ಹೇಳು ಸಮಯವೇ ಯಾರು ನೀನು?

– ಅಜಯ್ ರಾಜ್.

ಕಾಲವೆಂಬ ವಿರಾಟ ಪುರುಶ
ಸಮಯವೇ ಸಮಯವೇ
ಯಾರು ನೀನು?

ಗೊಂದಲದಿ ಕೇಳುತಿಹೆ ನಿನ್ನ
ಪರಿಚಯಿಸು ಮರೆಯುವ ಮುನ್ನ
ಬೂತ, ಬವಿಶ್ಯ, ವರ‍್ತಮಾನವೆಂಬ
ಮುಕವಾಡ ದರಿಸಿ
ನಟಿಸುವುದು ನೀನೇನಾ…?
ಗತಕಾಲವೆಂಬ ಕಾಲ್ಪನಿಕತೆಯ ಕಟ್ಟುಕತೆಯೇನಾ?

ಹೇಳು ಸಮಯವೇ ಯಾರು ನೀನು?
ಹೇಳ್ವವರೆಗೂ ನಿನ್ನ ಬಿಡೆನು ನಾನು
ರಾಹು-ಕೇತು, ಗ್ರಹಗತಿಗಳ ನಿರ‍್ದರಿಪ
ವಿರಾಟ ಪುರುಶ;
ಬದುಕಲಶ್ಟು ನೀಡು ನವ್ಯ ಹರುಶ!

ನಿನ್ನೀ ಅಬ್ಬರ, ಆರ‍್ಬಟಕೆ ತಡವರಿಸಿ
ಬದುಕ ತೊಟ್ಟಿಲ ಸರಿದೂಗಿಸಿ
ನಡೆಯುತಿರುವೆನು ನಾ ಹುಲುಮಾನವ
ಮರುಕವಿಲ್ಲವೇ ನಿನಗೆ…?

ಹೇಳು ಸಮಯವೇ ಯಾರು ನೀನು?
ಹೇಳ್ವವರೆಗೂ ನಿನ್ನ ಬಿಡೆನು ನಾನು
ನೀ ಯಾರಿಗೆ ಶತ್ರು? ಯಾರಿಗೆ ಮಿತ್ರ?
ಮಿತ್ರರಿಲ್ಲದ ಬರಡು ಬದುಕಿನ ಏಕಾಂಗಿಯೋ…?
ಶತ್ರುಗಳಿಲ್ಲದ ಸತ್ವಯುತ ಬದುಕಿನ
ಅಜಾತಶತ್ರುವೋ…?
ನೀನೊಂದು ಗೊಂದಲ, ದ್ವಂದ್ವತೆಗಳ ಆಗರ

ಹೇಳು ಸಮಯವೇ ಯಾರು ನೀನು?
ಹೇಳ್ವವರೆಗೂ ನಿನ್ನ ಬಿಡೆನು ನಾನು
ನೀನು ಸರಿದಂತೆ ಇತಿಹಾಸ
ನಿನ್ನಲ್ಲಿಯೇ ಮೂಡ್ವದು ಬದುಕಿನ ಮಂದಹಾಸ

ದೇಹೀ ಎಂದರಿಲ್ಲ, ದಮ್ಮಯ್ಯನೆಂದರಿಲ್ಲ
ನೀ ಎಂದಿಗೂ ನಿಲ್ಲುವುದಿಲ್ಲ
ಗೋಡೆಗೆ ಜಡಿದು ಬಂದಿಸಿದರೂ
ನೀ ಅಳುಕಲಿಲ್ಲ

ಹೇಳು ಸಮಯವೇ ಯಾರು ನೀನು?
ಹೇಳ್ವವರೆಗೂ ನಿನ್ನ ಬಿಡೆನು ನಾನು
ನಿನ್ನ ಜಾಡು ಹಿಡಿಯ ಹೊರಟು
ಮರೆತೆ ನನ್ನ ಕಾಲುದಾರಿ
ಒಂಟಿಯಾಗಿ ಕಳೆದು ಹೋದೆ ಕಾಲವ್ಯೂಹದಲ್ಲಿ

ಹೇಳದೆ ನೀ ದ್ರೋಹಿಯಾದೆ
ತಿಳಿಯದೆ ನಾ ಮೂಡನಾದೆ
ಕೊನೆಗೂ…
ಬದುಕಿನ ಚದುರಂಗದಾಟದಲ್ಲಿ
ಗೆದ್ದದ್ದು ನೀನು, ಕಳೆದು ಹೋದದ್ದು ನಾನು

(ಚಿತ್ರ ಸೆಲೆ: freegreatpicture.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: