‘iOS 11’ ಹೊಸತೇನಿದೆ?

– ವಿಜಯಮಹಾಂತೇಶ ಮುಜಗೊಂಡ.

ಆಪಲ್ ಮಾಡುಗೆಗಳ ಬಳಸುಗರು ಮತ್ತು ಅಬಿಮಾನಿಗಳಿಗೆ ಸೆಪ್ಟೆಂಬರ್ ತಿಂಗಳು ಕುತೂಹಲದ ಕಡೆಯ ತಿಂಗಳು. ಯಾಕೆಂದರೆ ಇದು ಆಪಲ್‌ನವರ ಹೊಸ ಮಾಡುಗೆಗಳು ಮಾರುಕಟ್ಟಗೆ ಲಗ್ಗೆ ಇಡುವ ಹೊತ್ತು. ಹೊಸತನ ಹೊತ್ತು ಬರುವ ಆಪಲ್‌ನವರ ನಡೆಸೇರ‍್ಪಾಟು (operating system) ಐಓಎಸ್ ಬಳಸುಗರ ಕೈಸೇರುವುದೂ ಇದೇ ತಿಂಗಳು. ಪ್ರತಿ ಸಲದಂತೆ ಈ ಸಲವೂ ಹೊಸ ನಡೆಸೇರ‍್ಪಾಟು ಐಓಎಸ್ 11 ಬಿಡುಗಡೆ ಆಗಿದ್ದು, ಕೆಲವೇ ದಿನಗಳ ಹಿಂದೆ ಬಳಸುಗರ ಕೈಸೇರಿದೆ. ತುದಿಗಾಲಲ್ಲಿ ನಿಂತಿದ್ದ ಬಳಸುಗರಿಗೆ ಆಪಲ್ ಈ ವರಸೆಯಲ್ಲಿ(version) ನೀಡಿರುವ ಹೊಸ ಪರಿಚೆಗಳ ಪಟ್ಟಿ ಇಲ್ಲಿದೆ.

ಐಮೆಸೇಜ್(iMessage) ಮತ್ತು ‘ಆಪಲ್ ಪೇ’

ಆಪಲ್‌ನವರ ಐ-ಮೆಸೇಜ್(iMessage) ಸೇವೆಯನ್ನು ಈಗ ಐ-ಕ್ಲೌಡ್‌ನೊಂದಿಗೆ(iCloud) ಬೆರೆಸಲಾಗಿದೆ. ನೀವು ಹಲವು ಐಓಎಸ್ ಚೂಟಿ ಎಣಿಗಳನ್ನು ಬಳಸುತ್ತಿದ್ದರೆ ಎಲ್ಲ ಓಲೆಗಳೂ ಸಿಂಕ್ ಆಗುತ್ತವೆ. ಐಪೋನ್ ಮೂಲಕ ಕಳಿಸಿದ ಇಲ್ಲವೇ ಪಡೆದ ಓಲೆಯೊಂದನ್ನು ಈಗ ಐಪಾಡ್ ಇಲ್ಲವೇ ಮ್ಯಾಕ್ ಮೂಲಕವೂ ಓದಬಹುದಾಗಿದೆ. ಬೇಡವೆನಿಸಿದ ಓಲೆಗಳನ್ನು ಒಂದೆಡೆಯಿಂದ ಅಳಿಸಿದರೆ ಸಾಕು, ನಿಮ್ಮ ಎಲ್ಲ ಆಪಲ್ ಚೂಟಿ ಎಣಿಗಳಿಂದ ಅದು ಕಾಣೆಯಾಗುತ್ತದೆ.

ಆನ್‌ಲೈನ್‌ ಮೂಲಕ ದುಡ್ಡು ಪಾವತಿಗೆ ಆಪಲ್‌ನವರು ನೀಡುತ್ತಿರುವ ಸೇವೆ ಆಪಲ್ ಪೇ. ಐಓಎಸ್ 11 ರೊಂದಿಗೆ ಆಪಲ್ ಪೇ ಸೇವೆಯನ್ನು ಮಂದಿಯ ನಡುವೆ ದುಡ್ಡು ಕಳಿಸಲು ಮತ್ತು ಪಡೆಯಲು ಬಳಸಬಹುದು. ಮೊಬೈಲ್ ನಂಬರ್‌ ಅನ್ನು ಹಂಚಿಕೊಳ್ಳದೇ ದುಡ್ಡು ಕಳಿಸುವ ಜಗತ್ತಿನ ನಂಬರ್ 1 ಸೇವೆ ಇದಾಗಲಿದೆ ಎಂದು ಆಪಲ್ ಹೇಳಿಕೊಂಡಿದೆ. ಇದನ್ನು ಐಮೆಸೇಜ್‌ನೊಂದಿಗೆ ಹೊಂದಿಸಲಾಗಿದ್ದು ಬಳಸುಗರು ಐ-ಮೆಸೇಜ್ ಬಳಕದ ಮೂಲಕವೇ ಹಣ ಕಳಿಸಬಹುದು ಮತ್ತು ಪಡೆಯಬಹುದು.

ಇನ್ನಶ್ಟು ಚುರುಕುಗೊಂಡ ಸಿರಿ

ತಿಂಗಳಿಗೆ ಸುಮಾರು 375 ಮಿಲಿಯನ್ ಮಂದಿ ಬಳಸುವ ಸಿರಿ ಈಗ 36 ದೇಶಗಳ 21 ನುಡಿಗಳಲ್ಲಿ ಸಿಗಲಿದೆ. ಕೇಳ್ವಿಯೊಂದಕ್ಕೆ ಮರುನುಡಿಯುವಾಗ ಬಳಸುಗನ ಬೇಡಿಕೆಯಂತೆ ಬೇರೊಂದು ನುಡಿಯಲ್ಲಿ ಉತ್ತರಿಸಬಲ್ಲುದು. ಜರ‍್ಮನ್, ಚಯ್ನೀಸ್ ಸೇರಿದಂತೆ ಈ ನುಡಿಮಾರ‍್ಪು ಸೇವೆ ಸದ್ಯಕ್ಕೆ 6 ನುಡಿಗಳಲ್ಲಿ ಸಿಗಲಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ನುಡಿಗಳಿಗೆ ಇದು ಹಬ್ಬಲಿದೆ.

ಆಳವಾದ ಕಲಿಕೆಯ(deep learning) ಚಳಕವನ್ನು ಬಳಸಿಕೊಂಡಿರುವ ಸಿರಿ ಈಗ ಹಲವು ಬಾವಗಳಲ್ಲಿ ಸಹಜವೆನಿಸುವಂತೆ ಮಾತನಾಡಲಿದೆ. ನಿಮ್ಮ ಬಳಕೆಯನ್ನು ತಿಳಿದು ಮಾತಿನ ಕುಳ್ಳಿಹವನ್ನು(context) ಸಿರಿ ಅರಿಯಬಲ್ಲುದು. ನಿಮ್ಮ ಬಳಕೆಗೆ ತಕ್ಕಂತೆ ಸಿರಿ ನೆರವು ನೀಡಬಲ್ಲುದು.

ಕ್ಯಾಮರಾ

ವರುಶಕ್ಕೆ ಒಂದು ಲಕ್ಶ ಕೋಟಿಗಿಂತ ಹೆಚ್ಚು ತಿಟ್ಟಗಳನ್ನು ಸೆರೆಹಿಡಿಯುವ ಆಪಲ್ ಕ್ಯಾಮರಾ, ಚೂಟಿಯುಲಿ ಬಳಸುಗರ ಮೆಚ್ಚಿನ ಕ್ಯಾಮರಾ ಬಳಕವಾಗಿದೆ. ಐಓಎಸ್ 11 ರೊಂದಿಗೆ ಆಪಲ್ ಕ್ಯಾಮರಾ ಇನ್ನಶ್ಟು ಹೊಸತಾಗಲಿದೆ. ಚಿತ್ರ ಮತ್ತು ವಿಡಿಯೋಗಳನ್ನು ಉಳಿಸುವ ಹೊಸ ಹೊಲಬಿನಿಂದಾಗಿ(method) ಜಾಗದ ಬಳಕೆ ಕಡಿಮೆ ಆಗಲಿದ್ದು, ಕೂಡಿಡುವ ಅಳವು ದುಪ್ಪಟ್ಟಾಗಲಿದೆ. ಕಡಿಮೆ ಬೆಳಕಿನಲ್ಲಿ ತಿಟ್ಟಗಳನ್ನು ಸೆರೆಹಿಡಿಯುವದು ಈಗ ಇನ್ನಶ್ಟು ಸುಳುವಾಗಲಿದೆ.

ನೀವು ಸೆರೆಹಿಡಿದ ಚಿತ್ರಗಳನ್ನು ಒಂದುಗೂಡಿಸಿ ನೆನಪುಗಳನ್ನು ಮತ್ತು ವಿಡಿಯೋಗಳನ್ನು ಉಂಟುಮಾಡುವ ಬಗೆ ಈಗ ಬಿಣಿಗೆಗಳ ಕಲಿಕೆಯ ಅಳವನ್ನು(machine learning) ಬಳಸಿಕೊಳ್ಳಲಿದ್ದು ಹಬ್ಬಗಳು, ಬೇಟಿ ನೀಡಿದ ಜಾಗಗಳ ನೆನಪುಗಳು ನಿಮಗೆ ಹಿಂದೆಂದಿಗಿಂತ ಹೆಚ್ಚು ಹಿಡಿಸಲಿವೆ. ನೀವು ಸೆರಹಿಡಿಯುವ ಚಿತ್ರದೊಂದಿಗೆ ಪುಟ್ಟ ವಿಡಿಯೋ ಸೇರಿಸಿ ಲೈವ್ ಚಿತ್ರದ ಅನುಬವ ನೀಡಲಿದೆ. ತಿಟ್ಟಗಳನ್ನು ತಿದ್ದುವ ಹೊಸ ಪರಿಚೆಗಳನ್ನು ಬಳಸಿ ಇನ್ನಶ್ಟು ಹೊಸ ಬಗೆಯ ಜಿಐಎಪ್‌ಗಳನ್ನು(GIF) ಉಂಟುಮಾಡಬಹುದಾಗಿದೆ.

ಬೀಗದ ತೆರೆ, ತಿಳಿಸಿಕೆ ಮತ್ತು ಕಂಟ್ರೋಲ್ ಸೆಂಟರ್

ಬೀಗದ ತೆರೆಯಲ್ಲಿ(lock screen) ಕಾಣುವ ತಿಳಿಸಿಕೆಗಳಿಗೆ(notifications) ಇದೀಗ ಹೊಸತನ ದೊರೆತಿದೆ. ಚೂಟಿಯುಲಿ ಲಾಕ್ ಆಗಿದ್ದಾಗಲೂ ಹೆಚ್ಚು ತಿಳಿಸಿಕೆಗಳನ್ನು ಓದಬಹುದು. ಒಮ್ಮೆ ತಟ್ಟುವ ಮೂಲಕ ಬ್ಲೂಟೂತ್, ಏರೊಪ್ಲೇನ್ ಮೋಡ್‌ಗೆ ಬದಲಾಯಿಸುವ ಕಂಟ್ರೋಲ್ ಸೆಂಟರ್ ಈಗ ಒಂದು ಪುಟದಲ್ಲಿಯೇ ಇದೆ. ಇಲ್ಲಿಂದಲೇ ನೀವು ಹಾಡುಗಳನ್ನು ಬದಲಿಸುವುದು, ಮೊಬೈಲ್ ತೆರೆಯ ಬೆಳಕು ಮತ್ತು ಉಲಿಯೇರಿಕೆಯನ್ನು(volume) ಹತೋಟಿ ಮಾಡಬಹುದು.

ದಾರಿತಿಟ್ಟ ಮತ್ತು ದಾರಿತೋರುಕ (Map & Navigation)

ಹೊಸ ದಾರಿತಿಟ್ಟವು ವೇಗದ ಮಿತಿ ಮತ್ತು ಮುಂಬರುವ ಲೇನ್‍ ಬದಲಾವಣೆಗಳ ಸುಳಿವು ನೀಡಲಿದೆ. ಬಂಡಿ ಓಡಿಸುವಾಗ DND(Do not Disturb) ಮೋಡ್‌ ಅನ್ನು ಬಳಸಿ ತಿಳಿಸಿಕೆಗಳು ತೊಂದರೆ ಕೊಡದಂತೆ ನೋಡಿಕೊಳ್ಳಬಹುದು. ಓಲೆಗಳಿಗೆ ತಂತಾನೇ ಮರುನುಡಿಯುವ (Auto-Reply) ಆಯ್ಕೆ ಕೂಡ ಇದೆ. ಆಪಲ್ ಮ್ಯಾಪ್‌ನಲ್ಲಿ ಈಗ ಮಾಲ್‌ಗಳಲ್ಲಿನ ಮಳಿಗೆಗಳು, ಒಳದಾರಿ, ಮೆಟ್ಟಿಲುಗಳ ಮಾಹಿತಿ ಕೂಡ ಸಿಗಲಿದೆ.

ಈಗ ಮನೆ ನೋಡಿಕೊಳ್ಳವುದು ಇನ್ನಶ್ಟು ಸುಳುವು

ಐಓಎಸ್ 10 ವರಸೆಯಲ್ಲಿ ಮನೆಯ ದೀಪಗಳು, ಬಾಗಿಲ ಚಿಲಕ, ತಂಪೆಟ್ಟಿಗೆಗಳನ್ನು(fridge) ನೋಡಿಕೊಳ್ಳಲು ಆಪಲ್ ಹೋಮ್ ಎನ್ನುವ ಹೊಸ ಬಳಕವೊಂದನ್ನು ನೀಡಲಾಗಿತ್ತು. ಹೋಮ್‌ಗೆ ಇದೀಗ ಹೊಸತಾಗಿ ಉಲಿಯುಕಗಳನ್ನು(speakers) ನೋಡಿಕೊಳ್ಳುವ ಆಯ್ಕೆಯನ್ನು ಸೇರಿಸಲಾಗಿದೆ. ಇದನ್ನು ಬಳಸಿ ಮನೆಯ ಬೇರೆ ಬೇರೆ ಕೋಣೆಯಲ್ಲಿರುವ ಉಲಿಯುಕಗಳನ್ನು ನಿಯಂತ್ರಿಸಬಹುದು.

ಹೊಸತನವನ್ನು ಹೊತ್ತುಬರಲಿದೆ ಆಪ್‌ಸ್ಟೋರ್ (AppStore)

ಒಂಬತ್ತು ವರುಶಗಳ ಬಳಿಕ ಮೊದಲ ಬಾರಿಗೆ ಆಪ್‌ಸ್ಟೋರ್ ಹೊಸ ನೋಟ ಹೊತ್ತುಬಂದಿದೆ. ಆಪ್‌ಸ್ಟೋರ‍್‌ನ ಟುಡೇ(Today) ಪುಟ ದಿನದ ವಿಶೇಶ ಬಳಕಗಳನ್ನು ತೋರಿಸಲಿದೆ. ಬಳಕಗಳು ಮತ್ತು ಆಟಗಳು ಬೇರೆ ಬೇರೆ ಟ್ಯಾಬ್‌ಗಳಲ್ಲಿ ಕಾಣಿಸಿಕೊಳ್ಳಲಿವೆ. ಕೊಳ್ಳಬೇಕಾದ ಮತ್ತು ಬಿಟ್ಟಿ ಬಳಕಗಳು, ಆಕ್ಶನ್, ಒಗಟು, ಹಾಡುಗಳು ಹೀಗೆ ಬಳಕಗಳು ಮತ್ತು ಆಟಗಳು ಗುಂಪುಗಳಲ್ಲಿ ಕಾಣಿಸಿಕೊಳ್ಳಲಿವೆ. ಆಪ್‌ಸ್ಟೋರ್‌ನಿಂದ ನೇರವಾಗಿ ಬಳಕದೊಳಗಿನ ಕರೀದಿಗಳನ್ನೂ(in app purchases) ಮಾಡಬಹುದು.

ಹಿಗ್ಗಿಸಿದ ದಿಟತನ (Augmented Reality)

ARKit ಎನ್ನುವ ಹೊಸ ಚಳಕದಿಂದಾಗಿ ಹಿಗ್ಗಿಸಿದ ದಿಟತನವನ್ನು ಬಳಸುವ ಪೋಕೆಮೊನ್ ಗೋ ಬಗೆಯ ಬಳಕಗಳು ಮತ್ತು ಆಟಗಳು ದಿಟವೆನ್ನುವಂತೆ ಕಾಣಲಿವೆ. ಹೊಸ ಬಳಕಗಳನ್ನು ಕಟ್ಟುವವರು ಈ ಚಳಕವನ್ನು ಬಳಸಿ ಕ್ಯಾಮರಾ ಮತ್ತು ಅರಿವುಕಗಳೊಂದಿಗೆ ವಸ್ತುಗಳನ್ನು ಹೆಚ್ಚು ಕರಾರುವಕ್ಕಾಗಿ ತೋರಿಸಬಹುದಾಗಿದೆ.

ಕನ್ನಡಿಗರಿಗೂ ಕೊಡುಗೆಯೊಂದಿದೆ

ಐಓಎಸ್ 11ರೊಂದಿಗೆ ಆಪಲ್ ಕನ್ನಡಿಗರಿಗೂ ಕೊಡುಗೆಯೊಂದನ್ನು ನೀಡಿದೆ. ಐಓಎಸ್‌ನಲ್ಲಿ ಕನ್ನಡ ಬೆಂಬಲ ಬೇಕೆನ್ನುವುದು ಕನ್ನಡಿಗರ ಬಹಳ ದಿನಗಳ ಬೇಡಿಕೆಯಾಗಿತ್ತು. ಐಓಎಸ್‌ನಲ್ಲಿ ಕನ್ನಡಕ್ಕೆ ಪೂರ‍್ತಿ ಬೆಂಬಲ ಸಿಗದಿದ್ದರೂ ಇದೀಗ ಕನ್ನಡ ಕೀಲಿಮಣೆ ಆಪಲ್ ಚೂಟಿಯುಲಿಗಳ ಬಳಸುಗರಿಗೆ ಸಿಕ್ಕಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: apple.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: