‘ಶುದ್ದಿ’ – ಕನ್ನಡದಲ್ಲೊಂದು ಹಾಲಿವುಡ್‍ ಬಗೆಯ ಚಿತ್ರ

ವಿಜಯಮಹಾಂತೇಶ ಮುಜಗೊಂಡ.

ಕನ್ನಡ ಚಿತ್ರಗಳಲ್ಲಿ ಇತ್ತೀಚಿಗೆ ಕತೆ ಹೆಣೆಯುವ ಬಗೆ ಬದಲಾಗುತ್ತಿದೆ. ಕೊನೆಯವರೆಗೂ ಗುಟ್ಟುಬಿಡದೆ ಸಾಗುವ ಕತೆಗಳು, ಕತೆ ಹೇಳುವ ಬಗೆ – ನೋಡುಗನು ತನ್ನ ಊಹೆಗೆ ತಕ್ಕಂತೆ ಕತೆಯೊಂದನ್ನು ಹೆಣೆಯುವ ಹಾಗೆ ಮಾಡುತ್ತವೆ. ಇದನ್ನೇ ಈ ಹಿಂದೆ ಮೂಡಿಬಂದ ಲೂಸಿಯಾ, ರಂಗಿತರಂಗ, ಯೂ-ಟರ‍್ನ್ ಹಲವು ಚಿತ್ರಗಳಲ್ಲಿ ಕಂಡಿದ್ದೆವು. ಇದೀಗ ಇದೇ ಬಗೆಯ ಇನ್ನೊಂದು ಸಿನೆಮಾ ‘ಶುದ್ದಿ’ ಬಿಡುಗಡೆಯಾಗಿದೆ. ಕತೆ ಸಾಗುವ ರೀತಿ ಮಂದಿಮೆಚ್ಚುಗೆಯನ್ನು ಪಡೆದು ಎಲ್ಲರೂ ಅದರ ಬಗ್ಗೆಯೇ ಮಾತಾಡುವಂತೆ ಮಾಡಿದೆ.

ಬಿಡುಗಡೆಯ ಮೊದಲು ಹೊರಬರುವ ಸಿನೆಮಾದ ತುಣುಕುಗಳು(trailer) ಚೆನ್ನಾಗಿದ್ದರಂತೂ, ಚಿತ್ರದ ಕುರಿತು ನಿರೀಕ್ಶೆಗಳು ಸಹಜವಾಗಿ ಇಮ್ಮಡಿಗೊಳ್ಳುತ್ತವೆ. ಈ ವಿಶಯದಲ್ಲಿ ಶುದ್ದಿ ಚಿತ್ರ ಒಂದು ಹೆಜ್ಜೆ ಮುಂದೆ ಇತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಟ್ರೈಲರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹಾಲಿವುಡ್ ಮಾದರಿಯ ಚಿತ್ರವೊಂದು ಕನ್ನಡಕ್ಕೆ ಬರುತ್ತಿದೆ ಎಂದು ಮಂದಿ ಮಾತನಾಡಿಕೊಂಡಿದ್ದರು. ಟ್ರೈಲರ್ ನೋಡಿದ ಹೆಚ್ಚಿನ ಮಂದಿ “ಪೂರ‍್ತಿ ಚಿತ್ರದ ಕತೆಯನ್ನು ಟ್ರೈಲರ್‌ನಲ್ಲಿಯೇ ಬಿಟ್ಟುಕೊಟ್ಟಿದ್ದಾರೆ” ಎಂದಿದ್ದರು. ಮೂರೂವರೆ ನಿಮಿಶದ ಟ್ರೈಲರ್ ಹೆಚ್ಚೂ ಕಡಿಮೆ ಸಿನಿಮಾದ ಪೂರ‍್ತಿ ಕತೆಯಂತೆ ಕಂಡದ್ದೂ ದಿಟ. ಚಿತ್ರದ ಕೊನೆಯ ಹಂತದವರೆಗೂ ಹಾಗೆಯೇ ಅಂದುಕೊಳ್ಳುವ ನೋಡುಗನಿಗೆ, “ನೀವಂದುಕೊಂಡಶ್ಟು ಸರಳವಾಗಿ ಎಲ್ಲವನ್ನೂ ಬಿಟ್ಟುಕೊಡುವವರು ನಾವಲ್ಲ” ಎಂಬುದನ್ನು ನಿರ‍್ದೇಶಕರು ತಮ್ಮದೇ ಆದ ದಾಟಿಯಲ್ಲಿ ತೋರಿಸಿದ್ದಾರೆ. ಎರಡು ಸಮಾನಾಂತರ ಕತೆಗಳಂತೆ ಸಾಗುವ ಚಿತ್ರದ ಎಳೆಗಳನ್ನು ಹೇಗೆ ಜೋಡಿಸಿದ್ದಾರೆ ಎನ್ನುವುದು ಚಿತ್ರದ ಹೆಚ್ಚುಗಾರಿಕೆ. ಇಲ್ಲಿ ಚಿತ್ರದ ನಿರ‍್ದೇಶಕ ಮತ್ತು ಕತೆಗಾರ ಆದರ‍್ಶ್ ಈಶ್ವರಪ್ಪ ಅವರ ಕೆಲಸವನ್ನು ಮೆಚ್ಚಬೇಕು.

ಕತೆ ಸಾಗುವ ಬಗೆ ಮತ್ತು ಕೊನೆ, ಶುದ್ದಿಯನ್ನು ಮಾಮೂಲಿ ಕನ್ನಡ ಚಿತ್ರಗಳಿಗಿಂತ ಬೇರೆಯಾಗಿಯೇ ನಿಲ್ಲಿಸುತ್ತದೆ. ಚಿತ್ರ ನಡೆದುಕೊಂಡು ಹೋಗುವ ಬಗೆ ವಿಬಿನ್ನವಾಗಿದೆ.  ಬೇರೆ ಚಿತ್ರಗಳಂತೆ ಇಲ್ಲಿ ಹಾಡು ಕುಣಿತಗಳಿಲ್ಲ. ಆದರೆ ಹಾಡು ಕುಣಿತವನ್ನು ನಾಚಿಸುವ ಹಿನ್ನೆಲೆ ಸಂಗೀತವಿದೆ. ಚಿತ್ರದ ದ್ರುಶ್ಯಗಳಲ್ಲಿ  ನೋಡುಗ ಕಳೆದುಹೋಗುವಂತೆ ಮಾಡುವುದೇ ಹಿನ್ನೆಲೆ ಸಂಗೀತ ಮತ್ತು ಕ್ಯಾಮೆರಾ ಕೆಲಸ. ಜೆಸ್ಸಿ ಕ್ಲಿಂಟನ್ ಎನ್ನುವವರು ಇದಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಆಂಡ್ರ್ಯೂ ಏಲೋ ಅವರ ಕ್ಯಾಮರಾ ಕೆಲಸ ಸಕ್ಕತ್ತಾಗಿದೆ. ಇವರಿಬ್ಬರೂ ಹಾಲಿವುಡ್‍ನವರು ಎನ್ನುವುದು ಇನ್ನೊಂದು ವಿಶೇಶ.

2012ರಲ್ಲಿ ದೆಹಲಿಯಲ್ಲಿ ಮತ್ತು ಇತ್ತೀಚಿಗೆ ಬೆಂಗಳೂರಿನ ಕಾರ‍್ಪೊರೇಶನ್ ಸರ‍್ಕಲ್‍ನಲ್ಲಿ ನಡೆದ ಮಹಿಳೆಯರ ಮೇಲಿನ ದೌರ‍್ಜನ್ಯಗಳನ್ನೇ ಕತೆ ಹಿನ್ನೆಲೆಯಾಗಿಟ್ಟುಕೊಂಡಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಬಾಲಾಪರಾದಿ ಕಾನೂನಿನ(Juvenile Act) ತಪ್ಪುಬಳಕೆಯನ್ನು ಬಯಲಿಗೆಳೆಯುವ ಉದ್ದೇಶದಿಂದ ಪತ್ರಕರ‍್ತೆಯರಾದ ಜ್ಯೋತಿ(ನಿವೇದಿತಾ) ಮತ್ತು ದಿವ್ಯಾ(ಅಮ್ರುತಾ ಕರಗದ) ನಡೆಸುವ ಪ್ರಾಜೆಕ್ಟ್ ನಿರ‍್ಬಯಾ ಸುತ್ತ ಕತೆ ಹೆಣೆಯಲಾಗಿದೆ. ಜುವೆನೈಲ್ ಆಕ್ಟ್‌ನ ಹುಳುಕುಗಳನ್ನು ಮಂದಿಯ ಮುಂದಿಡಲು ಆಡುವ ಸರಣಿ ಬೀದಿ ನಾಟಕಗಳ ಸುತ್ತ ಸಾಗುವ ಕತೆ ಚಿತ್ರದ ಒಂದು ಎಳೆಯಾದರೆ, ಅಮೆರಿಕಾದಿಂದ ಸೀಕ್ರೆಟ್ ಮಿಶನ್‍ಗಾಗಿ ಬಂದಿರುವ ಕ್ಯಾರ‍್ಲಿನ್ ಸ್ಮಿತ್  ಎನ್ನುವ ಯುವತಿಯ ಸುತ್ತ ನಡೆಯುವ ಗಟನೆಗಳು ಇನ್ನೊಂದು ಎಳೆ. ಕ್ಯಾರ‍್ಲಿನ್ ಆಗಿ ಲಾರೆನ್ ಸ್ಪರ‍್ಟಾನೋ ಅವರ ನಟನೆ ಅದ್ಬುತವಾಗಿದೆ. ತೆರೆಯ ತುಂಬಾ ಈ ಮೂವರು ನಟಿಯರದೇ ಹೆಚ್ಚುಗಾರಿಕೆಯೆಂದರೆ ತಪ್ಪಾಗಲಿಕ್ಕಿಲ್ಲ. ಪೋಲೀಸ್ ಅದಿಕಾರಿಯಾಗಿ, ಶಶಾಂಕ್ ಪುರುಶೋತ್ತಮ್ ಅವರು ಟ್ರೈಲರ‍್‌ನಲ್ಲಿಯೇ ಪ್ರಾಮಿಸಿಂಗ್ ಆಗಿ ಕಂಡಿದ್ದರು, ನಟನೆಯ ಮೂಲಕ ಅದನ್ನು ಎಲ್ಲಿಯೂ ಸುಳ್ಳಾಗಿಸಿಲ್ಲ ಎಂದೇ ಹೇಳಬಹುದು. ಇನ್ನೊಬ್ಬ ಪೋಲೀಸ್ ಅದಿಕಾರಿಯಾಗಿ ಕಾಣಿಸಿಕೊಂಡಿರುವ ಸಿದ್ದಾರ‍್ತ ಮಾದ್ಯಮಿಕ ತುಂಬಾ ಸೀರಿಯಸ್ ಆಗಿ ಕಂಡರೂ ಒಂದೆರಡು ಕಡೆ ನೋಡುಗರನ್ನು ನಗಿಸದೇ ಬಿಟ್ಟಿಲ್ಲ. ಇನ್ನುಳಿದಂತೆ ಸಂಚಾರಿ ವಿಜಯ್ , ಅಜಯ್ ರಾಜ್ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ನಟನೆಯ ವಿಶಯದಲ್ಲಿ ಯಾರೂ ತಮ್ಮ ಪಾತ್ರಗಳಿಗೆ ಮೋಸಮಾಡಿಲ್ಲ ಎನ್ನಬಹುದು.

ಪ್ರಾಜೆಕ್ಟ್ ನಿರ‍್ಬಯಾ ಉದ್ದೇಶವನ್ನು ಬೆನ್ನಟ್ಟುವಲ್ಲಿ, ಬೀದಿನಾಟಕ ಬಳಸಿಕೊಂಡ ಹೊಳಹು ನಮ್ಮತನಕ್ಕೆ ಚೆನ್ನಾಗಿ ಹೊಂದುತ್ತದೆ. ಬೀದಿನಾಟಕಗಳ ಮೂಲಕ ನಮ್ಮತನಕ್ಕೆ ಸಾಕಶ್ಟು ಹತ್ತಿರವಾಗಿದೆ ಎನ್ನುವುದು ಒಂದು ವಾದವಾದರೆ, ಒಂದು ಮಟ್ಟಿಗೆ ಹೆಚ್ಚಾಯ್ತು ಎನ್ನಿಸುವಶ್ಟು ಇಂಗ್ಲೀಶ್ ಮಾತುಗಳು ಕನ್ನಡ ನೋಡುಗರನ್ನು ಅಶ್ಟಾಗಿ ಹಿಡಿದಿಡಲಾರವು ಎನ್ನುವುದು ಇನ್ನೊಂದು ಬದಿಯ ನೋಟ. ಇಂಗ್ಲೀಶ್ ಅಡಿಬರಹಗಳೊಂದಿಗೆ ಮೂಡಿಬಂದಿರುವ ಕನ್ನಡ ಚಿತ್ರದಲ್ಲಿ ಕೆಲವೆಡೆ ಇಂಗ್ಲೀಶ್ ಮಾತುಗಳು ಅನಿವಾರ‍್ಯವಾಗಿರಲೂಬಹುದು. ಹಲವೆಡೆ ಕಡೆಯ ಪಕ್ಶ ಕನ್ನಡ ಅಡಿಬರಹವನ್ನಾದರೂ ಬಳಸಿದ್ದರೆ ಇನ್ನಶ್ಟು ಹೆಚ್ಚಿನ ಮಂದಿಯನ್ನು ತಲುಪಬಹುದಿತ್ತು ಅನಿಸುತ್ತದೆ.

ತಮ್ಮ ನಿರ‍್ದೇಶನದ ಮೊದಲ ಚಿತ್ರದಲ್ಲಿಯೇ ಆದರ‍್ಶ್ ಅವರು ನೋಡುಗರಲ್ಲಿ ಸಾಕಶ್ಟು ನಿರೀಕ್ಶೆಗಳನ್ನು ಹುಟ್ಟುಹಾಕಿದ್ದಾರೆ. ಮೊದಲ ಚಿತ್ರದಲ್ಲಿಯೇ ಒಳ್ಳೆಯ ಹೆಸರು ಮಾಡಿರುವ ಡೈರೆಕ್ಟರ‍್‌ಗಳ ಸಾಲಿನಲ್ಲಿ ನಿಲ್ಲಬಲ್ಲರು ಎನ್ನುವ ಬರವಸೆ ಮೂಡಿಸಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ ಹೊಸ ಡೈರೆಕ್ಟರ‍್‌ಗಳ ಅಲೆ ಮುಂದುವರೆದಿದೆ. ಇವರಿಂದ ಇನ್ನಶ್ಟು ಒಳ್ಳೆಯ ಚಿತ್ರಗಳು ಬರಲಿ, ಕನ್ನಡ ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿ.

(ಚಿತ್ರ ಸೆಲೆ: letsshuddhify.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications