ಬರಲಿವೆ ಹಾರುವ ಕಾರುಗಳು

ಜಯತೀರ‍್ತ ನಾಡಗವ್ಡ.

urban-mobility-airbus-taxi

ಹಾರುವ ಬೈಕಿನ ಬಗ್ಗೆ ಈಗಾಗಲೇ ಕೇಳಿದ್ದಿರಿ. ಹಾರುವ ಬೈಕಿನಂತೆ ಈಗ ಹಾರುವ ಕಾರುಗಳ ಬಗ್ಗೆಯೂ ಹಲವೆಡೆ ಅರಕೆಗಳು ಚುರುಕುಗೊಳ್ಳುತ್ತಿವೆ. ಬಾನೋಡ ತಯಾರಿಕೆಯ ಪ್ರಮುಕ ಕಂಪನಿಗಳಲ್ಲೊಂದಾದ ಏರ್‌ಬಸ್ ಕೂಟದಿಂದ(Air Bus) ಹಾರುವ ಕಾರೊಂದನ್ನು ಅಣಿಗೊಳಿಸುವ ಸುದ್ದಿ ಬಂದಿದೆ. ಏರ್‌ಬಸ್‌ನ ಮೇಲಾಳು ಟಾಮ್ ಎಂಡೆರ‍್ಸ್ (Tom Enders) ಹೇಳಿರುವಂತೆ 2017ರ ಕೊನೆಯಲ್ಲಿ ಮೊದಲ ಮಾದರಿಯೊಂದನ್ನು ತಯಾರಿಸಿ, ಹಾರಾಟ ನಡೆಸಿ ಒರೆಹಚ್ಚುವ ಹಮ್ಮುಗೆ(Plan) ಹಾಕಿಕೊಂಡಿದ್ದಾರೆ. ಇದು ಬರೀ ಹಾರುವ ಕಾರಾಗಿರದೆ, ಓಡಿಸುಗನಿಲ್ಲದೇ ತಾನಾಗೇ ಹಾರಲಿದೆ.

ಕಳೆದ ವರುಶ, ಏರ್‌ಬಸ್‌ನಲ್ಲಿ “ಅರ‍್ಬನ್ ಏರ್ ಮೊಬಿಲಿಟಿ” (Urban Air Mobility) ಎಂಬ ಹೊಸದಾದ ವಿಬಾಗವನ್ನು ಶುರು ಮಾಡಲಾಗಿತ್ತು. ಒಂದಿಬ್ಬರನ್ನು ಹೊತ್ತು ಸಾಗಿಸಬಲ್ಲ ಹಾರಾಟದ ಬಂಡಿ ಇಲ್ಲವೇ ನಾಲ್ಕಾರು ಪಯಣಿಗರನ್ನು ಹೊತ್ತು ಹಾರಬಲ್ಲ ಹೆಲಿಕಾಪ್ಟರ್ ತರಹದ ಹೊಸ ಹೊಳಹುಗಳ(Concepts) ಬಗ್ಗೆ ಏರ‍್‌ಬಸ್‌ನ ಈ ವಿಶೇಶ ವಿಬಾಗ ಕೆಲಸ ಮಾಡುತ್ತಿದೆ. ಇದರ ಇನ್ನೊಂದು ಪ್ರಮುಕ ಗುರಿಯೆಂದರೆ ಊಬರ್(Uber) ಕೂಟದ ಬಳಕದ(Application) ಮೂಲಕ ಆನ್‌ಲೈನ್ ಟ್ಯಾಕ್ಸಿ ಕಾದಿರಿಸುವಂತೆ, ಈ ಹಾರುವ ಕಾರನ್ನು ಬಳಕೆದಾರರು ಆನ್‌ಲೈನ್‌ನಲ್ಲಿ ಕಾದಿರಿಸುವಂತಿರಬೇಕು ಎನ್ನುವುದು.

ಎಶ್ಟೋ ವರುಶಗಳ ಹಿಂದೆ ಬಂದ ನಗರ ಸಾರಿಗೆ ಏರ‍್ಪಾಟುಗಳು, ಸಾಕಶ್ಟು ಬೆಳವಣಿಗೆ ಕಂಡಿವೆ. ನೆಲದಡಿ ಸಾಗಬಲ್ಲ ನಗರ ಸಾರಿಗೆಯ ಏರ‍್ಪಾಟುಗಳೂ ಇವೆ. ಇದೀಗ ಹಲವಾರು ಹೊಸ ಚಳಕಗಳು ಇದ್ದು, ಅವುಗಳನ್ನು ಬಳಸಿ, ಓಡಾಟಕ್ಕೆ ಹಾರುವ ಬಂಡಿಗಳನ್ನು ತಯಾರಿಸುವುದರತ್ತ ಗಮನಹರಿಸಲಿದ್ದೇವೆ ಎಂಬುದು ಎಂಡೆರ‍್ಸ್ ರವರ ಮಾತು. ಇತ್ತೀಚೆಗೆ ಜರ‍್ಮನಿಯ ಮ್ಯೂನಿಕ್(Munich) ಊರಿನಲ್ಲಿ ನಡೆದ ಚಳಕಗಳ ಸಮ್ಮೇಳನದಲ್ಲಿ ಈ ಮಾತನ್ನು ಹೇಳುತ್ತ, ಒಬ್ಬರೇ ಸಾಗಲು ಅನುವಾಗುವ ತನ್ನಿಂದ ತಾನೇ ಕೆಲಸ ಮಾಡಬಲ್ಲ ಹಾರುವ ಬಂಡಿಯನ್ನು ಈ 2017ರ ಕೊನೆಯಲ್ಲಿ ಒರೆಹಚ್ಚುವುದಾಗಿ ವಿವರಿಸಿದ್ದಾರೆ.

ಹಾರುವ ಕಾರಿನ ಹಮ್ಮುಗೆ ಬಲು ಮುಕ್ಯವಾಗಿದ್ದು, ಇದೀಗ ಅದು ಬೆಳವಣಿಗೆಯ ಹಂತದಲ್ಲಿದೆ. ದೊಡ್ಡ ಊರುಗಳಲ್ಲಿ ಹೆಚ್ಚುತ್ತಿರುವ ಒಯ್ಯಾಟದ(Traffic) ದಟ್ಟಣೆ ಮತ್ತು ಕೆಡುಗಾಳಿಯ ಸಮಸ್ಯೆಗಳಿಗೆ ಹಾರುವ ಕಾರುಗಳು ಕೊನೆ ಹಾಡಲಿವೆಯಂತೆ. ಅಶ್ಟೇ ಅಲ್ಲದೇ ಬಾನಲ್ಲಿ ಹಾರುವ ಕಾರುಗಳಿಗೆ ರಸ್ತೆ, ಸೇತುವೆಗಳು ಮುಂತಾದ ಒದಗಿಕೆಗಳು(Infrastructure) ಬೇಕಿಲ್ಲ, ಈ ಒದಗಿಕೆಗಳಿಗೆ ಹೆಚ್ಚು ಹಣವನ್ನೂ ತೊಡಗಿಸಬೇಕಿಲ್ಲ ಎನ್ನುವುದು ಎಂಡೆರ‍್ಸ್‌ರವರ ವಾದ. ಜಗತ್ತಿನಲ್ಲಿ ಅತಿ ಹೆಚ್ಚು ವ್ಯಾಪಾರಿ ಹೆಲಿಕಾಪ್ಟರ್(Commercial Helicopter) ತಯಾರಿಸುವ ಏರ್‌ಬಸ್, ತನ್ನಿಂದ ತಾನೇ ಹಾರುವ ಮತ್ತು ಮಾಡುಗೆಯ ಜಾಣ್ಮೆಗಳಂತ(Artificial Intelligence) ಚಳಕಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಿ, ಹಾರುವ ಕಾರುಗಳ ಜಗತ್ತಿಗೆ ಕಾಲಿಡಲಿದೆ.

(ಮಾಹಿತಿ ಮತ್ತು ತಿಟ್ಟ ಸೆಲೆ: fortune.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.