ಪುಟ್ಟ ಕಂದ.. ನೀ ನಗುತಿರೇ ಚಂದ
– ಶ್ರೀಕಾವ್ಯ.
ಮುದ್ದು ಪುಟ್ಟ ಕಂದ
ನೀ ನಗುತಿರೇ ಚಂದ
ನೋಡಲು ಅದುವೇ ಆನಂದ
ನಿನ್ನ ತೊದಲು ನುಡಿ
ಅದುವೇ ಎಲ್ಲರ ಪ್ರೀತಿಗೆ ಮುನ್ನುಡಿ
ನೀ ಆಡುತಿರಲು ಮಾತು
ನಿನಗಲ್ಲಿಹುದು ಸಿಹಿ ಮುತ್ತು
ನೀ ಮೊದಲಿಡಲು ಪುಟ್ಟ ಹೆಜ್ಜೆ
ಅದೇ ಹೆತ್ತವಳ ಮನದಲ್ಲಿ ಸುಂದರ ಹಚ್ಚೆ
ನೀ ಇಡುತಿರಲು ಹೆಜ್ಜೆ ಮುಂದೆ ಮುಂದೆ
ನಿನ್ನ ಹಿಡಿಯಲು ಎಲ್ಲರೂ ನಿನ್ನ ಹಿಂದೆ ಹಿಂದೆ
ನೀ ಅಳಲು ಶುರು ಮಾಡಲು
ನಿಲ್ಲಿಸಲು ಎಲ್ಲರ ಪರಿಪಾಟಲು
ಆಗ ಎತ್ತಿ ಮುದ್ದಿಸೇ ನಿನ್ನ
ನಗುವುದ ನೋಡಲು ಬಲು ಚೆನ್ನ
ಊಟವ ನಿನಗೆ ತಿನ್ನಲು ತಂದಿರಲು ಅಮ್ಮ
ತಿನ್ನಿಸಲು ಬಂದಿಹನು ಚಂದಮಾಮ
ನಿನಗೆ ಅವಳಿಡಲು ಒಂದು ತುತ್ತು
ತಿರುಗಾಡಿಸಬೇಕು ಹತ್ತಾರು ಸುತ್ತು
ನಿನಗೆ ಇದ್ದೇ ಇರುವುದು ಹಟ
ಎಲ್ಲರ ಕಣ್ತಪ್ಪಿಸಿ ಹೊರಗೋಡುವ ಚಟ
ಕಾಯಲು ಇರಬೇಕು ಒಬ್ಬರು ನಿನ್ನೊಂದಿಗೆ
ಇಲ್ಲದಿದ್ದರೆ ಕೇಳಬೇಕಾಗುವುದು ನಿನಗಾಗಿ ಅಕ್ಕಪಕ್ಕದವರೊಂದಿಗೆ
ಏನಾದರೂ ಆಗಲಿ ಪುಟ್ಟ ಮುದ್ದು ಕಂದ
ನೀ ಮಾಡುವುದು ಕೇಳುವುದೆಲ್ಲಾ ಒಂದು ಚೆಂದ
ನಿನ್ನ ನೋಡಲು ಮೂಡುವುದು ಮೊಗದಲ್ಲಿ ಮಂದಹಾಸ
ನೋವ ಮರೆಸಿ ನಗುವು ಮೂಡುತಿದೆ ಎಲ್ಲ ನಿನ್ನ ಸಹವಾಸ
( ಚಿತ್ರ ಸೆಲೆ: kimhunter.ca )
ಇತ್ತೀಚಿನ ಅನಿಸಿಕೆಗಳು