ಬೂತಾನ್ ಎಂಬ ‘ಕಾರ‍್ಬನ್ ನೆಗೆಟಿವ್’ ದೇಶ

– ಕೊಡೇರಿ ಬಾರದ್ವಾಜ ಕಾರಂತ.

ದಿನೇದಿನೇ ಕಡಿಮೆಯಾಗುತ್ತಿರುವ ಕಾಡುಗಳಿಂದ ಕಾರ‍್ಬನ್-ಡೈ-ಆಕ್ಸೈಡ್ ಹೆಚ್ಚುತ್ತಿರುವುದನ್ನು ಕೇಳಿರುತ್ತೇವೆ. ಏನಿದು ‘ಕಾರ‍್ಬನ್ ನೆಗೆಟಿವಿಟಿ‘? ಅದಕ್ಕೂ ಬೂತಾನ್ ಎಂಬ ಸಣ್ಣ ದೇಶಕ್ಕೂ ಏನು ಸಂಬಂದ ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಬರಹ ನಿಮಗೆ…

ಮೊದಲಿಗೆ ‘ಕಾರ‍್ಬನ್ ನ್ಯೂಟ್ರಾಲಿಟಿ‘ ಮತ್ತು ‘ಕಾರ‍್ಬನ್ ನೆಗೆಟಿವಿಟಿ‘ ಎನ್ನುವ ಬಗ್ಗೆ ತಿಳಿಯೋಣ. ನಾವು ಬಳಸುವ ಯಾವುದೇ ವಸ್ತುವನ್ನಾಗಲಿ, ಶಕ್ತಿಯನ್ನಾಗಲಿ ತಯಾರಿಸುವ ಸಲುವಾಗಿ ಎಶ್ಟು ಕರಿಗಾಳಿಯನ್ನು (CO2) ಹೊರಹಾಕಿರುತ್ತೇವೆ ಎನ್ನುವುದನ್ನು ಲೆಕ್ಕಹಾಕಲಾಗುತ್ತದೆ. ಇದನ್ನು ‘ಕಾರ‍್ಬನ್ ಪೂಟ್‍ಪ್ರಿಂಟ್‘ ಎನ್ನಲಾಗುತ್ತದೆ. ಎತ್ತುಗೆಗೆ, ಮಿಂಚನ್ನು ತಯಾರಿಸುವಾಗ ಕಲ್ಲಿದ್ದಲನ್ನು ಸುಡಲಾಗುತ್ತದೆ. ಹೀಗೆ ಸುಟ್ಟಾಗ ನೆಲದಡಿಗೆ ಹುದುಗಿದ್ದ ಕಾರ‍್ಬನ್ ಕರಿಗಾಳಿಯಾಗಿ ಮಾರ‍್ಪಾಡಾಗಿ ಗಾಳಿಪದರಕ್ಕೆ(atmosphere) ಸೇರುತ್ತದೆ. ಮರಗಳು ಗಾಳಿಪದರದಲ್ಲಿನ ಕರಿಗಾಳಿಯನ್ನು ಹೀರಿಕೊಳ್ಳುತ್ತವೆ. ಹೊರಹಾಕಿದ ಕರಿಗಾಳಿಗೆ ಸರಿಯಾಗಿ ಅಶ್ಟೇ ಕರಿಗಾಳಿಯನ್ನು ಗಾಳಿಪದರದಿಂದ ಬೇರ‍್ಪಡಿಸಿ ಕೂಡಿಟ್ಟಲ್ಲಿ(sequester) ಆಗ ‘ಕಾರ‍್ಬನ್ ನ್ಯೂಟ್ರಲ್‘ ಎನ್ನಲಾಗುತ್ತದೆ. ಹೊರಹಾಕಿದ ಕರಿಗಾಳಿಗಿಂತ ಹೆಚ್ಚು ಕಾರ‍್ಬನ್‌ಅನ್ನು ಕೂಡಿಡುತ್ತಿದ್ದಲ್ಲಿ ಆಗ ‘ಕಾರ‍್ಬನ್ ನೆಗೆಟಿವ್‘ ಎನ್ನಬಹುದು.

ಸಣ್ಣ ದೇಶವಾದ ಬೂತಾನಿಗೆ ಕಾಡುಗಳೇ ದೊಡ್ಡ ಆಸ್ತಿ, ಅಲ್ಲಿನ ನೆಲದ ಒಟ್ಟು ಹರವಿನ ಸುಮಾರು 72℅ ರಶ್ಟು ಕಾಡಿನಿಂದ ಕೂಡಿದೆ. ಬೂತಾನಿನ ಸಂವಿದಾನ, ಕಡಿಮೆಯೆಂದರೂ 60℅ ರಶ್ಟಾದರೂ ಕಾಡು ಇರಲೇಬೇಕೆಂದು ಹೇಳುತ್ತದೆ. ಇಲ್ಲಿನ ಕಾಡು ಸಹ ಜಗತ್ತಿನಲ್ಲಿರುವ ಕೆಲವೇ ಕೆಲವು ಉಸಿರಹಲತನದ ತಾಣಗಳಲ್ಲೊಂದು(biodiversity hotspots). ಬೂತಾನ್ ತಾನು ‘ಕಾರ‍್ಬನ್ ನ್ಯೂಟ್ರಲ್‘ ಆಗಿಯೇ ಇರುತ್ತೇನೆಂದು ಪ್ರಮಾಣ ಮಾಡಿದೆ. ಹಾಗೆ ನೋಡಿದರೆ ಇಂದು ಬೂತಾನ್ ಬರೀ ‘ಕಾರ‍್ಬನ್ ನ್ಯೂಟ್ರಲ್’ ಎಂದು ಹೇಳಿದರೆ ಅದು ಅರೆದಿಟವಶ್ಟೇ, ನಿಜ ಹೇಳಬೇಕೆಂದರೆ ಬೂತಾನ್ ಇಂದು ‘ಕಾರ‍್ಬನ್ ನೆಗೆಟಿವ್’ ದೇಶ!

ಇಡೀ ಬೂತಾನ್ ದೇಶ ಪ್ರತಿ ವರ‍್ಶ 2.2 ಮಿಲಿಯನ್ ಟನ್ನಿನಶ್ಟು ಕಾರ‍್ಬನ್ ಡೈಆಕ್ಸೈಡ್ ಅನ್ನು ಹೊರಹಾಕುತ್ತಿದೆ. ಆದರೆ ಅಲ್ಲಿನ ಕಾಡುಗಳು ಅದರ ಮೂರು ಪಟ್ಟಿನಶ್ಟನ್ನು ಕೂಡಿಡುತ್ತವೆ. ಅಂದರೆ ಬೂತಾನ್‌ನ ಕಾಡುಗಳು ಸುಮಾರು 4 ಮಿಲಿಯನ್ ಟನ್ನಿನಶ್ಟು ಹೆಚ್ಚಿನ ಕಾರ‍್ಬನ್ ಡೈಆಕ್ಸೈಡ್‌ಅನ್ನು ಹೀರಿಕೊಳ್ಳುತ್ತವೆ.

ಸಾಮಾನ್ಯವಾಗಿ ಮಿಂಚನ್ನು(electricity) ತಯಾರಿಸುವಾಗ ಕಲ್ಲಿದ್ದಿಲ್ಲನ್ನೋ, ನ್ಯಾಚುರಲ್ ಗ್ಯಾಸನ್ನೋ ಉರುವಲಾಗಿ ಸುಡಲಾಗುತ್ತದೆ. ಹೀಗೆ ಉರುವಲನ್ನು ಸುಡುವುದರಿಂದ ಕರಿಗಾಳಿಯನ್ನು ಹೊರಸೂಸಬೇಕಾಗುತ್ತದೆ. ಆದರೆ ಬೂತಾನ್ ನದಿ ನೀರಿನಿಂದ ಮಿಂಚನ್ನು ತಯಾರಿಸುವುದರಿಂದ ಕರಿಗಾಳಿಯ ಹೊರಸೂಸುವಿಕೆ ಇರುವುದಿಲ್ಲ. ಈ ರೀತಿ ತಯಾರಾದ ಚೊಕ್ಕವಾದ ಮಿಂಚಿನ(clean electricity) ಉತ್ಪಾದನೆ ಸುಮಾರು 6 ಮಿಲಿಯನ್ ಟನ್ನಿನಶ್ಟು ಕಾರ‍್ಬನ್ಅನ್ನು ಸರಿದೂಗಿಸುತ್ತದೆ. 2020ರ ಹೊತ್ತಿಗೆ ಬೂತಾನ್ ಪ್ರತಿವರ‍್ಶ ಸುಮಾರು 17 ಮಿಲಿಯನ್ ಟನ್ನಿನಶ್ಟು ಕಾರ‍್ಬನ್ಅನ್ನು ಸರಿದೂಗಿಸಬಹುದಾದಶ್ಟು ಚೊಕ್ಕವಾದ ಮಿಂಚನ್ನು ಉತ್ಪಾದಿಸುವಂತಾಗಲಿದೆ. ಬೂತಾನ್ ತಾನು ತಯಾರಿಸಬಲ್ಲ ನೀರ‍್ಮಿಂಚಿನ ಒಳಕಸುವಿನ(hydropower potential) ಅರ‍್ದದಶ್ಟನ್ನು ಬಳಸಿಕೊಂಡು, ಅದರಿಂದ ಉತ್ಪಾದನೆಯಾಗುವ ಚೊಕ್ಕವಾದ ಮಿಂಚನ್ನು ಹೊರಕಳಿಸಿದರೂ ಪ್ರತಿ ವರ‍್ಶ ಸುಮಾರು 50 ಮಿಲಿಯನ್ ಟನ್ನಿನಶ್ಟು ಕಾರ‍್ಬನ್ಅನ್ನು ಸರಿದೂಗಿಸಬಲ್ಲುದು.

ಬೂತಾನ್ ತಾನು ಕಾರ‍್ಬನ್ ನ್ಯೂಟ್ರಲ್ಆಗಿ ಉಳಿಯಲು ಹಲವಾರು ದಾರಿಗಳನ್ನು ಕಂಡುಕೊಂಡಿದೆ. ತನ್ನ ಹಳ್ಳಿಗಳಲ್ಲಿನ ರೈತರಿಗೆ ಪುಕ್ಕಟೆಯಾಗಿ ಮಿಂಚನ್ನು ನೀಡುತ್ತಿದೆ. ಹೀಗೆ ನೀಡುವುದರಿಂದ ಅವರು ಕಟ್ಟಿಗೆಗಾಗಿ ಕಾಡನ್ನು ಕಡಿಯುವುದು ತಪ್ಪುತ್ತಿದೆ. ಬೂತಾನ್ ಬಾಳಬಲ್ಲ ಸಾಗಾಣಿಕೆಯಲ್ಲಿ (sustainable transport) ಬಂಡವಾಳ ಹೂಡುತ್ತಿದೆ. ಮಿಂಚಿನಿಂದ ಓಡುವ ಕಾರುಗಳನ್ನು, LED ದೀಪಗಳನ್ನು ಕೊಳ್ಳಲು ಸಬ್ಸಿಡಿ ಕೊಡುತ್ತಿದೆ. ನಾಡನ್ನು ಚೊಕ್ಕವಾಗಿಡಲು ‘ಕ್ಲೀನ್‌ ಬೂತಾನ್‘ ಎಂಬ ಹಮ್ಮುಗೆಯನ್ನು ರೂಪಿಸಕೊಂಡಿದೆ. ‘ಗ್ರೀನ್ ಬೂತಾನ್‘ನ ಹಮ್ಮುಗೆಯ ಮೂಲಕ ದೇಶದಗಲಕ್ಕೂ ಗಿಡಗಳನ್ನು ನೆಡುತ್ತಿದ್ದಾರೆ.

ಬೂತಾನಿನಲ್ಲಿ ಇಂದು ಅರ‍್ದಕ್ಕೂ ಹೆಚ್ಚಿನ ಕಾಡನ್ನು ನ್ಯಾಶನಲ್ ಪಾರ‍್ಕ್, ನೇಚರ್ ರಿಸರ‍್ವ್ ಹಾಗೂ ವೈಲ್ಡ್ ಲೈಪ್ ಸ್ಯಾಂಚುರಿಗಳಾಗಿ ಕಾಪಾಡಿಕೊಂಡು ಬರುತ್ತಿದ್ದಾರೆ. ಕಾಡುಗಳನ್ನು ಒಂದಕ್ಕೊಂದು ಜೋಡಿಸಲಾಗಿದೆ. ಹೀಗೆ ಒಂದಕ್ಕೊಂದನ್ನು ಜೋಡಿಸಿರುವುದರಿಂದ ಕಾಡಿನ ಪ್ರಾಣಿಗಳು ಇಡಿ ದೇಶದ ಸುತ್ತ ಸುತ್ತಾಡಬಹುದು. ಬೂತಾನ್ ತನ್ನಲ್ಲಿನ ಕಾಡುಗಳನ್ನು ಬೇಟೆಗಾರಿಕೆ, ಕಾಡ್ಗಳ್ಳತನ(poaching) ಹಾಗೂ ಹಾಳುಗೆಡವುದರಿಂದ ತಡೆಯುವ ಜೊತೆಗೆ, ಕಾಡಿನಲ್ಲಿ ವಾಸಿಸುವವರು ಕಾಡನ್ನು ಉಳಿಸಿಕೊಂಡು-ಬೆಳಸಿಕೊಂಡು ನಿಸರ‍್ಗದ ಜೊತೆ ಹೊಂದಿಕೊಂಡು ಬಾಳ್ವೆ ನಡೆಸಿಕೊಂಡು ಹೋಗಲು ಒಂದಶ್ಟು ಸಂಪನ್ಮೂಲಗಳನ್ನು ತೆಗೆದಿಡುತ್ತಿದೆ.

ಇಂದು ಬೂಮಿ ಬೆಚ್ಚಗಾಗುತ್ತಿರುವುದರಿಂದ ನೀರ‍್ಗಲ್ಲುಗಳು ಕರಗುತ್ತಿವೆ. ಹೀಗೆ ಕರಗುವ ನೀರ‍್ಗಲ್ಲುಗಳಿಂದ ‘ನೀರ‍್ಗಲ್ಲ ಕೆರೆಗಳು'(Glacial lakes) ತಯಾರಾಗುತ್ತಿವೆ. ಇದೇ ಬಗೆಯಲ್ಲಿ ಉಂಟಾದ ಸುಮಾರು 2700 ನೀರ‍್ಗಲ್ಲ ಕೆರೆಗಳು ಇಂದು ಬೂತಾನಿನಲ್ಲಿವೆ. ಈ ನೀರ‍್ಗಲ್ಲ ಕೆರೆಗಳ ಕೋಡಿ ಒಡೆದರೆ, ಕೆಳಗಿನ ಕಣಿವೆಗಳಲ್ಲಿ ಚೆಚ್ಚರ ನೆರೆ(flash flood) ಉಂಟಾಗುತ್ತದೆ. ಬೂಮಿಯ ಬಿಸಿಯಾಗುವಿಕೆಯಲ್ಲಿ ಬೂತಾನಿನ ಕೈವಾಡ ಏನೇನೂ ಇಲ್ಲದಿದ್ದರೂ ಅದರ ಪರಿಣಾಮ ಮಾತ್ರ ಅನುಬವಿಸಬೇಕಾಗಿ ಬಂದಿರೋದು ದುರಂತ.

ಇಂದಿನ ಮಟ್ಟಿಗೆ ಜಗತ್ತಿನಲ್ಲಿ ಕಾರ‍್ಬನ್ ನೆಗೆಟಿವ್ ದೇಶವೆಂದರೆ ‌ಬೂತಾನ್ ಒಂದೇ. ಕಾರ‍್ಬನ್ ನ್ಯೂಟ್ರಲ್ ದೇಶವಾಗಿ ವ್ಯಾಟಿಕನ್ ಸಿಟಿ ಇದೆ. ಇನ್ನುಳಿದಂತೆ ಬ್ರಿಟಿಶ್ ಕೊಲಂಬಿಯಾ, ಕೋಸ್ಟರೀಕಾ, ಐಸ್‍ಲ್ಯಾಂಡ್, ಮಾಲ್ಡೀವ್ಸ್, ನಾರ‍್ವೇ, ಟುವಾಲು ಹಾಗೂ ಸ್ವೀಡನ್ ದೇಶಗಳು ಕಾರ‍್ಬನ್ ನ್ಯೂಟ್ರಲ್ ಆಗಲು ಪಣತೊಟ್ಟಿವೆ. ಮುಂದೊಂದು ದಿನ ಇಡಿ ಜಗತ್ತೇ ಕಾರ‍್ಬನ್‌ ನ್ಯೂಟ್ರಲ್ ಇಲ್ಲವೇ ಕಾರ‍್ಬನ್ ನೆಗೆಟಿವ್ ಆಗಿ ಬೂಮಿ ಬೆಚ್ಚಗಾಗುವಿಕೆಯನ್ನು ತಡೆಯುವಂತಾಗಲಿ.

(ಮಾಹಿತಿ ಮತ್ತು ಚಿತ್ರ ಸೆಲೆ: Wikipedia, wikipedia.orgTED.com, wastetoenergysystems.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: