700 ವರುಶಗಳಶ್ಟು ಹಳೆಯದಾದ ‘ಅರಳಗುಪ್ಪೆ ಚನ್ನಕೇಶವ ದೇವಾಲಯ’

– ದೇವರಾಜ್ ಮುದಿಗೆರೆ.

ಯಾವುದೋ ಕೆಲಸಕ್ಕೆ ತಿಪಟೂರಿಗೆ ಹೋಗಿದ್ದಾಗ ಇದ್ದಕ್ಕಿದ್ದ ಹಾಗೆ ನೆನಪಾಗಿದ್ದು ಅರಳಗುಪ್ಪೆ. ಮೊದಲೆರಡು ಬಾರಿ ನೋಡಿದ್ದರೂ ಮತ್ತೆ ನೋಡಬೇಕೆನ್ನಿಸಿ, ಅರಳಗುಪ್ಪೆಗೆ ಹೋಗುವ ನಿರ‍್ದಾರಕ್ಕೆ ಬಂದೆ. ಅರಳಗುಪ್ಪೆ ಊರಿಗೆ ಅಂಟಿಕೊಂಡ ಹಾಗೆಯೆ ರೈಲು ನಿಲ್ದಾಣವಿದೆ. ಅಲ್ಲಿಂದ ಸ್ವಲ್ಪ ದೂರ ಊರಿನ ಒಳಗೆ ಸಾಗಿದರೆ ಸಿಗುವುದೇ ಈ ಸುಂದರ ತಾಣ.

ಇದು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನಲ್ಲಿದೆ. ಮೊದಲಿಗೆ ಇದರ ಹೆಸರು ಅಲರಿಗುಪ್ಪೆ ಎಂಬುದಾಗಿತ್ತು. ಇಲ್ಲಿ ಹೊಯ್ಸಳರ ದೊರೆ ವೀರಸೋಮೇಶ್ವರನ ಕಾಲದಲ್ಲಿ ನಿರ‍್ಮಿತವಾದ ಚನ್ನಕೇಶವ ದೇವಾಲಯ ಮತ್ತು ಅದಕ್ಕಿಂತ ಮುಂಚೆ ಗಂಗರು ಕಟ್ಟಿ, ಚಾಲುಕ್ಯರಿಂದ ಮುಂದುವರಿದ ಕಲ್ಲೇಶ್ವರ ದೇವಾಲಯಗಳಿವೆ. ಕಲ್ಲೇಶ್ವರ ದೇವಾಲಯವು ಲಿಂಗವಿರುವ ಐದು ಗುಡಿಗಳಿಂದ ಸುತ್ತುವರೆದಿದೆ, ಅದರಲ್ಲಿ 3 ಮಾತ್ರ ಸುಸ್ತಿತಿಯಲ್ಲಿವೆ.

ಚನ್ನಕೇಶವ ದೇವಾಲಯ ಏಕಕೂಟ ದೇವಾಲಯವಾಗಿದ್ದು ನಕ್ಶತ್ರಾಕಾರದ 16 ಮೂಲೆಗಳುಳ್ಳ ಜಗತಿಯ ಮೇಲೆ ಕಟ್ಟಲಾಗಿದೆ. ಇದನ್ನು ಸುಮಾರು 13 ನೇ ಶತಮಾನದ ಆಸುಪಾಸಿನಲ್ಲಿ ಅಂದರೆ ಕ್ರಿ ಶ 1250 ರಲ್ಲಿ ಕಟ್ಟಿರಬಹುದೆಂದು ಊಹಿಸಲಾಗಿದೆ.

ಈ ದೇವಾಲಯದ ಹಿನ್ನಡವಳಿ

ಪಡುವಣ ದಿಕ್ಕಿನಿಂದ ಚನ್ನಕೇಶವ ದೇವಾಲಯ

ಇತಿಹಾಸಕಾರರ ಪ್ರಕಾರ, ಒಂದು ಜಾಗದ ಹಿನ್ನಡವಳಿಯನ್ನು ತಿಳಿಯಬೇಕಾದರೆ ಪ್ರಮುಕ ಪಾತ್ರ ವಹಿಸುವುದು ಕಲ್ಬರಹ ಅತವಾ ವೀರಗಲ್ಲು ಅತವಾ ಇನ್ಯಾವುದೇ ಬರಹ/ಚಿತ್ರಗಳಿರುವಂತಹ ಪುರಾತನ ಕಲ್ಲುಗಳು. ಇಲ್ಲಿ ಯಾವುದೇ ದೊಡ್ಡದಾದ ಕಲ್ಬರಹಗಳು ದೊರೆತಿಲ್ಲ, ದೇವಾಲಯದ ಹೊರಬಾಗದ ಕೆಲವೊಂದು ವಿಗ್ರಹಗಳ ಮೇಲೆ ಶಿಲ್ಪಿಯು ಬರೆದಿರುವ ಹೆಸರಿನ ಲಿಪಿಯ ಬಳಕೆಯ ಕಾಲಕ್ಕನುಗುಣವಾಗಿ ಇದರ ಕಾಲವನ್ನು ಗುರುತಿಸಿದ್ದಾರೆ.

ದೇವಾಲಯದ ಹತ್ತಿರವೇ ಒಂದು ವೀರಗಲ್ಲಿದೆ. ಅದರಲ್ಲಿ ಕೆಳಬಾಗದಲ್ಲಿ ಸೈನಿಕರು ಯುದ್ದ ಮಾಡುತ್ತಿರುವ ಸನ್ನಿವೇಶಗಳು, ಮೇಲ್ಬಾಗದಲ್ಲಿ ಮೂರು ಕನ್ಯೆಯರ ಕೆತ್ತನೆಯಿದೆ. ಯುದ್ದದಲ್ಲಿ ಮಡಿದ ವೀರರನ್ನು ಕನ್ಯೆಯರು ಸ್ವರ‍್ಗಕ್ಕೆ ಒಯ್ಯುತ್ತಾರೆಂಬ ಪ್ರತೀತಿಯು ಹಿಂದಿನ ಬಹಳ ಕತೆಗಳಲ್ಲಿ ಕೇಳಿ ಬರುತ್ತದೆ. ಅದು ಜನರು ಸೇನೆ ಸೇರಲು ಉತ್ತೇಜನ ಕೊಡುವ ಹೇಳಿಕೆಯಾಗಿದ್ದರೂ ಇರಬಹುದು.

ಗುಡಿಯ ಹೊರಪ್ರಾಕಾರ

ಬಳಪದ ಕಲ್ಲಿನಿಂದ ಕಟ್ಟಲಾಗಿರುವ ಈ ಗುಡಿಯು ಗರ‍್ಬಗುಡಿ, ಸುಕನಾಸಿ, ನವರಂಗಗಳಿಂದ ಕೂಡಿರುವ ಸುಂದರ ತಾಣ. ನಕ್ಶತ್ರಾಕಾರದ ಜಗಲಿಯು ಸುಮಾರು ನಾಲ್ಕು ಅಡಿ ಎತ್ತರವಿದ್ದು ಅದರ ಮೇಲೆ ದೇವಾಲಯ ನಿರ‍್ಮಿತವಾಗಿದ್ದು ಮೂಡಣ ದಿಕ್ಕಿನ ಕಡೆಗಿದೆ. ದೇವಾಲಯವು ನೋಡಲು ಚಿಕ್ಕದೆನೆಸಿದರೂ ಎಲ್ಲ ಕಲ್ಲುಗಳೂ ಕೆತ್ತನೆಯಿಂದ ಕೂಡಿರುವುದು ಮತ್ತು ಬೇಲೂರನ್ನು ಹೋಲುವ ಕೆತ್ತನೆಗಳು ಬಹಳ ವಿಶೇಶವಾಗಿದೆ. ಮೂಡಣದಲ್ಲಿ ಮೆಟ್ಟಿಲುಗಳಿದ್ದು ಅದರ ಅಕ್ಕಪಕ್ಕದಲ್ಲಿ ಚಿಕ್ಕ ಗೋಪುರಗಳಿವೆ. ದೇವಾಲಯದ ಸುತ್ತಲಿನ ಕೋನಾಕಾರದ ಮೂಲೆಗಳಲ್ಲಿ ಚಿಕ್ಕ ಆನೆಗಳಿವೆ.

ಹೊರಪ್ರಾಕಾರದ ಗೋಡೆಯ ಸುತ್ತಲೂ ಕೆಳಬಾಗದಲ್ಲಿ ಒಂದು ಬಾಗದಲ್ಲಿ 5 ಸಾಲು ಇನ್ನೊಂದು ಬಾಗದಲ್ಲಿ 6 ಸಾಲಿನ ಚಿಕ್ಕ ಕೆತ್ತನೆಗಳಿವೆ. ಅವುಗಳಲ್ಲಿ ಆನೆ, ಕುದುರೆ ಸವಾರಿ, ಹೂಬಳ್ಳಿ, ಮೊಸಳೆ, ಹಂಸ, ಪುರಾಣದ ಕತೆಗಳುಳ್ಳ ಕೆತ್ತನೆಗಳಿವೆ.

ಹೊರಗೋಡೆಯ ಪ್ರಾಕಾರದ ಮೇಲಿನ ಚಿತ್ತಾರಗಳು

ಮದ್ಯಬಾಗದಲ್ಲಿ ದೊಡ್ಡ ಮೂರುತಿಗಳಿವೆ. ಈ ವಿಗ್ರಹಗಳಂತೂ ಕಣ್ಮನ ಸೆಳೆಯುತ್ತವೆ. ಪ್ರತಿ ವಿಗ್ರಹವನ್ನು ವಿಬಿನ್ನವಾಗಿ ಕೆತ್ತಲಾಗಿದೆ. ವಿಶ್ಣುವಿನ ವಿವಿದ ಅವತಾರಗಳನ್ನು ದೇವಾಲಯದ ಸುತ್ತಲೂ ಇರುವ ಈ ವಿಗ್ರಹಗಳಲ್ಲಿ ಕೆತ್ತಲಾಗಿದೆ. ಇವು ಹೊಸಹೊಳಲು, ನುಗ್ಗೆಹಳ್ಳಿ, ಸೋಮನಾತಪುರದ ವಿಗ್ರಹಗಳನ್ನು ಹೋಲುತ್ತವೆಂದು ಇತಿಹಾಸಕಾರರು ಹೇಳುತ್ತಾರೆ. ಈ ವಿಗ್ರಹಗಳ ನಡುವೆ ಬೇರೆ ವಿಗ್ರಹಗಳೂ ಇವೆ, ಅವುಗಳಲ್ಲಿ ಗಣೇಶ, ನರಸಿಂಹ, ಕ್ರಿಶ್ಣ, ಸರಸ್ವತಿಯ ವಿಗ್ರಹಗಳು ಆಕರ‍್ಶಿಸುತ್ತವೆ. ಇವುಗಳಲ್ಲಿ ಕೆಲವು ವಿಗ್ರಹಗಳು ಗುಡಿಯ ದಕ್ಶಿಣ ದಿಕ್ಕಿನಲ್ಲಿ ತದನಂತರದಲ್ಲಿ ಕಟ್ಟಲಾಗಿರುವ ನರಸಿಂಹನ ಗರ‍್ಬಗುಡಿಯ ಒಳಗೆ ಸೇರಿವೆ. ಇದೇ ವಿಗ್ರಹಗಳ ತಳಬಾಗದಲ್ಲಿ ಕೆಲವೊಂದು ಕಡೆ ‘ಹೊನ್ನೊಜ’ ಮತ್ತೆ ಕೆಲವು ಕಡೆ ‘ಹೊ’ ಎಂಬ ಕೆತ್ತನೆಗಳಿವೆ, ಇದರ ಪ್ರಕಾರವಾಗಿಯೆ ಅದು ಈ ಗುಡಿ ಕಟ್ಟಿದ ಶಿಲ್ಪಿಯ ಹೆಸರು ಮತ್ತು ಕಾಲವನ್ನು ನಿರ‍್ದರಿಸಲಾಗಿದೆ. ಇದಕ್ಕೆ ಸ್ವಲ್ಪ ಮೇಲ್ಬಾಗದಲ್ಲಿ ಮಾಮೂಲಿಯಾಗಿ ಸರಳವಾದ ಕೆತ್ತನೆಗಳು, ಅಲ್ಲಲ್ಲೇ ಕಣ್ಣು ಕುಕ್ಕುವ ಜುಮುಕಿಯಂತ ಗೋಪುರ ಕೆತ್ತನೆಗಳಿವೆ.

ಗೋಪುರ ಮತ್ತು ಕಳಸ

ಮೇಲ್ಬಾಗದಲ್ಲಿ ಚಾವಣಿಯೂ ಕೂಡ ಸುಂದರವಾಗಿ ಕಟ್ಟಲ್ಪಟ್ಟಿದ್ದು ಅದರಲ್ಲೂ ಯಕ್ಶ ಯಕ್ಶಿಣಿಯರ ವಿಗ್ರಹಗಳಿವೆ. ಗೋಪುರವಂತೂ ಒಂದು ಅದ್ಬುತವೆಂದೇ ಹೇಳಬಹುದು, ಅಂತಹ ಕೆತ್ತನೆ ಕಣ್ಣಿಗೆ ರಾಚುತ್ತದೆ. ಗೋಪುರದ ಮೇಲೆ ಕಂಗೊಳಿಸಬೇಕಾಗಿದ್ದ ಕಳಸ ಕಾಲನ ಹೊಡೆತಕ್ಕೆ ಎಂದೋ ಬಿದ್ದು ಹೋಗಿರಬಹುದು, ಅತವಾ ಶತ್ರುಗಳ ದಾಳಿಗೆ ಹಾಳಾಗಿರಬಹುದು ಅತವಾ ಯಾರೋ ಕದ್ದಿರಲೂಬಹುದು. ಹೊಯ್ಸಳರ ದೇವಾಲಯಗಳಲ್ಲಿ ವಿಶೇಶವಾಗಿ ಗೋಪುರದ ಕಳಸದ ಮುಂದೆ ಸ್ವಲ್ಪ ಕೆಳಬಾಗದಲ್ಲಿ ದೊಡ್ಡದಾದ ಪೀಟದ ಮೇಲೆ ಹೊಯ್ಸಳರ ಲಾಂಚನವಾದ ಸಳ ಹುಲಿಯನ್ನು ಕೊಲ್ಲುವ ದೊಡ್ಡದಾದ ಮೂರುತಿಯಿರುತ್ತದೆ, ಇಲ್ಲಿ ಅದು ಕೂಡ ಇಲ್ಲ, ಕಾಲಿ ಪೀಟ ಮಾತ್ರ ಉಳಿದಿದೆ, ಗತಕಾಲದ ಇತಿಹಾಸ ಸಾರುವ ಸಾಮ್ರಾಜ್ಯವನ್ನಾಳಿದ ರಾಜನಿಲ್ಲದ ಸಿಂಹಾಸನದ ಹಾಗೆ.

ಮುಕ್ಯ ದೇವಾಲಯದ ಗರ‍್ಬಗುಡಿಯಲ್ಲಿ ಕೇಶವನ ಸುಂದರವಾದ ಮೂರ‍್ತಿಯಿದೆ. ಈ ವಿಗ್ರಹವು ಸುಮಾರು 6 ಅಡಿ ಎತ್ತರದ ಪೀಟದ ಮೇಲೆ ಸ್ತಾಪನೆಯಾಗಿದ್ದು, ಇದರ ಪ್ರಬಾವಳಿಯ ಮೇಲೆ ವಿಶ್ಣುವಿನ ಹತ್ತು ಅವತಾರಗಳನ್ನು ಕೆತ್ತಲಾಗಿದೆ. ಅಕ್ಕ ಪಕ್ಕದಲ್ಲಿ ಮಾಮೂಲಿಯಂತೆ ಶ್ರೀದೇವಿ ಬೂದೇವಿಯರ ಕೆತ್ತನೆಯಿದೆ. ಎಡಬಾಗದಲ್ಲಿ ಗಣೇಶನ ವಿಗ್ರಹವಿದ್ದು, ಬಲಬಾಗದಲ್ಲಿ ಕೋಣನ ಮೇಲೆ ಬಲಗಾಲಿಟ್ಟು ಮಹಿಶನನ್ನು ಸಂಹರಿಸುತ್ತಿರುವ ಬಳಪದ ಕಲ್ಲಿನ ಮಹಿಶಾಸುರ ಮರ‍್ದಿನಿಯ ವಿಗ್ರಹವಿದೆ. ಈ ವಿಗ್ರಹದ ಕೆಳಬಾಗದಲ್ಲಿ ಹೊಯ್ಸಳರ ಲಾಂಚನವಿದೆ. ಇದನ್ನು ಹುಡುಕುವುದೇ ದೊಡ್ಡ ಸಾಹಸವಾಗಬಹುದು. ಮೊದಲೇ ತಿಳಿದಿದ್ದರೆ ಅಶ್ಟು ಕಶ್ಟವೇನಲ್ಲ.

ಸುಕನಾಸಿಯ ದ್ವಾರದಲ್ಲಿ ಸಂಗೀತಗಾರರ ಕೆತ್ತನೆಗಳೂ ಇವೆ. ಒಳಬಾಗದ ಕಂಬಗಳ ಸೂಕ್ಶ್ಮ ಕುಸುರಿ ಕೆತ್ತನೆ ಅಂದವನ್ನು ಮತ್ತಶ್ಟು ಹೆಚ್ಚಿಸಿದೆ. ಈ ನವರಂಗದ ಕಂಬಗಳು ಬೇಲೂರು-ಹಳೇಬೀಡಿನ ಕಂಬಗಳಿಗೆ ಸೆಡ್ಡು ಹೊಡೆಯುವಶ್ಟು ಸುಂದರವಾಗಿವೆ. ನವರಂಗದಲ್ಲಿರುವ ದೊಡ್ಡ ಕೇಶವನ ವಿಗ್ರಹ ಮೊದಲು ಗರ‍್ಬಗುಡಿಯ ಒಳಗಿತ್ತೆಂದೂ ಹೇಳಲಾಗುತ್ತದೆ.

ಉಗ್ರ ನರಸಿಂಹನ ಗುಡಿ

ಮುಕ್ಯ ಗುಡಿಗೆ ಅಂಟಿಕೊಂಡಂತೆ ದಕ್ಶಿಣ ದಿಕ್ಕಿನಲ್ಲಿ ನರಸಿಂಹನ ಗುಡಿಯಿದೆ. ಇದು ಕಾಲಾಂತರದಲ್ಲಿ ಸೇರಿಸಲಾಗಿರುವ ದೇವಾಲಯ. ಏಕಕೂಟ ದೇವಾಲಯಕ್ಕೆ ತದನಂತರದಲ್ಲಿ ಸೇರಿಸಿಲಾಗಿರುವ ಬಾಗವಾದ್ದರಿಂದ ಮುಕ್ಯ ದೇವಾಲಯದ ಸ್ವಲ್ಪ ಹೊರಗೋಡೆ, ಹೊರಬಾಗದಲ್ಲಿ ಕಾಣಬೇಕಿದ್ದ ಎಶ್ಟೋ ಕೆತ್ತನೆಗಳು ಕೂಡ ಇದರ ಒಳಗೆ ಸೇರಿಕೊಂಡಿವೆ. ಮುಕ್ಯ ದೇವಾಲಯದ ಅಂದ ಕೆಡಿಸಲು ಬೇರೆ ಯಾರೋ ತಲೆ ಓಡಿಸಿರುವಂತೆ ಇದೆ. ಇದರ ಒಳಗೆ ನರಸಿಂಹನ ವಿಗ್ರಹವಿದೆ. ಮೊದಲಿದ್ದ ವಿಗ್ರಹ ಬಗ್ನವಾಗಿದ್ದರಿಂದ ತದನಂತರದಲ್ಲಿ ಬೇರೆ ವಿಗ್ರಹವನ್ನು ಸ್ತಾಪಿಸಿದ್ದಾರೆ. ಇದನ್ನು ಮುಕ್ಯ ದೇವಾಲಯದಿಂದ ಬೇರ‍್ಪಡಿಸಿ ಸ್ತಳಾಂತರಗೊಳಿಸುವ ಮಾತುಕತೆಗಳು 1935ರಲ್ಲೇ ನಡೆದಿದ್ದರೂ, ಊರಿನವರ ಒಮ್ಮತವಿಲ್ಲದ ಕಾರಣ ಇನ್ನೂ ಹಾಗೆಯೇ ಇದೆ.

ಅರಳಗುಪ್ಪೆಗೆ ತಲುಪುವುದು ಹೇಗೆ?

ಬೆಂಗಳೂರಿನಿಂದ ರೈಲಿನಲ್ಲಿ ಸುಲಬಕ್ಕೆ ತಲುಪಬಹುದಾದ ಜಾಗ ಇದು. ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಶಿವಮೊಗ್ಗ ಹೋಗುವ ಎಲ್ಲ ಪ್ಯಾಸೆಂಜರ್ ರೈಲುಗಳು ಇಲ್ಲಿ ನಿಲ್ಲುತ್ತವೆ. ರಸ್ತೆ ಮುಕಾಂತರ ಹೋಗುವುದಾದರೆ, ಕಿಬ್ಬನಹಳ್ಳಿ ಕ್ರಾಸ್ ಅತವಾ ತಿಪಟೂರು ಮೂಲಕ ಹೋಗಬಹುದು.

ಸರ‍್ಕಾರದಿಂದ ನೇಮಿತವಾಗಿರುವ ಒಬ್ಬ ಕಾವಲುಗಾರ ಯಾವಾಗಲೂ ಇಲ್ಲಿರುತ್ತಾನೆ. ಸಂಜೆ 5.30 ರ ನಂತರ ಒಳಗೆ ಹೋಗಲು ಬಿಡುವುದಿಲ್ಲ. ಕಾರಣ, ಇಲ್ಲೂ ಕೂಡ ನಿದಿ ಅರಸಿ ಬಂದ ಕದೀಮರ ಉದಾಹರಣೆಗಳಿವೆ.

ಇಲ್ಲಿಯ ವಿಶೇಶವೇನೆಂದರೆ, ಹೊಯ್ಸಳರು ದೇವಾಲಯ ಕಟ್ಟಿದ ಕಡೆ ಶಿವ ಮತ್ತು ವಿಶ್ಣು ಇಬ್ಬರ ದೇವಾಲಯಗಳನ್ನೂ ಕಟ್ಟಿಸಿದ್ದಾರೆ. ಜೊತೆಗೆ ಒಂದು ಬಸದಿಯನ್ನೂ ಕಟ್ಟಿಸುತ್ತಾರೆಂದು ಹೇಳುತ್ತಾರೆ ಮತ್ತು ಕೆಲವೊಂದು ಕಡೆ ಇದಕ್ಕೆ ಸಾಕ್ಶಿಗಳೂ ಇವೆ. ಆದರೆ ಇಲ್ಲಿ ಮಾತ್ರ ಕಲ್ಲೇಶ್ವರ ದೇವಾಲಯ ಮೊದಲೇ ಇದ್ದ ಕಾರಣದಿಂದಲೇನೊ ಚನ್ನಕೇಶವನ ದೇವಾಲಯ ಮಾತ್ರ ಕಟ್ಟಿಸಿದ್ದಾರೆ.

ನಮ್ಮ ನಾಡು ಎಂದಿನಿಂದಲೂ ಎಲ್ಲ ದರ‍್ಮೀಯರನ್ನು ಸಮಾನವಾಗಿ ಕಂಡ ರಾಜರುಗಳನ್ನು ಕಂಡಿದೆ. ಹೊಯ್ಸಳರು ಮೂಲತಹ ಯಾದವ ಕುಲಕ್ಕೆ ಸೇರಿದವರಾದರೂ ಕಾಲಾಂತರದಲ್ಲಿ ಜೈನ ದರ‍್ಮವನ್ನು ಸ್ವೀಕರಿಸುತ್ತಾರೆ ತದನಂತರ ವಿಶ್ಣುವರ‍್ದನನು ರಾಮಾನುಜಾಚಾರ‍್ಯರ ಪ್ರಬಾವಕ್ಕೊಳಗಾಗಿ ವೈಶ್ಣವ ದರ‍್ಮವನ್ನು ಸ್ವೀಕರಿಸುತ್ತಾನೆ. ಆದರೂ ಕೂಡ ಶಿವಬಕ್ತರಿಗೋಸ್ಕರ ಶಿವ ದೇವಾಲಯಗಳನ್ನು ಕಟ್ಟಿಸುತ್ತಾರೆ.

(ಚಿತ್ರ ಸೆಲೆ: ದೇವರಾಜ್ ಮುದಿಗೆರೆ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: