ವಿಶ್ವದ ಮೊದಲ ಜೀರೋ ಎಮಿಶನ್ ಟ್ರೈನ್

– ಕೆ.ವಿ.ಶಶಿದರ.

ವಿಶ್ವದ ಮೊದಲ ಹೈಡ್ರೋಜನ್ ಇಂದನದ ಮೂಲಕ ಚಲಿಸುವ, ಮಾಲಿನ್ಯ ಮುಕ್ತ ಟ್ರೈನ್ 2017ರ ಅಂತ್ಯಕ್ಕೆ ಜರ‍್ಮನಿಯಲ್ಲಿ ತನ್ನ ಯಾನವನ್ನು ಪ್ರಾರಂಬಿಸಲಿದೆ. ಈ ಅವಿಶ್ಕಾರ ಬಹುಶಹ ಅತಿ ಹೆಚ್ಚು ಮಾಲಿನ್ಯಕಾರಕ ಪೆಟ್ರೋಲ್-ಡೀಸೆಲ್ ಬಳಕೆಯನ್ನು ಕ್ರಮೇಣ ಇಲ್ಲವಾಗಿಸುವಲ್ಲಿ ಇಡಬಹುದಾದ ಮೊದಲ ದೈತ್ಯ ಹೆಜ್ಜೆ. ಇದು ಹೊಸ ಶಕೆಯ ಆರಂಬ ಮತ್ತು ಹೊಸ ಯುಗಕ್ಕೆ ನಾಂದಿ ಎಂದರೂ ತಪ್ಪಾಗಲಾರದು.

2017ರ ಡಿಸೆಂಬರಿನಲ್ಲಿ ‘’ಹೈಡ್‍ರೈಲ್ ಐಲಿಂಟ್” ಪ್ರಯಾಣಿಕರನ್ನು ಹೊತ್ತು ಮೊದಲಬಾರಿಗೆ ಉತ್ತರ ಜರ‍್ಮನಿಯ ಲೋವರ್ ಸಾಕ್ಸೋನಿಯಲ್ಲಿನ ಬುಕ್‍ಸ್ಟೆಹುಡ್‍ನಿಂದ ಬ್ರೆಮೆರ್‍ವೋರ‍್ಡ್ ಅಲ್ಲಿಂದ ಬ್ರೆಮರ್‍ಹೆವನ್ ಮತ್ತೆ ಅಲ್ಲಿಂದ ಕುಕ್ಸ್ ಹೆವನ್‍ಗೆ ಚಲಿಸಲಿದೆ.

ಇದು ಚಲಿಸುವಾಗ ಹೊರಸೂಸುವುದು ಕೇವಲ ಆವಿ ಹಾಗೂ ಆವಿಯಲ್ಲಿನ ನೀರನ್ನು ಮಾತ್ರ!

‘ಕೊರಾಡಿಯಾ ಐಲಿಂಟ್’ ಎಂಬ ನಿಶ್ಯಬ್ದ ಟ್ರೈನ್ 2016ರ ಬರ‍್ಲಿನ್ ರೈಲ್ವೆ ಇಂಡಸ್ಟ್ರಿ ಟ್ರೇಡ್‍ನಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿತು. ಇದು ಚಲಿಸುವಾಗ ಹೊರಸೂಸುವುದು ಕೇವಲ ಆವಿ ಹಾಗೂ ಆವಿಯಲ್ಲಿನ ನೀರನ್ನು ಮಾತ್ರ. ಉಳಿದಂತೆ ಗಾಲಿಗಳು ಹಳಿಯ ಮೇಲೆ ಚಲಿಸುವಾಗಿನ ಉಜ್ಜಿದ ಶಬ್ದ ಹಾಗೂ ಗಾಳಿಯನ್ನು ಸೀಳಿಕೊಂಡು ಹೋಗುವಾಗಿನ ಶಬ್ದ ಮಾತ್ರ ಕೇಳಿಬರುತ್ತದೆ. ಹಾಗಾಗಿ ಶಬ್ದ ಮಾಲಿನ್ಯವೂ ಸೊನ್ನೆ ಅತವಾ ತೀರ ಅತ್ಯಲ್ಪ.

ವಿದ್ಯುಚ್ಚಕ್ತಿಯಿಂದ ಚಲಿಸುವ ರೈಲು ಮಾರ‍್ಗಗಳಲ್ಲಿ ಇದು ಉಪಯೋಗವಿಲ್ಲ. ಬದಲಾಗಿ ಡೀಸೆಲ್ ಇಂಜಿನ್‍ಗಳ ಸಹಾಯದಿಂದ ಚಲಿಸುವ ಟ್ರೈನ್ ಮಾರ‍್ಗಗಳಲ್ಲಿ ಉಪಯೋಗಿಸಬಹುದು. ವಿದ್ಯುಚ್ಚಕ್ತಿಯಿಂದ ಚಲಿಸುವ ರೈಲು ಮಾರ‍್ಗಗಳಲ್ಲಿ ರೈಲಿನಿಂದ ಹೊರಸೂಸುವ ಮಾಲಿನ್ಯ ಅತಿ ಕಡಿಮೆ ಮಟ್ಟದಲ್ಲಿರುತ್ತದೆ. ಆದರೆ ಡೀಸಲ್ ಟ್ರೈನ್ ಮಾರ‍್ಗಗಳಲ್ಲಿ ಇದಕ್ಕೆ ವ್ಯತಿರಿಕ್ತ. ಹಾಗಾಗಿ ಇದು ಹೆಚ್ಚು ಬಳಕೆಗೆ ಬರುವುದು ಡೀಸೆಲ್‍ನ ಬದಲಿಯಾಗಿ ಉಪಯೋಗಿಸಿದಲ್ಲಿ ಮಾತ್ರ.

ಜರ‍್ಮನಿಯೊಂದರಲ್ಲೇ 4000ಕ್ಕೂ ಹೆಚ್ಚು ಡೀಸೆಲ್ ಮೂಲಕ ಚಲಿಸುವ ಟ್ರೈನ್ ಕಾರ್‍ಗಳಿವೆ. ಯೂರೋಪಿಯನ್ ಯೂನಿಯನ್ ಪ್ರಕಾರ ಯೂರೋಪಿನಾದ್ಯಂತ ಲಬ್ಯವಿರುವ ಟ್ರೈನ್‍ಗಳಲ್ಲಿ ಶೇಕಡಾ 20ಕ್ಕೂ ಹೆಚ್ಚು ಡೀಸೆಲ್ ಇಂದನದ ಸಹಾಯದಿಂದ ಚಲಿಸುವ ಇಂಜಿನ್‍ಗಳಿವೆ. ಹೈಡ್ರೋಜನ್ ಇಂದನವನ್ನು ಉಪಯೋಗಿಸಿಕೊಂಡು ಚಲಿಸುವ ಟ್ರೈನ್‍ನಲ್ಲಿ ಡೀಸಲ್ ಟ್ರೈನಿನ ಎಲ್ಲಾ ಉಪಕರಣಗಳನ್ನು ಬಳಸಬಹುದಾಗಿದೆ. ಆದರೆ ಇದು ಪೂರ‍್ಣ ಹೊಸ ತಂತ್ರಜ್ನಾನದ ಮೇಲೆ ಆದಾರಿತ. ಇಲ್ಲಿ ಬಳಸುವ ಇಂದನ ಮಾತ್ರ ಹೈಡ್ರೋಜನ್. ಹೈಡ್ರೋಜನ್ ಬಹುತೇಕ ರಾಸಾಯನಿಕ ಕಾರ‍್ಕಾನೆಯಲ್ಲಿನ ಒಂದು ತ್ಯಾಜ್ಯ.

ಯಾವ ತಂತ್ರಜ್ನಾನದ ಬಳಕೆಯಿದೆ?

ಟ್ರೈನ್‍ಗಳನ್ನು ಚಲಿಸುವಂತೆ ಮಾಡುವ ಶಕ್ತಿಯನ್ನು ಉತ್ಪಾದನೆ ಮಾಡಲು ದೊಡ್ಡ ದೊಡ್ಡ ಇಂದನ ಕೋಶಗಳನ್ನು ಟ್ರೈನಿನ ಮೇಲೆ ಹರಡುತ್ತಾರೆ. ಈ ಕೋಶಗಳು ಹೈಡ್ರೋಜನ್ ಜೊತೆ ಆಕ್ಸಿಜನ್ ಸೇರಿಸಿ ವಿದ್ಯುತನ್ನು ಉತ್ಪಾದಿಸುತ್ತದೆ. ಹೀಗೆ ಉತ್ಪತ್ತಿಯಾದ ವಿದ್ಯುತನ್ನು ಬ್ಯಾಟರಿಗಳಲ್ಲಿ ಕೂಡಿಡಲಾಗುತ್ತದೆ. ಹೀಗೆ ಕೂಡಿಟ್ಟ ವಿದ್ಯುತ್‍ನಿಂದ ಟ್ರೈನ್ ಕಾರ್‍ಗಳನ್ನು ಚಾಲನೆ ಮಾಡುತ್ತಾರೆ. ನಾಸಾದಲ್ಲಿಯೂ ಸಹ ಉಪಗ್ರಹಗಳ ಉಡಾವಣೆಗೆ ಇದೇ ತಂತ್ರಜ್ನಾನವನ್ನು ಅಳವಡಿಸಲಾಗಿದೆ.

ಎರಡು ಬೋಗಿಗಳ ಕಾರ್ ಟ್ರೈನ್ 300 ಜನ ಪ್ಯಾಸೆಂಜರ್‍ಗಳನ್ನು ಹೊತ್ತು 500 ಮೈಲಿ (800 ಕಿಮಿ) ದೂರವನ್ನು ಕ್ರಮಿಸಲು ಒಂದು ಇಂದನ ಕೋಶ ಮತ್ತು 207 ಪೌಂಡ್ (94ಕೆಜಿ) ಹೈಡ್ರೋಜನ್ ಟ್ಯಾಂಕ್‍ನ ಅವಶ್ಯಕತೆಯಿದೆ. ಇದರೊಂದಿಗೆ ಬೇಕಿರುವ ಆಕ್ಸಿಜನ್ ವಾತಾವರಣದ ಗಾಳಿಯಲ್ಲೇ ದೊರಕುತ್ತದೆ.

ಹೈಡ್ರೋಜನ್ ಅನಿಲದ ಬಳಕೆಯಿಂದ ಚಲಿಸುವ ಟ್ರೈನ್ ಗರಿಶ್ಟ 87 ಮೈಲಿ ವೇಗವನ್ನು ಮುಟ್ಟುತ್ತದಾದರೂ ಇದು ಹಾಲಿ ಜರ‍್ಮನಿಯಲ್ಲಿನ ವಿದ್ಯತ್ ಟ್ರೈನ್‍ಗಳ ವೇಗಕ್ಕೆ ಹೋಲಿಸಿದಲ್ಲಿ ಬಹಳ ಕಡಿಮೆ. ಆದರೂ ಸಹ ಇದು ಶಾಂತ ವಾತಾವರಣವಿರುವ, ಕಡಿಮೆ ಅಂತರವಿರುವ ಹಾಗೂ ವಿದ್ಯುದೀಕರಣವಾಗದ ಕಡೆ ಉಪಯೋಗಿಸಲು ಬಹು ಸೂಕ್ತ. 2017ರ ವರ‍್ಶ ಪೂರ‍್ತಿ ಎರಡು ಟ್ರೈನ್ ಕಾರ್‍ಗಳನ್ನು ಪ್ರಾಯೋಗಿಕವಾಗಿ ಚಾಲನೆ ಮಾಡಿ ಅದರ ಕಾರ‍್ಯ ಕ್ಶಮತೆಯನ್ನು ಗಣನೆಗೆ ತೆಗೆದುಕೊಂಡು ಇನ್ನೂ ಹೆಚ್ಚು ಉಪಯುಕ್ತವಾಗುವಂತೆ ಸಣ್ಣ ಪುಟ್ಟ ಬದಲಾವಣೆ ಮಾಡಿ ನಂತರ ಜರ‍್ಮನಿಯ ಪೆಡರೆಲ್ ರೈಲ್ವೇ ಆಪೀಸ್‍ನಿಂದ ಕಾರ‍್ಯಾಚರಣೆಯ ಅನುಮೋದನೆಗೆ ಮಂಡಿಸಲಾಗುತ್ತದೆ ಎಂಬುದು ನಿರ‍್ಮಾಪಕರ ಯೋಜನೆ.

ಮೊದಲ ಹಂತದಲ್ಲಿ ಈ ಮಾಲಿನ್ಯ ರಹಿತ ಟ್ರೈನ್ ಕಡಿಮೆ ಅಂತರದಲ್ಲಿ ಮಾತ್ರ ಚಲಿಸಲು ಉದ್ದೇಶಿಸಿದರೂ ಸಹ ಈಗಾಗಲೆ ಜರ‍್ಮನಿಯ ನಾಲ್ಕು ರಾಜ್ಯಗಳು ತಯಾರಕಾ ಕಂಪೆನಿಯ ಜೊತೆ 60 ಇಂಜಿನ್ನುಗಳ ಕರೀದಿಗೆ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದವು 2017ರಲ್ಲಿ ತಯಾರಕರು ನಡೆಸಲು ಉದ್ದೇಶಿಸಲಾಗಿರುವ ತಾಂತ್ರಿಕತೆ ಹಾಗೂ ಕಾರ‍್ಯ ಕ್ಶಮತೆಯ ಪರೀಕ್ಶಾರ‍್ತ ಓಡಾಟದ ಮೇಲೆ ಪೂರ‍್ಣವಾಗಿ ಅವಲಂಬಿತವಾಗಿದೆ.

(ಚಿತ್ರ ಸೆಲೆ: wikimedia, techies-news.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: