‘ನಮ್ಮೂರೂಟ ಉಣಬರ್ರಿ’

– ಹಜರತಅಲಿ.ಇ.ದೇಗಿನಾಳ.


ಬಿಸಿ ಬಿಸಿ ರೊಟ್ಟಿ ಬಿಳಿಜ್ವಾಳ ರೊಟ್ಟಿ
ಮುಳಗಾಯಿ ಪಲ್ಲೆ ತಿನಬರ್ರಿ
ಕೆನಿಕೆನಿ ಮೊಸರ ಬಳ್ಳೊಳ್ಳಿ ಕಾರ
ನಮ್ಮೂರೂಟ ಉಣಬರ್ರಿ

ಶೇಂಗಾ ಹೋಳಿಗಿ ಹೆಸರಿನ ಹೋಳಿಗಿ
ಹೂರಣ ಹೋಳಿಗಿ ಗಮ್ಮತ್ತರಿ
ಗೋದಿ ಹುಗ್ಗಿ ಹಾಲ ಹುಗ್ಗಿ
ತುಪ್ಪದ ಜೋಡಿ ರುಚಿ ನೋಡ್ರಿ

ಅಗಸಿ ಹಿಂಡಿ ಶೇಂಗಾ ಹಿಂಡಿ
ಜ್ವಾಳದ ನುಚ್ಚಿನ ಹುಳಬಾನ
ಪುಂಡಿಪಲ್ಲೆ ಕುಸುಬಿ ಪಲ್ಲೆ
ತಯಾರೈತಿ ಬಾರಣ್ಣ

ಎಣ್ಣಿಚಪಾತಿ ಬೆಲ್ಲದ ಬ್ಯಾಳಿ
ನಮ್ಮ ಊಟ ಅಮ್ರುತರೀ
ನುಚ್ಚ ಮಜ್ಜಗಿ ಕುಡಕೊಂಡು
ಬೇವಿನ ಗಿಡಕ ಮಲಕೋರಿ

ಜ್ವಾಳದ ನುಚ್ಚ ಗೊಂಜಾಳ ನುಚ್ಚ
ಟಮಾಟಿ ಸಾರ ಸಿಹಿ ಐತಿ
ನೆವಣಿ ಅನ್ನ ತಿಂದ ನೋಡ್ರಿ
ಕಟ್ಟಿನ ಸಾರಕೂಡೈತಿ

ಕಡಲಿ ಉಸುಳಿ ಮೂಕಣಿ ಉಸುಳಿ
ಏನ ಮಜಾ ಕೋಸಂಬ್ರಿ
ಚಜ್ಜಿರೊಟ್ಟಿ ನೆನಪಿಸಿಕೊಂಡ್ರ
ಬಾಯಾಗ ನೀರ ಬರತಾವರಿ

ನಮ್ಮೂರೂಟ ಬಾಳ ಕಾರ
ಉಣ್ಣುವಾಗ ಹುಶಾರೀ
ಚಟ್ನಿ ಗಿಟ್ನಿ ತಿನ್ನುವಾಗ
ಪಕ್ಕಕ ನೀರ ಇಟಗೋರಿ

ನಮ್ಮೂರೂಟ ಬಾಳ ಪುಶ್ಟಿ
ಎಲ್ಲಾ ವಿಟಮಿನ ಕೂಡ್ಯಾವರೀ
ಹೇಳೂದರೊಳಗ ಮಜಾಇಲ್ಲ
ಬಂದು ಒಮ್ಮೆ ಉಂಡು ನೋಡ್ರಿ

ಕೊಬ್ಬರಿ ಕಡಬ ಹೂರಣ ಗಡಬ
ತುಪ್ಪದಾಗ ಎದ್ದಿ ತಿನಬೇಕು
ಇಂತ ಊಟ ಉಣಬೇಕಂದ್ರ
ಬಿಜಾಪೂರಕ ಬರಬೇಕು

( ಚಿತ್ರ ಸೆಲೆ: dreamysap.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications