ನಗೆಬರಹ : ಹೆಸರಲ್ಲೇನಿದೆ? ( ಕಂತು-5 )

– ಬಸವರಾಜ್ ಕಂಟಿ.

engineer

ಕಂತು 4: ಸಿಕ್ಕಿ ಹಾಕಿಕೊಂಡ ಪಾಂಡ್ಯಾ
ಕಂತು 3: ಹೆಸರು ಬದಲಾಯಿಸಲೇ ಬೇಕು
ಕಂತು 2: ವೀಕ್ಲಿ ರಿಪೋರ‍್ಟ್
ಕಂತು 1: ಗದಿಗೆಪ್ಪಾ ಗಟಬ್ಯಾಳಿ

“ಏನ್ ಅನ್ಕೊಂಡಾಳೋ ತನ್ನನ್ ತಾನು”. ರಶ್ಮಿಯ ಬಗ್ಗೆ ಬುಸುಗುಡುವುದು ಇನ್ನೂ ನಿಲ್ಲಿಸಿರಲಿಲ್ಲ ಪಾಂಡ್ಯಾ. ಅವನ ಸಿಟ್ಟು ಇನ್ನೂ ಕರಗಿರಲಿಲ್ಲ. ಊಟ ಮುಗಿಸಿ, ಬಯ್ಗುಳ ಮುಂದುವರೆಸುವಂತೆ ಗದಿ ಹೇಳಿದ. ಇಬ್ಬರೂ ಮಾತಿಲ್ಲದೆ ಕೆಲಹೊತ್ತು ಊಟ ಮಾಡಿದರು. ಗದಿಯ ಹೆಸರು ಬದಲಾಯಿಸಿಕೊಳ್ಳೋ ಪ್ರೊಗ್ರಾಮ್ ಎಲ್ಲಿಗೆ ಬಂತು ಎಂದು ಪಾಂಡ್ಯಾ ಕೇಳಿದ.

“ಹೆಸರ್ ಚೇಂಜ್ ಮಾಡು ಪ್ರೊಸೀಜರ್ ಹುಡುಕಿ ಓದೀನಿ. ಒಂದ್ ಅಪಿಡೆವಿಟ್ ಮಾಡ್ಸಿ, ಪೇಪರ್ ನಾಗ್ ಒಂದ್ ಯ್ಯಾಡ್ ಕೊಡ್ಬೇಕಂತ. ವಿಜಯನಗರ್ ನಾಗ ನೋಟರಿ ಹತ್ರ ಇವತ್ ಅಪಿಡೇವಿಟ್ ಮಾಡಸ್ತೀನಿ. ಹೆಸರು ಪೈನಲ್ ಮಾಡಿದ್ರ ಮುಗೀತು”

“ಏನ್ ವಿಚಾರ ಮಾಡಿ?”

“ಸಮೀರ್… ಹೆಂಗೈತಿ?”

“ಹಮ್… ಚಲೋ ಅದ… ಆದ್ರ ಸ್ವಲ್ಪ್ ನಾರ‍್ತ್ ಇಂಡಿಯನ್ ಹೆಸರ್ ಅನ್ಸುತ್ತ”

“ಹೌದು. ಆದ್ರ ನಂಗ್ ಓಕೆ”. ಗದಿ ತನ್ನ ಹೊಸ ಹೆಸರನ್ನು ತೀರ‍್ಮಾನಿಸಿದ್ದ.

“ಮನ್ಯಾಗ್ ಹೇಳಿ?”

“ಅಪ್ಪಂಗ್ ಗೊತ್ ಆದ್ರ ಒದಿತಾನ. ಹೆಸರ್ ಚೇಂಜ್ ಏನಿದ್ರು ಹೊರಗಿನ ಮಂದಿಗೆ ಅಶ್ಟ. ಹೆಸರ್ ಚೇಂಜ್ ಮಾಡ್ಕೊಂಡ್ ಮೇಲೆ ಕಂಪನಿ ಚೇಂಜ್ ಮಾಡ್ಕೊಂಡ್ರ ಆತು. ಹೊಸಾ ಕಂಪನಿ, ಹೊಸಾ ಹೆಸರು”

“ಆತ್ ಬಿಡು…” ನಕ್ಕ ಪಾಂಡ್ಯಾ. “ಊಟಾ ಆದ್ಮೇಲೆ ಪ್ರೀ ಅದಿ ಎನ್? ಇಲ್ಲೇ ಬಿಗ್ ಬಜಾರ್ ಹೋಗಿ ಪ್ರಿಡ್ಜ್ ರೇಟ್ ನೋಡ್ಕೊಂಡ್ ಬರೂನು”

“ನಿಂಗ?”

“ಹೂಂ… ಹೆಂಡ್ತಿಗೆ ಡಬಲ್ ಡೋರ್ ಪ್ರಿಡ್ಜ್ ಬೇಕಂತ”

ಇಬ್ಬರೂ ಊಟ ಮುಗಿಸಿ ಆಪೀಸಿಗೆ ಹತ್ತಿರದಲ್ಲಿದ್ದ ಮಾಲ್ ಒಂದಕ್ಕೆ ಹೊರಟರು. ಅಡುಗೆ ಮತ್ತು ದಿನಬಳಕೆಯ ವಸ್ತುಗಳಿಟ್ಟಿದ್ದ ಜಾಗವನ್ನು ದಾಟಿ ಎಲೆಕ್ಟಾನಿಕ್ಸ್ ಸಾಮಾನುಗಳಿರುವ ಕಡೆಗೆ ಹೋಗಬೇಕೆನ್ನುವಶ್ಟರಲ್ಲಿ ಗದಿಯ ನೋಟ ಒಬ್ಬ ಹುಡುಗಿಯ ಮೇಲೆ ಬಿತ್ತು. ಅವಳ ಮಯ್ಯಿಗೆ ಹತ್ತಿಕೊಂಡಂತಿದ್ದ ಜೀನ್ಸ್, ಟಿ-ಶರ‍್ಟ್, ಅವಳ ಬಿಚ್ಚುಗೂದಲು, ಹಣೆಯ ಮೇಲೇರಿಸಿದ್ದ ಕಪ್ಪು ಕನ್ನಡಕ, ತುಟಿಯ ರಂಗು… ಗದಿಯ ನೋಟಮಾತ್ರವಲ್ಲ, ಮನಸ್ಸನ್ನೂ ಸೆಳೆಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಪ್ರಿಡ್ಜ್ ಗಳನ್ನು ಜೋಡಿಸಿಟ್ಟ ಜಾಗದೆಡೆಗೆ ಹೋಗುತ್ತಿದ್ದರೂ ಮನಸ್ಸು ಹಿಂದಕ್ಕೆ ಎಳೆಯುತ್ತಿತ್ತು; ಕೊನೆಗೆ ಶರಣಾದ.

“ಲೇ, ನೀ ನೋಡ್ತಿರು… ನಾ… ನಾ… ನಾ ಸ್ವಲ್ಪ ಜೀನ್ಸ್ ಪ್ಯಾಂಟ್ ನೋಡ್ಕೊಂಡ್ ಬರ‍್ತೀನಿ” ಎಂದು ತಿರುಗಿ ದಿನಬಳಕೆಯ ವಸ್ತುಗಳನಿಟ್ಟಿದ್ದ ಜಾಗಕ್ಕೆ ನಡೆದ. ಇವನಿಗೇನಾಯಿತು ಎಂದು ಯೋಚಿಸುತ್ತಲೇ ಪಾಂಡ್ಯಾ ಪ್ರಿಡ್ಜ್ ಗಳೆಡೆಗೆ ಹೆಜ್ಜೆ ಹಾಕಿದ.

ಟ್ರಾಲಿಯೊಂದನ್ನು ತೆಗೆದುಕೊಂಡು ಅವಳಿದ್ದ ಸಾಲಿಗೆ ಮಿಂಚಿನ ವೇಗದಲ್ಲಿ ಬಂದ. ತಾನೂ ಸಾಮಾನುಗಳನ್ನು ಕೊಳ್ಳುವವರಂತೆ ಅವಳ ಹಿಂದಿಂದೆಯೇ ನಡೆದ. ಅವಳು ನಿದಾನವಾಗಿ ಕಾಸ್ಮೆಟಿಕ್ಸ್ ಸಾಲಿಗೆ ಬಂದಳು, ಇವನೂ ಅವಳ ಹಿಂದೆಯೇ ಇದ್ದ. ಬಗೆಬಗೆಯ ಶಾಂಪೂ, ಸೋಪು, ಬಾಡಿ ಲೋಶನ್, ಇತ್ಯಾದಿ ಸಾಮಾನುಗಳನ್ನು ಒಂದೊಂದಾಗಿ ನೋಡುತ್ತಾ ತನಗೆ ಬೇಕಾದನ್ನು ಟ್ರಾಲಿಯೊಳಗೆ ಹಾಕುತ್ತಿದ್ದಳು. ಗದಿಯ ಟ್ರಾಲಿ ಇನ್ನೂ ಕಾಲಿಯಾಗಿಯೇ ಇತ್ತು. ಸುಮ್ಮನೆ ತೋರಿಕೆಗೆ ತಾನೂ ಒಂದು ಶಾಂಪೂ ಡಬ್ಬಿ ಕಯ್ಯಲ್ಲಿ ಹಿಡಿದು, ಜೀವನದಲ್ಲಿ ಮೊದಲಬಾರಿಗೆ ಅದರ ಮೇಲೆ ಬರೆದಿದ್ದ ವಿವರಗಳನ್ನು ಓದತೊಡಗಿದ. ಕಳ್ಳನೋಟದಿಂದ ಅವಳೆಡೆಗೆ ನೋಡುವಾಗ ಅವಳೂ ಇವನೆಡೆಗೆ ನೋಡಿದಳು. ತುಟಿ ಹಿಗ್ಗಿಸಿದ. ಅವಳು ಹಿಗ್ಗಿಸಲಿಲ್ಲ. ನೋಟ ಕೆಳಗಿಳಿಸಿ, ಕಯ್ಯಲ್ಲಿದ್ದ ಪುಟ್ಟ ಡಬ್ಬಿ ತನ್ನ ದೊಡ್ಡ ಟ್ರಾಲಿಯೊಳಗೆ ಎಸೆದ. ಅಶ್ಟರಲ್ಲಿ ಹಿಂದಿನಿಂದ ಅವನ ಬುಜಕ್ಕೆ ಯಾರೋ ತಟ್ಟಿದರು. ತಿರುಗಿ ನೋಡಿದಾಗ ಆ ಮಾಲಿನ ಸೆಕ್ಯುರಿಟಿ ನಿಂತಿದ್ದ.

ಸೆಕ್ಯೂರಿಟಿಗಳ ಕೋಣೆಯಲ್ಲಿ ಕುಂತಿದ್ದ ಗದಿಯ ಬೆವರಿದ ಮುಕ, ನಡುಗುವ ಕಯ್ ನೋಡಿ, ಸೆಕ್ಯೂರಿಟಿಯ ಮೇಲುಸ್ತುವಾರಿಯವನು ಏರುದನಿಯಲ್ಲಿ ಮಾತಾಡಿದ. “ಹಾಗೆಲ್ಲ ಲೇಡಿ ಕಸ್ಟಮರ್ ಗಳಿಗೆ ತೊಂದ್ರೆ ಕೊಡೋದಕ್ಕೆ ನಿಮಗೆ ನಾಚ್ಕೆ ಆಗೋದಿಲ್ವಾ? ನಮ್ ಸಿಸಿಟಿವಿಯಲ್ಲಿ ಕ್ಲಿಯರ್ ಆಗಿ ಗೊತ್ತಾಗ್ತಾಯಿದೆ ನೀವು ಅವರನ್ನಾ ಹತ್ ನಿಮಿಶದಿಂದಾ ಪಾಲೊ ಮಾಡ್ತಾಯಿರೋದು”

“ಸ್…ಸಾರಿ”, ಎಂದಶ್ಟೇ ಗದಿ ಹೇಳಿದ. ಇನ್ನೇನು ಹೇಳಲೂ ಅವನಿಗೆ ಹೊಳೆಯಲಿಲ್ಲ.

“ಸಾರಿ ಅಂದ್ರೆ ಆಗೋದಿಲ್ಲ. ನೀವ್ ಹೀಗ್ ಮಾಡಿದ್ರೆ ಅವರು ಮತ್ತೆ ನಮ್ ಅಂಗಡಿಗೆ ಬರ‍್ತಾರಾ ಹೇಳಿ? ನೀವು ಒಂದು ಅಪಾಲಜಿ ಲೆಟರ್ ಕೊಟ್ರೆ ಮಾತ್ರ ಸುಮ್ನೆ ಬಿಡೋದು. ಇಲ್ಲಾ ಅಂದ್ರೆ ಈ ವಿಡಿಯೋ ಇಟ್ಕೊಂಡು ಪೊಲೀಸರಿಗೆ ಕಂಪ್ಲೆಂಟ್ ಕೊಡ್ತೀವಿ”

ಮೊದಲೇ ತ್ರಾಣ ಕಳೆದುಕೊಂಡಿದ್ದ ಗದಿಗೆ ಜೀವವೇ ಹೋದಂತಾಯ್ತು. ಪಾಂಡ್ಯಾ ಅದೇ ಮಾಲ್ ನಲ್ಲೇ ಇದ್ದದ್ದು ತಟ್ ಅಂತಾ ಹೊಳೆದು ಅವನಿಗೆ ಕರೆ ಮಾಡಿದ. “ಲೇ ಪಾಂಡ್ಯಾ… ಲಪಡಾ ಆಗೇತ್ ಲೇ”. ಒಂದೇ ನಿಮಿಶದಲ್ಲಿ ಗದಿ ಇದ್ದ ಕೋಣೆಗೆ ಪಾಂಡ್ಯಾ ಬಂದ. ಗೆಳೆಯನನ್ನು ಉಳಿಸುವ ಗುರುತರ ಜವಾಬ್ದಾರಿ ಅವನ ಮೇಲಿತ್ತು. ಸೆಕ್ಯೂರಿಟಿಯವರು ತೋರಿಸಿದ ಸಿಸಿಟಿವಿ ವಿಡಿಯೋ ನೋಡಿ, ಗದಿಗೆ ಕೇಳಿದ.

“ಏನಪಾ… ಜೀನ್ಸ್ ಪ್ಯಾಂಟ್ ಮನಸಿಗ್ ಬಂತಾ?”

ಇಳಿದ ಮುಕದಲ್ಲೇ ಗದಿ ಹೇಳಿದ, “ಹೂಂ… ಆದ್ರ ಬಾಳ ತುಟ್ಟಿ ಬಿತ್ತು”

ತನ್ನ ಗೆಳೆಯನ ತಪ್ಪನ್ನು ಅಲ್ಲಗಳೆಯುತ್ತಾ ಸೆಕ್ಯೂರಿಟಿಯವನಿಗೆ ಜೋರುಮಾಡಿದ ಪಾಂಡ್ಯಾ, “ಇವ್ನು ಅವ್ಳನ್ನಾ ಪಾಲೋ ಮಾಡ್ತಾಯಿದ್ದ ಅಂತಾ ಹೇಗ್ ಹೇಳ್ತೀರಾ? ಅವ್ಳೇನಾದ್ರೂ ಕಂಪ್ಲೆಂಟ್ ಕೊಟ್ಟಿದಾಳಾ? ಅಶ್ಟಕ್ಕೂ ಆ ವಿಡಿಯೋನಲ್ಲಿ ಇವನನ್ನಾ ಬಿಟ್ಟು ಇನ್ನೂ ಮೂವರು ಅವಳನ್ನಾ ಪಾಲೋ ಮಾಡ್ತಾಯಿದಾರೆ, ಬೇಕಿದ್ರೆ ಸರಿಯಾಗಿ ನೋಡಿ. ಅದರಲ್ಲಿ ಒಬ್ಬ ನಿಮ್ ಸ್ಟಾಪ್ ತರಾನೇ ಕಾಣಿಸ್ತಾನೆ. ಅವರೆಲ್ಲರನ್ನೂ ಇಲ್ಲಿಗೆ ಕರ‍್ಸಿ. ಒಟ್ಟಿಗೆ ಅಪಾಲಜಿ ಬರದ್ ಕೊಡ್ತೀವಿ”

ಈಗ ಸೆಕ್ಯೂರಿಟಿಯವನು ಸ್ವಲ್ಪ ಮೆತ್ತಗಾದ. “ಹಾಗಲ್ಲ ಸರ್. ನಮಗೇನೂ ಅಪಾಲಜಿ ಬೇಕೇ ಬೇಕು ಅಂತಾ ಅಲ್ಲಾ. ಹೀಗೆಲ್ಲಾ ಮಾಡಿದ್ರೆ ಲೇಡಿ ಕಸ್ಟಮರ್ ಗಳಿಗೆ ತೊಂದ್ರೆ ಅಲ್ವಾ ಸರ‍್”

ಪಾಂಡ್ಯಾ ಅವನ ಮಾತನ್ನು ಒಪ್ಪಲೇ ಇಲ್ಲ. “ರೀ… ಇವ್ನು ತನಗೆ ಬೇಕಾಗಿರೋ ಸಾಮಾನು ತೊಗೋತಾಯಿದ್ದ ಅಶ್ಟೇ.”

ಗದಿಗೆ ಈಗ ಸ್ವಲ್ಪ ದರ‍್ಯ ಬಂತು. “ಆಮ್ ..ಹಾ.. ಹೌದು…ಅಶ್ಟೇ.. ಅಶ್ಟೇ”, ಎಂದ.

“ಮತ್ತೆ ಅವರನ್ನೇ ಬಿಟ್ಟು ಬಿಡ್ದೆ ನೋಡ್ತಾ ಇದ್ರಿ?” ಕೇಳಿದ ಸೆಕ್ಯೂರಿಟಿ.

ಪಾಂಡ್ಯಾ ಮತ್ತೆ ತಡೆದ, “ರೀ… ಇವ್ನು ಅವಳಿಗೇನಾದ್ರೂ ತೊಂದ್ರೆ ಕೊಟ್ಟಿದಾನಾ? ಇಲ್ಲಾ ತಾನೆ. ನಮ್ ಹತ್ರ ಟಾಯಿಮ್ ಇಲ್ಲಾ… ನಾವು ಹೊರಡ್ತಾಯಿದೀವಿ… ನೀವು ಬೇಕಿದ್ರೆ ಪೊಲೀಸ್ ಕಂಪ್ಲೆಂಟ್ ಆದ್ರೂ ಕೊಡಿ, ಕೋರ‍್ಟನಲ್ಲಿ ಕೇಸಾದ್ರೂ ಹಾಕಿ”, ಎಂದು ಪಾಂಡ್ಯಾ ಎದೆ ಉಬ್ಬಿಸಿ ಹೊರನಡೆದ. ಅವನ ದೈರ‍್ಯ ಗದಿಯ ಮೇಲೂ ಪರಿಣಾಮ ಬೀರಿದ್ದರಿಂದ ಗದಿಯೂ ಎದೆಯುಬ್ಬಿಸಿ, ಸೆಕ್ಯೂರಿಟಿಯವನನ್ನು ಕಣ್ಣಲ್ಲೇ ಸೋಲಿಸಿ ಪಾಂಡ್ಯಾನನ್ನು ಹಿಂಬಾಲಿಸಿದ. ಏನು ಮಾಡಬೇಕು ತೋಚದೆ ಸೆಕ್ಯೂರಿಟಿಯವನು ಸುಮ್ಮನಾದ.

ಕೋಣೆಯಿಂದ ಹೊರಬರುತ್ತಲೇ ಗದಿಗೆ ಬಯ್ಯಲು ಶುರುವಿಟ್ಟ ಪಾಂಡ್ಯಾ, “ಲೇ… ಅಂವಾ ಅಶ್ಟ್ ಅಂದಿದ್ದಕ್ಕ ನಿನ್ ಟಿಪ್ಪಿ ಟರ‍್ರ್ ಅಂತೇನ್?”

“ಹೂಂ ಲೇ… ನೀ ಬರಲಿಕ್ಕ ನಾ ಹೇತ ಬಿಡ್ತಿದ್ಯಾ”

ಅಶ್ಟರಲ್ಲಿ ಮತ್ತೆ ಅದೇ ಕಾಸ್ಮೆಟಿಕ್ಸ್ ಸಾಲಿನೆಡೆಗೆ ಬಂದರು. ಆ ಸುಂದರಿ ಇನ್ನೂ ಅಲ್ಲೇ ಇದ್ದಳು. ಪಾಂಡ್ಯಾನ ನೋಟ ಅವಳೆಡೆಗೆ ಹೊರಳಿ ಗಕ್ಕನೆ ನಿಂತ. “ಏನ್ ಅದಾಳಲೇ”, ಉದ್ಗರಿಸಿದ ಪಾಂಡ್ಯಾ.

“ಹೌದಿಲ್ಲ? ಇಕಿನ ಲೇ ಅಕಿ”, ಎಂದ ಗದಿ.

ಅವಳ ಮೇಲಿನ ನೋಟ ಒಂದು ಚೂರೂ ಸರಿಸದೆ, “ಟ್ರಾಲಿ ತಗೊಂಡ್ ಬಾ… ನಾನೂ ಸ್ವಲ್ಪ ಸಾಮಾನ್ ತೊಗೋಬೇಕು”, ಎಂದ ಪಾಂಡ್ಯಾ!

ಅಂದು ಸಂಜೆ ಅಪಿಡೇವಿಟ್ ಮಾಡಿಸಲು ಹತ್ತಿರದ ನೋಟರಿ ಆಪೀಸಿಗೆ ಹೋಗಿ ಕುಳಿತ ಗದಿ. ಇವನಿಗಿಂತ ಮುಂಚೆಯೇ ಇನ್ನಿಬ್ಬರು ಬಂದು ಕುಳಿತಿದ್ದರು.

ಅವನ ಪಕ್ಕದಲ್ಲಿದ್ದವ ಕೇಳಿದ, “ಏನ್ಸಾರ್ ನಿಮ್ದೂ ಹೆಸರ್ ಚೇಂಜ್ ಅಪಿಡೆವಿಟ್ಟಾ?”

“ಹೌದು”, ಎಂದು ಮುಗುಳ್ನಕ್ಕ ಗದಿ. “ನಿಮ್ದು?” ಕೇಳಿದ.

“ನಂದೂ ಅದೇ”, ಎಂದ ಅವ.

“ಏನಂತಾ ಚೇಂಜ್ ಮಾಡ್ತಾಯಿದಿರಾ?” ಕೇಳಿದ ಗದಿ.

“ಜೋಸೆಪ್ ಅಂತಾ”

“ಈಗ ಏನಂತಾಯಿದೆ?”

“ಜಯಣ್ಣ”

ಇವನು ಕ್ರಿಸ್ಚಿಯಾನಿಟಿಗೆ ಮತಾಂತರ ಹೊಂದುತ್ತಿದ್ದಾನೆ ಎಂದು ತಕ್ಶಣ ಗದಿಗೆ ಹೊಳೆಯಿತು. ಜೋಸೆಪ್ ಎನ್ನುವ ಹೆಸರು ಗದಿಗೆ ಅಶ್ಟು ಹಿಡಿಸಲಿಲ್ಲ. “ನೀವು ಕನ್ವರ‍್ಟ್ ಆಗ್ತಿರೋದಕ್ಕೆ ನನ್ ಅಬ್ಯಂತರಾ ಏನ್ ಇಲ್ಲಾ… ಆದ್ರೆ ಜೋಸೆಪ್ ಅಂತಾ ಹೆಸರು ಯಾಕೆ ಚೇಂಜ್ ಮಾಡ್ಕೋಬೇಕು?”

“ಏನ್ ಮಾಡೋದ್ ಸಾರ್. ಹೆಸರು ಚೇಂಜ್ ಮಾಡ್ಕೊಳ್ಳೇಬೇಕು ಅಂತಾ ಪಾದರ್ ಹೇಳಿದ್ರು”

“ಆದ್ರೂ ಜೋಸೆಪ್ ಅನ್ನೋದು ಇಲ್ಲಿನ ಹೆಸರು ಅಲ್ವಲ್ಲಾ… ಜಯಣ್ಣ ಅಂತಾಯಿರೋ ನಿಮ್ ಹೆಸರನ್ನಾ ಯಾವುದೋ ಇಂಗ್ಲಿಶ್ ಹೆಸರಿಗೆ ಬದಲಾಯಿಸಿದ್ರೆ ನಮ್ಮತನ ಬಿಟ್ ಕೊಟ್ಟಹಾಗೆ ಅಲ್ವಾ?”

“ಹೌದು ಸರ್. ನೀವ್ ಹೇಳೋದ್ ನಿಜಾ. ಆದ್ರೂ ಅನಿವಾರ‍್ಯ”, ಅವನ ಮುಕ ಸಪ್ಪೆಯಾಯಿತು. “ನೀವ್ ಯಾಕ್ ಸರ್ ಚೇಂಜ್ ಮಾಡ್ಕೊಂತಾಯಿದಿರಾ? ಪಾಸ್ ಪೋರ‍್ಟ್ ಕಿರಿಕ್ಕಾ?”

ಇಶ್ಟೊತ್ತು ಅವನಿಗೆ ಹೇಳಿದ ಮಾತುಗಳು ತನಗೂ ಅನ್ವಯಿಸುತ್ತವೆ ಎಂದು ಒಮ್ಮೆಲೆ ಗದಿಯ ಮನಸ್ಸಿಗೆ ಅನಿಸಿತು. ಪಕ್ಕದವನ ಪ್ರಶ್ನೆಗೆ ಏನು ಹೇಳಬೇಕು ತಿಳಿಯದೆ ಸುಮ್ಮನಾದ. ಅಶ್ಟರಲ್ಲಿ ನೋಟರಿಯವನು ಪಕ್ಕದವನನ್ನು ಕರೆದ. ಗದಿಯ ಮನಸ್ಸು ಹೊಯ್ದಾಡತೊಡಗಿತು. ಸದ್ದಿಲ್ಲದೆ ಅಲ್ಲಿಂದ ಎದ್ದು, ಮನೆಯೆಡೆಗೆ ಹೆಜ್ಜೆಹಾಕಿದ. ದಾರಿಯುದ್ದಕ್ಕೂ ಯೋಚಿಸಿ, ಮನೆಗೆ ಬರುವಶ್ಟರಲ್ಲಿ ತನ್ನಿಂದ ಎಂತಾ ತಪ್ಪಾಗಿಬಿಡುತ್ತಿತ್ತಲ್ಲಾ ಎನಿಸಿ, ಹೆಸರಿನ ಬಗ್ಗೆ ಇದ್ದ ಕೀಳರಿಮೆ ಮರೆಯಾಗಿ ಮನಸ್ಸು ಹಗುರವಾಗಿತ್ತು. ಊಟ ಮುಗಿಸಿ, ಇಸ್ರೇಲ್ ನಲ್ಲಿನ ಹೊಸ ತಂಡದೊಂದಿಗಿನ ಆಡಿಯೋ ಮೀಟಿಂಗಿಗೆ ಸಜ್ಜಾದ.

“ಹಾಯ್, ಆಯ್ ಆಮ್ ಗದಿಗೆಪ್ಪಾ. ಯು ಕ್ಯಾನ್ ಕಾಲ್ ಮಿ… ಗದಿಗೆಪ್ಪಾ :)”

(ಮುಗಿಯಿತು)

( ಚಿತ್ರ ಸೆಲೆ: netpcserv.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: