ಹೊತ್ತಗೆ ಓದುವವರು ಹೆಚ್ಚುಕಾಲ ಬದುಕುತ್ತಾರಂತೆ!
ದಿನಾಲೂ ಹೊತ್ತಗೆ ಓದುವುದರಿಂದ ಆಯಸ್ಸು ಹೆಚ್ಚಾಗುತ್ತದೆ ಎಂಬ ಅಪರೂಪದ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಇದು ಹಲವರನ್ನು ಬೆರಗಾಗಿಸಿದೆ! ಹೊತ್ತಗೆ, ಸುದ್ದಿಹಾಳೆ, ಗಡುಕಡತ (magazine) ಮುಂತಾದವುಗಳನ್ನು ಓದುವುದರಿಂದ ಹಲವಾರು ಹೊಸ ವಿಶಯಗಳ ಬಗ್ಗೆ ತಿಳಿದುಕೊಳ್ಳಬಹುದು ಎಂದು ಗೊತ್ತಿತ್ತು. ಆದರೆ ಇದರಿಂದ ಆರೋಗ್ಯದ ಪ್ರಯೋಜನಗಳು ಕೂಡ ಇವೇ ಎಂದು ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಪ್ರತಿದಿನ ಸುಮಾರು 30 ನಿಮಿಶಗಳ ಕಾಲ ಹೊತ್ತಗೆ ಓದುವವರು, ಏನು ಓದದಿರುವವರಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದು ಇತ್ತೀಚಿನ ದಿನಗಳಲ್ಲಿ ನಡೆಸಿದ ಅರಕೆ (research) ಒಂದರಿಂದ ತಿಳಿದು ಬಂದಿದೆ.
ಕಂಡುಹಿಡಿದವರು ಯಾರು?
ಅಮೇರಿಕಾದ ಯೇಲ್ ಕಲಿಕೆವೀಡಿನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್ (Yale University School of Public Health)ನ ಕಲಿಸುಗರಾದ ಅವ್ನಿ ಬವಿಶಿ (Avni Bavishi), ಮಾರ‍್ಟಿನ್ ಸ್ಲೇಡ್ (Martin Slade) ಮತ್ತು ಬೆಕ್ಕಾ ಲೆವಿ (Becca Levy) ಅವರು ಈ ಅರಕೆಯನ್ನು ನಡೆಸಿದರು. ಮೊದಲಿಗೆ 50 ಅತವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಸುಮಾರು 3,635 ಮಂದಿಯನ್ನು ಆಯ್ಕೆ ಮಾಡಿಕೊಂಡು ಅವರ ಓದುವ ಬಗೆಗಳನ್ನು ಪರಿಶೀಲಿಸಿದರು. ಬಳಿಕ ಈ ಮಂದಿಯನ್ನು ಅವರ ಓದಿನ ಬಗೆಯ ಮೇಲೆ ಮೂರು ಗುಂಪುಗಳಾಗಿ ವಿಂಗಡಿಸಿದ್ದರು.
- ಮೊದಲನೆಯ ಗುಂಪು – ವಾರಕ್ಕೆ 3.5 ತಾಸಿಗಿಂತ ಹೆಚ್ಚು ಕಾಲ ಓದುವವರು (ಅಂದರೆ ದಿನಕ್ಕೆ 30 ನಿಮಿಶಗಳ ಕಾಲ ಓದುವವರು).
- ಎರಡನೆಯ ಗುಂಪು – ವಾರಕ್ಕೆ 3.5 ತಾಸಿಗಿಂತ ಕಡಿಮೆ ಓದುವವರು.
- ಮೂರನೆಯ ಗುಂಪು – ಏನು ಓದದಿರುವವರು.
ಈ ಮೂರು ಗುಂಪುಗಳನ್ನು ಸುಮಾರು 12 ವರ‍್ಶಗಳ ಕಾಲ ಅರಕೆಕಾರರು ಗಮನಿಸಿದರು. 12 ವರ‍್ಶಗಳು ಕಳೆದ ಬಳಿಕ ಅರಕೆಕಾರರ ಅರಸುವಿಕೆಯ (Survey) ಮಾಹಿತಿಯನ್ನು ಪರಿಶೀಲಿಸಿದಾಗ, ಮೊದಲನೆಯ ಗುಂಪಿನ ಅಂದರೆ ವಾರಕ್ಕೆ 3.5 ತಾಸಿಗಿಂತ ಹೆಚ್ಚು ಕಾಲ ಓದುವವರ ಸಾಯುವ ಸಾದ್ಯತೆಯು ಓದದಿರುವವರಿಗಿಂತ 23% ಕಡಿಮೆ ಇರುತ್ತದೆ ಎಂದು ಕಂಡು ಬಂದಿದೆ. ಹಾಗೆಯೇ ಎರಡನೆಯ ಗುಂಪಿನ ಅಂದರೆ ವಾರಕ್ಕೆ 3.5 ತಾಸಿಗಿಂತ ಕಡಿಮೆ ಓದುವವರ ಸಾಯುವ ಸಾದ್ಯತೆಯು ಕೂಡ ಓದದಿರುವವರಿಗಿಂತ 17% ಕಡಿಮೆ ಇರುತ್ತದೆ.
ಒಟ್ಟಾರೆಯಾಗಿ, ದಿನಾಲೂ 30 ನಿಮಿಶಗಳ ಕಾಲ ಹೊತ್ತಗೆ ಓದುವವರು ಓದದಿರುವವರಿಗಿಂತ ಸರಾಸರಿ 2 ಎರಡು ವರ‍್ಶಗಳ ಕಾಲ ಹೆಚ್ಚು ಬದುಕುತ್ತಾರೆ ಎಂದು ಅರಕೆಕಾರರು ತಿಳಿಸುತ್ತಾರೆ.
ಹೇಗೆ?
- ಹೊತ್ತಗೆ ಓದುವುದು ನಮ್ಮ ಪದಗಳ ಸಂಪತ್ತನ್ನು ಹೆಚ್ಚಿಸುವುದಲ್ಲದೇ, ಸಲುವು (reasoning), ಒಪ್ಪೆರ‍್ಮೆ (concentration) ಹಾಗೂ ಚಿಂತನೆಯ ಶಕ್ತಿಯನ್ನು ಹೆಚ್ಚಿಸುತ್ತದೆ.
- ಯಾವುದನ್ನಾದರೂ ಆಳವಾಗಿ ಓದುವ ಹಾಗೂ ಪ್ರಶ್ನಿಸುವ ಕಸುವು ಓದುವ ಹವ್ಯಾಸದಿಂದ ಹೆಚ್ಚಾಗುತ್ತದೆ. ಆದ್ದರಿಂದ ಇತರೆ ಕೆಲಸ/ಹವ್ಯಾಸಗಳಿಗಿಂತ ಹೊತ್ತಗೆಯು ಓದುಗರ ಮನಸ್ಸನ್ನು ಓದಿನಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡುತ್ತದೆ.
- ಇವುಗಳಲ್ಲದೇ, ಓದಿನಿಂದ ಹೊಂದಾಣಿಕೆ, ಸಾಮಾಜಿಕ ಅರಿವು, ತಲ್ಲಣದ ಜಾಣ್ಮೆಯೂ(emotional intelligence) ಹೆಚ್ಚುತ್ತದೆ.
ಈ ಎಲ್ಲಾ ಅಂಶಗಳು ಮನಸ್ಸು ಹಾಗೂ ಆರೋಗ್ಯದ ಮೇಲೆ ಪ್ರಬಾವ ಬೀರುವುದರಿಂದ ಆಯಸ್ಸು ಹೆಚ್ಚಾಗುತ್ತದೆ ಎಂದು ಅರಕೆಕಾರರು ಹೇಳುತ್ತಾರೆ.
ಓದಿನ ಮೇಲೆ ಪ್ರಬಾವ ಬೀರಬಹುದಾದ ವಯಸ್ಸು, ಚಿಂತೆ, ಉದ್ಯೋಗ, ಮಾನಸಿಕ ನೆಮ್ಮದಿ ಮುಂತಾದ ಅಂಶಗಳನ್ನು ಅರಸುವಿಕೆಯಲ್ಲಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಅರಸುವಿಕೆಯಲ್ಲಿ ಪಾಲ್ಗೊಂಡಿದ್ದ ಮಂದಿಯು ಯಾವ ಬಗೆಯ ಹೊತ್ತಗೆಗಳನ್ನು ಓದುತ್ತಿದ್ದರು ಎಂದು ಅರಕೆಯಲ್ಲಿ ತಿಳಿಸಿಲ್ಲ. ಆದರೆ 2009 ರಲ್ಲಿ ನ್ಯಾಶನಲ್ ಎಂಡೋಮೆಂಟ್ ಪಾರ್ ದಿ ಆರ‍್ಟ್ಸ್ (National Endowment for the Arts) ಅವರು ನಡೆಸಿದ ಅರಸುವಿಕೆ ಪ್ರಕಾರ ಸಾಮಾನ್ಯವಾಗಿ 87% ರಶ್ಟು ಓದುಗರು ಓದಲು ಕಾದಂಬರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ತಿಳಿದು ಬಂದಿದ್ದು, ಅವ್ನಿ ಬವಿಶಿ (Avni Bavishi) ಹಾಗೂ ಅವರ ತಂಡದವರು ನಡೆಸಿದ ಅರಸುವಿಕೆಯಲ್ಲಿ ಪಾಲ್ಗೊಂಡಿದ್ದ ಹೆಚ್ಚಿನ ಮಂದಿಯು ಕೂಡ ಕಾದಂಬರಿಗಳನ್ನು ಓದುತ್ತಿದ್ದರು ಎಂದು ಊಹಿಸಲಾಗಿದೆ.
ಮುಂದಿನ ದಿನಗಳಲ್ಲಿ ಹೊತ್ತಗೆ ಓದುವುದು ಮನುಶ್ಯನ ಆಯಸ್ಸು ಹೆಚ್ಚಿಸುವುದಲ್ಲದೇ, ಇದರಿಂದ ಮತ್ತೇನಾದರೂ ಹೆಚ್ಚುವರಿ ಆರೋಗ್ಯ ಪ್ರಯೋಜನಗಳಿವೆಯೇ ಎಂದು ಕಂಡುಹಿಡಿಯಬೇಕಾಗಿದೆ. ಇದಲ್ಲದೇ ಕಾದಂಬರಿಯಲ್ಲದ ಹೊತ್ತಗೆ ಹಾಗೂ ಮಿಂಕಡತಗಳನ್ನು (ebooks) ಓದುವುದು ಕೂಡ ಆರೋಗ್ಯದ ಮೇಲೆ ಇದೇ ರೀತಿಯ ಪರಿಣಾಮವನ್ನು ಉಂಟುಮಾಡುತ್ತದೆಯೇ ಎಂದು ಕೂಡ ಕಂಡುಹಿಡಿಯಬೇಕಾಗಿದೆ.
(ಮಾಹಿತಿ ಸೆಲೆ: theguardian.com, sciencedirect.com, writingandwellness.com, sciencealert.com)
(ಚಿತ್ರ ಸೆಲೆ: unsplash.com)
ಇತ್ತೀಚಿನ ಅನಿಸಿಕೆಗಳು