‘ಬೂತಾನ್’ – ಕೆಲ ಕುತೂಹಲಕಾರಿ ಸಂಗತಿಗಳು

ವಿಜಯಮಹಾಂತೇಶ ಮುಜಗೊಂಡ.

bhutan

ಇಂಡಿಯಾದ ಮಗ್ಗುಲಲ್ಲಿರುವ ಪುಟ್ಟ ನಾಡು ಬೂತಾನ್. ಸುಮಾರು 75 ಸಾವಿರ ಮಂದಿಯೆಣಿಕೆ ಹೊಂದಿರುವ ಈ ನಾಡಿಗೆ ಪ್ರಮುಕ ಆದಾಯವು, ಬೇಸಾಯ ಮತ್ತು ಕೈಗಾರಿಕೆಗಳಿಂದ ಬರುತ್ತದೆ.

  • ಬೂತಾನ್ ಪದದ ಹುರುಳು ಗುಡುಗುವ ಡ್ರ್ಯಾಗನ್ ಎಂದು. ಹಿಮಾಲಯದಿಂದ ಬೀಸುವ ಹೆದರಿಕೆ ಹುಟ್ಟಿಸುವ ಬಿರುಗಾಳಿಗಳಿಂದಾಗಿ ಈ ಅಡ್ಡಹೆಸರು ಪಡೆದುಕೊಂಡಿದೆ
  • ಟಾಕಿನ್ ಎನ್ನುವ ಕುರಿ-ಚಿಗರೆಯನ್ನು ಹೋಲುವ ಪ್ರಾಣಿ ಬೂತಾನಿನ ರಾಶ್ಟ್ರೀಯ ಪ್ರಾಣಿ. ಅಂಬು(darts) ಮತ್ತು ಬಿಲ್ಲಾಟಗಳು ಬೂತಾನಿನ ರಾಶ್ಟ್ರೀಯ ಆಟಗಳು
  • ಹೊರನಾಡುಗಳಿಂದ ಬೂತಾನ್‍ಗೆ ಬರುವ ಸುತ್ತಾಡುಗರಿಗೆ(tourists) 1974ರ ಬಳಿಕವಶ್ಟೇ ಅನುಮತಿ ನೀಡಲಾಯಿತು. 1974ಕ್ಕಿಂತ ಮೊದಲು ಬೂತಾನ್‍ಗೆ ಹೊರನಾಡಿನ ಸುತ್ತಾಡುಗರು ಬರುವಂತಿರಲಿಲ್ಲ.
  • ಜಗತ್ತಿನಲ್ಲಿ ಹೆಚ್ಚು ಸುತ್ತಾಡುಗರನ್ನು ಸೆಳೆಯುವ ನಾಡುಗಳಲ್ಲಿ ಒಂದಾದ ಬೂತಾನ್‍ಗೆ ಇಂಡಿಯನ್ನರು ಪಾಸ್‍ಪೋರ‍್ಟ್ ಮತ್ತು ವೀಸಾ ಇಲ್ಲದೇ ಹೋಗಬಹುದು!
  • ಸುತ್ತಣವ(environment) ಕಾಪಾಡುವುದನ್ನು ಕಡ್ಡಾಯ ಮಾಡುವ ಕಾನೂನಿನ ಕಟ್ಟಲೆಗಳನ್ನು ಹೊಂದಿದ ಮೊದಲ ನಾಡು ಬೂತಾನ್. ಬೂತಾನ್‍ನ ಕಾನೂನಿನಂತೆ ಅಲ್ಲಿನ ಕಮ್ಮಿಯೆಂದರೂ ಶೇಕಡ 60ರಶ್ಟು ನೆಲ, ಕಾಡನ್ನು ಹೊಂದಿರಬೇಕು.
  • ಏಶಿಯಾದಲ್ಲಿಯೇ ಎರಡು ನಗರಗಳಲ್ಲಿ ಟ್ರಾಪಿಕ್ ದೀಪಗಳಿಲ್ಲ. ಅದರಲ್ಲಿ ಬೂತಾನ್‍ನ ರಾಜದಾನಿ ಟಿಂಪು ಕೂಡ ಒಂದು. ಇದನ್ನು ಬಿಟ್ಟರೆ ಇನ್ನೊಂದು ಬಡಗಣ(North) ಕೊರಿಯಾದ ಪ್ಯೂಂಗ್ಯಂಗ್ ಸಿಟಿ.
  • ತಂಬಾಕಿನ ಮಾರಾಟಕ್ಕೆ ತಡೆಯೊಡ್ಡಿರುವ ಜಗತ್ತಿನ ಒಂದೇ ಒಂದು ನಾಡು ಬೂತಾನ್.
  • 1999ರಿಂದ ಬೂತಾನ್‍ನಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆಯ ಮೇಲೆ ತಡೆ ಇದೆ. ಮಂಜಿನ ಮೇಲೆ ಜಾರುವ ಜಾರುಹಲಗೆಯ(skateboarding) ಆಟಕ್ಕೂ ಇಲ್ಲಿ ತಡೆ ಇದೆ.
  • 24,480 ಅಡಿ ಎತ್ತರ ಇರುವ ಗಂಕರ್ ಪ್ಯೂನ್ಸಮ್(Gangkhar Puensum) ಬೂತಾನ್‍ನ ಅತೀ ಎತ್ತರದ ಬೆಟ್ಟ. ಮಂದಿ ಏರದ ಜಗತ್ತಿನ ಅತಿ ಎತ್ತರದ ಬೆಟ್ಟ ಇದು.
  • ಬೂತಾನ್‍ನಲ್ಲಿ ಯಾರಾದರು ತಿನ್ನಲು ತಿನಿಸನ್ನು ಅತವಾ ಆಹಾರವನ್ನು ನೀಡಿದರೆ, ಅದನ್ನು ಪಡೆಯುವಂತಿಲ್ಲ. ಬಾಯಿಗೆ ಕೈಯನ್ನು ಅಡ್ದಲಾಗಿಟ್ಟುಕೊಂಡು “ಮೆಶು, ಮೆಶು” ಎನ್ನಬೇಕು ಎಂಬುದು ವಾಡಿಕೆ. ತಿನ್ನಲು ಒತ್ತಾಯಪಡಿಸಿದರೆ ಮಾತ್ರ ತಿನ್ನಬಹುದು.
  • ಅಲ್ಲಿನ ಸಂಸ್ಕ್ರುತಿಯಂತೆ ಪೂಜ್ಯ ಎಂದು ತಿಳಿದಿರುವ, ಅಳಿವಿನಂಚಿನಲ್ಲಿರುವ ಕಪ್ಪು ಕುತ್ತಿಗೆಯ ಕೊಕ್ಕರೆಯನ್ನು ಕೊಂದು ಸಿಕ್ಕಿಹಾಕಿಕೊಂಡವರು ಜೀವನ ಪೂರ್‍ತಿ ಜೈಲಿನಲ್ಲಿ ಕೊಳೆಯಬೇಕಾಗಬಹುದು.
  • ಬೂತಾನ್‍ನಲ್ಲಿ ಟಿ.ವಿ. ಮತ್ತು ಇಂಟರ್‌ನೆಟ್ ಬಳಕೆ ಶುರುವಾಗಿದ್ದು 2008ರ ಬಳಿಕ! ಇದಕ್ಕಿಂತ ಮೊದಲು ಟಿ.ವಿ. ಮತ್ತು ಇಂಟರ್‌ನೆಟ್ ಬಳಕೆಯ ಮೇಲೆ ತಡೆ ಇತ್ತು.
  • ಜಗತ್ತಿನಲ್ಲಿ ತಾನು ಬಳಸುವುದಕ್ಕಿಂತ ಹೆಚ್ಚು ಉಸಿರ‍್ಗಾಳಿಯನ್ನು(oxygen) ಹುಟ್ಟುಹಾಕುವ ಒಂದೇ ಒಂದು ನಾಡು ಬೂತಾನ್. ಇದರಿಂದಾಗಿಯೇ ಬೂತಾನ್‍ ಕಾರ‍್ಬನ್ ನೆಗೆಟಿವ್ ಆಗಿದೆ. ಮರುತೊಡಗಿಸಬಹುದಾದ(renewable) ಶಕ್ತಿಯನ್ನು ಹೊರಮಾರುವ(export) ಒಂದೇ ನಾಡು ಬೂತಾನ್. ಬೂತಾನ್ ನೀರಿನ ಹರಿವಿನಿಂದ ಉಂಟುಮಾಡಲಾದ ಮಿನ್ನಾರ‍್ಪನ್ನು(electricity) ಬೇರೆ ನಾಡುಗಳಿಗೆ ಹೊರಮಾರುತ್ತದೆ
  • ಬೂತಾನ್‍ನಲ್ಲಿ ನಾಡಿನ ಒಳಿತನ್ನು ಅಳೆಯಲು, ಒಟ್ಟುಮಾಡುಗೆಯ ಬೆಲೆಯ(GDP) ಬದಲಾಗಿ ಒಟ್ಟುನೆಮ್ಮದಿಯ ಬೆಲೆಯನ್ನು(GNH – Gross National Happiness) ಬಳಸುತ್ತಾರೆ. ತಾಳಬಲ್ಲ ಬೆಳವಣಿಗೆ(Sustainable Development), ಸುತ್ತಣದ ಕಾವಣ(protection), ಸಂಸ್ಕ್ರುತಿಯ ಕಾಪಾಡುವಿಕೆ ಮತ್ತು ಒಳ್ಳೆಯ ಆಳ್ವಿಕೆಗಳ ಮೇಲೆ ಒಟ್ಟುನೆಮ್ಮದಿಯ ಬೆಲೆಯನ್ನು ಲೆಕ್ಕ ಹಾಕುತ್ತಾರೆ.

(ಮಾಹಿತಿ ಮತ್ತು ಚಿತ್ರ ಸೆಲೆ: insiderjourneys.com.au, youthconnect.in, jaspertrips.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: