ಬೆಳಗಿನ ತಿಂಡಿಗೆ ಮಾಡಿನೋಡಿ ‘ಬಿಸಿ ಬೇಳೆ ಬಾತ್’

ಸಿಂದು ನಾಗೇಶ್.

ಬಿಸಿ ಬೇಳೆ ಬಾತಿನ ಪುಡಿಯನ್ನು ಮನೆಯಲ್ಲೇ ಮಾಡಿಕೊಳ್ಳಬಹುದು. ಅದನ್ನು ಮಾಡಿಕೊಳ್ಳಲು ಬೇಕಾಗುವ ಸಾಮಾಗ್ರಿಗಳು:

1. ಲವಂಗ – 7-8
2. ಜಾಪತ್ರೆ – 1
3. ಚಕ್ಕೆ – 2-3 ಇಂಚು
4. ಏಲಕ್ಕಿ – 3
5. ಒಣಕೊಬ್ಬರಿ – 5 ಚಮಚ
6. ಜಾಯಿಕಾಯಿ – ಸ್ವಲ್ಪ
7. ಕಡ್ಲೆಬೇಳೆ – 3 ಚಮಚ
8. ಉದ್ದು – 2 ಚಮಚ
9. ಅರಿಶಿಣ, ಕರಿಬೇವು ಹಾಗೂ ಎಣ್ಣೆ
10. ಬ್ಯಾಡಗಿ ಮೆಣಸಿನಕಾಯಿ – 150 ಗ್ರಾಮ್
11. ದನಿಯ – 5 ಚಮಚ

ಪುಡಿ ಮಾಡಿಕೊಳ್ಳುವ ಬಗೆ:

ಮೊದಲು ಕಾದ ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಲವಂಗ, ಜಾಪತ್ರೆ, ಚಕ್ಕೆ, ಏಲಕ್ಕಿ, ಜಾಯಿಕಾಯಿ, ಕಡ್ಲೆಕಾಯಿ, ಉದ್ದು, ಕರಿಬೇವು, ಬ್ಯಾಡಗಿ ಮೆಣಸು, ದನಿಯಬೀಜ, ಒಣಕೊಬ್ಬರಿ, ಅರಿಶಿಣವನ್ನು ಹಾಕಿ ಹುರಿಯಿರಿ. ಹುರಿದ ಮಿಶ್ರಣ ಕೊಂಚ ತಣ್ಣಗಾಗುವರೆಗೆ ಕಾದು ಪುಡಿ ಮಾಡಿಕೊಳ್ಳಿ.

ಬಿಸಿ ಬೇಳೆ ಬಾತಿಗೆ ಬೇಕಾಗುವ ಸಾಮಾಗ್ರಿಗಳು:

1. ಅಕ್ಕಿ – 1 ಲೋಟ
2. ತೊಗರಿಬೇಳೆ – 1 ಲೋಟ
3. ತುಪ್ಪ – 4 ಚಮಚ
4. ಗೋಡಂಬಿ – 10
5. ಈರುಳ್ಳಿ – 2
6. ಅರಿಶಿಣ, ಕರಿಬೇವು, ಎಣ್ಣೆ ಹಾಗೂ ಸಾಸಿವೆ – ಸ್ವಲ್ಪ
7. ಕ್ಯಾರೆಟ್ – 1
8. ಬೀನ್ಸ್ – 1/4 ಕೆಜಿ
9. ನವಿಲುಕೋಸು – 1
10. ಹಸಿಬಟಾಣಿ – 1/2 ಕಪ್
11. ಹೂ ಕೋಸು – 1/4 ಕೆಜಿ
12. ಟೊಮೆಟೋ – 4
13. ಹುಣಸೆರಸ – ಸ್ವಲ್ಪ
14. ಬೆಲ್ಲ – ಸ್ವಲ್ಪ

ಮೊದಲು ಕುಕ್ಕರ‍್‌ನಲ್ಲಿ ಬಿಸಿನೀರನ್ನು ಕಾಯಿಸಿಕೊಂಡು ಅದಕ್ಕೆ ತೊಗರಿಬೇಳೆ, ಅರಿಶಿಣ ಹಾಗೂ ಕೊಂಚ ಎಣ್ಣೆಯನ್ನು ಹಾಕಿ 2 ಕೂಗು ಕೂಗಿಸಿ. ಇನ್ನೊಂದು ಕಡೆ ಅಕ್ಕಿಯನ್ನು ನೀರಿನಲ್ಲಿ ನೆನಸಿಟ್ಟುಕೊಳ್ಳಿ. ಬಳಿಕ ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಗೋಡಂಬಿ, ಈರುಳ್ಳಿ, ಅರಿಶಿನ, ಕ್ಯಾರೆಟ್, ಬೀನ್ಸ್, ನವಿಲುಕೋಸು, ಹಸಿಬಟಾಣಿ, ಹೂಕೋಸು, ಟೊಮೆಟೋ, ಹುಣಸೆರಸ, ಬೆಲ್ಲ, ತುಪ್ಪ ಹಾಗೂ ಮೊದಲು ತಯಾರಿಸಿದ ಬಿಸಿಬೇಳೆ ಬಾತಿನ ಪುಡಿಯನ್ನು 10 ಚಮಚ ಹಾಕಿ ತಿರುಗಿಸಿ, ನಂತರ ಬೇಯಿಸಿದ ಬೇಳೆ ಹಾಕಿ. ಅದಾದ ಮೇಲೆ ನೆನಸಿಟ್ಟ ಅಕ್ಕಿಯನ್ನು ಹಾಕಿ. ಕೊನೆಗೆ ಬಿಸಿನೀರನ್ನು ಹಾಕಿ (1 ಲೋಟ ಅಕ್ಕಿಗೆ 5-6 ಲೋಟ ಬಿಸಿನೀರು ಹಾಕಬೇಕು) ಕುಕ್ಕರಿನಲ್ಲಿ 1 ಕೂಗು ಕೂಗಿಸಿದರೆ ಬಿಸಿ ಬೇಳೆ ಬಾತ್ ಸಿದ್ದ.

(ಚಿತ್ರ ಸೆಲೆ: baysidejournal.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks