ಕನ್ನಡದ ಮೊದಲ ಕಲ್ಬರಹವೀಗ ತಾಳಗುಂದದ್ದು

– ಕಿರಣ್ ಮಲೆನಾಡು.

ಕನ್ನಡ ನುಡಿಯ ಹಳಮೆಯನ್ನು ಸಾರುವಲ್ಲಿ ಒಂದಲ್ಲ ಒಂದು ಕುರುಹುಗಳು ಸಿಗುತ್ತಲಿವೆ. ಸುಮಾರು ಕ್ರಿ.ಶ. 350 – 1,000 ರ ಹೊತ್ತಿನ ನಡುವೆ ಕನ್ನಡದಲ್ಲಿ 2,020 ರಶ್ಟು ಕಲ್ಬರಹಗಳು ಮತ್ತು ತಾಮ್ರಬರಹಗಳು ಕಂಡುಬಂದಿವೆ. ಈ ಹೊತ್ತಿನಲ್ಲಿ ಸಿಕ್ಕಿರುವಶ್ಟು ಕಲ್ಬರಹಗಳು ದೇಶದ ಬೇರೆ ಯಾವುದೇ ನುಡಿಗಳಲ್ಲಿ ಕಂಡುಬರುವುದಿಲ್ಲ! ಇಂತಹ ಹಿರಿಮೆ ಮತ್ತು ಹಳಮೆಯನ್ನು ಹೊಂದಿದ ನುಡಿ ನಮ್ಮದು. ತಾಳಗುಂದದಲ್ಲಿ ಹೊಸದಾಗಿ ಕಂಡುಹಿಡಿಯಲಾದ ಕಲ್ಬರಹವು ಈಗ ಕನ್ನಡ ನುಡಿಯಲ್ಲಿರುವ ಮೊದಲ ಕಲ್ಬರಹವಾಗಿದೆ.

ತಾಳಗುಂದದ ಕಲ್ಬರಹ ಇರುವುದೆಲ್ಲಿ?

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತಾಳಗುಂದದ ಪ್ರಣವಲಿಂಗೇಶ್ವರ ಗುಡಿಯ ಅಂಗಳದಲ್ಲಿ ಈ ಕನ್ನಡದ ಮೊದಲ ಕಲ್ಬರಹವಿದೆ. ತಾಳಗುಂದ ಬೆಂಗಳೂರಿನಿಂದ ಸುಮಾರು 351 ಕಿಲೋಮೀಟರ್ ದೂರದಲ್ಲಿದೆ ಹಾಗು ತಾಳಗುಂದ ಪೇಟೆಯಿಂದ ಸುಮಾರು 1.5 ಕಿಲೋಮೀಟರ್ ದೂರದಲ್ಲಿ ಪ್ರಣವಲಿಂಗೇಶ್ವರ ಗುಡಿಯಿದೆ. ಪ್ರಣವಲಿಂಗೇಶ್ವರ ಗುಡಿಯ ಬಡಗಣ ಬಾಗದ ಸಿಂಹದ ಮುಕವಿರುವ ಮೆಟ್ಟಿಲು ಕಟ್ಟೆಯಲ್ಲಿ (balustrade) ಕಲ್ಬರಹವಿದೆ.

ಇದು ಹಲ್ಮಿಡಿ ಕಲ್ಬರಹಕ್ಕಿಂತಲೂ ಹಿಂದಿನದು!

ತಾಳಗುಂದದಲ್ಲಿ ಈಗಾಗಲೇ ಸರಿಸುಮಾರು ಕ್ರಿ.ಶ. 450-460 ರ ಹೊತ್ತಿನ ಕಂಬದ ಬರಹವಿದೆ, ಈ ಕಂಬದ ಬರಹವು ಬನವಾಸಿಯ ಕದಂಬರು (345 – 525) ಬೆಳೆದುಬಂದ ಬಗ್ಗೆ ಸಾಕಶ್ಟು ಬೆಳಕುಚೆಲ್ಲುತ್ತದೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಲ್ಮಿಡಿ ಕಲ್ಬರಹವೇ ಕನ್ನಡದ ಹಳೆಯ ಕಲ್ಬರಹವೆಂದು ಈವರೆಗೆ ತಿಳಿಯಲಾಗಿತ್ತು. ಹೊಸದಾಗಿ ಸಿಕ್ಕಿರುವ ಪ್ರಣವಲಿಂಗೇಶವರ ಗುಡಿಯಲ್ಲಿರುವ ಈ ಕಲ್ಬರಹವು ಮೇಲಿನ ಎರಡು ಕಲ್ಬರಹಗಳಿಗಿಂತ ಹಳೆಯದ್ದಾಗಿದೆ.

2014 – 2015 ರ ನಡುವೆ ಪತ್ತೆಯಾದ ತಾಳಗುಂದದ ಈ ಕಲ್ಬರಹವು ಕನ್ನಡದ ಹಳೆಯ ಕಲ್ಬರಹವೆಂದು ಆರ‍್ಚಿಯೊಲಾಜಿಕಲ್ ಸರ‍್ವೇ ಆಪ್ ಇಂಡಿಯಾ ಇತ್ತೀಚಿಗೆ ತಿಳಿಸಿದೆ. ಎ.ಏಸ್.ಐ (ASI)ನ ನಂಬಿರಾಜನ್ ಎಂಬುವರ ಮುಂದಾಳ್ತನದಲ್ಲಿ ಈ ಕಲ್ಬರಹವನ್ನು ಕಂಡುಹಿಡಿಯಲಾಯಿತು, ಇದರ ಹೊತ್ತು ಕ್ರಿ.ಶ. 370 – 450 (ಇಲ್ಲಿ ಎರಡು ಕಲ್ಬರಹಗಳಿವೆ, ಇದರ ಬಗ್ಗೆ ಮುಂದೆ ಓದಿ) ಎಂದು ತಿಳಿದುಬಂದಿದೆ. ಈ ಪ್ರಣವಲಿಂಗೇಶ್ವರ ಗುಡಿಯಲ್ಲಿ ಶಾತವಾಹನ, ಕದಂಬ, ಗಂಗರ ಹೊತ್ತಿನ ದುಡ್ಡುಗಟ್ಟಿಗಳು(Coins) ಸಿಕ್ಕಿವೆ, ಕಲ್ಯಾಣಿ ಚಾಲುಕ್ಯರು ಈ ಗುಡಿಯ ಗೋಡೆ ಮತ್ತು ಚಾವಣಿಯನ್ನು ಮಾರ‍್ಪಾಟು ಮಾಡಿದ್ದರ ಬಗ್ಗೆ ಈ ಅರಕೆಯಲ್ಲಿ ತಿಳಿದುಬಂದಿದೆ. ಈ ಅರಕೆಯಲ್ಲಿ ಕೆಂಪು, ಬೂದು ಬಣ್ಣದ ಮಡಕೆಗಳು ಸಿಕ್ಕಿವೆ ಹಾಗು ಕ್ರಿ.ಶ. 500-1200 ಹೊತ್ತಿನ ನಡುವಿನ ಹಲವಾರು ಕಲ್ಲಿನ ಸಲಕರಣೆಗಳು ಸಿಕ್ಕಿವೆ.

ಕಲ್ಬರಹದ ಹಿನ್ನೆಲೆ

ಸರಿಸುಮಾರು ಕ್ರಿ.ಶ. 345 ರ ಹೊತ್ತಿನಲ್ಲಿ ಮಯೂರವರ‍್ಮನು ಕದಂಬ ಅರಸೊತ್ತಿಗೆಯನ್ನು ಹುಟ್ಟುಹಾಕಿದ್ದ ಮತ್ತು ಅವನ ಆಡಳಿತದ ಪಟ್ಟಣವು ಬನವಾಸಿಯಾಗಿತ್ತು. ಮಯೂರವರ‍್ಮ ಕ್ರಿ.ಶ. 365 ರಲ್ಲಿ ಮಡಿದ ನಂತರ ಕಂಗವರ‍್ಮ (365-390), ಬಗೀರತವರ‍್ಮ (390-415), ರಗುಪತಿವರ‍್ಮ (415–435), ಕಾಕುತ್ಸವರ‍್ಮ (435-455) ಆಳ್ವಿಕೆ ನಡೆಸಿದ್ದರು. ಕ್ರಿ.ಶ. 450 ರ ಹಲ್ಮಿಡಿ ಕಲ್ಬರಹವು ಇದೇ ಕಾಕುತ್ಸವರ‍್ಮನ ಆಡಳಿತದ ಹೊತ್ತಿಗೆ ಸೇರಿದ್ದಾಗಿದೆ, ಈಗ ಸಿಕ್ಕಿರುವ ತಾಳಗುಂದ ಕಲ್ಬರಹವು ಕಾಕುತ್ಸವರ‍್ಮನಿಗಿಂತ ಮೊದಲೇ ಕೆತ್ತಿಸಲಾಗಿತ್ತು ಎಂದು ತಿಳಿದುಬಂದಿದೆ. ಪ್ರಣವಲಿಂಗೇಶ್ವರ ಗುಡಿಯನ್ನು ಶಾತವಾಹನರ ಹೊತ್ತಿನಲ್ಲಿ ಕಟ್ಟಿಸಲಾಗಿತ್ತು ಮತ್ತು ಕದಂಬರ ಆಡಳಿತದ ಹೊತ್ತಿನಲ್ಲಿ ಅದಕ್ಕೆ ಹಲವಾರು ಮಾರ‍್ಪಾಡನ್ನು ಮಾಡಲಾಗಿತ್ತು, ಈ ಮಾರ‍್ಪಾಡಿನಲ್ಲಿ ಸಿಂಹದ ಮೊಗವಿರುವ ಮೆಟ್ಟಿಲ ಕಟ್ಟೆಯನ್ನು ಕಟ್ಟಿಸಲಾಗಿತ್ತು.  ಕಲ್ಬರಹವಿರುವ ಮೆಟ್ಟಿಲು ಕಟ್ಟೆಯನ್ನು ಬೂದು-ಹಸಿರು ಪಾಂಗುಗಲ್ಲಿನಿಂದ (greenish-grey schist stone) ಮಾಡಲಾಗಿದೆ. ಪ್ರಣವಲಿಂಗೇಶ್ವರ ಗುಡಿಯ ಮೆಟ್ಟಿಲು ಕಟ್ಟೆಯಲ್ಲಿ ಎರಡು ಕಲ್ಬರಹಗಳಿವೆ ಮೊದಲನೆಯದು ಬಡಗಣ ಬದಿಯಲ್ಲಿದೆ, ಎರಡನೆಯದು ತೆಂಕಣಬದಿಯಲ್ಲಿದೆ. ಈ ಕಲ್ಬರಹಗಳು ಕನ್ನಡ ಹಾಗು ಕೆಲವು ಸಕ್ಕದ ಪದಗಳನ್ನು ಒಳಗೊಂಡಿದೆ. ಬಡಗಣ ಬದಿಯಲ್ಲಿರುವ ಮೊದಲನೇ ಕಲ್ಬರಹದಲ್ಲಿ ತುಣುಕು ತುಣುಕಾಗಿರುವ ಒಟ್ಟು ಏಳು ಸಾಲುಗಳಿವೆ, ಈ ಎಲ್ಲಾ ಏಳು ಸಾಲುಗಳಲ್ಲಿ ಹಲವಾರು ಕನ್ನಡ ಪದಗಳನ್ನು ಬಳಕೆ ಮಾಡಲಾಗಿದೆ.

ಬೋಯಗರ ವಜಿನಾಗ(ವಜಿನಾಗಯ್ಯ) ಎಂಬ ಅಂಬಿಗನಿಗೆ ಪುಲಿಂದಗೆಯ ಹಲಮಿಯು ನೆಲವನ್ನು ಬಳುವಳಿಯಾಗಿ ನೀಡಿದ್ದನ್ನು ಈ ಕಲ್ಬರಹದಲ್ಲಿ ತಿಳಿಸಲಾಗಿದೆ, ಇಲ್ಲಿ ಹಲಮಿಯು ಯಾರು ಎಂದು ತಿಳಿಸಲಾಗಿಲ್ಲ. ಬಡಗಣ ಬಾಗದ ಈ ಕಲ್ಬರಹವು ಸರಿಸುಮಾರು ಕ್ರಿ.ಶ. 370 ರ ಹೊತ್ತಿಗೆ ಸೇರಿದ್ದಾಗಿದೆ, ಇದು ಕದಂಬರ ಕಂಗವರ‍್ಮನ (365-390) ಆಡಳಿತದ ಹೊತ್ತನ್ನು ಹೋಲುತ್ತದೆ. ಇದರ ಹಿನ್ನೆಲೆಯ ಬಗ್ಗೆ ಹಿನ್ನಡವಳಿಗರು ಮತ್ತಶ್ಟು ಅರಕೆಮಾಡಿದರೆ ಹೆಚ್ಚಿನ ಮಾಹಿತಿಗಳು ಸಿಗಬಹುದು.

ತೆಂಕಣ ಬದಿಯಲ್ಲಿರುವ ಎರಡನೇ ಕಲ್ಬರಹದಲ್ಲಿ ಎರಡು ಸಾಲುಗಳಿವೆ, ಕಲ್ಬರಹದಲ್ಲಿ ಗುಡಿಯನ್ನು ಮಹಾದೇವ ಎಂದು ಹೆಸರಿಸಲಾಗಿದೆ ಹಾಗು ಚಂದ್ರಾದಿತ್ಯ ಎಂಬ ಇನ್ನೊಂದು ಹೆಸರನ್ನು ಕೂಡ ನೀಡಲಾಗಿದೆ. ತೆಂಕಣ ಬಾಗದ ಈ ಕಲ್ಬರಹವು ಸರಿಸುಮಾರು 450 ರ ಹೊತ್ತಿನ ತಾಳಗುಂದದ ಕಂಬದ ಬರಹಕ್ಕಿಂತ (Talagunda Pillar Inscription) ಹಳೆಯದ್ದಾಗಿದೆ.  ಕನ್ನಡ ನಾಡು-ನುಡಿಯ ಕುರುಹುಗಳನ್ನು ತಿಳಿಸುವ ಇಂತಹ ಕಲ್ಬರಹಗಳ ಮೇಲೆ ಇನ್ನಶ್ಟು ಬೆಳಕು ಚೆಲ್ಲಬೇಕಾಗಿದೆ.

(ಮಾಹಿತಿ ಸೆಲೆ: prajavani.net,  vijaykarnataka.indiatimes.com, asi.nic.in, ಹಳಗನ್ನಡ- ಎಸ್.ಶೆಟ್ಟರ್)

(ಚಿತ್ರ ಸೆಲೆasi.nic.in)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.