ನಾಗಾವಿ – ಹಿನ್ನಡವಳಿಯ ಹಿರಿಮೆ ಸಾರುವ ಊರು

– ನಾಗರಾಜ್ ಬದ್ರಾ.
naagavi1

ನಾಗಾವಿ ಊರು ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕು ಕೇಂದ್ರದಿಂದ ತೆಂಕಣದ ಕಡೆಗೆ ಸುಮಾರು 3 ಕಿಲೋಮೀಟರ್ ದೂರದಲ್ಲಿದೆ. 10 ನೆ ಶತಮಾನದಲ್ಲಿ ಒಂದು ಸುಂದರ ಊರಾಗಿದ್ದ ನಾಗಾವಿಯಲ್ಲಿ ಒಂದು ಹಳೇಕಾಲದ ಕಲಿಕೆವೀಡು ಹಾಗೂ ಒಂದು ದೊಡ್ಡ ಹೊತ್ತಗೆಮನೆಯಿತ್ತು ಎಂದು ಇಲ್ಲಿ ಸಿಕ್ಕಿರುವ ಕಲ್ಬರಹಗಳು ತಿಳಿಸುತ್ತವೆ.

ಹಳೇ ಕಾಲದ ಎರಡನೆಯ ದೊಡ್ಡ ವಿಶ್ವವಿದ್ಯಾಲಯ ಇದ್ದದ್ದು ಕಲಬುರಗಿಯ ನಾಗಾವಿಯಲ್ಲಿ

ಹಳೇಕಾಲದಲ್ಲಿ ದೇವಾಲಯಗಳು ಹಾಗೂ ಮಟಗಳು ಕಲಿಕೆಯ ಕೇಂದ್ರಗಳಾಗಿ ಕಾರ‍್ಯನಿರ‍್ವಹಿಸುತ್ತಿದ್ದವು. ನಾಗಾವಿಯ ಕಲಿಕೆವೀಡು 10 ರಿಂದ 13 ನೆ ಶತಮಾನದವರೆಗೂ ಅಸ್ತಿತ್ವದಲ್ಲಿತ್ತು. ಇಲ್ಲಿ ಸಿಕ್ಕಿರುವ ಕಲ್ಬರಹದ ಪ್ರಕಾರ ಇದನ್ನು 10 ನೆ ಶತಮಾನದಲ್ಲಿ ಬಾದಾಮಿ ಚಾಲುಕ್ಯರ ವಂಶದ ರಾಜ ಮೊದಲನೆಯ ಸೋಮೇಶ್ವರನ ಮಂತ್ರಿ ಮಾದವನು ಸ್ತಾಪಿಸಿದ್ದನು ಎಂದು ತಿಳಿದು ಬರುತ್ತದೆ. ನಾಗಾವಿ ಕಲಿಕೆವೀಡಿನಲ್ಲಿ ಸುಮಾರು 400 ಕಲಿಗರಿಗೆ ವೇದ, ಶಾಸ್ತ್ರ ಮತ್ತು ಉಪನಿಶತ್ ಮುಂತಾದವುಗಳ ಬಗ್ಗೆ ಕಲಿಕೆ ನೀಡಲಾಗುತ್ತಿತ್ತು. ಅದರ ಜೊತೆಯಲ್ಲಿಯೇ ಎಲ್ಲಾ ಕಲಿಗರಿಗೆ ಹಾಗೂ ಕಲಿಸುಗರಿಗೆ ಇಲ್ಲಿ ಉಳಿದುಕೊಳ್ಳುವ ಹಾಗೂ ಊಟದ ಸೌಲಬ್ಯವಿತ್ತು.

ಈ ಕಲಿಕೆವೀಡಿನಲ್ಲಿ ಒಂದು ದೊಡ್ಡ ಹೊತ್ತಗೆಮನೆ ಹಾಗೂ ಅದಕ್ಕೆ ಗಂತ್ರಪಾಲಕರು ಕೂಡ ಇದ್ದರು. ಆ ಕಾಲದಲ್ಲಿ ಗ್ರಂತಪಾಲಕರನ್ನು ಸರಸ್ವತಿ ಬಂಡಾರಿಕರು (Saraswati Bhandarikas ) ಎಂದು ಕರೆಯುತ್ತಿದ್ದರು. 11 ನೆ ಶತಮಾನದಲ್ಲಿ ಇದನ್ನು ಗಟಿಕಾಸ್ತಾನ (Ghatikasthana ) ಹಾಗೂ ನಾಗಾವಿ ಮಹಾ ಅಗ್ರಹಾರ ಎಂದು ಕೂಡ ಕರೆಯುತ್ತಿದ್ದರು. 5 ನೇ ಶತಮಾನದಿಂದ 12 ನೇ ಶತಮಾನದವರಿಗೂ ಅಸ್ತಿತ್ವದಲ್ಲಿದ್ದ ನಳಂದ ವಿಶ್ವವಿದ್ಯಾಲಯವು ಆ ಕಾಲದ ಅತಿ ದೊಡ್ಡ ವಿಶ್ವವಿದ್ಯಾಲಯವಾಗಿತ್ತು. ಇನ್ನು ನಾಗಾವಿ ವಿಶ್ವವಿದ್ಯಾಲಯವು ಆ ಕಾಲದ ಎರಡನೆಯ ದೊಡ್ಡ ವಿಶ್ವವಿದ್ಯಾಲಯವಾಗಿತ್ತು ಎಂದು ಹಿನ್ನಡವಳಿಗಾರರು ಹೇಳುತ್ತಾರೆ.

ಇಶ್ಟು ದೊಡ್ಡ ಕಲಿಕೆವೀಡಿರುವ ನಾಗಾವಿಯಲ್ಲಿ ಒಂದು ಸುಂದರ ಕೋಟೆ, ನಂದೇಶ್ವರ ದೇವಾಲಯ, 60 ಕಂಬಗಳ ದೇವಾಲಯ, ಆಂಜನೇಯ ಸ್ವಾಮಿಯ ದೇವಾಲಯ ಹೀಗೆ ಹಲವಾರು ಹಳೇ ಕಾಲದ ದೇವಾಲಯಗಳು, ಮಸೀದಿಗಳು ಹಾಗೂ ನೀರಿನ ಬಾವಿ ಮುಂತಾದವುಗಳಿವೆ.

ನಾಗಾವಿ ಕೋಟೆಯ ಹಿನ್ನಡವಳಿ

nagavi2

ಈ ಕೋಟೆಯು ಸುಮಾರು 1.7 ಕಿಲೋಮೀಟರ್ ಸುತ್ತಳತೆಯನ್ನು ಹೊಂದಿದ್ದು, ಇದನ್ನು ಸುಮಾರು 36 ಎಕರೆ ಬಯಲು ಪ್ರದೇಶದಲ್ಲಿ ಕಟ್ಟಲಾಗಿದೆ. ಕೋಟೆಯ ಒಳಗಡೆ ಹಳೇಕಾಲದ ಹಾಳಾದ ಮನೆಗಳು, ನೀರಿನ ಬಾವಿಗಳು ಹಾಗೂ ಕಾವಲುಪಡೆಯ ಮನೆಗಳಿವೆ. ಈ ಎಲ್ಲವೂ ಇಲ್ಲಿ ಸಣ್ಣ ಕೋಟೆಯ ಪಟ್ಟಣವಿತ್ತು ಎಂದು ಹೇಳುತ್ತವೆ. ಇದನ್ನು ಬಾದಾಮಿ ಚಾಲುಕ್ಯರ ಕಾಲದಲ್ಲಿ ಕಟ್ಟಲಾಗಿದೆ ಎಂದು ಹಿನ್ನಡವಳಿಗಾರರು ಹೇಳುತ್ತಾರೆ. ಕೋಟೆ ಮುಕ್ಯ ಬಾಗಿಲಿನಿಂದ ಪೂರ‍್ವ ದಿಕ್ಕಿನ ಕಡೆಗೆ ಸ್ವಲ್ಪ ಒಳಗಡೆ ಹೋದರೆ ಒಂದು ಕಮಾನಿದೆ. ಇನ್ನು ಕೋಟೆಯ ಒಳಗಡೆ ಹಳೇಕಾಲದ ಹಲವಾರು ದೇವಾಲಯಗಳು ಮತ್ತು ಮಸೀದಿಗಳಿವೆ.

ಶ್ರೀ ನಾಗಾವಿ ಯಲ್ಲಮ್ಮ ದೇವಾಲಯ

nagavi3

ಈ ದೇವಾಲಯವನ್ನು ಬಾದಾಮಿ ಚಾಲುಕ್ಯರ ಕಾಲದಲ್ಲಿ ಕಟ್ಟಲಾಗಿರಬಹುದು ಎಂದು ಹೇಳಲಾಗುತ್ತದೆ. ದೇವಾಲಯದ ಹೆಬ್ಬಾಗಿಲಿನ ಹತ್ತಿರ ಹಳೇಕಾಲದ ಎರಡು ತೆರೆದ ಬಾವಿಗಳಿವೆ. ಇದರ ಕಟ್ಟಡದರಿಮೆಯು ತುಂಬಾ ಬೇರೆಯಾಗಿದೆ. ಈ ದೇವಾಲಯವು ನಾಲ್ಕು ದೊಡ್ಡ ಬದಿಗಳ ರಚನೆಯನ್ನು ಹೊಂದಿದ್ದು, ಅದರಲ್ಲಿ ಮೂರು ಬದಿಗಳಲ್ಲಿ ಸುಂದರವಾದ ಕಮಾನುಗಳಿವೆ. ಇನ್ನು ದೇವಾಲಯದ ಗರ‍್ಬಗುಡಿಯು ಬಡಗಣ ದಿಕ್ಕಿನ ಕಡೆಗೆ ಎದುರಾಗಿರುವ ಕಿರಿದಾದ ಬಾಗಿಲನ್ನು ಹೊಂದಿದ್ದು, ಗರ‍್ಬಗುಡಿಯ ಒಳಗಡೆ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಸುಂದರ ಮೂರ‍್ತಿಯಿದೆ. ದೇವಿಯ ಮೂರ‍್ತಿಯ ಕೆಳಗಡೆ ದೇವಿಯ ಪಾದರಕ್ಶೆ ಅಚ್ಚುಗಳಿದ್ದು, ಅವುಗಳ ಪಕ್ಕದಲ್ಲಿ ಎರಡು ಚಿಕ್ಕ ಹೊಂಡಗಳಿವೆ. ನಾಗಾವಿ ಯಲ್ಲಮ್ಮ ದೇವಾಲಯದಿಂದ ಸುಮಾರು 100 ಮೀಟರ್ ದೂರದಲ್ಲಿರುವ ನಂದಿಬಾವಿಯಿಂದ ಈ ಹೊಂಡಗಳಿಗೆ ನೀರು ಬರುತ್ತದೆ ಎಂದು ಬಕ್ತರು ನಂಬುತ್ತಾರೆ. ಆದ್ದರಿಂದ ದೇವಾಲಯದ ಗರ‍್ಬಗುಡಿಯ ಆವರಣವು ನೀರಿನಿಂದ ಸುತ್ತುವರೆದಿದೆ.

60 ಕಂಬಗಳ ದೇವಾಲಯ

nagavi4

ಈ ದೇವಾಲಯವು ಸುಮಾರು 50 X 60 ಸರಳ ರಚನೆಯನ್ನು ಹೊಂದಿದ್ದು, ಒಂದೇ ಕಲ್ಲಿನ ವೇದಿಕೆಯ ಮೇಲೆ ಕಟ್ಟಲಾಗಿದೆ. ಇದಕ್ಕೆ ಪೂರ‍್ವ ದಿಕ್ಕಿನ ಕಡೆಗೆ ಇರುವ ಒಂದು ಬಾಗಿಲಿದ್ದು, ಅದರ ಮೇಲೆ ಬ್ರಹ್ಮ, ವಿಶ್ಣು, ಮಹೇಶ್ವರ ಎಂದು ಬರೆಯಲಾಗಿದೆ. ಬ್ರಹ್ಮನನ್ನು ಪೂಜಿಸುವ ಕೆಲವೇ ದೇವಾಲಯಗಳಲ್ಲಿ ಇದು ಒಂದಾಗಿದೆ. ಇದನ್ನು ಬಾದಾಮಿ ಚಾಲುಕ್ಯ ವಂಶದ ಮೊದಲನೆಯ ಸೋಮೇಶ್ವರ ರಾಜನ ಆಳ್ವಿಕೆಯಲ್ಲಿ ಕಟ್ಟಲಾಗಿರಬಹುದು ಎಂದು ಹೇಳಲಾಗುತ್ತದೆ. ದೇವಾಲಯದ ಒಳಗಿನ ಮುನ್ನಂಗಳವು 60 ಕಂಬಗಳಿಂದ ತುಂಬಿದ್ದು, ಅದೇಕಾರಣಕ್ಕೆ ಇದನ್ನು 60 ಕಂಬಗಳ ದೇವಾಲಯವೆಂದು ಕರೆಯುತ್ತಾರೆ. ಇನ್ನು ದೇವಾಲಯದ ಮುನ್ನಂಗಳದ ನಡುವೆ ಒಂದು ಚಿಕ್ಕ ನೀರಿನ ಹೊಂಡವಿದ್ದು, ಸರಿಯಾಗಿ ಅದರ ಮೇಲಿನ ಸೂರು ತೆರೆದಿದೆ. ಈ 60 ಕಂಬಗಳಲ್ಲಿ ನೀರಿನ ಹೊಂಡದ ಸುತ್ತಲಿರುವ ನಾಲ್ಕು ಕಂಬಗಳು ಮಾತ್ರ ಅಳತೆ ಹಾಗೂ ರಚನೆಯಲ್ಲಿ ಉಳಿದ ಕಂಬಗಳಿಂದ ಸ್ವಲ್ಪ ಬೇರೆಯಾಗಿವೆ. ದೇವಾಲಯದ ಗರ‍್ಬಗುಡಿಯಲ್ಲಿ ಮೂರು ಲಿಂಗಗಳಿದ್ದು, ಇವುಗಳನ್ನು ತಲಾ ಒಂದೊಂದರಂತೆ ಬ್ರಹ್ಮ, ವಿಶ್ಣು, ಮಹೇಶ್ವರ – ಈ ಮೂವರು ದೇವರಿಗೆ ಸಮರ‍್ಪಿಸಲಾಗಿದೆ.

ನಾಗಾವಿಯಲ್ಲಿನ ಕಲ್ಬರಹದ ಹಿನ್ನಡವಳಿ

nagavi5ಇದು ನಾಗಾವಿಯಲ್ಲಿರುವ 60 ಕಂಬಗಳ ದೇವಾಲಯದ ಎದುರಿನ ಆವರಣದಲ್ಲಿದೆ. ಈ ಕಲ್ಬರಹವು 10 ನೆ ಶತಮಾನದಲ್ಲಿ ಬಾದಾಮಿ ಚಾಲುಕ್ಯ ವಂಶದ ಮೊದಲನೆಯ ಸೋಮೇಶ್ವರ ರಾಜನ ಆಳ್ವಿಕೆಯ ಕಾಲದ್ದು ಎಂದು ಹೇಳಲಾಗುತ್ತದೆ. ಈ ಕಲ್ಬರಹವನ್ನು ಚೌಕಾಕಾರದ ವೇದಿಕೆ ಮೇಲೆ ಕಟ್ಟಲಾಗಿರುವ ಒಂದು ಚೌಕಾಕಾರದ ಕಂಬದ ನಾಲ್ಕು ಮುಕಗಳ ಮೇಲೆ ಬರೆಯಲಾಗಿದೆ. ಇದರ ಮೇಲೆ ಬರೆದಿರುವ ಕಯ್ಬರಹವು ಇಂಡಿಯಾದ ಹಳೇಕಾಲದ ಕಯ್ಬರಹದಲ್ಲಿ ಒಂದಾಗಿರುವ ನಾಗಲಿಪಿ ಎಂದು ಹಿನ್ನಡವಳಿಗಾರರು ಹೇಳುತ್ತಾರೆ.

ಶ್ರೀ ಆಂಜನೇಯ ಸ್ವಾಮಿ ದೇವಾಲಯ

nagavi6ಈ ದೇವಾಲಯವನ್ನು ಸುಮಾರು 200 ಮೀಟರ್ ಉದ್ದ ಹಾಗೂ 100 ಮೀಟರ್ ಅಗಲವಾಗಿರುವ ಒಂದು ಬಂಡೆಯ ಹಾಸಿಗೆಯ ಮೇಲೆ ಕಟ್ಟಲಾಗಿದೆ. ದೇವಾಲಯದ ಕಟ್ಟಡವು ಒಂದು ಹಳೇಕಾಲದ ಸರಳವಾದ ರಚನೆಯನ್ನು ಹೊಂದಿದೆ. ಇನ್ನು ದೇವಾಲಯದ ಒಳಗಿನ ಅಂಗಳದಲ್ಲಿ ಹಲವಾರು ಹಳೇಕಾಲದ ಕಂಬಗಳಿಂದ ಕೂಡಿದ ಒಂದು ಸಬಾ ಮಂಟಪವಿದೆ. ದೇವಾಲಯದ ಅಂಗಳದ ನಡುವೆ ಹೋಮಗಳನ್ನು ಮಾಡಲು ಒಂದು ಚೌಕವಿದ್ದು, ಇದು ನಾಲ್ಕು ಕಂಬಗಳಿಂದ ಸುತ್ತುವರೆದಿದೆ.

ಇಶ್ಟೊಂದು ಹಿನ್ನಡವಳಿಯ ನಾಗಾವಿ ಊರು ಇಂದು ಪಾಳುಬಿದ್ದ ಊರಾಗಿದೆ. ಇನ್ನಾದರೂ ನಮ್ಮ ಸರ‍್ಕಾರಗಳು ನಾಗಾವಿಯಲ್ಲಿ ಉಳಿದಿರುವ ಹಿನ್ನಡವಳಿಯ ದೇವಾಲಯಗಳನ್ನು ಹಾಗೂ ಇತರೆ ಕಟ್ಟಡಗಳನ್ನು ಕಾಪಾಡಿ, ಆದಶ್ಟು ಬೇಗ ಇದನ್ನು ಒಂದು ಒಳ್ಳೆಯ ಸುತ್ತಾಟದ ಜಾಗವನ್ನಾಗಿ ಮಾಡಲಿ.

(ಮಾಹಿತಿ ಸೆಲೆ: karnatakatravel.blogspot.in, ishtadevata.com, standingtall-siddeshwar.blogspot.in,  deccanherald.com, facebookkarnatakatravel.blogspot.inpanoramio.com, shodhganga.inflibnet.ac.in,  )

(ಚಿತ್ರ ಸೆಲೆ: wikimapia.org, karnatakatravel.blogspot.in, youtube )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *