ಮಾಡಿ ಸವಿಯಿರಿ ಮೆಂತೆ ಕಡುಬು

ಸುನಿತಾ ಹಿರೇಮಟ.

ನಮ್ಮ ಕಡೆ ರವಿವಾರಕ್ಕ ಐತವಾರ ಅಂತಾರ. ಮೆಂತೆ ಕಡುಬು ಅಂತಂದ್ರ ಐತವಾರ ದಿನಾ ಆದಂಗ.

ಕರೇ, ಅವ್ವಾ ಮಾಡೋ ಆ ಮೆಂತೆ ಕಡಬು ತಿಂದ, ಗಡದ್ದಾಗಿ ಒಂದ್ ನಿದ್ದಿ ಹೊಡದ್ರ, ಆ ವಾರದ ದಣಿವೆಲ್ಲಾ ಹಂಗ ಹಾರಿಹೋಗ್ತದ.

ಮೆಂತೆ ಕಡಬು ಮಾಡಲು ಬೇಕಾಗೋ ಸಾಮಾನು

 • ಗೋದಿ ಹಿಟ್ಟು – ಕಾಲು ಕೆಜಿ
 • ಸೋಸಿ ತೆಗೆದ ಮೆಂತೆ ಸೊಪ್ಪು – ಎರಡು ಬಟ್ಟಲು
 • ಸಣ್ಣಗೆ ಹೆಚ್ಚಿದ ಉಳ್ಳಾಗಡ್ಡಿ – ಎರಡು ಬಟ್ಟಲು
 • ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – ಅರ‍್ದ ಬಟ್ಟಲು
 • ಸ್ವಲ್ಪ ಕರಿಬೇವು
 • ನಾಲ್ಕರಿಂದ ಐದು ಚಮಚ ಎಣ್ಣೆ
 • ಒಗ್ಗರಣೆಗೆ ಸಾಸಿವೆ ಮತ್ತು ಜೀರಿಗೆ
 • ಸ್ವಲ್ಪ ತುರಿದ  ಹಸಿ ಕೊಬ್ಬರಿ
 • ಎರಡು ಚಿಟಿಕೆ ಚಕ್ಕೆ ಪುಡಿ
 • ಕಾರದ ಪುಡಿ ಎರಡು ಚಮಚ
 • ಕಾಲು ಚಮಚ ಅರಿಸಿನದ ಪುಡಿ
 • ರುಚಿಗೆ ತಕ್ಕಶ್ಟು ಉಪ್ಪು

ಮಾಡುವ ಬಗೆ

ಗೋದಿ ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಒಂದು ಗಂಟೆ ಕಾಲ ಮುಚ್ಚಿಡಿ.

ಒಂದು ಬಾಣಲೆಗೆ ನೀರು ಹಾಕಿ ಅದಕ್ಕೆ ಚಿಟಿಕೆ ಉಪ್ಪು ಹಾಗು ಚಿಟಿಕೆ ಅರಿಸಿನ ಹಾಕಿ ಕುದಿಸಿ. ಈಗ ಕಲಸಿಟ್ಟ ಹಿಟ್ಟಿನಿಂದ ತೆಳ್ಳಗೆ ಚಪಾತಿ ಲಟ್ಟಿಸಿ, ಅದನ್ನು ಚೌಕಾಕಾರದಲ್ಲಿ ಕತ್ತರಿಸಿ ಅವನ್ನು ಕುದಿಯುವ ನೀರಿಗೆ ಹಾಕಿ. ಅವು ನೀರಿನ ಮೇಲೆ ತೇಲಿದಾಗ ತೆಗೆದು ಒಂದು ಬಟ್ಟಲಿಗೆ ಹಾಕಿ. ಹೀಗೆ ಎಲ್ಲವನ್ನು ಕುದಿಸಿ ತೆಗೆದು ಒಂದೆಡೆ ಇಡಿ.

ಈಗ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ. ಅದು ಕಾದ ನಂತರ ಸಾಸಿವೆ ಜೀರಿಗೆ ಹಾಕಿ ಅದು ಚಟಪಟ ಸಿಡಿದ ನಂತರ ಬೆಳ್ಳುಳ್ಳಿ, ಅದು ಗಮ್ಮೆನಿಸಿದಾಗ ಉಳ್ಳಾಗಡ್ಡಿ ಹಾಕಿ. ಅದರ ಹಸಿ ವಾಸನೆ ಹೋದ ನಂತರ ಉರಿ ಸಣ್ಣಗೆ ಮಾಡಿ, ಮೆಂತೆ ಸೊಪ್ಪು ಹಾಕಿ ಬಾಡಿಸಿ. ತಕ್ಶಣ ಕಾರದಪುಡಿ, ಅರಿಸಿನ, ಚಕ್ಕೆ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲಸಿ. ಅದು ಚೆನ್ನಾಗಿ ಬೆರೆತ ನಂತರ ಮೊದಲೇ ಕುದಿಸಿ ತೆಗೆದ ಕಡುಬುಗಳನ್ನು ಬಾಣಲೆಗೆ ಹಾಕಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ಕೊಬ್ಬರಿ ತುರಿ ಹಾಕಿ ಕಲಸಿ.

ತುಪ್ಪದೊಂದಿಗೆ ತಿನ್ನಲು ಬಿಸಿಬಿಸಿಯಾದ ಮೆಂತೆ ಕಡುಬು ರೆಡಿ!

(ಚಿತ್ರ ಸೆಲೆ: ಸುನಿತಾ ಹಿರೇಮಟ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: