“ಅವ್ವ-ಅವಲಕ್ಕಿ-ಅವಳು”

– ಸಂದೀಪ ಔದಿ.

ನನ್ನ ನೋಟ ನೆಲದ ಮೇಲೆ ಚಿತ್ತವಾಗಿತ್ತು. ಬೇರೆ ಕೋಣೆಯಿಂದ ಗಮ, ತೀರಾ ಪರಿಚಯವಿರೋ ಗಮ. ನಿದಾನಕ್ಕೆ ಕತ್ತು ಎತ್ತಿ ಆ ಕೋಣೆಯ ಬಾಗಿಲ ಕಡೆ ಗಮನ. ಗೆಜ್ಜೆ ಸದ್ದು. ಸ್ವಲ್ಪ ತಳಮಳ ಹಾಗೂ ಕುತೂಹಲ. ಅಶ್ಟರಲ್ಲಿ, ನನ್ನ ಚಿತ್ತ ಕದಡಿದ ಗಮಕ್ಕೆ ಉತ್ತರ ಸಿಕ್ಕೇ ಬಿಡ್ತು. ವಿಶಾಲವಾದ ಟ್ರೇ, ಅದರಲ್ಲಿ ನಾಲ್ಕು ಚಿಕ್ಕ ಚಿಕ್ಕ ಪ್ಲೇಟು, ಪ್ರತಿಯೊಂದರಲ್ಲೂ ಅಚ್ಚು ಕಟ್ಟಾಗಿ ಅಲಂಕರಿಸಿದ – ‘ಅವಲಕ್ಕಿ’ (ನಮ್ಮ ಉತ್ತರ ಕರ‍್ನಾಟಕ ಜನರ ಸೂಸ್ಲಾ :)).

ಒಂದು ಪ್ಲೇಟ್ ನನ್ನ ಕೈಗೂ ಬಂತು. ಅರಳಿದ ಅವಲಕ್ಕಿ ರಾಶಿ, ಅರಿಶಿಣ ಗಮ, ಎಣ್ಣೆ ಜೊತೆ ಬೆರೆತು ಮಿರಿ ಮಿರಿ ಮಿಂಚುತಿದ್ದ ಶೇಂಗಾ, ಮೇಲೆ ಕೊತ್ತಂಬರಿ ಸೊಪ್ಪಿನ ಅಲಂಕಾರ. ಚಿಕ್ಕ ಸ್ಟೀಲ್ ಚಮಚದಿಂದ ಮೊದಲ ತುತ್ತು ಬಾಯಿಯೊಳಗೆ ಪ್ರವೇಶ…ಆಹಾ! ಆ ಮುದ ನೀಡಿದ ಆಹ್ಲಾದ ಮನದ ಮೊಗಸಾಲೆಯಲ್ಲಿ ಹಾಗೆ ಅಚ್ಚಾಗಿದೆ.

ಅವ್ವನ ಅವಲಕ್ಕಿ ನೆನಪು, ಅದರೊಂದಿಗೆ ನಾನು ಹಾಗೂ ಅವ್ವ ಮಾಡಿಕೊಂಡಿದ್ದ ಒಪ್ಪಂದ – ಒಂದೇ ಗಳಿಗೆಯಲ್ಲಿ ಪೂರೈಸಿದ ಆ ಕ್ಶಣ ಇನ್ನೂ ಹಸಿರಾಗಿದೆ.

ಒಪ್ಪಂದ :: ನಾನು ಪ್ರತಿಸಾರಿ ನಮ್ಮೂರಿಗೆ ಹೋದಾಗ ನಮ್ಮ ಮನೇಲಿ ನನಗಂತಾನೇ ವಿಶೇಶವಾಗಿ ಮಾಡುವ ತಿಂಡಿ ‘ಅವಲಕ್ಕಿ’. ಅದನ್ನ ತಿಂದಾಗಲ್ಲೆಲ್ಲ ನನ್ನ ಅವ್ವ ಜಗತ್ತಿನ ಅತ್ತ್ಯುತ್ತಮ ಅಡುಗೆ ತಗ್ನೆ ಅಂತ ಅನಿಸಿದ್ದಂತೂ ನಿಜ. ಹೀಗೆ ಸುಮಾರು ವರುಶಗಳ ನಂಟು ನನ್ನ ಮತ್ತು ಅವಲಕ್ಕಿ ಮದ್ಯೆ. ಕೆಲವು ಬಾರಿ ಮನೇಲಿ ಎಲ್ಲರಿಗೂ ಬೇಜಾರು, ನಾನು ಬರೀ ಅದೇ ತಿಂಡೀನ ಬಯಸೋದರಿಂದ(ಅವ್ವನಿಗೂ).

ಇದೆಲ್ಲದರ ಮದ್ಯೆ ವರುಶಗಳು ಉರುಳಿದಂತೆ, ಸಮಾಜದ ಕಳಕಳಿಯಂತೆ (ಹೊಟ್ಟೆಕಿಚ್ಚಿನಂತೆ ), ನಂಗೂ ಮದುವೆ ಮಾಡುವ ಕಯಾಲಿ ನನ್ನ ಜನುಮದಾತ/ತೆ ಇಬ್ಬರಲ್ಲಿ ಅಗಾದವಾಗಿ ಮೂಡೇಬಿಡ್ತು. ನಂಗು ಬೇರೆಯವರ ಮನೆಯಲ್ಲಿ ಬೇಡವಾದ ಉಪ್ಪಿಟ್ಟು, ಬಾಳೆ ಅತವಾ ಅವಲಕ್ಕಿ ಸವಿಯಬೇಕಾದ ಅನಿವಾರ‍್ಯತೆ ಶುರುವಾಗೇಬಿಡ್ತು. ಈ ಹೆಣ್ಣು- ಗಂಡು ನೋಡೋ ಪದ್ದತಿ ಯಾವ ಪುಣ್ಯಾತ್ಮ ಕಂಡುಹಿಡಿದನೋ ಗೊತ್ತಿಲ್ಲ. ತುಂಬಾ ಹಿಂಸೆ (ಗಂಡು- ಹೆಣ್ಣು ಇಬ್ಬರಿಗೂ).

ಹೀಗೆ ನಮ್ಮ ಪಯಣ ಶುರುವಾಗಿ,ನಾಲ್ಕೈದು ಮನೆ-ಊರು ಹೋಗಿ ಬಂದು ಬೇಜಾರಾಗಿ, ಒಂದ್ ದಿನ ಅವ್ವ ಕೇಳೇಬಿಟ್ಟಳು – ‘ನಿನಗೆ ಎಂತಾ ಹುಡುಗಿ ಬೇಕೋ, ಒಬ್ಬರೂ ಇಶ್ಟಾನ ಆಗ್ತಿಲ್ಲ ನಿಂಗ’ (ಅವಳಿಗೂ ಯಾರೂ ಇಶ್ಟ ಆಗಿರ‍್ಲಿಲ್ಲ ಅನ್ನೋದು ಅಶ್ಟೇ ನಿಜ). ಅವಳ ಮಾತಿನಲ್ಲಿನ ಹತಾಶೆ ಬಾವ ಅರಿತು, ನಾನು ತಮಾಶೆಗೆ ಒಂದು ಒಪ್ಪಂದ ಮಾಡಿಕೊಂಡೆ :- “ಯಾವ ಮನೇಲಿ ನಿನ್ನ ಕೈರುಚಿ ತರಹದ ಅವಲಕ್ಕಿ ಮಾಡಿರುತಾರೋ, ಆ ಮನೆಯ ಮಗಳೇ ನಿನ್ನ ಸೊಸೆ “…

ಇಂದಿಗೆ ಆ ಒಪ್ಪಂದ ಕೈಗೂಡಿ ನಾಲ್ಕು ವರುಶ .. ನನ್ನ-ಅವಲಕ್ಕಿ ವರುಶಗಳ ನಂಟು ಇಂದು “ಅವ್ವ-ಅವಲಕ್ಕಿ-ಅವಳು” ಎಂಬ ಕಿರು ಕತೆಯಾಗಿ ಅನಾವರಣ 🙂

( ಚಿತ್ರ ಸೆಲೆ: realtyodisha.com ) 

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: