‘ಕ್ರಿಪದಿಗಳು’ – ಕ್ರಿಕೆಟ್ ತ್ರಿಪದಿಗಳು

– ಚಂದ್ರಗೌಡ ಕುಲಕರ‍್ಣಿ.

(ಬರಹಗಾರರ ಮಾತು: ಕನ್ನಡ ದೇಸಿನುಡಿಯಲ್ಲಿ ಮೂಡಿ ಬಂದ ಕ್ರಿಕೆಟ್ ಕುರಿತ ಮೂರು ಸಾಲಿನ ಕವಿತೆಗಳನ್ನು ಕ್ರಿಪದಿಗಳು ಎನ್ನಲಾಗಿದೆ.)

ಸಿಡಿಸುತ್ತ ಸಿಕ್ಸರು ಗುಡುಗುವರು ದಾಂಡಿಗರು
ಅಡಿಗಡಿಗೆ ಕಾಡಿ ಚೆಂಡಿಗನ! ವಿಶ್ವಾಸ
ಕಡಿದು ಹಾಕುವರು ಕಲ್ಮೇಶ!

ಸಡಿಲಾದ ಚೆಂಡಿಗೆ ಸಿಡಿಲಂತ ಸಿಕ್ಸರು
ಗಡಿ ದಾಟಿ ಮೇಲೆ ಹಾರುವುದು! ನೋಡುಗರ
ಎಡಬಲದಲ್ಲಿ ಕಲ್ಮೇಶ!

ಚೆಂಡಿಗನ ಎಸೆತವನು ಬೌಂಡರಿಗೆ ಅಟ್ಟುವ
ದಾಂಡಿಗರ ಹಿರಿಮೆ ಕಂಡಂತ! ನೋಡುಗರು
ಕೊಂಡಾಡತಾರ ಕಲ್ಮೇಶ!

ಬೀಸುವ ದಾಂಡಿಗನ ದೋಶವನು ಅರಿತವರು
ಕಾಸ ಬಲಿಎಸೆತ ಹಾಕುವರು! ತಡಮಾಡ್ದ…
ಗಾಸಿ ಮಾಡುವರು ಕಲ್ಮೇಶ!

ಓಟಗಳಿಸಲು ಬಂದ ಗಾಟಿ ದಾಂಡಿಗನನ್ನು
ಬೇಟೆಯಾಡುವರು ಸ್ಪಿನ್ನಿಗರು! ಬಲೆ ಬೀಸಿ
ಏಟು ಹಾಕುವರು ಕಲ್ಮೇಶ!

ತಿರುವು ಚೆಂಡಿನ ಗತಿಯ ಗುರುತಿಸಲಾರದೆ
ಬರದಲ್ಲಿ ಬ್ಯಾಟು ಬೀಸಿದ! ದಾಂಡಿಗನು
ಮರಳುವನು ಮನೆಗೆ ಕಲ್ಮೇಶ!

(ಚಿತ್ರ ಸೆಲೆ: iplt20.com)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: