‘ಬ್ಲಡ್ ವುಡ್ ಟ್ರಿ’ – ಇದು ರಕ್ತ ಸುರಿಸುವ ಮರ!

– ಕೆ.ವಿ.ಶಶಿದರ.

ಸಸ್ಯಗಳಿಗೂ ಜೀವವಿದೆ ಎಂದು ಸಂಶೋದಿಸಿ ಜಗಕ್ಕೆ ತಿಳಿಸಿದ ವಿಜ್ನಾನಿ ಜಗದೀಶ ಚಂದ್ರಬೋಸ್. ಆದರೆ ಆಪ್ರಿಕಾದ ದಕ್ಶಿಣ ಪ್ರದೇಶದಲ್ಲಿನ ಪೆಟೋಕಾರ‍್ಪಸ್ ಅಂಗೋಲೆನ್ಸಿಸ್ ಎಂದು ಸಸ್ಯಶಾಸ್ತ್ರದಲ್ಲಿ ಗುರುತಿಸಲ್ಪಡುವ ಮರ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಕ್ತ ಸುರಿಸುವ ಮೂಲಕ ಜಗದೀಶ ಚಂದ್ರಬೋಸ್ ಅವರ ಸಂಶೋದನೆಯನ್ನು ರುಜುವಾತು ಪಡಿಸಿದೆ! ಕಿಯಾಟ್, ಮುನಿಂಗಾ, ಮುಕ್ವಾ ಎಂಬದು ಈ ಮರಕ್ಕಿರುವ ಸ್ತಳೀಯರ ಆಡುನುಡಿಯ ಹೆಸರುಗಳು. ವಿಶ್ವಾದ್ಯಂತ ಇದು ಪ್ರಸಿದ್ದಿಯಾಗಿರುವುದು ‘ಬ್ಲಡ್ ವುಡ್ ಟ್ರಿ’ ಎಂದು.

ಬ್ಲಡ್ ವುಡ್ ಟ್ರಿಯ ಕಾಂಡವನ್ನಾಗಲಿ ಕೊಂಬೆಯನ್ನಾಗಲಿ ಕೊಡಲಿ ಅತವಾ ಇನ್ನಾವುದೇ ಹರಿತವಾದ ಆಯುದದಿಂದ ಕಡಿದಾಗ ಅತವಾ ಕೊಚ್ಚಿದಾಗ ಆ ಜಾಗದಿಂದ ಕೆಂಪು ಬಣ್ಣದ ನೀರು ಹೊರಬರುತ್ತದೆ. ಈ ನೀರು ಅಂಟಾಂಟಾಗಿದೆ. ಪ್ರಾಣಿಗಳ ಮೈಮೇಲೆ ಆದ ಗಾಯದಿಂದ ರಕ್ತ ಸ್ರವಿಸುವುದನ್ನು ನೆನಪಿಗೆ ತರುವ ಇದು ದಿಟವಾದ ರಕ್ತದಂತೆಯೇ ಇದೆ. ಅಲ್ಲದೇ ಈ ನೀರಿನ ಬಣ್ಣ ಗಾಡವಾಗಿರುವುದರಿಂದ ಕೆಲವು ಕಡೆ ಬಣ್ಣದ ವಸ್ತುಗಳ ತಯಾರಿಕೆಯಲ್ಲಿ ಇದನ್ನು ಬಳಸಿದರೆ, ಮತ್ತೆ ಕೆಲವೆಡೆ ಪ್ರಾಣಿಯ ಕೊಬ್ಬನ್ನು ಇದರೊಡನೆ ಬೆರೆಸಿ ಅನೇಕ ಸೌಂದರ‍್ಯ ವರ‍್ದಕಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಮೈ ಮತ್ತು ಮುಕದ ಸೌಂದರ‍್ಯ ಹೆಚ್ಚಿಸಲು ಬಳಸುವ ಸೌಂದರ‍್ಯ ವರ‍್ದಕಗಳ ತಯಾರಿಕೆಯಲ್ಲೇ ಇದರ ಬಳಕೆ ಹೆಚ್ಚು.

ಬ್ಲಡ್ ವುಡ್ ಟ್ರಿಯಿಂದ ಹೊರ ಬರುವ ಈ ಕೆಂಪು ನೀರಿನಲ್ಲಿ ಅನೇಕ ಔಶದೀಯ ಹಾಗೂ ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಮಾಂತ್ರಿಕ ಶಕ್ತಿ ಇರುವುದನ್ನು ಸ್ತಳೀಯರು ಕಂಡುಕೊಂಡಿದ್ದಾರೆ. ಗಾಯ ಬೇಗ ವಾಸಿಯಾಗಲು ಇದರ ಲೇಪನ ಅತ್ಯಂತ ಉಪಯುಕ್ತ. ಇರಿತದಿಂದಾದ ನೋವಿನ ಉಪಶಮನಕ್ಕೆ, ಮಲೇರಿಯಾ, ತಾಮರೆ, ಹೊಟ್ಟೆ ಸಂಬಂದಿ ಕಾಯಿಲೆ, ಹಲವು ರೀತಿಯ ಜ್ವರ, ಕಣ್ಣಿನ ತೊಂದರೆ ಹಾಗೂ ಬಾಣಂತಿಯರಲ್ಲಿ ಹಾಲಿನ ಪ್ರಮಾಣ ಹೆಚ್ಚಿಸಲು ಈ ನೀರಿನ ವೈದ್ಯಕೀಯ ಗುಣವನ್ನು ಬಳಸಿಕೊಂಡು, ಔಶದಿಯನ್ನು ತಯಾರಿಸಿ ನೀಡುವ ಪರಿಪಾಟ ಇಲ್ಲಿನ ನೆಲಸಿಗರಲ್ಲಿದೆ. ಈ ನೀರಿನ ಬಣ್ಣ ಕೆಂಪಾಗಿರುವುದರಿಂದ ರಕ್ತ ಸಂಬಂದಿ ಕಾಯಿಲೆ ಗುಣಪಡಿಸುವ ಶಕ್ತಿ ಹೊಂದಿದೆ ಎಂಬುದು ಇಲ್ಲಿನವರ ನಂಬಿಕೆ.

ಇನ್ನು ಈ ಮರದ ಹಲಗೆ ಮತ್ತು ನಾಟಾಗಳ ಗುಣವನ್ನು ಗಮನಿಸಿದರೆ ಪೀಟೋಪಕರಣಗಳ ತಯಾರಿಕೆಗೆ ಇದು ಅತ್ಯಂತ ಸೂಕ್ತ. ಇದರ ಉನ್ನತ ಗುಣಮಟ್ಟ ಹಾಗೂ ಬಣ್ಣದಿಂದಾಗಿ ಇದರಿಂದ ತಯಾರಿಸಿದ ಪೀಟೋಪಕರಣಗಳು ಹೆಚ್ಚು ಆಕರ‍್ಶಕ ಮತ್ತು ಹೆಚ್ಚು ಬೆಲೆ ಹೊಂದಿರುವಂತವು. ಮರದ ವಿನ್ಯಾಸ ಮತ್ತು ಮ್ರುದುತ್ವದಿಂದಾಗಿ ಕೆತ್ತನೆ ಕಾರ‍್ಯ ಅತಿ ಸರಾಗ. ಮರದ ಗುಣಮಟ್ಟ ಸ್ಕ್ರೂಗಳನ್ನು ಹಾಕಲು ಸುಲಬ ಹಾಗೂ ಅತ್ಯಂತ ಸುಂದರವಾಗಿ ಈ ಮರದ ಹಲಗೆಗಳನ್ನು ಪಾಲೀಶ್ ಮಾಡಲು ಸಹ ಸಾದ್ಯವಿದೆ. ಆದ್ದರಿಂದ ಇದು ಬಡಗಿಗಳಿಗೆ ಅಚ್ಚುಮೆಚ್ಚು. ಹಸಿ ಮರದಲ್ಲಿ ಪೀಟೋಪಕರಣಗಳನ್ನು ಮಾಡಿದರೂ ಅದು ಒಣಗಿದ ನಂತರ ಹೆಚ್ಚಾಗಿ ಕುಗ್ಗುವುದಿಲ್ಲ. ಅತಿ ಹೆಚ್ಚು ಕಾಲ ಬಾಳಿಕೆ ಬರುವ ಮರವಾದ್ದರಿಂದ ದೋಣಿಗಳ ತಯಾರಿಕೆಯಲ್ಲಿ, ಸ್ನಾನದ ಮನೆಯ ನೆಲಹಾಸಾಗಿ ಹೆಚ್ಚು ಬಳಕೆಯಾಗುತ್ತದೆ.

ಬ್ಲಡ್ ವುಡ್ ಟ್ರಿ 12 ರಿಂದ 18 ಮೀಟರ್ ಎತ್ತರ ಬೆಳೆಯುತ್ತದೆ. ಇದರ ತೊಗಟೆ ಬಹಳ ಒರಟು. ದಟ್ಟ ಕಂದು ಬಣ್ಣ. ನಯನಾಕರ‍್ಶಕ ಹಳದೀ ಹೂವುಗಳು ಇದರ ವೈಶಿಶ್ಟ್ಯ. ಈ ಮರದ ಕೊಂಬೆಗಳು ಬಹಳ ಎತ್ತರದಲ್ಲಿ ಕವಲೊಡೆಯುವುದರಿಂದ ಸುತ್ತಲೂ ಚತ್ರಿಯಾಕಾರದಲ್ಲಿ ಹರಡುತ್ತವೆ. ಮರದ ಮೆರುಗನ್ನು ಇಮ್ಮಡಿಸುವಲ್ಲಿ ಇದರ ಪಾತ್ರ ಹಿರಿದು.

(ಮಾಹಿತಿ ಸೆಲೆ: amusingplanet.com  )
(ಚಿತ್ರ ಸೆಲೆ: amusingplanet.comsiamagazin.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.