ನೊಂದ ಮನಸ್ಸು – ಕತೆಯೊಳಗೊಂದು ನೋವಿನ ಕವಿತೆ
– ಸುರಬಿ ಲತಾ.
ಮುದ್ದಿನ ಮಗಳಾದರೂ ಮನ ಅರಿತವನು ನೀನು, ಕಂಡದ್ದಲ್ಲಾ ಕೊಡಿಸಿದ ಅಪ್ಪ, ಮಾತು ಮಾತಿಗೂ ಮುತ್ತು ಸುರಿಸುವ ಅಮ್ಮ.
ಏನಿದ್ದರೂ ಹರೆಯದ ಕಾಲ ಬಯಸುವುದು ಮತ್ತಿನ್ನೇನೋ…
ಆ ಇಳಿ ಸಂಜೆ ಬಿಟ್ಟು ಬಿಡದೆ ಸುರಿದ ಮಳೆ. ಬಳಿ ಬಂದು ಜೇನು ಸುರಿದಂತೆ ಮಾತಾಡಿದವನು ನೀನು “ಬನ್ನಿ ಮನೆಯ ಬಳಿ ಬಿಡುತ್ತೇನೆ.”
ಎಂದೂ ನೋಡದ ಅನಾಮಿಕ ನೀನು, ನಿನ್ನ ಮಾತಿಗೆ ಒಲ್ಲೆ ಎನ್ನದೇ ಮಂತ್ರ ಮುಗ್ದಳಂತೆ ನಿನ್ನ ಹೆಗಲ ಹಿಡಿದು ಕೂತವಳು ನಾನು.
ಹಿಂತಿರುಗಿ ದನ್ಯವಾದ ಹೇಳಲು ಅವಕಾಶ ಕೊಡದೇ ಮರೆಯಾದೆ… ಅಂದೇ ಈ ಹುಚ್ಚು ಮನಸ್ಸನ್ನು ಕದ್ದು ಹೋಗಿದ್ದೆ.
ಎಲ್ಲಿದ್ದೆಯೋ ಹುಡುಗ… ನಿನ್ನ ಕಾಣುವ ಆಸೆಯಿಂದಲೇ ಪ್ರತೀ ದಿನ ಅದೇ ಮುಸ್ಸಂಜೆ ಲೈಬ್ರರಿ ನೆಪವೊಡ್ಡಿ ಕಾದಿರುತ್ತಿದ್ದ ನಾನು, ನನ್ನ ಅರಿತವನಂತೆ ನೀನು ಬಂದು ಕಾಯುತ್ತಿದ್ದೆ.
ನಿನ್ನ ಕಂಡಾಗ… ಮನ ಹೂ ವಾಗಿದ್ದು ನಿಜ.
ಹೇಗೆ ಬೆರೆತೆವೋ ಕೈ ಕೈ ಹಿಡಿದು ನಡೆವಾಗ ಜಗವ ಮರೆತ ಆ ಮದುರ ಕ್ಶಣ, ಕಣ್ಣಿಗೆ ಕಟ್ಟಿದಂತೆ ಇದೆ.
ಸಾವಿರ ಕನಸುಗಳು ಹೊತ್ತು ನಿಂತ ಮನ, ನಿನಗಾಗೇ ಈ ಜೀವನ ಎಂದು ನಿರ‍್ದರಿಸಿದ ಮನಕೆ, ನೋವ ಕೊಟ್ಟವರಾರು ಎಂದು ಬಲ್ಲೆಯ ನೀನು?
ಆಣೆ ಪ್ರಮಾಣ ಕಣ್ಣೀರು ಸುರಿಸಿ ಕಾಡಿ ಬೇಡಿದ, ಅತ್ತೆ ಎಂದು ಕರೆಯಬೇಕೆಂದಿದ್ದ ಆ ನಿನ್ನ ತಾಯಿ, ದೂರಾಗಿ ನಿಲ್ಲೆಂದು ಬೇಡಿದಾಗ, ಮನ ಒಡೆದು ಚೂರಾಗಿದ್ದು ಈಗ ಹಳೆಯ ವಿಚಾರ.
ಕಾರಣ ಕೊಡದೇ ದೂರಾದೆ, ವಂಚಕಿ ಎಂಬ ಬಿರುದು ಹೊತ್ತರೂ ಚಿಂತೆ ಇಲ್ಲ. ಆದರೆ ಇನಿಯಾ, ನೀನು ಕುಡಿತಕ್ಕೆ ಬಲಿಯಾಗಿ, ದೂಮಪಾನಕ್ಕೆ ದಾಸನಾದಾಗ ಆಗಲೇ ನಾನು ಬದುಕಿದ್ದು ಸತ್ತು ಹೋದೆ ಕಣೋ…
ನೀನು ಕೆಟ್ಟ ಚಟದಲ್ಲಿ ನನ್ನ ಮರೆಯುವ ಯತ್ನದಲಿ ಇರುವೆ… ಆದರೆ ನಾನು ನಿನ್ನ ಕೊರಗಿನಲ್ಲಿ ಪ್ರತೀ ದಿನ ಸಾಯುತಲಿರುವೆ.
ನಿನ್ನ ಅಮ್ಮನ ನೋಯಿಸಿ ನಾನು ಒಲವ ಪಡೆಯುವುದು ಎಶ್ಟು ಸರಿ… ನಿನ್ನ ತಾಯಿಯಲ್ಲಿ ನನ್ನ ಅಮ್ಮನ ಕಾಣುವೆ. ಹೇಗೆ ಅವಳನ್ನು ನೋಯಿಸಲಿ?
ಕಾರಣ ಅರಿಯದೆ ನೀನು ಕೊರಗುತಿರುವೆ. ಕಾರಣ ಹೇಳಲಾಗದೇ ನಾನೂ ಬೇಯುತಿರುವೆ. ಇದುವೇ ವಿದಿಯ ಆಟ, ಎಂದಿಗೆ ಮುಗಿಯುವುದೋ ಈ ಕಾಟ.
(ಚಿತ್ರ ಸೆಲೆ: sheknows.com )
ಇತ್ತೀಚಿನ ಅನಿಸಿಕೆಗಳು