ಕರುಣ್ ನಾಯರ್ – ಹೊಸ ತಲೆಮಾರಿನ ಹೆಮ್ಮೆಯ ಆಟಗಾರ

ರಾಮಚಂದ್ರ ಮಹಾರುದ್ರಪ್ಪ.

karun-nair_1912reu_875

ಟೆಸ್ಟ್ ಕ್ರಿಕೆಟ್‍ನಲ್ಲಿ ತ್ರಿಶತಕ ಗಳಿಸುವುದು ಸುಳುವಾದ ಕೆಲಸವಲ್ಲ ಎಂದು ಕ್ರಿಕೆಟ್ ಬಗ್ಗೆ ಕೊಂಚ ಅರಿವು ಇರುವವರಿಗೂ ತಿಳಿದಿದೆ. ತೆಂಡೂಲ್ಕರ್, ವಿಶ್ವನಾತ್, ದ್ರಾವಿಡ್, ಗಾವಸ್ಕರ್ ರಂತಹ ದಿಗ್ಗಜ ಆಟಗಾರರೇ ಟೆಸ್ಟ್ ನಲ್ಲಿ ಒಂದೂ ತ್ರಿಶತಕ ಗಳಿಸಲಿಲ್ಲ ಎಂದರೆ ಯೋಚಿಸಿ, ಒಂದೇ ಇನ್ನಿಂಗ್ಸ್ ನಲ್ಲಿ 300 ರನ್ ಬಾರಿಸುವುದು ಎಂತ ಪ್ರಯಾಸದ ಕೆಲಸ ಎಂದು. ಕರ‍್ನಾಟಕದ ಕೆ.ಎಲ್ ರಾಹುಲ್ ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ನೆಲೆ ಕಂಡುಕೊಂಡರು ಎಂದು ಬೀಗುತ್ತಿದ್ದ ಕನ್ನಡಿಗರ ಸಂತೋಶ ದುಪ್ಪಟ್ಟಾಗಲು ಕರ‍್ನಾಟಕದ ಇನ್ನೊಬ್ಬ ಆಟಗಾರ ಇಂಗ್ಲೆಂಡ್ ಮೇಲೆ ಔಟಾಗದೇ 303 ಬಾರಿಸಿದ್ದೇ ಕಾರಣ. ಆ ಆಟಗಾರ ನಮ್ಮ ಹೆಮ್ಮೆಯ ಕರುಣ್ ನಾಯರ್. ಕರ‍್ನಾಟಕ ತಂಡದ ಆಟಗಾರರು ಪ್ರೀತಿಯಿಂದ ‘ಕುಳ್ಳ’ ಎಂದು ಕರೆಯುವ ಈ ಹುಡುಗ ತಾನೆಂತಾ ಪ್ರಚಂಡ ಕುಳ್ಳ ಎಂದು ಆಡಿದ 3ನೇ ಟೆಸ್ಟ್ ನಲ್ಲೇ ಪ್ರಪಂಚಕ್ಕೆ ತೋರಿಸಿದನು.

1991ರ ಡಿಸೆಂಬರ್ 6 ರಂದು ರಾಜಸ್ತಾನದ ಜೋದಪುರದಲ್ಲಿ ಕರುಣ್ ಹುಟ್ಟಿದರು. ಆಗ ತಂದೆ ಕಲಾದರನ್ ನಾಯರ್ ಅವರು ಕೆಲಸದ ನಿಮಿತ್ತ ಜೋದಪುರದಲ್ಲಿ ಬೀಡು ಬಿಟ್ಟಿದ್ದರು. ಕರುಣ್ ಇನ್ನೂ ತೊಟ್ಟಿಲಲ್ಲಿ ಇರುವಾಗಲೇ ನಾಯರ್ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿದರು. ಕರುಣ್ ಅವರದು ನೆರೆಮುನ್ನ ಹುಟ್ಟು(premature baby). ಕೇವಲ ಏಳೇ ತಿಂಗಳಿಗೆ ಹುಟ್ಟಿದ ಕರುಣ್‍ಗೆ ಉಸಿರಾಟದಲ್ಲಿ ಕೊಂಚ ತೊಂದರೆ ಇತ್ತು. ಆದ್ದರಿಂದ ಎಳವೆಯಲ್ಲೇ ಯಾವುದಾದರೂ ಆಟದಲ್ಲಿ ತೊಡಗಿಸಿಕೊಂಡರೆ ಕ್ರಮೇಣ ಉಸಿರಾಟ ಸಹಜ ಸ್ತಿತಿಗೆ ಬರುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದರು.

ಎಳವೆಯಲ್ಲೇ ಕ್ರಿಕೆಟ್ ತರಬೇತಿ

ವೈದ್ಯರ ಸಲಹೆಯ ಮೇರೆಗೆ ಅವರನ್ನು 8ನೇ ವಯಸ್ಸಿಗೆ ಕ್ರಿಕೆಟ್ ತರಬೇತಿಗೆ ಸೇರಿಸಲಾಯಿತು. ಬೆಂಗಳೂರಿನ ಚಿನ್ಮಯಿ ಶಾಲೆಯಲ್ಲಿ 4ನೇ ತರಗತಿ ತನಕ ಕಲಿತ ಕರುಣ್ ನಂತರ ಒಳ್ಳೆ ಕ್ರಿಕೆಟ್ ಏರ‍್ಪಾಡು ಇರುವ ಶಾಲೆಯಲ್ಲಿ ಕಲಿತರೆ ಒಳಿತು ಎಂದು ಪ್ರಾಂಕ್ ಆಂತೋನಿ ಪಬ್ಲಿಕ್ ಶಾಲೆಗೆ ಸೇರಿಸಿದರು. ಕ್ರಿಕೆಟ್‍ನ ಮೊದಲ ಪಟ್ಟುಗಳನ್ನು ಅವರು ತಮ್ಮ ಮೊದಲ ತರಬೇತುದಾರರಾದ ಶಿವಾನಂದ್ ಅವರ ಬಳಿ ಕಲಿತರು. ಇವರೇ ಕರುಣ್ ಅವರಿಗೆ ಬ್ಯಾಟ್ ಹಿಡಿಯುವ ಪರಿಯನ್ನು ತಿದ್ದಿ ತೀಡಿ ಕಲಿಸಿದ ವ್ಯಕ್ತಿ. ಶಿವಾನಂದ್ ರವರು ಹೇಳುವ ಹಾಗೆ ಕರುಣ್ ಸಣ್ಣ ವಯಸ್ಸಿನಿಂದಲೂ ಉತ್ಸಾಹದಿಂದ ಕ್ರಿಕೆಟ್ ಅಬ್ಯಾಸ ಮಾಡುತ್ತಿದ್ದರಂತೆ. ತರಬೇತಿಗೆ ಎಂದೂ ತಡವಾಗಿ ಬಾರದ ಕರುಣ್ ಒಮ್ಮೆ 20 ನಿಮಿಶ ತಡವಾಗಿ ಬಂದಿದ್ದಕ್ಕೆ, “ನಾನು ನಿಲ್ಲಿಸು ಅನ್ನುವ ತನಕ ಈ ಮೈದಾನದ ಸುತ್ತು ಹೊಡೆಯುತ್ತಲೇ ಇರು” ಎಂದು ಗದರಿ ಶಿವಾನಂದರು ತಮ್ಮ ಕೆಲಸದಲ್ಲಿ ನಿರತರಾದರಂತೆ. ಸುಮಾರು ಒಂದು ಗಂಟೆ ನಂತರ ಬಂದು ನೋಡಿದರೆ ಕರುಣ್ ಏದುಸಿರು ಬಿಡುತ್ತಾ ಇನ್ನೂ ಓಡುತ್ತಿದ್ದರಂತೆ. ಇದನ್ನು ಕಂಡ ಶಿವಾನಂದರು ಯಾಕೆ ಇಶ್ಟು ಹೊತ್ತಾದರೂ ಇನ್ನೂ ಓಡುತ್ತಿರುವೆ ಎಂದು ಕೇಳಿದಾಗ, “ನೀವೇ ಹೇಳಿದ್ರಲ್ಲ ಸಾರ್ ನಾನು ಹೇಳುವ ತನಕ ನಿಲ್ಲಿಸಬಾರದು ಅಂತ” ಅನ್ನೋ ಮಾರುತ್ತರ ಬಂತಂತೆ. ತರಬೇತುದಾರರ ಮಾತನ್ನು ಚಾಚು ತಪ್ಪದೆ ಪಾಲಿಸೋ ಗುಣ ಕರುಣ್ ಅವರಲ್ಲಿ ಇರುವುದರಿಂದ ಕಂಡಿತ ಆಟಗಾರನಾಗಿ ಬೆಳೆಯುತ್ತಾನೆ ಎಂಬುದು ಶಿವಾನಂದರಿಗೆ ಅಂದೇ ಬರವಸೆ ಇತ್ತು ಎಂದು ಹೇಳುತ್ತಾರೆ.

ಕ್ರಿಕೆಟ್ ನ ಮೊದಲ ದಿನಗಳು

ತಮ್ಮ ಪ್ರಾಂಕ್ ಆಂತನಿ ಶಾಲೆಯ ಪರ ಆಡುತ್ತಿದ್ದ ಕರುಣ್ 10ನೇ ವಯಸ್ಸಿಗೆ ಕಾಲಿಡುವ ಹೊತ್ತಿಗೆ “ಜಾಲಿ ಕ್ರಿಕೆಟರ‍್ಸ್” ಕ್ಲಬ್ ತಂಡವನ್ನು ಸೇರಿದರು. ಅಲ್ಲಿನ ನಾಲ್ಕನೇ ಡಿವಿಜನ್‍ನಿಂದ ಮೊದಲ ಡಿವಿಜನ್ ಕ್ರಿಕೆಟ್‍ಗೆ ತೇರ‍್ಗಡೆ ಹೊಂದಲು ಹೆಚ್ಚು ಸಮಯ ಹಿಡಿಯದಿದ್ದರೂ ಹೇಳಿಕೊಳ್ಳುವಂತಹ ಪ್ರದರ‍್ಶನ ಕರುಣ್ ಅವರ ಬ್ಯಾಟಿಂದ ಬರಲಿಲ್ಲ. ಕೆ.ಎಸ್.ಸಿ.ಎ ಯ ಹಲವು ವಯೋಮಿತಿಯ ಪಂದ್ಯಾವಳಿಗಳಲ್ಲಿ ಆಡುತ್ತಾ ಮುಂದುವರಿದ ಕರುಣ್, ಕಳಪೆ ಅಲ್ಲದಿದ್ದರೂ ಗಮನ ಸೆಳೆಯುವಂತಹ ಆಟ ಆಡಲಿಲ್ಲ.

2010 ಕಿರಿಯರ ವಿಶ್ವಕಪ್ – ತಪ್ಪಿದ ಅವಕಾಶ

ಕರ‍್ನಾಟಕ ಕಿರಿಯರ ತಂಡದ ಕೆ.ಎಲ್ ರಾಹುಲ್ ಮತ್ತು ಮಾಯಂಕ್ ಅಗರ‍್ವಾಲ್ ರನ್ ಗಳ ಹೊಳೆಯನ್ನು ಹರಿಸಿ ಬಾರತ ಕಿರಿಯರ ತಂಡದಲ್ಲಿ ಸ್ತಾನ ಪಡೆದರು. ಆದರೆ ಕರುಣ್ ಸ್ತಿರ ಪ್ರದರ‍್ಶನ ನೀಡದೆ ಸದಾ ಬರ‍್ಜರಿ ಹೊಡೆತಗಳ 60, 70 ರನ್ ಗಳನ್ನಶ್ಟೇ ಗಳಿಸುತ್ತಿದ್ದರಿಂದ ಅವರನ್ನು ಕಡೆಗಣಿಸಲಾಗುತ್ತಿತ್ತು. ದೊಡ್ಡ ಇನ್ನಿಂಗ್ಸ್ ಗಳನ್ನು ಆಡದೇ ಇದ್ದರೂ ಆಯ್ಕೆಯ ವೇಳೆ ಅವರ ಹೆಸರು ಚರ‍್ಚೆಗೆ ಬಂದಿದ್ದು ಕರುಣ್ ಅವರ ಅಳವಿಗೆ ಸೂಕ್ತ ಎತ್ತುಗೆ. ಅವರು ತಮ್ಮ ವ್ರುತ್ತಿ ಬದುಕಿನ ಮೊದಲ ಶತಕ ಸಿಡಿಸಿದ್ದೇ ತಮ್ಮ 19ನೇ ವಯಸ್ಸಿನಲ್ಲಿ. ಇದು ನಂಬಲಸಾದ್ಯವಾದರೂ ದಿಟ. ಈ ಶತಕದ ನಂತರ ಬರು ಬರುತ್ತಾ ನೆಲೆ ಕಂಡುಕೊಂಡವರು ಸ್ತಿರ ಪ್ರದರ‍್ಶನ ನೀಡಲು ಶುರು ಮಾಡಿದರು. ಕರ‍್ನಾಟಕದ ಪರ ರಣಜಿ ಆಡುವ ಮುನ್ನವೇ 2013 ರ ಐ.ಪಿ.ಎಲ್ ನಲ್ಲಿ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡ ಕರುಣ್ ರನ್ನು ಆಯ್ಕೆ ಮಾಡಿದ್ದರು. ಇದು ಅವರ ವ್ರುತ್ತಿ ಬದುಕಿನ ಇನ್ನೊಂದು ಅಚ್ಚರಿ.

ತಡವಾದರೂ ಕಡೆಗೆ ಸಿಕ್ಕ ರಣಜಿ ಅವಕಾಶ

2013 ರ ಹೊತ್ತಿಗೆ ಕೆ.ಎಸ್.ಸಿ.ಎ ಯ ಪಂದ್ಯಾವಳಿಗಳಾದ ಶಪಿ ದರಾಶಾ, ಸರ್ ಮಿರ‍್ಜಾ ಇಸ್ಮಾಯಿಲ್, ಕೆ. ತಿಮ್ಮಪ್ಪಯ್ಯ ಟ್ರೋಪಿಗಳಲ್ಲಿ ಸಾಕಶ್ಟು ರನ್ ಗಳಿಸಿದ್ದ ಕರುಣ್‍ ಅವರನ್ನು ಕರ‍್ನಾಟಕ ತಂಡಕ್ಕೆ ಆಯ್ಕೆ ಮಾಡದೆ ಬೇರೆ ದಾರಿಯಿರಲಿಲ್ಲ. ಆದರೆ ಆ ಸಾಲಿನ ರಣಜಿ ಟ್ರೋಪಿಯ ಮೊದಲ 5 ಪಂದ್ಯಗಳಲ್ಲಿ ಆಡುವ ಹನ್ನೊಂದರಲ್ಲಿ ಜಾಗ ಸಿಗದೇ ಹೊರಗೇ ಉಳಿದರು. ಕಡೆಗೆ ಹುಬ್ಬಳ್ಳಿಯಲ್ಲಿ ಪಂಜಾಬ್ ಮೇಲೆ ನಡೆದ ಪಂದ್ಯದಲ್ಲಿ ಕರುಣ್ ರಣಜಿ ಕ್ರಿಕೆಟ್ ಗೆ ಪಾದಾರ‍್ಪಣೆ ಮಾಡಿದರು. ಆದರೆ ಆ ಪಂದ್ಯದಲ್ಲಿ ಕೇವಲ 21 ರನ್ ಗಳಿಸಿ ನಿರಾಸೆ ಮೂಡಿಸಿದರು. ನಂತರದ ಮುಂಬೈ ಮೇಲಿನ ಪಂದ್ಯದ ಎರಡೂ ಇನ್ನಿಂಗ್ಸ್ ನಲ್ಲಿ ಒಂದು ಅಂಕಿ ರನ್ ಅಶ್ಟೇ ಮಾಡಿದರು. ಕೊಟ್ಟಿರುವ ಮೂರು ಅವಕಾಶಗಳನ್ನು ಬಳಸಿಕೊಳ್ಳದ ಕರುಣ್ ಅವರನ್ನು ಕೈ ಬಿಡುವುದು ಕಚಿತ ಎಂದೇ ಎಲ್ಲರೂ ತಿಳಿದ್ದಿದ್ದರು. ಆದರೆ ಅವರಿಗೆ ಬೆನ್ನೆಲುಬಾಗಿ ನಿಂತ ನಾಯಕ ವಿನಯ್, ದೆಹಲಿ ಮೇಲಿನ ಪಂದ್ಯಕ್ಕೆ ಸ್ತಾನ ನೀಡಿದರು. ನಾಯಕನ ನಂಬಿಕೆ ಹುಸಿ ಮಾಡದೆ ಕರುಣ್ ಆ ಪಂದ್ಯದಲ್ಲಿ ತಮ್ಮ ಮೊದಲ ದರ‍್ಜೆ ಕ್ರಿಕೆಟ್ ನ ಚೊಚ್ಚಲ ಶತಕ ಬಾರಿಸಿದರು. ಕರುಣ್ ಅವರ ಬ್ಯಾಟಿಂಗ್ ಅಳವನ್ನು ಅರಿತಿದ್ದ ವಿನಯ್, ಅವರಿಗೆ ಇನ್ನೊಂದು ಅವಕಾಶ ನೀಡಲು ಅನುಬವಿಗಳಾದ ಗಣೇಶ್ ಸತೀಶ್ ಹಾಗೂ ಅಮಿತ್ ವರ‍್ಮರನ್ನು ಕಡೆಗಣಿಸಿದ್ದರು.

ಇದಾದ ನಂತರ ಉತ್ತರ ಪ್ರದೇಶದ ಮೇಲಿನ ಕ್ವಾಟರ್ ಪೈನಲ್ ಪಂದ್ಯ ಮತ್ತು ಪಂಜಾಬ್ ಮೇಲಿನ ಸೆಮಿಪೈನಲ್ ಪಂದ್ಯದಲ್ಲೂ ಅವರು ಶತಕ ಸಿಡಿಸಿದರು. ಮೊದಲ ರಣಜಿ ಟ್ರೋಪಿಯಲ್ಲೇ ಸತತ ಮೂರು ಶತಕ ಬಾರಿಸಿದ ಬ್ಯಾಟ್ಸ್ಮೆನ್ ಎಂಬ ಹೆಗ್ಗಳಿಕೆ ಕರುಣ್ ಪಾಲಾಯಿತು. ಮಹಾರಾಶ್ಟ್ರ ಮೇಲಿನ ಪೈನಲ್ ನಲ್ಲಿ ಹೆಚ್ಚು ರನ್ ಗಳಿಸದ್ದಿದ್ದರೂ ಗೆಲುವಿಗೆ 6 ರನ್ ಬೇಕಿದ್ದಾಗ ಲಾಂಗ್ ಆನ್ ಕಡೆ ಕರುಣ್ ಬಾರಿಸಿದ ಸಿಕ್ಸ್, ಕರ‍್ನಾಟಕ ಕ್ರಿಕೆಟ್ ನ ಐತಿಹಾಸಿಕ ಕ್ಶಣಗಳಲ್ಲಿ ಒಂದಾಯಿತು. ಆ ಸಿಕ್ಸ್ ನಿಂದ 14 ವರ‍್ಶದ ಬಳಿಕ ಕರ‍್ನಾಟಕ ರಣಜಿ ಟ್ರೋಪಿ ತನ್ನದಾಗಿಸಿಕೊಂಡಿದ್ದು ಈಗ ಇತಿಹಾಸ.

ಐ.ಪಿ.ಎಲ್ ಕ್ರಿಕೆಟ್ ಬದುಕು

ಚೊಚ್ಚಲ ರಣಜಿ ಸಾಲಿನಲ್ಲೇ 3 ಶತಕ ಸಿಡಿಸಿ ಎಲ್ಲರ ಗಮನ ಸೆಳೆದ್ದಿದ್ದ ಕರುಣ್ ಅವರನ್ನು ರಾಜಸ್ತಾನ ರಾಯಲ್ಸ್ ಬೆಂಗಳೂರಿನಿಂದ ಕಸಿದುಕೊಂಡಿತು. 2014 ಮತ್ತು 15 ರ ಸಾಲಿನ ಐ.ಪಿ.ಎಲ್ ನಲ್ಲಿ ರಾಜಸ್ತಾನದ ಪರ ಆಡಿ ಸಾದಾರಣ ಯಶಸ್ಸನ್ನು ಕಂಡಿದ್ದರೂ ಕ್ರಿಕೆಟ್ ಪಂಡಿತರು ಅವರ ಬ್ಯಾಟಿಂಗ್ ಪರಿಯನ್ನು ಮೆಚ್ಚಿಕೊಂಡರು. ಆ 2 ವರ‍್ಶಗಳ ಕಾಲ ಅವರ ಬ್ಯಾಟಿಂದ ಅಲ್ಲೊಂದು ಇಲ್ಲೊಂದು ಒಳ್ಳೆ ಪ್ರದರ‍್ಶನ ನೋಡ ಸಿಕ್ಕಿತು. ಹಾಗಾಗಿ ಅವರು ಬಾರತದ ಪರ ಆಡುವ ಕನಸು ಕನಸಾಗಿಯೇ ಉಳಿಯಿತು. 2016 ರಲ್ಲಿ ದೆಹಲಿಯ ಪರ ಆಡಿದಾಗಲೂ ಅವರು ಹೆಚ್ಚೇನು ರನ್ ಗಳಿಸಲಿಲ್ಲ.

ತಿರುವು ನೀಡಿದ 2014/15 ರ ರಣಜಿ ಪೈನಲ್

karun2

2014/15 ರಲ್ಲಿ ತಮ್ಮ ವ್ರುತ್ತಿ ಬದುಕಿನ ಎರಡನೇ ರಣಜಿ ಟ್ರೋಪಿ ಆಡಿದ ಕರುಣ್ ಪೈನಲ್‍ಗೂ ಮುನ್ನ ಆಡಿದ 9 ಪಂದ್ಯಗಳಿಂದ ಕೇವಲ ಒಂದು ಅರ‍್ದ ಶತಕ ಗಳಿಸಿ ಕಳಪೆ ಪ್ರದರ‍್ಶನ ನೀಡಿದ್ದರು. ಪೈನಲ್‍ನಲ್ಲಿ ಆಡುವ ಹನ್ನೊಂದರಿಂದ ಅವರನ್ನು ಕೈ ಬಿಡಬೇಕೆಂಬ ಕೂಗು ಕೇಳಲಾರಂಬಿಸಿತ್ತು. ಆದರೆ ಇದನ್ನೆಲ್ಲಾ ಕಡೆಗಣಿಸಿ, ನಾಯಕ ವಿನಯ್ ಮತ್ತೊಮ್ಮೆ ಕರುಣ್ ಅವರಿಗೆ ಅವಕಾಶ ನೀಡಿದರು. ಪೈನಲ್ ನಲ್ಲಿ 34 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಅಪಾಯದ ಅಂಚಿನಲ್ಲಿದ್ದ ರಾಜ್ಯ ತಂಡವನ್ನು ಕರುಣ್, ರಾಹುಲ್ ಒಟ್ಟಿಗೆ ಸೇರಿ ಗೆಲುವಿನ ದಡ ಸೇರಿಸದರು. ರಾಹುಲ್ ಅಬ್ಬರದ 188 ರನ್ ಬಾರಿಸಿದರೆ ಕರುಣ್ ತಂಡಕ್ಕೆ ಆಸರೆಯಾಗಿ ನಿಂತು ತಾಳ್ಮೆಯ ಆಟ ಆಡಿ 328 ರನ್ ಗಳಿಸಿದರು. ಇದು 81 ವರ‍್ಶದ ಹಳಮೆ ಇರುವ ರಣಜಿ ಟ್ರೋಪಿ ಪೈನಲ್ ನಲ್ಲಿ ಆಟಗಾರನೊಬ್ಬನ ಮೊದಲ ತ್ರಿಶತಕ. ಇಂತಹ ಅಪರೂಪದ ಸಾದನೆ ಮಾಡಿದ್ದರಿಂದ ಇಡೀ ದೇಶವೇ ಕರುಣ್ ಅವರತ್ತ ತಿರುಗಿ ನೋಡಿತು. ನಂತರ ಅದೇ ವರ‍್ಶ ಶ್ರೀಲಂಕಾ ಟೆಸ್ಟ್ ಪ್ರವಾಸಕ್ಕೆ ಆಯ್ಕೆಯಾದರೂ ಕರುಣ್ ಗೆ ಆಡುವ ಅವಕಾಶ ಸಿಗುವುದಿಲ್ಲ.

ಮತ್ತೆ ದೇಶಿ ಕ್ರಿಕೆಟ್ ಗೆ ಮರಳಿ 2016 ರ ಇರಾನಿ ಕಪ್‍ನಲ್ಲಿ ಮುಂಬೈ ಎದುರಿನ ಎರಡೂ ಇನ್ನಿಂಗ್ಸ್ ನಲ್ಲಿ ತಲಾ 94 ಹಾಗು 92 ರನ್ ಗಳಿಸಿ ಕರುಣ್ ನಾನು ಅಂತರಾಶ್ಟ್ರೀಯ ಕ್ರಿಕೆಟ್‍ಗೆ ತಯಾರಿದ್ದೇನೆ ಎಂದು ಆಯ್ಕೆಗಾರರಿಗೆ ನೆನಪು ಮಾಡಿದರು. ಕಡೆಗೆ 2016 ರ ಐಪಿಎಲ್ ನಂತರ ಹಿರಿಯ ಆಟಗಾರರೆಲ್ಲಾ, ಮುಕ್ಯವಲ್ಲದ ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿಯಲು ತೀರ‍್ಮಾನ ಮಾಡಿದ್ದರಿಂದ ಕರುಣ್ ಬಾರತ ತಂಡಕ್ಕೆ ಆಯ್ಕೆಯಾದರು. ಆಡಿದ 2 ಪಂದ್ಯಗಳಲ್ಲಿ ಕ್ರಮವಾಗಿ 7 ಮತ್ತು 39 ರನ್ ಗಳಿಸಿದರು. ಈ ಪ್ರವಾಸದಲ್ಲಿ ಎಶ್ಟೇ ರನ್ ಗಳಿಸಿದರೂ ಅನುಬವಿ ಆಟಗಾರರು ತಂಡಕ್ಕೆ ಮರಳಿದ ಮೇಲೆ ಕರುಣ್‍ರನ್ನು ತಂಡದಿಂದ ಕೈ ಬಿಡಲಾಗುವುದು ಎಂದು ಎಲ್ಲರಿಗೂ ಗೊತ್ತಿತ್ತು. ನಿರೀಕ್ಶೆಯಂತೆಯೇ ಆನಂತರದ ಸರಣಿಗೆ ಕರುಣ್ ಆಯ್ಕೆಯಾಗುವುದಿಲ್ಲ.

ಮಹತ್ವದ ಬಾರತ-ಎ ತಂಡದ ಆಸ್ಟ್ರೇಲಿಯಾ ಪ್ರವಾಸ

ಜಿಂಬಾಬ್ವೆಯಿಂದ ಮರಳಿದ ಕರುಣ್ ಬಾರತ-ಎ ತಂಡದೊಂದಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡರು. ಈ ರೀತಿಯ ಪ್ರವಾಸಗಳು ಮುಂದೆ ಬಾರತಕ್ಕೆ ಆಡುವ ಆಟಗಾರರಿಗೆ ಸಹಾಯವಾಗಲೆಂದೇ ಆಯೋಜಿಸಲಾಗುತ್ತವೆ. ಸೋಲು ಗೆಲುವುಗಳ ಹೊರತಾಗಿ ವಿದೇಶಿ ನೆಲದಲ್ಲಿ ಆಡುವ ಅನುಬವ ಪಡೆಯುವುದೇ ಈ ರೀತಿಯ ಪ್ರವಾಸಗಳ ಮೂಲ ಉದ್ದೇಶ. ಬಾಲ್ಯದಿಂದ ಕರುಣ್‍ರನ್ನು ನೋಡಿದ್ದ ಬ್ಯಾಟಿಂಗ್ ದಂತಕತೆ ರಾಹುಲ್ ದ್ರಾವಿಡ್ ಈ ಪ್ರವಾಸಕ್ಕೆ ತರಬೇತುದಾರರಾದರೆ ಕರುಣ್ ಅವರ ಗೆಳೆಯ ಮನೀಶ್ ಪಾಂಡೆ ತಂಡದ ನಾಯಕರಾಗಿದ್ದರು. ಕರುಣ್ ಅವರ ಅಳವನ್ನು ಅರಿತ್ತಿದ್ದ ಇಬ್ಬರು ನಾಯಕ ಹಾಗು ಕೋಚ್ ಆಗಿದ್ದು ಅವರಿಗೆ ವರವಾಯಿತು. ಬಹುತೇಕ ಪಂದ್ಯಗಳಲ್ಲಿ ಅವಕಾಶ ಪಡೆದ ಕರುಣ್ ಹೆಚ್ಚೇನೂ ರನ್ ಗಳಿಸದ್ದಿದ್ದರೂ ಆಸ್ಟ್ರೇಲಿಯಾದ ವೇಗದ ಪಿಚ್ ಗಳಲ್ಲಿ ಅಲ್ಲಿನ ಬೌಲರ್‍ಗಳನ್ನು ದಿಟ್ಟತನದಿಂದ ಎದುರಿಸಿದ ರೀತಿ ಆಯ್ಕೆಗಾರರ ಮನ ಸೆಳೆಯಿತು.

ಕರ‍್ನಾಟಕದ ನಾಯಕ ಕರುಣ್

ಆಸ್ಟ್ರೇಲಿಯಾದಿಂದ ಮರಳಿದ ಕರುಣ್ 2016/17 ಸಾಲಿನ ರಣಜಿ ಟ್ರೋಪಿಗೆ ಕರ‍್ನಾಟಕ ತಂಡ ಸೇರಿಕೊಂಡರು. ಅವರನ್ನು ವಿನಯ್ ಅವರಿಗೆ ಉಪನಾಯಕನಾಗಿ ಆಯ್ಕೆ ಮಾಡಲಾಯಿತು. ಈ ಸಾಲಿನ ಮೊದಲ ಪಂದ್ಯದಲ್ಲೇ ವಿನಯ್ ಪೆಟ್ಟು ಮಾಡಿಕೊಂಡು ಹೊರಗುಳಿದ್ದುದ್ದರಿಂದ ಕರುಣ್ ನಾಯಕರಾಗಿ ಬಡ್ತಿ ಪಡೆದರು. ಕರ‍್ನಾಟಕವನ್ನು ದೆಹಲಿಯ ಮೇಲೆ ಮೊದಲ ಬಾರಿಗೆ ನಾಯಕರಾಗಿ ಮುನ್ನಡೆಸಿದರು. ಈ ಪಂದ್ಯದಲ್ಲಿ ಅರ‍್ದ ಶತಕ ಬಾರಿಸಿ ತಂಡಕ್ಕೆ ಇನ್ನಿಂಗ್ಸ್ ಗೆಲುವು ಕೂಡ ದಾಕಲಿಸಿದರು. ನಂತರದ ಅಸ್ಸಾಮ್ ಮೇಲಿನ ಗೆಲುವಿನಲ್ಲಿ ಬರ‍್ಜರಿ ಶತಕವನ್ನು ಹೊಡೆದರು. ಇದರ ಪರಿಣಾಮವಾಗಿ ತವರಿನಲ್ಲಿ ಇಂಗ್ಲೆಂಡ್ ಮೇಲಿನ ಟೆಸ್ಟ್ ಸರಣಿಗೆ ಕರುಣ್ ಬಾರತ ತಂಡಕ್ಕೆ ಆಯ್ಕೆಯಾದರು.

ಟೆಸ್ಟ್ ಪಾದಾರ‍್ಪಣೆ

ಐದು ಟೆಸ್ಟ್ ಗಳ ಸರಣಿಯಾದ್ದರಿಂದ ಒಂದಲ್ಲ ಒಂದು ಪಂದ್ಯದಲ್ಲಿ ಕರುಣ್‍ಗೆ ಅವಕಾಶ ಸಿಗಬಹುದು ಎಂಬ ನಂಬಿಕೆ ಇತ್ತು. ನಿರೀಕ್ಶೆಯಂತೆಯೇ ಮೊದಲೆರಡು ಪಂದ್ಯಗಳಲ್ಲಿ ಅವರು ತಂಡದಿಂದ ಹೊರಗೆ ಉಳಿದರು. ಅಜಿಂಕ್ಯ ರಹಾನೆ ಅಬ್ಯಾಸದ ವೇಳೆ ಪೆಟ್ಟು ಮಾಡಿಕೊಂಡು ಹೊರಗುಳಿದ್ದುದ್ದರಿಂದ ಕರುಣ್ ಅವರಿಗೆ ಕಡೆಗೂ ಟೆಸ್ಟ್ ಆಡುವ ಅವಕಾಶ ಸಿಕ್ಕಿತು. ಮೊಹಾಲಿಯಲ್ಲಿ ಇಂಗ್ಲೆಂಡ್ ಮೇಲಿನ 3 ನೇ ಟೆಸ್ಟ್ ನಲ್ಲಿ ಕರುಣ್ ತಮ್ಮ ಚೊಚ್ಚಲ ಟೆಸ್ಟ್ ಆಡಿದರು. ಮದ್ಯಮ ಕ್ರಮಾಂಕದಲ್ಲಿ ಆಡಿದ ಕರುಣ್ ಪಿಚ್ ಗೆ ಬಂದವರೇ ಒಂದು ಸೊಗಸಾದ ಕವರ್ ಡ್ರೈವ್ ನಿಂದ ಚೆಂಡನ್ನು ಬೌಂಡರಿಗೆ ಅಟ್ಟಿ ತಮ್ಮ ರನ್‍ಗಳ ಕಾತೆ ತೆರೆದರು. ಆದರೆ ಮುಂದಿನ ಓವರ್ ನಲ್ಲಿ ನಾಯಕ ಕೊಹ್ಲಿಯ ತಪ್ಪು ಲೆಕ್ಕಾಚಾರದಿಂದ ರನ್ ಕದಿಯಲು ಹೋಗಿ ಕರುಣ್ ಬಲಿಯಾದರು. ಅವರ ಆಟ ನೋಡಲೆಂದು ಅಲ್ಲೇ ನೆರೆದ್ದಿದ್ದ ಅವರ ಕಟುಂಬದವರಿಗೂ ಹಾಗು ಕರ‍್ನಾಟಕದ ಎಲ್ಲಾ ಕ್ರಿಕೆಟ್ ಅಬಿಮಾನಿಗಳಿಗೂ ತೀವ್ರ ನಿರಾಸೆ ಉಂಟಾಯಿತು. ಮುಂದಿನ ಪಂದ್ಯದಲ್ಲೂ ಹೆಚ್ಚು ರನ್ ಗಳಿಸದೆ ಬೇಗನೆ ಹೊರ ನಡೆದರು. ಹಾಗಾಗಿ ಚೆನ್ನೈ ನಲ್ಲಿ ನಡೆದ ಟೆಸ್ಟ್ ಅವರ ಪಾಲಿಗೆ ಮಾಡು ಇಲ್ಲವೇ ಮಾಡಿ ಪಂದ್ಯವಾಗಿ ಪರಿಣಮಿಸಿತು. ಈ ಪಂದ್ಯದಲ್ಲಿ ರನ್ ಬರದ್ದಿದ್ದರೆ ತಂಡದಿಂದ ಅವರನ್ನು ಕೈ ಬಿಡುವುದು ಕಚಿತ ಎಂದು ಕರುಣ್‍ರಿಗೂ ಗೊತ್ತಿತ್ತು.

ಕ್ರಿಕೆಟ್ ಜಗತ್ತನ್ನೇ ತಲ್ಲಣಗೊಳಿಸಿದ ಸೊಗಸಾದ ತ್ರಿಶತಕ

karun

ಚೆನ್ನೈ ನಲ್ಲಿ ಇಂಗ್ಲೆಂಡ್ ನ 477 ರನ್ ಗಳನ್ನು ಬೆನ್ನುಹತ್ತಿ ಹೊರಟ ಬಾರತ 211 ರನ್‍ಗಳಿಗೆ 3ನೇ ವಿಕೆಟ್ ಕಳೆದುಕೊಂಡಾಗ ಕರುಣ್ ಕಣಕ್ಕಿಳಿದರು. ಆಗ ಕ್ರೀಸ್ ನ ಇನ್ನೊಂದು ಬದಿಯಲ್ಲಿ ಇದ್ದಿದ್ದು ಅವರ ಬಹುಕಾಲದ ಒಡನಾಡಿ ಕರ‍್ನಾಟಕದ ಕೆ.ಎಲ್ ರಾಹುಲ್. ಇಬ್ಬರೂ ಸೇರಿ ಇಂಗ್ಲೆಂಡ್ ಬೌಲರ್‍ಗಳ ಸವಾಲನ್ನು ದಿಟ್ಟತನದಿಂದ ಎದುರಿಸಿ ರನ್ ಕಲೆ ಹಾಕುತ್ತಾ ಹೋದರು. ನಿದಾನವಾಗಿ ರನ್‍ಗಳಿಸಲು ಶುರು ಮಾಡಿದ ಕರುಣ್ ಕ್ರಮೇಣ ಲಯ ಕಂಡುಕೊಂಡು ತಮ್ಮ ಎಂದಿನ ಸಹಜ ಆಟ ಆಡತೊಡಗಿದರು.

ಅತ್ತ ರಾಹುಲ್ ಆಕ್ರಮಣಕಾರಿಯಾಗಿ ಆಡುತ್ತಿದ್ದರೆ ಕರುಣ್ ಕೂಡ ತಾವೇನು ಕಮ್ಮಿ ಇಲ್ಲ ಎಂದು ಬ್ಯಾಟ್ ಬೀಸ ತೊಡಗಿದರು. ಕನ್ನಡಿಗರಿಬ್ಬರ ಜುಗಲ್ ಬಂದಿ ಬಾರತದ ಕ್ರಿಕೆಟ್ ಅಬಿಮಾನಿಗಳಿಗೆ ರಸದೌತಣ ನೀಡಿತು. ದ್ವಿಶತಕದ ಅಂಚಿನಲ್ಲಿ ರಾಹುಲ್ ಎಡವಿದರೂ ಕರುಣ್ ತಮ್ಮ ಆಟ ಆಡುತ್ತಾ ಶತಕ ಪೂರೈಸಿದರು. ಈ ಶತಕದಿಂದ ಸಹಜವಾಗಿಯೇ ಅವರ ಮೇಲಿದ್ದ ಒತ್ತಡ ಕೊಂಚ ಕಡಿಮೆಯಾಯಿತು. ಇದರಿಂದ ಇಂಬು ಪಡೆದು ಬರ‍್ಜರಿ ಹೊಡೆತಗಳಿಗೆ ಮುಂದಾದರು. ನೋಡ ನೋಡುತ್ತಿದಂತೆಯೇ ಇನ್ನೂರು ರನ್ ಗಳಿಸಿದರು. ಅಶ್ಟೋತ್ತಿಗಾಗಲೇ ಬಾರತ ಇಂಗ್ಲೆಂಡ್ ನ ಮೊತ್ತವನ್ನು ದಾಟಿಯಾಗಿತ್ತು. ಇನ್ನೇನು ನಾಯಕ ಇನ್ನಿಂಗ್ಸ್ ಡಿಕ್ಲೇರ್ ಮಾಡಿಲಿದ್ದಾರೆ ಎಂದು ಎಲ್ಲರೂ ಲೆಕ್ಕ ಹಾಕುತ್ತಿರುವಾಗಲೇ ಕರುಣ್ ತಮ್ಮ ಆಟದ ಟಿ20 ಆಯಾಮವನ್ನು ತೋರಿದರು. ಇದನ್ನು ಕಂಡ ಕೊಹ್ಲಿ, ಕರುಣ್ ಆಟವನ್ನು ಸವಿಯುತ್ತಾ ಡಿಕ್ಲೇರ್ ಮಾಡುವುದರ ಬದಲು ಇನ್ನಶ್ಟು ಹೊತ್ತು ಕಾದರು. ಕೇವಲ 75 ಎಸೆತಗಳಲ್ಲಿ ಕರುಣ್ 200 ರಿಂದ 300 ರನ್‍ಗಳನ್ನು ತಲುಪಿದರು. ಅವರು ಚೆಂಡನ್ನು ಬೌಂಡರಿಗೆ ಅಟ್ಟಿ ತ್ರಿಶತಕ ಪೂರೈಸುತ್ತಿದ್ದಂತೆಯೇ ಅಂಗಣದಲ್ಲಿ ನೆರೆದ್ದಿದ್ದ ಜನರ ಕೂಗು, ಚಪ್ಪಾಳೆ ಮುಗಿಲು ಮುಟ್ಟಿತು. ಸೆಹ್ವಾಗ್ ಅವರ ನಂತರ ತ್ರಿಶತಕ ಗಳಿಸಿದ ಬಾರತದ ಆಟಗಾರ ಎಂಬ ಕೀರ‍್ತಿ ಕರುಣ್ ಅವರ ಪಾಲಾಯಿತು. ಇವನ್ಯಾರು ಹುಡುಗ??? ಆಡಿದ 3ನೇ ಟೆಸ್ಟ್ ನಲ್ಲೇ ತ್ರಿಶತಕ ಬಾರಿಸಿದ್ದಾನೆಂದರೆ ಇವನು ಅಸಾದಾರಣ ಎಂದು ಇಂಗ್ಲಂಡ್ ನ ಕ್ರಿಕೆಟ್ ಪಂಡಿತರು ಕೊಂಡಾಡಿದರು.

ಈ ಒಂದು ತ್ರಿಶತಕದಿಂದ ಕರ‍್ನಾಟಕದಲ್ಲಶ್ಟೇ ಹೆಸರುವಾಸಿಯಾಗಿದ್ದ ಕರುಣ್ ಇಡೀ ಪ್ರಪಂಚಕ್ಕೆ ಪರಿಚಿತರಾದರು. ಕರುನಾಡಿನ ಈ ಹುಡುಗ ದೇಶದ ಆಸ್ತಿ ಎಂಬಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪ್ರದಾನಿಗಳು, ರಾಶ್ಟ್ರಪತಿಗಳು ಶುಬ ಕೋರಿದರು. ರಾಹುಲ್ ದ್ರಾವಿಡ್ ನಂತರ ಕರ‍್ನಾಟಕದ ಕ್ರಿಕೆಟ್ ಪರಂಪರೆಯನ್ನು ಮುಂದುವರೆಸುವವರು ಯಾರು ಎಂದು ಕಾದು ಕುಳಿತ್ತಿದ್ದ ಕನ್ನಡಿಗರಿಗೆ ರಾಹುಲ್ ಮತ್ತು ಕರುಣ್ ನಾವಿದ್ದೇವೆ ಎಂದು ಬರವಸೆ ಮೂಡಿಸಿದ್ದಾರೆ. ಈ ತ್ರಿಶತಕದಿಂದ ಕರುಣ್ ಅವರ ಮೇಲೆ ಬರವಸೆಯ ಜೊತೆಗೆ ರನ್‍ಗಳಿಸುವ ಒತ್ತಡ ಕೂಡ ಅಶ್ಟೇ ಹೆಚ್ಚಾಗಿದೆ. ಎಲ್ಲಾ ರೀತಿಯ ಒತ್ತಡವನ್ನು ಹಿಮ್ಮೆಟ್ಟಿ ಅಂತರಾಶ್ಟ್ರೀಯ ಕ್ರಿಕೆಟ್‍ನಲ್ಲಿ ಕರುನಾಡಿನ ವಿಶ್ವನಾತ್, ದ್ರಾವಿಡ್ ಅವರು ಸಾದನೆಗೈದ ಹಾಗೆ ನಮ್ಮ ಹೆಮ್ಮಯ ಕನ್ನಡಿಗ ಸಾದಿಸಲಿ. ಮುಂಬರುವ ಎಲ್ಲಾ ಸವಾಲುಗಳನ್ನು ಎದುರಿಸಿ ರನ್ ಗಳಿಸಲಿ ಎಂದು ನಾವೆಲ್ಲರೂ ಹರಸೋಣ.

(ಚಿತ್ರಸೆಲೆ: twitter, thefastmail, metrovaartha)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: