ಸ್ವಾಲ್ ಬಾರ‍್ಡ್ ನ ನೆಲಮಾಳಿಗೆಯಲ್ಲಿ ಕಾಯಲಾಗುತ್ತಿರುವ ಸಂಪತ್ತು!

– ವಿಜಯಮಹಾಂತೇಶ ಮುಜಗೊಂಡ.

ಹೆಪ್ಪುಗಟ್ಟುವ ಚಳಿಯಿರುವ ಬೂಮಿಯ ಉತ್ತರ ತುದಿ ಮತ್ತು ನಾರ‍್ವೆ ನಾಡುಗಳ ನಡುವೆ, ಆರ‍್ಕ್ಟಿಕ್‍ ಮಹಾಸಾಗರದ ಮಂಜಿನ ಗುಡ್ಡಗಳ ಅಡಿಯಲ್ಲಿ ಮುಂದಿನ ದಿನಗಳಿಗೆ ಅತೀ ಅವಶ್ಯವಾದ ಸಂಪತ್ತನ್ನು ಕಾಯಲಾಗುತ್ತಿದೆ. ಇದು ಚಿನ್ನವೋ, ಪೆಟ್ರೋಲಿಯಂ ಇಲ್ಲವೇ ಬೆಲೆಬಾಳುವ ಗಣಿ ಎಂದು ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಇಲ್ಲಿರುವುದು ಬೀಜಗಳು! ಈ ಬೀಜಗಳ ಬೆಲೆ ಇವತ್ತು ತುಟ್ಟಿಯೇನಲ್ಲ. ಆದರೆ ಮುಂದಿನ ದಿನಗಳ ಅತ್ಯವಶ್ಯ ಇಡುಗಂಟು ಇವು.

ಕಳೆದ 50 ವರುಶಗಳಲ್ಲಿ ಉಳುಮೆ ಮಾಡುವ ಸಂಪ್ರದಾಯದಲ್ಲಿ ಸಾಕಶ್ಟು ಬದಲಾವಣೆಗಳಾಗಿವೆ. ಹೆಚ್ಚುತ್ತಿರುವ ಅರಕೆಗಳಿಂದಾಗಿ ಇಳುವರಿ ಹಲವು ಪಟ್ಟು ಹೆಚ್ಚಿದೆ. ಆದರೆ ತಳಿಗಳ ಹಲತನ ಕಡಿಮೆಯಾಗುತ್ತಿದೆ. ಇಂದು ಮನುಶ್ಯನಿಗೆ ಬೇಕಾದ 95% ಕಸುವನ್ನು ನೀಡಬಲ್ಲ ಬೆಳೆಗಳ ಸಂಕ್ಯೆ ಬರೀ 30. ಚೀನಾದಲ್ಲಿ 1950ರಲ್ಲಿ ಇದ್ದ ಅಕ್ಕಿಯ ನಾಟಿ ತಳಿಗಳಲ್ಲಿ ಬರೀ 10% ರಶ್ಟು ಇಂದು ಬಳಕೆಯಲ್ಲಿವೆ. ಕಳೆದ ನೂರು ವರುಶಗಳಲ್ಲಿ ಅಮೆರಿಕಾದಲ್ಲಿ ಸುಮಾರು 90% ರಶ್ಟು ಹಣ್ಣು ಮತ್ತು ತರಕಾರಿ ಬಗೆಗಳು ಇಂದು ಕಳೆದುಹೋಗಿವೆ. ಒಂದೇ ಬಗೆಯ ಬೆಳೆಗಳನ್ನು ಬೆಳೆಯುವುದರಿಂದ ಇನ್ನುಳಿದ ತಳಿಗಳು ಅಳಿಸಿಹೋಗುತ್ತಿವೆ. ಇದರಿಂದಾಗಿ ಬೆಳೆಗಳಲ್ಲಿನ ಸತ್ವ ಕಳೆದುಹೋಗುತ್ತಿದೆ.

ಡೂಮ್ಸ್‌ ಡೇ ವಾಲ್ಟ್!

ನೆಲನಡುಕ(earthquake), ಮಳೆಯ ಕೊರತೆ, ಅತಿಯಾದ ಮಳೆ ಅಲ್ಲದೇ ಯುದ್ದದಂತಹ ಹಲವಾರು ಕಾರಣಗಳಿಂದ ಬೆಳೆಗಳ ಹಲವು ತಳಿಗಳು ಶಾಶ್ವತವಾಗಿ ಅಳಿಸಿಹೋಗುತ್ತಿವೆ. ಇಂತಹ ಹೊತ್ತಿನಲ್ಲಿ ಹಾಳಾದ ತಳಿಗಳನ್ನು ಉಳಿಸಿ ಮರುಬಳಕೆಗೆ ತರಲು ಅನುಕೂಲ ಆಗಲಿ ಎನ್ನುವ ಉದ್ದೇಶದಿಂದ ಬೀಜಗಳನ್ನು ಸುರಕ್ಶಿತವಾಗಿ ಕಾದಿಡಲಾಗುತ್ತಿದೆ. ನಾರ‍್ವೆಯ ಸ್ವಾಲ್ಬಾರ‍್ಡ್ ನಡುಗಡ್ಡೆಯಲ್ಲಿರುವ (island) ಸ್ಪಿಟ್ಸ್‌ಬರ‍್ಗನ್ ಎಂಬಲ್ಲಿ ಈ ಕಾಳುಮನೆ(seed bank) ಇದೆ. ಸುಮಾರು 930,000 ತಳಿಗಳ ಮಿಲಿಯನ್‍ಗಟ್ಟಲೆ ಬೀಜಗಳನ್ನು ಗ್ಲೋಬಲ್ ಸೀಡ್ ವಾಲ್ಟ್‌ನಲ್ಲಿ (Global Seed Vault) ಸುರಕ್ಶಿತವಾಗಿ ಇಡಲಾಗಿದೆ. ಇಲ್ಲಿ ಜಗತ್ತಿನ ಹಲವು ನಾಡುಗಳ ಸುಮಾರು 13,000 ವರ‍್ಶಗಳಶ್ಟು ಹಿಂದಿನಿಂದ ಬಳಕೆಯಲ್ಲಿರುವ ಹಲವು ಬಗೆಯ ಬೀಜಗಳನ್ನು ಇಡಲಾಗಿದೆ. ಬಾಂಬ್ ದಾಳಿಯಾದರೂ ಇಲ್ಲಿನ ಬೀಜಗಳು ಸುರಕ್ಶಿತವಾಗಿರುತ್ತವೆ. ಇದನ್ನು ಡೂಮ್ಸ್‌ಡೇ ವಾಲ್ಟ್ (DoomsDay Vault) ಎಂದೇ ಕರೆಯಲಾಗುತ್ತದೆ. ಇಲ್ಲಿ ಇಂಡಿಯಾ, ಸಿರಿಯಾ ಸೇರಿದಂತೆ ಹಲವು ನಾಡುಗಳಿಂದ ತರಿಸಿದ ಬೀಜಗಳನ್ನು ಕಾದಿಡಲಾಗಿದೆ. ಬಳಕೆಗೆಂದು ಇಲ್ಲಿಂದ ಬೀಜಗಳನ್ನು ಹಿಂಪಡೆದ ಮೊದಲ ನಾಡು ಸಿರಿಯಾ. “ಪ್ರತಿದಿನ ಜಗತ್ತಿನ ಯಾವುದೋ ಮೂಲೆಯೊಂದರಲ್ಲಿ ಅಪಾಯಕಾರಿ ಗಟನೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಗಟನೆಗಳಿಂದ ಹಲವು ನಾಟಿ ತಳಿಗಳು ಅಳಿಸಿಹೋಗುತ್ತಿವೆ” ಎನ್ನುತ್ತಾರೆ ಕ್ರಾಪ್ ಟ್ರಸ್ಟ್‌ನ ಮುಕ್ಯ ನಡೆಸಾಳು(executive director) ಮೇರಿ ಹಗಾ.

ಸ್ವಾಲ್ಬಾರ‍್ಡ್ ಕಾಳುಮನೆಯ ವಿಶೇಶವೇನು?

ಈ ಕಾಳುಮನೆಗೆ ಮಂಜಿನ ಗುಡ್ಡದಿಂದ ಹೊರಗೆ ಚಾಚಿಕೊಂಡ ಕಾಂಕ್ರೀಟಿನಿಂದ ಮಾಡಲ್ಪಟ್ಟ ನಾಲ್ಬದಿಯಾಕಾರದ ಬಾಗಿಲಿದೆ. ಒಳಗೆ 150 ಮೀಟರ್ ಉದ್ದದ ಕೊಳವೆಯ ಮೂಲಕ ನಡೆದುಹೋದರೆ ಅಲ್ಲಿ ಮುಕ್ಯ ಕೋಣೆಯ ಬಾಗಿಲಿದೆ. ಇತ್ತೀಚಿಗೆ ಇಂಡಿಯಾ ಮಾತ್ತು ಪಾಕಿಸ್ತಾನದ ಬೀಜಗಳನ್ನು ಸೇರಿಸಲು ಈ ಬಾಗಿಲನ್ನು ತೆರೆಯಲಾಗಿತ್ತು. ಮುಕ್ಯ ಕೋಣೆಯ ಒಳಗೆ ಬೀಜಗಳನ್ನು ಇಡಲು 3 ಕೋಣೆಗಳಿವೆ, ಈ ಕೋಣೆಗಳ ಬಾಗಿಲುಗಳ ಮೇಲೆ ಯಾವಾಗಲೂ ಮಂಜಿನ ಪದರ ಕಟ್ಟಿಕೊಂಡಿರುತ್ತದೆ. ಈ 3 ಕೋಣೆಗಳಲ್ಲಿ ಸದ್ಯಕ್ಕೆ ಒಂದು ಮಾತ್ರ ಬಳಕೆಯಲ್ಲಿದೆ. ಪ್ರತಿ ಕೋಣೆಯ ಒಳಗೆ ಹಲವು ಕಪಾಟುಗಳಿದ್ದು, ಬೇರೆ ಬೇರೆ ನಾಡುಗಳಿಂದ ಬಂದ ಬೀಜಗಳನ್ನು ಡಬ್ಬಗಳಲ್ಲಿ ಹೊಂದಿಸಿ ಇಡಲಾಗಿದೆ. ಗಾಳಿತೆಗೆದ ಬೆಳ್ಳಿ ಪೊಟ್ಟಣ ಇಲ್ಲವೇ ಗಾಜಿನ ನಳಿಕೆಗಳಲ್ಲಿ(test tubes) ಬೀಜಗಳನ್ನು ತುಂಬಿಸಿ ಕಾದಿಡಲಾಗುತ್ತಿದೆ.

ಜಗತ್ತಿನ ಹಲವು ಕಡೆ ಇದೇ ಬಗೆಯ ಸುಮಾರು 1700 ಬೀಜ ಇಲ್ಲವೇ ಪೀಳಿಗಳನ್ನು(genes) ಕಾಯ್ದಿಡಲು ಕಾಳುಮನೆಗಳಿವೆ. ಆದರೆ ಸ್ವಾಲ್ಬಾರ‍್ಡ್ ಸೀಡ್‍ಬ್ಯಾಂಕಿನ ವಿಶೇಶ ಏನೆಂದರೆ, ಬಾಂಬ್ ಇಲ್ಲವೇ ನೆಲನಡುಕದಂತಹ ಅಪಾಯ ಉಂಟಾದರೂ ಇಲ್ಲಿರುವ ಬೀಜಗಳು ಸುರಕ್ಶಿತವಾಗಿರುತ್ತವೆ.  ಮಂಜಿನ ಗುಡ್ಡದ ನಡುವೆ ಹೂತಂತೆ ಇರುವ ಇದೊಂದು ನೈಸರ‍್ಗಿಕ ತಂಪುಪೆಟ್ಟಿಗೆ(fridge) ಆಗಿರುವುದರಿಂದ ಇಲ್ಲಿ ಹಲವು ದಿನ ಮಿನ್ಹರಿವು(electric current) ಇಲ್ಲದೇ ಇದ್ದರೂ ಚಿಂತೆಯಿಲ್ಲ.

ಈ ಹಮ್ಮುಗೆಗೆ ಇರುವುದು ಒಂದೇ ಚಿಂತೆ

ನೆಲನಡುಕ, ಬಾಂಬ್ ದಾಳಿಗಳಿಂದ ಈ ಕಾಳುಮನೆ ಸುರಕ್ಶಿತವಾಗಿದ್ದರೂ ಇದು ನೂರಕ್ಕೆ ನೂರರಶ್ಟು ಅಪಾಯದಿಂದ ಹೊರತಲ್ಲ. ಒಮ್ಮೊಮ್ಮೆ ತಾಪಮಾನದ ಏರುಪೇರಿನಿಂದ  ಮಂಜು ಕರಗುತ್ತದೆ. ಮಂಜು ಕರಗಿ ಉಂಟಾಗುವ ನೀರು ನೆಲಮಾಳಿಗೆಗೆ ಇದುವರೆಗೂ ನುಗ್ಗಿಲ್ಲ. ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: time.com, theverge.com, wikipedia )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: