ಸೊಳ್ಳೆ ಬತ್ತಿ ಹೇಗೆ ಸೊಳ್ಳೆಯನ್ನು ಓಡಿಸುತ್ತೆ ಗೊತ್ತಾ?

– ನಾಗರಾಜ್ ಬದ್ರಾ.

ಸೊಳ್ಳೆಗಳಿಂದ ಕಿರಿಕಿರಿ ಅನುಬವಿಸಿದವರು ಯಾರಿಲ್ಲ ಹೇಳಿ. ಸೊಳ್ಳೆಗಳು ನಮ್ಮ ನಿದ್ದೆಯನ್ನು ಹಾಳುಮಾಡುವುದಲ್ಲದೇ ಮಯ್ಯೊಳಿತಿಗೂ ತೊಂದರೆ ಉಂಟುಮಾಡುತ್ತವೆ. ಇವನ್ನು ಓಡಿಸಲು ಸೊಳ್ಳೆ ಬತ್ತಿ, ಮಸ್ಕಿಟೊ ಮ್ಯಾಟ್, ಮಸ್ಕಿಟೊ ರಿಪೆಲ್ಲಂಟ್ ಲಿಕ್ವಿಡ್, ಲೋಶನ್ ಹೀಗೆ ಬಗೆ ಬಗೆಯ ಉತ್ಪನ್ನಗಳನ್ನು ಬಳಸುತ್ತಾರೆ. ಹಾಗಾದರೆ ಇವುಗಳನ್ನು ಮೊದಲು ಯಾರು ಕಂಡುಹಿಡಿದರು? ಇವುಗಳು ಹೇಗೆ ಕೆಲಸ ಮಾಡುತ್ತವೆ? ಹೀಗೆ ಹಲವಾರು ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತವೆ.

ಸೊಳ್ಳೆ ಬತ್ತಿಯನ್ನು ಮೊದಲು ಕಂಡುಹಿಡಿದವರು ಯಾರು?

ಹಿಂದಿನ ಕಾಲದಲ್ಲಿ ಸೊಳ್ಳೆಗಳನ್ನು ಓಡಿಸಲು ನೈಸರ‍್ಗಿಕ ವಸ್ತುಗಳನ್ನು ಬಳಸುತ್ತಿದ್ದರು. ಸೇವಂತಿಗೆ (Chrysanthemum) ಅಂತಹ ಗಿಡದ ಹೂವುಗಳಿಂದ ಸಿಗುವ ಪೈರೆತ್ರಮ್ (Pyrethrum) ಪುಡಿ ಹಾಗೂ ಹೊಟ್ಟು ಎರಡನ್ನು ಬೆರೆಸಿ ಸುಡುತ್ತಿದ್ದರು. ಇದನ್ನೇ ಆದಾರವಾಗಿಸಿಕೊಂಡು 18 ನೇ ಶತಮಾನದ ಕೊನೆಯಲ್ಲಿ ಜಪಾನಿನ ವ್ಯಾಪಾರಿ ಈಚೀರು ಉಯೇಮಾ (Eiichiro Ueyama) ಎಂಬುವರು ಸೊಳ್ಳೆಗಳನ್ನು ಓಡಿಸುವ ರಾಸಾಯನಿಕ ಉತ್ಪನ್ನವೊಂದನ್ನು ಕಂಡುಹಿಡಿದರು.

ಉಯೇಮಾ ಅವರು ಮೊದಲ ಬಾರಿಗೆ ಗಂಜಿಯ ಪುಡಿ (starch powder), ಒಣಗಿದ ಮ್ಯಾಂಡರಿನ್ ಕಿತ್ತಳೆ ಸಿಪ್ಪೆಯ ಪುಡಿ ಹಾಗೂ ಪೈರೆತ್ರಮ್ ಪುಡಿಯನ್ನು ಬೆರೆಸಿ ಊದುಬತ್ತಿಯನ್ನು ತಯಾರಿಸಿದರು. ಈ ಊದುಬತ್ತಿ ತನ್ನ ಹೊಗೆಯಿಂದ ಕೇವಲ 40 ನಿಮಿಶಗಳ ಕಾಲ ಮಾತ್ರ ಸೊಳ್ಳೆಗಳನ್ನು ಓಡಿಸುತ್ತಿತ್ತು. ಬಳಿಕ ಉಯೇಮಾ ಅವರ ಹೆಂಡತಿ ಯೂಕಿ (Yuki) ಅವರು ಸೊಳ್ಳೆ ಬತ್ತಿಗಳು ತುಂಬಾ ಹೊತ್ತು ಬರಲು ಅವುಗಳನ್ನು ಇನ್ನೂ ದಪ್ಪ, ಉದ್ದ ಹಾಗೂ ಸುರುಳಿ ಆಕಾರದಲ್ಲಿ ಮಾಡಬೇಕು ಎಂದು ಸಲಹೆ ನೀಡಿದರು. ಆ ಸಲಹೆಯಂತೆ, ಸರಣಿ ಪ್ರಯೋಗಗಳ ಬಳಿಕ 1902 ರಲ್ಲಿ ಉಯೇಮಾ ಅವರು ದಪ್ಪನಾದ ಸೊಳ್ಳೆ ಬತ್ತಿಗಳನ್ನು ತುಂಡುಗಳನ್ನಾಗಿ ಕತ್ತರಿಸಿ, ಅವುಗಳನ್ನು ಕೈಯಾರೆ ಸುರುಳಿ ಆಕಾರದಲ್ಲಿ ಜೋಡಿಸಿ, ನಿದಾನವಾಗಿ ಸುಡುವ ಹಾಗೂ ಹೆಚ್ಚು ಹೊತ್ತು ಪರಿಣಾಮ ಬೀರುವ ಸೊಳ್ಳೆ ಬತ್ತಿಗಳನ್ನು ತಯಾರಿಸಿದರು.

ಎರಡನೆಯ ವಿಶ್ವ ಯುದ್ದದ ಬಳಿಕ ಉಯೇಮಾ ಅವರು ಡೈನಿಹೊನ್ ಜೊಚುಗಿಕು ಕೊ. ಲಿಮಿಟೆಡ್ (Dainihon Jochugiku Co. Ltd) ಎಂಬ ಹೆಸರಿನ ಕಂಪನಿ ಆರಂಬಿಸಿದರು. ಇದು ಚೀನಾ, ತೈಲ್ಯಾಂಡ್ ಹೀಗೆ ಹಲವಾರು ದೇಶಗಳಲ್ಲಿ ಅಲ್ಲಿನ ಗೊತ್ತುಪಾಡುಗಳಿಗೆ ಅನುಗುಣವಾಗಿ ಸೊಳ್ಳೆಗಳನ್ನು ಓಡಿಸುವ ಉತ್ಪನ್ನಗಳನ್ನು ತಯಾರಿಸಲು ಆರಂಬಿಸಿತು. 1957 ರವರೆಗೆ ಸೊಳ್ಳೆ ಬತ್ತಿಗಳನ್ನು ಕೈಯಿಂದಲೇ ತಯಾರಿಸುತ್ತಿದ್ದರು, ಬಳಿಕ ಬಿಣಿಗೆಗಳನ್ನು(machines) ಬಳಸತೊಡಗಿದರು.

ಸೊಳ್ಳೆ ಬತ್ತಿಗಳು ಹೇಗೆ ಕೆಲಸ ಮಾಡುತ್ತವೆ?

ಈ ಬತ್ತಿಗಳು ಹೇಗೆ ಸೊಳ್ಳೆಗಳನ್ನು ಓಡಿಸುತ್ತವೆ ಎಂಬುದನ್ನು ತಿಳಿಯುವ ಮುನ್ನ ಸೊಳ್ಳೆಗಳು ನಾವಿರುವ ಜಾಗವನ್ನು ಹೇಗೆ ಕಂಡುಹಿಡಿಯುತ್ತವೆ ಎಂಬುದನ್ನು ತಿಳಿಯಬೇಕು. ನಮ್ಮ ಉಸಿರಾಟದಿಂದ ಹೊರಬರುವ ಕಾರ‍್ಬನ್ ಡೈ ಆಕ್ಸೈಡ್ ನ ವಾಸನೆಯನ್ನು ಸೊಳ್ಳೆಗಳು ತುಂಬಾ ಚೆನ್ನಾಗಿ ಅರಿಯಬಲ್ಲವು. ಸೊಳ್ಳೆಯಲ್ಲಿರುವ ಅರಿಕೊಂಬುಗಳಲ್ಲಿ (antenna) ಹಲವಾರು ಬಗೆಯ ಪಡೆಕಗಳು(receptor) ಇರುತ್ತವೆ ಇವು ವಾಸನೆಯನ್ನು ಕಂಡುಹಿಡಿಯಲು ನೆರವಾಗುವತ್ತವೆ. ನಮ್ಮ ಮೂಗಿನಿಂದ ಹೊರಬರುವ ಕಾರ‍್ಬನ್ ಡೈ ಆಕ್ಸೈಡ್ ನ ವಾಸನೆಯನ್ನು ಸುಮಾರು 10 ರಿಂದ 50 ಮೀಟರ್ ದೂರದಿಂದಲೇ ಕಂಡುಹಿಡಿದುಕೊಂಡು ನಮ್ಮ ಕಡೆಗೆ ಬರುತ್ತವೆ. ಬಳಿಕ ಸೊಳ್ಳೆಗಳು ಸುಮಾರು 5 ರಿಂದ 10 ಮೀಟರ್ ಗಳಶ್ಟು ಹತ್ತಿರಕ್ಕೆ ಬದಂತೆ ಅವುಗಳ ಕಣ್ಣಿಗೆ ನಾವು ಕಾಣಿಸಿಕೊಳ್ಳುತ್ತೇವೆ. ಆಮೇಲೆ ನಮ್ಮ ಮೈಯಿಂದ ಸುಮಾರು 20 ಸೆಂಟಿಮೀಟರ್ ಗಳಶ್ಟು ಹತ್ತಿರಕ್ಕೆ ಬಂದಾಗ ನಮ್ಮ ಮೈಯ ಬಿಸಿಯನ್ನು ಕಂಡುಹಿಡಿದು, ನೆತ್ತರನ್ನು ಹೀರುತ್ತವೆ.

ಇನ್ನು ಸೊಳ್ಳೆ ಬತ್ತಿಯನ್ನು ಸುಟ್ಟಾಗ ಅದರಲ್ಲಿರುವ ರಾಸಾಯನಿಕ ಪರ‍್ದಾತಗಳು ಹೊಗೆಯ ರೂಪದಲ್ಲಿ ಹೊರಗೆ ಬರುತ್ತವೆ. ಇಲ್ಲವೇ ಮಸ್ಕಿಟೊ ರಿಪೆಲ್ಲಂಟ್ ಲಿಕ್ವಿಡ್ ಅನ್ನು ಮಿಂಚಿಗೆ (electricity current) ಅಳವಡಿಸಿದಾಗ ಅವುಗಳು ಆವಿಯ ರೂಪದಲ್ಲಿ ಹೊರಗೆ ಬರುತ್ತವೆ. ಈ ಹೊಗೆ ಇಲ್ಲವೇ ಆವಿ ಸೊಳ್ಳೆಯ ಅರಿಕೊಂಬುಗಳಲ್ಲಿರುವ ವಾಸನೆಯ ಪಡೆಕಗಳನ್ನು ಗೊಂದಲಕ್ಕೀಡು ಮಾಡಿ, ಕಾರ‍್ಬನ್ ಡೈ ಆಕ್ಸೈಡ್ ನ ವಾಸನೆಯನ್ನು ಕಂಡುಹಿಡಿಯದಂತೆ ಮಾಡುತ್ತವೆ. ಹೀಗಾಗಿ ಇವು ನಾವಿರುವ ಜಾಗವನ್ನು ಸರಿಯಾಗಿ ತಿಳಿಯಲಾಗದೆ ಹಿಂತಿರುಗುತ್ತವೆ. ಇದಲ್ಲದೇ ಕೆಲವು ಸೊಳ್ಳೆಬತ್ತಿಗಳಿಂದ ಬರುವ ಹೊಗೆ ಇಲ್ಲವೇ ಆವಿಯನ್ನು ಸೊಳ್ಳೆಗಳು ಉಸಿರಾಡಿದಾಗ ಅದರಲ್ಲಿರುವ ರಾಸಾಯನಿಕ ಪರ‍್ದಾತಗಳು ಅವುಗಳ ಮೈಯನ್ನು ಸೇರಿ, ಉಸಿರಾಟದ ಏರ‍್ಪಾಡನ್ನು ಹಾಳು ಮಾಡುವುದಲ್ಲದೇ ಹೊಟ್ಟೆಯಲ್ಲಿ ನಂಜನ್ನು ಕೂಡ ಹುಟ್ಟು ಹಾಕುತ್ತವೆ. ಇಂತಹ ಪರಿಸ್ತಿತಿಯನ್ನು ಎದುರಿಸಲಾಗದೆ ಸೊಳ್ಳೆಗಳು ಅಲ್ಲಿಂದ ಓಡಿ ಹೋಗುತ್ತವೆ.

ಸಾಮಾನ್ಯವಾಗಿ ಸೊಳ್ಳೆ ಓಡಿಸುವ ಉತ್ಪನ್ನಗಳಲ್ಲಿ ಕಂಡುಬರುವ ರಾಸಾಯನಿಕ ಪರ‍್ದಾತಗಳು:

1) ಪೈರೆತ್ರಮ್ ( pyrethrum ) – ಸೇವಂತಿಗೆ ಅಂತಹ ಗಿಡದ ಹೂವುಗಳಿಂದ ಸಿಗುವ ಒಂದು ಬಗೆಯ ನೈಸರ‍್ಗಿಕ ಪುಡಿ.
2) ಪೈರೆತ್ರಿನ್ಸ್ (Pyrethrins) – ಪೈರೆತ್ರಮ್ ನಿಂದ ಹೊರತೆಗೆದ ರಾಸಾಯನಿಕ ಕೀಟನಾಶಕಗಳು.
3) ಅಲೆತ್ರಿನ್ (Allethrin ) – ಪೈರೆತ್ರಾಯ್ಡ್ ನ ಮೊದಲ ರೂಪ (ಪೈರೆತ್ರಾಯ್ಡ್ ಎಂಬುದು ನೈಸರ‍್ಗಿಕ ಪೈರೆತ್ರಿನ್ ಗಳಿಗೆ ಹೋಲುವಂತಹ, ಸಾವಯವವಾಗಿ ತಯಾರಿಸಿದ ಪದಾರ‍್ತ).
4) ಎಸ್ಬಿಯೊತ್ರಿನ್ (Esbiothrin) – ಅಲೆತ್ರಿನ್ ನ ಒಂದು ರೂಪ
5) ಬಟ್ಯಾಲೆಟೆಡ್ ಹೈಡ್ರೋಕ್ಸಿಟೌಲೀನ್ ( Butylated hydroxytoluene) – ಪೈರೆತ್ರಾಯ್ಡ್ ಅನ್ನು ಸುಡುವಾಗ ಅದರ ಪರಿಣಾಮವು ಕಡಿಮೆಯಾಗದಂತೆ ತಡೆಯಲು ಬಳಸುತ್ತಾರೆ.
6) ಪಿಪೆರೊನಲ್ಯ್ ಬುಟೊಕ್ಸೈಡ್ (Piperonyl butoxide – PBO) – ಪೈರೆತ್ರಾಯ್ಡ್ ನ ಪರಿಣಾಮವನ್ನು ಹೆಚ್ಚಿಸಲು ಬಳಸುತ್ತಾರೆ
7) ಎನ್ – ಆಕ್ಟೈಲ್ ಬೈಸೈಕ್ಲೊಹೆಪ್ಟೇನ್ ಡಿಕಾರ‍್ಬಾಕ್ಸಿಮೈಡ್ (N-Octyl bicycloheptene dicarboximide – MGK 264) – ಪೈರೆತ್ರಾಯ್ಡ್ ನ ಪರಿಣಾಮವನ್ನು ಹೆಚ್ಚಿಸಲು ಬಳಸುತ್ತಾರೆ.

ನಾವು ಸೊಳ್ಳೆಗಳ ಕಿರಿಕಿರಿಯಿಂದ ತಪಿಸಿಕೊಳ್ಳಬೇಕೆಂದರೆ ಸೊಳ್ಳೆ ಬತ್ತಿ, ಮಸ್ಕಿಟೊ ರಿಪೆಲ್ಲಂಟ್ ಲಿಕ್ವಿಡ್, ಮಸ್ಕಿಟೊ ಮ್ಯಾಟ್ ಮುಂತಾದವು ನಮ್ಮ ಹತ್ತಿರದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇಲ್ಲವೇ ಸೊಳ್ಳೆ ಪರದೆಯನ್ನು ಬಳಸಬೇಕು.

(ಮಾಹಿತಿ ಸೆಲೆ: wikipedia.org, insectcop.netquora.comkrishna.nic.inearthsky.org, phys.org)
(ಚಿತ್ರ ಸೆಲೆ: earthsky.org, malariasite.com, maes-hughes.net)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Ajit K says:

    ತಿಳಿವುಳ್ಳ ಅಂಕಣ

ಅನಿಸಿಕೆ ಬರೆಯಿರಿ: