍್ತಿಗಳಿವೆ. ಹೆಡ್ಜ್ ತಿಯೇಟರ್ ಎಂಬುದು ಹಸಿರು ಹಸಿರಾದ ಗಿಡ ಬಳ್ಳಿಗಳಿಂದ ಕಟ್ಟಿದ ಮಂಟಪವೆನ್ನಬಹುದು. ಹೂದೋಟದ ಮುಂಬಾಗದಲ್ಲಿ ಪೆಗಾಸಸ್ ಪೌಂಟೇನ್ ಎಂಬ ಕಾರಂಜಿಯಿದೆ. ಇದರ ಮುಂದೆ ನೆಗೆಯುತ್ತಿರುವ ಕುದುರೆಯೊಂದರ ಮೂರ‍್ತಿ ನಿಲ್ಲಿಸಲಾಗಿದೆ.

ಹೆಲ್‍‍ಬ್ರುನ್ ಅರಮನೆ ಮತ್ತು ಕಾರಂಜಿಗಳ ತೋಟ (Hellbrunn Palace and Fountain Park):

ಮಿರಾಬೆಲ್ ಹೂದೋಟದಿಂದ ಸುಮಾರು 10 ಕಿ.ಮೀ. ದೂರದಲ್ಲಿ ಹೆಲ್‍‍ಬ್ರುನ್ ಅರಮನೆಯಿದೆ. ಹೆಲ್‍‍ಬ್ರುನ್ ಅರಮನೆ 400 ವರುಶಗಳಿಗಿಂತ ಹಳೆಯದಾದದ್ದು. ಸುತ್ತಲೂ ಹಸಿರಿನ ವಾತಾವರಣ ಹೊಂದಿದ, ಬೇಸಿಗೆಯ ದಿನಗಳಲ್ಲಿ ತಣ್ಣನೆಯ ವಾತಾವರಣದಲ್ಲಿರಲು ಊರ ಹೊರಗೆ ಈ ಅರಮನೆ ಕಟ್ಟಲಾಗಿತ್ತು. ಮಿರಾಬೆಲ್ ಅರಮನೆಯನ್ನು ಹೆಸರಿಟ್ಟ ಮಾರ‍್ಕ್ ಸಿಟಿಕಶ್ ಯುವರಾಜನೇ ಇದನ್ನು ಕಟ್ಟಿಸಿದ್ದು. ಇಲ್ಲಿನ ಅರಮನೆಗಿಂತ ಮೋಜಿನ ಕಾರಂಜಿಗಳೇ ಹೆಚ್ಚು ಹೆಸರುವಾಸಿ. ಮಾರ‍್ಕ್ ಸಿಟಿಕಶ್ ಯುವರಾಜ ಹಾಸ್ಯ ಪ್ರಜ್ನೆಯುಳ್ಳವನಾಗಿದ್ದ, ಅದಕ್ಕೆಂದೇ ಈ ಸೋಜಿಗದ ಮೋಜಿನ ಕಾರಂಜಿ ಕಟ್ಟಿಸಿದ. ಇದನ್ನು ಕಾರಂಜಿಗಳು ಎನ್ನುವ ಬದಲು ನೀರಿನಾಟದ ತೋಟವೆನ್ನಲು ಅಡ್ಡಿಯಿಲ್ಲ. ಇಲ್ಲಿ ಕಲ್ಲಿನ ಊಟದ ಮೇಜು, ಕುರ‍್ಚಿಗಳನ್ನು ಕಟ್ಟಿಸಿದ ರಾಜ, ಮೇಜು, ಕುರ‍್ಚಿಗಳ ಮೇಲಿಂದ ನೀರು ಸಿಂಪಡಿಸುವ ಏರ‍್ಪಾಟು ಮಾಡಿಸಿದ್ದ. ದೊರೆಯ ಅರಮನೆಗೆ ಬೇಟಿ ನೀಡುವ ಬಂದು-ಬಳಗ, ಗೆಳೆಯರಿಗೆ ಊಟದ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ನೀರು ಸಿಡಿಯುತ್ತಿತ್ತು, ಇದು ಎಲ್ಲರನ್ನು ಬೆರಗುಗೊಳಿಸಿ ಪಜೀತಿ ಮಾಡುತ್ತಿತ್ತು. ತೋಟದ ಒಳಹೊಕ್ಕರೆ ನೀರಿನ ಚಿಕ್ಕ ತೊರೆಗಳು, ಚಿಕ್ಕ ಮೂರ‍್ತಿಗಳು ಕಂಡು ಬರುತ್ತವೆ. ಈ ಮೂರ‍್ತಿಗಳ ಬಾಯಿಂದ ಅಗಾಗ ಚಕ್ಕನೆ ನೀರಿನ ಕಾರಂಜಿ ಸಿಡಿದು ಇವುಗಳ ಮುಂದೆ ಹಾದುಹೋಗುವ ಪ್ರವಾಸಿಗರನ್ನು ತಬ್ಬಿಬ್ಬುಗೊಳಿಸುತ್ತವೆ. ಹಾಡು, ಸಂಗೀತಕ್ಕೆ ತಕ್ಕಂತೆ ಜಿಗಿಯುವ ನೀರಿನ ಕಾರಂಜಿಗಳು ಒಂದೊಮ್ಮೆ ನಮ್ಮ ಕೆಆರ್‍ಎಸ್ ತೋಟವನ್ನು ನೆನಪಿಸುತ್ತವೆ. ನೀರಿನ ಬುಗ್ಗೆಯಿಂದಲೇ ಎತ್ತರಕ್ಕೆ ಹಾರಿಸುವ ದೊರೆಯ ಕಿರೀಟವೊಂದರ ತೋರ‍್ಪು (Exhibition) ಕೂಡ ಇಲ್ಲಿ ನಡೆಯುತ್ತದೆ. ನೀರಿನಾಟದ ತೋಟದ ಕೊನೆಯಲ್ಲಿ ಚಿಕ್ಕ ಹೊಂಡವನ್ನು ಕಟ್ಟಿಸಿದ್ದು ಅದರ ಸುತ್ತಮುತ್ತಲೂ ಗಿಡಮರಗಳ ತೋಟವಿದೆ.

ಹೆಲ್‍‍ಬ್ರುನ್ ಅರಮನೆ

ಹೆಲ್‍‍ಬ್ರುನ್ ಅರಮನೆ

ಕಾರಂಜಿಗಳ ತೋಟ

ಕಾರಂಜಿಗಳ ತೋಟ

ಹೆಲ್‍‍ಬ್ರುನ್ ಅರಮನೆಯ ಸುಮಾರು 1ಕಿ.ಮೀ. ದೂರದಲ್ಲಿ ಉಸುರಿಮನೆಯೊಂದಿದ್ದು (Zoo), ಅಲ್ಲಿಗೆ ಬೇಟಿ ಇತ್ತು ಆಸ್ಟ್ರಿಯಾ ನಾಡಿನ ವಿವಿದ ಉಸುರಿಗಳನ್ನು(Animals) ನೋಡಬಹುದಾಗಿರುತ್ತದೆ.

ಸಾಲ್ಜ್‌‍ಬರ್‍ಗ್‌‍ನ ಹೆಚ್ಚಿನ ಅರಮನೆ, ಒಡವೆಮನೆ, ನೋಡತಕ್ಕ ಜಾಗಗಳಿಗೆ ಒಳ ಹೋಗಲು ಹಣ ನೀಡಬೇಕಾಗಿರುತ್ತದೆ. ಇದು ದುಬಾರಿಯಾಗುತ್ತದೆ. ಸುಮಾರು 24ಯುರೋ ಬೆಲೆಯ ಸಾಲ್ಜ್‌ಬರ‍್ಗ್ ಕಾರ‍್ಡ್ ಅನ್ನು ಕೊಂಡು, ಈ ಎಲ್ಲ ಜಾಗಗಳಿಗೆ ಬೇಟಿ ನೀಡಬಹುದು. ಅಲ್ಲದೇ ಸ್ತಳೀಯ ಸಾರಿಗೆಗಳಲ್ಲಿ ಕಾರ‍್ಡು ಹೊಂದಿದವರಿಗೆ ಪುಕ್ಕಟೆ ಪ್ರಯಾಣ.

ಸಾಲ್ಜ್‌ಬರ‍್ಗ್ ಹತ್ತಿರ ನೋಡತಕ್ಕ ಇತರೆ ಜಾಗವೆಂದರೆ ಸುಮಾರು 50ಕಿ.ಮೀ. ದೂರದಲ್ಲಿ ನೆಲೆಸಿರುವ ಕೊನಿಗ್ಸೀ(Konigsee). ಕೊನಿಗ್ಸೀಗೆ ತೆರಳಲು ಸಾಲ್ಜ್‌ಬರ‍್ಗ್ ನಿಂದ ಸಾರಿಗೆ ಬಸ್ಸುಗಳ ಏರ‍್ಪಾಟಿದೆ. ಜರ‍್ಮನ್ ನುಡಿಯಲ್ಲಿ ಕೊನಿಗ್ಸೀ ಎಂದರೆ ಅರಸನ ಕಡಲು/ಸರೋವರ ಎಂಬರ‍್ತ ಬರುತ್ತದೆ. ದೊಡ್ಡದಾದ ಸರೋವರ, ಸರೋವರದ ಎರಡು ಬದಿಯಲ್ಲಿ ಮಂಜಿನಿಂದ ಆವರಿಸಿದ ಬೆಳ್ಳಗಿನ ಆಲ್ಪ್ಸ್ ಗುಡ್ಡದ ಸಾಲು ಕಂಗೊಳಿಸುತ್ತದೆ. ಈ ಸರೋವರದಲ್ಲಿ ದೋಣಿಯ ಮೂಲಕ ಸಾಗಿ, ನಡುಗಡ್ಡೆ ಜಾಗದಲ್ಲಿ ಸುತ್ತಾಡಿ ಬರಬಹುದು. ಸಾಲ್ಜ್‌ಬರ‍್ಗ್ ಹೋದರೆ ಇದನ್ನು ತಪ್ಪಿಸದಿರಿ. ಏಪ್ರಿಲ್ ತಿಂಗಳು ಇಲ್ಲಿಗೆ ಹೋಗಲು ತಕ್ಕುದಾದುದು. ಅತ್ತ ಹೆಚ್ಚಿನ ಚಳಿ, ಇತ್ತ ಬೇಸಿಗೆಯೂ ಇರದ ವಾತಾವರಣದಲ್ಲಿ ಮಂಜಿನ ಮುಸುಕು ಹಾಕಿರುವ ಆಲ್ಪ್ಸ್ ಗುಡ್ಡಗಳನ್ನು ನೋಡುವ ಕುಶಿಯೇ ಬೇರೆ. ಅಂದ ಹಾಗೆ ಕೊನಿಗ್ಸೀ ಜರ‍್ಮನಿಯ ತೆಂಕಣದ ಬವರಿಯಾ ಬಾಗದಲ್ಲಿದ್ದು, ಆಸ್ಟ್ರಿಯಾದ ಗಡಿಯಲ್ಲಿದೆ.

ಮಂಜು ತುಂಬಿದ ಆಲ್ಪ್ಸ್ ಗುಡ್ಡಗಳ ನಡುವೆ ಕೊನಿಗ್ಸೀ ಸರೋವರ

ಮಂಜು ತುಂಬಿದ ಆಲ್ಪ್ಸ್ ಗುಡ್ಡಗಳ ನಡುವೆ ಕೊನಿಗ್ಸೀ ಸರೋವರ

ಸಾಲ್ಜ್‌ಬರ‍್ಗ್ ತಲುಪುವ ಬಗೆ:

ಆಸ್ಟ್ರಿಯಾ ನಾಡಿನ ಪ್ರಮುಕ ಊರುಗಳಲ್ಲೊಂದಾದ ಸಾಲ್ಜ್‌‍ಬರ‍್ಗ್‌ಗೆ ಯುರೋಪ್‍ನ ಹಲವು ಊರುಗಳಿಂದ ಸುಲಬವಾಗಿ ಬಾನೋಡ, ರಯ್ಲು, ಕಾರು, ಬಸ್ ಮೂಲಕ ತಲುಪಬಹುದು. ಜಗತ್ತಿನ ದೊಡ್ಡ ಬಾನೋಡ ತಾಣವಾದ ಜರ‍್ಮನಿಯ ಮ್ಯುನಿಕ್ ಬಾನೋಡ ತಾಣ, ಸಾಲ್ಜ್‌ಬರ‍್ಗ್ ನ ಬಡಗಣಕ್ಕೆ 180ಕಿ.ಮೀ.ದೂರದಲ್ಲಿದೆ. ಮ್ಯುನಿಕ್‍ನಿಂದ ಹೊರಡುವ ವೇಗದ ಐಸಿ ರೈಲಿನಲ್ಲಿ 1.5 ಗಂಟೆಯಲ್ಲಿ ಸಾಲ್ಜ್‌ಬರ‍್ಗ್ ತಲುಪಬಹುದು.

ಬಾರತದ ದೆಹಲಿ, ಮುಂಬಾಯ್, ಬೆಂಗಳೂರುಗಳಂತ ದೊಡ್ಡ ಊರುಗಳಿಂದ ಮ್ಯುನಿಕ್ ಗೆ ನೇರ ಬಾನೋಡಗಳಿದ್ದು ಅಲ್ಲಿಂದ ಸಾಲ್ಜ್‌ಬರ‍್ಗ್ ತಲುಪಬಹುದು. ದೆಹಲಿಯಿಂದ ವಿಯನ್ನಾ ಮೂಲಕವೂ ಸಾಲ್ಜ್‌ಬರ‍್ಗ್ ತಲುಪಬಹುದು. ಉಳಿದುಕೊಳ್ಳಲು ಬಗೆ ಬಗೆಯ ಹೋಟೆಲ್ ಗಳು ಸಿಗುತ್ತವೆ. ಬಾರತದ ತಿಂಡಿ ತಿನಿಸಿನ ಮನೆಗಳು ಕೂಡ ಇಲ್ಲಿವೆ.

 (ಮಾಹಿತಿ ಮತ್ತು ಚಿತ್ರಸೆಲೆ: ಬರಹಗಾರರು, salzburg.info, wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: