ನಗೆಬರಹ : ವೀಕ್ಲಿ ರಿಪೋರ‍್ಟ್ (ಕಂತು-2)

– ಬಸವರಾಜ್ ಕಂಟಿ.

angry_boss

ಕಂತು 1: ಗದಿಗೆಪ್ಪಾ ಗಟಬ್ಯಾಳಿ

ಊಟಕ್ಕೆ ಎದುರು ಬದುರು ಕುಂತಾಗ ಹಿಂದಿನ ದಿನ ತನಗಾದ ಪಜೀತಿಯ ಬಗ್ಗೆ ಹತಾಶೆಯ ದನಿಯಲ್ಲಿ ಪಾಂಡ್ಯಾನ ಮುಂದೆ ಹೇಳಿಕೊಂಡ.

“ಬೇಶೇ ಇಟ್ಟಾಳ ಬಿಡು” ಎಂದು ನಕ್ಕ ಪಾಂಡ್ಯಾ.

“ನವ್ನ… ಈ ಹುಡುಗ್ಯಾರ ಸುದ್ದಿಗೇ ಹೋಗ್ಬಾರ‍್ದ್ ನೋಡ”, ಎನ್ನುತ್ತಿದ್ದಂತೆಯೇ ಊಟದ ತಟ್ಟೆ ಹಿಡಿದುಕೊಂಡ ಪೂರ‍್ಣಿಮಾ ಅವರಿಬ್ಬರ ಕಡೆಯೇ ಬಂದಳು.

ಕಣ್ಣಂಚಿನಲ್ಲೇ ಗಮನಿಸಿದ ಗದಿ ಮೆಲ್ಲಗೆ ಹೇಳಿದ, “ಇಕಿನ… ಇಕಿನ… ನೋಡಬ್ಯಾಡ, ಅಕಿಗೆ ಡೌಟ್ ಬರ‍್ತೆತಿ… ಇವನೌವ್ನ ಇಲ್ಲೇ ಬರಾಕತ್ತಾಳಲೊಲೇ”

ಪಾಂಡ್ಯಾನ ಕಡೆ ನೋಡುತ್ತಾ, “ಹಾಯ್! ಇಲ್ಲಿ ಕುಂದರಬಹುದಾ?” ಎಂದು ಕೇಳಿದಳು.

“ಶ್ಯೂರ‍್” ಎಂದು ಮುಗುಳ್ನಕ್ಕನು ಪಾಂಡ್ಯಾ. ಅವಳ ತಟ್ಟೆಗೆ ಇಬ್ಬರೂ ಜಾಗ ಮಾಡಿಕೊಟ್ಟರು. “ಇಂವಾ ನನ್ನ ಪ್ರೆಂಡ್, ಗದಿಗೆಪ್ಪಾ ಅಂತ”

ಗದಿ ತಟ್ಟನೆ, “ಯು ಕ್ಯಾನ್ ಕಾಲ್…”, ಎಂದು ತನ್ನ ನಾಲಗೆ ಕಚ್ಚಿ ಸುಮ್ಮನಾದ. ಅವಳಿಗೆ ನಗು ಬಂದರೂ ಅವನ ಮಾತುಗಳು ಕೇಳಿಸದಂತೆ ನಟಿಸಿದಳು. “ಇವ್ರು ಪೂರ‍್ಣಿಮಾ ಪಾಟೀಲ್ ಅಂತ. ನಮ್ ಟೀಂ ಗೆ ಹೊಸ್ದಾಗಿ ಸೇರ‍್ಕೊಂಡಾರ” ಪಾಂಡ್ಯಾ ಪರಿಚಯ ಮಾಡಿಕೊಟ್ಟನು.

ಗದಿಯೆಡೆಗೆ ನೋಡಿ, ಮುಗುಳ್ನಗುತ್ತಾ, “ಹಾಯ್!” ಎಂದಳು. ಇವನೂ ಸಣ್ಣ ದನಿಯಲ್ಲಿ “ಹಾಯ್” ಎಂದ.

ಒಂದೆರಡು ಕ್ಶಣಗಳ ನಂತರ ಪಾಂಡ್ಯಾನ ಕಣ್ಣರಳಿದವು. ಅವನ ನೋಟ ಯಾಕೋ ಗದಿಗೆ ಸರಿ ಕಾಣಲಿಲ್ಲ. ಗದಿಗೆ ಕೇಳಿದ ಪಾಂಡ್ಯಾ, “ಏನೋ ಹೇಳಾತಿದ್ಯಲಾ?”

“ಏನು?”, ಗೊಂದಲದಿಂದ ಕೇಳಿದ ಗದಿ.

“ನಿನ್ನೆ ಲಿಪ್ಟ್ ನಾಗ ಏನೋ ಆತು ಅನ್ನಾತಿದ್ದಿ?” ಪೂರ‍್ಣಿಮಾ ತಟ್ ಅಂತ ಕತ್ತು ಗದಿಯೆಡೆಗೆ ಹೊರಳಿಸಿದಳು.

ಗದಿಗೆ ಕೋಪ, ಮುಜುಗರ, ಗೊಂದಲ ಒಟ್ಟಿಗೆಯಾಯಿತು. ಅರೆಕ್ಶಣ ಎಲ್ಲರೂ ಮುಕ ಮುಕ ನೋಡಿಕೊಂಡರು. ಒಂದೆರಡು ಕ್ಶಣ ಸಾವರಿಸಿಕೊಂಡು, ಗದಿ ಕತೆ ಹೆಣೆದ.

“ಓಹ್! ಅದಾ… ನಿನ್ನೆ ಸಂಜಿಕ ಮನಿಗೆ ಹೋಗುಮುಂದ ಲಿಪ್ಟ್ನಾಗ್ ಹೊಂಟಿದ್ನಾ…ನಡುನ ಪವರ್ ಕಟ್ ಆತು. ಲಿಪ್ಟು ಬೇಸಮೆಂಟ್ ಹೋಗಿ ರಿಸೆಟ್ ಆತು. ನಾನು ಗ್ರೌಂಡ್ ಪ್ಲೋರ್ ಒತ್ತಿದ್ನ್ಯಾ.. ಗ್ರೌಂಡ್ ಪ್ಲೋರ್ ಬರುದ್ರೊಳಗ ಮತ್ ಪವರ್ ಕಟ್ ಆತು…ಮತ್ತ ಬೇಸ್ಮೆಂಟ್ ಹೋಗಿ ರಿಸೆಟ್ ಆತು. ಹಿಂಗ ಮೂರ್ ಸಲಾ ಆತ್ ನೋಡು, ಹ್ಹ ಹ್ಹ ಹ್ಹ…”, ಎಂದು ಹಲ್ಲುಕಿರಿದ. ಪಾಂಡ್ಯಾ ಮತ್ತು ಪೂರ‍್ಣಿಮಾ ಇಬ್ಬರೂ ಮನಸ್ಸೊಳಗೇ ನಕ್ಕರು. ಗದಿ ಸುದಾರಿಸಿಕೊಂಡ. ಸ್ವಲ್ಪ ಹೊತ್ತಿನ ನಂತರ ಪಾಂಡ್ಯಾ ಮಾತು ಹೊರಳಿಸಿದ,

“ಹೆಂಗ್ ಅನ್ಸುತ್ತ ನಮ್ ಟೀಮು?”

“ಚಲೋ ಅಯ್ತಿ. ಎಲ್ಲಾರೂ ಚಲೋ ಅದಾರ… ಎಸ್ಪೆಶೆಲಿ ಮ್ಯಾನೇಜರ್ ರಶ್ಮಿ ನಂಗ್ ಚಲೋ ಅನ್ಸಿದ್ರು”, ಮುಕ ಅರಳಿಸಿ ಹೇಳಿದಳು.

ಅವಳ ಮಾತಿಗೆ ನಗುತ್ತ ಹೇಳಿದ ಪಾಂಡ್ಯಾ, “ಹೊಸದಾಗಿ ಬಂದಾಗ ಎಲ್ಲಾ ಚಲೋನ ಅನಿಸ್ತದ. ಹೋಗ್ತ ಹೋಗ್ತ ಎಲ್ಲಾರ ಬಣ್ಣ ಬಯಲಾಗ್ತದ”. ಅವನ ಮಾತಿಗೆ ಹೇಗೆ ಪ್ರತಿಕ್ರಯಿಸಬೇಕೆಂದು ತಿಳಿಯದೆ ಪೂರ‍್ಣಿಮಾ ಸುಮ್ಮನಾದಳು.

ಊಟದ ನಂತರ ತನ್ನ ಕ್ಯೂಬಿಕಲ್ ಗೆ ಪೂರ‍್ಣಿಮಾ ಮರಳಿದ ಮೇಲೆ, ಗದಿ ಮತ್ತು ಪಾಂಡ್ಯಾ ಆಪೀಸಿನ ಹೊರಾಂಗಣದಲ್ಲಿ ಒಂದು ಸುತ್ತು ತಿರುಗಿ ಬರಲು ಹೊರಟರು. ಹಿಂದೆ ಮುಂದೆ ನೋಡಿ, ಯಾರು ಇಲ್ಲದ್ದನ್ನು ಕಾತ್ರಿ ಮಾಡಿಕೊಂಡು “ನಿಮ್ಮಾಯಿ” ಎನ್ನುತ್ತಾ, ಪಾಂಡ್ಯಾನ ಕುಂಡಿಗೆ ಗದಿ ಮೊಣಕಾಲೆತ್ತಿ ಒದ್ದ. ನೋವಾದರೂ ಸಹಿಸಿಕೊಂಡು ನಗುತ್ತಾ ಓಡಿ ಮುಂದೆ ಹೋದ ಪಾಂಡ್ಯಾ. ಗದಿನೂ ನಗುತ್ತಾ ಪಾಂಡ್ಯಾನ ಬೆನ್ನು ಹತ್ತಿದ. ಅಶ್ಟರಲ್ಲಿ ಪಾಂಡ್ಯಾನ ಮೊಬಾಯಿಲಿಗೆ ಅವನ ಮ್ಯಾನೇಜರ್ ರಶ್ಮಿಯ ಕರೆ ಬಂದಿತು. ಎತ್ತಿ ಮಾತಾಡಿದ,

“ಹಲೋ… __________________ ಹಾಂ… ಕಳಿಸ್ತೀನಿ… ಊಟಕ್ ಬಂದಿದ್ದೆ… ಹೋದ್ ತಕ್ಶಣ ಕಳಿಸ್ತೀನಿ. ____________________ ಇಲ್ಲಾ… ಸಾರಿ. ಐ ವಿಲ್ ಸೆಂಡ್ ರೈಟ್ ಅವೇ”, ಎಂದು ಮುಕ ಮಂಕು ಮಾಡಿ ಕಟ್ ಮಾಡಿದ.

“ಏನಾತಲೇ?”

“ವೀಕ್ಲಿ ರಿಪೋರ‍್ಟ್ ಕಳಿಸ್ಬೇಕಂತ, ಅದಕ್ಕ ಕಾಲ್ ಮಾಡಿದ್ಳು”

“ಮತ್ತೇನೋ ಅಂದಂಗಿತ್ತು?”

“ಪ್ರತಿ ಸಾರಿನೂ ನೀನೊಬ್ಬನೇ ಲೇಟಾಗಿ ಕಳ್ಸೂದು ಅಂದ್ಳು”

“ಹೋಗ್ಲಿ ಬಿಡ್ಲೇ… ತೆಲಿ ಕೆಡಿಸ್ಕೋ ಬ್ಯಾಡ” ಗದಿ ಸಾಂತ್ವನ ಹೇಳಿದ.

“ಅಂವಾ ಮನೀಶ್ ನಂಕಿಂತ ಒಂದ್ ವರ‍್ಶ ಜೂನಿಯರ್ ಲೇ… ಬರೇ ಅಂವಂಗ್ ಸಪೋರ‍್ಟ್ ಮಾಡ್ತಾಳ… ಆ ಮಂಗ್ಯಾನ ಮಗ ಅದೆಂಗ್ ಕೆಲ್ಸ್ ಅಶ್ಟ್ ಜಲ್ದಿ ಜಲ್ದಿ ಮಾಡ್ತಾನೋ”

“ಒಂದ್ ಮಾತ್ ಹೇಳ್ಲಿ?”

“ಏನು?”

“ನೀ ಬಾಳ ಲೇಜಿ ಅದಿ. ಬರೇ ಕೆಲ್ಸ್ ಮುಂದಕ್ ಹಾಕ್ತಿ”

“ಇಲ್ಲಾ ಬಿಡ್ಲೇ”, ಎಂದು ಅರೆಮನಸ್ಸಿನಿಂದ ಗದಿಯ ಮಾತನ್ನು ತೆಗೆದುಹಾಕಿದ.

ಹಿಂದಿನಿಂದ “ಲೇ ಗದ್ಯಾ”, ಎನ್ನುವ ಕೂಗು ಕೇಳಿತು. ಗದಿ ಮತ್ತು ಪಾಂಡ್ಯಾ ಊಟ ಮುಗಿಸಿ ಹೀಗೆ ತಿರುಗುತ್ತಿರಬೇಕಾದರೆ ದಿನಾಲೂ ಗದಿಯನ್ನು ಯಾರೋ ಹೀಗೆ ಕರೆದು ರೇಗಿಸುತ್ತಿದ್ದರು. ಹಿಂದೆ ತಿರುಗಿ ನೋಡಿದರೆ ತಮ್ಮ ಆಪೀಸಿನವರದೇ ಹುಡುಗರ ದೊಡ್ಡ ಹಿಂಡಿರುತ್ತಿತ್ತು. ಅವರಲ್ಲಿ ಯಾರು ಹೀಗೆ ಕಾಡಿಸುತ್ತಿದ್ದಾರೆ ಎಂದು ಗೊತ್ತೇ ಆಗುತ್ತಿರಲಿಲ್ಲ. ಗದ್ಯಾ, ಗದಿಗೆಪ್ಪಾ, ಗಟಬ್ಯಾಳಿ, ಹೀಗೆ ಅನೇಕ ಹೆಸರಿನಿಂದ ಅವನನ್ನು ಕರೆಯುತ್ತಿದ್ದರು. ಗದಿ ಅವತ್ತೂ ಹಿಂದಿರುಗಿ ನೋಡಿದ. ಯಾರು ಎಂದು ಮತ್ತೆ ಗೊತ್ತಾಗಲಿಲ್ಲ. ಗದಿಗೆ ಬೇಸರವಾಯಿತು.

“ಹೋಗ್ಲಿ ಬಿಡೋಲೆ… ಈ ಪ್ರೆಶರ‍್ಸ್ ಹುಡುಗುರಿಗೆ ಪ್ರೊಪೆಶನಲಿಸಂ ಇರಲ್ಲ, ಇನ್ನೂ ಕಾಲೇಜ್ ನಾಗ್ ಇದ್ದಂಗ ಬಿಹೇವ್ ಮಾಡ್ತಾರ” ಎಂದು ಪಾಂಡ್ಯಾ ರಮಿಸಿದ. ದಿನಾ ಎರಡು ಮೂರು ಸುತ್ತು ಹಾಕುತ್ತಿದ್ದವರು ಒಂದಕ್ಕೇ ನಿಲ್ಲಿಸಿ ತಮ್ಮ ತಮ್ಮ ಕ್ಯೂಬಿಕಲ್ ಗಳಿಗೆ ಮರಳಿದರು.

ತನ್ನ ಕ್ಯೂಬಿಕಲ್ ಗೆ ಹೋಗಿ ಈ ವಾರ ಮಾಡಿದ ಕೆಲಸಗಳನ್ನು ಪಟ್ಟಿಮಾಡಲು ಶುರುಮಾಡಿದ ಪಾಂಡ್ಯಾ. ಒಂದೊಂದಾಗಿ ಬರೆಯುತ್ತಿರಬೇಕಾದರೆ, ಒಂದು ಕೆಲಸವನ್ನು ಇದೇ ವಾರದಲ್ಲೇ ಮುಗಿಸಬೇಕು ಎಂದು ಮ್ಯಾನೇಜರ್ ರಶ್ಮಿ ಹೇಳಿದ್ದು ನೆನಪಾಯಿತು. ತೊಂಬತ್ತು ಬಾಗದಶ್ಟು ಬುದವಾರವೇ ಮುಗಿಸಿದ್ದ, ಇನ್ನೊಂಚೂರು ಉಳಿದಿತ್ತು. ಆಮೇಲೆ ಮುಗಿಸಿದರಾಯಿತು ಎಂದುಕೊಂಡು ಮರೆತುಬಿಟ್ಟಿದ್ದ. ಅದರ ಬಗ್ಗೆ ಈಗ ಬರೆಯಲೇ ಬೇಕು. ಮುಗಿದಿಲ್ಲ ಎಂದು ಬರೆದರೆ ರಶ್ಮಿ ಬಯ್ಯುತ್ತಾಳೆ. ಮುಗಿದಿದೆ ಎಂದರೆ “ಎಲ್ಲಿ, ತೋರಿಸು” ಎನ್ನಬಹುದು. ಏನು ಮಾಡಬೇಕೆಂದು ಗೊತ್ತಾಗದೆ ನಡುಗುವ ಕಯ್ಯಲ್ಲಿನ ಉಗುರು ಕಡಿಯುತ್ತಾ ಕುಂತ. ಮೇಜಿನ ಮೇಲಿದ್ದ ಪೋನು ರಿಂಗಣಿಸಿತು. ರಶ್ಮಿ ಮತ್ತೆ ಕರೆ ಮಾಡಿದ್ದಳು. ಇವನು ಎತ್ತಲಿಲ್ಲ. ಆ ಕ್ಶಣ, ಆ ಜಾಗದಿಂದ ಹೇಗಾದರೂ ಪಾರಾಗಬೇಕು ಎನಿಸಿತು. ಸಿಕ್ಕಾಪಟ್ಟೆ ತಲೆನೋವು ಎಂದು ಹೇಳಿ, ಮನೆಗೆ ಹೊರಟುಬಿಟ್ಟರೆ? ಹೊಟ್ಟೆ ಕೆಟ್ಟಿದೆ ಎಂದು ರೆಸ್ಟ್ ರೂಮಿನಲ್ಲೇ ಕುಂತುಬಿಟ್ಟರೆ? ಬೇಕು ಅಂತಲೇ ಮೆಟ್ಟಿಲುಗಳಿಂದ ಬಿದ್ದು ಪೆಟ್ಟುಮಾಡಿಕೊಂಡರೆ? “ಹಾ…”, ಎಂದು ತಲೆಯನ್ನು ಎರಡೂ ಕಯ್ಗಳಿಂದ ಒತ್ತಿ ಹಿಡಿದ.

ರಶ್ಮಿ ಪಾಂಡ್ಯಾನಿಗಿಂತ ಒಂದು ವರ‍್ಶ ಮಾತ್ರ ದೊಡ್ಡವಳು. ಮೊದಮೊದಲು ಒಂದೇ ಮಟ್ಟದಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರೂ, ಒಂದೆರಡು ವರುಶಗಳಲ್ಲೇ ರಶ್ಮಿಯ ಕೆಲಸ ನಿಬಾಯಿಸುವ ಜಾಣ್ಮೆ ಕಂಡು ಅವಳನ್ನು ಮ್ಯಾನೇಜರ್ ಹುದ್ದೆಗೇರಿಸಿದ್ದರು. ಅಂದು ಮೀಟಿಂಗ್ ರೂಮಿನಲ್ಲಿ ಮ್ಯಾನೇಜರ್ ಗಳೆಲ್ಲರೂ ಸೇರಿದ್ದರು. ರಶ್ಮಿ ತನ್ನ ಮ್ಯಾನೇಜರ್ ಗೆಳತಿ, ಶೋಬಾ ಪಕ್ಕದಲ್ಲಿ ಕೂತಿದ್ದಳು. ತಮ್ಮ ಡಿಪಾರ‍್ಟಮೆಂಟಿನ ಹೆಡ್ ಆಗಿದ್ದ ರವಿ ಪೋರ‍್ವಾಲ್ ಅಚಾನಕ್ಕಾಗಿ ಕಂಪನಿ ಬಿಟ್ಟು ಹೋದ ಸುದ್ದಿಯನ್ನು ಹಿರಿಯನಾಗಿದ್ದ ಒಬ್ಬ ಹೇಳಿದ. ಇನ್ನೊಂದು ವಾರದಲ್ಲಿ ಬೇರೆಯವರನ್ನು ನೇಮಿಸಲಾಗುತ್ತದೆ ಎಂದೂ ಹೇಳಿ ಮೀಟಿಂಗ್ ಮುಗಿಸಿದ. ಕೋಣೆಯ ತುಂಬೆಲ್ಲಾ ಗುಸುಗುಸು ಮಾತುಗಳು. ಶೋಬಾ ಕೇಳಿದಳು.

“ಯಾಕೆ ಅಂತಾ ಗೊತ್ತಾಯ್ತಾ?”

“ಇಲ್ಲ”, ಎಂದಳು ರಶ್ಮಿ. ಪಿಸುದನಿಯಲ್ಲಿ, “ಹೆರಾಸ್ಮೆಂಟ್ ಕೇಸ್ ಅಂತೆ” ಎಂದಳು ಶೋಬಾ.

ಪಾನಿಪುರಿ ತಿನ್ನುವಂತೆ ಬಾಯಿ ತೆರೆದು, ಅದನ್ನು ಎಡಗಯ್ಯಿಂದ ಮುಚ್ಚಿಕೊಂಡು, “ಯಾರಿಗೆ?” ಎಂದಳು ರಶ್ಮಿ.

“ಅವನ ಟೀಂ ನಲ್ಲಿರೊಳೇ… ಅವ್ಳು ಈ ರೂಮಿನಲ್ಲಿಲ್ಲಾ… ನೀನೇ ತಿಳ್ಕೋ ಯಾರು ಅಂತಾ”

ಕೋಣೆಯ ಸುತ್ತೆಲ್ಲಾ ನೋಡಿ, ಬಲಗಯ್ ಎತ್ತಿ ಎಡಗಯ್ ಮೇಲೆ ಇಟ್ಟಳು ರಶ್ಮಿ.

“ದೊಡ್ಡ ಪೊಸಿಶನ್ ನಲ್ಲಿರೊರಿಗೆಲ್ಲಾ ಇದೊಂತರಾ ವೀಕ್ನೆಸ್ಸು ಅಲ್ವಾ?” ಎನ್ನುತ್ತಾ ಮೆಲುದನಿಯಲ್ಲಿ ಮಾತು ಮುಂದುವರೆಸಿದಳು ಶೋಬಾ. “ಆಪೀಸಿನಲ್ಲೂ ಕೆಟ್ಟ ವಿಡಿಯೋಗಳನ್ನಾ ನೋಡ್ತಿದ್ನಂತೆ. ಎರಡು ಸಲ ವಾರ‍್ನಿಂಗ್ ಕೂಡ ಕೊಟ್ಟಿದ್ರಂತೆ”

ಸುದಾರಿಸಿಕೊಂಡಂತೆ ಕಯ್ಗಳನ್ನು ಮುಕದಿಂದ ಸರಿಸಿ, “ಹೇಗೆ ಸಾದ್ಯಾ?” ಹುಬ್ಬು ಗಂಟು ಹಾಕಿ ಕೇಳಿದಳು.

ಕುರ‍್ಚಿಯಿಂದ ಎದ್ದು, ಹೊರನಡೆಯುತ್ತಾ, “ಅಯ್ಯೋ ಬೇಕಾದಶ್ಟು ಪ್ರಾಕ್ಸಿ ಸಾಪ್ಟವೇರ್ ಇದೆ ಬಿಡು… ಹೋಗ್ಲಿ… ವೀಕ್ಲಿ ರಿಪೋರ‍್ಟ್ ಕಳ್ಸಿದ್ಯಾ?”

ಅವಳನ್ನು ಹಿಬಾಲಿಸುತ್ತಾ, “ಇಲ್ಲಾ… ಈಗ ಕಳಿಸ್ತೀನಿ… ಕಾಪಿ ಪೇಸ್ಟ್ ಮಾಡೋಕೆ ಎಶ್ಟೊತ್ತು”, ಎಂದು ನಕ್ಕಳು.

ಏನೇನೋ ಮಾಡುವ ಬದಲು ಆದಶ್ಟು ಬೇಗ ಆ ಕೆಲಸ ಮುಗಿಸುವುದು ಒಳ್ಳೆಯದು ಎಂದು ಪಾಂಡ್ಯಾ ಎಂದುಕೊಂಡ. ತಕ್ಶಣ ಬೆರಳುಗಳು ಚುರುಕಾಗಿ ಕೀ ಬೋರ‍್ಡನ್ನು ಕುಟ್ಟತೊಡಗಿದವು. ಒಂದು ನಿಮಿಶ ಕಳೆದಿರಲಿಲ್ಲ, ಅವನ ಹಿಂದೆ ರಶ್ಮಿ ಬಂದು, “ಪಾಂಡು, ಏನ್ ಮಾಡ್ತಾಯಿದೀಯಾ?” ಎಂದು ಕೇಳಿದಾಗ, ಗಾಬರಿಗೊಂಡ. ಅವಳೆಲ್ಲಿ ತನ್ನ ಲ್ಯಾಪ್ಟಾಪಿನ ಸ್ಕ್ರೀನ್ ನೋಡಿ, ಕೆಲಸ ಇನ್ನೂ ಮುಗಿದಿಲ್ಲವೆಂದು ಗೊತ್ತಾಗಿ, ಸಿಟ್ಟಿನಲ್ಲಿ ಮುಕದ ತುಂಬೆಲ್ಲಾ ಚೂಪು ಉಗುರುಗಳಿಂದ ಚೂರಿಬಿಡುತ್ತಾಳೋ ಎನಿಸಿತು. ಏನು ಮಾಡಬೇಕು ತೋಚದೆ ಲ್ಯಾಪ್ಟಾಪನ್ನು ಪಟ್ ಅಂತ ಮುಚ್ಚಿಬಿಟ್ಟ.

ರಶ್ಮಿಗೆ ಅನುಮಾನ ಬಂತು. ತಾನು ಬಂದ ತಕ್ಶಣ ಇವನ್ಯಾಕೆ ಹೀಗೆ ಲ್ಯಾಪ್ಟಾಪ್ ಮುಚ್ಚಿದ? ನಾನು ನೋಡಬಾರದು ಅನ್ನುವಂತಹದ್ದು ಏನು ನೋಡುತ್ತಿದ್ದ ಎಂದು ಕೇಳಿಕೊಂಡಳು. ಪಾಂಡುವಿನ ಬೆವೆತ ಮುಕ, ನಡುಗುವ ಕಯ್ ಅವಳ ಅನುಮಾನಕ್ಕೆ ಇಂಬುಕೊಟ್ಟಿತು. ಅವಳ ಮನಸ್ಸಿನಲ್ಲಿ ಬೇರೆ ತರಹದ ಯೋಚನೆಗಳೇ ಮೂಡಿದವು. ಯಾವುದಾದರೂ ಕಳಪೆ ಯುಟೂಬ್ ವಿಡಿಯೋ ನೋಡುತ್ತಿರಬಹುದಾ? ತಾನು ಎಶ್ಟಾದರೂ ಅವನ ಮ್ಯಾನೇಜರ್. ಇಂತದಕ್ಕೆಲ್ಲ ಕೊನೆ ಹಾಡಬೇಕು ಎಂದುಕೊಂಡು, “ಮೀಟಿಂಗ್ ರೂಮಿಗೆ ಹೋಗಿ ಮಾತಾಡೋಣ. ನಿನ್ನ ಲ್ಯಾಪ್ಟಾಪ್ ತೆಗೆದುಕೊಂಡು ಬಾ” ಎಂದು ಹತ್ತಿರದಲ್ಲಿದ್ದ ಮೀಟಿಂಗ್ ರೂಮಿನೆಡೆಗೆ ಹೆಜ್ಜೆ ಹಾಕಿದಳು. ಪಾಂಡ್ಯಾ ಅಳುಮುಕ ಮಾಡಿಕೊಂಡು ಅವಳನ್ನು ಹಿಂಬಾಲಿಸಿದ. ಅವಳ ಹಿಂದೆ ಹಿಂದೆ ಹೆಜ್ಜೆ ಹಾಕುವಾಗ ಗದಿ ಹೇಳಿದ ಪ್ರಸಂಗ ನೆನೆಪಾಯಿತು. ಯಾವ ರೀತಿಯಲ್ಲಾದರೂ ಸರಿ, ಹುಡುಗಿಯರ ಹಿಂದೆ ಹೋದಾಗ ಅಪಾಯ ಕಟ್ಟಿಟ್ಟ ಬುತ್ತಿ ಎನಿಸಿತು. ಏನೇ ಆಗಲಿ, ಲ್ಯಾಪ್ಟಾಪ್ ಮಾತ್ರ ತೆರೆಯಬಾರದು ಎಂದು ನಿಶ್ಚಯಿಸಿದ.

ಮೀಟಿಂಗ್ ರೂಮಿನ ಒಳಗಡೆ ಬರುತ್ತಲೇ, “ನಿನ್ನ ಲ್ಯಾಪ್ಟಾಪ್ ಓಪನ್ ಮಾಡು” ಎಂದಳು.

“ಯಾಕೆ?”

“ಆಂ… ಆಂ… ನಾನು ನಿನಗೆ ಕಳಿಸಿದ ಈ-ಮೇಲ್ ನೋಡ್ಬೇಕಿತ್ತು”

“ಯಾವ ಈ-ಮೇಲ್?”

ರಶ್ಮಿಗೆ ಹೇಗೆ ಕೇಳಬೇಕೆಂದು ಗೊತ್ತಾಗಲಿಲ್ಲ. ಆಪೀಸಿನಲ್ಲಿ ನೋಡಬಾರದ್ದನ್ನೆಲ್ಲಾ ನೋಡುತ್ತಾ ಸಮಯ ವ್ಯರ‍್ತಮಾಡುತ್ತಿರುವುದನ್ನು ನೆನೆಸಿಕೊಂಡು ಅವಳಿಗೆ ಸಿಟ್ಟೇರತೊಡಗಿತು. ಸಿಟ್ಟನ್ನು ಹತ್ತಿಕ್ಕುತ್ತಾ, “ನಿನ್ ಲ್ಯಾಪ್ಟಾಪ್ ಓಪನ್ ಮಾಡು ಅಶ್ಟೇ” ಎಂದಳು.

ಪಾಂಡ್ಯಾ ಒಂದು ಕ್ಶಣ ಹೆದರಿದನು. ಇನ್ನು ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ಗೊತ್ತಾಗಿ, “ಸಾರಿ. ನನಗೆ ಇವತ್ತು ಸಂಜೆ ತನಕ ಟೈಮ್ ಕೊಡು, ಆ ಬಾಸ್ಟನ್ ಪ್ರಾಜೆಕ್ಟ್ ಕೆಲಸ ಮುಗಿಸಿ, ವೀಕ್ಲಿ ರಿಪೋರ‍್ಟ್ ಕಳಿಸ್ತೀನಿ… ಸ್ವಲ್ಪ ಮಾತ್ರ ಬಾಕಿ ಇದೆ… ವೆರಿ ಸಾರಿ”

ರಶ್ಮಿಯ ಯೋಚನೆಗಳು ಬೇರೆಡೆ ಹೊರಳಿದವು. ಇವ್ನು ಆ ಕೆಲಸ ಇನ್ನೂ ಮುಗಿಸಿಲ್ವಾ? ಎಂದು ಮತ್ತೆ ಸಿಟ್ಟು ಏರಿತು. ದುರುಗುಟ್ಟಿ ನೋಡಿದಳು.

ದೀನಮುಕದಲ್ಲಿ, “ರಿಯಲಿ ಸಾರಿ” ಎಂದ ಪಾಂಡ್ಯಾ. ಅವನ ಜೊತೆ ಮಾತಾಡಿ ಉಪಯೋಗವಿಲ್ಲವೆಂದು, ಏನೂ ಹೇಳದೆ, ರೂಮಿನ ಬಾಗಿಲು ತೆಗೆದು ಹೊರನಡೆದಳು.

“ಅಬ್ಬಾ… ಚಲೋ ಆತು. ಅಕಿ ಮಾತ್ ಕೇಳ್ಕೊಂಡ್ ಲ್ಯಾಪ್ಟಾಪ್ ತಗದಿದ್ರ, ಇನ್ನೂ ಇಶ್ಟೊಂದ್ ಕೆಲಸ ಪೆಂಡಿಂಗ್ ಅದಲಾ ಅಂತ್ ಬಯ್ತಿದ್ಳು”, ಎಂದು ನಿಟ್ಟುಸಿರುಬಿಟ್ಟ ಪಾಂಡ್ಯಾ.

( ನಾಳೆ, 3ನೇ  ಕಂತು: ‘ಹೆಸರು ಬದಲಾಯಿಸಲೇಬೇಕು’ )

( ಚಿತ್ರ ಸೆಲೆ: theloosenukes.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: