ನಗೆಬರಹ : ಸಿಕ್ಕಿ ಹಾಕಿಕೊಂಡ ಪಾಂಡ್ಯಾ ( ಕಂತು-4 )

– ಬಸವರಾಜ್ ಕಂಟಿ.

demanding-bosses

ಕಂತು 3: ಹೆಸರು ಬದಲಾಯಿಸಲೇ ಬೇಕು
ಕಂತು 2: ವೀಕ್ಲಿ ರಿಪೋರ‍್ಟ್
ಕಂತು 1: ಗದಿಗೆಪ್ಪಾ ಗಟಬ್ಯಾಳಿ

ಪ್ರತಿದಿನ ಆರಕ್ಕೆ ಏಳುತ್ತಿದ್ದ ಪಾಂಡ್ಯಾ ಅಂದು ಎದ್ದಿದ್ದು ಆರೂವರೆಗೆ, ಅದೂ ಅಡುಗೆಮನೆಯಲ್ಲಿದ್ದ ಅವನ ಹೆಂಡತಿ ಕೂಗಿ ಎಬ್ಬಿಸಿದಾಗ. ಎಲ್ಲಿ ಆಪೀಸಿನ ಕ್ಯಾಬ್ ತಪ್ಪಿಹೋಗುತ್ತದೋ ಎಂದು ದಡಬಡನೆ ಎದ್ದು, ಬಚ್ಚಲುಮನೆಗೆ ಹೋದ. ಅವನು ಎದ್ದಿದ್ದಾನೋ ಇಲ್ಲವೋ ಎಂದು ನೋಡಲು ಬಂದಾಗ ರೇವತಿಗೆ ಕಾಣಿಸಿದ್ದು ಹಾಸಿಗೆಯ ಮೇಲೆ ಹರಡಿದ್ದ ಹೊದಿಕೆ. ಎದ್ದ ತಕ್ಶಣ ಹೊದಿಕೆ ಮಡಚುವಂತೆ ನೂರು ಬಾರಿ ಅವನಿಗೆ ಹೇಳಿದ್ದಳು. ಅರ‍್ದ ಮಂಚ, ಇನ್ನರ‍್ದ ನೆಲದ ಮೇಲೆ ಚಾಚಿಕೊಂಡಿದ್ದ ಹೊದಿಕೆ ಕಂಡು ಕಿರಿಕಿರಿಯಾಗಿ, “ಪಾಂಡು… ಚಾದರ ಮಡಚು ಅಂತ್ ಎಶ್ಟ್ ಸಲಾ ಹೇಳ್ಬೇಕ್ ನಿಂಗ?” ಎಂದು ಒಳಗಿದ್ದ ಅವನಿಗೆ ಹೊಡೆಯಲಾಗದೇ, ಬಚ್ಚಲಮನೆಯ ಬಾಗಿಲಿಗೇ ಹೊಡೆದಳು. ಅವನು ಒಳಗಿಂದಲೇ, “ಇರ‍್ಲಿ ಬಿಡ… ಸಂಜಿಕ್ ಮತ್ ಮಲಗೋದು ಇದ್ದ ಇರತ್ತಲಾ”, ಎಂದು ಸಮಜಾಯಿಶಿ ನೀಡಿದ. ಅವನ ಮಾತಿಗೆ ಏನ್ ಹೇಳಬೇಕು ತಿಳಿಯದೆ ಕೊನೆಸಾರಿ ಎನ್ನುವಂತೆ ಜೋರಾಗಿ ಬಾಗಿಲಿಗೆ ಗುದ್ದಿ ಅಡುಗೆಮನೆಗೆ ಮರಳಿ ಹೋದಳು.

ಆಪೀಸಿನ ಗಾಡಿ ಅವನನ್ನು ಬಿಟ್ಟು ಇನ್ನೇನು ಹೊರಡುವುಶ್ಟರಲ್ಲಿ ಓಡುತ್ತಾ ಹತ್ತಿಕೊಂಡು ಕಚೇರಿ ತಲುಪಿದ. ರಿಸೆಪ್ಶನ್ ಬಳಿ ತನ್ನ ಅಯ್ಡೆಂಟಿಟಿ ಕಾರ‍್ಡನ್ನು ಸ್ವಾಯ್ಪ್ ಮಾಡಿದಾಗ, ಪಕ್ಕದಲ್ಲೇ ಕಂಪ್ಯೂಟರ್ ಮುಂದೆ ಕೂತಿದ್ದ ಸೆಕ್ಯೂರಿಟಿ ಗಾರ‍್ಡೊಬ್ಬ ಅವನನ್ನು ತಡೆದ. “ಪಾಂಡುರಂಗ್ ಸರ್, ಸ್ವಲ್ಪ ಈ ಕಡೆ ಬನ್ನಿ”.

ಪಾಂಡ್ಯಾ ಸಹಜವಾಗಿ, “ಯಾಕೆ?” ಎಂದ. ಅಯ್ದು ನಿಮಿಶ ಕುಳಿತುಕೊಳ್ಳುವಂತೆ ಹೇಳಿ, ಸೆಕ್ಯೂರಿಟಿಯವನು ಯಾರಿಗೋ ಪೋನ್ ಮಾಡಿದ. ಅಯ್ದೇ ನಿಮಿಶದಲ್ಲಿ ಇಬ್ಬರು ಬಂದು ಪಾಂಡ್ಯಾನ ಮುಂದೆ ನಿಂತರು. ಕೋಟು ಹಾಕಿಕೊಂಡಿದ್ದ ಒಬ್ಬ ತನ್ನ ಗುರುತಿನ ಕಾರ‍್ಡನ್ನು ತೋರಿಸುತ್ತಾ, ತಾನು ಕಂಪೆನಿಯ ಕೆಲಸಗಾರರಿಗೆ ಲ್ಯಾಪ್ಟಾಪ್ ಒದಗಿಸುವ ಡಿಪಾರ‍್ಟಮೆಂಟಿನ ಸೀನಿಯರ್ ಮ್ಯಾನೇಜರ್ ಎಂದೂ, ಪಾಂಡ್ಯಾನ ಲ್ಯಾಪ್ಟಾಪನ್ನು ಸ್ವಲ್ಪ ಸಮಯದವರೆಗೆ ಅವರ ಸುಪರ‍್ದಿಗೆ ಒಪ್ಪಿಸಬೇಕೆಂದೂ ಹೇಳಿದ.

“ಯಾಕೆ?” ತುಸು ಗಾಬರಿಯಲ್ಲಿ ಕೇಳಿದ ಪಾಂಡ್ಯಾ.

“ನಮಗೆ ಹೈಯರ್ ಮ್ಯಾನೇಜ್ಮೆಂಟಿನಿಂದ ಆರ‍್ಡರ‍್ಸ್ ಬಂದಿದೆ. ನೀವು ಇಲ್ಲಾ ಅನ್ನೋಹಾಗಿಲ್ಲ. ನಿಮಗೆ ಏನಾದ್ರೂ ಡೌಟ್ ಇದ್ರೆ ನಿಮ್ ಮ್ಯಾನೇಜರ್ ರಶ್ಮಿಯವರಗೆ ಕಾಲ್ ಮಾಡಿ. ಈಗ ನಿಮ್ಮ ಲ್ಯಾಪ್ಟಾಪ್ ಕೊಡಿ”

ಒಲ್ಲದ ಮನಸ್ಸಿನಿಂದ ತನ್ನ ಲ್ಯಾಪ್ಟಾಪ್ ಅವರ ಕಯ್ಲಿಟ್ಟ. “ನಿಮ್ ತಿಂಡಿ ಆಯ್ತಾ?”, ಆ ಸೀನಿಯರ್ ಮ್ಯಾನೇಜರ್ ಕೇಳಿದ. “ಇಲ್ಲ”, ಎಂದ ಪಾಂಡ್ಯಾ. “ಮುಗಿಸಿಕೊಂಡು ಬನ್ನಿ. ಅಶ್ಟರಲ್ಲಿ ನಾನು ನಿಮಗೆ ಕಾಲ್ ಮಾಡ್ತೀನಿ”, ಎಂದು ಅಲ್ಲಿಂದ ಹೊರಟುಹೋದರು. ಅವರ ಮಾತು, ನಡೆ ಅವನಿಗೆ ವಿಚಿತ್ರವಾಗಿ ಕಂಡಿತು. ತಕ್ಶಣ ರಶ್ಮಿಗೆ ಕರೆ ಮಾಡಿದ. ಅವಳು ಉತ್ತರಿಸಲಿಲ್ಲ. ಸಣ್ಣಗೆ ಕಯ್ಕಾಲು ನಡುಗಲು ಶುರುವಾಯಿತು. ಗೆಳೆಯ ಗದಿಗೆ ಕರೆ ಮಾಡಿ, ಕ್ಯಾಂಟೀನ್ ಗೆ ಬರಲು ಕೇಳಿಕೊಂಡ. ನಡೆದುದನ್ನು ಹೇಳಿ ಮುಗಿಸುವ ಹೊತ್ತಿಗೆ ಮಯ್ಯೆಲ್ಲಾ ಬೆವರಿ, ದನಿಯೂ ನಡುಗುತ್ತಿತ್ತು.

“ಲೇ, ನಾ ಬಾಳ ಪೇಸ್ಬುಕ್, ಯೂಟೂಬ್ ನೋಡ್ತಿನಿ ಅಂತ ಅಕಿ ನಿಕ್ಕಿ ಕಂಪ್ಲೆಂಟ್ ಮಾಡ್ಯಾಳ. ಇವ್ರು ಈಗ ಗ್ಯಾರಂಟಿ ನನ್ ಹಿಸ್ಟರಿ ಚೆಕ್ ಮಾಡ್ತಾರ. ಏ..ಏನ್ ಮಾಡೂದ್ ಲೇ?”

“ಪೇಸ್ಬುಕ್, ಯೂಟೂಬ್ ನೋಡಿದ್ರ ಏನ್ ಆಗಾಂಗಿಲ್ಲ. ಅಂತಾ ವಿಡಿಯೋ ಏನರ ನೋಡಿ ಏನ್ ಮತ್ತ?”

“ಹೋಗೋಲೆ. ನಂಗೇನ್ ತೆಲಿ ಕೆಟ್ಟೇತೇನು? ಅದೆಲ್ಲಾ ಏನ್ ಇದ್ರೂ ಮನ್ಯಾಗಿನ್ ಲ್ಯಾಪ್ಟಾಪ್ನಾಗಶ್ಟ”

“ಮತ್ಯಾಕ್ ಚೆಕ್ ಮಾಡ್ತಾರಾ?” ಗದಿ ಯೋಚನೆಯಲ್ಲಿ ಮುಳುಗಿದ.

“ನೀನೂ ಯೂಟೂಬ್ ವಿಡಿಯೋ ನೋಡ್ತಿ ಅಲಾ?” ತಾನೊಬ್ಬನೇ ತಪ್ಪು ಮಾಡಿಲ್ಲ ಎನ್ನುವಂತೆ ಕೇಳಿದ ಪಾಂಡ್ಯಾ.

“ಹೂಂ… ಆದ್ರೂ ನಿನ್ನಶ್ಟ್ ನೋಡಾಂಗಿಲ್ಲ. ನೀ ಪೇಸ್ಬುಕ್ಕು, ಯೂಟೂಬ್ ನೋಡುವಶ್ಟು ಟೈಮ್ ನಾಗ ವಿಂಡೋಸ್ ಅಂತಾ ಒಂದ್ ಆಪರೇಟಿಂಗ್ ಸಿಸ್ಟಮ್ ಬರದ್ ಮುಗಸ್ಬಹುದಿತ್ತು, ಇಲ್ಲಾ… ಮಾರ‍್ಸ್ ಪ್ಲಾನೆಟ್ ಗೆ ಹೋಗಿ ಹೊಳ್ಳಿ ಬರಬಹುದಿತ್ತು, ಇಲ್ಲಾ ಮಾರ‍್ಸ್ ಗೆ ಹೋಗಿ ಬರು ಹಾದಿಯೊಳಗ ಒಂದ್ ಆಪರೇಟಿಂಗ್ ಸಿಸ್ಟಮ್ ಬರದ್ ಮುಗಸ್ಬಹುದಿತ್ತು”

“ಹಂಗಾದ್ರ ನಿನ್ ಆಪರೇಟಿಂಗ್ ಸಿಸ್ಟಮ್ ಮುಗಿಲಿಕ್ ಬಂದಿರಬೇಕಲಾ?” ಟಾಂಗ್ ಕೊಟ್ಟ ಪಾಂಡ್ಯಾ. “ನೀ ದಿನಕ್ ಎಶ್ಟ್ ವಿಡಿಯೋ ನೋಡ್ತಿಪಾ?”

“ಒಂದೆರಡು”

ಪಾಂಡ್ಯಾ ಬೆರಗಾದ. ತಾನು ದಿನಕ್ಕೆ ಏನಿಲ್ಲವೆಂದರೂ ಇಪ್ಪತ್ತರಿಂದ ಮೂವತ್ತು ವಿಡಿಯೋ ನೋಡುತ್ತಿದ್ದ, ಜೊತೆಗೆ ಪೇಸ್ಬುಕ್ ಬೇರೆ. ಕಂಡಿತಾ ಇದೇ ಕಾರಣಕ್ಕೆ ಅವರು ತನ್ನ ಲ್ಯಾಪ್ಟಾಪ್ ತೆಗೆದುಕೊಂಡು ಹೋಗಿದ್ದಾರೆ ಎಂದು ಅವನಿಗೆ ಕಾತ್ರಿಯಾಯಿತು. ಇದೇ ನೆಪ ಇಟ್ಟುಕೊಂಡು ಕೆಲಸದಿಂದ ತೆಗೆದುಹಾಕಿದರೆ ಏನು ಮಾಡುವುದು ಎಂದು ಅಳುಮುಕ ಮಾಡಿ ಕುಳಿತ. ಗದಿ ಕೂಡ ಏನೂ ಸಹಾಯ ಮಾಡುವಂತಿರಲಿಲ್ಲ. ಇನ್ನೊಮ್ಮೆ ರಶ್ಮಿಗೆ ಕರೆ ಮಾಡಿದ. ಅವಳು ಮತ್ತೆ ಉತ್ತರಿಸಲಿಲ್ಲ.

ಅವನ ಮುಕ ನೋಡಿ ಗದಿಗೂ ತಳಮಳವಾಯಿತು. “ಯಾಕ್ ಅಶ್ಟ್ ಪೇಸ್ಬುಕ್ಕಿನ ಚಟಾ ಹಚ್ಕೊಂಡಿ? ಈ ಪೇಸ್ಬುಕ್ ಟ್ವಿಟರ್ರು ಬಾಳ ಅಡಿಕ್ಟೀವ್ ಲೇ, ಡ್ರಗ್ಸ್ ಕಿಂತಾ ಡೇಂಜರ‍್”

ಪಾಂಡ್ಯಾಗೆ ತಲೆಕೆಟ್ಟುಹೋಗಿತ್ತು. “ಪಾಂಡುರಂಗ ವಿಟಲಾ… ಕಾಪಾಡಪಾ”, ಎಂದು ಒಮ್ಮೆ ಮೇಲೆ ನೋಡಿ, “ಮೊದಲ ಹೇಳಾಕ್ ಏನ್ ಬಾಯಿ ಸತ್ತಿತನ? ಈಗ್ ಹೇಳ್ತಾನಾ… ಮುಂದೇನ್ ಮಾಡೂದು ಅಂತ ಹೇಳು” ಎಂದು ಗದಿಗೆ ಬಯ್ದ.

“ಈಗೇನ್ ಮಾಡ್ತಿ? ಇಟ್ಯಲಾ ಇಟ್ಯಲಾ ಪಾಂಡುರಂಗ ಅಂತ ಆ ಪಾಂಡುರಂಗನ ಬಜನಿ ಮಾಡು”

ಅರ‍್ದ ಗಂಟೆಯ ನಂತರ ಪಾಂಡ್ಯಾನ ಮೊಬಾಯಿಲಿಗೆ ಕರೆಯೊಂದು ಬಂತು. ಅದೇ ಸೀನಿಯರ್ ಮ್ಯಾನೇಜರ್. ರಿಸೆಪ್ಶನ್ ಹತ್ತಿರ ಬಂದು ಅವನ ಲ್ಯಾಪ್ಟಾಪ್ ತೆಗೆದುಕೊಂಡು ಹೋಗಬಹುದೆಂದು ಹೇಳಿದರು. ಹೋದ ಜೀವ ಬಂದಂತಾಗಿ ಇಬ್ಬರೂ ಅಲ್ಲಿಗೆ ಓಡಿ ಬಂದರು. ಕೋಟಿನ ಮನುಶ್ಯ ಇರಲಿಲ್ಲ, ಆದರೆ ಅವನ ಜೊತೆ ಬಂದಿದ್ದ ಇನ್ನೊಬ್ಬ ಪಾಂಡ್ಯಾನ ಲ್ಯಾಪ್ಟಾಪ್ ಹಿಡಿದುಕೊಂಡು ನಿಂತಿದ್ದ. ಅವನಿಂದ ಲ್ಯಾಪ್ಟಾಪ್ ಇಸಿದುಕೊಳ್ಳುತ್ತಾ, “ಏನ್ ಪ್ರಾಬ್ಲಮ್ಮು?” ಮೆಲ್ಲನೆ ಕೇಳಿದ.

“ಏನಿಲ್ಲಾ… ಯಾವ್ದಾದ್ರೂ ಪ್ರಾಕ್ಸಿ ಸಾಪ್ಟವೇರ್ ಇದ್ಯಾ ಅಂತ ನೋಡಿದ್ವಿ ಅಶ್ಟೇ”

“ಚೇ… ಆಪೀಸ್ ಲ್ಯಾಪ್ಟಾಪಲ್ಲಿ ಅಂತಾವೆಲ್ಲಾ ಯಾರ್ ಇನ್ಸ್ಟಾಲ್ ಮಾಡ್ತಾರೆ?” ಪಾಂಡ್ಯಾ ಗೆಲುವಿನ ನಗೆಯಲ್ಲಿ ಹೇಳಿದ.

“ಅಯ್ಯೋ ಸಾರ್… ತಿಂಗ್ಳಿಗೆ ಒಂದೆರಡು ಕೇಸಾದ್ರೂ ಸಿಕ್ಕೇ ಸಿಗುತ್ತೆ… ಹೆಚ್ಚಾಗಿ ಈ ಜೂನಿಯರ‍್ಸ್ ಇರ‍್ತಾರಲ್ಲಾ, ಅವರಂತೂ ಪ್ರಾಕ್ಸಿ ಬಳಸಿ ಸಿನಿಮಾಗಳನ್ನಾ ಡೌನ್ ಲೋಡ್ ಮಾಡಿದ್ದೇ ಮಾಡಿದ್ದು”

“ನಿಮಗ್ಯಾಕೆ ನನ್ ಮೇಲೆ ಡೌಟ್ ಬಂದಿದ್ದು?” ಕೇಳಿದ ಪಾಂಡ್ಯಾ.

“ನಿಮ್ ಮ್ಯಾನೇಜರ್ ಕಂಪ್ಲೆಂಟ್ ಕೊಟ್ಟಿದ್ರು” ಎಂದು ಅವನು ಕಿವಿಯಲ್ಲಿ ಉಸುರಿ ಹೊರಟುಹೋದ. ತಕ್ಶಣ ಅವನ ಮೊಬಾಯಿಲಿಗೆ ರಶ್ಮಿಯಿಂದ ಕರೆ ಬಂದಿತು. ಕರೆ ಮುಗಿಸಿ ಗದಿಗೆ ಹೇಳಿದ, “ಸೆಕೆಂಡ್ ಪ್ಲೋರಿನ ಮೀಟಿಂಗ್ ರೂಮಿಗೆ ಬರಬೇಕಂತ..”, ಎಂದು ಸಿಟ್ಟಿನಲಿ ಗೊಣಗುತ್ತಾ ಲಿಪ್ಟಿನೆಡೆಗೆ ನಡೆದ. ತಿಂಡಿ ತಿನ್ನಲು ಗದಿ ತಿರುಗಿ ಕ್ಯಾಂಟೀನ್ ಕಡೆಗೆ ಹೊರಟ.

“ನೀನು ಆಪೀಸ್ ಇಂಟರ‍್ನೆಟ್ ಮಿಸ್ ಯೂಸ್ ಮಾಡ್ತಾಯಿದೀಯಾ ಅಂತಾ ತಿಳ್ಕೊಂಡಿದ್ದೆ. ಆಯ್ ವಾಸ್ ಮಿಸ್ಟೇಕನ್. ವೆರಿ ಸಾರಿ. ಪ್ಲೀಸ್ ಡೋಂಟ್ ಟೇಕ್ ಇಟ್ ಪರ‍್ಸನಲಿ”, ಎಂದು ಪರಿಪರಿಯಾಗಿ ಸಮಜಾಯಿಶಿ ನೀಡಿದಳು ರಶ್ಮಿ. “ಏನ್ ಮಿಸ್ ಯೂಸ್ ನಿನ್ ತೆಲಿ”. “ಸಾರಿ ಅಂತ್ ಸಾರಿ”, ಎಂದು ಮನಸ್ಸಿನಲ್ಲಿ ಅವಳಿಗೆ ಬಯ್ದುಕೊಂಡರೂ, ಸಿಟ್ಟುತೋರಿಸಲಾಗದೆ, ತುಟಿ ಹಿಗ್ಗಿಸಿ, “ಇಟ್ಸ್ ಓಕೆ” ಎನ್ನುತ್ತಾ ಹೇಳಿದ, “ನಾನು ಮಿಸ್ ಯೂಸ್ ಮಾಡೋದಕ್ಕೆ ಚಾನ್ಸೇ ಇಲ್ಲ. ಬೇರೆಯವರ ತರ ನಾನೇನು ದಿನಕ್ಕೆ ಇಪ್ಪತ್ತು ಮೂವತ್ತು ಯೂಟೂಬ್ ವಿಡಿಯೋ ನೋಡೋದಿಲ್ಲ”

“ನನಗೊತ್ತು. ಆಪೀಸಿನಲ್ಲಿ ಇತ್ತೀಚಿಗೆ ಇಂತಾ ಕೇಸಸ್ ಜಾಸ್ತಿ ಆಗಿದ್ದರಿಂದ ಚೆಕ್ ಮಾಡೋಕೆ ಹೇಳ್ದೆ, ಅಶ್ಟೇ. ಅಯ್ ಆಮ್ ಸಾರಿ ಅಗೇನ್”

“ಇಟ್ಸ್ ಓಕೆ” ಎಂದು ತನ್ನ ಜಾಗದೆಡೆಗೆ ಕಾಲು ಹಾಕಿದನು ಪಾಂಡ್ಯಾ. ಕ್ಯೂಬಿಕಲ್ ನಲ್ಲಿ ಕುಳಿತು ಸ್ವಲ್ಪ ಹೊತ್ತು ಸುದಾರಿಸಿಕೊಂಡ. ಅಣ್ಣಾವ್ರ ‘ನಗು ನಗುತಾ ನಲಿ ನಲಿ, ಏನೇ ಆಗಲಿ…’ ಕೇಳಬೇಕೆನಿಸಿ, ಯೂಟೂಬ್ ತೆರೆದು, ಹೆಡ್ ಪೋನ್ ಹಾಕಿಕೊಂಡು ಕಣ್ಣು ಮುಚ್ಚಿ ಹಾಡನ್ನು ಆನಂದಿಸತೊಡಗಿದ. ತುಸುವೇ ಸಮಯದಲ್ಲಿ ರಶ್ಮಿ ಅವನ ಹಿಂದೆ ಬಂದು ನಿಂತು, “ಪಾಂಡು, ನೀನಿನ್ನೂ ವೀಕ್ಲಿ ರಿಪೋರ‍್ಟ್ ಕಳಿಸಿಲ್ಲ”, ಎಂದದ್ದು ಅವನಿಗೆ ಕೇಳಲೇ ಇಲ್ಲ. ಅವಳು ಬುಜ ತಟ್ಟಿದಳು. ದಡಬಡಿಸಿ ಎದ್ದವನೇ, ತನ್ನ ಹಿಂದೆ ನಿಂತಿದ್ದ ರಶ್ಮಿಯನ್ನು ನೋಡಿ, ಏನು ಮಾಡಬೇಕೆಂದು ತೋಚದೆ, ಲ್ಯಾಪ್ಟಾಪ್ ಪಟ್ ಅಂತ ಮುಚ್ಚಿಬಿಟ್ಟ!

( ನಾಳೆ, ಕೊನೇ ಕಂತು: ‘ಹೆಸರಲ್ಲೇನಿದೆ?’ )

( ಚಿತ್ರ ಸೆಲೆ: debmillswriter.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: