ಒಳಗೊಳಗೇ ಕಾಡುವ ‘ರಾಮಾ ರಾಮಾ ರೇ’!! ನೂರರ ಸಂಬ್ರಮ

ವೆಂಕಟೇಶ್ ಯಗಟಿ.

rama-rame-re-kannada

ಕನ್ನಡ ಚಿತ್ರರಂಗ ಸುದಾರಿಸಿದೆ ಅಂತ ಹೇಳುವುರ ಜೊತೆಗೆ ಕನ್ನಡಿಗರ ಚಿತ್ರ ರುಚಿಯೂ ಬದಲಾಗಿದೆ ಎಂದರಡ್ಡಿಯಿಲ್ಲ! ಹೊಡಿ-ಬಡಿ, ಮರಸುತ್ತುವ ಚಿತ್ರಗಳಿಗೆ ಜೈಕಾರ ಹಾಕುತ್ತಿದ್ದ ಪ್ರೇಕ್ಶಕ ಇಂದು ಸದಬಿರುಚಿಯ ಚಿತ್ರಕ್ಕೂ ಮಣೆ ಹಾಕುತ್ತಿರುವುದು ಸಕರಾತ್ಮಕ ಸಂಕೇತವೇ. ಒಳ್ಳೆಯ ಕನ್ನಡ ಚಿತ್ರಗಳ ಪರ‍್ವಕಾಲದಲ್ಲಿ ಬಂದಂತಹ ಮತ್ತೊಂದು ಚಿತ್ರ ‘ರಾಮಾ ರಾಮಾ ರೇ’.

ಅತಿ ಅಬ್ಬರದ ಪ್ರಚಾರವಿಲ್ಲದೇ ಬಿಡುಗಡೆಯಾದ ‘ರಾಮಾ ರಾಮಾ ರೇ’, ಒಬ್ಬ ಕೈದಿಯ ಜೀವನದ ಕತಾ ಹಂದರವಿಟ್ಟುಕೊಂಡು ಹೆಣೆದ ಚಿತ್ರ. ಬದುಕೋ ಆಸೆಹೊತ್ತು ಜೈಲಿನಿಂದ ಓಡಿಬರುವ ಕೈದಿಯು ದಾರಿಯುದ್ದಕ್ಕೂ ಹಲವು ರೀತಿಯ ಜನರ ಬೇಟಿಯಾಗ್ತಾನೆ. ಈತ ಎಲ್ಲಿ ಸಾಗಿದರೂ ಇವನ ಪ್ರಮುಕ ಉದ್ದೇಶ ಪೋಲಿಸರಿಂದ ಪರಾರಿಯಾಗುವುದು. ಹೀಗೆ ಸಾಗುವ ಪಯಣದಲ್ಲಿ ಸಿಗೋ ಪ್ರೇಮಿಗಳು, ಗರ‍್ಬಿಣಿ ಹೆಂಗಸು, ಸಂಸಾರಗಳಲ್ಲಿ ಕಾಣಸಿಗೋ ಮಾನವೀಯ ಮೌಲ್ಯಗಳಿಂದ ಸಕಾರಾತ್ಮಕ ಜೀವನದ ಇನ್ನೊಂದು ಮುಕವನ್ನು ತೋರಿಸುವ ಪ್ರಯತ್ನ ಇಲ್ಲಿದೆ.

ಈ ಹಿಂದೆ ‘ಜಯನಗರ 4ಬ್ಲಾಕ್’ ನಿರ‍್ದೇಶಿಸಿದ್ದ ಸತ್ಯಪ್ರಕಾಶ್ ‘ರಾಮಾ ರಾಮಾ ರೇ’ಯ ಸಾರತಿ. ಅಪರಾದಿಯಾಗಿ ತಪ್ಪಿಸಿಕೊಂಡು ತಲೆಮರಿಸಿಕೊಳ್ಳುವ ನಾಯಕ ತನ್ನೊಂದಿಗೆ ಪಯಣ ಬೆಳೆಸುವ ವ್ಯಕ್ತಿ ಮಾಜಿ ಜೈಲರ್ ಎಂದು ತಿಳಿಯುವುದು ಚಿತ್ರದ ಕೊನೆಯಲ್ಲಿ. ತಲೆಮರಿಸಿಕೊಂಡ ಅಪರಾದಿಯನ್ನು ಹಿಡಿದುಕೊಟ್ಟರೆ ಸರ‍್ಕಾರ ಕೊಡುವ ಇನಾಮಿನ ಆಸೆಯಿಂದ ಜನ ಬದಲಾಗುವ ಪರಿ ತೆರೆಮೇಲೆ ನೋಡಿದರೆ ಚೆಂದ. ಕೊನೆಯದಾಗಿ ಶರಣಾಗತಿ ಒಂದೇ ತಪ್ಪಿಗೆ ಮಾರ‍್ಗ ಎಂದು ಸಾರುವ ಸಾರಾಂಶಕ್ಕೆ ಬಗವದ್ಗೀತೆಯ ಸ್ಪರ‍್ಶ ನೀಡಿರುವ ನಿರ‍್ದೇಶಕನ ಪ್ರಯತ್ನ ಶ್ಲಾಗನೀಯ. ವಾಸುಕಿ ವೈಬವ್ ಸಂಗೀತಕ್ಕೆ ಒಳ್ಳೆಯ ಸಾಹಿತ್ಯ ಪೂರಕವಾಗಿದೆ. ಇಂತಹ ಸರಳ ಸುಂದರತೆಯನ್ನು ಬಿಗಿದಪ್ಪಿದ ಕನ್ನಡ ಪ್ರೇಕ್ಶಕ, ಕಳೆದ ತಿಂಗಳು ಈ ಸದಬಿರುಚಿ ಚಿತ್ರವನ್ನು ನೂರರ ಗಡಿ ತಲುಪುಹಾಗೆ ಮಾಡಿದ್ದಾನೆಂಬ ವಿಶಯ ಹಲವು ಹೊಸಪ್ರತಿಬೆಗಳಿಗೆ ಸ್ಪೂರ‍್ತಿ. ಬೆಂಗಳೂರು ಅಂತರಾಶ್ಟ್ರೀಯ ಚಿತ್ರೋತ್ಸವದಲ್ಲಿ ‘ಮೊದಲ ಅತ್ಯುತ್ತಮ ಚಿತ್ರ’ ಬಿರುದು ಬಾಚಿಕೊಂಡಿದ್ದು ಈ ಚಿತ್ರದ ಇನ್ನೊಂದು ಗರಿಮೆ.

(ಚಿತ್ರ ಸೆಲೆ: ‘ರಾಮಾ ರಾಮಾ ರೇ’ ಪೇಸ್‍ಬುಕ್ ಪುಟ)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.