ನಗೆಬರಹ : ಹೆಸರು ಬದಲಾಯಿಸಲೇ ಬೇಕು ( ಕಂತು-3 )

– ಬಸವರಾಜ್ ಕಂಟಿ.

disappointed1

ಕಂತು 2: ವೀಕ್ಲಿ ರಿಪೋರ‍್ಟ್
ಕಂತು 1: ಗದಿಗೆಪ್ಪಾ ಗಟಬ್ಯಾಳಿ

ಅಂದು ರವಿವಾರ. ಪಾಂಡ್ಯಾನ ಮಗನ ಮೊದಲನೇ ವರ‍್ಶದ ಹುಟ್ಟುಹಬ್ಬ ಇತ್ತು. ಪಾರ‍್ಟಿ ಇದ್ದದ್ದು ಸಂಜೆ. ಬೆಳಗಿನ ತಿಂಡಿ ಮುಗಿದ ಕೂಡಲೇ ಗೆಳೆಯನಿಗೆ ಕರೆ ಮಾಡಿದ ಗದಿ.

“ಸ್ವಲ್ಪ್ ಲಗು ಬಂದ್ರ ನಡಿತದೇನ್ ಪಾ?”

“ಲಗು ಅಂದ್ರ?” ಕೇಳಿದ ಪಾಂಡ್ಯಾ

“ಮದ್ಯಾನ ಹನ್ನೆರಡಕ್ಕ?”

“ಲೇ… ಪಾರ‍್ಟಿ ಇರೂದು ಸಂಜಿ ಏಳಕ್ಕ. ಅಶ್ಟು ಲಗು ಬಂದ್ ಏನ್ ಮಾಡಾಂವಾ?”

“ಮನ್ಯಾಗ್ ಬ್ಯಾಸರ ಆಗಾತೇತಿ. ನನ ಹೆಂಡ್ತಿ ಅವರ ಅಕ್ಕನ ಮನಿಗೆ ಹೋಗ್ಯಾಳ. ನೀ ಹೂಂ ಅಂದ್ರ ಅಲ್ಲಿ ಬಂದ್ ಓಡ್ಯಾಡ್ತೀನಿ”

“ಆಯ್ತ್ ಬಾ”, ಎಂದ ಪಾಂಡ್ಯಾ.

ಪಾಂಡ್ಯಾನ ಮನೆಯಲ್ಲಿ ಇದ್ದದ್ದು ಅವನು, ಅವನ ಹೆಂಡ್ತಿ ರೇವತಿ ಮತ್ತು ಮಗು ಮಾತ್ರ. ಪಾಂಡ್ಯಾನ ಅಣ್ಣನ ಮನೆಯಲ್ಲಿದ್ದ ಅಪ್ಪ ಅಮ್ಮ ಸಂಜೆಯ ಹೊತ್ತಿಗೆ ಬರುವವರಿದ್ದರು. ಗದಿಯನ್ನು ಕಂಡಕೂಡಲೇ ಪಾಂಡ್ಯಾ ಮುಗುಳ್ನಕ್ಕ.
“ಏನಾತಲೇ”, ಎಂದು ಗದಿ ತನ್ನ ಪ್ಯಾಂಟಿನ ಜಿಪ್ ಏನಾದರೂ ತೆರೆದಿದೆಯಾ ಎಂದು ನೋಡಿಕೊಂಡ.

ನಗುತ್ತಲೇ, “ಏನ್ ಟಾಯಿಮಿಂಗ್ ಲೇ ನಿಂದು…” ಎಂದ ಪಾಂಡ್ಯಾ.

“ಯಾಕ?”

“ನಿಂಗ ನಂದಿನಿ ಗೊತ್ತಲಾ? ಅದ ಸಿನಿಮಾದಾಗ್ ಹಿರೋಯಿನ್ ಆಗಿ ಆಕ್ಟ್ ಮಾಡ್ತಾಳಲಾ”

“ಯಾರು? ನಂದಿನಿ ಶೆಟ್ಟರ‍್?”

“ಹೂಂ… ಅಕಿ ಮತ್ ನನ್ ಹೆಂಡ್ತಿ ಪ್ರೆಂಡ್ಸ್ ಅಂತ ಹೇಳಿದ್ದೆ… ನನ್ ಹೆಂಡ್ತಿ ಮನಿ, ಅಕಿ ಮನಿ ದಾರವಾಡದಾಗ ಅಗ್ಗಲ-ಮಗ್ಗಲ ಇದ್ದುವು… ನೆನಪದ?”

“ಹೂಂ… ನೆನಪಯ್ತಿ. ಏನ್ ಆತ್ ಈಗ?”

“ಅಕೀ ಇನ್ನೇನ್ ಬರ‍್ತಾಳ”

“ಹೌದ?!!” ಬೆರಗಾದ ಗದಿ. “ವಾವ್… ಮಸ್ತ್ ಅದಾಳಲೇ ಅಕಿ”

“ಲೇ ಮಗನಾ ಸ್ವಲ್ಪ್ ಕಂಟ್ರೋಲ್ ನಾಗಿರು”, ಜೋರು ಮಾಡಿದ ಪಾಂಡ್ಯಾ, ಎಲ್ಲಿ ಇವನ ಹುಚ್ಚಾಟದಿಂದ ತಮಗೆ ಇರುಸುಮುರುಸು ಉಂಟಾಗುತ್ತದೋ ಎಂದು.

ಗದಿ ಸಿಟ್ಟು ತೋರಿದ, “ಹೌದಪಾ… ನಾ ದೊಡ್ಡ ಕೇಡಿ… ಈಗರ ಹಿಂಡಲಗಾ ಜೇಲ್ ನಿಂದ ತಪ್ಪಿಸಿಕೊಂಡ್ ಬಂದೀನ್ ನೋಡು”

ಸಂಜೆ ಯಾವುದೋ ಬೇರೆಕಡೆ ಕೆಲಸವಿದ್ದುದರಿಂದ ಈಗಲೇ ಬಂದು ಹೋಗುವುದಾಗಿ ಹೇಳಿದ್ದಳಂತೆ. “ಪಾರ‍್ಟಿ ಟೈಮಿಗೆ ಬಂದ್ರ ಎಟಿಎಮ್ ಗ ಮುತ್ಕೊಂಡಂಗ್ ಮಂದಿ ಅಕಿಗೆ ಮುತ್ಗೊತಾರ”, ಎಂದು ಪಾಂಡ್ಯಾ ಕಾರಣ ಹೇಳಿದ. ಹದಿನೈದು ನಿಮಿಶದಲ್ಲಿ ನಂದಿನಿ ಬಂದಳು. ಮುಕದ ತುಂಬೆಲ್ಲ ಮುಚ್ಚಿದ್ದ ವೇಲ್ ತೆರೆದಿದ್ದು ಮನೆಯ ಒಳಗೆ ಬಂದ ಮೇಲೆಯೇ. ಅಪ್ಸರೆಯಂತೆ ಕಾಣುತ್ತಿದ್ದ ಅವಳಿಂದ ಸಾದ್ಯವಾದಶ್ಟು ತನ್ನ ಕಣ್ಣುಗಳನ್ನು ದೂರವಿಡಲು ಗದಿ ಪ್ರಯತ್ನ ಪಟ್ಟು ಪಟ್ಟು ಸೋಲುತ್ತಿದ್ದ. ಪೋನಿನ ಚಾರ‍್ಜ್ ಕಮ್ಮಿ ಇಟ್ಟುಕೊಂಡು ಪ್ರೀ ವೈ-ಪೈ ಜೋನಿನಲ್ಲಿ ಕುಳಿತಂತಾಗಿತ್ತು ಅವನ ಸ್ತಿತಿ. ಸೋಪಾದ ಮೇಲೆ ಅಕ್ಕ-ಪಕ್ಕ ಕೂತಿದ್ದ ಗೆಳತಿಯರ ಮೊದಲ ಹಂತದ ಮಾತುಗಳು ಮುಗಿದ ಮೇಲೆ, ಅವಳಿಗೆ ತಿಂಡಿ ಮಾಡಿ ತರಲು ಪಾಂಡ್ಯಾನ ಹೆಂಡತಿ ಒಳಗೆ ಹೋದಳು. ಆಗಲೇ ನಂದಿನಿ ಗದಿಯೆಡೆಗೆ ಸರಿಯಾಗಿ ನೋಡಿದ್ದು.

“ನನ್ನ ಪ್ರೆಂಡ್…”, ಎಂದು ಪಾಂಡ್ಯಾ ಬಾಯಿ ತೆರೆಯುತ್ತಿದ್ದಂತೆಯೇ, ನಡುವೆ ಗದಿ ತನ್ನ ಬಾಯಿ ಹಾಕಿದ, “ಗಗ… ಗಣೇಶ್”. ಒಂದು ಕ್ಶಣ ಗದಿಯನ್ನು ದುರುಗುಟ್ಟಿ ನೋಡಿದ ಪಾಂಡ್ಯಾ. “ಪಾಂಡು ನಾನು ಹಾಯ್ಸ್ಕೂಲಿನಿಂದ ಪ್ರೆಂಡ್ಸ್” ಎಂದು ಹಲ್ಲುಕಿರಿದ ಗದಿ.

“ರೀ… ಸ್ವಲ್ಪ ಬರ‍್ರಿ…”, ಎಂದು ಪಾಂಡ್ಯಾನ ಹೆಂಡತಿ ಒಳಗಿನಿಂದ ಕರೆದಳು. ಪಾಂಡ್ಯಾ ಹೋದ. ಉಳಿದವರು ಇವರಿಬ್ಬರೇ.

“ಒಬ್ರ ಬಂದೀರಿ?” ಕೇಳಿದ ಗದಿ.

ಅವಳು ಅನುಮಾನದಿಂದ, “ಹೂಂ… ಯಾಕ? ಯಾರ್ ಬರಬೇಕಿತ್ತು?”

“ನೀವು ಎಲ್ಲಿ ಹೋದ್ರು ನಿಮಗ ಮೇಕಪ್ ಮಾಡವ್ನ ಜೋಡಿ ಕರಕೊಂಡ ಹೋಗ್ತೀರಿ ಅನ್ಕೊಂಡಿದ್ದೆ”

ಅವಳು ಜೋರಾಗಿ ನಕ್ಕಳು. “ಶೂಟಿಂಗ್ ನಾಗ್ ಇದ್ದಾಗಶ್ಟ ಅವ್ರು ನನ್ ಜೋಡಿ ಇರ‍್ತಾರ”

“ಅವಾಗರ ನಿಮ್ ಜೋಡಿ ಇರ‍್ತಾರಲಾ… ದೇ ಆರ್ ಲಕ್ಕಿ… ಅಂದಂಗ ನೀವು ಮಲ್ಕೊಳ್ಳೊವಾಗ್ಲೂ ಮೇಕಪ್ ಮಾಡ್ಕೊಂಡ ಮಲ್ಕೋತೀರಿ?”

“ಇಲ್ಲಾ… ಯಾಕ?”

“ಅಲ್ಲಾ… ಈ ದಾರಾವಾಹಿಯೊಳಗ ಹುಡುಗ್ಯಾರು ಮಲ್ಕೊಂಡ್ ಎದ್ದಮ್ಯಾಲೂ ಮೇಕಪ್ ಹಂಗ ಇರತಯ್ತಿ, ಅದಕ್ಕ ಕೇಳ್ದೆ”. ಅವಳು ಜೋರಾಗಿ ನಕ್ಕಳು.

“ಅಂದಂಗ ನಿಮ್ ಮೇಕಪ್ ಮ್ಯಾನ್ ಪಗಾರ ಎಶ್ಟು?”

“ಯಾಕ?”, ಅವನ ಮುಂದಿನ ಜೋಕ್ ಗೆ ಕಾಯುತ್ತಾ ಕೇಳಿದಳು.

“ನನ್ ಕೆಲ್ಸ್ ಬಿಟ್ಟು ಅದನ್ನ ಮಾಡೂನು ಅಂತ”

“ಹ್ಹ… ಹ್ಹ… ಹಮ್… ಒಂದಿಪ್ಪತ್ ಸಾವಿರ ಇರ‍್ಬಹುದು. ಆದ್ರ ಮೇಕಪ್ ಮಾಡವ್ರಿಗಿಂತ ಆ ಮೇಕಪ್ ಸಾಮಾನಗಳ ಹೆಚ್ ರೇಟ್ ಇರ‍್ತಾವ… ಒಂದ್ ಲಿಪ್ಸ್ಟಿಕ್ ಗೇ ಹನ್ನ್ಯಾಡ್ ನೂರ‍್”
“ಯಪ್ಪಾ… ಅಶ್ಟ್ ರೊಕ್ಕದಾಗ ನಮ್ ಮನಿ ಮಂದೆಲ್ಲಾ ಇಡೀ ತಿಂಗ್ಳ ರೊಟ್ಟಿ ಜುಣಕ ತಿಂತಾರ”. ಅವಳು ಬಿದ್ದು ಬಿದ್ದು ನಕ್ಕಳು.

“ಗದೀ…” ಎಂದು ಒಳಗಿನಿಂದ ಪಾಂಡ್ಯಾ ಕೂಗಿದ.

“ಏನು?” ಎಂದು ಇಲ್ಲಿಂದಲೇ ಕೇಳಿದ ಗದಿ. ಅಶ್ಟರಲ್ಲಿ ನಂದಿನಿ, “ಗದಿ?” ಎಂದು ಗೊಂದಲದಿಂದ ಕೇಳಿದಳು.

ಅವಳಿಗೆ ಗದಿ ಎಂದು ಕೇಳಿಸಿದ್ದನ್ನು ಮುಚ್ಚಿಹಾಕಬೇಕಿತ್ತು. ಅವನ ಮೆದುಳು ಬೆಳಕಿಗಿಂತಲೂ ವೇಗವಾಗಿ ಓಡಿತು. “ಗದಿ ಅಲ್ಲಾ… ಗಣಿ ಅಂತ ಪಾಂಡು ಕರದಿದ್ದು… ಗದಿ? ಹ್ಹ…ಹ್ಹ… ಗದಿ ಅಂತ್ ಯಾಕ್ ಕರಿತಾನ? ಗಣಿ… ನಿಮಗ ಗದಿ ಅಂತ ಕೇಳಿಸ್ತೇನು?”

“ಹೂಂ”

“ಕಿವಿಗೆ ಬಾಳ ಮೇಕಪ್ ಮಾಡ್ಕೊಂಡಿರಿ ಅನಸ್ತೇತಿ” ಎಂದು ನಗುತ್ತಾ ಗದಿ ಒಳಗೆ ಹೋದ.

ನಂದಿನಿಯ ಜೋರು ನಗುವನ್ನು ಕೇಳಿ, ಮಾತು ಕಮ್ಮಿಮಾಡುವಂತೆ ಪಾಂಡ್ಯಾ ಹೇಳಿದ.

“ಲೇ… ಕಂಟ್ರೋಲ್ ನಾಗಿರು ಅಂತ್ ಹೇಳಿಲ್ಲಾ?”

“ಪಾಸಿಟೀವ್ ಪೀಡ್ ಬ್ಯಾಕ್ ಬರಾಕತ್ತೇತಿ, ಸೋ ಪರಪಾರಮೆನ್ಸ್ ಹೆಚ್ ಆಗೇ ಆಗುತ್ತ”

“ತಮ್ಮಾ… ಕಂಟ್ರೋಲ್ ಸಿಸ್ಟಮ್ಸ್ ನಾನೂ ಓದೀನಿ. ನೀ ಸ್ವಲ್ಪ ಔಟ್ ಆಪ್ ಪೇಸ್ ಆಗು”, ಎಂದು ಬೆದರಿಸಿದ. ಆಯಿತೆಂದು ಹೇಳಿ, ಅವಳು ಇರುವತನಕ, ತನ್ನನ್ನು ಗಣಿ ಎಂದು ಕರೆಯಬೇಕೆಂದು ಪಾಂಡ್ಯಾ ಮತ್ತವನ ಹೆಂಡತಿಗೆ ಗದಿ ಆಗ್ನೆ ಮಾಡಿದ. ಪಾಂಡ್ಯಾನ ಹೆಂಡತಿ ತಿಂಡಿ ತಂದಳು.

“ಯು ಆರ್ ಗುಡ್ ಲುಕ್ಕಿಂಗ್… ನೀವ್ ಯಾಕ ಮಾಡಲಿಂಗ್ ಮಾಡ್ಬಾರ‍್ದು?” ಗದಿಗೆ ಕೇಳಿದಳು ನಂದಿನಿ.

ಹಸಿದುಕೊಂಡಿದ್ದವನಿಗೆ ಬಿರಿಯಾನಿ ಕೊಟ್ಟಂಗಾಯಿತು. ಗದಿಗೆ ಕುಶಿ ತಡೆಯಲಾಗಲಿಲ್ಲ. “ನೀವ ಒಂದ್ ಚಾನ್ಸ್ ಕೊಡಸ್ರಿ ಮತ್ತ”, ಎನ್ನುತ್ತಾ ಮತ್ತೆ ಹರಟೆಗೆ ಶುರುವಿಟ್ಟುಕೊಂಡ. ಪಾಂಡ್ಯಾ ಮತ್ತವನ ಹೆಂಡತಿ ಇವರಿಬ್ಬರ ಸಲುಗೆಗೆ ಬೆರಗಾದರು. ನಂದಿನಿ ಒಂದು ಗಂಟೆ ಹರಟೆ ಹೊಡೆದು ಹೊರಟುಹೋದಳು.

ಮರುದಿನ ಆಪೀಸಿನಲ್ಲಿ ಊಟಕ್ಕೆ ಕುಳಿತಾಗ, ನಂದಿನಿಯ ಬಗ್ಗೆ ಮಾತು ತೆಗೆದ ಗದಿ. ಸಿನಿಮಾ ನಟಿಯಾಗಿದ್ದರೂ ಅವಳ ಸರಳತನಕ್ಕೆ ಅವನು ಮಾರುಹೋಗಿದ್ದ. “ಅಕಿ ಅಶ್ಟ್ ಚಲೋ ಅದಾಳಂತ ನಾ ಅನ್ಕೊಂಡಿದ್ದೇ ಇಲ್ಲ” ಎಂದ. ಗದಿಯ ಹೊಗಳಿಕೆ ಕಂಡು ಪಾಂಡ್ಯಾ ಹೇಳಿದ,

“ನಿನಗ ಹೇಳಬಾರ‍್ದು ಅನ್ಕೊಂಡಿದ್ದೆ, ಆದ್ರೂ ಹೇಳ್ತೀನಿ. ನಿನ್ನೆ ಸಂಜಿಕ ನಂದಿನಿ ನನ್ ಹೆಂಡ್ತಿಗೆ ಕಾಲ್ ಮಾಡಿದ್ಳು. ಅಕಿಗೆ ಸಿನಿಮಾ ಮಾಡೂದು ಬ್ಯಾಡಾಗೆದಂತ. ಬಾಳ ಹೊಲಸು ಜಗತ್ತು ಅನ್ನಾತಿದ್ಳು. ಸುಮ್ ಒಂದ್ ಲಗ್ನಾ ಆಗಿ ಮಾಡೆಲಿಂಗ್ ಮಾಡ್ಕೊಂಡು ಇದ್ ಬಿಡಬೇಕು ಅಂತ ಡಿಸೈಡ್ ಮಾಡ್ಯಾಳಂತ”

“ಅದಕ್ಕ?” ಗದಿ ಕೇಳಿದ.

“ನಿನ್ ಬಗ್ಗೆ ಕೇಳಿದ್ಳಂತ… ಆದ್ರ ನಿಂದು ಮದುವಿ ಆಗೇದ ಅಂತ ನನ್ ಹೆಂಡ್ತಿ ಅಕಿಗೆ ಹೇಳಿದ್ಳು”

ಒಂದು ಕ್ಶಣ ಅವಕ್ಕಾದ ಗದಿ. ಕುಶಿ, ದುಕ್ಕದ ಅವಳಿ ಬಾವನೆಗಳು ಅವನ ಮನಸ್ಸಿನಲ್ಲಿ ಒಟ್ಟಿಗೆ ಹುಟ್ಟಿದರೂ, ಕುಶಿ ಉಳಿದದ್ದು ಅರೆಗಳಿಗೆ ಮಾತ್ರ. ಕುಳಿತುಕೊಳ್ಳಲು ಸೀಟಿಲ್ಲದಿದ್ದರೂ ನಿಂತುಕೊಂಡೇ ಹೋದರಾಯಿತು ಎಂದು ಬಸ್ಸು ಹತ್ತಿ ಹೊರಟು, ಹಿಂದೆಯೇ ಇನ್ನೊಂದು ಕಾಲಿ ಬಸ್ಸು ಬಂದಿದ್ದುನ್ನು ಕಂಡಾಗ ಆಗುವ ತಳಮಳ ಅವನಿಗಾಯಿತು. ಗೆಳೆಯನೆಡೆಗೆ ಅಸಹಾಯಕ ನೋಟ ಬೀರುತ್ತಾ ನಿಟ್ಟುಸಿರುಬಿಟ್ಟ.

“ಇನ್ನೊಂದ್ ಮಾತ್ ಅದ”, ಮುಂದುವರೆಸಿದ ಪಾಂಡ್ಯಾ. “ನಿನ್ ಅಸಲಿ ಹೆಸರು ಅಕಿಗೆ ಹೇಳಬೇಕಾಗಿ ಬಂತು. ನೀನು ನಿನ್ ಹೆಸರು ಸುಳ್ ಹೇಳಿದ್ದು ನಂದಿನಿಗೆ ಒಂಚೂರು ಸರಿ ಬರಲಿಲ್ಲಂತ. ಸುಳ್ ಯಾಕ್ ಹೇಳ್ಬೇಕು ಅಂತ ಕೇಳಿದ್ಳಂತ”

ದೀರ‍್ಗವಾಗಿ ಉಸಿರುತೆಗೆದುಕೊಂಡು, ಕಯ್ಯಲ್ಲಿದ್ದ ಸ್ಪೂನನ್ನು ತಟ್ಟೆಗೆ ಎಸೆದ ಗದಿ. ಒಂದೆರಡು ಕ್ಶಣ ಬಿಟ್ಟು ಹೇಳಿದ, “ನಾ ನನ್ ಹೆಸರ್ ಚೇಂಜ್ ಮಾಡ್ಕೋತೀನಿ”.

ಎಂದಿನಂತೆ ಊಟ ಮುಗಿಸಿ ಆಪೀಸಿನ ಸುತ್ತ ಸುತ್ತು ಹಾಕುತ್ತಿರಬೇಕಾದರೆ, ಗದಿ ಹಿಂದೆ ತಿರುಗಿ ನೋಡುವದಕ್ಕೂ, ಹುಡುಗರ ಗುಂಪಿನಿಂದ ಒಬ್ಬ “ಲೇ ಗದ್ಯಾ” ಎನ್ನುವುದಕ್ಕೂ ಸರಿ ಹೋಯಿತು. ಅವನ್ಯಾರೆಂದು ಗದಿ ನೋಡಿಬಿಟ್ಟ. ಮೊದಲೇ ಬೇಸರದಲ್ಲಿದ್ದ ಗದಿಗೆ ಸಿಟ್ಟು ತಡೆದುಕೊಳ್ಳಲಾಗದೆ ಅವನನ್ನು ಹೊಡೆಯಲು ಓಡಿದ. ಆ ಹುಡುಗ ಕೂಡ ಓಡಿದ, ಆದರೆ ಗದಿಯ ಕಯ್ಯಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಅವನ ಅಂಗಿಯ ಕಾಲರ್ ಪಟ್ಟಿಹಿಡಿದು ಎಳೆದಾಡಿ, ಇನ್ನೇನು ಅವನ ಮುಕಕ್ಕೆ ಗುದ್ದಬೇಕು ಎನ್ನುವಶ್ಟರಲ್ಲಿ ಓಡಿಬಂದ ಪಾಂಡ್ಯಾ, ಗದಿಯನ್ನು ತಡೆದು ಆಗುವ ಅನಾಹುತ ತಪ್ಪಿಸಿದ. ಸುತ್ತಮುತ್ತ ಸೇರಿದ್ದ ತನ್ನ ಆಪೀಸಿನವರನ್ನು ನೋಡಿ ಗದಿ ನಿಯಂತ್ರಣಕ್ಕೆ ಬಂದ. ಜೋರಾಗಿ ಉಸಿರಾಡುತ್ತಿದ್ದ ಅವನನ್ನು ಆಪೀಸಿನ ಒಳಗಡೆ ಎಳೆದುಕೊಂಡು ಹೋಗಿಬಿಟ್ಟ ಪಾಂಡ್ಯಾ. ಅಂದು ಸಂಜೆ ಎಚ್.ಆರ್. ನವರು ಆ ಹುಡುಗ ಮತ್ತು ಗದಿ, ಇಬ್ಬರಿಗೂ ಒಂದು ತಾಸು ಬುದ್ದಿ ಹೇಳಿ ವಾರ‍್ನಿಂಗ್ ಕೊಟ್ಟರು.

( ನಾಳೆ, 4ನೇ ಕಂತು: ‘ಸಿಕ್ಕಿ ಹಾಕಿಕೊಂಡ ಪಾಂಡ್ಯಾ’ )

( ಚಿತ್ರ ಸೆಲೆ: wellosophy360.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *