ನಗೆಬರಹ : ಗದಿಗೆಪ್ಪಾ ಗಟಬ್ಯಾಳಿ ( ಕಂತು-1 )

– ಬಸವರಾಜ್ ಕಂಟಿ.

raita

ಕಂತು 1: ಗದಿಗೆಪ್ಪಾ ಗಟಬ್ಯಾಳಿ

ಗದಿಗೆಪ್ಪಾ ಗಟಬ್ಯಾಳಿ” – ಹೆಸರು ಕೇಳಿದರೆ ವಿಜಾಪುರದ ಎಪಿಎಂಸಿಯಲ್ಲಿ, ಕ್ವಿಂಟಲ್ ಗಟ್ಟಲೆ ಬೆಳೆದ ಜೋಳವನ್ನು ಮಾರಲು ಬಂದಿರುವವನೆಂದು ಯಾರಿಗಾದರೂ ಅನಿಸಬಹುದು. ಆದರೆ ಇವನು ಬೆಂಗಳೂರಿನ ಪ್ರತಿಶ್ಟಿತ ಸಾಪ್ಟವೇರ್ ಕಂಪನಿಯೊಂದರಲ್ಲಿ ಟೀಂ ಲೀಡ್. ತನ್ನ ಹೆಸರನ್ನು ಯಾರ ಮುಂದಾದರೂ ಹೇಳುವ ಪ್ರಸಂಗ ಬಂದಾಗಲೆಲ್ಲಾ, ಎಪಿಎಂಸಿಯ ಮುಂದೆ ದೋತ್ರ ಉಟ್ಟುಕೊಂಡು, ಪಟಗಾ ಸುತ್ತಿಕೊಂಡಿರುವ ಒಬ್ಬ ರೈತನ ಚಿತ್ರ ಅವನ ಕಣ್ಣಮುಂದೆ ಚಕ್ ಅಂತಾ ಬಂದು ಹೋಗುತ್ತಿತ್ತು. ತನ್ನ ಹೆಸರು ಹೇಳಿಕೊಳ್ಳುವಾಗಲೆಲ್ಲಾ ಹೊಟ್ಟೆಯಲ್ಲಿ ಒಂತರಾ ಎನಿಸುವುದು ಅವನಿಗೆ ರೂಡಿಯಾಗಿಬಿಟ್ಟಿತ್ತು. ಎದುರಿಗಿರುವವರು ಕನ್ನಡಿಗರು, ಅದರಲ್ಲೂ ಉತ್ತರ ಕರ‍್ನಾಟಕದವರಾಗಿದ್ದರೆ, ಹೊಟ್ಟೆಯ ಬೇನೆ ಮುಕದ ಮೇಲೂ ಮೂಡುತ್ತಿತ್ತು. ಆದಿಕಾಲದ ಅವನ ಹೆಸರನ್ನು ಉತ್ತರ ಕರ‍್ನಾಟಕದವರು ಯಾರೇ ಕೇಳಿದರೂ ತುಟಿ ತುಸು ಹಿಗ್ಗಿಸುವುದರಲ್ಲಿ ಅನುಮಾನವಿರಲಿಲ್ಲ. ಕೆಲವೊಂದು ಬಾರಿ ಹಿಗ್ಗಿಸದಿದ್ದರೂ, ಅವರು ಮನಸ್ಸಿನಲ್ಲೇ ನಕ್ಕ ದನಿ ಅವನಿಗೆ ಕಂಡಿತಾ ಕೇಳಿಸುತ್ತಿತ್ತು.

ಹಾಯ್. ಆಯ್ ಆಮ್ ಗದಿಗೆಪ್ಪಾ, ಯು ಕ್ಯಾನ್ ಕಾಲ್ ಮಿ ಗದಿ” – ಹೊಸದಾಗಿ ಪರಿಚಯವಾದವರ ಮುಂದೆಲ್ಲಾ ಈ ಸಾಲು ಹೇಳುವುದು ಅವನಿಗೆ ಬಾಯಿಪಾಟವಾಗಿ ಹೋಗಿತ್ತು. ಇಂಜಿನಿಯರಿಂಗ್ ಕಲಿಯುವ ತನಕವೂ ತನ್ನ ಹೆಸರನ್ನು ಹೇಳಿಕೊಳ್ಳುವಾಗ ಇದ್ದ ಹಿಂಜರಿಕೆ, ತುಸು ಕಮ್ಮಿಯಾಗಿದ್ದು ಕೆಲಸಕ್ಕೆ ಸೇರಿ, ಕರ‍್ನಾಟಕ, ಮತ್ತು ಬಾರತದ ಆಚೆಯ ಜನರ ಜೊತೆ ಬೆರೆತಾಗಲೇ. ಐ.ಟಿ ಜಗತ್ತಿನಲ್ಲಿ, ಪ್ರಪಂಚದ ಬೇರೆ ಬೇರೆ ಮೂಲೆಯ ಹೆಸರುಗಳು ವಿಚಿತ್ರವಾಗಿ ಕಂಡರೂ ಯಾರೂ ಹೆಸರುಗಳ ಬಗ್ಗೆ ತಲೆಕೆಡಿಸಿಕೊಳ್ಳುವದಿಲ್ಲ. “ಗಡಿ…ಗೆಪಾ“, ಅಂದಾಗಲೆಲ್ಲಾ “ಯು ಕ್ಯಾನ್ ಕಾಲ್ ಮಿ ಗದಿ” ಎಂದು ಮತ್ತೆ ಮತ್ತೆ ನೆನಪುಮಾಡಿಕೊಡುತ್ತಿದ್ದ.

ಮಾಡಲಿಂಗ್ ಮಾಡುವುದನ್ನು ಬಿಟ್ಟು ಇಲ್ಯಾಕ್ ಸಾಯ್ತಾಯಿದೀಯಾ ಎಂದು ಬಹಳಶ್ಟು ಜನ ಅವನಿಗೆ ತಿಳಿಹೇಳಿದ್ದರು. ಅವನು ಹುಡುಗಿಯರನ್ನು ನೋಡುವುದಕ್ಕೂ, ಹುಡುಗಿಯರು ಅವನನ್ನು ನೋಡುವುದಕ್ಕೂ ಸರಿಹೊಂದುತ್ತಿತ್ತು. ಮದುವೆಯ ಮುಂಚೆ ಸಿಕ್ಕ ಸಿಕ್ಕ ಹುಡುಗಿಯರನ್ನೆಲ್ಲಾ ಕಣ್ಣು ಮಿಟುಕಿಸದೆ ನೋಡುತ್ತಿದ್ದ ಅವನು, ಮದುವೆಯಾದ ಮೇಲೆ ಹಾಗೆ ನೋಡಿದಾಗಲೆಲ್ಲಾ ಪಾಪ ಪ್ರಗ್ನೆ ಕಾಡಿ, 2 ವರ‍್ಶದಲ್ಲಿ ಮನಸ್ಸನ್ನು ಕಟ್ಟಿಹಾಕಿಕೊಂಡು ಸಾಕಶ್ಟು ನಿಯಂತ್ರಣಕ್ಕೆ ತಂದಿದ್ದರೂ, ತನಗೆ ಚೆಂದವೆನಿಸಿದ ಯಾವ ಹುಡುಗಿ ಕಂಡರೂ, ಚಾನ್ಸು ಸಿಕ್ಕಾಗಲೆಲ್ಲಾ ಎವೆಯಿಕ್ಕದೆ ನೋಡುತ್ತಾ ಕಣ್ಣಿನ ಹಸಿವನ್ನು ತೀರಿಸಿಕೊಳ್ಳುತ್ತಿದ್ದ. ತಾನು ನೋಡುವುದು ಅವಳಿಗೆ ಗೊತ್ತಾಗುವುದಿಲ್ಲ ಎಂದುಕೊಂಡಿದ್ದರೂ ಯಾವ ಹುಡುಗಿಗೆ ತಾನೆ ತನ್ನನ್ನು ನೋಡುತ್ತಿರುವ ಹುಡುಗನ ಬಗ್ಗೆ ತಿಳಿಯುವುದಿಲ್ಲ ಹೇಳಿ? ನಮ್ಮ ಗದಿಗೆ ಇದ್ದದ್ದು ಇದೊಂದು ಬಗೆಯ ವೀಕ್ನೆಸ್ಸು.

ತನ್ನ ಸಂಗಡ ಮೊದಮೊದಲ ಗಣೇಶ ಬೀಡಿ ಸೇದಿದ ಜೀವದ ಗೆಳೆಯ, ಪಾಂಡುರಂಗ್ ಜೋಶಿಯ ಜೊತೆ ಎಂದಿನಂತೆ ಊಟಕ್ಕೆ ಆಪೀಸಿನ ಕೆಪೆಯಲ್ಲಿ ಕೂತಿದ್ದಾಗ, ಯಾವುದೋ ಹುಡುಗಿ ಇವನೆಡೆಗೆ ಮತ್ತೆ ಮತ್ತೆ ನೋಡಿದಂತಾಯಿತು. ಹೊಸ ಮುಕವೊಂದು ಕಂಡು ಇವನ ಕಣ್ಣಿನ ಪಾಪೆ ಹಿಗ್ಗಿತು.

“ಏನ್ ಅದಾಳಲೇ” ಎಂದು ಉಸುರಿದ.

ಪಾಂಡ್ಯಾ ತಿರುಗಿ ನೋಡಿ, “ಅಕೀನ?” ಎಂದ.

“ಹೂಂ… ಯಾಕ್ ಮಸ್ತ್ ಇಲ್ಲಾ?”

ಬಾಯಿಗೆ ತುತ್ತಿಡುತ್ತಾ, “ಹ್ಹ… ಹರೆದಾಗ ಹಂದಿನೂ ಚೆಂದ್ ಕಾಣ್ತದಂತ” ಎಂದು ಗದ್ಯಾನ ಮಾತನ್ನು ತಿರಸ್ಕರಿಸಿದ. ಅವಳು ಒಂದೆರಡು ಬಾರಿ ಇವನೆಡೆಗೆ ನೋಡಿದರೂ ತಾನು ಮತ್ತೆ ಮತ್ತೆ ನೋಡಿದ್ದನ್ನು ಅವಳು ಗಮನಿಸಿಲ್ಲವೆಂದು ಗದಿ ತೀರ‍್ಮಾನಿಸಿದ.

ಇಬ್ಬರ ಊಟ ಮುಗಿದು, ಒಂದು ಸುತ್ತು ತಿರುಗಿಬರಲು ಹೊರಟಾಗ, ಲಿಪ್ಟ್ ಬಳಿಯಲ್ಲಿ ಅದೇ ಹುಡುಗಿ ಒಬ್ಬಳೇ ಇದ್ದದ್ದು ನೋಡಿ ಗದಿಗೆ ತಡೆಯಲಾಗಲಿಲ್ಲ. “ಲೇ ನೀ ಹೋಗ್, ನಾ ಆಮೇಲೆ ಸಿಗ್ತೀನಿ”, ಎಂದು ಪಾಂಡ್ಯಾಗ ಹೇಳಿ, ಲಿಪ್ಟ್ ಕಡೆಗೆ ಅವಸರಿಸಿದ. ಅವನು ಹೋಗುವಶ್ಟರಲ್ಲಿ, ಲಿಪ್ಟಿನ ಬಾಗಿಲು ತೆಗೆದುಕೊಂಡಿತು. ಬೇರೆ ಯಾರೂ ಇಲ್ಲದೆ ತಾವಿಬ್ಬರೇ ಎನ್ನುವುದನ್ನು ಊಹಿಸಿಯೇ ಅವನ ಎದೆ ಚುರುಕುಗೊಂಡಿತು. ಅವಳನ್ನು ನೋಡಲೋ ಎಂಬಂತೆ ಅವನ ಮಯ್ ಮೇಲಿನ ಕೂದಲೂ ಎದ್ದು ನಿಂತವು. ಅವಳ ಹಿಂದೆ ಅವನೂ ಲಿಪ್ಟ್ ಒಳಗೆ ಕಾಲಿಡುತ್ತಲೇ, ಎಲ್ಲಿಂದಲೋ ಇನ್ನೊಬ್ಬಳು ಓಡಿ ಬಂದು ಕೂಡಿಕೊಂಡಳು. “ಚೇ”, ಎಂದು ಮನಸ್ಸಿನಲ್ಲೇ ಸಿಡಿಮಿಡಿಗೊಂಡು ತನ್ನ ಪ್ಲೋರಿನ ಬಟನ್ ಒತ್ತಿ, ಒಂದು ಬದಿಗೆ ನಿಂತುಕೊಂಡ. ಅವನ ಎದುರಿಗೆ, ಇನ್ನೊಂದು ಬದಿಯಲ್ಲಿ ಅವಳು ನಿಂತಿದ್ದಳು. ಇಬ್ಬರ ನಡುವೆ ಆ ಮೂರನೇಯವಳು ನಿಂತಿದ್ದಳು. “ಕಾರಬ್ಯಾಳ್ಯಾಗ್ ಕಲ್ ಬಂದಂಗ್ ಇಕಿ ಯಾಕ್ ಬಂದ್ಳೋ“, ಎನ್ನುತ್ತಾ ತಾನು ಹಿಂಬಾಲಿಸಿ ಬಂದವಳ ಕೊರಳಲ್ಲಿ ನೇತಾಡುತ್ತಿದ್ದ ಗುರುತಿನ ಕಾರ‍್ಡಿನೆಡೆಗೆ ಅರೆಕ್ಶಣ ದ್ರುಶ್ಟಿಹಾಯಿಸಿ, ಅವಳ ಹೆಸರನ್ನು ನೋಡಿಟ್ಟುಕೊಂಡ. “ಪೂರ‍್ಣಿಮಾ ಪಾಟೀಲ್”. “ಓಹ್! ನಮ್ ಕಡೆ ಹುಡುಗಿ” ಎಂದುಕೊಂಡ. ಇದೇ ನೆಪವಿಟ್ಟುಕೊಂಡು ಅವಳನ್ನು ಮಾತಾಡಿಸಬಹುದಿತ್ತಲ್ಲಾ ಎನಿಸಿತು.

ಅಶ್ಟರಲ್ಲಿ ಕಾರಬ್ಯಾಳಿಯ ಕಲ್ಲು ಅವನಿಗೆ ಕೇಳಿತು. “ನೀವು ಇಂಟಿಗ್ರೇಶನ್ ಟೀಂನಲ್ಲಿರೋದು ಅಲ್ವಾ?”

“ಹೌದು” ಎಂದ.

“ನಿಮ್ ಹೆಸರು?”

“ಗದಿಗೆಪ್ಪಾ… ಯು ಕ್ಯಾನ್ ಕಾಲ್ ಮಿ ಗದಿ”

“ಆಯ್ ಯಾಮ್ ಶ್ರುತಿ. ಯು ಕ್ಯಾನ್ ಕಾಲ್ ಮಿ… ಆಂ… ಶ್ರುತಿ”

ಪೂರ‍್ಣಿಮಾ ಕಿಸಕ್ಕನೆ ನಕ್ಕಳು. ಅವಳ ನಗು ಶ್ರುತಿಗೂ ಹಾಯಿತು. ಆಗುತ್ತಿರುವ ಮುಜುಗರ ತಪ್ಪಿಸಿಕೊಳ್ಳಲು ದಾರಿಕಾಣದೆ ಅವನೂ ಬಲವಂತದ ಹಲ್ಲುಕಿರಿದ. ಏನು ಮಾತಾಡಲು ಇವನ ಹೆಸರು ಕೇಳಿದಳೋ ಏನೋ, ನಗುವಿನಲ್ಲಿ ಅವಳಿಗೂ ಮರೆತುಹೋಗಿತ್ತು. ತನ್ನ ಮಹಡಿ ಬಂದೊಡನೆ ತಲೆ ತಗ್ಗಿಸಿಕೊಂಡು ಲಗುಬಗೆಯಿಂದ ಹೊರನಡೆದ. ಬೆನ್ನ ಹಿಂದೆ ಲಿಪ್ಟಿನ ಬಾಗಿಲು ಮುಚ್ಚಿಕೊಳ್ಳುವಾಗ ಕಿಸಿಕಿಸಿ ಸದ್ದು ಕೇಳಿಸಿತು. ತನ್ನ ಜಾಗಕ್ಕೆ ಬಂದು ಯಾಕಾದರೂ ಇವಳ ಹಿಂದೆ ಬಿದ್ದೆನೋ ಎಂದುಕೊಳ್ಳುತ್ತಾ ಮೇಜನ್ನು ಜೋರಾಗಿ ಗುದ್ದಿದ. ಅವನ ಪೇಚಾಟ ಅಲ್ಲಿಗೇ ಮುಗಿಯುವಂತಿರಲಿಲ್ಲ. ನಡೆದುದನ್ನು ಮರೆಯಲೋ ಎಂಬಂತೆ ಪೇಸ್ಬುಕ್ ತೆರೆದು ಕಂಪ್ಯೂಟರ್ ಪರದೆಯನ್ನು ನಿದಾನವಗಿ ಸರಿಸುತ್ತಿರಬೇಕಾದರೆ, ಅವನ ಹೆಂಡತಿ ಮತ್ತು ಅದೇ ಪೂರ‍್ಣಿಮಾ ಪಾಟೀಲ್ ಪ್ರೆಂಡ್ಸ್ ಆಗಿರುವುದುದನ್ನು ನೋಡಿ ದಂಗಾದ. ತನ್ನ ಮದುವೆಯ ಸಮಯದಲ್ಲಿ ತೆಗೆದ ತಿಟ್ಟವನ್ನೂ ಪೂರ‍್ಣಿಮಾ ಲೈಕ್ ಮಾಡಿದ್ದಳು. ತಕ್ಶಣ ತನ್ನ ಹೆಂಡತಿಗೆ ಕರೆ ಮಾಡಿದ,

“ಲೇ ಸುಶ್ಮಿ… ಈ ಪೂರ‍್ಣಿಮಾ ಯಾರು?”

“ಯಾವ್ ಪೂರ‍್ಣಿಮಾ?”

“ಅದ… ಪೇಸ್ಬುಕ್ಕಿನ್ಯಾಗ ಎರಡ್ ತಾಸ್ ಹಿಂದ್ ನಿನ್ ಪ್ರೆಂಡ್ ಆಗ್ಯಾಳಲಾ, ಪೂರ‍್ಣಿಮಾ ಪಾಟೀಲ್”

“ಅಕೀನ… ನನ್ ಪ್ರೆಂಡ್ ಇದ್ಳಲಾ ಗೌರಿ ಪಾಟೀಲ್ ಅಂತ… ಅಕಿ ತಂಗಿ. ನಿಮ್ ಕಂಪ್ನ್ಯಾಗ ಕೆಲ್ಸ್ ಮಾಡ್ತಾಳಂತ. ಯಾಕ್ ಏನಾತು?”

“ಏನೂ ಇಲ್ಲ ಬಿಡು”, ಎಂದು ಕಟ್ ಮಾಡಿ, “ಶಿಟ್, ಶಿಟ್” ಎನ್ನುತ್ತಾ ಮತ್ತೊಮ್ಮೆ ಮೇಜಿಗೆ ಗುದ್ದಿದ.

( ನಾಳೆ, 2ನೇ  ಕಂತು: ‘ವೀಕ್ಲಿ ರಿಪೋರ‍್ಟ್’ )

( ಚಿತ್ರ ಸೆಲೆ: youtube.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sandeep Audi says:

    ?

Sandeep Audi ಗೆ ಅನಿಸಿಕೆ ನೀಡಿ. Cancel reply

Your email address will not be published. Required fields are marked *